ಬಿಗ್​ಬಾಸ್ ಬಿಹಾರ ರಿಸಲ್ಟ್​ ಫೋಟೋ ಗ್ಯಾಲರಿ ಫ್ಯಾಷನ್​ ವಿಶ್ವವಾಣಿ ಪ್ರಾಪರ್ಟಿ ವಿದೇಶ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Shishir Hegde Column: ಈ ಪಾತರಗಿತ್ತಿ ಪಕ್ಕ, ನೀ ನೋಡಿದೇನ ಅಕ್ಕಾ ?

ದಕ್ಷಿಣದ ಅಂಟಾರ್ಕ್ಟಿಕಾದಲ್ಲಿ ಚಳಿಗಾಲ ಶುರುವಾದರೆ ಮತ್ತೆ ಉತ್ತರದ ಗ್ರೀನ್‌ಲ್ಯಾಂಡ್‌ಗೆ ಪ್ರಯಾಣ. ಅವು ಧ್ರುವದಿಂದ ಧ್ರುವಕ್ಕೆ ವಲಸೆ ಹೋಗುವುದು ಏಕೆ, ಧ್ರುವಗಳಿಂದ ಸಮಭಾಜಕ ವೃತ್ತದ ಕಡೆಗೆ/ವರೆಗೆ ಬಂದರಾಗದೇ? ಈ ರೀತಿ ವಲಸೆ ಹೋಗುವಾಗ ಅವು ಮಧ್ಯದಲ್ಲಿ ತಂಗು ತ್ತವೆ, ಅಲ್ಲಿಯೇ ಏಕೆ ಉಳಿದುಬಿಡುವುದಿಲ್ಲ ಎಂಬ ಕೆಲವು ಸರಳ ಪ್ರಶ್ನೆಗಳಿಗೆ ಉತ್ತರ ಇಲ್ಲ

Shishir Hegde Column: ಈ ಪಾತರಗಿತ್ತಿ ಪಕ್ಕ, ನೀ ನೋಡಿದೇನ ಅಕ್ಕಾ ?

-

ಶಿಶಿರಕಾಲ

ವಲಸೆ ಎಂದಾಕ್ಷಣ ಮೊದಲಿಗೆ ನೆನಪಾಗುವುದು ಹಕ್ಕಿಗಳು. ಅದ್ಯಾವುದೋ ಒಂದು ಹಕ್ಕಿ 15000 ಕಿ.ಮೀ. ವಲಸೆ ಹೋಗುತ್ತದೆ ಎಂಬ ಸುದ್ದಿ ನಿಮ್ಮ ಗಮನಕ್ಕೆ ಬಂದಿರಲಿಕ್ಕೆ ಸಾಕು. ಅದೇನೋ ಗೊತ್ತಿಲ್ಲ, D Red Knot ಎಂಬ ಹಕ್ಕಿಯ ವಲಸೆಯ ಬಗ್ಗೆ ಬಹಳಷ್ಟು ಪತ್ರಿಕೆ ಗಳಲ್ಲಿ ವರದಿಗಳು ಬಂದಿದ್ದವು. ಆ ಹಕ್ಕಿಯದು ನಿಜವಾಗಿಯೂ ಒಂದು ಅನನ್ಯ ವಲಸೆ. ಆದರೆ ಅದುವೇ ಅತ್ಯಂತ ದೂರ ಚಲಿಸುವ ಹಕ್ಕಿಯೇ? ಅಲ್ಲ, ಅದಕ್ಕಿಂತ ಜಾಸ್ತಿ ದೂರ ವಲಸೆ ಹೋಗುವ ಬೇರೊಂದು ಹಕ್ಕಿಯಿದೆ. ಅದರ ಹೆಸರು Arctic Tern. ಈ ಹಕ್ಕಿಗಳು ಪ್ರತಿವರ್ಷ ಉತ್ತರ ಧ್ರುವದಿಂದ ದಕ್ಷಿಣಕ್ಕೆ, ನಂತರದಲ್ಲಿ ದಕ್ಷಿಣ ಧ್ರುವದಿಂದ ಉತ್ತರಕ್ಕೆ, ಋತುವಿಗನುಗುಣವಾಗಿ ವಲಸೆ ಹೋಗುತ್ತವೆ.

ಧ್ರುವಗಳ ನಡುವಿನ ನೇರ ಅಂತರ ಸುಮಾರು 20000 ಕಿ.ಮೀ. ಆದರೆ ಈ ಹಕ್ಕಿಗಳು ನೇರವಾಗಿ ವಲಸೆ ಹೋಗುವವಲ್ಲ. ಒಟ್ಟಾರೆ ದಾಖಲೆಯಂತೆ ‘ಅರ್ಕಿಟಿಕ್ ಟರ್ನ್’ ವಾರ್ಷಿಕ ಸುಮಾರು 80000 ಕಿ.ಮೀ. ವಲಸೆ ಹಾರುತ್ತದೆಯಂತೆ. ಭಾರತದಿಂದ ಅಮೆರಿಕ 13000 ಕಿ.ಮೀ. ದೂರ.

ಎಂದರೆ ಈ ಹಕ್ಕಿಗಳು ವಾರ್ಷಿಕ ಕ್ರಮಿಸುವ ದೂರವು ೩ ಬಾರಿ ಭಾರತದಿಂದ ಅಮೆರಿಕಕ್ಕೆ ಹೋಗಿ ಬಂದಷ್ಟು. ಇದೊಂದು ವಿಶೇಷ ಹಕ್ಕಿ, ಇದರ ತಾಕತ್ತಿನ, ದಿಟ್ಟತನದ ಬಗ್ಗೆ ಎರಡು ಮಾತಿಲ್ಲ. ಇವು ಉತ್ತರ ಧ್ರುವದಲ್ಲಿ ಚಳಿಗಾಲ ಶುರುವಾಗುತ್ತಿದ್ದಂತೆ ಬೇಸಿಗೆಯಾಗುವ ದಕ್ಷಿಣ ಧ್ರುವಕ್ಕೆ ಹೊರಡುವುದು.

ಇದನ್ನೂ ಓದಿ: Shishir Hegde Column: ಬುಗರಿಬೈಲ್‌ ಬಸ್ಸು ಕಲಿಸಿದ ಶರಣಾಗತಿಯ ಪಾಠ

ದಕ್ಷಿಣದ ಅಂಟಾರ್ಕ್ಟಿಕಾದಲ್ಲಿ ಚಳಿಗಾಲ ಶುರುವಾದರೆ ಮತ್ತೆ ಉತ್ತರದ ಗ್ರೀನ್‌ಲ್ಯಾಂಡ್‌ಗೆ ಪ್ರಯಾಣ. ಅವು ಧ್ರುವದಿಂದ ಧ್ರುವಕ್ಕೆ ವಲಸೆ ಹೋಗುವುದು ಏಕೆ, ಧ್ರುವಗಳಿಂದ ಸಮಭಾಜಕ ವೃತ್ತದ ಕಡೆಗೆ/ವರೆಗೆ ಬಂದರಾಗದೇ? ಈ ರೀತಿ ವಲಸೆ ಹೋಗುವಾಗ ಅವು ಮಧ್ಯದಲ್ಲಿ ತಂಗುತ್ತವೆ, ಅಲ್ಲಿಯೇ ಏಕೆ ಉಳಿದುಬಿಡುವುದಿಲ್ಲ ಎಂಬ ಕೆಲವು ಸರಳ ಪ್ರಶ್ನೆಗಳಿಗೆ ಉತ್ತರ ಇಲ್ಲ. ಆರ್ಕಿಟಿಕ್ ಟರ್ನ್ ಹಕ್ಕಿಗಳು ಸುಮಾರು ೩೦ ವರ್ಷ ಬದುಕುತ್ತವೆ.

ಈ ಸಮಯದಲ್ಲಿ ಅವು ಕ್ರಮಿಸುವ ದೂರದ ಲೆಕ್ಕ 25 ಲಕ್ಷ ಕಿ.ಮೀ. ಇದು ಭೂಮಿಯಿಂದ ಚಂದ್ರನಲ್ಲಿಗೆ ಮೂರು ಬಾರಿಗಿಂತ ಜಾಸ್ತಿ ಹೋಗಿಬಂದಷ್ಟು ದೂರ. ಎಲ್ಲ ಹಕ್ಕಿಗಳು ಬದುಕಲಿಕ್ಕೋಸ್ಕರ, ಸಂತಾನೋತ್ಪತ್ತಿಗೆ ಒಳ್ಳೆಯ ವಾತಾವರಣವನ್ನು ಅರಸಿ ವಲಸೆ ಹೋಗುವುದು ಅಲ್ಲವೇ? ಆದರೆ ಅರ್ಕಿಟಿಕ್ ಟರ್ನ್ ಹಕ್ಕಿಗೆ ವಲಸೆಯೇ ಬದುಕೋ ಅಥವಾ ಬದುಕಲಿಕ್ಕೋಸ್ಕರ ವಲಸೆಯೋ ಎಂಬುದು ಪ್ರಶ್ನೆಯಾಗಿಯೇ ಉಳಿಯುತ್ತದೆ.

ಈ ರೀತಿ ವಿಶೇಷ ವಲಸೆ ಹೋಗುವ ಅದೆಷ್ಟೋ ಜೀವಿಗಳಿವೆ. ಒಂದೊಂದರದ್ದು ಒಂದೊಂದು ವಿಶೇಷ, ದೈಹಿಕ ಸಾಮರ್ಥ್ಯ ಇತ್ಯಾದಿ. ಶಿಕಾಗೋದಂಥ ಶೀತಪ್ರದೇಶದಲ್ಲಿ ಫಾಲ್ (ಶರತ್ಕಾಲ) ಮತ್ತು ಸ್ಪ್ರಿಂಗ್ (ವಸಂತ) ಬಹಳ ವಿಶೇಷ. ಶರತ್ಕಾಲವೆಂದರೆ ಬೇಸಿಗೆ ಯಿಂದ ಚಳಿಗಾಲಕ್ಕೆ ಮರಗಿಡ, ಪ್ರಾಣಿ ಪಕ್ಷಿಗಳು ತಯಾರಾಗುವ ಸಮಯ.

butterfly R

ಇಲ್ಲಿನ ಚಳಿಯೆಂದರೆ ಸುಮಾರು ಮೂರು ತಿಂಗಳ ಕಾಲ ೦ ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆ. -೨೦ ಡಿಗ್ರಿಯಿಂದ -೩೫ ಸೆಲ್ಸಿಯಸ್ ಕೆಲವು ವಾರ. ಶರತ್ಕಾಲದಲ್ಲಿ (ಅಕ್ಟೋಬರ್-ನವೆಂಬರ್) ಚಳಿ ಸ್ವಲ್ಪ ಶುರುವಾಗುತ್ತದೆ. ಆ ಸಮಯದಲ್ಲಿ ಎಲ್ಲ ಮರಗಳು ಚಳಿಗಾಲಕ್ಕೆ ತಯಾರಾಗುವುದನ್ನು ನೋಡುವುದೇ ಒಂದು ಸಂಭ್ರಮ.

ಸೂಜಿ ಮೊನೆಯ ಗಿಡಗಳನ್ನು ಬಿಟ್ಟು ಉಳಿದ ಎಲ್ಲಾ ಗಿಡಗಳು ಈ ಸಮಯದಲ್ಲಿ ತಮ್ಮ ಎಲೆಗಳನ್ನು ಉದುರಿಸಿಕೊಳ್ಳುತ್ತವೆ. ಗಿಡಗಳ ಎಲೆಗಳಲ್ಲಿ ಅತ್ಯಂತ ಮೌಲ್ಯಯುತ ಸತ್ವಗಳು ಇರುವುದು. ಎಲೆಯನ್ನು ಹಾಗೆಯೇ ಉದುರಿಸಿಕೊಳ್ಳುವುದೆಂದರೆ ಅವೆಲ್ಲವನ್ನು ಕಳೆದು ಕೊಂಡಂತೆ ಅಲ್ಲವೇ? ಹಾಗಾಗಿ ಇಲ್ಲಿನ ಚತುರ ಗಿಡಗಳು ಚಳಿಗಾಲ ಇನ್ನೇನು ಬರಬೇಕು, ತನ್ನ ಎಲೆಯಲ್ಲಿನ ಸತ್ವಗಳಾದ ಸಾರಜನಕ ಮತ್ತು ರಂಜಕ ಇತ್ಯಾದಿಗಳನ್ನು ಕಾಂಡಕ್ಕೆ ವರ್ಗಾಯಿಸುತ್ತವೆ.

ನಂತರದಲ್ಲಿ ಎಲೆಗಳನ್ನು ಉದುರಿಸಿಕೊಳ್ಳುವುದು. ಅಷ್ಟಕ್ಕೂ ಎಲೆಗಳನ್ನು ಏಕೆ ಉದುರಿಸಿ ಕೊಳ್ಳಬೇಕು? ಇಲ್ಲಿ ಅಷ್ಟು ಕಡಿಮೆ ಉಷ್ಣತೆ ಮುಟ್ಟುತ್ತದೆ ಎಂದೆನಲ್ಲ, ಅದುವೇ ಇದೆಲ್ಲದಕ್ಕೆ ಕಾರಣ. ನೀರು ಘನೀಕರಿಸುವುದು ೦ ಡಿಗ್ರಿ ಸೆಲ್ಸಿಯಸ್‌ನಲ್ಲಿ ಎಂಬುದು ನಿಮಗೆ ಗೊತ್ತು. ಎಲೆಗಳಲ್ಲಿ ನೀರಿನಂಶ ಇರುತ್ತದೆಯಲ್ಲ, ಆ ನೀರು ಎಲೆಗಳ ಜೀವಕೋಶದಲ್ಲಿಯೂ ಇರುತ್ತವೆ. ಆ ನೀರು ಇಷ್ಟು ಕಡಿಮೆ ಉಷ್ಣತೆಗೆ ತೆರೆದುಕೊಂಡಾಗ ಅತ್ಯಂತ ಚಿಕ್ಕ ಹರಳಾಗುತ್ತವೆ, ಸ್ಫಟಿಕೀಕರಣಗೊಳ್ಳುತ್ತವೆ. ಅವು ಆ ಜೀವಕೋಶಗಳನ್ನು ಒಳಗಿನಿಂದಲೇ ಇರಿದು ಕೊಂದು ಬಿಡುತ್ತವೆ. ಹಾಗಾಗಿಯೇ ಗಿಡಗಳದ್ದು ಚಳಿಗಾಲ ಬರುವುದರೊಳಗೆ ಈ ಎಲ್ಲ ಕಸರತ್ತು.

ಹೀಗೆ ಎಲೆ ಉದುರಿಸಿಕೊಳ್ಳುವಾಗ, ಸತ್ವಗಳನ್ನು ಹೀರಿದ ನಂತರ, ಎಲೆ ಉದುರುವುದಕ್ಕಿಂತ ಮೊದಲು ಅದರಲ್ಲಿನ ಪತ್ರಹರಿತ್ತು ವಿಭಜನೆಯಾಗುತ್ತದೆ. ಆ ಸಮಯದಲ್ಲಿ ಗಿಡಮರಗಳ ಎಲೆಗಳೆಲ್ಲ ಕೆಂಪು ಅಥವಾ ಹಳದಿ ಬಣ್ಣಕ್ಕೆ ತಿರುಗಿಕೊಳ್ಳುತ್ತವೆ.

ನೀವು ಬಣ್ಣ ಬಣ್ಣದ ಗಿಡಗಳಿಂದ ತುಂಬಿದ ವಿದೇಶಿ ರಸ್ತೆಗಳ ಚಿತ್ರಗಳನ್ನು ನೋಡಿರುತ್ತೀರಿ. ಅವು ಕೆಂಪು ಅಥವಾ ಹಳದಿ ಬಣ್ಣಕ್ಕೆ ತಿರುಗಲಿಕ್ಕೆ ಇದು ಕಾರಣ. ಈ ಸಮಯದಲ್ಲಿ ಶಿಕಾಗೋ ಯಕ್ಷಗಾನ ರಂಗಸ್ಥಳದಂತೆ ವರ್ಣರಂಜಿತ. ಕೆಲವೇ ದಿನಗಳಲ್ಲಿ ಈ ರಂಗ್-ಬಿರಂಗಿ ಗಿಡಗಳ ಎಲೆ ಉದುರಿ ಹೋಗಿ, ಚಳಿಗಾಲದಲ್ಲಿ ಕೇವಲ ಮರದ ಕಾಂಡಗಳಷ್ಟೇ ನಿಂತಿರುತ್ತದೆ, ಜೀವ ಹಿಡಿದುಕೊಂಡು. ಮುಂದೆ ವಸಂತಕಾಲದಲ್ಲಿ (ಏಪ್ರಿಲ್-ಮೇ) ಅದೇ ಕಾಂಡದಲ್ಲಿರುವ ಸತ್ವಗಳೆಲ್ಲ ತುದಿಗೆ ತಲುಪುತ್ತವೆ. ಈ ಗಿಡಗಳಿಗೆ ಕರ್ನಾಟಕದ ಗಿಡಗಳಂತೆ ವರ್ಷಪೂರ್ತಿ ಸಮಯವಿಲ್ಲ. ಬೀಜೋತ್ಪಾದನೆ, ಪ್ರಸರಣ, ಹುಟ್ಟು, ಬೇರುಬಿಟ್ಟು ಕೊಳ್ಳುವುದು, ಬೆಳೆಯುವುದು, ಮುಂದಿನ ಚಳಿಗಾಲದೊಳಗೆ ನೆಲೆಯೂರುವುದು, ಚಳಿಗಾಲಕ್ಕೆ ಬೇಕಾಗುವಷ್ಟು ಸತ್ವ ಶೇಖರಿಸಿಕೊಳ್ಳುವುದು ಇವೆಲ್ಲ ನಡೆಯಬೇಕು.

ಆರೇ ತಿಂಗಳಲ್ಲಿ ಇನ್ನೊಂದು ಚಳಿಗಾಲ. ಹಾಗಾಗಿ ವಸಂತದಲ್ಲಿ ಎಲ್ಲಕ್ಕಿಂತ ಮೊದಲು ಹೂವಿನ ಮೊಗ್ಗುಗಳು, ಹೂವು ಹುಟ್ಟುತ್ತವೆ. ಚಳಿಗಾಲವಿಡೀ ಅಡಗಿ ಕುಳಿತಿದ್ದ ಜೇನು, ದುಂಬಿ, ಕೀಟಗಳಿಗೆ ಅದು ಹಬ್ಬದ ಕಾಲ.

ಎಲ್ಲೆಂದರಲ್ಲಿ ಬರೀ ಹೂವುಗಳನ್ನು ತುಂಬಿಕೊಂಡು ಮದುವಣಗಿತ್ತಿಯಂತೆ ತಯಾರಾಗಿ ನಿಂತ ಗಿಡಗಳು. ಹೂವು ಬಲಿತು ಬೀಜವಾಗುವಾಗ ಎಲೆಗಳು ಹುಟ್ಟಿಕೊಳ್ಳುವುದು. ಗಿಡಗಳಷ್ಟೇ ಅಲ್ಲ, ಪ್ರಾಣಿ ಪಕ್ಷಿಗಳು ಕೂಡ ಹೀಗೆಯೇ. ಕೆಲವೊಂದು ಜೀವಿಗಳು ಬೆಚ್ಚಗಿನ ದಕ್ಷಿಣಕ್ಕೆ ವಲಸೆ ಹೋದರೆ ಇನ್ನು ಕೆಲವೊಂದು ಪ್ರಾಣಿ ಪಕ್ಷಿಗಳು ವಲಸೆ ಎಂದೆಲ್ಲ ಹೊರಡುವವಲ್ಲ. ಇಲ್ಲಿಯೇ ಉಳಿದುಕೊಳ್ಳುತ್ತವೆ.

ಅವುಗಳ ಚಳಿಗಾಲದ ತಯಾರಿಯೂ ಹಾಗೆಯೇ ಇರುತ್ತದೆ. ಹಿತ್ತಲಿನ ಮೊಲಗಳು, ಇಣಚಿ, ಹಕ್ಕಿಗಳು ಶರತ್ಕಾಲದ ಸಮಯದಲ್ಲಿ ಅತ್ಯಂತ ಚಟುವಟಿಕೆಯಿಂದ ಓಡಾಡಿಕೊಂಡು ಯಥೇಚ್ಛ ತಿನ್ನುತ್ತವೆ. ಬಿಟ್ಟರೆ ಮನೆಯೊಳಕ್ಕೂ ದಾಳಿಯಿಡುವ ಕಾಲ ಅದು. ಇದರಿಂದ ಅವುಗಳ ದೇಹದಲ್ಲಿ ಕೊಬ್ಬು ಶೇಖರಣೆಯಾಗಿ ಅವು ಚಳಿಗೆ, ಚಳಿಗಾಲಕ್ಕೆ ತಯಾರಾಗುತ್ತವೆ.

ಇವೆಲ್ಲ ವಲಸೆ ಹೋಗಲಾಗದ, ಹೋಗಲು ಮನಸ್ಸಿಲ್ಲದ ಜೀವಿಗಳ ಕಥೆಯಾಯಿತು. ಶಿಕಾಗೊ ಸಮಭಾಜಕ ವೃತ್ತದಿಂದ ದೂರ, ಉತ್ತರ ಧ್ರುವಕ್ಕೆ ಹತ್ತಿರವಿರುವ ಜಾಗ. ವಲಸಿಗ ಹಕ್ಕಿಗಳು ಬಹುತೇಕ ಧ್ರುವಗಳಿಂದ ಸಮಭಾಜಕ ವೃತ್ತದೆಡೆಗೆ ಉಷ್ಣವಾತಾವರಣ ಬಯಸಿ ಹೊರಡುತ್ತವೆ. ಹಾಗಾಗಿ ಮಾರ್ಗಮಧ್ಯದಲ್ಲಿರುವ ಶಿಕಾಗೊ ಮೂಲಕ ಸುಮಾರು 250 ಪ್ರಭೇದದ ೮೦ ಲಕ್ಷ ಹಕ್ಕಿಗಳು ಆಚೀಚೆ ವಲಸೆ ಬೆಳೆಸುತ್ತವೆ.

ಅವುಗಳಲ್ಲಿ ಕೆಲವು ಹಕ್ಕಿಗಳು ಬೇಸಗೆಯ ಒಂದೆರಡು ತಿಂಗಳು ಇಲ್ಲಿಯೇ ಉಳಿದು, ಸಂತಾನೋತ್ಪತ್ತಿ ಇತ್ಯಾದಿ ಮಾಡಿಕೊಂಡು ಹೋದರೆ, ಇನ್ನು ಕೆಲವು ಹಕ್ಕಿಗಳು ಇಲ್ಲಿ ಕೆಲವೇ ತಾಸು ತಂಗಿದ್ದು ಹೊರಟುಬಿಡುತ್ತವೆ. ಒಟ್ಟಾರೆ ಪಕ್ಷಿವೀಕ್ಷಕರಿಗೆ, ಪಕ್ಷಿಯ ವಲಸೆಯನ್ನು ಅಭ್ಯಾಸಮಾಡುವವರಿಗೆ ಶಿಕಾಗೊ ಹೇಳಿಮಾಡಿಸಿದ ಜಾಗ.

ವಲಸಿಗ ಜೀವಿಗಳಲ್ಲಿಯೇ ನನ್ನನ್ನು ಅತ್ಯಂತ ಆಕರ್ಷಿಸಿದ್ದು ಯಾವುದೇ ಹಕ್ಕಿಯಲ್ಲ, ಒಂದು ಪಾತರಗಿತ್ತಿ. ಅದರ ಹೆಸರು ಮೊನಾರ್ಕ್ ಬಟರ್ಫ್ಲೈ-. ನೋಡಲಿಕ್ಕೆ ಇದೊಂದು ಸಾಧಾ ರಣ ಪಾತರಗಿತ್ತಿ. ಕೇಸರಿ ಮತ್ತು ಕಡುಗಪ್ಪಿನ ಅಥವಾ ಕಡು ಮಿಶ್ರಿತ, ಅಷ್ಟೇನೂ ಗಮನ ಸೆಳೆಯದ ಪತಂಗ. ಬಿನ್ನಾಣಗಿತ್ತಿಯಲ್ಲದ ಪಾತರಗಿತ್ತಿ. ಜಗತ್ತಿನಲ್ಲಿ ಸುಮಾರು ೨೦ ಸಾವಿರ ಚಿಟ್ಟೆಯ ಪ್ರಭೇದಗಳಿವೆಯಂತೆ, ಅವುಗಳಲ್ಲಿ ಒಂದು.

ಇವು ಪ್ರತಿವರ್ಷ, ಸೆಪ್ಟೆಂಬರ್ ಮೊದಲ ವಾರ ಬಂತೆಂದರೆ ಸಾಕು, ಇಲ್ಲಿನ ಹಿತ್ತಲಲ್ಲಿ, ಪಾರ್ಕುಗಳಲ್ಲಿ ಕಾಣಿಸಿಕೊಳ್ಳುತ್ತವೆ. ಇಲೆಕ್ಟ್ರಿಕ್ ಕಂಬಗಳು, ಮರಗಿಡಗಳು, ಕಟ್ಟಡಗಳು ಹೀಗೆಎಲ್ಲೆಂದರಲ್ಲಿ ಸಾವಿರಾರು ಪತಂಗಗಳು ಮುತ್ತಿಕೊಳ್ಳುತ್ತವೆ. ಇವು ಕ್ಯಾಲೆಂಡರ್ ಇಟ್ಟುಕೊಂಡು, ದಿನಾಂಕ ನಿಗದಿಸಿ ಬಂದಂತೆ. ಪ್ರತಿವರ್ಷ ಆ ವಾರ ಹಾಜರ್!!

ನಾನು ಈ ಪಾತರಗಿತ್ತಿಯನ್ನು ಹಿಂದೆ ಮೆಕ್ಸಿಕೋದ ಕಾಡುಗಳಲ್ಲಿ ನೋಡಿಲ್ಲದಿದ್ದರೆ ಅವುಗಳತ್ತ ಅಷ್ಟಾಗಿ ಗಮನಹರಿಸುತ್ತಿರಲಿಲ್ಲ. ಇದೊಂದು ವಾರ್ಷಿಕ ಕ್ರಿಯೆ, ಇಲ್ಲಿನ ಸ್ಥಳೀಯ ಪಾತರಗಿತ್ತಿಗಳು ಪ್ಯೂಪಾವಸ್ಥೆಯಿಂದ ಹೊರಬರುವ ಕಾಲ ಎಂದೇ ಅಂದುಕೊಳ್ಳುತ್ತಿದ್ದೆ. ನಮ್ಮಲ್ಲಿ ಮಳೆಗಾಲದಲ್ಲಿ ಈ ಗೆದ್ದಲುಗಳು ಹಾತೆಯಾಗಿ ಹಾರುವಂತೆ, ಟ್ಯೂಬ್‌ಲೈಟ್, ಬೀದಿ ದೀಪಗಳನ್ನು ಮುತ್ತಿಕೊಳ್ಳುವಂತೆ ಇದು ಕೂಡ ಎಂದು ಸುಮ್ಮ ನಾಗುತ್ತಿದ್ದೆ. ಈಗ ಕೆಲವು ವರ್ಷಗಳ ಹಿಂದೆ, ಕೆಲಸದ ನಿಮಿತ್ತ ಮೆಕ್ಸಿಕೋ ದೇಶದ ಮೊಂಟೆರಿ ಎಂಬ ನಗರಕ್ಕೆ ಹೋಗಿದ್ದೆ. ಅದು ನವೆಂಬರ್ ಮೊದಲವಾರ. ಮೆಕ್ಸಿಕೋದವರು ತಮ್ಮ ಪೂರ್ವಜರನ್ನು ನೆನಪಿಸಿಕೊಳ್ಳುವ, ಸಾಮೂಹಿಕ ಶ್ರಾದ್ಧದ ದಿನ Día de Muertos (Day of the Dead ). ಆ ದಿನ ಜನರೆಲ್ಲ ಸಾಗರೋಪಾದಿಯಾಗಿ ರಸ್ತೆಗಿಳಿದಿದ್ದರು.

ಅಸ್ಥಿಪಂಜರದಂತೆ ವೇಷ ಮಾಡಿಕೊಂಡು ಪರೇಡ್ ಮಾಡುತ್ತಿದ್ದರು. ಜತೆಯಲ್ಲಿ ಪ್ರತಿ ಮನೆಯಲ್ಲಿ ಪೂರ್ವಜರ ಶ್ರಾದ್ಧ; ಮನೆಯಲ್ಲಿರುವ ಎಲ್ಲಾ ಪೂರ್ವಜರ ಫೋಟೋಗಳನ್ನು ಅಂಗಳಕ್ಕೆ ತಂದಿರಿಸಿ, ತುಳಸಿ ಪೂಜೆಯಂತೆ ಅಲಂಕರಿಸಿ, ಅವರೆಲ್ಲರಿಗೆ ಪೂಜೆ ನೈವೇದ್ಯ ಇತ್ಯಾದಿ ಮಾಡುತ್ತಾರೆ. ಅವರ ಶ್ರಾದ್ಧ ಮತ್ತು ನಮ್ಮಲ್ಲಿನ ಶ್ರಾದ್ಧದಲ್ಲಿ ಬಹಳಷ್ಟು ಹೋಲಿಕೆ ಗಳಿವೆ.

ಅಲ್ಲಿಯೂ ತರ್ಪಣ ಕೊಡುವುದು, ಪೂರ್ವಜರಿಗೆ ಆಹಾರ, ಪಿಂಡಪ್ರದಾನ (ಪುರಿಯಂಥ ಖಾದ್ಯ) ಇದೆ. ಈ ಊರಿನ ವಿಶೇಷತೆಯೇನೆಂದರೆ ಪ್ರತಿವರ್ಷ Day of the Dead ದಿನದಂದೇ ಕರಾರುವಾಕ್ಕಾಗಿ ಈ ಮೊನಾರ್ಕ್ ಪಾತರಗಿತ್ತಿಗಳು ಇಲ್ಲಿ ಪ್ರತ್ಯಕ್ಷವಾಗುತ್ತವೆ. ಅವು ಆ ಊರನ್ನೆಲ್ಲ ತುಂಬಿಕೊಳ್ಳುತ್ತವೆ. ಅಷ್ಟೇ ಅಲ್ಲ, ಅಕ್ಕ ಪಕ್ಕದ ಕಾಡುಗಳಲ್ಲಿ ಅದೆಷ್ಟೋ ಕೋಟಿ-ಕೋಟಿ ಲೆಕ್ಕದಲ್ಲಿ ಮುತ್ತಿಗೆ ಹಾಕುತ್ತವೆ.

ಅವು ರಾತ್ರಿಯಿಡೀ ಈ ಕಾಡಿನ ಮರ, ಎಲೆಗಳು, ಕಾಂಡಗಳ ಮೇಲೆ ಕೂರುತ್ತವೆ. ಹಗಲಲ್ಲಿ ಆಹಾರ, ಹಾರಾಟ ಇತ್ಯಾದಿ. ಅವು ಕಾಡಿನ ಅದೆಷ್ಟೋ ಎಕರೆ ಪ್ರದೇಶದ ಗಿಡಗಳನ್ನೆಲ್ಲ ಮುತ್ತಿಕೊಳ್ಳುವಷ್ಟು ಪ್ರಮಾಣದಲ್ಲಿರುತ್ತವೆ ಎಂದು ಕೇಳಿದಾಗಿನಿಂದ ಅವನ್ನು ಪ್ರತ್ಯಕ್ಷ ನೋಡಬೇಕೆಂಬ ಆಸೆ ಶುರುವಾಗಿತ್ತು. ಕಾಡಿನ ಆ ಭಾಗವನ್ನು ತಲುಪಬೇಕೆಂದರೆ ಆ ಊರಿ ನಿಂದ ಸುಮಾರು ೩ ತಾಸು ಚಾರಣ ಮಾಡಬೇಕಿತ್ತು.

ಈ ಪಾತರಗಿತ್ತಿಗಳು ಮರಗಳನ್ನು ಮುತ್ತಿಕೊಂಡದ್ದು ನೋಡಲಿಕ್ಕೆ ಇದ್ದ ಸಮಯ ಬೆಳಗಿನ ಒಂದಿಷ್ಟು ಹೊತ್ತು ಮಾತ್ರ. ನಂತರ ಅವು ಹಾರಲಿಕ್ಕೆ ಶುರುಮಾಡಿಬಿಡುತ್ತಿದ್ದವು. ಅವು ಹಾರಾಡುತ್ತಿದ್ದರೆ ಆ ಸಮಯದಲ್ಲಿ ಕಾಡನ್ನು ಹೊಕ್ಕಲಿಕ್ಕೆ ಸಾಧ್ಯವೇ ಇಲ್ಲ. ಕೈಕಾಲಿಗಷ್ಟೇ ಅಲ್ಲ, ಮೂಗು ಬಾಯಿಗೂ ಅವು ದಾಳಿಯಿಡುತ್ತವೆ.

ಅಷ್ಟೊಂದು ಅವುಗಳ ಸಂಖ್ಯೆ. ಹಾಗಾಗಿ ಬೆಳಗಿನ ಜಾವ ಮೂರಕ್ಕೆಲ್ಲ ಹೊರಟರೆ ಅವು, ಸೂರ್ಯೋದಯವಾಗುವಾಗ ಮರಕ್ಕೆ ಮುತ್ತಿಕೊಂಡದ್ದು ನೋಡಲಿಕ್ಕೆ ಶಕ್ಯ. ಅಲ್ಲಿ ಹೋಗಿ ನೋಡಿದರೆ ಅದೊಂದು ಮೊನಾರ್ಕ್ ಪಾತರಗಿತ್ತಿಯ ಮಹಾಸಾಗರ. ಕಾಡಿನಲ್ಲಿ ಎಲ್ಲೆಂದ ರಲ್ಲಿ ಕಾಣುವ ಮರ, ಎಲೆ, ಒಂದಿಂಚೂ ಬಿಡದಂತೆ ಪಾತರಗಿತ್ತಿ ತುಂಬಿ ಹೋಗಿ ದ್ದವು. ಅವೆಷ್ಟೆಂದರೆ ಎಲ್ಲ ಮರಗಿಡಗಳ ಎಲೆಗಳಂತೆ ಅವುಗಳ ರೆಕ್ಕೆ. ಹೇಗಿತ್ತೆಂದರೆ ಆ ಪಾತರಗಿತ್ತಿ ಮುತ್ತಿಕೊಂಡ ಮರಗಳೆಲ್ಲವೂ ಒಂದೇ ಜಾತಿಯವು ಎಂಬಂತೆ ಕಾಣಿಸುತ್ತಿತ್ತು. ಅವು ನವೆಂಬರ್ ಮೊದಲವಾರದ ಆ ದಿನ ಬಂದು, ಕೆಲ ತಿಂಗಳು ಅಲ್ಲಿಯೇ ನೆಲೆಸಿ, ನಂತರ (ಮಾರ್ಚ್‌ನಲ್ಲಿ) ಅಲ್ಲಿಂದ ಹಾರಿಹೋಗುತ್ತವೆ, ಉತ್ತರಕ್ಕೆ!

ಈ ಪಾತರಗಿತ್ತಿಯ ಬದುಕು ಮತ್ತು ವಲಸೆ ವಿಚಿತ್ರ, ವಿಭಿನ್ನ. ಕೀಟ ಜಗತ್ತಿನಲ್ಲಿಯೇ ಒಂದು ಅದ್ಭುತ ಈ ಮೊನಾರ್ಕ್ ಪಾತರಗಿತ್ತಿ. ಇವುಗಳ ವಲಸೆ ಯಾವುದೇ ಹಕ್ಕಿಗಳ ವಲಸೆಗಿಂತ ಕಡಿಮೆಯಿಲ್ಲ. ಇವುಗಳದು ಅಮೆರಿಕದ ಉತ್ತರ ಭಾಗ ಮತ್ತು ದಕ್ಷಿಣದಲ್ಲಿರುವ ಮೆಕ್ಸಿಕೋ ನಡುವಿನ ವಲಸೆ. ಸುಮಾರು 9000 ಕಿ.ಮೀ. ವಸಂತಕಾಲದಲ್ಲಿ ಮೆಕ್ಸಿ ಕೋದಿಂದ ಈ ಮೊನಾರ್ಕ್ ಪತಂಗ ಉತ್ತರಕ್ಕೆ ಹೊರಡುತ್ತದೆ.

ಅದು ಸುಮಾರು ೪.೫ ಸಾವಿರ ಕಿ.ಮೀ. ಪ್ರವಾಸ. ಆದರೆ ಅವುಗಳ ಜೀವಿತಾವಧಿ ಎರಡರಿಂದ ಆರು ವಾರ ಮಾತ್ರ. ಅವು ಹೇಳಿ ಕೇಳಿ ಪಾತರಗಿತ್ತಿ, ಎಷ್ಟು ವೇಗವಾಗಿ ಹಾರಿ ಯಾವು? ಹಾಗಾದರೆ ಇಷ್ಟೊಂದು ದೂರ ಅವು ಕ್ರಮಿಸುವುದು ಹೇಗೆ? ಅಲ್ಲಿಯೇ ವಿಶೇಷವಿರುವುದು. ಅವು ಮೆಕ್ಸಿಕೋದಲ್ಲಿರುವಲ್ಲಿಯವರೆಗೆ- ಅವುಗಳ ಜೀವಿತಾವಧಿ ಪರಮಾವಧಿ ಆರು ವಾರ.

ಆದರೆ ದಂಡಿನಲ್ಲಿರುವ ಅವು ವಲಸೆಗೆ ಹೊರಡುವ ಸಮಯಬಂದಾಗ ಮೊಟ್ಟೆ ಇಡುತ್ತವೆ. ಆ ಮೊಟ್ಟೆಯಿಂದ ಬಂದ ಪಾತರಗಿತ್ತಿ ಮಾತ್ರ ೮-೯ ತಿಂಗಳು ಬದುಕಬಲ್ಲವು. ಅವುಗಳೇ ವಲಸೆಗೆ ಹೊರಡುವುದು, ವಲಸೆ ಪೂರೈಸುವುದು.

ದೀರ್ಘಕಾಲ ಬದುಕುವ ಈ ಮೊನಾರ್ಕ್ ಪಾತರಗಿತ್ತಿ ಅದೇ ಅಲ್ಪಾಯುಷಿ ಪಾತರಗಿತ್ತಿಗೆ ಹುಟ್ಟಿದವು. ಇದರರ್ಥ ಪಾತರಗಿತ್ತಿ ಯಾವ ಕಾಲದಲ್ಲಿ ಹುಟ್ಟುತ್ತದೆ ಎಂಬುದರ ಮೇಲೆ ಅದರ ಆಯುಷ್ಯ ೬ ವಾರವೋ ಅಥವಾ ೯ ತಿಂಗಳೋ ಎಂದು ನಿರ್ಧರಿತವಾಗುವುದು. ಈ ವಲಸೆಗೆ ಹೊರಡುವಾಗ ಅದರ ಜತೆಯಲ್ಲಿ ಅಲ್ಪಾಯುಷಿ ಪತಂಗಗಳೂ ಇರುತ್ತವೆ. ಅವು ಕೂಡ ನಿರಂತರ ಹುಟ್ಟುತ್ತಲೇ ಇರುತ್ತವೆ. ಅವು ಮಾರ್ಗ ಮಧ್ಯದಲ್ಲಿಯೇ ಅಲ್ಪಕಾಲ ಬದುಕಿ, ದಾರಿಯುದ್ದಕ್ಕೂ ಹುಟ್ಟುತ್ತ, ಸಾಯುತ್ತ ಮುಂದೆ ಸಾಗುತ್ತವೆ.

ಹೀಗೆ ಇವುಗಳ ವಲಸೆಯ ಏಕಮುಖ ಪ್ರವಾಸ ಮುಗಿಯುವುದರೊಳಗೆ ಐದಾರು ತಲೆಮಾರು ಅಲ್ಲಿ ಕಳೆದಿರುತ್ತದೆ. ನಂತರದಲ್ಲಿ ಸ್ವಲ್ಪ ಕಾಲ ಇವು ಅಮೆರಿಕದ ಉತ್ತರ ರಾಜ್ಯಗಳು, ಕೆನಡಾ ಇಲ್ಲೆಲ್ಲ ಬದುಕುತ್ತವೆ. ಆ ಸಮಯದಲ್ಲಿ ಅವಕ್ಕೆ ಹುಟ್ಟುವ ಎಲ್ಲ ಪತಂಗಗಳೂ ಪುನಃ ಅಲ್ಪಾಯುಷಿಗಳೇ. ಮತ್ತೆ ಚಳಿಗಾಲ ಆರಂಭವಾಗಿ ದಕ್ಷಿಣಕ್ಕೆ ವಲಸೆ ಹೋಗುವಾಗ ದೀರ್ಘಾಯುಷಿಗಳು ಹುಟ್ಟಿಕೊಳ್ಳುತ್ತವೆ.

ಒಟ್ಟಾರೆ ಮೆಕ್ಸಿಕೋದಿಂದ ಹೊರಟು, ಮುಂದಿನ ವರ್ಷ ಅದೇ ದಿನಕ್ಕೆ ವಾಪಸಾಗುವಾಗ ಕನಿಷ್ಠ ಹತ್ತರಿಂದ ಹದಿನೈದು ತಲೆಮಾರು ಅಲ್ಲಿ ಕಳೆದಿರುತ್ತದೆ. ಏನು ವಿಚಿತ್ರ ನೋಡಿ. ಅಷ್ಟೊಂದು ತಲೆಮಾರು ಕಳೆದು ಸಾಗುವ ಈ ವಲಸೆ ಯಾವುದೇ ಚ್ಯುತಿಯಿಲ್ಲದೆ ಪ್ರತಿವರ್ಷ ನಡೆಯುತ್ತದೆ. ಕರಾರುವಾಕ್ಕಾಗಿ ಸೆಪ್ಟೆಂಬರ್ ಮೊದಲ ವಾರ ಶಿಕಾಗೊ ತಲುಪುತ್ತದೆ.

ಒಂದೇ ಒಂದು ದಿನ ಆಚೀಚೆಯಾಗದಂತೆ ಶ್ರಾದ್ಧ ಸಾಗಿಸಲು ಮೆಕ್ಸಿಕೋ ಮುಟ್ಟುತ್ತದೆ. ಇವುಗಳ ಬದುಕು ಥೇಟ್ ರೀಲೆ ಓಟದ ಆಟದಂತೆ. ಒಂದೊಂದು ತಲೆಮಾರು, ಮುಂದಿನ ತಲೆಮಾರಿಗೆ ವಲಸೆಯ ಸುಪರ್ದಿ ಕೊಡುವುದು, ಬ್ಯಾಟನ್ ಹಸ್ತಾಂತರಿಸುವುದು. ಮುಂದಿನ ತಲೆಮಾರು ಅದನ್ನು ಚಾಚೂ ತಪ್ಪದೆ ನಡೆಸಿಕೊಂಡು ಹೋಗುವುದು.

ಹಿಂದೆಂದೂ ನೋಡದ ಅದೇ ದಾರಿಯಲ್ಲಿ ಸಾಗುತ್ತ, ಬದುಕನ್ನು ಕೂಡ ಅದೆಲ್ಲದರ ನಡುವೆಯೇ ಸಾಗಿಸುವುದು. ಈ ಪಾತರಗಿತ್ತಿಯ ಇನ್ನೊಂದು ವಿಶೇಷವೆಂದರೆ ಅವು ಎಲ್ಲ ಗಿಡಗಳಲ್ಲಿ ಮೊಟ್ಟೆಗಳನ್ನು ಇಡುವುದಿಲ್ಲ. ಮಿಲ್ಕ್ ವೀಡ್ ಎಂಬ ಒಂದು ಕಾಟುಗಿಡ ಉತ್ತರ ಅಮೆರಿಕದಲ್ಲಿ ಇದೆ. ಈ ಪತಂಗಕ್ಕೆ ಮೊಟ್ಟೆಯಿಡಲು ಅದೇ ಗಿಡ, ಅದೇ ಎಲೆ ಬೇಕು. ಹಾಗಾಗಿ ಅವು ಸಾಗುವ ಮಾರ್ಗದಲ್ಲೆಲ್ಲ ಈ ಗಿಡ ಸಿಗುವಂತಿರಬೇಕು.

ಕೆಲವೇ ಕಿಲೋಮೀಟರ್ ಅಂತರದಲ್ಲಿ ಈ ಸಸ್ಯ ನಶಿಸಿಬಿಟ್ಟರೆ ಆ ಕೋಟಿ ಕೋಟಿ ಪತಂಗಗಳು ಮುಂದೆ ಸಾಗಲಾರವು, ಅಲ್ಲಿಯೇ ಅವುಗಳ ಸಾವು. ಇದೆಲ್ಲವನ್ನು ಸಂಭಾಳಿಸಿ ಕೊಂಡು ಸಾಗುವುದೇ ಅದರ ಬದುಕು. ಹೇಗಿದೆ ನೋಡಿ! ಈ ಜಗತ್ತೇ ಒಂದು ಬೆರಗು, ವಿಸ್ಮಯಗಳ ಆಗರ. ಇಲ್ಲಿ ಪ್ರತಿಯೊಂದು ಜೀವಿಯ ಬದುಕೂ ಒಂದು ಹೋರಾಟ. ಅಲ್ಲವೇ?!