ಶಿಶಿರ ಕಾಲ
ಯಾವಾಗ ಮನುಷ್ಯ ಪ್ರಾಣಿಯಂತಾಗುತ್ತಾನೋ, ಆಗ ಆತ ಯಾವುದೇ ಪ್ರಾಣಿಗಿಂತ ಭಯಾನಕ ಮತ್ತು ಕ್ರೂರಿಯಾಗಿ ಬಿಡುತ್ತಾನೆ!
ಅಮೆರಿಕದ ವಿಸ್ಕಾನ್ಸಿನ್ ರಾಜ್ಯದ ಪ್ಲೇನ್ ಫೀಲ್ಡ ಎಂಬ ಒಂದು ಹಳ್ಳಿ. ಎಂದರಲ್ಲಿ ಕಣ್ಣು ಕಂತು ವವರೆಗೂ ಜೋಳ ಮತ್ತು ಸೋಯಾಬೀನ್ ಗದ್ದೆ- ಬಯಲು. ಹಾಗಾಗಿಯೇ ಹೆಸರು ಪ್ಲೇನ್ ಫೀಲ್ಡ್- ಸಮತಟ್ಟಾದ ಬಯಲು. ನಡುನಡುವೆ ಮೈಲುಗಳ ಅಂತರದಲ್ಲಿ ಒಂದಿಷ್ಟು ಮನೆಗಳ ಕೇರಿ. ಇನ್ನೊಂದಿಷ್ಟು ಒಂಟಿಮನೆಗಳು. ಅಂದು ಪೇಟೆ, ಅಂದಿಷ್ಟು ದಿನಸಿ- ಅದು ಇದು ಅಂಗಡಿಗಳು. ಕಥೆಯ ಇಸವಿ 1957. ಘೋರ, ನೀರೆಲ್ಲ ಘನವಾಗುವ ಚಳಿಗಾಲ.
ಕೆಲ ದಿನಗಳ ಹಿಂದಷ್ಟೇ ಮೊಣಕಾಲಷ್ಟು ಹಿಮಪಾತವಾಗಿತ್ತು. ಉತ್ತರ ಧ್ರುವದಿಂದ, ಕೆನಡಾದಿಂದ ಬೀಸಿ ಬರುತ್ತಿದ್ದ ಚಳಿಗಾಳಿ ಯಾವತ್ತೂ ಈ ಊರಿನ ಚಳಿಯನ್ನು ಇನ್ನಷ್ಟು ಅಸಹನೀಯ ಮಾಡು ತ್ತಿತ್ತು. ಆದರೆ ಅದೊಂದು ದಿನ ಊರವರಿಗೆಲ್ಲ ನಡುಕ ಹುಟ್ಟಿಸಿದ್ದು ಹಿಮಪಾತವಾಗಿರಲಿಲ್ಲ, ಬೀಸು ಗಾಳಿಯಾಗಿರಲಿಲ್ಲ.
ಇಡೀ ಊರಿಗೆ ಊರೇ ಕಂಪಿಸಿದ್ದು ಬೇರೆ ಕಾರಣಕ್ಕೆ. ಆ ದಿನ ಊರಿನ ಪೇಟೆಯಲ್ಲಿ ಹಾರ್ಡ್‌ವೇರ್ ಅಂಗಡಿ ನಡೆಸುತ್ತಿದ್ದ ಮಹಿಳೆ ಇದ್ದಕಿದ್ದಂತೆ ಮಾಯವಾಗಿಬಿಟ್ಟಿದ್ದಳು. ಅಂಗಡಿ, ಹಣದ ಪೆಟ್ಟಿಗೆ ಎಲ್ಲವೂ ತೆಗೆದೇ ಇತ್ತು- ಆದರೆ ಅವಳು ಮಾತ್ರ ಅಲ್ಲಿರಲಿಲ್ಲ. ಅವಳ ಮಗನೇ ಆ ಊರಿನಲ್ಲಿ ಪೊಲೀಸನಾಗಿದ್ದ. ಅವನು ಅಂಗಡಿಯೊಳಗೆ ಬಂದು ನೋಡುವಾಗ ಗಪೆಟ್ಟಿಗೆಯ ಆಚೀಚೆ ರಕ್ತ ಸೀರಿತ್ತು.
ಇದನ್ನೂ ಓದಿ: Shishir Hegde Column: ಉತ್ತರಿಸುವುದನ್ನು ನಿಲ್ಲಿಸುವವರೆಗೂ ಮನಸ್ಸಿನ ಪ್ರಶ್ನೆ ನಿಲ್ಲುವುದಿಲ್ಲ
ಅಲ್ಲಿಯೇ ಪಕ್ಕದಲ್ಲಿ ರಶೀದಿ ಪುಸ್ತಕವಿತ್ತು. ಅದರಲ್ಲಿ ಗ್ರಾಹಕರಿಗೆ ಬರೆದು ಕೊಟ್ಟ ರಶೀದಿಯ ನಕಲು ಪ್ರತಿಗಳಿದ್ದವು. ಅವಳ ರಶೀದಿ ಪುಸ್ತಕದಲ್ಲಿದ್ದ ಕೊನೆಯ ಗ್ರಾಹಕ ‘ಎಡ್ವರ್ಡ್ ಗೀನ್’. ಎಡ್ ಆ ಊರಿ ನಲ್ಲಿ ಬಡಗಿ ಕೆಲಸ, ಗzಗಳಿಗೆ ಬೇಲಿ ಹಾಕುವುದು, ಅದು ಇದು ಸಾಮಾನುಗಳನ್ನು ಕೃಷಿಕರಿಗೆ ತಂದುಕೊಡುವುದು ಮಾಡಿಕೊಂಡಿದ್ದವ.
ಎಲ್ಲರಿಗೂ ಬೇಕಾದವ, ಎಲ್ಲರ ಜತೆಯೂ ಬೆರೆಯುವ ಜನಸಾಮಾನ್ಯ. ಪೊಲೀಸರಿಗೇಕೋ ಅವನ ಮೇಲೆ ಅನುಮಾನ ಬಂದು, ಯಾವುದಕ್ಕೂ ಇರಲಿ ಎಂದು ಬಂಧಿಸಿದರು. ಮತ್ತು ಹೆಚ್ಚಿನ ಪತ್ತೆಗೆ ವಾರಂಟ್ ಪಡೆದು ಅವನ ಒಂಟಿ ತೋಟದಮನೆಗೆ ಹೋದರು.(ನಿಮ್ಮದು ಸಂವೇದನಾಶೀಲ, ಸೂಕ್ಷ್ಮ ಮನಸ್ಸಾಗಿದ್ದರೆ ದಯವಿಟ್ಟು ಈ ಮುಂದಿನ ಪ್ಯಾರಾ ಬಿಟ್ಟು ಮುಂದೆ ಓದಿಕೊಳ್ಳಿ).
ಮನೆಯ ಹೊರಗಿನಿಂದಲೇ ಅದೇನೋ ಕಮಟು ವಾಸನೆ. ಒಳಹೊಕ್ಕು, ಬ್ಯಾಟರಿ ಬಿಡುತ್ತಿದ್ದಂತೆ ಅವರೆಲ್ಲ ಥರಗುಟ್ಟಿ ನಡುಗಿಹೋದರು. ಅವರು ಯಾರೂ ಊಹೆ ಮಾಡ ಲಾಗದ ದೃಶ್ಯ ಅವರೆದುರಿಗೆ ಸಂಭವಿಸಿತ್ತು. ಆ ಮಹಿಳೆಯ ದೇಹದ ಕಾಲಿಗೆ ಬಳ್ಳಿ ಕಟ್ಟಿ ನೇತು ಹಾಕಲಾಗಿತ್ತು. ರುಂಡವಿರದ ಮುಂಡ ಮಾತ್ರ. ಮಾಂಸದಂಗಡಿಯಲ್ಲಿ ಆಡನ್ನು ತಲೆ ಕತ್ತರಿಸಿ, ಚರ್ಮ ಸುಲಿದು ನೇತುಹಾಕುತ್ತಾರಲ್ಲ ಅಕ್ಷರಶಃ ಹಾಗೆ. ಅಲ್ಲಲ್ಲಿ ಅವಳ ದೇಹದ ಆಂತರಿಕ ಅಂಗಾಂಗಗಳು ಹರಡಿ ಬಿದ್ದಿದ್ದವು. ಅಷ್ಟೇ ಆಗಿದ್ದರೆ ಏನೋ ಒಂದು ಕೊಲೆ ಎಂದಾಗುತ್ತಿತ್ತು. ಆದರೆ ಅವನ ಮನೆಯಲ್ಲಿ! ಎಂದರಲ್ಲಿ ಮನುಷ್ಯನ ಮೂಳೆಗಳನ್ನೇ ಹೇಗೆ ಹೇಗೋ ಜೋಡಿಸಿ ಆಕೃತಿ ಗಳನ್ನು ನಿರ್ಮಿಸ ಲಾಗಿತ್ತು.
ಕುರ್ಚಿಗಳಿಗೆ ಪ್ರಾಣಿಗಳ ಚರ್ಮದ ಬದಲಿಗೆ ಮನುಷ್ಯ ಚರ್ಮಗಳನ್ನು ಹಾಕಲಾಗಿತ್ತು. ಮನುಷ್ಯನ ಬುರುಡೆಯನ್ನು ಬೌಲ್ (ಗುಂಡಿ ಪಾತ್ರೆ) ರೀತಿಯಲ್ಲಿ ಬಳಸಲಾಗಿತ್ತು. ಹೀಗೆ. ಅವನೆಂಥಾ ಮನುಷ್ಯ ಎಂದರೆ ಊರಿನ ಸ್ಮಶಾನಕ್ಕೆ ಹೋಗಿ, ಆಗಷ್ಟೇ ಹುಗಿದ ಹೆಣದ ಅಂಗಾಂಗ, ಚರ್ಮ, ತಲೆಬುರುಡೆ ಎಲ್ಲ ಮನೆಗೆ ತರುತ್ತಿದ್ದ. ಆದಿಮಾನವರು ಪ್ರಾಣಿಗಳ ಚರ್ಮ, ಮೂಳೆ ಬಳಸುವಂತೆ ಬಳಸುತ್ತಿದ್ದ.
ಮನುಷ್ಯರ ಮುಖದ ಚರ್ಮವನ್ನು ಕಿತ್ತು ಅದರ ಮುಖವಾಡ ಮಾಡಿಟ್ಟಿದ್ದ. ಆ ದಿನ ಪೊಲೀಸರ ಬ್ಯಾಟರಿ ಬೆಳಕಿಗೆ ಅನಾವರಣವಾದದ್ದು ಕೇವಲ ‘ಎಡ್ವರ್ಡ್ ಗೀನ್’ ಎಂಬ ಯಾವುದೋ ಒಬ್ಬ ಕೊಲೆಗಾರನ ಕರಾಳತೆ ಮಾತ್ರವಲ್ಲ. ಕೆಲವೇ ಘಟನೆಗಳಲ್ಲಿ ಮನುಷ್ಯನ ಕ್ರೌರ್ಯ ಸಾಧ್ಯತೆಯ ಪರಮಾವಧಿ ಎದುರಿಗೆ ಬಂದು ಬಿಡುತ್ತದೆ. ಈ ಕೊಲೆ ಮತ್ತು ಕ್ರೌರ್ಯ ಕೇವಲ ಒಂದು ಕಥೆಯಾಗಿ ಉಳಿಯಲಿಲ್ಲ. ಇದು ಅದೆಷ್ಟೋ ಸಿನಿಮಾಗಳಿಗೆ ಮಾದರಿ ಕಥೆಯಾಯಿತು. ಇದೇ ಘಟನೆ ಆಧರಿಸಿ ಕಾದಂಬರಿಗಳು ಬಂದವು, ಅವನ ಮನೆಯೊಳಗಿನ ಹೋಲಿಕೆಯಿರುವ ದೃಶ್ಯಗಳು ಭೂತಪ್ರೇತದ ( Horror) ಸಿನಿಮಾಗಳಲ್ಲಿ ಬಳಕೆಯಾದವು.
ಇದೆಲ್ಲ ವಿಷಯ ಈಗೇಕೆ ಎಂದು ಕೇಳಿದಿರಾ? ಇತ್ತೀಚೆಗೆ ನೆಟ್‌ಫ್ಲಿಕ್ಸ್ʼನಲ್ಲಿ Netflix's Monster: The Ed Gein Story ಎಂಬ ಎಂಟು ಕಂತಿನ ವೆಬ್ ಸೀರೀಸ್ ಬಿಡುಗಡೆಯಾಯಿತು. ಕೋಟ್ಯಂತರ ಜನರು ಇದನ್ನು ನೋಡಿದರು. ಅಷ್ಟೇ ಅಲ್ಲ, ಈಗೀಗ ಯಾರೂ ಹೆಚ್ಚಾಗಿ ಬಳಸದ ವಿಕಿಪೀಡಿಯಾದಲ್ಲಿ ಎಡ್ವರ್ಡ್ ಗೀನ್‌ನ ಬಗ್ಗೆ ಇದ್ದ ಪೇಜ್ ಅದೆಷ್ಟೋ ದಿನ ಪ್ರಪಂಚದ ಅತ್ಯಂತ ಹೆಚ್ಚು ವೀಕ್ಷಿಸಲ್ಪಟ್ಟ ವೆಬ್ ಪೇಜ್‌ಗಳಲ್ಲಿ ಒಂದಾಗಿತ್ತು.
ಇದೊಂದು ಉದಾಹರಣೆ ಮಾತ್ರ. ನೆಟ್‌ಫ್ಲಿಕ್ಸ್ ನಲ್ಲಿ ಈ ರೀತಿ ಅಮಾನುಷ ಕ್ರೌರ್ಯ ಎಸಗಿದ ಇನ್ನೂ ಸುಮಾರು ಅಪರಾಧಿಗಳ ಕ್ರೈಂ ಕಥೆಗಳಿವೆ. ಅವೆಲ್ಲವೂ ಬ್ಲಾಕ್ ಬಸ್ಟರ್‌ಗಳೇ. ಈಗಂತೂ ನೆಟ್ ಫ್ಲಿಕ್ಸ್, ಅಮೆಜಾನ್ ಪ್ರೈಮ್, ಝೀ, ಹಾಟ್‌ಸ್ಟಾರ್ ಹೀಗೆ ಹತ್ತಾರು ಓಟಿಟಿಗಳಿವೆ.
ಅವೆಲ್ಲವುಗಳಲ್ಲಿಯೂ ಇಂಥ ಹಲವು ವೆಬ್ ಸೀರೀಸ್‌ಗಳಿವೆ. ಅವೆಲ್ಲವೂ ಮನುಷ್ಯ ಕ್ರೌರ್ಯದ ಪರಮಾವಧಿಯನ್ನು ಮುಟ್ಟಿದವರ ಅಪರಾಧದ ಕಥೆ. ಅವೆಲ್ಲವೂ ಸತ್ಯಘಟನೆ ಆಧರಿಸಿದ ಕಥೆಗಳು. ಆದರೆ ಅಸಲಿಯತ್ತು ಏನೆಂದರೆ ಈ ಓಟಿಟಿಯಲ್ಲಿ ಕಥೆಯಾಗುವ ಕಥೆಗಳಲ್ಲಿ ಕಥೆ ಮಾತ್ರ ಸತ್ಯ ಘಟನೆಯನ್ನಾಧರಿಸಿದವು. ನಿಜ ಕಥೆಯೇ ಅಷ್ಟು ಕ್ರೌರ್ಯದ್ದಾದರೆ ಅದನ್ನು ಕಥೆಯಾಗಿಸುವಾಗ ಅಲ್ಲಿ ತೋರಿಸುವ ಕ್ರೌರ್ಯ ಮಾತ್ರ ನೈಜತೆಗಿಂತ ನೂರು ಪಟ್ಟು ಜಾಸ್ತಿಯವು.
ನಾನು ಮೇಲೆ ಹೇಳಿದ ಘಟನೆ ಸತ್ಯಕಥೆಯಾದರೆ ಈ ಕಥೆಯನ್ನಾಧರಿಸಿದ ನೆಟ್‌ಫ್ಲಿಕ್ಸ್ʼನ ಕಥೆಯ ಕ್ರೌರ್ಯದ ಮಟ್ಟವೇ ಬೇರೆಯದು, ಅತಿರಂಜನೆ. ಈ ಕಥೆಗಳಿರಬಹುದು ಅಥವಾ ಹಿಂದಿ, ಕನ್ನಡ ವಾಹಿನಿಗಳಲ್ಲಿ ಬರುವ ಇಂಥ ಕ್ರೈಂ ಸ್ಟೋರಿಗಳಿರಬಹುದು, ಅಥವಾ ಹಿಂದಿಯ ಭಕ್ಷಕ್, ಫ್ಲೆಶ್, ತಲ್ವಾರ್, ಚುಪ್- ರಿವೇಂಜ್ ಆಫ್ ಆರ್ಟಿ ಹೀಗೆ ಯಾವುದೇ ಸತ್ಯಾಧಾರಿತ ಕಥೆಗಳಿರಬಹುದು.
ಇವುಗಳಲ್ಲಿ ಹೆಚ್ಚಿನವು ಒಬ್ಬ ತೀರಾ ಸಾಮಾನ್ಯ, ಜನರೆಲ್ಲರ ಜತೆ ಸಾಮಾನ್ಯರಂತೆ ಬದುಕುವ ವ್ಯಕ್ತಿ; ಆದರೆ ಮರೆಯ ಹಿಂದೆ ಸೈಕೋಪಾಥ್- ಮನೋವಿಕೃತ ಕೊಲೆಗಾರ. ಎಲ್ಲರೂ ಅತಿರಂಜಿತ ಕ್ರೈಂ ಕಥೆಗಳನ್ನು ಇಷ್ಟಪಡುವುದಿಲ್ಲ. ಅದರಲ್ಲಿಯೂ ಓಟಿಟಿಗಳಲ್ಲಿ ಬರುವ ಮನೋವಿಕೃತ ಪಾತಕ ಕಥೆಗಳನ್ನು ನೋಡಿ ಜೀರ್ಣಿಸಿಕೊಳ್ಳುವುದು ಎಲ್ಲರಿಗೂ ಸಾಧ್ಯವಿಲ್ಲ.
ಅಂಥ ಘಟನೆಗಳನ್ನು ಟಿವಿ ಪರದೆಯ ಮೇಲೆ ಕೂಡ ನೋಡಲು ಸಾಧ್ಯವಾಗುವುದಿಲ್ಲ. ಇದು ಹೆದರಿಕೆಯ ಹಿಂಜರಿಕೆಯಲ್ಲ. ಮಾನಸಿಕ ಹಿಂಸೆ. ಆದರೆ ಈ ರೀತಿಯ ಕಥೆಗಳನ್ನು ನೋಡಲು ಬಯಸುವ ದೊಡ್ಡ ವರ್ಗವೇ ಇದೆ. ಪತ್ರಿಕೆಗಳಲ್ಲಿ ಅಪರಾಧಗಳ ಸುದ್ದಿಗೆಂದೇ ಒಂದೆರಡು ಪೇಜು ಇರುತ್ತದೆ.
ಕ್ರೈಂ ಸ್ಟೋರಿ ನೋಡಲಷ್ಟೇ ಟಿವಿ ಹಚ್ಚುವ, ನೋಡುತ್ತಲೇ ಊಟ ಮಾಡುವ ಅದೆಷ್ಟೋ ಜನರಿ ದ್ದಾರೆ. ಅವರೆಂದೂ ಯಾವುದೇ ಅಪರಾಧ ಎಸಗುವವರಲ್ಲ. ಆದರೆ ಎಲ್ಲರಿಗೂ ಇಂಥ ಅಪರಾಧಗಳ ಬಗ್ಗೆ ತಿಳಿಯುವ ಎಲ್ಲಿಲ್ಲದ ಕುತೂಹಲ.... ಮೇಲಿನ ಒಂದು ಪ್ಯಾರಾ ಓದಬೇಡಿ ಎಂದ ಮೇಲೂ ಓದಿದಿರಲ್ಲ, ಆ ಕುತೂಹಲ! ಆದರೆ ಇದೆಲ್ಲ ಕೇವಲ ಕುತೂಹಲದ್ದಷ್ಟೇ ಪ್ರಶ್ನೆಯೇ? ನಾವೇಕೆ ಹಾರರ್- ಭಯಾನಕ ಅಥವಾ ಕ್ರೈಂ ಕಥೆಗಳನ್ನು ನೋಡಲು ಬಯಸುತ್ತೇವೆ?
ಇಂಥ ಅರ್ಥವಾಗದ ಬಯಕೆಗಳನ್ನು ಈಡೇರಿಸಿಕೊಳ್ಳುವುದನ್ನು ‘ಅದೇನೋ ಥ್ರಿಲ್’ ಎಂದು ಆಡುಮಾತಿನಲ್ಲಿ ಹೇಳುವುದಿದೆ. ‘ಥ್ರಿಲ್’ ಎಂದರೆ ಅತ್ಯುತ್ಸುಕತೆ. ಈ ಅತಿಯಾದ ಕುತೂಹಲವೇಕೆ? ಕಾರಣವಿದೆ. ನಮ್ಮೆಲ್ಲರಲ್ಲೂ ವಿಷಯ ಯಾವುದೇ ಇರಲಿ, ಅದರ ಪರಮಾವಧಿ ಸಾಧ್ಯತೆಯನ್ನು ತಿಳಿದುಕೊಳ್ಳುವ ಒಂದು ಅದಮ್ಯ ಕುತೂಹಲವಿರುತ್ತದೆ.
ಮೇಲೆ ಹೇಳಿದ ಕಥೆಯಲ್ಲಿ ಎಡ್ ಗೀನ್ ಇರಬಹುದು ಅಥವಾ ಯಾವುದೇ ಅಪರಾಧಿ ಕಥೆಗಳಿರ ಬಹುದು. ಕೇಳಿದಾಕ್ಷಣ ಅವನೇಕೆ ಈ ರೀತಿಯ ಕೃತ್ಯ ಎಸಗಿದ? ಒಬ್ಬ ತೀರಾ ಸಾಮಾನ್ಯ ನಮ್ಮಂತೆ ಯೇ ಹೊರ ಸಮಾಜದಲ್ಲಿ ಕಾಣಿಸಿಕೊಂಡ ವ್ಯಕ್ತಿ ಆಂತರ್ಯದಲ್ಲಿರುವ ರಾಕ್ಷಸೀಯ ಗುಣಗಳನ್ನು ಅಡಗಿಸಿಟ್ಟಿದ್ದು ಹೇಗೆ? ಇದು ಅಪಾಯವನ್ನು ಗ್ರಹಿಸುವ, ಅರ್ಥೈಸುವ ಮನುಷ್ಯ ಸಹಜ ಗುಣ.
ನಾವು ಈ ಕಥೆ ನೋಡುವಾಗ ಕೊಲೆಗಾರನ ಉದ್ದೇಶ, ಮಾದರಿ, ರೀತಿ, ನಡವಳಿಕೆ, ಕೊಲೆಯಂಥ ಅಪರಾಧವನ್ನು ಪ್ರಚೋದಿಸಿದ್ದು ಏನು? ಇತ್ಯಾದಿ ತಿಳಿಯಬಯಸುತ್ತೇವೆ. ಹೀಗೆ ಮನುಷ್ಯ ನಡವಳಿಕೆಯ ಮಾನಸಿಕ ಪ್ರಯೋಗಾಲಯವನ್ನೇ ತೆರೆದು ಕೂತುಬಿಡುತ್ತೇವೆ. ವಿಪರೀತ ಸಂದರ್ಭ ಗಳಲ್ಲಿಯೂ ಕಾರಣ ಮತ್ತು ಪರಿಣಾಮಗಳನ್ನು ಅರ್ಥ ಮಾಡಿಕೊಳ್ಳಲು ಹಾತೊರೆಯುತ್ತೇವೆ.
ಆಪತ್ತು, ಗಂಡಾಂತರ ಗಳ ಸಂಕೇತವನ್ನು ಅರಿಯಬೇಕೆನ್ನುವ ನಮ್ಮ ಈ ಬಯಕೆ ಮನುಷ್ಯನ ಮೂಲ ಗುಣ. ಮೂಲ ಬಯಕೆಯಾದದ್ದರಿಂದಲೇ ಭಾವನೆಗಳ ಕಲಸುಮೇಲೋರಗವಾದರೂ ಅದು ಹಿಂಸೆಯೆನಿಸುವುದಿಲ್ಲ, ರಂಜನೀಯವೆನಿಸುತ್ತದೆ. ಅಸಲಿಗೆ ನಮ್ಮ ಮನಸ್ಸು ಅಂಥದ್ದೊಂದು ಸಂದರ್ಭಕ್ಕೆ ತಯಾರಾಗುವ ಭ್ರಮೆಯಲ್ಲಿರುತ್ತದೆ.
ವ್ಯಾಯಾಮ, ಅಪಾಯ, ಮಾನಸಿಕ ಒತ್ತಡ, ಸ್ಪರ್ಧೆ ಈ ಎಲ್ಲ ಸಂದರ್ಭಗಳಲ್ಲಿ ಮೂತ್ರಕೋಶದ ಮೇಲ್ಭಾಗದಲ್ಲಿರುವ ಮೂತ್ರಜನಕಾಂಗದ ಗ್ರಂಥಿಗಳು ‘ಅಡ್ರಿನಲಿನ್’ ಎಂಬ ರಾಸಾಯನಿಕ ಹಾರ್ಮೋನ್ ಅನ್ನು ಬಿಡುಗಡೆ ಮಾಡುತ್ತವೆ. ಇದು ದೇಹದ ಹೃದಯ, ಶ್ವಾಸಕೋಶ, ಸ್ನಾಯುಗಳು, ಪಿತ್ತಕೋಶ, ರಕ್ತನಾಳಗಳು, ನಂತರ ಮಿದುಳು ಹೀಗೆ ದೇಹದ ಭಾಗಗಳಿಗೆಲ್ಲ ರವಾನೆಯಾಗುತ್ತದೆ.
ಇದರಿಂದ ಹೃದಯ ಬಡಿತ ಹೆಚ್ಚುತ್ತದೆ, ಉಸಿರಾಟ ಜಾಸ್ತಿಯಾಗುತ್ತದೆ, ಸ್ನಾಯುಗಳು, ದೇಹ ಓಡಲು, ಪಲಾಯನಕ್ಕೆ ತಯಾರಾಗುತ್ತವೆ, ಮಿದುಳಿನ ಏಕಾಗ್ರತೆ (ಆ ಸಮಯಕ್ಕಷ್ಟೇ) ಹೆಚ್ಚಾಗುತ್ತದೆ. ಇದೆಲ್ಲವೂ ಭಯವಾದಾಗ, ಇಂಥ ಕಥೆಗಳನ್ನು ಓದಿದಾಗ, ಟಿವಿಯಲ್ಲಿ ಹೌದೇ ಹೌದು ಎಂಬಂತೆ ಚಿತ್ರಗೊಂಡು ಕಂಡಾಗ ಕೂಡ ಆಗುತ್ತದೆ. ಆ ಕಾರಣಕ್ಕೇ- ನಿತ್ಯವೂ ಜಿಮ್‌ಗೆ ಹೋಗುವವರಿಗೆ ಅಭ್ಯಾಸವಾದಂತೆ ಇಂಥ ಕಥೆಗಳನ್ನು ನೋಡುವುದು ಕೂಡ ಅಭ್ಯಾಸವಾಗುತ್ತದೆ.
ಇದೊಂದು ಮಾನಸಿಕ ಜಿಮ್- ಆದರೆ ಒಳ್ಳೆಯದಲ್ಲ! ಇಲ್ಲಿ ಭಯ ನೋಡುವ ಸಮಯದ್ದಷ್ಟೇ ಭಾವವಲ್ಲ. ಅದರಾಚೆಯ ನಮ್ಮ ಉಪಪ್ರeಯ ಜತೆಯಾಗುವ ಇನ್ನೊಂದು ಭಯವಿದೆ. ಅದು ‘ಸಾಮಾಜಿಕ ಅಸ್ತಿತ್ವದ’ ಭಯ. ನಮ್ಮ ಸಮಾಜದೆಡೆಗಿನ ನಂಬಿಕೆ, ನೈತಿಕತೆ ಮತ್ತು ಸಾಧ್ಯತೆಗಳನ್ನು ಪ್ರಶ್ನಿಸಿಕೊಳ್ಳುವುದು ಕೂಡ ಮನುಷ್ಯ ಸಹಜ ಗುಣದ ಅವಶ್ಯಕತೆ. ನಮ್ಮೊಳಗೆ ಸಾಮಾಜಿಕ ನ್ಯಾಯ ಮತ್ತು ನೀತಿಯ ಪ್ರಶ್ನೆ ಬಗ್ಗೆ ಪ್ರಶ್ನೆ ಹುಟ್ಟಿಸುತ್ತದೆ.
ಅದೆಷ್ಟೋ ಕೊಲೆ, ಅಪರಾಧಗಳು ನಡೆಯುತ್ತಿರುತ್ತವೆ. ಆದರೆ ಕೆಲವೇ ಕೆಲವು ಘಟನೆಗಳು ಮಾತ್ರ ಹೆಚ್ಚು ವೈರಲ್ ಆಗುತ್ತವೆ, ಹೆಚ್ಚಿನ ಗಮನ ಸೆಳೆಯುತ್ತವೆ, ವಿಷಯವಿಸ್ತಾರಗೊಳ್ಳುತ್ತದೆ. ಇವೆಲ್ಲ ವಿಷಯ ಹೀಗಿರುವಾಗ ಒಂದು ಘಟನೆಯನ್ನು- ‘ಸತ್ಯಕಥೆಯನ್ನು ಆಧರಿಸಿ’ ಎಂದು ಹೆಸರಿಟ್ಟು, ಸತ್ಯಕಥೆಯಿಂದ ಎರಡೇ ಸಾಲು ತೆಗೆದುಕೊಂಡು, ಬಾಕಿ ಎಲ್ಲ ಕಪೋಲಕಲ್ಪಿತ ಅತಿರಂಜನೆಯ ಅಪರಾಧವೆಂದು ತೋರಿಸಿದಲ್ಲಿ, ಅಪರಾಽ ರಕ್ತಸಿಕ್ತ ಕೊಲೆಮಾಡುವ ಸನ್ನಿವೇಶವನ್ನೆಲ್ಲ ಪರದೆಯ ಮೇಲೆ ಹುಟ್ಟಿಸಿದಾಗ ಅಡ್ರೆನಲಿನ್ ಜಾಸ್ತಿ ಸ್ರವಿಸುವುದಷ್ಟೇ ಅಲ್ಲವಲ್ಲ.
ಅದು ನಮ್ಮ ಮೇಲೆ ಬೀರುವ ಪರಿಣಾಮಗಳು? ಹುಟ್ಟಿಸುವ ಸಾಮಾಜಿಕ ಭಯ? ಈಗೀಗಂತೂ ಓಟಿಟಿ, ಸುದ್ಧಿ ವಾಹಿನಿಗಳು, ಯುಟ್ಯೂಬ್ ಚಾನಲ್‌ಗಳು, ಸಿನಿಮಾ ತಯಾರಕರು ಇವರಿಗೆಲ್ಲ ಈ ನಮ್ಮ ಕುತೂಹಲ, ಭಯ ಇವೇ ಸರಕು. ಅವರೆಲ್ಲ ಈ ಮೂಲ ಗುಣವನ್ನು Exploit - ದುರ್ಬಳಕೆ ಮಾಡಿಕೊಳ್ಳಲು ಇಳಿದಂತಿದೆ.
ನಮ್ಮ ಮನಸ್ಸಿಗೆ ಇದೆಲ್ಲ ತಾಲೀಮು, ಆದರೆ ಈ ತಾಲೀಮಿನ ಅವಶ್ಯಕತೆ ಎಲ್ಲರಿಗೂ ಇದೆಯೇ? ಅಥವಾ ಅಂಥ ಅಪಾಯಕ್ಕೊಳಗಾದಾಗ ನಮ್ಮ ಮಿದುಳಿನ ತಯಾರಿ ಪ್ರಯೋಜನಕ್ಕೆ ಬಂದೀತೆ? ಕೆಲವೊಂದು ನಿಜ ಅಪರಾಧಗಳನ್ನು ತಿಳಿದುಕೊಳ್ಳುವುದು ಕೂಡ ಒಂದು ಸಾಮಾಜಿಕ ಶಿಕ್ಷಣ. ನಿರ್ಭಯಾ ಮೊದಲಾದ ಅಪರಾಧಗಳನ್ನು ತಿಳಿದುಕೊಳ್ಳುವುದು ಮತ್ತು ಸಾಮಾಜಿಕ ಬದಲಾವಣೆ ಮಾಡಿಕೊಳ್ಳುವುದು, ಕಾನೂನು ರಚಿಸಿಕೊಳ್ಳುವುದು ಇವೆಲ್ಲವೂ ಅವಶ್ಯಕವೇ.
ಆದರೆ ಅತಿ ರಂಜನೆಯ, ಸತ್ಯಘಟನೆ ಆಧಾರಿತ ಸುಳ್ಳು ಕಥೆಗಳನ್ನು, ಕ್ರೈಂ ಸ್ಟೋರಿಗಳನ್ನೂ ನೋಡುವುದೇ ‘ಅಭ್ಯಾಸವಾದಾಗ’ ಶೋಷಿತರ ಪರ ಕನಿಕರ ಹೊಂದುತ್ತಿದ್ದೇವೆಯೇ ಅಥವಾ ಅಪರಾಧಿಗಳನ್ನು ಮೆಚ್ಚುತ್ತಿದ್ದೇವೆಯೇ? ಎಂಬ ಪ್ರಶ್ನೆಯನ್ನಂತೂ ಕೇಳಿಕೊಳ್ಳುತ್ತಿರಬೇಕಾಗುತ್ತದೆ.
ಎಡ್ವರ್ಡ್ ಗೀನ್ ಇರಬಹುದು ಅಥವಾ ಮುಂಬೈ ಸರಣಿ ಕೊಲೆ ಕಥೆಯಿರಬಹುದು, ಅವುಗಳಿಂದ ಕಲಿಯಬೇಕಾದ ಪಾಠ ಎಲ್ಲರಿಗೂ ಅವಶ್ಯವಿದೆಯೇ? ದುರಂತ ಕಥೆಗಳು ಎಚ್ಚರಿಕೆಗೆ, ಸಮಾಜದ ಗ್ರಹಿಕೆಗೆ ಅವಶ್ಯಕ. ಆದರೆ ಅತಿಶಯವಾಗಿಸಿದ ದುರಂತ ಕಥೆಗಳನ್ನು ನೋಡುವುದು ಅಭ್ಯಾಸ ವಾದಲ್ಲಿ ಅದು ಕೇವಲ ಮನೋರಂಜನೆಯಷ್ಟೇ ಆಗಿ ನಮ್ಮಲ್ಲಿ ಉಳಿಯುವುದಿಲ್ಲ.
ಬದಲಿಗೆ ಅದೆಷ್ಟೋ ಭಾವತಂತುಗಳನ್ನು ಅನವಶ್ಯ ಮೀಟುತ್ತದೆ. ಜಿಮ್, ಸ್ಪರ್ಧೆಗಳಲ್ಲಿ ಭಾಗ ವಹಿಸಿದಾಗ ಆಗುವ ಅನುಭವ ಕುಳಿತ ಪಡೆಯುವ ಅದೊಂದು ‘ಸಸ್ತಾ ನಶೆ’. ಮಾನಸಿಕ ಅವಶ್ಯಕತೆ ಯನ್ನು ದುರ್ಬಳಕೆ ಮಾಡಿ ಹಣ ಮಾಡುವ ಸೋಷಿಯಲ್ ಮೀಡಿಯಾ, ಓಟಿಟಿ, ಯುಟ್ಯೂಬ್, ಟಿವಿ ಮಾಧ್ಯಮಗಳ ಭರಾಟೆಯ ಆಧುನಿಕ ಬದುಕಿನಲ್ಲಿ ಯಾವುದೇ ಮಾನಸಿಕ ಚಟಗಳನ್ನು ಹತ್ತಿಸಿ ಕೊಳ್ಳದೆ ಬದುಕುವುದೇ ಸದ್ಯ ಮನುಷ್ಯ ಕುಲದೆದುರು ಇರುವ ಅತ್ಯಂತ ದೊಡ್ಡ ಸವಾಲು!!