ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Dr Sadhanashree Column: ಹಬ್ಬ ಮುಗಿದ ಮೇಲೆ ದೇಹಕ್ಕೆ ರಜೆ ಏಕೆ ?

ಮನೆಯ ಒಬ್ಬರಿಗೆ ಆರೋಗ್ಯ ಕೆಟ್ಟರೆ, ಮತ್ತೊಬ್ಬರಿಗೆ, ನಂತರ ಮತ್ತೊಬ್ಬರಿಗೆ, ಹೀಗೆ ಇಡೀ ಕುಟುಂಬವೇ ಹಬ್ಬದ ನಂತರ ವಿಶ್ರಾಂತಿಗೆ ಜಾರುವುದುಂಟು. ಹಾಗಾದರೆ ಹಬ್ಬದ ಸಂಭ್ರಮದ ಜೊತೆಗೆ ಆರೋಗ್ಯದ ತೊಂದರೆಯೂ ಒಂದು ಕೊಂಡರೆ ಇನ್ನೊಂದು ಉಚಿತ ಎಂಬ ಕೊಡುಗೆಯೇ? ಖಂಡಿತವಾಗಿಯೂ ಅಲ್ಲ. ನಮ್ಮ ಹಬ್ಬಗಳು ಆರೋಗ್ಯವನ್ನು ಹಾಳು ಮಾಡುವುದಕ್ಕಾಗಿ ಬಂದಿಲ್ಲ.

ಶ್ರಾವಣ ಮಾಸ ಆರಂಭವಾಯಿತೆಂದರೆ ನಮ್ಮ ಬದುಕಿಗೆ ಒಂದು ಹೊಸ ಬಣ್ಣವೇ ಬರುತ್ತದೆ. ಒಂದರ ಹಿಂದೆ ಒಂದರಂತೆ ಬರುವ ಹಬ್ಬಗಳು, ಪೂಜೆ ಪುನಸ್ಕಾರಗಳು, ಬಂಧು ಬಳಗದ ಭೇಟಿ, ಹೊಸ ಬಟ್ಟೆ ಗಳು, ಮನೆಗಳ ಅಲಂಕಾರ, ಹೂವಿನ ಪರಿಮಳ, ಮಾವಿನ ತೋರಣ, ದೀಪಗಳ ಬೆಳಕು, ಮಂಟಪದ ಸೊಬಗು, ಇವೆಲ್ಲವೂ ನಮ್ಮ ಮನೆಗಳನ್ನು ಮಾತ್ರವಲ್ಲ, ಮನಸ್ಸುಗಳನ್ನೂ ಬೆಳಗಿಸುತ್ತವೆ.

ಹಬ್ಬವೆಂದರೆ ಕೇವಲ ಒಂದು ದಿನದ ಆಚರಣೆಯಲ್ಲ. ಅದು ಕುಟುಂಬ ಒಟ್ಟಾಗಿ ಸೇರುವ ಅವಕಾಶ. ಹಿರಿಯರ ಆಶೀರ್ವಾದ ಪಡೆಯುವ ಸಂದರ್ಭ. ಮಕ್ಕಳ ಸಂಭ್ರಮವನ್ನು ಕಣ್ತುಂಬಿಕೊಳ್ಳುವ ಕ್ಷಣ. ದೇವರ ಸ್ಮರಣೆಯೊಂದಿಗೆ ನಮ್ಮ ಬದುಕಿನಲ್ಲಿರುವ ದೈವೀಕತೆಯನ್ನು ಮತ್ತೊಮ್ಮೆ ಅನುಭವಿಸುವ ಸುಂದರ ಅವಕಾಶ. ಇನ್ನು ಹಬ್ಬದ ಊಟದ ವಿಚಾರವೇ ಬೇರೆ!

ಪ್ರತಿ ಹಬ್ಬಕ್ಕೂ ತನ್ನದೇ ಆದ ವಿಶೇಷ ಅಡುಗೆ. ಪಾಯಸ, ಹೋಳಿಗೆ, ಕಜ್ಜಾಯ, ವಿವಿಧ ಸಿಹಿ ಖಾರದ ತಿಂಡಿಗಳು. ಹಬ್ಬದ ಅಡುಗೆ ಮನೆಯ ಪರಿಮಳವೇ ಮನಸ್ಸನ್ನು ಹಬ್ಬದ ವಾತಾವರಣಕ್ಕೆ ಕರೆದೊಯ್ಯುತ್ತದೆ. ಸ್ನೇಹಿತರ ಮನೆಗೆ ಹೋಗಿ ಅವರೊಂದಿಗೆ ಊಟ ಮಾಡುವುದು, ನಮ್ಮ ಮನೆಯ ತಿನಿಸುಗಳನ್ನು ಅವರೊಂದಿಗೆ ಹಂಚಿ ಕೊಳ್ಳುವುದು, ಇವೆಲ್ಲವೂ ಹಬ್ಬದ ಸೌಂದರ್ಯದ ಭಾಗ. ಆದರೆ ಒಂದು ಪ್ರಶ್ನೆ ಮಾತ್ರ ಕಾಡುತ್ತದೆ. ಹಬ್ಬದ ದಿನ ಇಷ್ಟೊಂದು ಸಂತೋಷದಿಂದ ತುಂಬಿರುವ ಮನೆ, ಹಬ್ಬ ಮುಗಿದ ಮರುದಿನವೇ ಏಕೆ ಔಷಧಿಗಳ ಮನೆಯಾಗಿ ಬಿಡುತ್ತದೆ? ಜ್ವರ, ಮೈ ಕೈ ನೋವು, ಅಜೀರ್ಣ, ವಾಂತಿ, ಭೇದಿ, ನೆಗಡಿ, ತಲೆನೋವು, ಅಸಿಡಿಟಿ, ಎದೆ ಉರಿ, ಹೀಗೆ ಒಂದಲ್ಲ ಒಂದು ಆರೋಗ್ಯದ ತೊಂದರೆ ಕಾಣಿಸಿಕೊಳ್ಳು ವುದು ಸಾಮಾನ್ಯವಾಗಿದೆ.

ಮನೆಯ ಒಬ್ಬರಿಗೆ ಆರೋಗ್ಯ ಕೆಟ್ಟರೆ, ಮತ್ತೊಬ್ಬರಿಗೆ, ನಂತರ ಮತ್ತೊಬ್ಬರಿಗೆ, ಹೀಗೆ ಇಡೀ ಕುಟುಂಬ ವೇ ಹಬ್ಬದ ನಂತರ ವಿಶ್ರಾಂತಿಗೆ ಜಾರುವುದುಂಟು. ಹಾಗಾದರೆ ಹಬ್ಬದ ಸಂಭ್ರಮದ ಜೊತೆಗೆ ಆರೋಗ್ಯದ ತೊಂದರೆಯೂ ಒಂದು ಕೊಂಡರೆ ಇನ್ನೊಂದು ಉಚಿತ ಎಂಬ ಕೊಡುಗೆಯೇ? ಖಂಡಿತ ವಾಗಿಯೂ ಅಲ್ಲ. ನಮ್ಮ ಹಬ್ಬಗಳು ಆರೋಗ್ಯವನ್ನು ಹಾಳು ಮಾಡುವುದಕ್ಕಾಗಿ ಬಂದಿಲ್ಲ.

ಇದನ್ನೂ ಓದಿ:Dr Sadhanashree Column: ಸ್ವಾಸ್ಥ್ಯವನ್ನು ಅಳೆಯುವ ಆಯುರ್ವೇದದ ಮಾನದಂಡಗಳು

ಬದಲಿಗೆ, ಆಹಾರ, ವಿಹಾರ ಮತ್ತು ವಿಚಾರಗಳನ್ನು ಶೋಧಿಸಿಕೊಂಡು ದೇಹ ಮನಸ್ಸನ್ನು ಮತ್ತಷ್ಟು ಸಾತ್ತ್ವಿಕಗೊಳಿಸುವ ಅವಕಾಶಗಳಾಗಿವೆ. ಹಾಗಾದರೆ ಹಬ್ಬದ ದಿನ ಏನು ಗಮನಿಸಬೇಕು? ದಿನಚರಿ ಬದಲಾಗಬಾರದು: ಆಯುರ್ವೇದವು ಆರೋಗ್ಯ ರಕ್ಷಣೆಗೆ ದಿನಚರಿಗೆ ಬಹಳ ಮಹತ್ವ ನೀಡು ತ್ತದೆ. ಹಬ್ಬದ ದಿನವೆಂದರೆ ನಮ್ಮ ದೇಹದ ಜೈವಿಕ ಗಡಿಯಾರಕ್ಕೆ ರಜೆ ಕೊಡುವ ದಿನವಲ್ಲ. ಸಾಧ್ಯ ವಾದಷ್ಟು ಬ್ರಾಹ್ಮೀ ಮುಹೂರ್ತದಲ್ಲಿ ಎದ್ದೇಳುವುದು ಉತ್ತಮ. ಸಾಮಾನ್ಯವಾಗಿ ಸೂರ್ಯೋ ದಯಕ್ಕೆ ಸುಮಾರು ಒಂದೂವರೆ ಗಂಟೆ ಮುಂಚಿನ ಸಮಯವನ್ನು ಬ್ರಾಹ್ಮೀ ಮುಹೂರ್ತವೆಂದು ಪರಿಗಣಿಸಲಾಗುತ್ತದೆ.

ಹಬ್ಬದ ದಿನ ಈ ಸಮಯದಲ್ಲಿ ಎದ್ದು ಧ್ಯಾನ, ಜಪ, ಪ್ರಾರ್ಥನೆ ಅಥವಾ ಮೌನ ಚಿಂತನೆಯಲ್ಲಿ ತೊಡಗಿ ಕೊಳ್ಳುವುದು ವಿಶೇಷವಾಗಿ ಶ್ರೇಷ್ಠ. ಬೆಳಗಿನ ಪ್ರಶಾಂತ ವಾತಾವರಣದಲ್ಲಿ ಮನಸ್ಸನ್ನು ಒಳಮುಖವಾಗಿಸಿ ಕೊಳ್ಳುವುದು ಸುಲಭ. ದೇಹ, ಇಂದ್ರಿಯ, ಮನಸ್ಸುಗಳನ್ನು ದೈವಚಿಂತನೆ ಯೊಂದಿಗೆ ಜೋಡಿಸಿಕೊಳ್ಳಲು ಇದು ಅತ್ಯುತ್ತಮ ಸಮಯ. ಇದಕ್ಕಾಗಿ ಹಿಂದಿನ ದಿನವೇ ನಮ್ಮ ಕೆಲಸಗಳನ್ನು ಬೇಗ ಮುಗಿಸಿ, ರಾತ್ರಿ ಸಮಯಕ್ಕೆ ಸರಿಯಾಗಿ ಮಲಗಬೇಕು. ಹಬ್ಬದ ಮುನ್ನರಾತ್ರಿ ನಿದ್ದೆಗೆಟ್ಟು, ಹಬ್ಬದ ದಿನ ಭಾರೀ ಊಟ ಮಾಡಿ, ಮಧ್ಯಾಹ್ನ ಗಂಟೆಗಟ್ಟಲೆ ಮಲಗುವುದು, ಇದು ಸಂಭ್ರಮವಲ್ಲ; ದೇಹದ ಮೇಲೆ ಮಾಡುವ ಹೆಚ್ಚುವರಿ ಹೊರೆ.

ಆಯುರ್ವೇದದಲ್ಲಿ ಹಗಲು ನಿದ್ದೆಯನ್ನು ಸಾಮಾನ್ಯವಾಗಿ ವರ್ಜಿಸಬೇಕೆಂದು ಹೇಳಲಾಗಿದೆ. ವಿಶೇಷವಾಗಿ ಅತಿಯಾದ ಹಗಲು ನಿದ್ದೆಯು ಕಫದೋಷವನ್ನು ಹೆಚ್ಚಿಸಿ, ಜೀರ್ಣಶಕ್ತಿಯನ್ನು ಕುಂದಿಸಿ ಹಲವು ತೊಂದರೆಗಳಿಗೆ ಕಾರಣವಾಗಬಹುದು. ಉಬ್ಬಸ, ಕೆಮ್ಮು, ತಲೆಭಾರ, ಪದೇಪದೇ ನೆಗಡಿ, ಆಹಾರದಲ್ಲಿ ರುಚಿ ಕಡಿಮೆಯಾಗುವುದು, ಜೀರ್ಣಶಕ್ತಿ ಕುಂದುವುದು, ಸ್ಥೌಲ್ಯ, ಮಧುಮೇಹ, ಹುಳಿತೇಗು, ಎದೆ ಉರಿ, ಪಿತ್ತ ವಾಂತಿ ಮುಂತಾದ ಸಮಸ್ಯೆಗಳೊಂದಿಗೆ ಸಂಬಂಧಿಸಬಹುದು. ಹೀಗಾಗಿ ಹಬ್ಬದ ದಿನವೂ ರಾತ್ರಿಯ ನಿzಗೆ ಆದ್ಯತೆ, ಹಗಲಿನ ನಿದ್ದೆಗೆ ಮಿತಿ, ಇದು ಸ್ವಾಸ್ಥ್ಯ ರಕ್ಷಣೆಯ ಸರಳ ನಿಯಮ.

Screenshot_2 ok

ಒಂದು ಅಭ್ಯಂಗ ಉಡುಗೊರೆ: ಹಬ್ಬದ ದಿನ ಮಾಡಬಹುದಾದ ಮತ್ತೊಂದು ಅತ್ಯುತ್ತಮ ಆಚರಣೆ ಅಭ್ಯಂಗ. ಸ್ನಾನಕ್ಕೂ ಮುನ್ನ, ಸಾಧ್ಯವಾದರೆ ಖಾಲಿ ಹೊಟ್ಟೆಯಲ್ಲಿ, ದೇಹಕ್ಕೆ ಬೆಚ್ಚಗಿನ ಎಣ್ಣೆಯನ್ನು ಹಚ್ಚಿ ಕೊಳ್ಳುವುದು ದೈನಂದಿನ ಆರೋಗ್ಯಪಾಲನೆಯ ಸುಂದರ ವಿಧಾನ. ಎಳ್ಳೆಣ್ಣೆ ಅಥವಾ ಸೂಕ್ತವಾದ ಸ್ನೇಹ ದ್ರವ್ಯವನ್ನು ಬಳಸಬಹುದು. ಮೊದಲು ತಲೆಗೆ ಎಣ್ಣೆ ಹಚ್ಚಿಕೊಳ್ಳ ಬಹುದು. ನಂತರ ಕಿವಿಗಳಿಗೆ ಎಣ್ಣೆಯ ಹನಿಗಳನ್ನು ಹಾಕಿ, ಮುಖಕ್ಕೆ ನಿಧಾನವಾಗಿ ಸವರಿಕೊಳ್ಳ ಬಹುದು.

ಮೂಗಿನ ಹೊಳ್ಳೆಗಳ ಒಳಭಾಗಕ್ಕೆ ಅತಿ ಸ್ವಲ್ಪ ಎಣ್ಣೆ ಹಚ್ಚುವ ಪದ್ಧತಿಯೂ ಇದೆ. ನಂತರ ಕತ್ತು, ಕೈ, ಎದೆ, ಹೊಟ್ಟೆ, ಬೆನ್ನು, ಪೃಷ್ಠ, ಕಾಲು ಮತ್ತು ಪಾದಗಳಿಗೆ ಎಣ್ಣೆಯನ್ನು ಅನುಲೋಮವಾಗಿ, ದೇಹದ ಸ್ವಾಭಾವಿಕ ರೋಮದ ದಿಕ್ಕಿಗೆ ಅನುಗುಣವಾಗಿ ಹಚ್ಚಬೇಕು. ಮುಖ, ಹೊಟ್ಟೆ ಮತ್ತು ಸಂಧಿ ಪ್ರದೇಶಗಳಲ್ಲಿ ಮೃದುವಾಗಿ ವರ್ತುಲಾಕಾರದಲ್ಲಿ ಹಚ್ಚಬಹುದು. ಇದಕ್ಕೆ ಗಂಟೆಗಟ್ಟಲೆ ಸಮಯ ಬೇಕಾಗಿಲ್ಲ.

ಸುಮಾರು ಐದು ನಿಮಿಷ ಎಣ್ಣೆ ಹಚ್ಚುವುದು, ಮತ್ತೊಂದು ಐದು ನಿಮಿಷ ಅದನ್ನು ದೇಹದ ಮೇಲೆ ಇರಲು ಬಿಡುವುದು, ಒಟ್ಟು ಹತ್ತು ನಿಮಿಷಗಳ ಸರಳ ಅಭ್ಯಾಸವೇ ಸಾಕಾಗ ಬಹುದು. ನಂತರ ಬೆಚ್ಚಗಿನ ನೀರಿನಲ್ಲಿ ಸ್ನಾನ. ಹಬ್ಬದ ದಿನದ ಓಡಾಟ, ಪೂಜೆ, ಅತಿಥಿ ಸತ್ಕಾರ ಮತ್ತು ಇತರ ಚಟುವಟಿಕೆಗಳ ನಡುವೆ ದೇಹಕ್ಕೆ ನೀಡಬಹುದಾದ ಈ ಸಣ್ಣ ವಿಶ್ರಾಂತಿ ದಿನವಿಡೀ ಹಗುರತನ ಮತ್ತು ಆರಾಮ ವನ್ನು ನೀಡುತ್ತದೆ.

ಸಮಯಕ್ಕೆ ಊಟವಿರಲಿ: ಹಬ್ಬದ ದಿನ ನಮ್ಮ ಆಹಾರದ ಕ್ರಮವೇ ಹೆಚ್ಚು ಬದಲಾಗುತ್ತದೆ. ಬೆಳಗಿನ ತಿಂಡಿ, ಮಧ್ಯಾಹ್ನದ ಊಟ, ರಾತ್ರಿಯ ಊಟ, ನಮ್ಮ ಸಾಮಾನ್ಯ ಆಹಾರ ಕಾಲವನ್ನು ಸಾಧ್ಯ ವಾದಷ್ಟು ಕಾಪಾಡಿ ಕೊಳ್ಳುವುದು ಒಳಿತು. ಹಬ್ಬದ ದಿನ ಸಮಸ್ಯೆ ಸೃಷ್ಟಿಸುವುದು ಒಂದೇ ಒಂದು ದೊಡ್ಡ ಊಟವಲ್ಲ. ಊಟದ ನಡುವೆ ನಿರಂತರವಾಗಿ ಏನಾದರೂ ತಿನ್ನುತ್ತಲೇ ಇರುವುದು ಹೆಚ್ಚು ತೊಂದರೆ ಉಂಟುಮಾಡಬಹುದು.

ಪ್ರಸಾದ ಎಂದು ಸ್ವಲ್ಪ. ಇದನ್ನೂ ರುಚಿ ನೋಡಿ ಎಂದು ಮತ್ತೊಂದು ಸ್ವಲ್ಪ. ಇದು ವಿಶೇಷವಾಗಿ ನಿಮಗಾಗಿ ಮಾಡಿದ್ದೇವೆ ಎಂದು ಇನ್ನೊಂದು ತುಂಡು. ಹೀಗೆ ಹೊಟ್ಟೆಗೆ ಹಸಿವಿನ ಅವಕಾಶವೇ ಕೊಡದೆ ಆಗಾಗ್ಗೆ ತಿನ್ನುತ್ತಾ ಹೋದರೆ ಜಠರಾಗ್ನಿಯ ಮೇಲೆ ಹೆಚ್ಚುವರಿ ಹೊರೆ ಬೀಳುತ್ತದೆ. ಪರಿಣಾಮವಾಗಿ ಅಜೀರ್ಣ, ವಾಂತಿ, ಭೇದಿ, ಜ್ವರ, ತಲೆನೋವು, ಅಸಿಡಿಟಿ ಮುಂತಾದ ತೊಂದರೆಗಳು ಕಾಣಿಸಿಕೊಳ್ಳಬಹುದು. ಹಬ್ಬಕ್ಕಾಗಿ ತಯಾರಿಸಿದ ಎಲ್ಲ ಖಾದ್ಯಗಳನ್ನು ನಿರಾಕರಿಸಬೇಕೆಂದಲ್ಲ.

ಹಬ್ಬದ ಆಹಾರವನ್ನು ಆನಂದಿಸಿ; ಆದರೆ ನಿಗದಿತ ಆಹಾರ ಕಾಲದಲ್ಲಿ, ಹಸಿವಿಗೆ ತಕ್ಕ ಪ್ರಮಾಣ ದಲ್ಲಿ ಸೇವಿಸಿ. ಸಿಹಿ ಮತ್ತು ಕರಿದ ಪದಾರ್ಥಗಳು ಹೆಚ್ಚಿರುವ ಸಂದರ್ಭದಲ್ಲಿ ಜೀರ್ಣಕ್ರಿಯೆಗೆ ಸಹಾಯ ಮಾಡುವ ಕೆಲವು ಸರಳ ಪಾನೀಯಗಳನ್ನು ಬಳಸಬಹುದು. ಹಸಿ ಶುಂಠಿ, ಜೀರಿಗೆ, ಸೋಂಪು, ಏಲಕ್ಕಿ, ಲವಂಗ, ಧನಿಯ ಮುಂತಾದವುಗಳಲ್ಲಿ ಯಾವುದಾದರೂ ಒಂದನ್ನು ಸ್ವಲ್ಪ ಪ್ರಮಾಣದಲ್ಲಿ ನೀರಿನೊಂದಿಗೆ ಕುದಿಸಿ ಬೆಚ್ಚಗೆ ಸೇವಿಸುವುದು ಉಪಯುಕ್ತವಾಗಬಹುದು. ಆಹಾರದ ರುಚಿಯನ್ನು ಅನುಭವಿಸುವುದಕ್ಕೂ, ಜೀರ್ಣಕ್ರಿಯೆ ಯನ್ನು ಗೌರವಿಸುವುದಕ್ಕೂ ನಡುವೆ ಸಮತೋಲನ ಇರಬೇಕು.

ಉಪವಾಸ ಎಂದರೆ ಹೊಟ್ಟೆಗೆ ಶಿಕ್ಷೆಯಲ್ಲ: ನಮ್ಮ ಅನೇಕ ಹಬ್ಬಗಳೊಂದಿಗೆ ಉಪವಾಸವೂ ಅವಿಭಾಜ್ಯ ವಾಗಿ ಬೆಸೆದುಕೊಂಡಿದೆ. ಆದರೆ ಉಪವಾಸದ ಅರ್ಥವನ್ನು ನಾವು ಸರಿಯಾಗಿ ಅರ್ಥ ಮಾಡಿಕೊಂಡಿದ್ದೇವೆಯೇ? ಹಸಿವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ, ನೀರನ್ನೂ ಕುಡಿಯದೆ ಇರುವುದು, ಅಥವಾ ದಿನವಿಡೀ ಏನೂ ತಿನ್ನದೆ, ನಂತರ ಒಂದೇ ಬಾರಿಗೆ ಜೀರ್ಣಕ್ಕೆ ಜಡವಾದ ಆಹಾರವನ್ನು ಸೇವಿಸುವುದು, ಇದನ್ನೇ ಉಪವಾಸ ವೆಂದು ಭಾವಿಸುವುದು ಸರಿಯಲ್ಲ.

ಆಯುರ್ವೇದದ ದೃಷ್ಟಿಯಲ್ಲಿ ಆಹಾರ ಸೇವನೆಯೇ ಒಂದು ರೀತಿಯ ಯಜ್ಞ. ನಮ್ಮೊಳಗಿನ ಜಠರಾಗ್ನಿಗೆ ಆಹಾರವೆಂಬ ಆಹುತಿಯನ್ನು ಸಮರ್ಪಿಸುವ ಕ್ರಿಯೆ ಯಾಗಿ ಅದನ್ನು ನೋಡಬಹುದು. ಹೀಗಾಗಿ ಹಸಿವು ಮತ್ತು ಬಾಯಾರಿಕೆಯಂತಹ ಸಹಜ ಶಾರೀರಿಕ ವೇಗಗಳನ್ನು ನಿರಂತರವಾಗಿ ತಡೆದು, ನಂತರ ಜೀರ್ಣಿಸಲು ಕಷ್ಟವಾಗುವಷ್ಟು ಆಹಾರ ವನ್ನು ಒಂದೇ ಬಾರಿಗೆ ಸೇವಿಸುವುದು ದೇಹಕ್ಕೆ ಅನುಕೂಲಕರವಲ್ಲ. ಉಪವಾಸ ಎಂಬ ಪದವನ್ನು ನೋಡಿದಾಗ ಅದರ ಒಳಾರ್ಥ ಇನ್ನೂ ಸುಂದರವಾಗಿ ತೆರೆದುಕೊಳ್ಳುತ್ತದೆ.

‘ಉಪ’ ಎಂದರೆ ಸಮೀಪ; ‘ವಾಸ’ ಎಂದರೆ ಇರುವುದು. ಅಂದರೆ ಉಪವಾಸವೆಂದರೆ ಕೇವಲ ಆಹಾರ ದಿಂದ ದೂರವಿರುವುದಲ್ಲ; ಪರಮಾತ್ಮನ ಸಮೀಪದಲ್ಲಿ ಇರುವ ಪ್ರಯತ್ನ. ಕಾಮ, ಕ್ರೋಧ, ಲೋಭ, ಮದ, ಮಾತ್ಸರ್ಯಗಳಿಂದ ದೂರವಿದ್ದು, ಕಾಯ, ವಾಚ, ಮನಸ್ಸುಗಳನ್ನು ಸಾತ್ತ್ವಿಕವಾಗಿ ಇಟ್ಟು ಕೊಂಡು, ದೈವಚಿಂತನೆ ಮತ್ತು ಆತ್ಮಾವಲೋಕನದಲ್ಲಿ ತೊಡಗುವುದು ಉಪವಾಸದ ಆಂತರಿಕ ಉದ್ದೇಶ. ಆ ಸೂಕ್ಷ್ಮ ಅನುಭವಕ್ಕೆ ಅತಿಯಾದ ಆಹಾರಸೇವನೆ ಅಡ್ಡಿಯಾಗದಿರಲಿ ಎಂಬುದು ಉಪವಾಸದ ಒಂದು ಉದ್ದೇಶ ವಾಗಬಹುದು; ಆದರೆ ಉಪವಾಸವೆಂದರೆ ದೇಹವನ್ನು ಶೋಷಿಸುವು ದಲ್ಲ. ಹಸಿವು ಕಂಡಾಗ ಅದನ್ನು ಗೌರವಿಸಬೇಕು.

ಆಹಾರ ಕಾಲದಲ್ಲಿ ಲಘು, ಸಾತ್ತ್ವಿಕ ಮತ್ತು ಸುಲಭವಾಗಿ ಜೀರ್ಣ ವಾಗುವ ಆಹಾರವನ್ನು ಅಗತ್ಯಕ್ಕೆ ತಕ್ಕಂತೆ ಸೇವಿಸಿ, ಉಳಿದ ಸಮಯದಲ್ಲಿ ಮನಸ್ಸನ್ನು ಪ್ರಾರ್ಥನೆ, ಜಪ, ಧ್ಯಾನ ಮತ್ತು ಸತ್ಚಿಂತನೆ ಗಳಲ್ಲಿ ತೊಡಗಿಸಿಕೊಳ್ಳುವುದು, ಇದು ಉಪವಾಸದ ಹೆಚ್ಚು ಅರ್ಥಪೂರ್ಣ ಆಯಾಮ.

ಹಬ್ಬದ ನಿಜವಾದ ಪ್ರಸಾದವೇನು?: ನಮ್ಮ ಪೂರ್ವಜರು ರೂಪಿಸಿದ ಆಚರಣೆಗಳಲ್ಲಿ ಕೇವಲ ಸಂಪ್ರದಾಯವಿರಲಿಲ್ಲ; ಅದರ ಹಿಂದೆ ಜೀವನ ಶಾಸ್ತ್ರವೂ ಇತ್ತು. ಹಬ್ಬದ ದಿನ ದೇಹವನ್ನು ಮಿತಿಮೀರಿಸಿ ದುಡಿಸುವುದೂ ಬೇಡ. ಮಿತಿಮೀರಿಸಿ ತಿನ್ನುವುದೂ ಬೇಡ. ನಿದ್ದೆಯನ್ನು ಕಡೆಗಣಿ ಸುವುದೂ ಬೇಡ. ಹಸಿವನ್ನು ನಿರ್ಲಕ್ಷಿಸುವುದೂ ಬೇಡ. ಆಹಾರದಲ್ಲಿ ಮಿತಿ, ನಿದ್ದೆಯಲ್ಲಿ ಶಿಸ್ತು, ಆಚರಣೆಯಲ್ಲಿ ಸಾತ್ತ್ವಿಕತೆ, ಮನಸ್ಸಿನಲ್ಲಿ ದೈವಚಿಂತನೆ, ಇದೇ ಹಬ್ಬದ ಆರೋಗ್ಯಕರ ಆಚರಣೆ.

ಹಬ್ಬ ಮುಗಿದ ಮರುದಿನವೂ ನಾವು ಅದೇ ಚೈತನ್ಯದಿಂದ ನಮ್ಮ ದೈನಂದಿನ ಬದುಕಿಗೆ ಮರಳಲು ಸಾಧ್ಯವಾಗಬೇಕು. ಹಬ್ಬದ ಸಂಭ್ರಮದ ನೆನಪುಗಳು ಉಳಿಯಲಿ; ಆದರೆ ಅದರ ಬೆನ್ನಿಗೆ ಜ್ವರ, ಅಜೀರ್ಣ, ಮೈಕೈ ನೋವು ಮತ್ತು ಅಸಿಡಿಟಿಯ ನೆನಪುಗಳು ಬರಬಾರದು. ನಮ್ಮ ಹಬ್ಬಗಳು ದೇಹವನ್ನು ದಂಡಿಸುವ ದಿನಗಳಾಗದೆ, ದೇಹ ಮತ್ತು ಮನಸ್ಸುಗಳನ್ನು ಮತ್ತಷ್ಟು ಶುದ್ಧಗೊಳಿಸುವ ದಿನಗಳಾಗಲಿ. ನಲ್ಮೆಯ ನಂತರ ನರಳಾಟ ಅನಿವಾರ್ಯವಲ್ಲ. ಸಂಭ್ರಮದ ಜೊತೆ ಸ್ವಾಸ್ಥ್ಯವೂ ಇರಬಹುದು.

ಹಬ್ಬದ ನಿಜವಾದ ಸಾರ್ಥಕತೆ, ಹಬ್ಬ ಮುಗಿದ ಮೇಲೂ ನಮ್ಮ ಆರೋಗ್ಯ ಮತ್ತು ಆನಂದ ಹಾಗೆಯೇ ಉಳಿದಿರುವುದ ರಲ್ಲಿ. ನಾವು ಆಚರಿಸುವ ಪ್ರತಿಯೊಂದು ಹಬ್ಬವೂ ನಮ್ಮ ಆರೋಗ್ಯ, ಆಯುಷ್ಯ, ಸಂಪತ್ತು, ಸಂತೋಷ ಮತ್ತು ಸನ್ಮಂಗಳವನ್ನು ವೃದ್ಧಿಸಲಿ ಎಂಬುದೇ ಆಯುರ್ವೇದದ ಆಶಯ. ಲೋಕಾಃ ಸಮಸ್ತಾಃ ಸುಖಿನೋ ಭವಂತು.

ಡಾ. ಸಾಧನಾಶ್ರೀ ಪಿ,

View all posts by this author