Dr Sadhanashree Column: ಸ್ವಾಸ್ಥ್ಯವನ್ನು ಅಳೆಯುವ ಆಯುರ್ವೇದದ ಮಾನದಂಡಗಳು
ರೋಗವು ಒಂದೇ ದಿನದಲ್ಲಿ ದೊಡ್ಡದಾಗುವುದಿಲ್ಲ. ಒಂದು ದೊಡ್ಡ ಮರ ಒಂದು ಸಣ್ಣ ಬೀಜದಿಂದ ಮೊಳಕೆ, ಸಸಿ, ಗಿಡ, ಮರ ಎಂಬ ಹಂತಗಳನ್ನು ದಾಟಿ ಹೆಮ್ಮರವಾಗುತ್ತದೆ. ರೋಗವೂ ಹಾಗೆಯೇ. ಅದು ಸಾಮಾನ್ಯವಾಗಿ ಒಂದು ದಿನದಲ್ಲಿ ಪೂರ್ಣ ಪ್ರಮಾಣದಲ್ಲಿ ವ್ಯಕ್ತವಾಗುವುದಿಲ್ಲ. ದೇಹದ ಸಹಜ ಸಮತೋಲನದಲ್ಲಿ ಸಣ್ಣ ಬದಲಾವಣೆಗಳು ಆರಂಭವಾಗುತ್ತವೆ.
-
ಸ್ವಾಸ್ಥ್ಯವೆಂಬ ಸ್ವಾತಂತ್ರ್ಯ
ಇಂದು ಆರೋಗ್ಯವೂ ಒಂದು ರೀತಿಯ ‘ಶಾಪಿಂಗ್’ ಆಗಿ ಬಿಟ್ಟಿದೆ! ಒಂದು ತೊಂದರೆ ಕಾಣಿಸಿ ಕೊಂಡರೆ ಒಂದು ವೈದ್ಯಕೀಯ ಪದ್ಧತಿಯ ಮೊರೆ ಹೋಗುವುದು. ಅಲ್ಲಿ ಪರಿಹಾರ ಸಿಗದಿದ್ದರೆ ಮತ್ತೊಂದು ಪದ್ಧತಿ. ಅಲ್ಲಿಯೂ ಪೂರ್ಣ ಸಮಾಧಾನವಿಲ್ಲದಿದ್ದರೆ ಇನ್ನೊಂದು ಚಿಕಿತ್ಸೆ. ಹೀಗೆ ಒಂದರ ನಂತರ ಮತ್ತೊಂದು ವೈದ್ಯಕೀಯ ಪದ್ಧತಿಯನ್ನು ಪ್ರಯತ್ನಿಸುತ್ತಾ, ಕೊನೆಗೆ ಇನ್ನು ಆಯುರ್ವೇದವನ್ನು ಒಮ್ಮೆ ನೋಡೋಣ ಎಂದು ಬರುವವರ ಸಂಖ್ಯೆ ಕಡಿಮೆಯೇನಿಲ್ಲ. ಇದನ್ನು ನಾನು ತಮಾಷೆಯಾಗಿ ‘ಹೆಲ್ತ್ ಶಾಪಿಂಗ್’ ಎಂದು ಕರೆಯುತ್ತೇನೆ. ಆದರೆ ಆರೋಗ್ಯ ಎನ್ನುವುದು ಅಂಗಡಿಯಲ್ಲಿ ಆಯ್ಕೆ ಮಾಡಿಕೊಂಡು ಖರೀದಿಸುವ ವಸ್ತುವಲ್ಲ.
ಒಂದು ರೋಗವನ್ನು ಒತ್ತಿ ಹಾಕುವುದು ಆರೋಗ್ಯವಲ್ಲ. ಒಂದು ಲಕ್ಷಣ ಕಡಿಮೆಯಾಯಿತು ಎಂದರೆ ದೇಹ ಸಂಪೂರ್ಣವಾಗಿ ಸ್ವಸ್ಥವಾಗಿದೆ ಎಂದೂ ಅಲ್ಲ. ಇಲ್ಲಿ ಆಯುರ್ವೇದ ನಮಗೆ ಒಂದು ಅತ್ಯಂತ ಸೂಕ್ಷ್ಮವಾದ ವ್ಯತ್ಯಾಸವನ್ನು ತಿಳಿಸುತ್ತದೆ. ಆರೋಗ್ಯ ಮತ್ತು ಸ್ವಾಸ್ಥ್ಯ ಒಂದೇ ಅಲ್ಲ. ಆರೋಗ್ಯವೆಂದರೆ ಸಾಮಾನ್ಯವಾಗಿ ರೋಗರಹಿತ ಸ್ಥಿತಿ. ಆದರೆ ಸ್ವಾಸ್ಥ್ಯವೆಂದರೆ ದೇಹ, ಇಂದ್ರಿಯ, ಮನಸ್ಸು ಮತ್ತು ಆತ್ಮದ ಸಮತೋಲನ ದಿಂದ ವ್ಯಕ್ತವಾಗುವ ಸಂಪೂರ್ಣ ನೆಮ್ಮದಿಯ ಸ್ಥಿತಿ.
ಒಂದು ರೋಗದ ಹಿಂದೆ ಮತ್ತೊಂದು ಇತ್ತೀಚೆಗೆ ನನ್ನ ಕ್ಲಿನಿಕ್‌ಗೆ ಬಂದಿದ್ದ ಒಬ್ಬ ರೋಗಿಯ ಬಳಿ ದೊಡ್ಡ ದೊಂದು ಫೈಲ್ ಇತ್ತು. ಅದನ್ನು ನೋಡಿದ ತಕ್ಷಣವೇ ಹಲವು ಆಸ್ಪತ್ರೆ ಮತ್ತು ಚಿಕಿತ್ಸಾ ಕೇಂದ್ರಗಳ ಸುತ್ತಾಟ ಮುಗಿಸಿ ಬಂದಿರುವುದು ತಿಳಿಯುತ್ತಿತ್ತು. ಆರಂಭದಲ್ಲಿ ಅವರಿಗೆ ಅಜೀರ್ಣ ಮತ್ತು ಹೊಟ್ಟೆ ಉಬ್ಬರದ ಸಮಸ್ಯೆ. ಔಷಧ ಸೇವಿಸಿದರು. ನಂತರ ಮಲಪ್ರವೃತ್ತಿಯಲ್ಲಿ ತೊಂದರೆ ಆರಂಭವಾಯಿತು. ಅದಕ್ಕೆ ಮತ್ತೊಂದು ಚಿಕಿತ್ಸೆ.
ಇದನ್ನೂ ಓದಿ: Dr Sadhanashree Column: ಮರವೇ ನಮ್ಮ ಗುರು !: ಒಂದೊಂದು ವೃಕ್ಷಕ್ಕೂ ಒಂದೊಂದು ಪಾಠ !
ಮುಂದೆ ಮಾಸಿಕ ಋತುಚಕ್ರದಲ್ಲಿ ಅತಿಯಾದ ನೋವು. ಅದಕ್ಕಾಗಿ ನೋವು ನಿವಾರಕ ಔಷಧಗಳ ಸೇವನೆ. ನಂತರ ಮೈಗ್ರೇನ್. ಎರಡೂ ಸ್ತನಗಳಲ್ಲಿ ನೋವು. ಇದರ ಜೊತೆಗೆ ನಿದ್ರಾಹೀನತೆ. ಕ್ರಮೇಣ ಸಿಟ್ಟು, ಕಿರಿಕಿರಿ, ಉದ್ವೇಗ. ಪ್ರತಿಯೊಂದು ಸಮಸ್ಯೆಗೂ ಒಂದೊಂದು ಚಿಕಿತ್ಸೆ. ಕೆಲವು ಲಕ್ಷಣಗಳು ಕಡಿಮೆಯಾಗುತ್ತಿದ್ದವು. ಆದರೆ ಸಂಪೂರ್ಣ ನೆಮ್ಮದಿ ಮಾತ್ರ ಸಿಗುತ್ತಿರಲಿಲ್ಲ.
ಕೊನೆಗೆ ಅವರ ಪ್ರಶ್ನೆ: ಡಾಕ್ಟರ್, ಇದಕ್ಕೆ ಆಯುರ್ವೇದ ದಲ್ಲಿ ಏನಾದರೂ ಚಿಕಿತ್ಸೆ ಇದೆಯೇ? ಅವರ ಪ್ರಶ್ನೆಗಿಂತಲೂ ಅವರ ಪ್ರಯಾಣವೇ ನನಗೆ ಮುಖ್ಯವಾಗಿ ಕಂಡಿತು. ಒಂದು ಸಮಸ್ಯೆಯನ್ನು ಪರಿಹರಿಸುವ ಪ್ರಯತ್ನದಲ್ಲಿ ಮತ್ತೊಂದು ಸಮಸ್ಯೆ ಹುಟ್ಟಿಕೊಳ್ಳುತ್ತಿದ್ದರೆ, ನಾವು ಕೇವಲ ಒಂದು ಲಕ್ಷಣವನ್ನು ನಿರ್ವಹಿಸುತ್ತಿದ್ದೇವೆಯೇ ಹೊರತು, ವ್ಯಕ್ತಿಯ ಸ್ವಾಸ್ಥ್ಯವನ್ನು ಮರಳಿ ಸ್ಥಾಪಿಸು ತ್ತಿದ್ದೇವೆಯೇ ಎಂಬ ಪ್ರಶ್ನೆಯನ್ನು ಕೇಳಿಕೊಳ್ಳಬೇಕು. ಆಯುರ್ವೇದದಲ್ಲಿ ಶುದ್ಧ ಚಿಕಿತ್ಸೆ ಎಂಬ ಪರಿಕಲ್ಪನೆ ಬಹಳ ಮಹತ್ವದ್ದು.
ಔಷಧ ಚಿಕಿತ್ಸೆ ಆಗಿರಲಿ, ಶಸ್ತ್ರಚಿಕಿತ್ಸೆ ಆಗಿರಲಿ ಅಥವಾ ಪಥ್ಯಚಿಕಿತ್ಸೆಯಾಗಿರಲಿ, ಒಂದು ವ್ಯಾಧಿ ಯನ್ನು ಗುಣಪಡಿಸುವಾಗ ಮತ್ತೊಂದು ವ್ಯಾಧಿಗೆ ಕಾರಣವಾಗಬಾರದು. ರೋಗವನ್ನು ನಿವಾರಿಸು ವುದರ ಜೊತೆಗೆ ದೇಹದ ಸಹಜ ಸಮತೋಲನ ಕಾಪಾಡುವುದು ಚಿಕಿತ್ಸೆಯ ಉದ್ದೇಶ. ಇದೇ ಕಾರಣಕ್ಕೆ ಆಯುರ್ವೇದ ಕೇವಲ ರೋಗವಿದೆಯೇ ಇಲ್ಲವೇ? ಎಂಬ ಪ್ರಶ್ನೆಯನ್ನು ಕೇಳುವುದಿಲ್ಲ. ಅದು ಇನ್ನೂ ಆಳವಾಗಿ, ನಿಮ್ಮ ದೇಹ ನಿಜವಾಗಿಯೂ ತನ್ನ ಸಹಜ ಸ್ಥಿತಿಯಲ್ಲಿ ಕಾರ್ಯನಿರ್ವ ಹಿಸುತ್ತಿದೆಯೇ ಎಂದು ಕೇಳುತ್ತದೆ.
ರೋಗವು ಒಂದೇ ದಿನದಲ್ಲಿ ದೊಡ್ಡದಾಗುವುದಿಲ್ಲ. ಒಂದು ದೊಡ್ಡ ಮರ ಒಂದು ಸಣ್ಣ ಬೀಜದಿಂದ ಮೊಳಕೆ, ಸಸಿ, ಗಿಡ, ಮರ ಎಂಬ ಹಂತಗಳನ್ನು ದಾಟಿ ಹೆಮ್ಮರವಾಗುತ್ತದೆ. ರೋಗವೂ ಹಾಗೆಯೇ. ಅದು ಸಾಮಾನ್ಯವಾಗಿ ಒಂದು ದಿನದಲ್ಲಿ ಪೂರ್ಣ ಪ್ರಮಾಣದಲ್ಲಿ ವ್ಯಕ್ತವಾಗುವುದಿಲ್ಲ. ದೇಹದ ಸಹಜ ಸಮತೋಲನದಲ್ಲಿ ಸಣ್ಣ ಬದಲಾವಣೆಗಳು ಆರಂಭವಾಗುತ್ತವೆ. ಅವು ಕ್ರಮೇಣ ಗಂಭೀರ ಸ್ವರೂಪ ಪಡೆಯಬಹುದು. ಆದ್ದರಿಂದಲೇ ರೋಗದ ಆರಂಭಿಕ ಹಂತದಲ್ಲಿಯೇ ದೇಹ ನೀಡುವ ಸೂಚನೆಗಳನ್ನು ಗುರುತಿಸುವುದು ಅತ್ಯಂತ ಮುಖ್ಯ.
ಸಣ್ಣ ವ್ಯತ್ಯಾಸವನ್ನು ಸರಿಪಡಿಸುವುದು ಸುಲಭ. ಆದರೆ ಅದು ವರ್ಷಗಳ ಕಾಲ ಬೆಳೆದು ದೊಡ್ಡ ಸಮಸ್ಯೆ ಯಾದ ನಂತರ ಮೂಲದಿಂದಲೇ ನಿವಾರಿಸುವುದು ಹೆಚ್ಚು ಕಷ್ಟ. ಹೀಗಾಗಿ ಆಯುರ್ವೇದದ ದೃಷ್ಟಿಯಲ್ಲಿ ನಿಜವಾದ ಆರೋಗ್ಯ ರಕ್ಷಣೆ ಎಂದರೆ ರೋಗ ಬಂದ ಮೇಲೆ ಚಿಕಿತ್ಸೆ ಪಡೆಯುವುದಲ್ಲ. ರೋಗ ಬರುವ ಮೊದಲೇ ದೇಹದ ಭಾಷೆಯನ್ನು ಅರ್ಥಮಾಡಿಕೊಳ್ಳುವುದು.
ಹಾಗಾದರೆ ‘ಸ್ವಸ್ಥ’ ಎಂದರೆ ಯಾರು? ಸುಶ್ರುತಾಚಾರ್ಯರು ಸ್ವಸ್ಥನ ಲಕ್ಷಣವನ್ನು ಅತ್ಯಂತ ಸುಂದರವಾಗಿ ವಿವರಿಸುತ್ತಾರೆ: ‘ಸಮದೋಷಃ ಸಮಾಗ್ನಿಶ್ಚ ಸಮಧಾತುಮಲಕ್ರಿಯಃ |(ಪ್ರಸನ್ನಾ ತ್ಮೇಂದ್ರಿಯಮನಾಃ ಸ್ವಸ್ಥ ಇತ್ಯಭಿಽಯತೇ’ ಅಂದರೆ, ದೋಷಗಳು ಸಮಸ್ಥಿತಿಯಲ್ಲಿದ್ದು, ಅಗ್ನಿ ಸಮವಾಗಿದ್ದು, ತನ್ಮೂಲಕ ಧಾತುಗಳು ಮತ್ತು ಮಲಗಳ ಕ್ರಿಯೆಗಳು ಸಮರ್ಪಕವಾಗಿ ನಡೆಯು ತ್ತಿದ್ದು , ಇದರಿಂದ ಶರೀರ, ಇಂದ್ರಿಯ ಮತ್ತು ಮನಸ್ಸು ಪ್ರಸನ್ನವಾಗಿರುವ ವ್ಯಕ್ತಿಯನ್ನು ಸ್ವಸ್ಥ ಎಂದು ಕರೆಯಲಾಗುತ್ತದೆ.
ಇಲ್ಲಿ ಗಮನಿಸಬೇಕಾದದ್ದು ಏನೆಂದರೆ, ಸ್ವಾಸ್ಥ್ಯವು ಕೇವಲ ದೇಹಕ್ಕೆ ಸೀಮಿತವಾಗಿಲ್ಲ. ದೋಷ + ಅಗ್ನಿ + ಧಾತು + ಮಲ + ಶರೀರ + ಇಂದ್ರಿಯ + ಮನಸ್ಸು. ಈ ಎಲ್ಲಾ ಆಯಾಮಗಳ ಸಮತೋಲನವೇ ಸ್ವಾಸ್ಥ್ಯ. ದೇಹವೆಂಬ ವಾಹನದ ಡ್ಯಾಶ್‌ಬೋರ್ಡ್ ನಮ್ಮ ಜೀವನವು ಒಂದು ದೀರ್ಘ ಪಯಣವೆಂದುಕೊಳ್ಳಿ. ಆ ಪಯಣಕ್ಕೆ ನಮ್ಮ ದೇಹವೇ ವಾಹನ. ಆಹಾರ, ವಿಹಾರ ಮತ್ತು ವಿಚಾರಗಳು ಆ ವಾಹನಕ್ಕೆ ಬೇಕಾದ ಇಂಧನ.
ವಾತ, ಪಿತ್ತ, ಕಫ ಮತ್ತು ಅಗ್ನಿ ಆ ವಾಹನವನ್ನು ಸುಸೂತ್ರವಾಗಿ ನಡೆಸುವ ಚಾಲಕ ವ್ಯವಸ್ಥೆಯಂತೆ. ವಾಹನ, ಇಂಧನ ಮತ್ತು ಚಾಲಕ ವ್ಯವಸ್ಥೆ ಪರಸ್ಪರ ಸಮನ್ವಯದಿಂದ ಕೆಲಸ ಮಾಡಿದಾಗ ಪ್ರಯಾಣ ಸುಖಕರ. ಅದೇ ರೀತಿ ದೋಷಗಳು ಮತ್ತು ಅಗ್ನಿ ತಮ್ಮ ಸಹಜ ಸ್ಥಿತಿಯಲ್ಲಿ ಕಾರ್ಯ ನಿರ್ವಹಿಸಿದಾಗ ಧಾತುಗಳ ಪೋಷಣೆ, ಮಲಗಳ ವಿಸರ್ಜನೆ, ಇಂದ್ರಿಯಗಳ ಕಾರ್ಯ ಮತ್ತು ಮನಸ್ಸಿನ ಪ್ರಸನ್ನತೆ ಸಹಜವಾಗಿ ನಡೆಯುತ್ತವೆ. ಇವುಗಳಲ್ಲಿ ಸಣ್ಣ ವ್ಯತ್ಯಾಸವಾದರೂ ದೇಹ ನಮಗೆ ಸೂಚನೆಗಳನ್ನು ನೀಡಲು ಆರಂಭಿಸುತ್ತದೆ. ಹಸಿವು ಬದಲಾಗಬಹುದು. ರುಚಿ ಬದಲಾಗಬಹುದು. ನಿದ್ರೆ ಬದಲಾಗಬಹುದು. ಮಲ ಪ್ರವೃತ್ತಿ ಬದಲಾಗಬಹುದು. ಬಲ ಕಡಿಮೆಯಾಗಬಹುದು. ಮನಸ್ಸಿನ ಪ್ರಸನ್ನತೆ ಕುಗ್ಗಬಹುದು.
ಇವೆಲ್ಲವೂ ದೇಹದ ‘ಡ್ಯಾಶ್‌ಬೋರ್ಡ್’ನಲ್ಲಿ ಹೊಳೆಯುವ ಎಚ್ಚರಿಕೆಯ ದೀಪಗಳಂತೆ. ಅವುಗಳ ನ್ನು ನಿರ್ಲಕ್ಷಿಸಿ, ನಂತರ ದೊಡ್ಡ ರೋಗ ಬಂದಾಗ ಮಾತ್ರ ಎಚ್ಚೆತ್ತುಕೊಳ್ಳುವುದು ಬುದ್ಧಿವಂತಿಕೆ ಯಲ್ಲ.
ಹಾಗಾದರೆ ನಮ್ಮ ‘ಕಂಪ್ಲೀಟ್ ಬಾಡಿ ಚೆಕಪ್’ ಯಾವುದು? ನನ್ನ ಕ್ಲಿನಿಕ್‌ಗೆ ಬರುವವರು ಪದೇಪದೇ ಕೇಳುವ ಪ್ರಶ್ನೆಯಿದು: ಡಾಕ್ಟರ್, ಬೇರೆ ಕಡೆ ಹಲವಾರು ಲ್ಯಾಬ್ ಟೆಸ್ಟ್‌ಗಳನ್ನು ಮಾಡಿಸುತ್ತಾರೆ. ಆಯುರ್ವೇದದಲ್ಲಿ ಅಷ್ಟು ಟೆಸ್ಟ್ ಹೇಳುವುದಿಲ್ಲ. ಹಾಗಾದರೆ ದೇಹದೊಳಗೆ ಏನಾಗುತ್ತಿದೆ ಎಂದು ಹೇಗೆ ತಿಳಿಯುವುದು? ಇದು ನಿಜಕ್ಕೂ ಬಹಳ ಒಳ್ಳೆಯ ಪ್ರಶ್ನೆ. ಲ್ಯಾಬ್ ಪರೀಕ್ಷೆಗಳು ಅಗತ್ಯವಿರುವ ಸಂದರ್ಭ ಗಳಲ್ಲಿ ಖಂಡಿತವಾಗಿಯೂ ವೈದ್ಯಕೀಯವಾಗಿ ಉಪಯುಕ್ತ. ಆದರೆ ಸ್ವಾಸ್ಥ್ಯವನ್ನು ಕೇವಲ ಕೆಲವು ಸಂಖ್ಯೆಗಳು ಅಥವಾ ವರದಿಗಳ ಮೂಲಕ ಅಳೆಯಲು ಸಾಧ್ಯವಿಲ್ಲ. ಆಯುರ್ವೇದ ವು ನಮಗೆ ಪ್ರತಿದಿನ ಗಮನಿಸಬಹುದಾದ ಕೆಲವು ಸರಳ ಆದರೆ ಆಳವಾದ ಸ್ವಾಸ್ಥ್ಯಲಕ್ಷಣಗಳನ್ನು ನೀಡುತ್ತದೆ.
ಪ್ರತಿದಿನ ನಿಮ್ಮನ್ನೇ ಕೇಳಿಕೊಳ್ಳಿ
- ದೇಹದಲ್ಲಿ ನೋವು ಅಥವಾ ರೋಗಲಕ್ಷಣಗಳಿವೆಯೇ? ಇದ್ದ ರೋಗ ಸಂಪೂರ್ಣವಾಗಿ ಉಪಶಮನ ಗೊಂಡಿದೆಯೇ? ದೇಹದಲ್ಲಿ ಅನಗತ್ಯ ನೋವು, ಅಸ್ವಸ್ಥತೆ ಉಳಿದಿಲ್ಲವೇ?
- ನಿಮ್ಮ ಸಹಜ ಸ್ವರ ಮತ್ತು ವರ್ಣ ಹೇಗಿದೆ? ದೇಹದ ಸ್ವಾಭಾವಿಕ ಕಾಂತಿ, ವರ್ಣ ಮತ್ತು ಧ್ವನಿ ಯಲ್ಲಿ ಅಸಹಜ ಬದಲಾವಣೆಗಳಿವೆಯೇ?
- ದೇಹದ ಬೆಳವಣಿಗೆ ಮತ್ತು ಧಾತುಗಳ ಸ್ಥಿತಿ ಸಮರ್ಪಕವಾಗಿದೆಯೇ? ದೇಹದ ರಚನೆ ಮತ್ತು ಧಾತುಗಳ ಪೋಷಣೆ ವಯಸ್ಸಿಗೆ ಹಾಗೂ ಪ್ರಕೃತಿಗೆ ಅನುಗುಣವಾಗಿದೆಯೇ?
- ನಿಮ್ಮ ಬಲ ಹೇಗಿದೆ? ವಯಸ್ಸು, ಆಹಾರ, ವ್ಯಾಯಾಮ ಮತ್ತು ಜೀವನಶೈಲಿಗೆ ಅನುಗುಣವಾದ ದೈಹಿಕ ಸಾಮರ್ಥ್ಯ ನಿಮ್ಮಲ್ಲಿದೆಯೇ?
- ಸಮಯಕ್ಕೆ ಸರಿಯಾಗಿ ಹಸಿವಾಗುತ್ತಿದೆಯೇ? ಊಟದ ಸಮಯ ಬಂದಾಗ ಸಹಜವಾದ ಹಸಿವು ಉಂಟಾಗುತ್ತಿದೆಯೇ?
- ಆಹಾರದ ರುಚಿ ಸಹಜವಾಗಿದೆಯೇ? ಬಾಯಿಯಲ್ಲಿ ಸಹಜ ರುಚಿ ಇದೆಯೇ? ಆಹಾರವನ್ನು ಆಸಕ್ತಿಯಿಂದ ಸ್ವೀಕರಿಸಲು ಸಾಧ್ಯವಾಗುತ್ತಿದೆಯೇ?
- ತಿಂದ ಆಹಾರ ಸರಿಯಾಗಿ ಜೀರ್ಣವಾಗುತ್ತಿದೆಯೇ? ಊಟದ ನಂತರ ಭಾರ, ಅಜೀರ್ಣ, ಅತಿಯಾದ ಉಬ್ಬರ ಅಥವಾ ಅಸಹಜ ತೊಂದರೆಗಳು ಪದೇಪದೆ ಕಾಣಿಸಿಕೊಳ್ಳುತ್ತಿವೆಯೇ?
- ನಿದ್ರೆ ಸಹಜವಾಗಿದೆಯೇ? ಸಮಯಕ್ಕೆ ನಿದ್ರೆ ಬರುತ್ತಿದೆಯೇ? ಸುಲಭವಾಗಿ ನಿದ್ರೆಗೆ ಜಾರುತ್ತೀರಾ? ಬೆಳಿಗ್ಗೆ ಯಾವುದೇ ಬಾಹ್ಯ ಪ್ರಚೋದನೆಯಿಲ್ಲದೆ ಚೈತನ್ಯದಿಂದ ಎಚ್ಚರಗೊಳ್ಳುತ್ತೀರಾ?
- ನಿದ್ರೆಯ ಗುಣಮಟ್ಟ ಹೇಗಿದೆ? ಅತಿಯಾದ ಅಶಾಂತಿ ಅಥವಾ ವಿಕಾರ ಸ್ವಪ್ನಗಳಿಂದ ನಿದ್ರೆ ಪದೇಪದೆ ವ್ಯತ್ಯಯಗೊಳ್ಳುತ್ತಿದೆಯೇ?
- ದೇಹದ ವಿಸರ್ಜನಾ ಕ್ರಿಯೆಗಳು ಸರಿಯಾಗಿವೆಯೇ? ಅಧೋವಾತ, ಮೂತ್ರ, ಮಲ, ಆರ್ತವ ಮತ್ತು ರೇತಸ್ಸುಗಳ ಪ್ರವೃತ್ತಿ ತಮ್ಮ ತಮ್ಮ ಸಹಜ ಕಾಲ ಮತ್ತು ರೀತಿಯಲ್ಲಿ ನಡೆಯುತ್ತಿದೆಯೇ?
- ನಿಮ್ಮ ಮನಸ್ಸು ಮತ್ತು ಇಂದ್ರಿಯಗಳು ಪ್ರಸನ್ನವಾಗಿವೆಯೇ? ಚಿಂತನೆ, ವಿಚಾರ, ಸ್ಮರಣೆ, ಗ್ರಹಣಶಕ್ತಿ ಹಾಗೂ ಶಬ್ದ, ಸ್ಪರ್ಶ, ರೂಪ, ರಸ, ಗಂಧಗಳನ್ನು ಗ್ರಹಿಸುವ ಇಂದ್ರಿಯಗಳ ಕಾರ್ಯ ದಲ್ಲಿ ಯಾವುದೇ ಅಡೆತಡೆಗಳಿವೆಯೇ? ಇವು ಬರೀ ಪ್ರಶ್ನೆಗಳಲ್ಲ. ಇವು ನಮ್ಮ ದೇಹ ಪ್ರತಿದಿನ ನಮಗೆ ನೀಡುತ್ತಿರುವ ಆರೋಗ್ಯ ವರದಿ. ಸ್ವಾಸ್ಥ್ಯವನ್ನು ಹೊರಗೆ ಹುಡುಕಬೇಡಿ ನಾವು ಇಂದು ಆರೋಗ್ಯದ ಬಗ್ಗೆ ಬಹಳಷ್ಟು ಮಾಹಿತಿ ಯನ್ನು ಹೊರಗಿನಿಂದ ಸಂಗ್ರಹಿಸುತ್ತೇವೆ. ಯಾರೋ ವಾಟ್ಸ್ಯಾಪ್ ನಲ್ಲಿ ಒಂದು ಸಂದೇಶ ಕಳುಹಿಸುತ್ತಾರೆ. ಯಾರೋ ಫೇಸ್‌ಬುಕ್‌ನಲ್ಲಿ ಒಂದು ‘ರಿಸರ್ಚ್’ ಹಂಚಿಕೊಳ್ಳುತ್ತಾರೆ.
ಯಾರೋ ಒಂದು ಹೊಸ ಡಯಟ್ ಹೇಳುತ್ತಾರೆ. ಮತ್ತೊಬ್ಬರು ಹೊಸ ಸಪ್ಲಿಮೆಂಟ್ ಸೂಚಿಸುತ್ತಾರೆ. ಇವೆಲ್ಲವನ್ನೂ ಅನುಸರಿಸುತ್ತಾ ನಾವು ನಮ್ಮದೇ ದೇಹ ಏನು ಹೇಳುತ್ತಿದೆ ಎಂಬುದನ್ನು ಕೇಳುವು ದನ್ನೇ ಮರೆತು ಬಿಡುತ್ತೇವೆ. ಆದರೆ ಆಯುರ್ವೇದ ಹೇಳುವುದು ಇದಕ್ಕೆ ವಿರುದ್ಧವಾದ ಮಾರ್ಗ. ಮೊದಲು ನಿಮ್ಮ ದೇಹವನ್ನು ಗಮನಿಸಿ. ನಿಮ್ಮ ಹಸಿವು ಹೇಗಿದೆ?ನಿಮ್ಮ ಜೀರ್ಣಕ್ರಿಯೆ, ಮಲ ಪ್ರವೃತ್ತಿ, ನಿದ್ರೆ, ಬಲ ಹೇಗಿದೆ? ನಿಮ್ಮ ಮನಸ್ಸು ಪ್ರಸನ್ನವಾಗಿದೆಯೇ? ಇಂದ್ರಿಯಗಳು ತಮ್ಮ ಕೆಲಸ ವನ್ನು ಸರಿಯಾಗಿ ಮಾಡುತ್ತಿವೆಯೇ? ಈ ಪ್ರಶ್ನೆಗಳಿಗೆ ಪ್ರತಿದಿನ ಪ್ರಾಮಾಣಿಕವಾಗಿ ಉತ್ತರಿಸುವ ಅಭ್ಯಾಸ ಬೆಳೆಸಿಕೊಳ್ಳಿ.
ಒಂದು ರೋಗದ ಲಕ್ಷಣ ಕಡಿಮೆಯಾಯಿತು ಎಂದರೆ ಚಿಕಿತ್ಸೆ ಮುಗಿದಿದೆ ಎಂದು ಅರ್ಥವಲ್ಲ. ದೇಹ ತನ್ನ ಸಹಜ ಕಾರ್ಯಗಳನ್ನು ಮರಳಿ ಪಡೆಯಬೇಕು. ಹಸಿವು ಸಹಜವಾಗಬೇಕು. ಜೀರ್ಣಕ್ರಿಯೆ ಸರಿಯಾಗಬೇಕು. ಮಲ, ಮೂತ್ರ ಮುಂತಾದ ವಿಸರ್ಜನೆಗಳು ಸರಿಯಾಗಬೇಕು. ನಿದ್ರೆ ಸುಖಕರವಾಗ ಬೇಕು. ಬಲ ಮರಳಬೇಕು. ಇಂದ್ರಿಯಗಳ ಕಾರ್ಯ ಸಹಜವಾಗಬೇಕು. ಮನಸ್ಸಿನ ಪ್ರಸನ್ನತೆ ಮರಳ ಬೇಕು. ಆಗ ಮಾತ್ರ ನಾವು ರೋಗ ಮುಕ್ತ ಸ್ಥಿತಿಯಿಂದ ಸ್ವಾಸ್ಥ್ಯದತ್ತ ಸಾಗಿದ್ದೇವೆ ಎಂದು ಹೇಳಬಹುದು. ಆದ್ದರಿಂದ ಚಿಕಿತ್ಸೆ ಪಡೆದ ನಂತರ ನನ್ನ ನೋವು ಕಡಿಮೆಯಾಗಿದೆ ಎಂಬ ಒಂದೇ ಮಾನದಂಡದಿಂದ ತೃಪ್ತರಾಗಬೇಡಿ.
ನಾನು ಮೊದಲಿನಂತೆಯೇ ಸ್ವಸ್ಥನಾಗಿದ್ದೇನಾ ? ಎಂದು ಕೇಳಿಕೊಳ್ಳಿ. ಏಕೆಂದರೆ ನಿಜವಾದ ಸ್ವಾಸ್ಥ್ಯ ವೆಂದರೆ ಕೇವಲ ರೋಗದ ಅನುಪಸ್ಥಿತಿಯಲ್ಲ. ಅದು ದೇಹದ ಸಹಜತೆ, ಅಗ್ನಿಯ ಸಮತೋಲನ, ಧಾತುಗಳ ಪೋಷಣೆ, ಮಲಗಳ ಸರಿಯಾದ ವಿಸರ್ಜನೆ, ಇಂದ್ರಿಯಗಳ ಸಾಮರ್ಥ್ಯ ಮತ್ತು ಮನಸ್ಸಿನ ಪ್ರಸನ್ನತೆಯ ಸಮಗ್ರ ಅನುಭವ. ಇದನ್ನು ಸಾಧಿಸಲು ಪ್ರತಿದಿನ ದೊಡ್ಡ ದೊಡ್ಡ ಪ್ರಯೋಗಗಳ ಅಗತ್ಯವಿಲ್ಲ.
ನಮ್ಮ ದೇಹದ ಸಣ್ಣ ಸಣ್ಣ ಸೂಚನೆಗಳನ್ನು ಗಮನಿಸುವ ಜಾಗೃತಿ ಸಾಕು. ರೋಗ ಬರುವವರೆಗೆ ಕಾಯಬೇಡಿ. ಅದು ಪಿಸುಮಾತಿನಲ್ಲಿ ಹೇಳುವಾಗಲೇ ಕೇಳಿಸಿಕೊಳ್ಳಿ. ಸ್ವಾಸ್ಥ್ಯದ ನಿಜವಾದ ರಹಸ್ಯ ಯಾವುದೋ ಹೊಸ ‘ಹೆಲ್ತ್ ಟ್ರೆಂಡ್’ನಲ್ಲಿ ಇಲ್ಲ. ನಮ್ಮದೇ ದೇಹವನ್ನು ಪ್ರತಿದಿನ ಗಮನಿಸುವ ಸರಳ eನದಲ್ಲಿದೆ. ಅದೇ ಆಯುರ್ವೇದದ ಸ್ವಾಸ್ಥ್ಯ ದೃಷ್ಟಿ. ಅದೇ ವರ್ಷದಿಂದ ವರ್ಷಕ್ಕೆ ಆರೋಗ್ಯವನ್ನು ಕಾಪಾಡಿಕೊಳ್ಳುವ ನಿಜವಾದ ಮಾರ್ಗ.