ಅನುಭವ ಮಂಟಪ
ಜನಮೇಜಯ ಉಮರ್ಜಿ
ಕೆಲವು ತಿಂಗಳುಗಳ ಹಿಂದೆ ಕನ್ಹೇರಿ ಶ್ರೀಗಳು ಮಹಾರಾಷ್ಟ್ರದಲ್ಲಿ ಕನ್ನಡದ ಆಡುಭಾಷೆಯ ಒಂದು ಪದ ಬಳಸಿದ್ದಕ್ಕೆ ಕರ್ನಾಟಕದ ಕೆಲವರು ಸರಕಾರಿ ಯಂತ್ರವನ್ನು ಬಳಸಿಕೊಂಡು ವಿಜಯಪುರ ಜಿಗೆ ಅವರನ್ನು ನಿರ್ಬಂಧಿಸಿದರು. ಇದು ನ್ಯಾಯಾಲಯದ ಮೆಟ್ಟಿಲು ಏರಿತು. ಸುಪ್ರೀಂ ಕೋರ್ಟಿನಲ್ಲಿ ಏನಾಯಿತು? ಕಲಬುರಗಿ- ಧಾರವಾಡ ಹೈಕೋರ್ಟ್ ಪೀಠಗಳಲ್ಲಿ ಏನಾಯಿತು? ಎಂಬುದು ಸಾರ್ವಜನಿಕವಾಗಿ ಲಭ್ಯವಿದೆ.
ಸಾಂವಿಧಾನಿಕ ಮಾರ್ಗದಿಂದ ನಿರ್ಬಂಧ ತೆರವಾದ ನಂತರ, ಈ ಅಭಿವ್ಯಕ್ತಿ ಸ್ವಾತಂತ್ರ್ಯದ ಹತ್ತಿಕ್ಕು ವಿಕೆಯನ್ನು ಜನ ಸ್ವಯಂಪ್ರೇರಿತರಾಗಿ ಖಂಡಿಸತೊಡಗಿದರು. ಶ್ರೀಗಳನ್ನು ಕರ್ನಾಟಕದ ವಿವಿಧ ಭಾಗಗಳಲ್ಲಿ ಕರೆಯಿಸಿ ಬಸವಾದಿ ಶರಣರ ಹಿಂದೂ ಸಮಾವೇಶಗಳನ್ನು ಮಾಡಹತ್ತಿದರು. ಈಗ ಇದು ರಾಜ್ಯದ ಸಾಮಾಜಿಕ ಹಾಗೂ ಧಾರ್ಮಿಕ ವಲಯಗಳಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿವೆ.
ಕನ್ನೇರಿ ಶ್ರೀ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಜಮಖಂಡಿ, ಬಬಲೇಶ್ವರ, ಶಹಾಪುರ, ಗದಗ ಸೇರಿದಂತೆ ಹಲವೆಡೆ ನಡೆದ ಈ ಸಮಾವೇ ಶಗಳು ಕನಿಷ್ಟ ಹತ್ತು ಹತ್ತು ಸಾವಿರ ಜನರನ್ನು ಸೆಳೆದಿವೆ. ಈಗ ಬಸವಣ್ಣನವರ ಕರ್ಮಭೂಮಿಯಾದ ಬಸವಕಲ್ಯಾಣದಲ್ಲಿ ಇದೇ ಸಮಾವೇಶ ನಡೆಯಲಿರುವುದು ಚರ್ಚೆಯನ್ನು ಮತ್ತಷ್ಟು ತೀವ್ರಗೊಳಿಸಿದೆ.
ಶರಣರ ಹೆಸರಿನಲ್ಲಿ ನಡೆಯುತ್ತಿರುವ ಈ ಸಮಾವೇಶಗಳಿಗೆ ಯಾಕಿಷ್ಟು ವಿರೋಧ? ಮತ್ತು ಆ ವಿರೋಧದ ನಡುವೆಯೂ ಜನಸ್ಪಂದನೆ ನೂರ್ಮಡಿ ಏಕೆ ಹೆಚ್ಚುತ್ತಿದೆ? ಎಂಬುದೀಗ ಮುಖ್ಯ ಪ್ರಶ್ನೆ. ಕನ್ಹೇರಿ ಶ್ರೀಗಳು ಈ ಸಮಾವೇಶಗಳನ್ನು ಕೇವಲ ಸಾಮಾನ್ಯ ಭಾಷಣ ಕಾರ್ಯಕ್ರಮಗಳಾಗಿ ಅಲ್ಲ, ಬದಲಾಗಿ ಜಾಗೃತಿ ಅಭಿಯಾನಗಳಾಗಿ ರೂಪಿಸಿದ್ದಾರೆ. ಅವರ ಭಾಷಣಗಳಲ್ಲಿ ಹಿಂದೂ ಸಮಾಜದ ಸಂಘಟನೆ, ಕುಟುಂಬ ವ್ಯವಸ್ಥೆಯ ರಕ್ಷಣೆ, ಯುವಕರಲ್ಲಿ ವ್ಯಸನಮುಕ್ತ ಜೀವನ, ಗೋ ಸಂರಕ್ಷಣೆ, ಸಾವಯವ ಕೃಷಿ, ಮತಾಂತರದ ಪ್ರಶ್ನೆ ಹಾಗೂ ಶರಣರ ತತ್ವಗಳ ನಿಜ ಅನುಷ್ಠಾನ ಪ್ರಮುಖ ವಿಷಯಗಳಾಗಿ ಕಾಣಿಸುತ್ತಿವೆ.
ಇದನ್ನೂ ಓದಿ: Janamejaya Umarji Column: ಗಣಾಚಾರದ ಅರ್ಥ ಅಪಾರ್ಥ
ಬಸವಣ್ಣ ಕೇವಲ ಒಂದು ಜಾತಿಯ ನಾಯಕರಲ್ಲ, ಸಮಗ್ರ ಹಿಂದೂ ಸಮಾಜದ ನಾಯಕ ಎಂಬುದು ಅವರ ವಾದ. ಬಸವಣ್ಣನವರ ಸಂದೇಶವನ್ನು ಸೀಮಿತ ಗುರುತಿನ ರಾಜಕಾರಣದೊಳಗೆ ಬಂಧಿಸುವುದನ್ನು ಸ್ಪಷ್ಟವಾಗಿ ವಿರೋಧಿಸುತ್ತಿದ್ದಾರೆ. ಇದು ಕೆಲವರಿಗೆ ನುಂಗಲಾರದ ತುತ್ತಾಗಿದೆ.
ಜಮಖಂಡಿಯಿಂದ ಗದಗದವರೆಗೆ ನಡೆದ ಸಮಾವೇಶಗಳೆಲ್ಲವೂ ಅಪಾರ ಯಶಸ್ಸು ಕಂಡಿವೆ. ಈ ಸಮಾವೇಶಗಳು ಸಾವಿರಾರು ಜನರ ಭಾಗವಹಿಸುವಿಕೆಯಿಂದ ಮಿಗಿಲಾಗಿ ಅವುಗಳಿಗೆ ನೀಡಿದ ಅಪಪ್ರಚಾರದಿಂದ, ಅವು ರಾಜ್ಯ ಮಟ್ಟದ ಚರ್ಚೆಯ ವಿಷಯವಾಗಿವೆ. ಶಹಾಪುರದಲ್ಲಿ ನಡೆದ ಸಮಾವೇಶದ ವೇಳೆ ಕೆಲವು ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದವು. ಸಾಮಾಜಿಕ ಜಾಲತಾಣ ಗಳಲ್ಲಿ ಅಭಿಯಾನಗಳನ್ನು ನಡೆಸಿದ್ದವು. ಆದಾಗ್ಯೂ ಸಮಾವೇಶದಲ್ಲಿ ದೊಡ್ಡ ಸಂಖ್ಯೆಯಲ್ಲಿ ಜನರು ಪಾಲ್ಗೊಂಡರು.
ಇದರಿಂದ ವಿರೋಧಿಗಳು ನಿರೀಕ್ಷಿಸಿದ್ದ ಪರಿಣಾಮ ಎಳ್ಳಷ್ಟು ಉಂಟಾಗಲಿಲ್ಲ ಅಷ್ಟೇ ಅಲ್ಲ ಪ್ರತಿ ದ್ವಂದ್ವಿಯಾಗಿ ನಡೆಸಿದ ಸಮಾವೇಶಗಳಿಗೆ ಜನ ಸೇರಲೇ ಇಲ್ಲ. ಗದಗದಲ್ಲಿಯೂ ಇದೇ ದೃಶ್ಯ ಮರುಕಳಿಸಿತು. ಸಮಾವೇಶದ ವಿರುದ್ಧ ಪ್ರತಿಕ್ರಿಯೆ ರೂಪಿಸುವ ಪ್ರಯತ್ನಗಳು ನಡೆದರೂ ಜನಸಂದಣಿ ಕಡಿಮೆಯಾಗಲಿಲ್ಲ.
ಬದಲಾಗಿ ವಿರೋಧವೇ ಕಾರ್ಯಕ್ರಮದ ಬಗ್ಗೆ ಹೆಚ್ಚಿನ ಕುತೂಹಲ ಮೂಡಿಸಿತು ಎಂಬ ವಾದ ವನ್ನು ಆಯೋಜಕರು ಮುಂದಿಟ್ಟಿದ್ದಾರೆ. ಬಸವಕಲ್ಯಾಣವು ಕೇವಲ ಒಂದು ನಗರವಲ್ಲ. ಅದು ಅನುಭವ ಮಂಟಪದ ನೆನಪು ಹೊತ್ತಿರುವ ಐತಿಹಾಸಿಕ ಕ್ಷೇತ್ರ. ಬಸವಣ್ಣ, ಅಲ್ಲಮಪ್ರಭು, ಅಕ್ಕ ಮಹಾದೇವಿ ಸೇರಿದಂತೆ ಅಸಂಖ್ಯ ಶರಣರು ತಮ್ಮ ವಿಚಾರ ವಿನಿಮಯ ನಡೆಸಿದ ಮೂಲ ಅನುಭವ ಮಂಟಪ ಇನ್ನೂ ಇದೆ.
ಇಂತಹ ಸ್ಥಳದಲ್ಲಿ ಬಸವಾದಿ ಶರಣರ ಹಿಂದೂ ಸಮಾವೇಶ ನಡೆಯುತ್ತಿರುವುದು ಬಸವಣ್ಣನವರ ಪರಂಪರೆಯ ಬಗ್ಗೆ ನಡೆಯುತ್ತಿರುವ ಸೈದ್ಧಾಂತಿಕ ಚರ್ಚೆ ಆಗಿದೆ. ಆದರೆ ಇದರ ವಿರೋಧವು ಅಭಿವ್ಯಕ್ತಿ ಸ್ವಾತಂತ್ರ್ಯದ ಹನನವಷ್ಟೇ ಆಗಿರದೇ, ಬಸವಣ್ಣನವರನ್ನು ಕೆಲವರು ಗುತ್ತಿಗೆ ಹಿಡಿದಿದ್ದಾ ರೆಯೇ? ಆ ಗುತ್ತಿಗೆ ತಪ್ಪಿ ಹೋಗುವ ಭಯದಲ್ಲಿದ್ದಾರೆಯೇ ಎಂಬ ಪ್ರಶ್ನೆ ಎತ್ತುತ್ತದೆ.
ಇಂದು ಐಪಿಎಲ್ ಪಂದ್ಯಗಳು, ಸಾಮಾಜಿಕ ಮಾಧ್ಯಮಗಳು ಮತ್ತು ವಿವಿಧ ಮನರಂಜನಾ ಆಯ್ಕೆ ಗಳ ನಡುವೆ ಪ್ರವಾಹೋಪಾದಿಯಲ್ಲಿ ಯುವಕರು ಈ ಸಮಾವೇಶಗಳಿಗೆ ಆಗಮಿಸುತ್ತಿರುವುದು ಬಸವಣ್ಣನವರ ನಾಮವನ್ನು ಬ್ಯುಸಿನೆಸ್ ಮಾಡಿಕೊಂಡವರಿಗೆ ಕಸಿವಿಸಿ ತರಿಸಿದೆ.
ಈ ಸಮಾವೇಶಗಳನ್ನು ವಿರೋಧಿಸುವವರಿಗೆ ಬಸವಣ್ಣನವರ ತತ್ವಗಳನ್ನು ಹಿಂದೂ ಎಂದು ಗುರುತಿಸಿದಾಗ ಸಮ-ಸಮಾಜ ಸೋಗಿನ ಪ್ರತ್ಯೇಕ ಧರ್ಮದ ರಾಜಕೀಯ ಚಳವಳಿ ದುರ್ಬಲ ವಾಗುತ್ತಿದೆ ಎಂಬುದು ಅರ್ಥವಾಗುತ್ತಿದೆ. ಹಿಂದೂ ಸಮಾಜದಿಂದ ಬಸವಣ್ಣನವರನ್ನು ಪ್ರತ್ಯೇಕಿಸಲು ಬಳಸುವ ಅರ್ಥ ತಿರುಚಿದ ಬೆರಳೆಣಿಕೆಯ ವಚನಗಳಿಗೆ ಬದಲಾಗಿ, ಕನ್ಹೇರಿ ಶ್ರೀಗಳು ಕೊಡುತ್ತಿರುವ ಹಲವು ವಚನಗಳು ಜನಮಾನಸಕ್ಕೆ ಹೋಗುವುದು ಇವರಿಗೆ ಬೇಡವಾಗಿದೆ.
ಸಾಮಾಜಿಕ ಜೀವನ, ಮಠ ಪರಂಪರೆ, ಇಷ್ಟಲಿಂಗ ಆರಾಧನೆ, ಶೈವ ಸಂಸ್ಕೃತಿ ಮತ್ತು ಆಚರಣೆಗಳ ಹಲವು ಸಾಮ್ಯ ನೋಡಿದಾಗ ಲಿಂಗಾಯತ ಮತ್ತು ವೀರಶೈವ ಎರಡೂ ಒಂದೇ. ಇವು ವಿಶಾಲ ಹಿಂದೂ ತತ್ವದಲ್ಲಿ ಒಂದು ಎಂಬುದರಲ್ಲಿ ಎರಡು ಮಾತಿಲ್ಲ.
ಲಿಂಗಾಯತರು ಮತ್ತು ವೀರಶೈವರು ಹಿಂದೂ ಸಮಾಜದ ಭಾಗವೇ ಎಂಬ ಪ್ರಶ್ನೆ ಕೇವಲ ಬೆರಳೆಣಿಕೆ ಯ ಜನರು ನಡೆಸುವ ರಾಜಕೀಯ ಚರ್ಚೆಯ ವಿಷಯವಾಗಿದ್ದರೂ, ಇತಿಹಾಸ- ವರ್ತಮಾನದಲ್ಲಿ ಶಿವಭಕ್ತಿ, ಹಬ್ಬ-ಹರಿದಿನಗಳು, ದೇವಾಲಯ ಸಂಸ್ಕೃತಿ, ಮಠ ವ್ಯವಸ್ಥೆ ಹಾಗೂ ಭಾರತದ ವಿಶಾಲ ಸಾಂಸ್ಕೃತಿಕ ಪರಂಪರೆಯೊಂದಿಗೆ ಒಂದಾಗಿದೆ ಎಂಬುದಕ್ಕೆ ಅಸಂಖ್ಯ ಪ್ರಮಾಣಗಳಿವೆ.
ಸಾಮಾನ್ಯ ಜನರಿಗೆ ಈ ರೀತಿ ಯಾವುದೇ ಗೊಂದಲಗಳಿಲ್ಲ ಬದಲಾಗಿ ಧರ್ಮ ಒಡೆಯುವವರ ಬಗ್ಗೆ ಆಕ್ರೋಶವಿದೆ. ಹಲವು ಪ್ರಮಾಣಗಳನ್ನು ಕನ್ನೇರಿ ಶ್ರೀಗಳು ಸಮಾವೇಶದಲ್ಲಿ ಜನರ ಮುಂದೆ ಇಡುತ್ತಿದ್ದಾರೆ. ಹೀಗಾಗಿ ಜನ ಅವರ ಹಿಂದೆ ಹೊರಟಿದೆ. ಕನ್ಹೇರಿ ಶ್ರೀಗಳು ಮತಾಂತರ ಹಾಗೂ ಲವ್ ಜಿಹಾದ್ ಕುರಿತಾಗಿ ಸಮಾವೇಶಗಳಲ್ಲಿ ಅಂಕಿ ಸಂಖ್ಯೆಗಳು ಸಮೇತ ಸಮಾವೇಶಗಳಲ್ಲಿ ಎಚ್ಚರಿಕೆ ಗಳನ್ನು ನೀಡುತ್ತಿದ್ದಾರೆ. ಅವರ ಅಭಿಪ್ರಾಯದಲ್ಲಿ ಕುಟುಂಬಗಳು ಹೆಚ್ಚು ಜಾಗೃತರಾಗಬೇಕು ಮತ್ತು ಯುವಜನರಿಗೆ ಮೌಲ್ಯಾಧಾರಿತ ಶಿಕ್ಷಣ ನೀಡಬೇಕು.
ಶರಣರ ಹಿಂದೂ ಸಮಾವೇಶಗಳ ವಿಶೇಷತೆಯೆಂದರೆ ಅವು ಕೇವಲ ಧಾರ್ಮಿಕ ವಿಷಯಗಳಿಗೆ ಸೀಮಿತವಾಗಿಲ್ಲ. ಸಾವಯವ ಕೃಷಿಯ ಮಹತ್ವ, ರಾಸಾಯನಿಕ ಅವಲಂಬನೆಯ ದುಷ್ಪರಿಣಾಮ ಗಳು ಹಾಗೂ ಗ್ರಾಮೀಣ ಆರ್ಥಿಕತೆಯ ಪುನರುಜ್ಜೀವನದ ಕುರಿತು ಶ್ರೀಗಳು ನಿರಂತರವಾಗಿ ಮಾತನಾಡುತ್ತಿದ್ದಾರೆ.
ಯುವಕರಲ್ಲಿ ಮಾದಕ ವ್ಯಸನ ಹಾಗೂ ಡಿಜಿಟಲ್ ವ್ಯಸನದ ಬಗ್ಗೆ ಎಚ್ಚರಿಕೆ ನೀಡುತ್ತಾ, ಆರೋಗ್ಯ ಕರ ಜೀವನಶೈಲಿಯನ್ನು ಪ್ರೋತ್ಸಾಹಿಸುತ್ತಿದ್ದಾರೆ. ಹಿಂದೂ ಪರವಾಗಿ ಇರುವ ಬಹುಸಂಖ್ಯಾತ ಸ್ವಾಮಿಗಳ ವಿರುದ್ಧ, ಮಠಗಳ ವಿರುದ್ಧ, ಇದೇ ಜಾತಿಯವರು, ಇದೇ ಸಂಘಟನೆ ಯವರು ಮಾತ್ರ ಬಸವಣ್ಣನವರ ಬಗ್ಗೆ ಮಾತನಾಡಬೇಕು, ಉಳಿದವರು ಮಾತನಾಡಬಾರದು, ಕೊನೆಗೆ ಧಾರವಾಡದ ಮುರುಘಾ ಮಠದಲ್ಲಿ ನಡೆದ ಹಿಂದೂ ದೇವಿ ದುರ್ಗಮ್ಮನ ಜಾತ್ರೆಯ ವಿರುದ್ಧ, ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಪ್ರತ್ಯಕ್ಷವಾಗಿ ಅಭಿಯಾನಗಳನ್ನು ನಡೆಸುತ್ತಿದ್ದಾರೆ.
ಶಹಾಪೂರದಲ್ಲಿ ಫೇಸ್‌ವ್ಯಾಲ್ಯು ಕಳಕೊಂಡ ಕೆಲವರು, ಗದಗಿನಲ್ಲಿ ವಚನ ದರ್ಶನ ವಿರೋಧಿಸಿ ಸೋತ ಗುಂಪು, ಬಸವ ಕಲ್ಯಾಣದಲ್ಲಿ ಮಠಾಧಿಪತಿಗಳ ಒಕ್ಕೂಟದ ಅಧ್ಯಕ್ಷರು ಹೀಗೆ ವಿರೋಧದ ನೇತೃತ್ವ ವಹಿಸಿಕೊಂಡು ಶಕ್ತಿ ಪ್ರದರ್ಶನ ಮಾಡುತ್ತಿದ್ದಾರೆ. ಇತಿಹಾಸದಲ್ಲಿ ಹಲವು ಸಾಮಾಜಿಕ ಚಳವಳಿಗಳಲ್ಲಿ ಕಂಡಿರುವಂತೆ, ವಿರೋಧವು ಕೆಲವೊಮ್ಮೆ ಕುತೂಹಲವನ್ನು ಹೆಚ್ಚಿಸುತ್ತದೆ. ಒಂದು ಕಾರ್ಯಕ್ರಮವನ್ನು ತಡೆಯಲು ಅಥವಾ ನಿರಾಕರಿಸಲು ಪ್ರಯತ್ನಿಸಿದಾಗ, ಅದರ ಬಗ್ಗೆ ತಿಳಿದು ಕೊಳ್ಳಲು ಜನರು ಹೆಚ್ಚು ಆಸಕ್ತಿ ತೋರಿಸುತ್ತಾರೆ, ಇಲ್ಲಿ ಆಗುತ್ತಿರುವುದು ಅದೇ.
ಮುಖ್ಯವಾಗಿ ಭಿನ್ನಾಭಿಪ್ರಾಯಗಳನ್ನು ಶತ್ರುತ್ವವಾಗಿ ಅಲ್ಲ, ಸಂವಾದದ ಅವಕಾಶವಾಗಿ ನೋಡ ಬೇಕು. ಬಸವಣ್ಣನವರ ಅನುಭವ ಮಂಟಪದ ಪರಂಪರೆ ಇದೇ ಪಾಠವನ್ನು ಕಲಿಸುತ್ತದೆ. ಆದರೆ ವಿರೋಧ ನಿಷೇಧ ಇವುಗಳು ಬಸವ ತತ್ವಕ್ಕೆ ವ್ಯತಿರಿಕ್ತವಾಗಿವೆ. ಬಸವಾದಿ ಶರಣರ ಹಿಂದೂ ಸಮಾವೇಶಗಳ ಕೇಂದ್ರಬಿಂದು ಬಸವಣ್ಣನವರ ಪರಂಪರೆ, ಹಿಂದೂ ಸಮಾಜದ ಸಂಘಟನೆ, ಸಾಮಾಜಿಕ ಸುಧಾರಣೆ ಮತ್ತು ಸಾಂಸ್ಕೃತಿಕ ಏಕತೆಯ ಪ್ರಶ್ನೆಗಳಾಗಿವೆ. ಶರಣರ ಹೆಸರಿನಲ್ಲಿ ಸಮಾಜವನ್ನು ವಿಭಜಿಸಬೇಕೆ ಅಥವಾ ಸಂಘಟಿಸಬೇಕೆ? ಬಸವಣ್ಣನವರ ಸಮಾನತೆ, ಸಂವಾದ ಮತ್ತು ಸಾಮಾಜಿಕ ಹೊಣೆಗಾರಿಕೆಯ ಸಂದೇಶವನ್ನು ಪಾಲಿಸಬೇಡವೇ? ವಿರೋಧವು ಹಿಂದೂ ಸಮಾಜದ ಸಂಘಟನೆ ಮತ್ತು ರಚನಾತ್ಮಕ ಸಂವಾದದತ್ತ ಕೊಂಡೊಯ್ಯಲಿ.