Janamejaya Umarji Column: ಗಣಾಚಾರದ ಅರ್ಥ ಅಪಾರ್ಥ
ಚೆನ್ನಬಸವಣ್ಣನವರು ಇನ್ನೊಂದು ವಚನದಲ್ಲಿ ‘ಅಷ್ಟಾವರಂಣಗಳ ಮೇಲೆ ಅನ್ಯರಿಂದ ಕುಂದು ನಿಂದೆಗಳು ಬಂದು ತಟ್ಟಿದಲ್ಲಿ ಗಣಸಮೂಹವನೊಡಗೂಡಿ ಆ ಸ್ಥಲವ ತ್ಯಜಿಸುವುದೆ ಗಣಾಚಾರ ವೆಂಬೆನಯ್ಯಾ’ ಎಂದು ಇದೆ. ಈ ಎಲ್ಲ ವಚನಗಳನ್ನು ನೋಡಿದಾಗ ಗಣಾಚಾರವೆಂದರೆ ಶಿವ ಮತ್ತು ಶಿವಾಚಾರದ ಬಗೆಗಿನ ಅಚಲ ನಿಷ್ಠೆ ಎಂದು ಅರ್ಥ ಮಾಡಿಕೊಳ್ಳಬಹುದು.
-
ನೇರ ನುಡಿ
ಜನಮೇಜಯ ಉಮರ್ಜಿ
ಕೆಲ ದಿನಗಳ ಹಿಂದೆ ವಿಶ್ವವಾಣಿಯಲ್ಲಿ ‘ಬಸವಣ್ಣನವರ ಸಪ್ತಶೀಲ : ಅಸಹಿಷ್ಣುತೆಯೇ ಗಣಾಚಾರವೇ?’ ಎಂಬ ಲೇಖನ ಪ್ರಕಟವಾಗಿತ್ತು. ಲೇಖನಕ್ಕೆ ತುಂಬ ಪ್ರತಿಕ್ರಿಯೆಗಳು ಬಂದವು. ನಾಡಿನ ಹಲವು ವಿದ್ವಾಂಸರು ಕರೆ ಮಾಡಿ ಬೆನ್ನು ತಟ್ಟಿದರು. ಇದನ್ನು ಇನ್ನೂ ವಿಸ್ತರಿಸಿ ಬರೆಯಲು ಹೇಳಿದರು. ಹೇಗೆ ಶಿವಶರಣರು ಹೇಳಿದ ಗಣಾಚಾರದ ಅಪಾರ್ಥ ವಾಗುತ್ತಿದೆಯಲ್ಲ ಎಂದು ಆತಂಕ ವ್ಯಕ್ತಪಡಿಸಿದರು. ಹೀಗಾಗಿ ಮತ್ತೆ ಬರೆಯಬೇಕಾಗಿದೆ.
ಲಿಂಗಾಯತ ಪರಂಪರೆಯ ಪಂಚಾಚಾರಗಳಲ್ಲಿ ಒಂದಾದ ಗಣಾಚಾರವನ್ನು ಆಯ್ದು ಕೊಂಡು ತಪ್ಪಾಗಿ ಅರ್ಥೈಸಲಾಗುತ್ತಿರುವುದು ಸತ್ಯ. ಕೆಲವು ವಲಯಗಳಲ್ಲಿ ಗಣಾಚಾರ ಎಂದರೆ ಕೋಪ, ವಿರುದ್ಧ ಪ್ರತಿಕ್ರಿಯೆ, ಭಂಜನೆ, ನಿಂದನೆ ಅಥವಾ ಆಕ್ರೋಶಪೂರ್ಣ ಹೋರಾಟ ಎಂಬ ಅಲ್ಲದ ಅರ್ಥವನ್ನು ಕೊಡಲಾಗುತ್ತಿದೆ. ಆದರೆ ವಚನ ಪರಂಪರೆಯಲ್ಲಿ ಗಣಾಚಾರದ ಅರ್ಥ ಅದಕ್ಕಿಂತ ಸೂಕ್ಷ್ಮವೂ ವಿಸ್ತಾರವೂ ಆಗಿದೆ.
ಚೆನ್ನಬಸವಣ್ಣನವರ ವಚನದಲ್ಲಿ, ಶಿವಚಾರದ ನಿಂದೆಯ ಕೇಳದಿಹುದೆ ಗಣಾಚಾರ ಎಂಬ ವ್ಯಾಖ್ಯಾನ ದೊರೆಯುತ್ತದೆ. ಅಂದರೆ ಗಣಾಚಾರ ಎಂದರೆ ಶಿವನಿಂದೆ ಮಾಡದೇ ಇರುವುದು, ಶಿವನಿಂದೆ ಕೇಳದೇ ಇರುವುದು, ಶಿವನಿಂದೆ ಎದುರಾದಾಗ ಮೌನವಾಗಿ ಸಮರ್ಥಿಸದೇ ನಿಲ್ಲುವುದು.
ಅಕ್ಕ ಮಹಾದೇವಿಯವರು ‘ಗುರು ಲಿಂಗ ಜಂಗಮ ಪಾದೋದಕ ಪ್ರಸಾದ ವಿಭೂತಿ ರುದ್ರಾಕ್ಷಿ ಮಂತ್ರ ಗಳೆಂಬಷ್ಟಾವರಣಂಗಳು ತನ್ನ ಪ್ರಾಣಸ್ವರೂಪವಾಗಿ ಅವುಗಳ ನಿಂದೆ ಯನ್ನು ಕೇಳಿ ಸೈರಿಸದೆ ಶಿಕ್ಷಿಸುವೆನೆಂಬ ನಿಷ್ಠೆಗೊಂಡುದೇ ಗಣಾಚಾರ ನೋಡಯ್ಯ’ ಎಂದು ಹೇಳುತ್ತಾರೆ.
‘ಸದ್ಭಕ್ತಿ-ಸಮ್ಯಕ್ ಜ್ಞಾನ-ವೈರಾಗ್ಯ-ಷಟ್ಸ್ಥಲಮಾರ್ಗವ ಹಿಡಿದು, ನಿಜಾಚರಣೆಯಲ್ಲಿ ಆಚರಿಸುವರೆ ಶಿವಶಕ್ತಿ, ಶಿವಭಕ್ತ, ಶಿವಜಂಗಮವಲ್ಲದೆ, ಉಳಿದ ವೇಷಧಾರಿಗಳೆಲ್ಲ ಎನ್ನೊಡೆಯ ಪ್ರಮಥಗಣಾಚಾರಕ್ಕೆ ಹೊರಗೆಂದಾತನಂಬಿಗರ ಚೌಡಯ್ಯನು’ ಎಂದು ಅಂಬಿಗರ ಚೌಡಯ್ಯನವರು ಹೇಳುತ್ತಾರೆ.
ಚೆನ್ನಬಸವಣ್ಣನವರು ಇನ್ನೊಂದು ವಚನದಲ್ಲಿ ‘ಅಷ್ಟಾವರಂಣಗಳ ಮೇಲೆ ಅನ್ಯರಿಂದ ಕುಂದು ನಿಂದೆಗಳು ಬಂದು ತಟ್ಟಿದಲ್ಲಿ ಗಣಸಮೂಹವನೊಡಗೂಡಿ ಆ ಸ್ಥಲವ ತ್ಯಜಿಸು ವುದೆ ಗಣಾಚಾರವೆಂಬೆನಯ್ಯಾ’ ಎಂದು ಇದೆ. ಈ ಎಲ್ಲ ವಚನಗಳನ್ನು ನೋಡಿದಾಗ ಗಣಾಚಾರವೆಂದರೆ ಶಿವ ಮತ್ತು ಶಿವಾಚಾರದ ಬಗೆಗಿನ ಅಚಲ ನಿಷ್ಠೆ ಎಂದು ಅರ್ಥ ಮಾಡಿಕೊಳ್ಳಬಹುದು.
ಶಿವನಿಂದೆಯನ್ನು ಮೌನವಾಗಿ ಸಮರ್ಥಿಸದೇ ನಿಲ್ಲುವುದು. ಇಲ್ಲಿ ನಿಲ್ಲುವುದು ಎಂದರೆ ತತ್ವಕ್ಕೆ ಬದ್ಧವಾಗಿ ನಿಲ್ಲುವುದು. ಅಷ್ಟಾವರಣಗಳನ್ನು ತನ್ನ ಪ್ರಾಣಸ್ವರೂಪವೆಂದು ತಿಳಿಯಬೇಕು ಮತ್ತು ಅವುಗಳ ನಿಂದೆಯನ್ನು ಸಹಿಸುವುದಿಲ್ಲ ಎಂಬ ನಿಷ್ಠೆಯಲ್ಲಿ ಇರಬೇಕು. ಸದ್ಭಕ್ತಿ, ಸಮ್ಯಕ್‌ಜ್ಞಾನ, ವೈರಾಗ್ಯ ಮತ್ತು ಷಟ್ಸ್ಥಲ ಮಾರ್ಗದಲ್ಲಿ ನಡೆಯು ವವರು ಶಿವಭಕ್ತರು.
ಕೇವಲ ವೇಷ ತೊಟ್ಟವರಿಗಿಂತ ನಿಜವಾಗಿ ಆಚರಿಸುವರು ಮುಖ್ಯ. ಅಂದರೆ ಗಣಾಚಾರವು ಹೊರಗಿನ ಬದಲು ಒಳಗಿನ ಸತ್ಯನಿಷ್ಠೆಯಲ್ಲಿ ನೆಲೆಯೂರಿದೆ. ಗಣಾಚಾರ ಎಂದರೆ ಜಗಳ ವಾಡುವುದು ಅಲ್ಲ; ನಿಂದೆಯ ವಾತಾವರಣದಲ್ಲಿ ಪಾಲುಗಾರರಾಗದೆ, ಅಸಮ್ಮತಿ ಯನ್ನು ಸಾತ್ವಿಕವಾಗಿ ತಾತ್ವಿಕವಾಗಿ ವ್ಯಕ್ತಪಡಿಸುವುದನ್ನು ಅದು ಹೇಳುತ್ತದೆ.
ಪಂಚಾಚಾರಗಳನ್ನು ಸನಾತನ ಪಂಚಭೂತಗಳಲ್ಲಿನ ಜಲ ತತ್ವಕ್ಕೆ ಹೋಲಿಸಲಾಗಿದೆ. ‘ಲಿಂಗಾರ್ಪಿತವಲ್ಲದೆ ಉದಕವ ಮುಕ್ಕುಳಿಸಿದೆನಾದರೆ ಸನು ನಿಮ್ಮ ಗಣಾಚಾರಕ್ಕಯ್ಯಾ’ ಇದು ಬಸವಣ್ಣನವರ ಮಾತು. ಈ ವಚನ ಪೂರ್ತಿ ಓದಿದಾಗ ಇದು ಅರ್ಥವಾಗುತ್ತದೆ.
ದೇಶಿಕೇಂದ್ರ ಸಂಗನಬಸವಯ್ಯನವರ ‘ಅಪ್ಪುವಿನಂಶವನಳಿದು ಚಿದಪ್ಪುವೇ ಅಂಗವಾಗಿ ಗಣಾಚಾರ ನೆಲೆಸಿದುದೇ ಗುರುಲಿಂಗಸಂಬಂಧ’ ಎಂಬ ಸಾಲು ಇದನ್ನು ಪುಷ್ಟೀಕರಿಸುತ್ತದೆ. ‘ಮಡಿವಾಳಯ್ಯ ತನ್ನ ದೇಹವ ಕೊಟ್ಟು, ಗಣಾಚಾರದ ಶಕ್ತಿ ಪ್ರಸಾದವ ಪಡೆದ’ ಎಂಬಲ್ಲಿಗೆ ಮಾಚಿದೇವರು ಶಿವತತ್ವ ನಿಷ್ಠರಲ್ಲಿ ಶ್ರೇಷ್ಠರು ಎಂದಾಗುತ್ತದೆ.
ಆದರೆ ಇದಕ್ಕೆ ವ್ಯತಿರಿಕ್ತವಾಗಿ ಗಣಾಚಾರ ಕೆಲವರಿಂದ ವ್ಯಾಖ್ಯಾನವಾಗುತ್ತಿದೆ. ಉದಾ ಹರಣೆಗೆ ಗಣಾಚಾರವೆಂದರೆ ಶಿವಧರ್ಮದ ಸಿದ್ಧಾಂತಗಳ ಅವಹೇಳನ ಮಾಡುವವರನ್ನು ಕೊಲ್ಲಬೇಕು; ಅದೂ ಸಾಧ್ಯವಾಗದಿದ್ದರೆ ಆ ಅವಹೇಳನ ಕೇಳುವುದರ ಬದಲು ಆತ್ಮಹತ್ಯೆ ಮಾಡಿಕೊಳ್ಳಬೇಕು. ಅಥವಾ ಅವಹೇಳನ ಮಾಡುವವರು ಇರುವ ಸ್ಥಳದಲ್ಲಿ ನಿಲ್ಲದೆ, ಶಿವಭಕ್ತರು ಗಣಸಮೇತ ಮತ್ತೊಂದು ಕಡೆಗೆ ಹೋಗಬೇಕು. (ಉಲ್ಲೇಖ: https://lingayatreligion.com /).
ಇದೇ ಅರ್ಥದ ಮಾತುಗಳು ವಿಜಯಪುರದ ಸಿಂದಗಿಯಲ್ಲಿ, ಬೆಳವಿಯ ಸ್ವಾಮಿಗಳ ಬಾಯಲ್ಲಿ ಬಂದಿವೆ. ಇನ್ನೊಂದು ಕಡೆ ಗಣವನ್ನು ಸಮಾಜ ಎಂತಲೂ ಗಣಾಚಾರವನ್ನು ಸಮಾಜದೊಂದಿಗೆ ನಾವು ನಡೆದುಕೊಳ್ಳುವ ರೀತಿ ಎಂತಲೂ ವ್ಯಾಖ್ಯಾನ ಮಾಡಲಾಗುತ್ತಿದೆ. ವಿಶ್ವದ ಎಲ್ಲ ಧಾರ್ಮಿಕ ಸಾಂಸ್ಕೃತಿಕ, ಸಾಮಾಜಿಕ, ಸಾಹಿತ್ಯಕ ಅಂಶಗಳು ಆಯಾ ಕಾಲದ ಕಟ್ಟಳೆಗೆ, ಆಚರಣೆಗೆ, ವ್ಯವಸ್ಥೆಗೆ ಸೀಮಿತವಾಗಿರುತ್ತವೆ. ಆ ಕಟ್ಟಳೆಗಳಿಂದ, ವ್ಯವಸ್ಥೆಯಲ್ಲಿ ರುವ ದೋಷಗಳಿಂದ ಸಿಡಿದೇಳುವುದೂ ಕೂಡಾ ಕಾಲಕಾಲಕ್ಕೆ ನಡೆದುಕೊಂಡಿರುವ ಐತಿಹಾಸಿಕ ಸತ್ಯ.
ಹಾಗೆಯೇ 12ನೇ ಶತಮಾನದ ಶರಣರ ಗಣಾಚಾರ ಕೂಡಾ ಇಂತಹ ಒಂದು ಪ್ರತಿಕ್ರಿಯೆ ಎಂತಲೂ ವ್ಯಾಖ್ಯಾನ ನಡೆದಿದೆ. ಸ್ಥಾಪಿತ ಸಾಮಾಜಿಕ ವ್ಯವಸ್ಥೆಯ ವಿರುದ್ಧ ಬಂಡೇಳು ವುದೇ ಗಣಾಚಾರ ಎಂದು ಸಾಹಿತ್ಯದಲ್ಲಿ ಬರೆಯಲಾಗುತ್ತಿದೆ. ಈ ಕುರಿತು ಕಳೆದ 30 ವರ್ಷ ಗಳಲ್ಲಿ ರಚಿತವಾದ ಒಂದೇ ಸೈದ್ಧಾಂತಿಕ ಒಲವಿನ ಸಾಹಿತ್ಯ ನೋಡುತ್ತ ಹೋದರೆ ಅಚ್ಚರಿಗಳು ಕಾಯ್ದಿವೆ.
ಉದಾಹರಣೆಗೆ ಗಣಾಚಾರವೆಂಬುದು ಭಕ್ತರಲ್ಲದವರು, ಒಡೆಯರು, ಪ್ರಭುತ್ವವಾದಿಗಳು ಹಾಗೂ ಸನಾತನಿಗಳ ದಬ್ಬಾಳಿಕೆಗೆ ಶೋಷಣೆಯ ಅನ್ಯಾಯದ ವಿರುದ್ಧವಾಗಿ ಎತ್ತುವ ನ್ಯಾಯದ ಧ್ವನಿಯಾಗಿದೆ. ಈ ಎಲ್ಲ ವಾಕ್ಯಗಳು ಪ್ರಕಟಿತ ಸಾಹಿತ್ಯದಲ್ಲಿ ಬಂದವೇ ಆಗಿವೆ, ಯಾರು ಎಲ್ಲಿ ಬರೆದಿದ್ದಾರೆ ಎಂದು ಹೆಸರು ಹೇಳುವುದು ಬೇಡ.
ಅಸಲಿಗೆ ಗಣಾಚಾರವು ಶಿವ ಭಕ್ತಿ, ಧರ್ಮನಿಷ್ಠೆ, ನೈತಿಕ ಜವಾಬ್ದಾರಿ ಮತ್ತು ಸಾತ್ವಿಕ ಪ್ರತಿರೋಧದ ಆಚಾರ. ಅದು ಮೊದಲಿಗೆ ಅಂತರಂಗದ ಶಿಸ್ತು, ನಂತರ ಬಾಹ್ಯ ಪ್ರತಿಕ್ರಿಯೆ. ಆದರೆ ಅನ್ಯರು ಪಂಚಾಚಾರದಲ್ಲಿ ಗಣಾಚಾರವನ್ನೇ ಅಪವ್ಯಾಖ್ಯಾನಕ್ಕೆ ಆಯ್ಕೆ ಮಾಡಿ ಕೊಳ್ಳುವಲ್ಲಿ ಕಾರಣವಿದೆ. ಈ ರೀತಿ ವ್ಯಾಖ್ಯಾನಗಳ ಮೂಲ ಸಾಂಸ್ಕೃತಿಕ ಮಾರ್ಕ್ಸ್ ವಾದ.
ಇದು ಯಾವಾಗಲೂ ಜನರನ್ನು ಸ್ಥಾಪಿತ ಸಂಸ್ಕೃತಿಯ ವಿರುದ್ಧ ಎತ್ತಿಕಟ್ಟಲು ಪ್ರಯತ್ನಿಸು ತ್ತದೆ. ಅಷ್ಟೇ ಅಲ್ಲ ಅದನ್ನು ಸಂಪೂರ್ಣವಾಗಿ ನಾಶಮಾಡಲು ಬಯಸುತ್ತದೆ. ಹೀಗಾಗಿ ಕಮ್ಯುನಿ ಪ್ರಭಾವಿತ ವ್ಯಾಖ್ಯಾನಗಳಲ್ಲಿ ಎಲ್ಲವನ್ನೂ ಸಾಮಾಜಿಕ ಚೌಕಟ್ಟಿನಲ್ಲಿ ನೋಡ ಲಾಗುತ್ತಿದೆ. ಗಣವೆಂದರೆ ಸಮಾಜ, ಸಮಾಜವೆಂದರೆ ವರ್ಗಸಂಘರ್ಷದ ಕ್ಷೇತ್ರ. ಹೀಗಾಗಿ ಅಲ್ಲಿ ಧರ್ಮ, ಸಂಸ್ಕೃತಿ, ಪರಂಪರೆ ಇವೆಲ್ಲವೂ ರಾಜಕೀಯ ಸಂಘರ್ಷದ ಸಾಧನಗಳನ್ನಾಗಿ ಮಾಡಲಾಗುತ್ತದೆ.
ಇದೇ ಮನೋಭಾವ ಲಿಂಗಾಯತ ಚಿಂತನೆಗೆ ಒಳನುಗ್ಗಿದಾಗ, ಗಣಾಚಾರವು ತತ್ವ ನಿಷ್ಠೆ ಎಂಬ ಅರ್ಥದಿಂದ ಸರಿದು ಹೋರಾಟ, ಪ್ರತಿರೋಧ, ಉಗ್ರ ಪ್ರತಿಕ್ರಿಯೆ ಎಂಬ ಅರ್ಥಗಳಿಗೆ ಸೀಮಿತವಾಗುತ್ತದೆ. ಹೀಗಾಗಿ ಶಿವನಿಷ್ಠೆಯ ಗಣಾಚಾರಿಗಳನ್ನು ಕ್ರಾಂತಿಯ ಕಾವಲುಗಾರ ರನ್ನಾಗಿ ಮಾಡುವ ಪ್ರಯತ್ನಗಳು ನಡೆಯುತ್ತಿವೆ.
ಇವರ ಅರ್ಥದಲ್ಲಿ ಗಣಾಚಾರಿಯು ಶತ್ರು ಎಂದು ಗುರುತಿಸಿದವರ ವಿರುದ್ಧ ಸದಾ ಸಂಘರ್ಷಕ್ಕೆ ಸಜ್ಜಾಗಿರುವ ವ್ಯಕ್ತಿ ಎನಿಸಿಕೊಳ್ಳುತ್ತಾನೆ. ಈ ಪ್ರವೃತ್ತಿ ಪುಸ್ತಕಗಳನ್ನು, ಸ್ವಾಮಿಗಳನ್ನು, ಸಮಾವೇಶಗಳನ್ನು ಬ್ಯಾನ್ ಮಾಡಿಸುವಲ್ಲಿಗೆ ಬಂದು ನಿಲ್ಲುತ್ತದೆ| ಈ ವ್ಯಾಖ್ಯಾನಗಳಿಗೂ ಒಂದೇ ಒಂದು ವಚನದ ಸಾಕ್ಷಿ ಇಲ್ಲ. ಎಲ್ಲ ಊರಾನ್ವಯಗಳೇ.
ಕಮ್ಯೂನಿಷ್ಟರ ಜೊತೆ ಜೊತೆಗೆ ಗಣಾಚಾರವನ್ನು ಜಗತ್ತಿನ ಇತರ ಧಾರ್ಮಿಕ-ರಾಜಕೀಯ ಪರಿಕಲ್ಪನೆಗಳೊಂದಿಗೆ ಹೋಲಿಸುವ ಪ್ರಯತ್ನಗಳು ಕಾಣಿಸುತ್ತವೆ. ವಿಶೇಷವಾಗಿ ಕೆಲವು ಲೇಖಕರು, ಭಾಷಣಕಾರರು ಮತ್ತು ಚಳವಳಿ ವಲಯಗಳು ಗಣಾಚಾರವನ್ನು ಕೇವಲ ತತ್ವನಿಷ್ಠ ಭಕ್ತನಾಗಿ ಅಲ್ಲ, ಧರ್ಮಕ್ಕಾಗಿ ಹೋರಾಡುವ ಯೋಧನಾಗಿ ರೂಪಿಸಲು ಯತ್ನಿಸುತ್ತಿವೆ. ಈ ಪ್ರವೃತ್ತಿಯಲ್ಲಿ ಸೆಮಿಟಿಕ್ ಧರ್ಮಗಳಲ್ಲಿ ಕಂಡುಬರುವ ಕಲ್ಪನೆಗಳನ್ನು ಉದಾಹರಣೆಯಾಗಿ ತೆಗೆದುಕೊಳ್ಳಲಾಗುತ್ತದೆ.
ಅಂದರೆ, ತನ್ನ ಧರ್ಮದ ರಕ್ಷಣೆಗೆ ಸದಾ ಸಂಘರ್ಷಕ್ಕೆ ಸಜ್ಜಾಗಿರುವ, ವಿರೋಧಿಯನ್ನು ಶತ್ರುವೆಂದು ಗುರುತಿಸುವ, ಹೋರಾಟವನ್ನೇ ಧರ್ಮದ ಮುಖ್ಯ ಅಭಿವ್ಯಕ್ತಿಯೆಂದು ನೋಡುವ ರೂಪಕವನ್ನು ಗಣಾಚಾರದ ಮೇಲೆ ಅಂಟಿಸಲಾಗುತ್ತಿದೆ. ಈ ಅಪಾರ್ಥ ಗಳೆಲ್ಲವೂ ವಚನಗಳ ವ್ಯಾಖ್ಯಾನವಲ್ಲ. ಈ ಅಪವ್ಯಾಖ್ಯಾನಗಳು ಅಧ್ಯಾತ್ಮವನ್ನು ಹೊರಗಿಟ್ಟ, ರಾಜಕೀಯ ಭಾಷೆಯ ರೂಪಕಗಳು ಮಾತ್ರ.
ಲಿಂಗಾಯತ ತತ್ವದಲ್ಲಿ ಗಣಾಚಾರವೆಂದರೆ ಭಕ್ತಿಯ ಶಿಸ್ತಿನ ಆಚಾರ. ತತ್ವದ ಮೌಲ್ಯಗಳನ್ನು ಸಾತ್ವಿಕವಾಗಿ ಉಳಿಸುವುದು. ಈ ಅಪಾಯವನ್ನು ಅರಿಯದೇ ಹೋದರೆ ಗಣಾಚಾರದ ಅರ್ಥವೇ ತಲೆಕೆಳಗಾಗುತ್ತದೆ. ಹೋರಾಟಗಾರ ಎಂಬ ರಾಜಕೀಯ ರೂಪಕದಲ್ಲಿ ಮೊದಲಿಗೆ ಶತ್ರು ಬೇಕಾಗುತ್ತದೆ; ಸಂಘರ್ಷ ಬೇಕಾಗುತ್ತದೆ; ಗುರುತಿನ ಆಧಾರದ ವಿಭಜನೆ ಬೇಕಾಗುತ್ತದೆ. ಆದರೆ ವಚನಗಳ ಗಣಾಚಾರದಲ್ಲಿ ಬೇಕಾಗಿರುವುದು ನಿಷ್ಠೆ, ಸಂಯಮ, ಆತ್ಮಪರಿಷ್ಕಾರ ಮತ್ತು ಧರ್ಮಬದ್ಧತೆ. ಅಲ್ಲಿ ಪ್ರತಿಕ್ರಿಯೆ ಇದ್ದರೂ ಅದು ನಿಯಂತ್ರಿತ; ಅಲ್ಲಿ ವಿರೋಧ ಇದ್ದರೂ ಅದು ತತ್ವಾಧಾರಿತ; ಅಲ್ಲಿ ಧೈರ್ಯ ಇದ್ದರೂ ಅದು ಅಹಂಕಾರದ ಪ್ರದರ್ಶನ ವಲ್ಲ.
ಅದೇ ಕಾರಣಕ್ಕೆ ಗಣಾಚಾರವನ್ನು ಅರ್ಥೈಸುವಾಗ ಕೆಲವು ಮೂಲಭೂತ ವ್ಯತ್ಯಾಸಗಳನ್ನು ಮರೆಯಬಾರದು. ಯಾವ ಅಧಾರ್ಮಿಕ ಸಿದ್ಧಾಂತಗಳ ಕೆಂಪು ಕನ್ನಡಕದಿಂದ ನೋಡ ಬಾರದು. ವಿದೇಶಿ ರಿಲಿಜನ್ನುಗಳ ಹೋರಾಟದ ರೂಪಕಗಳಲ್ಲಿ ನೋಡದೇ, ಶಿವಶರಣರ ವಚನಗಳ ಬೆಳಕಿನಲ್ಲಿ ನೋಡಬೇಕು. ಆಗ ನಿಜವಾದ ಗಣಾಚಾರವೆಂದರೆ ಏನು ಎಂಬುದು ಸ್ಪಷ್ಟವಾಗುತ್ತದೆ.
(ಲೇಖಕರು ಸಂಸ್ಕೃತಿ ಚಿಂತಕರು)