Prakash Shesharaghavachar Column: 'ವಕ್ಫ್ ತಿದ್ದುಪಡಿ ಕಾಯಿದೆ'- 2025 ಏಕೆ ಬೇಕಿತ್ತು ?
ಕಳೆದ 6 ತಿಂಗಳಿನಿಂದ ಇದರ ವಿರುದ್ಧ ಹೋರಾಟ ಮಾಡುತ್ತಿದ್ದವರಿಗೆ ಈಗ ನೆಮ್ಮದಿ ದೊರೆತಿದೆ. ತಮಿಳುನಾಡಿನ ಇಡೀ ತಿರುಚೆಂದೂರೈ ಗ್ರಾಮವನ್ನು ವಕ್ಫ್ ಆಸ್ತಿಯೆಂದು ಘೋಷಿಸಲಾಗಿತ್ತು; ಗ್ರಾಮದ 480 ಎಕರೆ ಜಮೀನು ಮತ್ತು 1500 ವರ್ಷದ ಇತಿಹಾಸವಿರುವ ಚಂದ್ರಶೇಖರ ಸ್ವಾಮಿ ದೇವಾಲಯವೂ ವಕ್ಫ್ ಮಂಡಳಿಗೆ ಸೇರಿದ ಆಸ್ತಿಯೆಂದು ನಿರ್ಣಯವಾಗಿತ್ತು.

ಅಂಕಣಕಾರ ಪ್ರಕಾಶ ಶೇಷರಾಘವಾಚಾರ್

ಪ್ರಕಾಶಪಥ
ಪ್ರಕಾಶ ಶೇಷರಾಘವಾಚಾರ್
ವಕ್ಫ್ ತಿದ್ದುಪಡಿ ವಿಧೇಯಕವು ಸಂಸತ್ತಿನ ಉಭಯ ಸದನಗಳಲ್ಲೂ ಅನುಮೋದನೆಯಾದ ನಂತರ, ಕೇರಳದ ಎರ್ನಾಕುಲಂನ ಮುನಾಂಬಾಮ್ ಗ್ರಾಮದ ಜನ ಸಂಭ್ರಮಾಚರಣೆ ಮಾಡಿದರು. ಕಾರಣ ಅದಕ್ಕೂ ಮುನ್ನ, 600 ಕ್ರಿಶ್ಚಿಯನ್ ಕುಟುಂಬಗಳಿಗೆ ಸೇರಿದ್ದ 400 ಎಕರೆ ಜಮೀನು ವಕ್ಫ್ ಆಸ್ತಿ ಯೆಂದು ಘೋಷಿಸಲ್ಪಟ್ಟಿತ್ತು. ಕಳೆದ 6 ತಿಂಗಳಿನಿಂದ ಇದರ ವಿರುದ್ಧ ಹೋರಾಟ ಮಾಡುತ್ತಿದ್ದವ ರಿಗೆ ಈಗ ನೆಮ್ಮದಿ ದೊರೆತಿದೆ. ತಮಿಳುನಾಡಿನ ಇಡೀ ತಿರುಚೆಂದೂರೈ ಗ್ರಾಮವನ್ನು ವಕ್ಫ್ ಆಸ್ತಿ ಯೆಂದು ಘೋಷಿಸಲಾಗಿತ್ತು; ಗ್ರಾಮದ 480 ಎಕರೆ ಜಮೀನು ಮತ್ತು 1500 ವರ್ಷದ ಇತಿಹಾಸ ವಿರುವ ಚಂದ್ರಶೇಖರ ಸ್ವಾಮಿ ದೇವಾಲಯವೂ ವಕ್ಫ್ ಮಂಡಳಿಗೆ ಸೇರಿದ ಆಸ್ತಿಯೆಂದು ನಿರ್ಣಯ ವಾಗಿತ್ತು.
ಸೂರತ್‌ನ ಮುನ್ಸಿಪಲ್ ಕಾರ್ಪೊರೇಷನ್ ಮುಖ್ಯ ಕಚೇರಿಯು ವಕ್ಫ್ ಆಸ್ತಿಯೆಂದು ಘೋಷಿಸ ಲ್ಪಟ್ಟಿತ್ತು. ಬಿಹಾರದ ಇಡೀ ಗೋವಿಂದಪುರ ಗ್ರಾಮವನ್ನು ವಕ್ಫ್ ಆಸ್ತಿಯೆಂದು ವಕ್ಫ್ ಬೋರ್ಡ್ ತೀರ್ಮಾನಿಸಿತ್ತು. ಕರ್ನಾಟಕದ ವಿಜಯಪುರದಲ್ಲಿ ತಲೆತಲಾಂತರದಿಂದ ಅನುಭವಿಸುತ್ತಿದ್ದ 1500 ಎಕರೆ ಜಮೀನು ವಕ್ಫ್ ಆಸ್ತಿಯೆಂದು ರೈತರಿಗೆ ನೋಟಿಸ್ ನೀಡಲಾಗಿತ್ತು.
ಹಾವೇರಿಯಲ್ಲಿ ರೈತರಿಗೆ ಸೇರಿದ ಜಮೀನನ್ನು ವಕ್ಫ್ ಸ್ವತ್ತು ಎಂದು ಘೋಷಿಸಲು ಅರ್ಜಿ ಸಲ್ಲಿಸಲಾಗಿದೆ ಎಂಬ ಸುದ್ದಿ ಹರಿದಾಡಿ, ಎರಡು ಗುಂಪುಗಳ ನಡುವಿನ ಹೊಡೆದಾಟಕ್ಕೆ ಅದು ಕಾರಣವಾಯಿತು. 2014ರ ಚುನಾವಣೆಯ ಸೋಲಿನ ಮುನ್ಸೂಚನೆಯಿದ್ದ ಯುಪಿಎ ಸರಕಾರವು ಅಲ್ಪಸಂಖ್ಯಾತರ ಮತಗಳನ್ನು ಕ್ರೋಢೀಕರಿಸಲೆಂದು 2013ರಲ್ಲಿ ವಕ್ಫ್ ಕಾಯಿದೆಗೆ ತಿದ್ದುಪಡಿ ತಂದಿತು. ಈ ತಿದ್ದುಪಡಿಯಲ್ಲಿನ ಸೆಕ್ಷನ್ 40ರ ಪ್ರಕಾರ ಯಾವುದೇ ಆಸ್ತಿಯನ್ನು ವಕ್ಫ್ ಸ್ವತ್ತು ಎಂದು ಏಕಪಕ್ಷೀಯವಾಗಿ ಘೋಷಿಸಿದರೆ ಅದು ಎಂದೆಂದಿಗೂ ವಕ್ಫ್ ಆಸ್ತಿಯೆಂದೇ ಪರಿಗಣಿತವಾಗುತ್ತಿತ್ತು.
ಇದನ್ನೂ ಓದಿ: Prakash Shesharaghavachar Column: ಬಿಬಿಎಂಪಿ ಚುನಾವಣೆಯ ಅಸಲಿ ಕಹಾನಿ
ಯುಪಿಎ ಅವಧಿಯಲ್ಲಿ ನೀಡಿದ್ದ ಕಾನೂನಿನ ಬಲದಿಂದಾಗಿ ಕಂಡ ಕಂಡ ಆಸ್ತಿಯನ್ನೆಲ್ಲಾ, ಯಾವುದೇ ದಾಖಲೆ ಇಲ್ಲದಿದ್ದರೂ ವಕ್ಫ್ ಆಸ್ತಿಯೆಂದು ಘೋಷಿಸಿಕೊಂಡು ಜಮೀನಿನ ಮಾಲೀಕ ರನ್ನು ನಿಸ್ಸಹಾಯಕರನ್ನಾಗಿ ಮಾಡಲಾಗುತ್ತಿತ್ತು. ಹೀಗೆ ವಕ್ಫ್ ಆಸ್ತಿಯೆಂದು ಘೋಷಿತವಾದ ಮೇಲೆ ಅದರ ಮಾಲೀಕರು ವಕ್ಫ್ ಟ್ರಿಬ್ಯುನಲ್‌ನಲ್ಲಿ ಅರ್ಜಿ ಸಲ್ಲಿಸಬೇಕಿತ್ತು.
ಟ್ರಿಬ್ಯುನಲ್‌ನಲ್ಲಿ ಅರ್ಜಿ ವಜಾ ಮಾಡಿದರೆ ಯಾವುದೇ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲು ಅವಕಾಶವಿಲ್ಲದೆ ಆ ಆಸ್ತಿಯು ‘ಕೃಷ್ಣಾರ್ಪಣ’ವಾಗುತ್ತಿತ್ತು. 2013ರ ತಿದ್ದುಪಡಿಯಲ್ಲಿ ನೀಡಿದ್ದ ಅಪರಿಮಿತ ಅಧಿಕಾರದ ದುರ್ಬಳಕೆಯ ಫಲವಾಗಿ ಸರಕಾರದ ಆಸ್ತಿಗಳನ್ನೇ ವಕ್ಫ್ ಆಸ್ತಿಯೆಂದು ಮಂಡಳಿಯು ವಶಪಡಿಸಿಕೊಳ್ಳುತ್ತಿತ್ತು. ಕಾನೂನಿನ ದೋಷಗಳನ್ನು ಸರಿಪಡಿಸುವುದು ಅತ್ಯವಶ್ಯಕ ವಾಗಿತ್ತು. ಇದನ್ನು ಮನಗಂಡ ಕೇಂದ್ರ ಸರಕಾರವು ವಕ್ಫ್ ಕಾಯಿದೆಗೆ ತಿದ್ದುಪಡಿ ತರಲು ಮುಂದಾಯಿತು. ಹಿಂದಿನ ತಿದ್ದುಪಡಿಯ ದೋಷ ಮತ್ತು ಕೊರತೆಯನ್ನು ನೀಗಿಸುವ ಹಲವಾರು ಬದಲಾವಣೆಗಳನ್ನು ಈಗ ಕೈಗೊಳ್ಳಲಾಗಿದೆ.
ಅವೆಂದರೆ:
ವಕ್ಫ್ ಆಸ್ತಿಯೆಂದು ನಿರ್ಧರಿಸುವ ಅಧಿಕಾರವನ್ನು ವಕ್ಫ್ ಮಂಡಳಿಯಿಂದ ಹಿಂದಕ್ಕೆ ಪಡೆದು, ಜಿಲ್ಲಾಧಿಕಾರಿ ಮೇಲ್ಪಟ್ಟ ಅಧಿಕಾರಿಗೆ ಅದರ ನಿರ್ಧಾರದ ಅಧಿಕಾರವನ್ನು ನೀಡಲಾಗಿದೆ.
ಒಂದು ಲಕ್ಷ ರುಪಾಯಿಗಿಂತ ಹೆಚ್ಚು ಆದಾಯವಿರುವ ವಕ್ಫ್ ಮಂಡಳಿಯು ಸರಕಾರಿ ಲೆಕ್ಕ ಪರಿಶೋಧಕರ ಪರಿಶೋಧನೆಗೆ ಒಳಪಡುತ್ತದೆ.
ವಕ್ಫ್ ಆಸ್ತಿಯೆಂದು ಮಂಡಳಿಯು ಮಾಡಿದ್ದ ತೀರ್ಮಾನವನ್ನು ಟ್ರಿಬ್ಯುನಲ್ ಅಲ್ಲದೆ ಹೈಕೋರ್ಟ್ ನಲ್ಲೂ ಪ್ರಶ್ನಿಸಬಹುದಾಗಿದೆ.
ಇದಲ್ಲದೆ, ಕೇಂದ್ರ ಮತ್ತು ರಾಜ್ಯ ವಕ್ಫ್ ಮಂಡಳಿಗಳಲ್ಲಿ ಇಬ್ಬರು ಮುಸ್ಲಿಮೇತರ ಸದಸ್ಯರು ಈಗ ಸೇವೆ ಸಲ್ಲಿಸಲಿದ್ದಾರೆ. ಜತೆಗೆ ಈ ತಿದ್ದುಪಡಿಯಲ್ಲಿ ಇತರ ಮುಸ್ಲಿಂ ಸಮುದಾಯಗಳಿಗೆ ಪ್ರಾತಿನಿಧ್ಯ ನೀಡಲಾಗಿದೆ.
2025ರಲ್ಲಿ ವಕ್ಫ್ ಕಾಯಿದೆಗೆ ತಂದಿರುವ ತಿದ್ದುಪಡಿಯಲ್ಲಿ ಖಾಸಗಿ ಆಸ್ತಿಗಳನ್ನು ವಕ್ಫ್ ಆಸ್ತಿಗಳೆಂದು ಘೋಷಿಸಲು ಇದ್ದ ಅಧಿಕಾರವನ್ನು ರದ್ದುಪಡಿಸಲಾಗಿದೆ.
ಸರಕಾರದ ಆಸ್ತಿಯನ್ನು ವಕ್ಫ್ ಆಸ್ತಿ ಎಂದು ಗುರುತಿಸಿದರೆ ಅದಕ್ಕೆ ಕಾನೂನಿನ ಮಾನ್ಯತೆ ಇಲ್ಲವಾಗು ತ್ತದೆ.
ದೇಶದಲ್ಲಿ ವಕ್ಫ್ ಮಂಡಳಿಯು 872000 ಆಸ್ತಿಯ 9.4 ಲಕ್ಷ ಎಕರೆಯಷ್ಟನ್ನು ನಿರ್ವಹಣೆ ಮಾಡುತ್ತದೆ. 30 ವಕ್ಫ್ ಬೋರ್ಡ್‌ಗಳು ಅಸ್ತಿತ್ವದಲ್ಲಿವೆ, 12000 ಕೋಟಿ ರು. ಆದಾಯವಿದೆ, ಹಾಗೆಯೇ 59000 ಆಸ್ತಿಗಳು ವಿವಾದದಲ್ಲಿವೆ ಎಂದು ಅಂದಾಜಿಸಲಾಗಿದೆ.
ವಕ್ಫ್ ಕಾಯಿದೆ ತಿದ್ದುಪಡಿ ವಿಧೇಯಕದ ಬಗ್ಗೆ ಸಂಸತ್ತಿನಲ್ಲಿ ನಡೆದ ಚರ್ಚೆಯಲ್ಲಿ ಗೃಹ ಸಚಿವ ಅಮಿತ್ ಶಾರವರಿಂದ ಮೊದಲ್ಗೊಂಡು ಅನೇಕರಿಗೆ ವಾದ ಮಂಡನೆಗೆ/ಸಮರ್ಥನೆಗೆ ನೆರವಾಗಿದ್ದು ಕರ್ನಾಟಕದ ಅನ್ವರ್ ಮಣಪ್ಪಾಡಿಯವರು ನೀಡಿದ ವಕ್ಫ್ ಹಗರಣದ ವರದಿ. ಇದೇ ಸಂದರ್ಭದಲ್ಲಿ, ಹಗರಣದಲ್ಲಿ ಭಾಗಿಯಾಗಿರುವ ಕಾಂಗ್ರೆಸ್ ಪಕ್ಷದ ಹಲವು ನಾಯಕರ ಹೆಸರೂ ರಾಜ್ಯಸಭೆಯಲ್ಲಿ ಉಲ್ಲೇಖವಾಯಿತು.
ವಕ್ಫ್ ಕಾಯಿದೆಗೆ ತಿದ್ದುಪಡಿ ತರುವಲ್ಲಿ ಬಹುಮುಖ್ಯ ಭೂಮಿಕೆ ನಿರ್ವಹಿಸಿದ್ದು ಅನ್ವರ್ ಮಣಪ್ಪಾಡಿ ತನಿಖಾ ವರದಿಯೇ. ವಕ್ ಕಾಯಿದೆಯ ಅಪಾಯ ಮತ್ತು ವಕ್ಫ್ ಬೋರ್ಡಿನ ಅವ್ಯವಹಾರ ಹಾಗೂ ಪಟ್ಟಭದ್ರ ಹಿತಾಸಕ್ತಿಗಳಿಂದ ಆಗಿರುವ ಭೂಕಬಳಿಕೆಯ ಷಡ್ಯಂತರವನ್ನು ಅನ್ವರ್ ಮಣಪ್ಪಾಡಿ ವರದಿಯು ಎಳೆಎಳೆಯಾಗಿ ಬಿಡಿಸಿಟ್ಟಿದೆ.
ವಕ್ಫ್ ಹಗರಣಕ್ಕೆ ಸಂಬಂಧಿಸಿದ ಹಾಗೆ ನೀಡಲಾಗಿರುವ 7000 ಪುಟಗಳ ವರದಿಯಲ್ಲಿ ಕರ್ನಾಟಕದ ವಕ್ಫ್ ಹಗರಣದ ಮೊತ್ತವನ್ನು 230000 ಕೋಟಿ ರು. ಎಂದು ಅಂದಾಜಿಸಲಾಗಿದೆ. ದಾಖಲೆಯಲ್ಲಿ ರುವ 56 ಸಾವಿರ ಎಕರೆಯಲ್ಲಿ 29000 ಎಕರೆಯನ್ನು ಅಕ್ರಮವಾಗಿ ಪರಭಾರೆ ಮಾಡಲಾಗಿದೆ. ಇದಲ್ಲದೆ ಆದಾಯದಲ್ಲಿ ವರ್ಷಕ್ಕೆ 150 ರಿಂದ 200 ಕೋಟಿ ರುಪಾಯಿ ಸೋರಿಕೆಯಾಗುತ್ತಿರುವ ಬಗ್ಗೆ ಗಮನ ಸೆಳೆಯಲಾಗಿದೆ.
ಅಕ್ರಮವಾಗಿ ವಕ್ಫ್ ಆಸ್ತಿಯನ್ನು ನುಂಗಿರುವ ಹತ್ತಾರು ಫಲಾನುಭವಿಗಳ ದೊಡ್ಡ ಪಟ್ಟಿಯನ್ನೇ ಮಣಪ್ಪಾಡಿ ವರದಿಯಲ್ಲಿ ನೀಡಲಾಗಿದೆ. ಈ ಪಟ್ಟಿಯನ್ನು ನೋಡಿದರೆ, ಕಾಂಗ್ರೆಸ್ ಪಕ್ಷದ ಸದಸ್ಯತ್ವದ ಪಟ್ಟಿಯನ್ನು ನೋಡಿದಂತಾಗುತ್ತದೆ. ಐಎಎಸ್ ಅಧಿಕಾರಿಗಳು ಸೇರಿದಂತೆ ಹಲವರು ವಕ್ಫ್ ಆಸ್ತಿಯನ್ನು ಅಕ್ರಮವಾಗಿ ಕಬಳಿಸಿರುವುದು ಇಲ್ಲಿ ಬಯಲಾಗಿದೆ.
ಮಣಪ್ಪಾಡಿ ಸಮಿತಿಯು 2012ರಲ್ಲಿಯೇ ವಕ್ಫ್ ಮಂಡಳಿಯ ಅಕ್ರಮಗಳ ಬಗ್ಗೆ ವಿಸ್ತೃತವಾದ ವರದಿ ಯನ್ನು ನೀಡಿತ್ತು. ಆದರೆ ಅಂದು ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರಕಾರವು ವಕ್ಫ್ ಮಂಡಳಿಯ ಅವ್ಯವಹಾರಗಳ ಬಗ್ಗೆ ತನಿಖೆ ನಡೆಸಲು ಮುಂದಾಗಲಿಲ್ಲ; ಕೈಗೆ ಸಿಕ್ಕಿದ್ದ ಬಹುದೊಡ್ಡ ಅವಕಾಶವನ್ನು ಅದು ಕೈಚೆಲ್ಲಿ ಬಹುದೊಡ್ಡ ಪ್ರಮಾದವನ್ನೆಸಗಿತು.
ಸಂಸತ್ತಿನ ಉಭಯ ಸದನಗಳಲ್ಲೂ ವಕ್ಫ್ ತಿದ್ದುಪಡಿ ವಿಧೇಯಕವು ಸುಸೂತ್ರವಾಗಿ ಅನುಮೋದನೆ ಗೊಂಡಿತು. ಟಿಡಿಪಿ ಮತ್ತು ಜೆಡಿಯು ಪಕ್ಷಗಳು ತಿದ್ದುಪಡಿಗೆ ಬೆಂಬಲಿಸುವುದಿಲ್ಲ ಎಂಬ ವಿರೋಧಿ ಗಳ ನಿರೀಕ್ಷೆ ಸುಳ್ಳಾಯಿತು. ಸದನವನ್ನು ಜಾಣ್ಮೆಯಿಂದ ನಿರ್ವಹಿಸಿದ್ದರ ಫಲವಾಗಿ ವಕ್ಫ್ ತಿದ್ದುಪಡಿ ವಿಧೇಯಕದ ಹಾದಿ ಸುಗಮವಾಯಿತು.
ಮಾರ್ಚ್ 31ರಂದು, ಭಾರತದ ಕ್ಯಾಥೊಲಿಕ್ ಬಿಷಪ್‌ಗಳ ಸಮ್ಮೇಳನವು ಸಂಸತ್ತಿನಲ್ಲಿ ವಕ್ಫ್ ವಿಧೇಯಕವನ್ನು ಬೆಂಬಲಿಸುವಂತೆ, ಈ ವಿಷಯದ ಬಗ್ಗೆ ಪಕ್ಷಪಾತವಿಲ್ಲದ ಮತ್ತು ರಚನಾತ್ಮಕ ವಿಧಾನವನ್ನು ಅಳವಡಿಸಿಕೊಳ್ಳುವಂತೆ ಕೇರಳದ ಸಂಸದರಿಗೆ ಮನವಿ ಮಾಡಿಕೊಂಡಿದ್ದು ವಿರೋಧ ಪಕ್ಷಗಳಿಗೆ ಆದ ಬಹುದೊಡ್ಡ ಆಘಾತ. ಇದಕ್ಕೂ ಮೊದಲು, ಕೇರಳದ ಕ್ಯಾಥೊಲಿಕ್ ಬಿಷಪ್‌ಗಳ ಮಂಡಳಿಯು, ವಿಧೇಯಕದ ಪರವಾಗಿ ಮತ ಚಲಾಯಿಸುವಂತೆ ಸಂಸದರನ್ನು ಕೇಳಿ ಕೊಂಡಿತ್ತು. ಈ ಬೆಳವಣಿಗೆಯು ವಿರೋಧ ಪಕ್ಷಗಳ ಸದಸ್ಯರ ಜಂಘಾಬಲವನ್ನು ಉಡುಗಿಸಿದ್ದು ಸುಳ್ಳಲ್ಲ.
ಕ್ರಿಶ್ಚಿಯನ್ ಸಮುದಾಯವು ಬಿಜೆಪಿಯ ಪರವಾಗಿ ನಿಂತಿದ್ದನ್ನು ಅರಗಿಸಿಕೊಳ್ಳುವುದು ಇವರಿಗೆ ಕಷ್ಟಕರವಾಗಿತ್ತು. ವಿಧೇಯಕವು ಅನುಮೋದನೆಗೊಂಡ ನಂತರ ‘ಆರ್ಗನೈಸರ್’ನಲ್ಲಿ ಪ್ರಕಟ ವಾಗಿದ್ದ, ವಿವಿಧ ಸಂಸ್ಥೆಗಳ ಸುಪರ್ದಿನಲ್ಲಿರುವ ಜಮೀನುಗಳ ವಿವರವನ್ನು ರಾಹುಲ್ ಗಾಂಧಿ ಯವರು ತಿರುಚಿ, “ಬಿಜೆಪಿ ಮತ್ತು ಆರೆಸ್ಸೆಸ್‌ನವರು ಮುಸ್ಲಿಂ ಜಮೀನು ವಶಪಡಿಸಿಕೊಳ್ಳಲು ಕಾನೂನು ತಂದ ನಂತರ, ಈಗ ಕ್ರೈಸ್ತ ಸಮುದಾಯದ ಆಸ್ತಿ ಇವರ ಮುಂದಿನ ಗುರಿಯಾಗಿದೆ" ಎನ್ನುವ ಮೂಲಕ ಹುಳಿಹಿಂಡುವ ಕೆಲಸ ಮಾಡಿದರು.
ಅತ್ಯಂತ ನೋವಿನ ಸಂಗತಿಯೆಂದರೆ, ವಕ್ಫ್ ವಿಧೇಯಕವು ಸಂಸತ್ತಿನಲ್ಲಿ ಅನುಮೋದನೆಯಾದ ಕೂಡಲೇ ಕಾಂಗ್ರೆಸ್, ಆರ್ ಜೆಡಿ, ಸಮಾಜವಾದಿ, ಡಿಎಂಕೆ ಪಕ್ಷಗಳು, “ಈ ವಿಧೇಯಕವು ಸಂವಿಧಾನ ವಿರೋಧಿಯಾಗಿದ್ದು, ಇದನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸುತ್ತೇವೆ" ಎಂದು ಘೋಷಿಸಿದವು. ಇಲ್ಲಿಯ ತನಕ, ‘ಹಿಂದೂಗಳ ಭಾವನೆಗೆ ಧಕ್ಕೆಯಾಗುತ್ತಿದೆ’ ಅಂತ ಇವರ‍್ಯಾರೂ ಒಮ್ಮೆಯೂ ನ್ಯಾಯಾಲಯದ ಬಾಗಿಲು ಬಡಿಯಲೇ ಇಲ್ಲ, ದೇಶದೊಳಗೆ ಅಕ್ರಮವಾಗಿ ನುಸುಳಿ ಬಂದಿರುವ ಬಾಂಗ್ಲಾದೇಶೀಯರು ಮತ್ತು ರೋಹಿಂಗ್ಯಾಗಳನ್ನು ಹೊರಹಾಕಬೇಕು ಎಂದು ಒತ್ತಾಯವನ್ನೇ ಮಾಡಿಲ್ಲ.
ಬದಲಿಗೆ ಅವರನ್ನು ತಮ್ಮ ಮತಬ್ಯಾಂಕ್‌ನಂತೆ ನೋಡಿ ಅವರ ಪರವಾಗಿ ನಿಲ್ಲುತ್ತಾರೆ. ವಕ್ಫ್ ಮಂಡಳಿಯಲ್ಲಿ ಅವ್ಯವಹಾರ ನಡೆದು, ಆಸ್ತಿಯು ಅಕ್ರಮವಾಗಿ ಪರಭಾರೆಯಾಗಿ, ವಕ್ಫ್ ಆಡಳಿತದಿಂದ ಬಡ ಮುಸ್ಲಿಮರಿಗೆ ಅನ್ಯಾಯವಾಗುತ್ತಿದ್ದರೂ ಅದರ ವಿರುದ್ಧ ಚಕಾರ ಎತ್ತುವ ಧೈರ್ಯವು ವಿರೋಧ ಪಕ್ಷಗಳಿಗೆ, ಢೋಂಗಿ ಜಾತ್ಯತೀತವಾದಿಗಳಿಗೆ ಇರಲಿಲ್ಲ. ವಕ್ಫ್ ತಿದ್ದುಪಡಿ ಕಾಯಿದೆಯು ಜಾರಿಯಾದರೆ ವಕ್ಫ್ ಆಸ್ತಿಯನ್ನು ಸರಕಾರ ವಶಪಡಿಸಿಕೊಳ್ಳುತ್ತದೆ ಎಂಬ ಸುಳ್ಳು ಮಾಹಿತಿಯನ್ನು ನೀಡಿ ಜನರನ್ನು ಪ್ರಚೋದಿಸುವ ವಿಫಲ ಯತ್ನವೂ ನಡೆಯಿತು.
ಆದರೆ ಮೋದಿ ಸರಕಾರವು ಇಡೀ ಪ್ರಕರಣವನ್ನು ಅತ್ಯಂತ ಸೂಕ್ಷ್ಮವಾಗಿ ನಿರ್ವಹಿಸಿದ್ದರಿಂದ ಯಾವುದೇ ಗಲಭೆ ಮತ್ತು ಗಲಾಟೆಗೆ ಆಸ್ಪದವಾಗಲಿಲ್ಲ. ವಕ್ಫ್ ಕಾಯಿದೆಗೆ ತಿದ್ದುಪಡಿ ತಂದರೆ ಶಾಹೀನ್‌ಬಾಗ್ ರೀತಿಯ ಹೋರಾಟವಾಗುತ್ತದೆ ಎಂಬ ವೀರಾವೇಶದ ಮಾತುಗಳು ಕೇಳಿಬಂದವು; ಆದರೆ ಹೀಗೆ ಬೆದರಿಕೆ ಹಾಕಿದವರಿಗೆ, ದೆಹಲಿಯಲ್ಲಿ ಈಗಿರುವುದು ‘ಆಮ್ ಆದ್ಮಿ’ ಸರಕಾರವಲ್ಲ, ಬಿಜೆಪಿಯ ಸರಕಾರ ಎಂಬುದು ನೆನಪಾದಂತೆ ಕಾಣುತ್ತಿಲ್ಲ.
ತಿದ್ದುಪಡಿಯನ್ನು ಪ್ರಶ್ನಿಸಿರುವ ಅರ್ಜಿಯು ಸರ್ವೋಚ್ಛ ನ್ಯಾಯಾಲಯದ ಮುಂದಿದೆ. ಹೀಗಿರುವಾಗ ಕಾಯಿದೆಯ ವಿರುದ್ಧ ಹೋರಾಡಿದರೆ, ಇವರ ವಾದ ದುರ್ಬಲವಾಗುವ ಕಾರಣ ಪ್ರತಿಭಟನೆ ಮಾಡಲು ಸಾಧ್ಯವಿಲ್ಲ. ಕೋರ್ಟಿನಲ್ಲಿ ತೀರ್ಪು ಬರುವ ವೇಳೆಗೆ ವಿರೋಧದ ಕಾವು ತಣ್ಣಗಾಗಿ ತಿದ್ದುಪಡಿಯು ಹಳೆಯದಾಗಿರುತ್ತದೆ.
ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿಯ ಮತ್ತು ತ್ರಿವಳಿ ತಲಾಕ್ ಪದ್ಧತಿಯ ರದ್ದತಿಯನ್ನು ಹಾಗೂ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಹಿಂದಿನ ಮೋದಿ ಸರಕಾರವು ಜಾರಿಗೊಳಿಸಿತ್ತು. ಈಗ ಬಿಜೆಪಿಗೆ ಪೂರ್ಣ ಬಹುಮತದ ಕೊರತೆಯಿದ್ದರೂ ಮೋದಿ ಸರಕಾರವು ಮತ್ತೊಮ್ಮೆ ತನ್ನ ರಾಜಕೀಯ ಇಚ್ಛಾಶಕ್ತಿ ಮತ್ತು ಕೌಶಲವನ್ನು ಪ್ರದರ್ಶಿಸಿ ವಕ್ಫ್ ಕಾಯಿದೆಗೆ ತಿದ್ದುಪಡಿ ತರುವಲ್ಲಿ ಯಶಸ್ವಿಯಾಗಿದೆ.
ಮುಂಬರುವ ದಿನಗಳಲ್ಲಿ ವಕ್ಫ್ ತಿದ್ದುಪಡಿ ಕಾಯ್ದೆಯು ಯಾವ ಪರಿಣಾಮ ಬೀರುತ್ತದೆ ಎಂಬು ದನ್ನು ಕಾದುನೋಡಬೇಕಾಗಿದೆ.
(ಲೇಖಕರು ಬಿಜೆಪಿಯ ವಕ್ತಾರರು)