ಪ್ರತಿಸ್ಪಂದನ
ಮಂಜುನಾಥ ಡಿ.ಎಸ್
ಸರಕಾರವು ಪ್ರವಾಸೋದ್ಯಮವನ್ನು ಅಲಕ್ಷ್ಯ ಮಾಡುತ್ತಿರುವುದರ ಕುರಿತಾದ ‘ಅಶ್ವತ್ಥಕಟ್ಟೆ’ ಅಂಕಣ ಬರಹಕ್ಕೆ (ಫೆ.10) ಪೂರಕವಾಗಿ ನನ್ನ ಒಂದಿಷ್ಟು ಅನುಭವಗಳನ್ನು ಹಂಚಿಕೊಳ್ಳಲು ಬಯಸುತ್ತೇನೆ. ಕಳೆದ ತಿಂಗಳ ಅಂತ್ಯದಲ್ಲಿ ನಾವು ಕೆಎಸ್‌ಟಿಡಿಸಿಯಲ್ಲಿ ಹಂಪಿ, ಬಾದಾಮಿ, ಐಹೊಳೆ, ಪಟ್ಟದಕಲ್ಲು, ವಿಜಯಪುರ, ಕೂಡಲಸಂಗಮ ಸೇರಿದಂತೆ ಉತ್ತರ ಕರ್ನಾಟಕ ಪ್ರವಾಸಕ್ಕೆ ಹೋಗಲು ನಿರ್ಧರಿಸಿದೆವು.
ಪ್ರವಾಸೋದ್ಯಮ ಇಲಾಖೆಯ ಸಹಾಯವಾಣಿಯನ್ನು ಸಂಪರ್ಕಿಸಿದರೆ ಈ ಪ್ರವಾಸದ ಕುರಿತು ನಿಖರ ಮಾಹಿತಿ ದೊರಕಲಿಲ್ಲ. ಅಂತರ್ಜಾಲದಲ್ಲಿ ಅರಸಿ, ವೆಬ್‌ಸೈಟ್ ಮೂಲಕ ಸ್ಥಳ ಕಾದಿರಿಸಿದೆ. ನಿಗದಿತ ದಿನ ರಾತ್ರಿ ಯಶವಂತಪುರದ ಟಿಟಿಎಂಸಿಯಲ್ಲಿರುವ ಪ್ರವಾಸೋದ್ಯಮ ಇಲಾಖೆಯ ಕಚೇರಿ ತಲುಪಿದೆವು.
ಕೊಳಕು ವಾತಾವರಣದಲ್ಲಿ ಅರ್ಧ ಗಂಟೆ ಮೂಗು ಮುಚ್ಚಿಕೊಂಡು ಕುಳಿತಿರುವುದು ಅನಿವಾರ್ಯ ವಾಗಿತ್ತು. ಜಲಬಾಧೆ ನೀಗಿಸಿಕೊಳ್ಳಲು ಸನಿಹದ ಸಾರ್ವಜನಿಕ ಶೌಚಾಲಯ ಬಳಸಬೇಕಿತ್ತು. ಹಣ ಪಾವತಿಸಿದರೂ ಅದು ಸ್ವಚ್ಛವಾಗಿರಲಿಲ್ಲ. ಅದರ ದುಸ್ಥಿತಿಯನ್ನು ವರ್ಣಿಸಲು ಪದಗಳು ಸಾಲವು.
ಬಸ್ಸಿನ ಸೀಟುಗಳು ಹರಿದಿದ್ದವು, ಕೊಳಕಾಗಿದ್ದವು. ಬಸ್ಸು ಹಳತಾಗಿತ್ತು. ಮೊದಲ ಸೀಟಿನಲ್ಲಿ ಕುಳಿತಿದ್ದರೂ ಬೆನ್ನುಮೂಳೆ ಯಾವಾಗ ಮುರಿಯುವುದೋ ಎಂಬ ಆತಂಕ ಕಾಡುತ್ತಿತ್ತು. ಅಂತೂ ಇಂತೂ ಬೆಳಗಿನ ಐದರ ವೇಳೆಗೆ ತುಂಗಭದ್ರಾ ಡ್ಯಾಮ್ ತಲುಪಿದೆವು. ಹೋಟೆಲ್ ಮಯೂರದಲ್ಲಿ ಸ್ನಾನಕ್ಕಾಗಿ ಇಳಿಸಲಾಗುವುದೆಂದು ತಿಳಿಸಲಾಗಿತ್ತು.
ಇದನ್ನೂ ಓದಿ: Ranjith H Ashwath Column: ಪ್ರವಾಸೋದ್ಯಮದ ಬಗ್ಗೆ ಸರಕಾರಕ್ಕೆ ಅಲಕ್ಷ್ಯವೇಕೆ ?
ಆದರೆ, ದುರ್ನಾತ ಬೀರುತ್ತಿದ್ದ ತೆರೆದ ಚರಂಡಿಯ ಎದುರಿನ ಹೋಟೆಲ್ ಒಂದರ ಬಳಿ ಬಸ್ಸು ನಿಲ್ಲಿಸಿದರು. ಆ ಹೋಟೆಲಿನಲ್ಲಿ ಶಾಲಾ ಮಕ್ಕಳಿ ದ್ದರು. ಅವರು ಕೊಠಡಿಗಳನ್ನು ತೆರವುಗೊಳಿಸಿದ ನಂತರ ನಮಗೆ ಅವಕಾಶ ಎಂದು ತಿಳಿಯಿತು. ರಾತ್ರಿ ಪಯಣದ ನಂತರ ಸುಮಾರು ಎರಡು ತಾಸು ಧೂಳು ದುರ್ಗಂಧದ ಪರಿಸರದಲ್ಲಿ ಕುಳಿತಿರಬೇಕಾಯಿತು.
ಆ ಹೋಟೆಲ್ ಸ್ವಚ್ಚತೆಯನ್ನೇ ಕಂಡಂತಿರಲಿಲ್ಲ. ಜತೆಗೆ ದುರ್ಗಂಧ ಬೇರೆ. ಅಧಿಕಾರಿಗಳಿಗೆ ಕರೆ ಮಾಡಿ ಸಂಪು ಹೂಡಿದ್ದರಿಂದ, ಅರ್ಧ ಗಂಟೆಯ ನಂತರ ನಮ್ಮನ್ನು ಹೋಟೆಲ್ ಮಯೂರಕ್ಕೆ ಕರೆದೊ ಯ್ದರು. ಅದೂ ಸ್ವಚ್ಛವಾಗಿರಲಿಲ್ಲ. ಅಲ್ಲಿಯೂ ಹಿಂದಿನ ಪ್ರವಾಸಿಗರು ತೆರವುಗೊಳಿಸಿದ್ದ ಕೊಠಡಿ ಗಳನ್ನು ಸ್ವಚ್ಛಗೊಳಿಸದೆ ಹಾಗೆಯೇ ಬಳಸಲು ತಿಳಿಸಿದರು. ಇದರ ಬಗ್ಗೆ ಕೇಳಿದರೆ, ‘ಸ್ನಾನ ಮಾಡಿಕೊಂಡು ಹೋಗುವುದಷ್ಟೇ ತಾನೆ?’ ಎಂಬ ಉಡಾಫೆಯ ಸವಾಲು!
ಇದರಿಂದ ಬೇಸತ್ತ ಮೂವರು ಪ್ರವಾಸಿಗರು ತಮ್ಮ ಪ್ರವಾಸವನ್ನು ಮೊಟಕುಗೊಳಿಸಿ ಹೊರಟು ಹೋದರು. ಮಯೂರ ಹೋಟೆಲಿನ ಊಟ-ತಿಂಡಿ ಮತ್ತು ಗ್ರಾಹಕಸೇವೆ ಅಷ್ಟಕ್ಕಷ್ಟೇ. ಪ್ರವಾಸದಲ್ಲಿ ಮಾರ್ಗದರ್ಶನವೂ ಕಳಪೆಯಾಗಿತ್ತು. ಪ್ರವಾಸಿಗರು ತಮ್ಮ ಅತಿಥಿಗಳು, ಅವರನ್ನು ಆದರದಿಂದ ಕಾಣಬೇಕೆಂಬುದನ್ನು ಸರಕಾರಿ ಸ್ವಾಮ್ಯದ ನಿಗಮದಿಂದ ನಿರೀಕ್ಷಿಸಿದರೆ ಅದು ನಮ್ಮ ಮೂರ್ಖತನ ವಾಗುತ್ತದೆ.
ಈ ಸಂಬಂಧ ವ್ಯವಸ್ಥಾಪಕ ನಿರ್ದೇಶಕರಿಗೆ ಇ-ಮೇಲ್ ಕಳಿಸಿದ್ದೆ. ಅವರು ಸೌಜನ್ಯಕ್ಕಾದರೂ ಉತ್ತರಿಸಲಿಲ್ಲ. ಕರ್ನಾಟಕವನ್ನು ದೇಶ-ವಿದೇಶಗಳಲ್ಲಿ ಪ್ರತಿನಿಧಿಸಬೇಕಾದ ಪ್ರವಾಸೋದ್ಯಮ ನಿಗಮವು ರಾಜ್ಯದ ಹೆಸರಿಗೆ ಮಸಿ ಬಳಿಯುತ್ತಿದೆ. ಈ ಪರಿಸ್ಥಿತಿ ಬದಲಾಗಬೇಕಾದ ಜರೂರಿದೆ.
(ಲೇಖಕರು ಹವ್ಯಾಸಿ ಬರಹಗಾರರು)