ಮೂರ್ತಿಪೂಜೆ
ಕಳೆದ ವಾರ ಬೆಂಗಳೂರಿಗೆ ಬಂದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಬೆಕ್ಕಸ ಬೆರಗಾಗಿದ್ದಾರಂತೆ. ಇದಕ್ಕೆ ಅವರ ಕೈ ತಲುಪಿರುವ ಒಂದು ಕಂಪ್ಲೇಂಟೇ ಕಾರಣ. ಅಂದ ಹಾಗೆ, ಅವರ ಕೈಗೆ ಈ ಕಂಪ್ಲೇಂಟು ಪಟ್ಟಿಯನ್ನು ತಲುಪಿಸಿರುವುದು ಮಾಜಿ ಡೆಪ್ಯುಟಿ ಮೇಯರ್ ಎಲ.ಶ್ರೀನಿವಾಸ್ ಮತ್ತವರ ಗ್ಯಾಂಗು.
ಮುಂಬರುವ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಗೆದ್ದು ಅಧಿಕಾರ ಹಿಡಿಯಲು ಪಕ್ಷದ ಕಾರ್ಯಕರ್ತರು ಹವಣಿಸುತ್ತಿದ್ದರೆ, ಪಕ್ಷದ ಟಾಪ್ ಲೆವೆಲ್ ನಾಯಕರು ಬಿಜೆಪಿ ಜತೆ ಒಳಹೊಂದಾಣಿಕೆ ಮಾಡಿಕೊಳ್ಳುತ್ತಿದ್ದಾರೆ. ಹೀಗಾದರೆ ನಾವು ಬಿಬಿಎಂಪಿ ಗದ್ದುಗೆಯ ಮೇಲೆ ಕೂರುವುದು ಹೇಗೆ? ಎಂಬುದು ಎಲ್.ಶ್ರೀನಿವಾಸ್ ಆಂಡ್ ಗ್ಯಾಂಗಿನ ವರಾತ.
ಗ್ಯಾಂಗಿನ ಈ ವರಾತದ ಕತೆಯನ್ನು ಬಿಡಿಸುತ್ತಾ ಹೋದರೆ ಕಣ್ಣಿಗೆ ಕಾಣುವುದು ವಿಧಾನಸಭೆಯ ಪ್ರತಿಪಕ್ಷ ನಾಯಕ ಅರ್.ಅಶೋಕ್ ಪ್ರತಿನಿಧಿಸುತ್ತಿರುವ ಪದ್ಮನಾಭ ನಗರ ವಿಧಾನಸಭಾ ಕ್ಷೇತ್ರ. ಈ ಕ್ಷೇತ್ರದಲ್ಲಿ ಮುಂಚೆ ಎಂಟು ವಾರ್ಡುಗಳಿದ್ದವಲ್ಲ? ಈಗ ಕ್ಷೇತ್ರ ಪುನರ್‌ವಿಂಗಡಣೆಯ ನಂತರ ಈ ವಾರ್ಡುಗಳ ಸಂಖ್ಯೆ ಹದಿನಾಲ್ಕಕ್ಕೇರಿದೆ. ಹೀಗೆ ಹೆಚ್ಚಳವಾದ ವಾರ್ಡುಗಳು ಸೇರಿದಂತೆ ಎಲ್ಲ ವಾರ್ಡುಗಳ ರೂಪುರೇಷೆ ಹೇಗಿರಬೇಕು ಅಂತ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಎಲ್. ಶ್ರೀನಿವಾಸ್ ಮತ್ತಿತರರ ಜತೆ ಚರ್ಚಿಸಿ ಸೆಟ್ಲ್ ಮಾಡಿದ್ದಾರೆ. ಆದರೆ ಅವರು ರೆಡಿ ಮಾಡಿ ಕಳಿಸಿದ ವಾರ್ಡುಗಳ ಪೈಕಿ ಎರಡು ವಾರ್ಡುಗಳ ರೂಪುರೇಷೆ ಕಡೇ ಗಳಿಗೆಯಲ್ಲಿ ಬದಲಾಗಿದೆ.
ಈಗ ರಣದೀಪ್ ಸಿಂಗ್ ಸುರ್ಜೇವಾಲಾ ಅವರಿಗೆ ತಲುಪಿದ ಕಂಪ್ಲೇಂಟಿನ ಪ್ರಕಾರ, ಈ ಎರಡು ವಾರ್ಡುಗಳ ರೂಪುರೇಷೆ ದಿಢೀರನೆ ಬದಲಾಗಲು ಬಿಜೆಪಿ ನಾಯಕ ಆರ್.ಅಶೋಕ್ ಮತ್ತು ಕೆಪಿಸಿಸಿ ಅಧ್ಯಕ್ಷರಾಗಿರುವ ಡಿ.ಕೆ.ಶಿವಕುಮಾರ್ ಕಾರಣ. ಯಾಕೆಂದರೆ ಕ್ಷೇತ್ರದ ವಾರ್ಡುಗಳ ರೂಪುರೇಷೆ ಹೇಗಿದೆ ಎಂಬ ಮಾಹಿತಿ ಪಡೆದ ಆರ್.ಅಶೋಕ್ ಅವರಿಗೆ ಗಾಬರಿಯಾಗಿದೆ.
ಇದನ್ನೂ ಓದಿ: R T Vittalmurthy Column: ಸಿದ್ದು ಸಂಪುಟಕ್ಕೆ ಇವರೆಲ್ಲ ಸೇರಲಿದ್ದಾರೆ
ಕಾರಣ? ರಾಮಲಿಂಗಾರೆಡ್ಡಿ ಮತ್ತಿತರರು ರೂಪಿಸಿ ಕೊಟ್ಟ ಮಾದರಿಯಲ್ಲಿ ವಾರ್ಡುಗಳು ಫಿಕ್ಸಾದರೆ ತಮ್ಮ ಆಪ್ತರಾದ ಉಮೇಶ್ ಮತ್ತು ಲಕ್ಷ್ಮೀಕಾಂತ್ ಗೆಲ್ಲುವುದು ಕಷ್ಟ ಎಂಬುದು. ಹೀಗಾಗಿ ಕೆಪಿಸಿಸಿ ಅಧ್ಯಕ್ಷರನ್ನು ಸಂಪರ್ಕಿಸಿದ ಅವರು, “ಇವರಿಬ್ಬರ ಗೆಲುವಿಗೆ ಅನುಕೂಲವಾಗುವಂತೆ ಎರಡು ವಾರ್ಡುಗಳನ್ನು ರೂಪಿಸಿಕೊಡಿ" ಎಂದು ದುಂಬಾಲು ಬಿದ್ದಿದ್ದಾರೆ.
ಹೀಗೆ ಆರ್.ಅಶೋಕ್ ಅವರು ದುಂಬಾಲು ಬಿದ್ದ ಹಿನ್ನೆಲೆಯಲ್ಲಿ ರಾಮಲಿಂಗಾರೆಡ್ಡಿ ಆಂಡ್ ಗ್ಯಾಂಗು ಸಿದ್ಧಪಡಿಸಿದ್ದ ವಾರ್ಡುಗಳ ರೂಪಕ್ಕೆ ಕತ್ತರಿ ಹಾಕಿದ ಡಿ.ಕೆ.ಶಿವಕುಮಾರ್ ಅವರು ಅಹಿಂದ ವರ್ಗಗಳ ಮತದಾರರು ಕಡಿಮೆ ಇರುವ ಎರಡು ವಾರ್ಡುಗಳನ್ನು ರೂಪಿಸಿದ್ದಾರೆ.
ಹೀಗೆ ಲಕ್ಷೀಕಾಂತ್ ಮತ್ತು ಉಮೇಶ್ ಅವರಿಗಾಗಿ ಡಿಕೆಶಿ ಸೃಷ್ಟಿ ಮಾಡಿಕೊಟ್ಟಿರುವ ವಾರ್ಡುಗಳು ಅಕರಾಳ-ವಿಕರಾಳವಾಗಿವೆ. ಹೀಗೆ ಬಿಜೆಪಿಗೆ ಅನುಕೂಲವಾಗುವಂತೆ ಕಾಂಗ್ರೆಸ್ ನಾಯಕರೇ ವಾರ್ಡುಗಳನ್ನು ಸೃಷ್ಟಿಸಿಕೊಟ್ಟರೆ ನಮ್ಮ ಗತಿಯೇನು? ಅಸೆಂಬ್ಲಿ ಚುನಾವಣೆಯಲ್ಲಿ ವಿವಿಧ ಪಕ್ಷಗಳ ನಾಯಕರು ಹೊಂದಾಣಿಕೆ ಮಾಡಿಕೊಳ್ಳುವುದು ಹೊಸತೇನಲ್ಲ, ಆದರೆ ಬಿಬಿಎಂಪಿ ಲೆವೆಲ್ಲಿನಲ್ಲೂ ಹೊಂದಾಣಿಕೆ ಮಾಡಿಕೊಂಡರೆ ಕಾರ್ಯಕರ್ತರ ಗತಿಯೇನು? ಎಂಬುದು ಎಲ್.ಶ್ರೀನಿವಾಸ್ ಆಂಡ್ ಗ್ಯಾಂಗಿನ ವಾದ.
ಅಷ್ಟೇ ಅಲ್ಲ, ಬಿಜೆಪಿಗೆ ಅನುಕೂಲವಾಗುವಂತೆ ವಾರ್ಡುಗಳನ್ನು ನಮ್ಮವರೇ ಮಾಡಿಕೊಡುವು ದಾದರೆ ನಾವೇಕೆ ಚುನಾವಣೆಯಲ್ಲಿ ಕೆಲಸ ಮಾಡಬೇಕು? ಅಂತ ಎಲ್. ಶ್ರೀನಿವಾಸ್ ಸೇರಿದಂತೆ ಐದು ಮಂದಿ ಮಾಜಿ ಕಾರ್ಪೊರೇಟರುಗಳು ರಣದೀಪ್ ಸಿಂಗ್ ಸುರ್ಜೇವಾಲಾ ಅವರನ್ನು ಪ್ರಶ್ನಿಸಿ ದ್ದಾರೆ. ಅವರು ಸಲ್ಲಿಸಿದ ಈ ವಿವರವನ್ನು ನೋಡಿ ಬೆಚ್ಚಿ ಬಿದ್ದ ಸುರ್ಜೇವಾಲಾ ಅವರು, “ಇಲ್ಲೇನು ನಡೆಯುತ್ತಿದೆ?" ಅಂತ ಉದ್ಗರಿಸಿದರಂತೆ. ಅವರು ಹೀಗೆ ಉದ್ಗರಿಸಿದ್ದೇ ಕಾಂಗ್ರೆಸ್ ಪಾಳಯದಲ್ಲೀಗ ಬಿಸಿಬಿಸಿ ಚರ್ಚೆಯ ವಿಷಯ.
ಬುಲ್ಡೋಜ್ ಮಾಡಿದ ಸಿದ್ದು
ಈ ಮಧ್ಯೆ ನಲವತ್ತಕ್ಕೂ ಹೆಚ್ಚು ನಿಗಮ-ಮಂಡಳಿಗಳಿಗೆ ಕಾಂಗ್ರೆಸ್ ಸರಕಾರ ಅಧ್ಯಕ್ಷರನ್ನು ನೇಮಿಸಿತಲ್ಲ? ಈ ನೇಮಕಾತಿ ಪ್ರಕ್ರಿಯೆಯಲ್ಲಿ ಸಿಎಂ ಸಿದ್ದು ಏಕಸ್ವಾಮ್ಯ ಮೆರೆದಿದ್ದಾರೆ ಅಂತ ಅವರ ವಿರೋಧಿ ಪಾಳಯ ಕಿರಿಕಿರಿ ಮಾಡಿಕೊಂಡಿದೆ. ಅಂದ ಹಾಗೆ, ವಿವಿಧ ನಿಗಮ-ಮಂಡಳಿಗಳ ನೇಮಕಾತಿಗೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಹೇಳಿದ ಬಹುತೇಕ ಹೆಸರುಗಳಿಗೆ ಕಾಂಗ್ರೆಸ್ ಹೈಕಮಾಂಡ್ ಒಪ್ಪಿಗೆ ನೀಡಿದ್ದೇನೋ ಸರಿ. ಆದರೆ ಹೀಗೆ ಹೈಕಮಾಂಡ್ ಒಪ್ಪಿದ ಪಟ್ಟಿ ತಮ್ಮ ಕೈ ತಲುಪಿದ ಮೇಲೆ ಸಿದ್ದರಾಮಯ್ತ ಅವರು ಪುನಃ ಏಳೆಂಟು ನಿಗಮ-ಮಂಡಳಿಗಳಿಗೆ ಅಧ್ಯಕ್ಷರನ್ನು ನೇಮಕ ಮಾಡಲು ನಿರ್ಧರಿಸಿ ಆದೇಶ ಹೊರಡಿಸಿದ್ದಾರೆ.
ಹೀಗೆ ನಿಗಮ-ಮಂಡಳಿಗಳ ನೇಮಕಾತಿ ವಿಷಯದಲ್ಲಿ ಸಿದ್ದರಾಮಯ್ಯ ಹೆಜ್ಜೆ ಇಟ್ಟ ರೀತಿಯು ಅವರ ವಿರೋಧಿ ಪಾಳಯಕ್ಕೆ ನುಂಗಲಾರದ ತುತ್ತಾಗಿದೆ. ಈ ಮುಂಚೆ ಯಾವುದೇ ಹಂತದ ನೇಮಕಾತಿಗಳ ವಿಷಯ ಬಂದಾಗ ಸಿದ್ದು ಹೇಳಿದ್ದು ಅಂತಿಮವಲ್ಲ ಎಂದು ಪ್ರತಿಬಿಂಬಿಸುವ ಕೆಲಸವಾಗುತ್ತಿತ್ತು. ಇದೇ ರೀತಿ, ‘ಸಿದ್ದರಾಮಯ್ಯ ಅಧಿಕಾರದಿಂದ ಇಳಿಯುವ ದಿನಗಳು ಹತ್ತಿರವಾಗಿವೆ.
ಹೀಗಾಗಿ ಅವರು ಹೇಳಿದ್ದೇ ಹೈಕಮಾಂಡ್ ಮಟ್ಟದಲ್ಲಿ ನಡೆಯುತ್ತಿಲ್ಲ’ ಎಂಬುದು ವಿರೋಧಿ ಪಡೆಯ ಮಾತಾಗಿತ್ತು. ಆದರೆ ಈಗ ಇದ್ದಕ್ಕಿದ್ದಂತೆ ಸಿಎಂ ಸಿದ್ದರಾಮಯ್ಯ ತಿರುಗಿ ಬಿದ್ದಿರುವ ರೀತಿ ಮತ್ತು ನಿಗಮ-ಮಂಡಳಿಗಳ ನೇಮಕಾತಿ ವಿಷಯದಲ್ಲಿ ವರಿಷ್ಠರನ್ನೂ ಲೆಕ್ಕಿಸದೆ ಬುಲ್ಡೋಜ್ ಮಾಡಿದ ರೀತಿ ವಿರೋಧಿ ಪಾಳಯದ ಫೇಸ್ ಕಟ್ಟು ಕಪ್ಪಾಗುವಂತೆ ಮಾಡಿದೆ.
ಬಿಜೆಪಿ ಭಿನ್ನರಿಗೆ ನಿರಾಸೆ
ಈ ಮಧ್ಯೆ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ವಿರುದ್ಧ ಹೋರಾಡುತ್ತಿರುವ ಬಿಜೆಪಿ ಭಿನ್ನರ ನಿರಾಸೆ ಮುಂದುವರಿದಿದೆ. ಕಾರಣ? ಒಂದು ಕಡೆ ನೋಡಿದರೆ ವಿಜಯೇಂದ್ರ ಅಲುಗಾಡು ತ್ತಿಲ್ಲ. ಇನ್ನೊಂದು ಕಡೆ ನೋಡಿದರೆ ಪಕ್ಷದಿಂದ ಹೊರಬಿದ್ದಿರುವ ವಿಜಯೇಂದ್ರ ವಿರೋಧಿಗಳನ್ನು ವಾಪಸ್ಸು ಕರೆತರುವ ಕೆಲಸಕ್ಕೆ ಫೋರ್ಸು ಸಿಗುತ್ತಿಲ್ಲ. ಹೀಗೆ ಎರಡು ಕಡೆಯಿಂದ ಅವರಿಗೆ ನಿರಾಸೆ ಯಾಗಲು ಯಥಾಪ್ರಕಾರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ನೇಮಕಾತಿ ಸಾಧ್ಯವಾಗುತ್ತಿಲ್ಲ ಎಂಬುದೇ ಮುಖ್ಯ ಕಾರಣ.
ಇದು ಸಾಧ್ಯವಾಗದೆ ಇರುವ ಕಾರಣಕ್ಕಾಗಿ ಭಿನ್ನರ ಹೋರಾಟಕ್ಕೆ ಶಕ್ತಿ ದೊರೆಯುತ್ತಿಲ್ಲ. ಅಂದ ಹಾಗೆ, ವಿಜಯೇಂದ್ರ ಅವರ ವಿರುದ್ಧ ಹೋರಾಡುತ್ತಿರುವ ಭಿನ್ನರಿಗೆ ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ ಮತ್ತು ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಮರಳಿ ಪಕ್ಷಕ್ಕೆ ಕರೆ ತರುವ ಉಮೇದು ಇದೆ. ಯಾಕೆಂದರೆ ಇವರಿಬ್ಬರು ಬಂದರೆ ವಿಜಯೇಂದ್ರ ವಿರುದ್ಧದ ಹೋರಾಟಕ್ಕೆ ಶಕ್ತಿ ಬರುತ್ತದೆ.
ಹೀಗಾಗಿಯೇ ಒಂದು ಕಡೆಯಿಂದ ಸಂಘ ಪರಿವಾರದ ನಾಯಕರನ್ನು ಹಿಡಿದುಕೊಂಡು ಈಶ್ವರಪ್ಪ ಮತ್ತು ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಪಕ್ಷಕ್ಕೆ ಮರಳಿ ಸೇರಿಸಿಕೊಳ್ಳುವ ಯತ್ನಕ್ಕೆ ಅವರು ಚಾಲನೆ ನೀಡಿದ್ದರು.
ಈ ಮಧ್ಯೆ ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಕೋಮುಗಲಭೆ ನಡೆಯಿತಲ್ಲ? ಈ ಸಂದರ್ಭದಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಮದ್ದೂರಿನ ರಣಾಂಗಣದಲ್ಲಿ ತಂದು ನಿಲ್ಲಿಸುವ ಕೆಲಸ ನಡೆದಿತ್ತು. ಇಂಥ ಕೆಲಸ ಎಷ್ಟು ಪರಿಣಾಮ ಬೀರಿತು ಎಂದರೆ ಯತ್ನಾಳರ ಸಭೆಗೆ ಸೇರಿದ ಜನರನ್ನು ನೋಡಿ ಬಿಜೆಪಿ ನಾಯಕರು ಅಚ್ಚರಿಪಡುತ್ತಿದ್ದರೆ, ಮತ್ತೊಂದು ಕಡೆ ಭಿನ್ನರ ಪಡೆಯು, “ನೋಡ್ರೀ, ಕರ್ನಾಟಕದಲ್ಲಿ ಹಿಂದುತ್ವದ ಅಲೆಯನ್ನು ಎನ್‌ಕ್ಯಾಶ್ ಮಾಡಿಕೊಳ್ಳಲು ಯತ್ನಾಳ್ ಅವರಂಥ ಮತ್ತೊಬ್ಬ ನಾಯಕನಿಲ್ಲ" ಎನ್ನತೊಡಗಿತು. ಅದರ ಈ ಮೆಸೇಜು ದಿಲ್ಲಿಯ ಬಿಜೆಪಿ ನಾಯಕರಿಗೆ ತಲುಪಿದ್ದಷ್ಟೇ ಅಲ್ಲ, ಪರಿವಾರದ ನಾಯಕರನ್ನು ಸಂಪರ್ಕಿಸಿ ಮಾಹಿತಿ ಪಡೆಯುವ ಲೆವೆಲ್ಲಿಗೆ ಹೋಯಿತು.
ಹೀಗೆ ಯತ್ನಾಳ್ ಅವರನ್ನು ‘ಹಿಂದೂ ಹುಲಿ’ ಅಂತ ಎಮರ್ಜ್ ಮಾಡುತ್ತಾ, ಈಶ್ವರಪ್ಪ ಅವರಂಥ ಪವರ್ ಫುಲ್ ಹಿಂದೂ ಬ್ರಾಂಡ್ ಅತ್ಯಪರೂಪ ಎನ್ನುತ್ತಾ ಭಿನ್ನರ ಪಡೆ ನಡೆಸಿದ ಸರ್ಕಸ್ಸು ಒಂದು ಹಂತಕ್ಕೆ ಬರಬೇಕಿತ್ತಾದರೂ ಅದು ಇದ್ದಕ್ಕಿದ್ದಂತೆ ಕೂಲ್ ಡೌನ್ ಆಗಿ ಹೋಯಿತು. ಯಾಕೆಂದರೆ ಇಂಥ ಯಾವುದೇ ಪ್ರಯತ್ನ ನಡೆದರೂ ಅದಕ್ಕೆ ಪಕ್ಷಾಧ್ಯಕ್ಷರಾದ ವಿಜಯೇಂದ್ರ ಅವರ ಸಹಮತ ಇರಬೇಕಲ್ಲ? ಹೀಗಾಗಿ ಭಿನ್ನರ ಆ ಆಸೆಗೆ ತಾತ್ಕಾಲಿಕ ಕಡಿವಾಣ ಬಿದ್ದಿದೆ.
ಜೆಡಿಎಸ್‌ನಲ್ಲೀಗ ಎಚ್ಚರಿಕೆಯ ಕಾಲ ಇನ್ನು ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಅಸ್ತಿತ್ವಕ್ಕೆ ಬಂದ ನಂತರ ಉಗ್ರ ವಿರೋಧ ಪಕ್ಷವಾಗಿ ರೂಪುಗೊಂಡಿದ್ದ ಜೆಡಿಎಸ್ ನಲ್ಲೀಗ ಎಚ್ಚರಿಕೆಯ ಕಾಲ ನಡೆಯುತ್ತಿದೆ. ಯಾಕೆಂದರೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ದಿಲ್ಲಿ ರಾಜಕಾರಣದಲ್ಲಿ ಮುಳುಗಿದ್ದರೆ, ಇಲ್ಲಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿಯವರು ಮೊದಲ ಹಂತದ ಯಾತ್ರೆ ಮುಗಿಸಿ ಎರಡನೇ ಹಂತದ ಯಾತ್ರೆ ಶುರುಮಾಡುವ ಕಾತರದಲ್ಲಿದ್ದಾರೆ.
ಮೊದಲ ಹಂತದ ಯಾತ್ರೆ ಬಹುತೇಕ ಮುಕ್ತಾಯ ಹಂತದಲ್ಲಿದ್ದು, ಎರಡನೇ ಹಂತದ ಯಾತ್ರೆಗೆ ಸಜ್ಜಾಗುವಂತೆ ಅವರ ಅಜ್ಜ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹೇಳಿದ್ದಾರೆ. ಅಷ್ಟೇ ಅಲ್ಲ, ಎರಡನೇ ಹಂತದ ಯಾತ್ರೆಯ ರೂಪರೇಖೆಗಳನ್ನು ತಾವೇ ಖುದ್ದಾಗಿ ರೂಪಿಸತೊಡಗಿದ್ದಾರೆ. ಅತ್ತ ಪುತ್ರ ಕುಮಾರಸ್ವಾಮಿಯವರ ಮೇಲೆ, ಇತ್ತ ಮೊಮ್ಮಗನ ಮೇಲೆ ಕಣ್ಣಿಟ್ಟಿರುವ ದೇವೇಗೌಡರು, ನವೆಂಬರ್ ಮುಗಿಯುವ ತನಕ ಕುಮಾರಸ್ವಾಮಿ ಅವರನ್ನು ರಾಜ್ಯ ರಾಜಕಾರಣಕ್ಕೆ ಎಳೆಯದಂತೆ ಪಕ್ಷದ ಶಾಸಕರಿಗೆ ಸೂಚಿಸಿದ್ದಾರೆ. ಹೀಗೆ ಯಾವ ದೃಷ್ಟಿಯಿಂದ ನೋಡಿದರೂ ಜೆಡಿಎಸ್‌ನಲ್ಲೀಗ ನಡೆಯುತ್ತಿರುವುದು ಎಚ್ಚರಿಕೆಯ ಕಾಲ.
ಲಾಸ್ಟ್ ಸಿಪ್: ರಾಹುಲ್ ಗಾಂಧಿ ಮಾಡಿದ ಮತಗಳ್ಳತನದ ಆರೋಪಕ್ಕೆ ಟಕ್ಕರ್ ಕೊಟ್ಟ ಹಿರಿಯ ನಾಯಕ ರಾಜಣ್ಣ ಮಂತ್ರಿ ಮಂಡಲದಿಂದ ಹೊರಬಿದ್ದರಲ್ಲ? ಇದಾದ ನಂತರ ಸ್ವಲ್ಪ ದಿನ ಮೌನ ವಾಗಿದ್ದ ಅವರು ರಾಹುಲ್ ಗಾಂಧಿ ಅವರನ್ನುಸಂಪರ್ಕಿಸುವ ಯತ್ನಕ್ಕಿಳಿದರು. ಆದರೆ ಅವರೇನೇ ಮಾಡಿದರೂ ರಾಹುಲ್ ಗಾಂಧಿ ಅವರು ರಾಜಣ್ಣ ಅವರಿಗೆ ಟೈಮು ಕೊಡುತ್ತಿಲ್ಲ. ಇದರಿಂದ ರೋಸತ್ತು ಹೋಗಿರುವ ರಾಜಣ್ಣ ಈಗ ಪಕ್ಷದ ನಾಯಕರಿಗೆ ನೇರವಾಗಿಯೇ ಎಚ್ಚರಿಕೆ ನೀಡಿದ್ದಾರೆ.
“ನನ್ನನ್ನು ತುರ್ತಾಗಿ ಸಂಪುಟಕ್ಕೆ ಸೇರಿಸಿಕೊಂಡರೆ ಸರಿ, ಇಲ್ಲದಿದ್ದರೆ ನಾನು ಕಾಂಗ್ರೆಸ್ ತೊರೆದು ಪಕ್ಷೇತರನಾಗಿ ಸ್ಪರ್ಧಿಸುತ್ತೇನೆ. ವಾಲ್ಮೀಕಿ ಸಮುದಾಯದ ಬಲ ಏನೆಂದು ತೋರಿಸುತ್ತೇನೆ" ಎಂಬುದು ಅವರ ಎಚ್ಚರಿಕೆ. ಇದು ಎಷ್ಟರ ಮಟ್ಟಿಗೆ ವರ್ಕ್ ಔಟ್ ಆಗುತ್ತದೋ ಕಾದು ನೋಡಬೇಕು.