ಜನಪಥ
ಕಾಂಗ್ರೆಸ್‌ನ ದಿಲ್ಲಿ ಮುಖಗಳನ್ನು ನೋಡಿದಾಗ ಅವರಿಗೆ ತಳಮಟ್ಟದಿಂದ ಪಕ್ಷ ಸಂಘಟಿಸುವ ಆಸಕ್ತಿಯಾಗಲೀ ಅದಕ್ಕೆ ಬೇಕಾದ ರಣನೀತಿಗಳಾಗಲೀ ಇದ್ದಂತೆ ಕಾಣುವು ದಿಲ್ಲ. ದುರಂತ ಎಂದರೆ, ಕಾಂಗ್ರೆಸ್ ಈಗಲೂ ತನ್ನ ಫ್ಯೂಡಲ್ ಮನಸ್ಥಿತಿ ಯ ರಾಜಕೀಯ ದಿಂದ ಹೊರಬಂದಿಲ್ಲ. ಸಾಮಾನ್ಯ ಕಾರ್ಯಕರ್ತರು ಟಿಕೆಟ್ ಪಡೆಯುವುದು ಬಹಳ ಕಷ್ಟ. ಸಿಕ್ಕರೆ ಗೆಲ್ಲಲು ಹರಸಾಹಸ ಪಡಬೇಕು. ಗೆದ್ದರೆ, ಅಸ್ತಿತ್ವದ ರಕ್ಷಣೆಗೆ ಭಾರೀ ಹೋರಾಟ ಮಾಡಬೇಕು.
‘ಪಶ್ಚಿಮ ಬಂಗಾಳದಲ್ಲಿ ಟಿಎಂಸಿಯ ಅರಾಜಕ ಮತ್ತು ಭ್ರಷ್ಟ ಆಡಳಿತದಿಂದಾಗಿ ಪ್ರಜಾ ಪ್ರಭುತ್ವದ ಬುನಾದಿಗೇ ಪೆಟ್ಟು ಬಿದ್ದಿದೆ. ಇದರಿಂದ ಬಿಜೆಪಿಗೆ ಟಿಎಂಸಿಯೇ ಅನುಕೂಲ ಮಾಡಿಕೊಟ್ಟಿದೆ..’ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯ ಮೊದಲ ಹಂತದ ಮತದಾನಕ್ಕೆ 48 ಗಂಟೆ ಬಾಕಿ ಇರುವ ಮುನ್ನ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಈ ಹೇಳಿಕೆ ಇಡೀ ರಾಜ್ಯ ಕಾಂಗ್ರೆಸ್ ಘಟಕವನ್ನು ಕಕ್ಕಾಬಿಕ್ಕಿಗೊಳಿಸಿತ್ತು.
ಕಳೆದೈದು ವರ್ಷಗಳಿಂದ ಟಿಎಂಸಿ ಅಥವಾ ಮಮತಾ ಬ್ಯಾನರ್ಜಿ ವಿರುದ್ಧ ಸೊತ್ತದೆ ಮೌನ ವಾಗಿದ್ದ ರಾಹುಲ್ ಗಾಂಧಿಗೆ ಏಕಾಏಕಿಯಾಗಿ ಮಮತಾ ಬ್ಯಾನರ್ಜಿ ಅಪರಾಧಿಯಾಗಿ ಕಂಡು ಬಂದದ್ದು ಸಹಜವಾಗಿಯೇ ಕಾರ್ಯಕರ್ತರನ್ನು ಬೇಸ್ತು ಬೀಳಿಸಿತ್ತು.
ಬಾಂಗ್ಲಾದೇಶದ ಗಡಿಭಾಗದಲ್ಲಿರುವ ದೂರದ ಬಹರಾಮ್ಪುರ ಕ್ಷೇತ್ರದಲ್ಲಿ ಟಿಎಂಸಿ ಮತ್ತು ಬಿಜೆಪಿ ವಿರುದ್ಧ ಏಕಾಂಗಿ ಹೋರಾಟ ನಡೆಸುತ್ತಿದ್ದ ಹಿರಿಯ ನಾಯಕ ಅಧೀರ್ ರಂಜನ್ ಚೌಧುರಿ ಅವರಿಗೂ ರಾಹುಲ್ ಗಾಂಧಿ ಇಷ್ಟು ದಿನ ನಿದ್ದೆ ಮಾಡುತ್ತಿದ್ದರೇ ಎಂಬ ಪ್ರಶ್ನೆ ಖಂಡಿತವಾಗಿಯೂ ಕಾಡಿದ್ದಿರಬಹುದು.
ಹಾಗೆ ನೋಡಿದರೆ ಬಂಗಾಳದಲ್ಲಿ ಟಿಎಂಸಿ ವಿರುದ್ಧ ಬಿಜೆಪಿ ಸುದೀರ್ಘ ಸಾಂಕ ಹೋರಾಟ ನಡೆಸಿದ್ದರೆ, ಕಾಂಗ್ರೆಸ್‌ನ ಅಧೀರ್ ರಂಜನ್ ಚೌಧುರಿ ಅವರದ್ದು ಏಕಾಂಗಿ ಹೋರಾಟ. ಸಂಸತ್ತಿನ ಒಳ-ಹೊರಗೆ ದೀದಿ ವಿರುದ್ಧ ದಿಟ್ಟ ದನಿ ಹೊರ ಹಾಕಿದ್ದ ಏಕೈಕ ಕಾಂಗ್ರೆಸ್ಸಿಗ ಎಂದರೆ ಅದು ಅಧೀರ್ ರಂಜನ್. ಹೈಕಮಾಂಡ್ ಲೆಕ್ಕಾಚಾರ ಏನೇ ಇದ್ದರೂ, ರಾಜ್ಯದಲ್ಲಿ ಕಾಂಗ್ರೆಸ್ ರಾಜಕೀಯ ಪುನರುಜ್ಜೀವನಕ್ಕೆ ಟಿಎಂಸಿಯೇ ಬಹುದೊಡ್ಡ ಅಡ್ಡಿ ಎನ್ನುವುದು ಅವರಿಗೆ ಗೊತ್ತಿತ್ತು.
ಇದನ್ನೂ ಓದಿ: Raghava Sharma Nidle Column: ಟಿಎಂಸಿ ಮತ್ತು ದೀದಿಯ ಸೊಕ್ಕಡಗಿಸಿದ ಮತದಾರ
ಟಿಎಂಸಿಯನ್ನು ಎದುರಾಳಿ ಎಂದು ಪರಿಗಣಿಸದಿದ್ದರೆ ನಾವು ಅಸ್ತಿತ್ವ ಉಳಿಸಿಕೊಳ್ಳಲಾಗದು ಎಂದು ದಿಲ್ಲಿ ನಾಯಕರ ಮನವೊಲಿಸಲು ಅವರ ಎಲ್ಲಾ ಯತ್ನಗಳು ಮಣ್ಣುಪಾಲಾದವು. ದಿಲ್ಲಿ ಪವರ್ ಕಾರಿಡಾರ್‌ಗಳಲ್ಲಿ ಅಧಿಕಾರ ಅನುಭವಿಸುತ್ತಿದ್ದ ಕಾಂಗ್ರೆಸ್‌ನ ರಾಷ್ಟ್ರೀಯ ನಾಯಕರು ಅಧೀರ್ ರಂಜನ್ ಚೌಧುರಿಗೆ ಕನಿಷ್ಠ ಬೆಂಬಲವನ್ನೂ ನೀಡಲಿಲ್ಲ.
ಟಿಎಂಸಿಯ ಪೊಲಿಟಿಕಲ್ ಟೆರರ್‌ನಿಂದ ಹತಾಶೆ/ಆಕ್ರೋಶಗೊಂಡಿದ್ದ ಕಾಂಗ್ರೆಸ್ ಕಾರ್ಯ ಕರ್ತ ವರ್ಗಕ್ಕೆ ಮಾನಸಿಕ ಧೈರ್ಯ ನೀಡಲು, ಅವರಿಗೆ ಆಸರೆಯಾಗಿ ನಿಲ್ಲುವ ಸಣ್ಣ ಸಾಹಸ ಮಾಡಬೇಕೆಂದು ರಾಹುಲ್ ಗಾಂಧಿಗೆ ಅನ್ನಿಸಲೇ ಇಲ್ಲ. ಹೀಗಿದ್ದಾಗ, ಮತದಾನಕ್ಕೆ 1 ದಿನಕ್ಕೆ ಮುನ್ನ ರಾಹುಲ್ ಗಾಂಧಿಗೆ ಜ್ಞಾನೋದಯವಾದದ್ದನ್ನು ಕಂಡು ಕೈ ಕಾರ್ಯಕರ್ತರು, ಮುಖಂಡರಿಗೆ ನಗಬೇಕೋ ಅಳಬೇಕೋ ಗೊತ್ತಾಗಿರಲಿಲ್ಲ.
ರಾಜ್ಯದಲ್ಲಿ ನಶಿಸಿರುವ ಪಕ್ಷದ ಬೇರನ್ನು ಮತ್ತಷ್ಟು ಬಲಪಡಿಸಲು ಹೈಕಮಾಂಡ್ ಬೆಂಬಲ ಕ್ಕಾಗಿ ಕಾದು ಕುಳಿತಿದ್ದ ಅವರು, ರಾಹುಲ್ ಗಾಂಧಿ ಈ ಕೆಲಸವನ್ನು ಮೊದಲೇ ಮಾಡು ತ್ತಿದ್ದರೆ ಎಂದು ಮಾತನಾಡಿಕೊಂಡಿದ್ದರು. ಆದರೆ, ಈ ಮಾತನ್ನು ಕೇಳುವವರಾರು? ಬಂಗಾಳದ ರಾಜಕೀಯ ನಕ್ಷೆಯಲ್ಲಿ ಶೂನ್ಯದಲ್ಲಿದ್ದ ಬಿಜೆಪಿ ರಾಜ್ಯದ ಬಹುಪಾಲನ್ನು ಕೇಸರಿಮಯಗೊಳಿಸಲು ಪಟ್ಟ ಶ್ರಮ ಕಾಂಗ್ರೆಸ್‌ಗೆ ಪಾಠವಾಗಬೇಕು. ಮಮತಾ ದೀದಿಯನ್ನು ಅವರದ್ದೇ ನೆಲದಲ್ಲಿ ಬಗ್ಗು ಬಡಿಯುವುದೆಂದರೆ ಸುಲಭದ ಮಾತೇ? ಸುದೀರ್ಘ ಕಾರ್ಯ ತಂತ್ರ, ಅಭಿಯಾನ, ಸೈದ್ಧಾಂತಿಕ ರೂಪಾಂತರ, ಕಾರ್ಯಕರ್ತರಲ್ಲಿ ನೈತಿಕ ಸ್ಥೈರ್ಯ ತುಂಬುವುದು, ಮತದಾರರ ಮನಃಪರಿವರ್ತನೆ ಸೇರಿದಂತೆ ಹತ್ತಾರು ನೆಲೆಯಲ್ಲಿ ಪಕ್ಷವನ್ನು ಸಜ್ಜುಗೊಳಿಸಬೇಕಾಗುತ್ತದೆ.
ಆದರೆ, ದಿಲ್ಲಿ ಮಟ್ಟದಲ್ಲಿ ಸ್ನೇಹಿತೆ ಎಂಬ ಕಾರಣಕ್ಕಾಗಿ ಮಮತಾ ಮೇಲೆ ಕಾಂಗ್ರೆಸ್ಸಿನ ದಿಲ್ಲಿ ದೊರೆಗಳು ತೋರಿದ ಮಮಕಾರ ರಾಜ್ಯ ಘಟಕದ ಬುಡಕ್ಕೇ ಕೊಳ್ಳಿ ಇಟ್ಟಿತು. ಅಸ್ಸಾಂ ನಲ್ಲೂ ಪರಿಸ್ಥಿತಿ ಭಿನ್ನವಾಗಿರಲಿಲ್ಲ. ಹಿಮಾಂತ ಬಿಸ್ವ ಶರ್ಮ ಮೂಲತಃ ಕಾಂಗ್ರೆಸ್ ಪ್ರತಿಭೆ. ಮಾಜಿ ಮುಖ್ಯಮಂತ್ರಿ ತರುಣ್ ಗೊಗೊಯ್ ಬಲಗೈ ಬಂಟ ಎಂದೇ ಖ್ಯಾತಿಯಾಗಿದ್ದವರು.
ಆದರೆ, ರಾಹುಲ್ ಗಾಂಧಿ ತೋರಿದ ಅಸಡ್ಡೆ, ನಿರ್ಲಕ್ಷ ದಿಂದಾಗಿ ಹಿಮಾಂತ ಬಿಜೆಪಿ ಸೇರಿದ್ದರು. ಹಿಂದೊಮ್ಮೆ ದಿಲ್ಲಿಯಲ್ಲಿ ಭೇಟಿಯಾಗಲು ಬಂದಿದ್ದ ಹಿಮಾಂತ ಶರ್ಮರ ಮಾತುಗಳನ್ನು ಕೇಳುವ ಬದಲು, ರಾಹುಲ್ ಗಾಂಧಿಗೆ ತಮ್ಮ ಪ್ರೀತಿಯ ನಾಯಿಗೆ ಬಿಸ್ಕತ್ ಹಾಕುವುದು ಮುಖ್ಯವಾಗಿತ್ತು.
ತರುಣ್ ಗೊಗೊಯ್ ಪುತ್ರ ಗೌರವ್ ಗೊಗೊಯ್ ಬಗ್ಗೆ ರಾಹುಲ್ ತೋರುತ್ತಿದ್ದ ವಿಶೇಷ ಪ್ರೀತಿ, ಅಭಿಮಾನಗಳು ಹಿಮಾಂತಗೆ ಸಂಕೇತಗಳನ್ನು ನೀಡಿದ್ದವು. ಹಾಗಾಗಿ ಅವರು ರಾಜಕೀಯ ನೆಲೆಗಾಗಿ ಬಿಜೆಪಿಯನ್ನು ಆರಿಸಿಕೊಂಡರು. ಬಿಜೆಪಿಯೂ ಹಿಮಾಂತರಂತಹ ನಾಯಕರಿಗಾಗಿ ಕಾಯುತ್ತಿತ್ತು. ಈಗ ಈಶಾನ್ಯ ಭಾರತದ ಪ್ರಭಾವಿ ಬಿಜೆಪಿ ನಾಯಕನಾಗಿ ಹಿಮಾಂತ ಹೊರಹೊಮ್ಮಿದ್ದಾರೆ.
ಅಷ್ಟೇ ಏಕೆ, ಪಶ್ಚಿಮ ಬಂಗಾಳದಲ್ಲಿ ಹಿಮಾಂತ ಬಿಸ್ವ ಶರ್ಮರ ಚುನಾವಣಾ ರ‍್ಯಾಲಿಗಳಿಗೆ ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡ ಜನ ಮಾಮ...ಮಾಮ... ಎಂದು ಬೊಬ್ಬಿಕ್ಕುತ್ತಿದ್ದು ದನ್ನು ನಾನೇ ಕಂಡಿದ್ದೆ. ಅಂದರೆ, ಅವರ ಜನಪ್ರಿಯತೆ ಈಶಾನ್ಯದಾಚೆಯೂ ಹಬ್ಬುತ್ತಿದೆ. ಈ ನಡುವೆ ಅಸ್ಸಾಂ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕತ್ವ ವಹಿಸಿದ್ದ ಗೌರವ್ ಗೊಗೊಯ್ ತಾವು ಸ್ಪರ್ಧಿಸಿದ್ದ ಕ್ಷೇತ್ರದಲ್ಲೂ ಸೋತರು.
ಈಗ ಕರ್ನಾಟಕದ ವಿಷಯಕ್ಕೆ ಬರೋಣ. 2024ರ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಒಂಬತ್ತು ಕಡೆ ನಾಯಕರ ಮಕ್ಕಳಿಗೆ ಟಿಕೆಟ್ ನೀಡಿತ್ತು. ಇದಕ್ಕೆ ಕೊಟ್ಟ ಕಾರಣ ಅವರಿಗೆ ಗೆಲ್ಲುವ ಸಾಮರ್ಥ್ಯವಿದೆ ಎನ್ನುವುದಾಗಿತ್ತು. ಅವರಲ್ಲಿ ಕೆಲ ಮಕ್ಕಳು ಸೋತರೆ, ಮತ್ತೆ ಕೆಲವರು ಗೆದ್ದರು.
ಇತ್ತೀಚಿನ ದಾವಣಗೆರೆ ದಕ್ಷಿಣ, ಬಾಗಲಕೋಟೆ ಉಪಚುನಾವಣೆಯಲ್ಲಿ ಮತ್ತೆ ನಾಯಕರ ಮಕ್ಕಳಿಗೆ ಮಣೆ ಹಾಕಲಾಯಿತು. ದಾವಣಗೆರೆ ದಕ್ಷಿಣ ಕ್ಷೇತ್ರದ ಉಪ ಚುನಾವಣೆಯಲ್ಲಿ ಶ್ಯಾಮನೂರು ಶಿವಶಂಕರಪ್ಪ ಅವರ ಮೊಮ್ಮಗ ಸಮರ್ಥ ಶ್ಯಾಮನೂರು ಗೆದ್ದು ಶಾಸಕ ನಾಗಿರಬಹುದು. ಆದರೆ, ಈ ಕ್ಷೇತ್ರವನ್ನು ಶ್ಯಾಮನೂರು ಕುಟುಂಬಕ್ಕೇ ಗುತ್ತಿಗೆ ನೀಡಿದಂತೆ ವರ್ತಿಸುವ ರಾಜ್ಯದ ಮತ್ತು ದಿಲ್ಲಿ ನಾಯಕರ ಮನಸ್ಥಿತಿ ಅನೇಕರಿಗೆ ಬೇಸರ ತರಿಸಿದ್ದ ರಿಂದಲೇ ಸ್ವಪಕ್ಷೀಯರು ತೆರೆಮರೆಯಲ್ಲಿ ಸಮರ್ಥರನ್ನು ಸೋಲಿಸುವ ಯತ್ನ ಮಾಡಿದರು.
ದುರಂತ ಎಂದರೆ, ಕಾಂಗ್ರೆಸ್ ಈಗಲೂ ತನ್ನ ಫ್ಯೂಡಲ್ ಮನಸ್ಥಿತಿಯ ರಾಜಕೀಯದಿಂದ ಹೊರಬಂದಿಲ್ಲ. ಸಾಮಾನ್ಯ ಕಾರ್ಯಕರ್ತರು ಟಿಕೆಟ್ ಪಡೆಯುವುದು ಇಲ್ಲಿ ಬಹಳ ಕಷ್ಟ. ಸಿಕ್ಕರೂ ಗೆಲ್ಲಲು ಹರಸಾಹಸ ಪಡಬೇಕು. ಗೆದ್ದರೆ, ಅಸ್ತಿತ್ವದ ರಕ್ಷಣೆಗಾಗಿ ಭಾರೀ ಹೋರಾಟ ಮಾಡಬೇಕು. ಆದರೆ, ಬಿಜೆಪಿಗೆ ಸೇರಿದ ಸಾಮಾನ್ಯ ಕಾರ್ಯಕರ್ತ ಕೂಡ ಪಕ್ಷದ ಅಧ್ಯಕ್ಷ, ಪ್ರಧಾನಿಯಾಗಬಹುದು.
ಇದಕ್ಕೆ ನರೇಂದ್ರ ಮೋದಿ ಹಾಗೂ ನಿತಿನ್ ನಬಿನ್ ತಾಜಾ ಉದಾಹರಣೆ. ಮಾಜಿ ಸಿಎಂ, ಮಾಜಿ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡರು ಕೆಎಂಎಫ್ ಅಧ್ಯಕ್ಷರಾದರೆ ಸಾಕು ಎಂದು ಲಾಬಿ ಮಾಡಿದ್ದವರು. ಅದರೆ, ಪಕ್ಷ ಅವರನ್ನು ವಿಧಾನಸೌಧ, ದಿಲ್ಲಿಯ ಸಂಸತ್ ಪವರ್ ಕಾರಿಡಾರ್‌ಗಳತ್ತ ಕರೆದೊಯ್ದಿತ್ತು.
ಕಾಂಗ್ರೆಸ್ಸಿನಲ್ಲಿ ಈಗ ಇಂಥಾ ಪರಿಸ್ಥಿತಿ ಇದೆಯೇ? ಪಶ್ಚಿಮ ಬಂಗಾಳದ ಹಳ್ಳಿಯೊಂದರಲ್ಲಿ ಮುಸುರೆ ತಿಕ್ಕುತ್ತಿದ್ದ ಕಲಿತಾ 2021ರಲ್ಲಿ ಸೋತಿದ್ದರೂ, 2026ರಲ್ಲಿ ಮತ್ತೆ ಆಕೆಗೆ ಟಿಕೆಟ್ ನೀಡಿದ ಬಿಜೆಪಿ, ಆಕೆಯ ಎಲ್ಲಾ ಖರ್ಚುಗಳನ್ನು ನೋಡಿಕೊಂಡು ಟಿಎಂಸಿ ವಿರುದ್ಧ ಚುನಾವಣೆ ಗೆಲ್ಲುವಂತೆ ಮಾಡಿದ್ದು ಸಾಮಾನ್ಯ ಸಾಧನೆಯೇ? ಮುಸುರೆ ತಿಕ್ಕುತ್ತಿದ್ದ ಆಕೆಯ ಕೈಗಳು ಈಗ ತನ್ನ ವಿಧಾನಸಭೆ ಕ್ಷೇತ್ರವೊಂದರ ಜನರ ಏಳಿಗೆಗಾಗಿ ಅನುದಾನ ಹಂಚುವ ಹಂತಕ್ಕೆ ಬೆಳೆದು ನಿಂತಿವೆ.
ದುರಂತ ಎಂದರೆ, ಕಾಂಗ್ರೆಸ್ ಇಂಥಾ ಬದಲಾವಣೆಗೆ ತೆರೆದುಕೊಳ್ಳುತ್ತಿಲ್ಲ. ಇದಕ್ಕೆ ಮೂಲ ಕಾರಣ ದುರ್ಬಲ ಹೈಕಮಾಂಡ್ ಮತ್ತು ಪಕ್ಷದ ಎಲ್ಲಾ ಅಧಿಕಾರಗಳು ಗಾಂಧಿ ಕುಟುಂಬಕ್ಕೆ ಸೀಮಿತಗೊಂಡಿರುವುದು. ಮೇಲಾಗಿ, ಗಾಂಧಿ ಕುಟುಂಬದ ಕಾಲೊತ್ತುವವರು ಮಾತ್ರ ಉನ್ನತ ಸ್ಥಾನಕ್ಕೇರುವುದು.
ಕಾಂಗ್ರೆಸ್ಸಿನಲ್ಲಿ ಟಿಕೆಟ್ ಕೈ ತಪ್ಪಿದರೆ, ಅಭ್ಯರ್ಥಿಯನ್ನು ಸೋಲಿಸಲು ಸ್ವಪಕ್ಷೀಯರೇ ಪಿತೂರಿ, ಒಳಸಂಚು ನಡೆಸುತ್ತಾರೆ. ಅಭ್ಯರ್ಥಿ ಸೋತರೆ ಸಂಭ್ರಮಿಸುತ್ತಾರೆ. 2019ರಲ್ಲಿ ಕೋಲಾರ ಲೋಕಸಭಾ ಚುನಾವಣೆಯಲ್ಲಿ ಕೆ.ಎಚ್. ಮುನಿಯಪ್ಪ ಸೋಲಿಸಿದ್ದು ಕಾಂಗ್ರೆಸ್ನ ಶಾಸಕರು ಎಂಬುದನ್ನು ಕಾಂಗ್ರೆಸ್ಸಿಗರೇ ಒಪ್ಪಿಕೊಳ್ಳುತ್ತಾರೆ.
ಸೋಲಿಸಿದವರು ಈಗಿನ ಸರ್ಕಾರದಲ್ಲಿ ಶಾಸಕರು, ಮಂತ್ರಿ ಕೂಡ ಆಗಿದ್ದಾರೆ. ಅವರ ವಿರುದ್ಧ ಯಾವುದೇ ಶಿಸ್ತು ಕ್ರಮ ಆಗಿಲ್ಲ. ಬದಲಾಗಿ, ಬಡ್ತಿ ನೀಡಲಾಗಿದೆ. ಬಿಜೆಪಿಯಲ್ಲಿ ಪರಿಸ್ಥಿತಿ ಭಿನ್ನವಿದೆ. ಯಾರಿಗೆ ಟಿಕೆಟ್ ಕೊಟ್ಟರೂ, ಏನೇ ಅಸಮಾಧಾನಗಳಿದ್ದರೂ, ಬದ್ಧತೆಯಿಂದ ಕೆಲಸ ಮಾಡುವ ಕಾರ್ಯಕರ್ತ ವರ್ಗವಿದೆ.
ಹಗಲು, ರಾತ್ರಿ ಎನ್ನದೇ ಗೆಲುವಿಗೆ ತಂತ್ರ ರೂಪಿಸುತ್ತಾರೆ. ಈಗ ಸೋತರೇನಂತೆ, ಭವಿಷ್ಯದಲ್ಲಿ ಗೆಲ್ಲುತ್ತಾರೆ ಎಂಬ ವಿಶ್ವಾಸದಿಂದ ದೀರ್ಘಕಾಲದ ತಯಾರಿ ನಡೆಸುತ್ತಾರೆ. ಇದಕ್ಕೆ ಪಶ್ಚಿಮ ಬಂಗಾಳಕ್ಕಿಂತ ಒಳ್ಳೆಯ ಉದಾಹರಣೆ ಸಿಗದು. 2011ರಲ್ಲಿ ಶೂನ್ಯ ಸಂಪಾದನೆ ಮಾಡಿದ್ದ ಬಿಜೆಪಿ 2016ರಲ್ಲಿ 3, 2021ರಲ್ಲಿ 77 ಹಾಗೂ 2026ರಲ್ಲಿ 205 ಸೀಟುಗಳ ಸ್ಪಷ್ಟ ಬಹುಮತ ಪಡೆದುಕೊಂಡಿರುವುದರ ಹಿಂದೆ ಹಿಂಸೆ, ದುಃಖ, ಸಂಕಟ ಅನುಭವಿಸಿದ ಅಪಾರ ಸಾವು-ನೋವಿನ ಕಥೆಗಳಿವೆ.
ಕೇಸರಿಪಡೆ ದೀರ್ಘಕಾಲದಿಂದ ಅಧಿಕಾರ ಕಳೆದುಕೊಂಡ ಉತ್ತರ ಪ್ರದೇಶ, ದೆಹಲಿ ಅಲ್ಲದೆ ಮೊದಲ ಬಾರಿಗೆ ಒಡಿಶಾ, ಬಂಗಾಳ, ತ್ರಿಪುರಾದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಈ ರಾಜ್ಯಗಳಲ್ಲಿ ಅಧಿಕಾರ ನಡೆಸಿದ್ದ ಕಾಂಗ್ರೆಸ್ ಈಗ ಶೋಚನೀಯ ಸ್ಥಿತಿಯಲ್ಲಿದೆ.
ಸತತ 15 ವರ್ಷ ದೆಹಲಿಯಲ್ಲಿ ಸರ್ಕಾರ ನಡೆಸಿದ್ದ ಕಾಂಗ್ರೆಸ್ಸಿಗೆ ದಿಲ್ಲಿಯಲ್ಲಿ ಸಂಸದ ಬಿಡಿ, ಕನಿಷ್ಠ ಒಬ್ಬ ಶಾಸಕನೂ ಇಲ್ಲ. ಕೇರಳದಲ್ಲಿ ಕಾಂಗ್ರೆಸ್ ಅಧಿಕಾರಕ್ಕೇರಿದ್ದರೂ, ಸ್ವಂತಬಲ ದಿಂದ ಅಧಿಕಾರ ಸ್ಥಾಪನೆ ಸಾಧ್ಯವಿಲ್ಲ. ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) ಸಹಾಯವಿಲ್ಲದೆ ಕೇರಳ ಕಾಂಗ್ರೆಸ್‌ಗೆ ಭದ್ರವಾಗಿ ತಳವೂರಲಾಗಿಲ್ಲ.
ಕಾಂಗ್ರೆಸ್‌ನ ದಿಲ್ಲಿ ಮುಖಗಳನ್ನು ನೋಡಿದಾಗ ಅವರಿಗೆ ತಳಮಟ್ಟದಿಂದ ಪಕ್ಷ ಸಂಘಟಿಸುವ ಆಸಕ್ತಿಯಾಗಲೀ ಅದಕ್ಕೆ ಬೇಕಾದ ರಣನೀತಿಗಳಾಗಲೀ ಇದ್ದಂತೆ ಕಾಣುವು ದಿಲ್ಲ. 2021ರಲ್ಲಿ ಪಂಜಾಬಿನಲ್ಲಿ ನವಜೋತ್ ಸಿಂಗ್ ಸಿಧು ಹಠಮಾರಿತನಕ್ಕೆ ರಾಹುಲ್, ಪ್ರಿಯಾಂಕಾ ಗಾಂಧಿ ತಲೆಬಾಗಿದ್ದರಿಂದಾಗಿ, ಹಿಂದೆ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಯವರ ಆಪ್ತನಾಗಿದ್ದ, ಸೋನಿಯಾ ಗಾಂಧಿ ಮತ್ತು ಕಾಂಗ್ರೆಸ್‌ಗೆ ನಿಷ್ಠರಾಗಿದ್ದ ಕ್ಯಾ. ಅಮರೀಂದರ್ ಸಿಂಗ್ ಅವರನ್ನು ಕಾಂಗ್ರೆಸ್ ಕಳೆದುಕೊಂಡಿತು.
ದಿಲ್ಲಿ ನಾಯಕರ ವಿಚಿತ್ರ ತೀರ್ಮಾನಗಳಿಂದಾಗಿ ಆಮ್ ಆದ್ಮಿ ಪಕ್ಷ 2021ರ ವಿಧಾನಸಭೆ ಚುನಾವಣೆಯಲ್ಲಿ ಐತಿಹಾಸಿಕ ಗೆಲುವು ಸಾಧಿಸಿತ್ತು. ಉತ್ತರ ಪ್ರದೇಶ, ಬಿಹಾರದ ರಾಜ್ಯ ಗಳಲ್ಲಿ ಪ್ರಾದೇಶಿಕ ಪಕ್ಷಗಳು ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಳ್ಳುವುದರಿಂದ ಆ ಪಕ್ಷಗಳ ಸೋಲಿಗೂ ಪರೋಕ್ಷವಾಗಿ ಕಾಂಗ್ರೆಸ್ಸೇ ಕಾರಣವಾಗುತ್ತಿದೆ.
ಬಿಹಾರದಲ್ಲಿ ಆರ್‌ಜೆಡಿ ಸೋತದ್ದು ಇದಕ್ಕೊಂದು ಉದಾಹರಣೆ. ಈಗ ಅಸ್ಸಾಂ, ಪಶ್ಚಿಮ ಬಂಗಾಳದ ಸೋಲಿನ ನಂತರವಾದರೂ ಕಾಂಗ್ರೆಸ್ ತಳಮಟ್ಟದಲ್ಲಿ ಪಕ್ಷ ಸಂಘಟಿಸಿ, ಹೋರಾಟಕ್ಕೆ ಅಣಿಯಾಗಬೇಕು. ಭದ್ರ ಭವಿಷ್ಯದ ದೃಷ್ಟಿಯಿಂದ ಪ್ರಾದೇಶಿಕ ನಾಯಕರನ್ನು ಗುರುತಿಸಿ ಅಧಿಕಾರ ಹಂಚಿಕೆ ಮಾಡಬೇಕು. ಹಾಗಾದಾಗ ಮಾತ್ರ 2029ರ ಲೋಕಸಭೆ ಚುನಾವಣೆಯಲ್ಲಿ ಗೆಲುವಿನ ಕನಸು ಕಾಣಬಹುದು.
ಇಲ್ಲವಾದಲ್ಲಿ, ಬಿಜೆಪಿಯನ್ನು ಕಟ್ಟಿಹಾಕುವುದು ಸುಲಭವಲ್ಲ. ಆದರೆ, ರಾಹುಲ್ ಗಾಂಧಿ ನಾಯಕತ್ವದ ಬಗ್ಗೆ ಭ್ರಮನಿರಸನಗೊಂಡಿರುವ ಅನೇಕರಲ್ಲಿ ಪಕ್ಷದ ಪುನಶ್ಚೇತನದ ಬಗ್ಗೆ ವಿಶ್ವಾಸ ಉಳಿದುಕೊಂಡಿಲ್ಲ. ಧ್ರುವನಾರಾಯಣರ ಮಾತು: ಐದಾರು ವರ್ಷಗಳ ಹಿಂದೆ, ಮೈಸೂರಿನ ಕಾಂಗ್ರೆಸ್ ಕಚೇರಿಯಲ್ಲಿ ಪಕ್ಷದಿಂದ ಕಾರ್ಯಕ್ರಮವೊಂದನ್ನು ಆಯೋಜಿಸ ಲಾಗಿತ್ತು. ಅಲ್ಲಿನ ಸಣ್ಣ ವೇದಿಕೆಯಲ್ಲಿ ಬಹಳ ಮಂದಿ ಆಸೀನರಾಗಿದ್ದರು. ಕಾರ್ಯಕ್ರಮ ನಿರೂಪಣೆ ಮಾಡುವವರಿಗೆ ಎಲ್ಲರನ್ನೂ ಸ್ವಾಗತಿಸಲು ಸಾಧ್ಯವಾಗಿರಲಿಲ್ಲ.
ಅಷ್ಟಕ್ಕೆ ಕೆಳಗಿದ್ದ ಬೆರಳೆಣಿಕೆಯಷ್ಟು ಮಂದಿ ಕಾರ್ಯಕರ್ತರು ಜಗಳ ಕಾದು, ಗದ್ದಲ ಎಬ್ಬಿಸಿದ್ದರು. ಕುರ್ಚಿಗಳನ್ನು ಎಸೆದಾಡಿದ್ದರು. ನಂತರ ಕಾರ್ಯಕ್ರಮಕ್ಕೆ ಬಂದಿದ್ದ ಎಲ್ಲರನ್ನೂ ಸಮಾಧಾನಪಡಿಸಿ ಮಾತನಾಡಿದ್ದ ಆಗಿನ ಕೆಪಿಸಿಸಿ ಕಾರ್ಯಾಧ್ಯಕ್ಷ, ಮಾಜಿ ಸಂಸದ ಧ್ರುವನಾರಾಯಣ ಅವರು, ಕಾಂಗ್ರೆಸ್ ಪಕ್ಷದಲ್ಲಿ ನಾಯಕರೇ ಜಾಸ್ತಿ.
ಇದೇ ನಮ್ಮ ದೊಡ್ಡ ಸಮಸ್ಯೆ. ಇಲ್ಲಿ ನೈಜ ಕಾರ್ಯಕರ್ತರನ್ನು ದುರ್ಬೀನು ಹಾಕಿ ಹುಡುಕ ಬೇಕಾಗುತ್ತದೆ ಎಂದು ಬೇಸರ ಹೊರಹಾಕಿದ್ದರು. ಸಾಮಾನ್ಯ ಕಾರ್ಯಕರ್ತನಂತೆ, ಸೈದ್ಧಾಂತಿಕ ಬದ್ಧತೆಯಿಂದ ಒಗ್ಗಟ್ಟಿನಿಂದ ಕೆಲಸ ಮಾಡಿದರಷ್ಟೇ ನಾವು ಗೆಲುವು ಕಾಣಬಹುದು, ಅಧಿಕಾರ ಹಿಡಿಯಬಹುದು. ಇಲ್ಲದಿದ್ದರೆ, ಶಾಶ್ವತ ವಿರೋಧ ಪಕ್ಷವೇ ಗತಿಯಾಗಬೇಕಾಗುತ್ತದೆ ಎಂದು ಕಿವಿಮಾತು ಹೇಳಿದ್ದರು. ಧ್ರುವನಾರಾಯಣರು ಈಗ ಬದುಕಿ ಉಳಿದಿಲ್ಲ. ಅವರ ಆ ಕಿವಿಮಾತುಗಳೂ ಅವರೊಂದಿಗೆ ಮರೆಯಾಗಿ ಹೋಗಿದೆ.