Raghava Sharma Nidle Column: ಟಿಎಂಸಿ ಮತ್ತು ದೀದಿಯ ಸೊಕ್ಕಡಗಿಸಿದ ಮತದಾರ
ಉತ್ತರ 24 ಪರಗಣ ಜಿಲ್ಲೆಯ ಸುಂದರಬನ್ ಮ್ಯಾಂಗ್ರೂವ್ ಕಾಡುಗಳ ಮಧ್ಯೆ ಇರುವ ಹಲವು ದ್ವೀಪ ಗಳಲ್ಲಿ ಸಂದೇಶ್ ಖಲಿ ಕೂಡ ಒಂದು. ಬಂಗಾಳ ಚುನಾವಣೆ ಪ್ರವಾಸದ ನಾನು ವೇಳೆ ಸಂದೇಶ್ ಖಲಿ ವಿಧಾನಸಭೆ ಕ್ಷೇತ್ರಕ್ಕೆ ಭೇಟಿ ನೀಡಿದ್ದಾಗ 2024ರ ಬಡ ಮಹಿಳೆಯರ ಮೇಲೆ ಎಸಗಲಾದ ಲೈಂಗಿಕ ದೌರ್ಜನ್ಯ, ಜಮೀನು ಅತಿಕ್ರಮದ ಘಟನಾವಳಿಗಳೇ ಕಣ್ಣ ಮುಂದೆ ಬಂದಿದ್ದವು. ನಾನು ಅಲ್ಲಿದ್ದಾಗ ದ್ವೀಪದ ಸುತ್ತ ಸೇನಾನಿಗಳ ಸರ್ಪಗಾವಲಿತ್ತು
-
ಜನಪಥ
ಪಶ್ಚಿಮ ಬಂಗಾಳದಲ್ಲಿ 15 ವರ್ಷ ಆಡಳಿತ ನಡೆಸಿದ್ದ ತೃಣಮೂಲ ಕಾಂಗ್ರೆಸ್ ಪಕ್ಷವನ್ನು ಹೀನಾಯ ವಾಗಿ ಸೋಲಿಸಿದ ಬಿಜೆಪಿ ಹೊಸ ರಾಜಕೀಯ ಇತಿಹಾಸ ಸೃಷ್ಟಿಸಿದ್ದೇನೋ ನಿಜ. ಆದರೆ, ಜನರಿಗೆ ದೌರ್ಜನ್ಯ, ಹಿಂಸೆ, ಅಪಮಾನ ಮಾಡಿದವರನ್ನು ರಾಜ್ಯದ ಮತದಾರ ತಿರಸ್ಕರಿಸಿದ ಮಾದರಿ ಇದೆಯ, ಅದು ದುರಹಂಕಾರ ಮತ್ತು ಸೊಕ್ಕಿನ ವರ್ತನೆಗಳಿಗೆ ಇಂದ ನಾಳೆ ಸೋಲು ಖಚಿತ ಎಂಬ ಸ್ಪಷ್ಟ ಸಂದೇಶವನ್ನು ರವಾನಿಸಿದೆ.
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಸರ್ಕಾರ ಹಾಗೂ ಪಕ್ಷದ ಗೂಂಡಾ ರಾಜಕಾರಣಕ್ಕೆ ಮರೆಯಲಾಗದ ಛಡಿಯೇಟು ನೀಡಿರುವ ಮತದಾರರು, ಮಮತಾ ದೀದಿ ಕಟ್ಟಿದ್ದ ಗೂಂಡಾಗಳ ಸಾಮ್ರಾಜ್ಯವನ್ನು ಛಿದ್ರಗೊಳಿಸಿದ್ದಾರೆ.
ಈ ಚುನಾವಣೆಯಲ್ಲಿ ರೇಖಾ ಪಾತ್ರ, ರತ್ನಾ ದೇಬ್ನಾಥ್ ಮತ್ತು ಕಲಿತಾ ಮಾಂಜಿ ಎಂಬ ಮೂವರು ಸಾಮಾನ್ಯ ಮಹಿಳೆಯರ ಗೆಲುವನ್ನು ನಾಗರಿಕ ಸಮಾಜ ಸಂಭ್ರಮಿಸಿದೆ. ಪ್ರಜಾತಂತ್ರ ವ್ಯವಸ್ಥೆಯು ಆಡಳಿತಶಾಹಿಯ ಅಟ್ಟಹಾಸವನ್ನು ಹೇಗೆ ಮಟ್ಟ ಹಾಕುತ್ತದೆ ಎಂಬುದಕ್ಕೆ ಬಂಗಾಳದ ಈ ಮೂವರು ಮಹಿಳೆಯರು ಸಾಕ್ಷಿಯಾಗಿ ನಿಂತಿದ್ದಾರೆ.
1. ರೇಖಾ ಪಾತ್ರ
ಉತ್ತರ 24 ಪರಗಣ ಜಿಲ್ಲೆಯ ಸುಂದರಬನ್ ಮ್ಯಾಂಗ್ರೂವ್ ಕಾಡುಗಳ ಮಧ್ಯೆ ಇರುವ ಹಲವು ದ್ವೀಪಗಳಲ್ಲಿ ಸಂದೇಶ್‌ಖಲಿ ಕೂಡ ಒಂದು. ಬಂಗಾಳ ಚುನಾವಣೆ ಪ್ರವಾಸದ ನಾನು ವೇಳೆ ಸಂದೇಶ್ ಖಲಿ ವಿಧಾನಸಭೆ ಕ್ಷೇತ್ರಕ್ಕೆ ಭೇಟಿ ನೀಡಿದ್ದಾಗ 2024ರ ಬಡ ಮಹಿಳೆಯರ ಮೇಲೆ ಎಸಗಲಾದ ಲೈಂಗಿಕ ದೌರ್ಜನ್ಯ, ಜಮೀನು ಅತಿಕ್ರಮದ ಘಟನಾವಳಿಗಳೇ ಕಣ್ಣ ಮುಂದೆ ಬಂದಿದ್ದವು. ನಾನು ಅಲ್ಲಿzಗ ದ್ವೀಪದ ಸುತ್ತ ಸೇನಾನಿಗಳ ಸರ್ಪಗಾವಲಿತ್ತು. ಹಾಗಂತ, ಶೋಷಿತ ಮಹಿಳೆಯರ ನೋವು ಕಡಿಮೆಯಾಗಿರಲಿಲ್ಲ. ಟಿಎಂಸಿಯ ಗೂಂಡಾ, ಈಗ ಜೈಲಲ್ಲಿರುವ ಶೇಖ್ ಷಾಜಹಾನ್ ಹಾಗೂ ಆತನ ಕಾಲಾಳುಗಳ ದೌರ್ಜನ್ಯದಿಂದ ರೋಸಿ ಹೋಗಿದ್ದವರು ಚುನಾವಣೆ ಕುರಿತ ತಮ್ಮ ಅನಿಸಿಕೆ ಹೇಳಲೂ ಹಿಂಜರಿಯುತ್ತಿದ್ದರು. ಸಂದೇಶ್‌ಖಲಿ ತನ್ನದೇ ಸಾಮ್ರಾಜ್ಯ ಎಂದು ದರ್ಪದಿಂದ ವರ್ತಿಸುತ್ತಿದ್ದ ಶೇಖ್ ಷಾಜಹಾನ್, ಬಡವರ ಜಮೀನುಗಳನ್ನು ಅತಿಕ್ರಮಿಸಿ, ಅಲ್ಲಿ ಮೀನುಗಾರಿಕೆ ಮಾಡಿ ಕೋಟಿಗಟ್ಟಲೆ ಹಣ ಸಂಪಾದನೆ ಮಾಡುತ್ತಿದ್ದ. ಬಡ ಕಾರ್ಮಿಕರಿಗೆ ಸರಿಯಾಗಿ ಕೂಲಿ ಯನ್ನೂ ನೀಡುತ್ತಿರಲಿಲ್ಲ.
ಇದನ್ನೂ ಓದಿ: Raghava Sharma Nidle Column: ದೀದಿಗೆ ಗುಡ್‌ಬೈ , ಮೋದಿಗೆ ಹಾಯ್ ಹಾಯ್..!
ಶಾಜಹಾನ್ ಮತ್ತು ಆತನ ಸಹಚರರು ಮಹಿಳೆಯರಿಗೆ ನೀಡಿದ ಹಿಂಸೆ ಅಷ್ಟಿಷ್ಟಲ್ಲ. ನ್ಯಾಯ ಕೊಡಿಸುತ್ತೇವೆ ಎಂದು ಕಚೇರಿಗಳಿಗೆ ಕರೆಯುತ್ತಿದ್ದ ದುಷ್ಟರು ಲೈಂಗಿಕ ದೌರ್ಜನ್ಯ ಮಾಡುತ್ತಿದ್ದರು ಎಂದು ಈ ಮಹಿಳೆಯರೇ ಪೊಲೀಸರಿಗೆ ದೂರು ಕೊಟ್ಟಿದ್ದರು. ಕೊನೆಗೂ ರೇಖಾ ಪಾತ್ರ ಎಂಬ ಮಹಿಳೆ ಮುಂದೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರಿಂದ, ಇತರೆ ಮಹಿಳೆಯ ರಿಗೂ ಧೈರ್ಯ ಬಂದು ಅವರೂ ಶೇಖ್ ಷಾಜಹಾನ್, ಆತನ ಸಹಚರರಾದ ಶಿವಪ್ರಸಾದ್ ಹಜ್ರ ಮತ್ತು ಉತ್ತಮ್ ಸರ್ದಾರ್ ಎಂಬ ಗೂಂಡಾಗಳ ವಿರುದ್ಧ ಬೀದಿಗಿಳಿದಿದ್ದರು. ಆದರೆ, ಈ ಮಹಿಳೆ ಯರ ಮನೆಗಳ ಮೇಲೆ ದಾಳಿಗಳಾಗಿ, ಜಮೀನುಗಳನ್ನು ನಾಶ ಮಾಡಲಾಯ್ತು. ಇಷ್ಟೆಲ್ಲ ನಡೆದರೂ ಟಿಎಂಸಿ ಮತ್ತು ಸಿಎಂ ಮಮತಾ ಬ್ಯಾನರ್ಜಿ ಮಾತ್ರ ಏನೂ ಆಗಿಲ್ಲ ಎಂಬಂತೆ ಸುಮ್ಮನಿದ್ದರು.
ಕೊನೆಗೆ ಶೇಖ್ ಶಾಜಹಾನ್ ವಿರುದ್ಧ ಇ.ಡಿ ಕೇಸು ದಾಖಲಿಸುತ್ತದೆ. ನಂತರ, ಆತ ನಾಪತ್ತೆಯಾಗಿ, 55 ದಿನಗಳ ಬಳಿಕ ಪೊಲೀಸರಿಗೆ ಶರಣಾಗುತ್ತಾನೆ. ಸಂದೇಶ್ ಖಲಿಯಲ್ಲಿ ಲೈಂಗಿಕ ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ಬಿಜೆಪಿ ಧ್ವನಿಯಾಗುತ್ತದೆ. ಅವರ ಹೋರಾಟಕ್ಕೆ ಬೆನ್ನೆಲುಬಾಗಿ ನಿಲ್ಲುತ್ತದೆ.
2024ರ ಲೋಕಸಭೆ ಚುನಾವಣೆಯಲ್ಲಿ ರೇಖಾ ಪಾತ್ರಗೆ ಸಂದೇಶ್ ಖಲಿ ಒಳಗೊಂಡ ಬಸೀರ್ಹಾಟ್ ಲೋಕಸಭೆ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ನೀಡಲಾಗುತ್ತದೆ. ಆದರೆ ಮುಸ್ಲಿಂ ಅಭ್ಯರ್ಥಿ ವಿರುದ್ಧ ಆಕೆ ಸೋಲುತ್ತಾಳೆ. ಸಂದೇಶ್‌ಖಲಿ ಎಸ್ಟಿ ಮೀಸಲು ಕ್ಷೇತ್ರವಾದ್ದರಿಂದ ಈ ವಿಧಾನಸಭೆ ಚುನಾವಣೆಯಲ್ಲಿ ಆಕೆಗೆ ಪಕ್ಕದ ಹಿಂಗಲ್ ಗಂಜ್ ವಿಧಾನಸಭೆ ಕ್ಷೇತ್ರದಿಂದ ಅಭ್ಯರ್ಥಿಯನ್ನಾಗಿ ಬಿಜೆಪಿ ಕಣಕ್ಕಿಳಿಸುತ್ತದೆ.
ನಂತರ ನಡೆದzಲ್ಲವೂ ಈಗ ಇತಿಹಾಸ. 2 ವರ್ಷಗಳ ಹಿಂದೆ ಇದೇ ಮಹಿಳೆಯರ ನೋವನ್ನು ಕಂಡು ಗಹಗಹಿಸಿ ನಕ್ಕಿದ್ದ ಟಿಎಂಸಿ ಗೂಂಡಾಗಳು ಇಂದು ದಿಕ್ಕಾಪಾಲಾಗಿzರೆ. ದೌರ್ಜನ್ಯ ಮಾಡಿದವರ ವಿರುದ್ಧವೇ ಕೆಚ್ಚೆದೆಯಿಂದ ಹೋರಾಡಿದ ರೇಖಾ ಪಾತ್ರ ಬಂಗಾಳ ವಿಧಾನಸಭೆ ಪ್ರವೇಶ ಮಾಡು ತ್ತಿದ್ದಾಳೆ.
2. ರತ್ನಾ ದೇಬ್ನಾಥ್
ಕೋಲ್ಕತ್ತಾದಿಂದ ಸುಮಾರು 35 ಕಿಮೀ ದೂರದಲ್ಲಿರುವ ಪಾನಿಹಾಟಿ ಎಂಬಲ್ಲಿ ಸಾಮಾನ್ಯರಂತೆ ಬದುಕುತ್ತಾ ಮಗಳ ಭವಿಷ್ಯದ ಬಗ್ಗೆ ಅಪಾರ ಕನಸನ್ನು ಕಾಣುತ್ತಿದ್ದ ರತ್ನಾ ದೇಬ್ನಾಥ್ ಗೆ, ಮಗಳ ಅತ್ಯಾಚಾರ-ಹತ್ಯೆ ಘಟನೆ ಕೇಳಿ ಹೃದಯವೇ ಕಿತ್ತು ಬಂದ ಹಾಗೆ ಆಗಿತ್ತು. ಟ್ರೈನಿ ವೈದ್ಯೆಯಾಗಿದ್ದ ಮಗಳ ಅತ್ಯಾಚಾರ-ಕೊಲೆ ಪ್ರಕರಣದ ಬಗ್ಗೆ ಸಿಎಂ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಸರ್ಕಾರ ಸಾಮಾನ್ಯ ಘಟನೆಯಂತೆ ಪರಿಗಣಿಸಿ ಏನೂ ಆಗಿಲ್ಲ ಎಂಬಂತೆ ವರ್ತಿಸಿತ್ತು.
ಪ್ರತಿಭಟನೆ ಮಾಡುತ್ತಿದ್ದವರನ್ನೇ ಅಪರಾಧಿಗಳಂತೆ ಕಂಡ ಸರ್ಕಾರ, ಅವರ ವಿರುದ್ಧವೇ ಕೇಸು ದಾಖಲು ಮಾಡಿ ಹಿಂಸೆ ನೀಡಿತು. ಮುಖ್ಯವಾಗಿ ಮಹಿಳಾ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಅತ್ಯಾಚಾರ ಘಟನೆ ಬಗ್ಗೆ ತೋರಿದ ನಿರ್ಲಕ್ಷ ಜನರನ್ನು ಕೆರಳಿಸಿತು.
ರಾಜ್ಯ ಸರ್ಕಾರದ ಸಂವೇದನಾಶೂನ್ಯತೆಗೆ ಬುದ್ಧಿ ಕಲಿಸಲು ಬಿಜೆಪಿ ನೀಡಿದ ಅವಕಾಶವನ್ನು ಬಳಸಿಕೊಂಡ ರತ್ನಾ ದೇಬ್ನಾಥ್ ಪಾಣಿಹಾಟಿ ವಿಧಾನಸಭೆ ಕ್ಷೇತ್ರದಿಂದ ಅಭ್ಯರ್ಥಿಯಾಗಿ ಸ್ಪರ್ಧೆಗಿಳಿದರು. ಟಿಎಂಸಿ, ಎಡಪಕ್ಷಗಳ ಬೆಂಬಲಿಗರು ಅವರ ಸ್ಪರ್ಧೆ ಒಪ್ಪದಿದ್ದರೂ, ತಟಸ್ಥ ಮತದಾರರು ರತ್ನಾ ದೇಬ್ನಾಥ್‌ರನ್ನು ಗೆಲ್ಲಿಸಿದರು. ರತ್ನಾ ಅವರಿಗೆ ರಾಜಕೀಯದ ಒಳ-ಸುಳಿಗಳು ಗೊತ್ತಿಲ್ಲ. ರಾಜಕೀಯದಲ್ಲಿ ಆಸಕ್ತಿಯೂ ಇರಲಿಲ್ಲ. ಆದರೆ, ತನ್ನ ಮಗಳಂತೆ ಇತರರಿಗೆ ಅನ್ಯಾಯ ಆಗಬಾರದು ಎಂದೇ ವ್ಯವಸ್ಥೆಯ ಭಾಗವಾಗಿ ಕೆಲಸ ಮಾಡಬೇಕೆಂಬ ಅವರ ತೀರ್ಮಾನಕ್ಕೆ ಮತದಾರರೂ ಬೆಂಬಲಿಸಿದರು.
3. ಕಲಿತಾ ಮಾಂಜಿ
ಬಂಗಾಳ ಚುನಾವಣೆ ಫಲಿತಾಂಶದಲ್ಲಿ ಅತ್ಯಂತ ಗಮನಾರ್ಹ ಅಂಶಗಳಲ್ಲಿ ಮುಸುರೆ ತಿಕ್ಕುತ್ತಿದ್ದ ಬಡ ಕುಟುಂಬದ ಕಲಿತಾ ಮಾಂಜಿ ಗೆಲುವು ಕೂಡ ಒಂದು. ಆಸ್ಗ್ರಾಮ್ ವಿಧಾನಸಭೆ ವ್ಯಾಪ್ತಿ ಯಲ್ಲಿರುವ ಶ್ರೀಮಂತರ ಮನೆಗಳಲ್ಲಿ ಮುಸುರೆ ತಿಕ್ಕುತ್ತಿದ್ದ, ಮನೆ ಕೆಲಸದಾಳಾಗಿ ದುಡಿಯುತ್ತಿದ್ದ ಹಿಂದುಳಿದ ಸಮುದಾಯದ ಕಲಿತಾ ಮಾಂಜಿ, ತಿಂಗಳಿಗೆ ರೂ. 2500 ಹಣ ಸಂಪಾದನೆ ಮಾಡುತ್ತಾ ಕುಟುಂಬ ನಿರ್ವಹಣೆ ಮಾಡುತ್ತಿದ್ದಳು. ಈಗ ಆಕೆಯನ್ನೇ ಶಾಸಕಿಯನ್ನಾಗಿ ಆಯ್ಕೆ ಮಾಡಿರುವ ಮತದಾರರು, ಮುಸುರೆ ತಿಕ್ಕಿದ್ದು ಸಾಕು, ಇನ್ನು ಜನ ಸೇವೆ ಮಾಡಿ ಎಂದು ವಿಧಾನಸಭೆಗೆ ಕಳುಹಿಸಿ ಕೊಟ್ಟಿದ್ದಾರೆ!
2021ರಲ್ಲಿ ಇದೇ ಕ್ಷೇತ್ರದಿಂದ ಕಲಿತಾಳನ್ನು ಬಿಜೆಪಿ ಅಭ್ಯರ್ಥಿಯಾಗಿ ಮಾಡಲಾಗಿತ್ತು. ಆದರೆ ಟಿಎಂಸಿಯ ಅಭೇದಾನಂದ ಥಾಂಡೇರ್ ಎಂಬವರ ವಿರುದ್ಧ ಆಕೆ ಸೋತಿದ್ದಳು. ಆದರೆ, ಈ ಚುನಾ ವಣೆಯಲ್ಲಿ ಆಕೆಯ ಅದೃಷ್ಟದ ಬಾಗಿಲು ತೆರೆದಿದ್ದು, ತನ್ನಂತೆಯೇ ದುಡಿಯುತ್ತಿರುವ ಮಹಿಳೆಯರ ಏಳಿಗೆಗಾಗಿ ಕೆಲಸ ಮಾಡಬಹುದು. ನನಗೆ ತುಂಬಾ ಸಂತೋಷವಾಗಿದೆ. ನನ್ನ ಮೇಲೆ ನಂಬಿಕೆ ಇಟ್ಟಿದ್ದಕ್ಕಾಗಿ ಪ್ರಧಾನಿ ಮೋದಿ ಅವರಿಗೆ ಕೃತಜ್ಞಳು. ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ಕೆಲಸ ಮಾಡುವುದು, ಸರಿಯಾದ ರಸ್ತೆ ಮತ್ತು ಕುಡಿಯುವ ನೀರು ಪ್ರತಿಯೊಬ್ಬರ ಮನೆಗಳಿಗೆ ತಲುಪುವಂತೆ ನೋಡಿಕೊಳ್ಳುವುದು ನನ್ನ ಪ್ರಮುಖ ಆದ್ಯತೆ. ಯುವಕರ ಅಭಿವೃದ್ಧಿ ಮತ್ತು ಮಹಿಳೆಯರ ಸುರಕ್ಷತೆಗೂ ಕೆಲಸ ಮಾಡುತ್ತೇನೆ ಎನ್ನುವುದು ಆಕೆಯ ವಿಶ್ವಾಸದ ಮಾತುಗಳು. ಪ್ರಜಾಪ್ರಭುತ್ವದ ಬ್ಯೂಟಿ ಎಂದರೆ ಇದೇ ಅಲ್ಲವೇ?
2021ರ ವಿಧಾನಸಭೆ ಚುನಾವಣೆ ಸಂದರ್ಭದಲ್ಲೂ ನಾನು ಬಂಗಾಳ ಪ್ರವಾಸ ಮಾಡಿದ್ದೆ ಮತ್ತು 24 ಪರಗಣ ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಟಿಎಂಸಿ ಗೂಂಡಾಗಳಿಂದ ಲೈಂಗಿಕ ಹಿಂಸೆಗೆ ಒಳಗಾಗಿದ್ದ ಮಹಿಳೆಯರ ನೋವಿನ ಮಾತುಗಳನ್ನು ಕೇಳಿ, ಎಂತಹಾ ಪರಿಸ್ಥಿತಿಯಲ್ಲಿ ಇವರು ಬದುಕುತ್ತಿದ್ದಾ ರಪ್ಪಾ ಎಂದು ಅನಿಸಿತ್ತು. ಈ ಸಂತ್ರಸ್ತ ಕುಟುಂಬದ ಮೂರ್ನಾಲ್ಕು ಹೆಣ್ಣುಮಕ್ಕಳು ಪ್ರಧಾನಿ ನರೇಂದ್ರ ಮೋದಿಯವರ ರಾಲಿಯಲ್ಲಿ ತೆರಳಿದ್ದರು ಎಂಬ ಕಾರಣಕ್ಕಾಗಿ ಟಿಎಂಸಿ ಕಾರ್ಯಕರ್ತ ರಿಂದ ಅತ್ಯಾಚಾರಕ್ಕೆ ಒಳಗಾಗಿದ್ದರಂತೆ. ನಮ್ಮ ಮೇಲಾದ ಲೈಂಗಿಕ ಹಿಂಸೆ ಸಮಾಜಕ್ಕೆ ಗೊತ್ತಾದರೆ ಸಮಾಜ ನಮ್ಮನ್ನು ದೂರ ಮಾಡುತ್ತದೆ ಎಂದು ಭಯದಿಂದಿದ್ದ ಮಹಿಳೆಯರು, ದೂರು ನೀಡಲು ಹಿಂದೇಟು ಹಾಕಿದ್ದರು.
ದೂರು ನೀಡಿದರೆ ಮತ್ತೆ ನಮ್ಮ ಕುಟುಂಬದ ಮೇಲೆ ದಾಳಿಯಾಗಬಹುದು ಎನ್ನುವುದೂ ಅವರ ಆತಂಕ. ಮಾನಸಿಕವಾಗಿ ಆಘಾತಕ್ಕೀಡಾಗಿದ್ದ ಮಹಿಳೆಯರು, ಬಟ್ಟೆಯಿಂದ ಮುಖ ಕವರ್ ಮಾಡಿ ಮಾತನಾಡಿದರು. ನಿಮ್ಮ ನೋವುಗಳನ್ನು ನಮ್ಮ ವಾಹಿನಿ ಮುಂದೆ ಹೇಳಿಕೊಳ್ಳಬಹುದ ಎಂದು ಹೇಳಿದ್ದಕ್ಕೆ, ನೀವು ಸಂದರ್ಶನ ಮಾಡಿ ಇಲ್ಲಿಂದ ಹೋಗುತ್ತೀರಿ ಸರ್. ನಂತರ ನಮ್ಮ ಮನೆಗಳ ಮೇಲೆ ದಾಳಿ ಮಾಡುತ್ತಾರೆ, ಹಿಂಸೆ ಕೊಡುತ್ತಾರೆ ಎಂದಾಗ ನಾನು ನಿರುತ್ತರನಾಗಿದ್ದೆ.
ಅತ್ಯಾಚಾರ, ದೌರ್ಜನ್ಯ, ರಾಜಕೀಯ ಹಿಂಸಾಚಾರಗಳನ್ನು ಸಣ್ಣ ಘಟನೆ, ಬಿಜೆಪಿಯ ಅಜೆಂಡಾ, ಟಿಎಂಸಿ ವರ್ಚಸ್ಸಿಗೆ ಹಾನಿ ಮಾಡುವ ಪಿತೂರಿ ಎನ್ನುತ್ತಾ ಅವುಗಳನ್ನು ಗಂಭೀರವಾಗಿ ತೆಗೆದು ಕೊಳ್ಳದ ಸಿಎಂ ಮಮತಾ ಬ್ಯಾನರ್ಜಿ, ಟಿಎಂಸಿ ಕಾರ್ಯಕರ್ತರ ರಕ್ಷಣೆಗೇ ಕಟಿಬದ್ಧರಾಗಿ ನಿಂತರು.
ಹೆಣ್ಣುಮಕ್ಕಳ ಏಳಿಗೆಗಾಗಿ ಲಕ್ಷಿ ಭಂಡಾರ್, ರೂಪಶ್ರೀ, ಕನ್ಯಾಶ್ರೀಯಂತಹ ಯೋಜನೆ ಗಳನ್ನು ಜಾರಿ ಮಾಡಿ, ಮಹಿಳೆಯರ ಮೆಚ್ಚುಗೆಗೆ ಪಾತ್ರರಾದ ಸಿಎಂ ಮಮತಾ, ಹೆಣ್ಮಕ್ಕಳ ಭದ್ರತೆಗೆ ಕಾಳಜಿ ವಹಿಸಲಿಲ್ಲ. ತಮ್ಮ ಪಕ್ಷದವರ ತಪ್ಪುಗಳನ್ನು ಮರೆಮಾಚಿದರು. ಫಲಿತಾಂಶದ ನಂತರ, ನನ್ನಿಂದ ತಪ್ಪುಗಳಾಗಿವೆ ಎಂದು ದೀದಿಯ ಒಳ ಮನಸ್ಸಿಗಾದರೂ ಅನಿಸಿರಬಹುದು ಅಂದುಕೊಂಡಿದ್ದೆ. ಆದರೆ, ಸದ್ಯಕ್ಕೆ ಆ ನಿರೀಕ್ಷೆಗಳು ಸುಳ್ಳಾಗಿವೆ.