ಶಿಶಿರಕಾಲ
2020. ದಿಶಾ ಸಾಲಿಯಾನ್ ಮದುವೆ ರೋಹನ್ ರೈ ಜೊತೆ ನಿಶ್ಚಯವಾಗಿತ್ತು. ದಿಶಾ- ಮುಂಬೈ ಮಲಾಡ್‌ನಲ್ಲಿರುವ ಬಹುಮಹಡಿ ಅಪಾರ್ಟ್ಮೆಂಟ್‌ನಲ್ಲಿ ರೋಹನ್ ಜೊತೆ ಲಿವಿನ್ ಸಂಬಂಧ- ಜೊತೆಬಾಳ್ವೆ ನಡೆಸುತ್ತಿದ್ದಳು. ಅಂದು ಜೂನ್ 8, ಸೋಮವಾರ. 28 ವರ್ಷದ ದಿಶಾ ಬಹುಮಹಡಿ ಅಪಾರ್ಟ್ಮೆಂಟ್ ಕಟ್ಟಡದಿಂದ ಕೆಳಕ್ಕೆ ಬಿದ್ದು ಸತ್ತು ಹೋದಳು. ಆಕೆ ಹಿಂದಿ ನಟ ಸುಶಾಂತ್ ಸಿಂಗ್ ರಜಪೂತ್‌ನಿಗೆ ಮ್ಯಾನೇಜರ್ ಆಗಿದ್ದವಳು. ಹಾಗಾಗಿ ಅವಳ ಈ ರೀತಿಯ ಅಸಹಜ ಸಾವಿನ ಸುದ್ದಿ ಮಾಧ್ಯಮದಲ್ಲೂ ಬಂತು, ತಕ್ಕ ಮಟ್ಟಿಗಿನ ಚರ್ಚೆಯೂ ಆಯಿತು.
ಇದು ಅಪಘಾತವೋ ಅಥವಾ ಕೊಲೆಯೋ? ಈ ಚರ್ಚೆಯ ಬಿಸಿಯಲ್ಲಿಯೇ ಇನ್ನೊಂದು ಘಟನೆ ನಡೆದು ಹೋಯ್ತು. ದಿಶಾ ಸತ್ತ ಆರೇ ದಿನಗಳಲ್ಲಿ ನಟ ಸುಶಾಂತ್ ಸಿಂಗ್ ರಜಪೂತ್ ಕೂಡ ತನ್ನ ಅಪಾರ್ಟ್ಮೆಂಟಿ ನಲ್ಲಿ ಅಸಹಜ ಸಾವನ್ನಪ್ಪಿದ. ಒಂದು ವಾರದೊಳಗೆ ಎರಡು ಅಸಹಜ ಸಾವು, ಅದರಬ್ಬ ಹೆಸರಾಂತ ನಟ. ಹಾಗಾಗಿ ಈ ಎರಡು ಸಾವಿನ ಸುತ್ತ ಸಾಕಷ್ಟು ಗೊಂದಲ, ಅನುಮಾನಗಳು ಶುರುವಾದುವು.
ನಿಮಗೆ ನೆನಪಿರಬಹುದು, ಇದು ತಿಂಗಳಾನುಗಟ್ಟಲೆ ಮಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣ ಗಳಲ್ಲಿ ಚರ್ಚೆಗೆ ಕಾರಣವಾಯಿತು. ಹಲವು ರಾಷ್ಟ್ರೀಯ ವಾಹಿನಿಗಳು ಈ ಪ್ರಕರಣವನ್ನು ಮಾಧ್ಯಮ ಕಟಕಟೆಯಲ್ಲಿ ನಿಲ್ಲಿಸಿದ್ದವು. ಇದೆಲ್ಲ ನೋಡುತ್ತಿದ್ದ ಸಾಮಾನ್ಯ ಜನರಿಗೆ ಇದೊಂದು ದೊಡ್ಡ ಪಿತೂರಿ ಭಾಗವಿದ್ದರೂ ಇರಬಹುದೆನ್ನಿಸತೊಡಗಿತ್ತು. ಪ್ರಕರಣ ರಾಜಕೀಯ ಬಣ್ಣ ಪಡೆಯುತ್ತಿದ್ದಂತೆ ಎಲ್ಲರಿಗೂ ತನಿಖೆಯ ಮೇಲೆಯೇ ಅನುಮಾನ. ಹೈ ಪ್ರೊಫೈಲ್ ಪ್ರಕರಣ ನಡೆದಾಗ, ಮಾಧ್ಯಮಗಳು ಅನುಮಾನ ಗಳನ್ನು ಚರ್ಚಿಸಿದಾಗ, ಪ್ರಕರಣ ರಾಜಕೀಯ ಆರೋಪ ಗಳಿಗೆ ಒಳಗಾದಾಗ ನಾವೆಲ್ಲ ಒಕ್ಕೊರಲಿನಿಂದ ಹೇಳುವ ಒಂದು ಮಾತಿದೆಯಲ್ಲ- ಪ್ರಕರಣವನ್ನು ಸಿಬಿಐಗೆ ಕೊಡಬೇಕು!
ಇದನ್ನೂ ಓದಿ: Shishir Hegde Column: ಅಕ್ಕ ಕೇಳವ್ವಾ… ಫಿಲಡೆಲ್ಫಿಯಾದಲ್ಲಿ ಕರ್ನಾಟಕವಾ ಕಂಡೆ..
ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣವನ್ನು ಆಗಲೇ ಸಿಬಿಐಗೆ ವಹಿಸಲಾಗಿತ್ತು. ಹಿಂದಿನ ವರ್ಷ 2025- ಪ್ರಕರಣ ನಡೆದ ಸುಮಾರು ಐದು ವರ್ಷದ ನಂತರ ಸಿಬಿಐ ತನ್ನ ತನಿಖಾ ವರದಿ ನ್ಯಾಯಾಲಯಕ್ಕೆ ಸಲ್ಲಿಸಿತು. ಈ ಸಾವು ಅಸಹಜ, ಆದರೆ ಕೊಲೆ ಎನ್ನಲು ಯಾವುದೇ ಸಾಕ್ಷ್ಯಾಧಾರ ಗಳು ಸಿಕ್ಕಿಲ್ಲ ಎಂದು ಪ್ರಕರಣಕ್ಕೊಂದು ಮುಕ್ತಾಯ ಕೊಡಲಾಯಿತು. ಆದರೆ ದಿಶಾ ಸಾಲಿಯಾನ್ ಪ್ರಕರಣದ ತನಿಖೆಯನ್ನು ಪೊಲೀಸರೇ ನಡೆಸುತ್ತಿದ್ದರು. ಈ ಎರಡು ಅಸಹಜ ಸಾವಿನ ನಡುವೆ ಯಾವುದೇ ಸಂಬಂಧವಿರುವ ಸಾಕ್ಷ್ಯ ಸಿಕ್ಕಿರದ ಕಾರಣ ಇವೆರಡನ್ನು ಪ್ರತ್ಯೇಕವಾಗಿಯೇ ನೋಡಲಾಗಿತ್ತು.
ಈಗ ದಿಶಾ ಸಾವಿನ ಆರು ವರ್ಷದ ನಂತರ ಪ್ರಕರಣವನ್ನು ನ್ಯಾಯಾಲಯ ಸಿಬಿಐಗೆ ವಹಿಸಿದೆ. ಅಷ್ಟೇ ಅಲ್ಲ- ‘ದಿಶಾ ಪ್ರಕರಣದ ತನಿಖೆಯನ್ನು ಹೊಸತಾಗಿ ಆರಂಭಿಸಬೇಕೆಂದು’ ಆದೇಶ ನೀಡಿದೆ. ವಿಚಿತ್ರ ನೋಡಿ- ಈಗ ಸಾವು ನಡೆದ ಜಾಗ ಹಾಗೆಯೇ ಉಳಿದಿಲ್ಲ, ಮೃತ ದೇಹ ಇಲ್ಲ, ಕ್ರೈಮ್ ಸೀನ್ ಇಲ್ಲ, ಸಾಕ್ಷ ಗಳಿಗೆ ಕಂಡದ್ದು ಮರೆತಿರಬಹುದು, ಕಾಣದೆ ಇರುವುದು ಈಗ ನೆನಪಾಯಿತೆನ್ನಬಹುದು. ಸರಿ. ಸತ್ಯವೆನ್ನುವುದು ಹೊರ ಬರಲಿ- ಆದರೆ ಪ್ರಕರಣ ನಡೆದ ಆರು ವರ್ಷದ ನಂತರ ಹೊಸದಾಗಿ ತನಿಖೆ ಆರಂಭಿಸುವುದು ಎಂದರೆ ಏನು? ನನಗಂತೂ ಬಗೆಹರಿಯುತ್ತಿಲ್ಲ!
ಕೆಲ ದಿನಗಳ ಹಿಂದೆ ಶಿಕಾಗೋ ಲೊಯೋಲಾ ವಿಶ್ವವಿದ್ಯಾಲಯದಲ್ಲಿ ಮಾಧ್ಯಮ ಮತ್ತು ಬರಹಗಾರರ ಚಿಕ್ಕದೊಂದು ಕಾರ್ಯಾಗಾರವಿತ್ತು, ಹೋಗಿದ್ದೆ. ಅಲ್ಲಿನ ಜರ್ನಲಿಸಂ ಪ್ರೊಫೆಸರ್ ಕೋನಿ ಫ್ಲೆಚರ್ ಜೊತೆ ಮಾತನಾಡುವಾಗ ಅವರು ಬರೆದ Every Contact Leaves a Trace ಎನ್ನುವ ಪುಸ್ತಕವನ್ನು ಕೊಟ್ಟು ಓದುವಂತೆ ಹೇಳಿದರು. ಈ ಪುಸ್ತಕ ಕ್ರೈಂಗೆ ಸಂಬಂಧಿಸಿದ ಜನಪ್ರಿಯ ಪುಸ್ತಕ ಎನ್ನುವುದು ಗೊತ್ತಿತ್ತು. ಕ್ರೈಂ ಪುಸ್ತಕವೆಂದರೆ ಇದು ಶೆರ್ಲಾಕ್ ಹೋಮ್ಸ್ ರೀತಿಯ ಪ್ರಕರಣಗಳನ್ನು ಬೇಧಿಸುವ ಕಥೆಗಳ ಪುಸ್ತಕವಲ್ಲ.
ಬದಲಿಗೆ ಕೊಲೆ ಇತ್ಯಾದಿ ನಡೆದಾಗ ತನಿಖೆ ಮಾಡುವ ಫಾರೆನ್ಸಿಕ್, ಡಿಟೆಕ್ಟಿವ್, ಬೆರಳಚ್ಚು ತಜ್ಞರು, ಫೋಟೋಗ್ರಾಫರ್, ತನಿಖಾಧಿಕಾರಿ ಇತ್ಯಾದಿ ಜನರನ್ನು ಸಂದರ್ಶಿಸಿ, ಅವರೆಲ್ಲ ಒಂದು ಪ್ರಕರಣ ವನ್ನು ಹೇಗೆ, ಯಾವ ದೃಷ್ಟಿಯಲ್ಲಿ ನೋಡುತ್ತಾರೆ ಎನ್ನುವುದನ್ನು ದಾಖಲಿಸಿದ ಅಪರೂಪದ ಪುಸ್ತಕ. ಇದನ್ನು ಓದುವಾಗ ಕೆಲವೊಂದಿಷ್ಟು ವಿಷಯಗಳು ನನಗೆ ಸ್ಪಷ್ಟವಾದುವು.
ಸಾಮಾನ್ಯವಾಗಿ ಸಿನಿಮಾ, ಪತ್ತೇದಾರಿ ಕಾದಂಬರಿಗಳಲ್ಲಿ ಏನಾಗುತ್ತದೆ? ಟೊಪ್ಪಿ ಹಾಕಿಕೊಂಡು ಶರ್ಲಾಕ್ ಹೋಮ್ಸ್ʼನಂತೆ ಪತ್ತೇದಾರ, ತನಿಖಾಧಿಕಾರಿ ಸಿಗರೇಟು ಹಿಡಿದು ಪ್ರಕರಣ ನಡೆದ ಸ್ಥಳಕ್ಕೆ ಬರುತ್ತಾನೆ. ಬುದ್ಧಿವಂತ ಪತ್ತೇದಾರ ಅತಿ ಬುದ್ಧಿವಂತ ಎಂದೆನಿಸಿಕೊಳ್ಳಲು ವಿಚಿತ್ರ ಅಸಹಜ ರೀತಿಯ ನಡವಳಿಕೆ ಹೊಂದಿರುತ್ತಾನೆ.
ಕ್ರೈಂ ನಡೆದ ಜಾಗಕ್ಕೆ ಬಂದರೂ ಬಸು ಬಸು ಹೊಗೆ ಬಿಡುವ ಅವನಿಗೆ ಏನೋ ಒಂದು ಕುರುಹು -ಕ್ಕನೆ ಸಿಕ್ಕಿಬಿಡುತ್ತದೆ. ಎರಡೇ ನಿಮಿಷದೊಳಗೆ ಈ ಪ್ರಕರಣ ಹೀಗೆಯೇ ಆಗಿದೆ ಎಂದು ಅವನಿಗೆ ತಿಳಿದುಬಿಡುತ್ತದೆ. ಆಮೇಲೆ ಒಂದೊಂದೇ ಸಾಕ್ಷ್ಯಗಳನ್ನು ಅವನೇ ಹೆಕ್ಕಿ ತೆಗೆದು ಇಂಥವನೇ ಕೊಲೆಗಾರ ಎಂದು ಹೇಳುವು ದಷ್ಟೇ ಬಾಕಿ. ಅವನು ಇವನೇ ಕೊಲೆಗಾರ ಎಂದು ಹೇಳಿದಲ್ಲಿಗೆ ಸಿನಿಮಾ ಮುಗಿದು ಬಿಡುತ್ತದೆ.
ಅಸಲಿಗೆ ಯಾವುದೇ ಪ್ರಕರಣ ಈ ರೀತಿ ನಡೆಯುವುದಿಲ್ಲ ಎನ್ನುವುದು ನಮಗೆಲ್ಲರಿಗೂ ಗೊತ್ತು- ಆದರೂ ಶೆರ್ಲಾಕ್ ಹೋಮ್ಸ್ʼನಂತಹ ಪತ್ತೇದಾರ ನಮಗೆ ಇಷ್ಟ. ಎಫ್ಬಿಐ, ಸಿಬಿಐ, ಎನ್‌ಐಎ ಇಂತಹ ಹೆಸರು ಕೇಳಿದಾಗಲೆಲ್ಲ ನಮಗೆ ಶೆರ್ಲಾಕ್ ಹೋಮ್ಸ್, ಜೇಮ್ಸ್ ಬಾಂಡ್ ನೆನಪಾಗಿ ರೋಮಾಂಚನವಾಗುತ್ತದೆ. ಯಾವುದೇ ತನಿಖಾಧಿಕಾರಿ ಅದೆಷ್ಟೇ ಪರಿಣಿತಿ ಹೊಂದಿದ್ದರೂ ಒಂದು ಕ್ರೈಮ್ ದೃಶ್ಯವನ್ನು ಮೊದಲ ಬಾರಿ ನೋಡಿದಾಗ ಎಲ್ಲಿಲ್ಲದ ಗೊಂದಲ ಸರ್ವೇ ಸಾಮಾನ್ಯ.
ಅವರೆಲ್ಲರಿಗೂ ಮೊದಲು ಏಳುವ ಪ್ರಶ್ನೆಯೇ ನೆಂದರೆ ಕೊಲೆಯಾದ ಮನೆ, ರೂಮ್, ಜಾಗದಲ್ಲಿ ಯಾವ ವಸ್ತು ಸಾಕ್ಷ್ಯವಾಗಬಹುದು, ಯಾವುದನ್ನು ಪರಿಗಣಿಸಬೇಕು, ಅಲಕ್ಷಿಸಬೇಕು? ಆತ್ಮಹತ್ಯೆ ಯಾಗಿರಬಹುದು, ಕೊಲೆಯಾಗಿರಬಹುದು, ಅಥವಾ ಆತ್ಮಹತ್ಯೆಯಂತೆ ಕೊಲೆಗಾರ ಬಿಂಬಿಸಿರ ಬಹುದು. ಹಾಗಾಗಿ ಪಕ್ಕದಲ್ಲಿ ಬಿದ್ದಿರುವ ಮೊಬೈಲ್‌ನಲ್ಲಿ, ಪೆನ್ಸಿಲಿನಲ್ಲಿ ಬೆರಳಚ್ಚು ಇರಬಹುದು, ತೆಗೆದಿಟ್ಟ ಕನ್ನಡಕದಲ್ಲಿ ಬೆವರಿನ ಹನಿ, ಕುಡಿದಿಟ್ಟ ನೀರಿನಲ್ಲಿ ವಿಷ, ಡಿಎನ್‌ಎ, ನೆಲದ ಮೇಲಿನ ಚಪ್ಪಲಿ, ಸೋಫಾ ಮೇಲಿನ ಒಂಟಿ ಕೂದಲ ಎಳೆ, ಕಾಲಿನ ಅಚ್ಚು ಇತ್ಯಾದಿ.
ಕೊಲೆಯನ್ನು ಮೊದಲು ನೋಡಿದ ವ್ಯಕ್ತಿಯ ಬೆರಳಚ್ಚು ಸಾಕ್ಷ್ಯಗಳ ಜೊತೆ ಸೇರಿರಬಹುದು, ಅಥವಾ ಅವನೇ ಕೊಲೆಗಾರನಿದ್ದಿರಲೂಬಹುದು. ಒಟ್ಟಾರೆ ತನಿಖಾಧಿಕಾರಿ ಯಾವ ಯಾವುದನ್ನು ಸಾಕ್ಷ್ಯ ವಾಗಿ ಬಳಸಲು ಉಳಿಸಿಕೊಳ್ಳಬೇಕು, ಆಯ್ಕೆ ಮಾಡಿಕೊಳ್ಳಬೇಕು? ತನಿಖಾಧಿಕಾರಿ ಎದುರಿಗೆ ಕಾಣಿಸುವ ಸನ್ನಿವೇಶವನ್ನಾಧರಿಸಿ ಮೊದಲು ಇಲ್ಲಿ ಇದು ನಡೆದಿರಬಹುದು ಎಂದು ಊಹಿಸಿಕೊಳ್ಳು ತ್ತಾನೆ.
ಕಥೆಯೊಂದನ್ನು ಅಥವಾ ಎರಡು ಮೂರು ಕಥೆಗಳನ್ನು ಕಲ್ಪಿಸಿಕೊಳ್ಳುತ್ತಾನೆ. ಆ ಕಥೆಗೆ ಅನುಗುಣ ವಾಗಿ ಸಾಕ್ಷ್ಯಗಳನ್ನು ಆಯ್ಕೆ ಮಾಡಿಕೊಳ್ಳುತ್ತಾನೆ. ಅವನು ಕಲ್ಪಿಸಿಕೊಳ್ಳುವ ಈ ಕಥೆ ಬಹಳ ಮುಖ್ಯ. ಏಕೆಂದರೆ ಇಡೀ ತನಿಖಾ ತಂಡ ಸಾಕ್ಷ್ಯವನ್ನು ಆಯ್ಕೆ ಮಾಡಿಕೊಳ್ಳುವುದು ಈ ಕಥೆಯನ್ನಾಧರಿಸಿ. ಆದರೆ ಯಾವುದೇ ಕ್ರಿಮಿನಲ್ ಪ್ರಕರಣದಲ್ಲಿ ಸಾಕ್ಷ್ಯವನ್ನು ರಕ್ಷಿಸಲು ಇರುವ ಏಕೈಕ ಅವಕಾಶ ಮೊದಲ 48 ಗಂಟೆ- ಇದರಲ್ಲಿ ತನಿಖಾಧಿಕಾರಿ ಸ್ವಲ್ಪವೇ ಎಡವಿದರೂ ಪ್ರಕರಣದ ದಿಕ್ಕು ಬದಲಾಗಿ ಬಿಡುತ್ತದೆ.
ಇನ್ನೊಂದೇನೆಂದರೆ- ಯಾವುದೇ ಕ್ರೈಮ್ ಸೀನ್ ಪ್ರತಿ ಕ್ಷಣವೂ ಬದಲಾಗುತ್ತಿರುತ್ತದೆ. ಮೊದಲು ಘಟನೆ ಯನ್ನು ನೋಡಿದವರು, ಪ್ರಥಮ ಚಿಕಿತ್ಸಕರು, ಮೊದಲು ಬಂದು ನೋಡಿದ ಪೊಲೀಸ್ ಕಾನ್‌ಸ್ಟೇಬಲ್- ಹೀಗೆ ಯಾರು ಯಾರು ಈ ಕ್ರೈಂ ದೃಶ್ಯವನ್ನು ಸಂಧಿಸಿದ್ದಾರೋ ಅವರೆಲ್ಲರೂ ಅನೋ ಒಂದನ್ನು ಬದಲಿಸಿ- ಅಂಶವನ್ನು ಬಿಟ್ಟಿರುತ್ತಾರೆ. ಯಾರೇ ಆ ಕೋಣೆಯನ್ನು ಹೊಕ್ಕರೂ ಅವರು ಏನೋ ಒಂದನ್ನು ಅಲ್ಲಿ ಬದಲಿಸಿ ಬಂದಿರುತ್ತಾರೆ. ಕೊನೆ ಪಕ್ಷ ಚಪ್ಪಲಿ ಗುರುತನ್ನಾದರೂ ಬಿಟ್ಟು ಬಂದಿರುತ್ತಾರೆ- ಅಥವಾ ಅಳಿಸಿ ಬಂದಿರುತ್ತಾರೆ.
ಕ್ರಿಮಿನಲ್ ಪ್ರಕರಣದಲ್ಲಿ every contact leaves a trace& ಪ್ರತಿಯೊಂದು ಸಂಪರ್ಕವೂ ತನ್ನದೇ ಆದ ಒಂದು ಗುರುತು ಬಿಟ್ಟು ಹೋಗುತ್ತದೆ ಎನ್ನುವುದು ಆ ಕಾರಣಕ್ಕೆ. ಒಟ್ಟಾರೆ ನಿಮಿಷಗಳು ಕಳೆದಂತೆ ಕ್ರೈಮ್ ಸೀನ್ ಸ್ತಬ್ಧವಾಗಿರುವುದಿಲ್ಲ. ಕ್ರಮೇಣ ರಕ್ತ, ಬೆರಳಚ್ಚು, ಕಾಲಚ್ಚು ಇತ್ಯಾದಿ ಮಾಸಿಹೋಗಬಹುದು. ಸಿಸಿಟಿವಿ ವೀಡಿಯೊಗಳು ಒಂದರ ಮೇಲೊಂದು ಅಚ್ಚಾಗಿ ವಿಡಿಯೋ ಕಳೆದುಹೋಗಬಹುದು. ಹೀಗೆ ಸಾವಿರದೆಂಟು ಬದಲಾವಣೆಗಳು ಸಮಯ ಕಳೆದಂತೆ ಆಗುವು ದರಿಂದ ಮೊದಲ 48 ಗಂಟೆ ಯಾವುದೇ ತನಿಖೆಯಲ್ಲಿ ಅತ್ಯಂತ ಮಹತ್ವದ್ದು. ಆ ಸಮಯದಲ್ಲಿ ತನಿಖೆಗೆ ಮಾಡಿಕೊಳ್ಳುವ ಆಯ್ಕೆ ಅತ್ಯಂತ ಮುಖ್ಯವಾದದ್ದು.
ರಾಜ್ಯ ಪೊಲೀಸ್, ತನಿಖಾ ಅಂಗ ಸಂಸ್ಥೆಗಳ ಮೇಲೆ ಅನುಮಾನ ಬಂದಾಗ, ಸ್ಥಳೀಯ ರಾಜಕಾರಣಿ ಗಳು ಭಾಗಿಯಾಗಿರಬಹುದೆಂಬ ಗುಲ್ಲು ಎದ್ದಾಗ ಸಹಜವೆನ್ನುವಂತೆ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂಬ ಮಾತು ಕೇಳಿ ಬರುತ್ತದೆ ಅಲ್ಲವೇ? ಆದರೆ ಇಂದು ವಿಷಯ ನಾವೆಲ್ಲರೂ ಗಮನಿಸ ಬೇಕು- ಸಿಬಿಐ ರಾಜ್ಯ ಪೊಲೀಸರ ಮೇಲಿನ ಸ್ತರದ ತನಿಖಾ ಸಂಸ್ಥೆ ಅಲ್ಲ.
ದೆಹಲಿ ಸ್ಪೆಷಲ್ ಪೊಲೀಸ್ ಎಸ್ಟಾಬ್ಲಿಷ್ಮೆಂಟ್ ಆಕ್ಟ್ʼನ ಕೆಳಗೆ ಅದರ ಕಾರ್ಯವ್ಯಾಪ್ತಿ. ಹಾಗಾಗಿ ಯಾವುದೇ ಪ್ರಕರಣ ಸಿಬಿಐ ವಹಿಸಿಕೊಳ್ಳಬೇಕೆಂದರೆ ರಾಜ್ಯ ಸರಕಾರದ ಅನುಮತಿ ಬೇಕು. ಇಲ್ಲವೇ ನ್ಯಾಯಾಲಯ ದಿಂದ ಸೂಚನೆಯಾಗಬೇಕು. ಹಾಗಾಗಿ ಸಿಬಿಐ ಒಂದು ಪ್ರಕರಣವನ್ನು ತಿಂಗಳು ಅಥವಾ ವರ್ಷಗಳ ನಂತರ ತನಿಖೆಗೆ ಕೈಗೆತ್ತಿಕೊಳ್ಳುವಾಗ ಹೆಚ್ಚಾಗಿ ಕ್ರೈಮ್ ಸೀನ್ ಎನ್ನುವುದೇ ಅಲ್ಲಿರುವುದಿಲ್ಲ.
ಹೀಗಿರುವಾಗ ದಿಶಾ ಸಾಲಿಯಾನ್ ಪ್ರಕರಣ ಹೊಸತಾಗಿ ತನಿಖೆ ಆರಂಭಿಸಬೇಕೆಂದು ಕೋರ್ಟ್ ಸಿಬಿಐಗೆ ನಿರ್ದೇಶಿಸಿದಾಗ ಅಂತಹ ಪ್ರಕರಣಗಳ ತನಿಖೆ ಹೇಗೆ ನಡೆಯುತ್ತದೆ? ಸಹಜವಾಗಿ ಹಿಂದೆ ತನಿಖೆ ನಡೆಸುವಾಗ ಸ್ಥಳೀಯ ಪೊಲೀಸರು ಕೂಡಿಟ್ಟ ದಾಖಲೆ, ವಿಡಿಯೋಗಳನ್ನೇ ನೋಡಬೇಕು. ಅದೆಲ್ಲದಕ್ಕಿಂತ ಹೆಚ್ಚಾಗಿ ಆ ಮೊದಲ ತನಿಖಾಽಕಾರಿ ಆಯ್ಕೆ ಮಾಡಿಕೊಂಡ ಕಥೆಯನ್ನು ಆಧರಿಸಿ ಕೂಡಿಟ್ಟ ಸಾಕ್ಷ ಗಳನ್ನೇ ಪರೀಕ್ಷಿಸಬೇಕು.
ಹಾಗಾದರೆ ಸಿಬಿಐ ಹೆಚ್ಚಿನ ಬಾರಿ ಇನಾದರೂ ಗೋಲ್‌ಮಾಲ್ ನಡೆದಿದೆಯೇ ಎನ್ನುವ ಪ್ರಶ್ನೆ ಯನ್ನಿಟ್ಟು ಕೊಂಡೇ ಪ್ರಕರಣವನ್ನು ನೋಡಬೇಕೆ ಅಥವಾ ತನಿಖೆ ಸರಿಯಾಗಿ ನಡೆದಿದೆಯೇ, ಅಥವಾ ಸಾಕ್ಷ್ಯ ಇನ್ನೇನಾದರೂ ಬಿಟ್ಟು ಹೋಗಿದೆಯೇ ಎಂದು ನೋಡಬೇಕೆ? ಅದೆಷ್ಟೋ ಪ್ರಕರಣಗಳಲ್ಲಿ ಸ್ಥಳೀಯ ಪೊಲೀಸರು ಒತ್ತಡಗಳಿಗೆ ಒಳಗಾಗಿ ತನಿಖೆಯನ್ನು ಹಳ್ಳ ಹಿಡಿಸಿದ್ದನ್ನು ಸಿಬಿಐ ಕಂಡುಹಿಡಿದು ತನಿಖಾಧಿಕಾರಿಗಳಿಗೇ ಶಿಕ್ಷೆಯಾದದ್ದು ಇಲ್ಲವೆಂದಿಲ್ಲ.
ನಾವೆಲ್ಲರೂ ಸಿಬಿಐಗೆ ವಹಿಸಿದಲ್ಲಿಗೆ ಈ ಪ್ರಕರಣಕ್ಕೊಂದು ನ್ಯಾಯ ಸಿಗುತ್ತದೆ ಎಂದು ನಂಬಿದ್ದೇವೆ. ಆದರೆ ತನಿಖಾ ದೃಷ್ಟಿಯಿಂದ ಎಲ್ಲ ಮುಗಿದ ಮೇಲೆ- ವರ್ಷಗಳ ನಂತರ ಪ್ರಕರಣವನ್ನು ಕೈಗೆತ್ತಿ ಕೊಳ್ಳುವ ಸಿಬಿಐ ಎದುರು ಇರುವ ಅವಕಾಶಗಳು ಎಷ್ಟು? ಹಲವಾರು ದೇಶಗಳಲ್ಲಿ ಇದೇ ಸನ್ನಿವೇಶವಿದೆ. ತನಿಖೆ ರಾಜ್ಯದ ವ್ಯಾಪ್ತಿಯಲ್ಲಿರುತ್ತವೆ. ಆ ಸಂಸ್ಥೆ ರಾಜ್ಯ ರಾಜಕಾರಣಿಗಳ ಕೆಳಗಿರುತ್ತದೆ. ಕೇಂದ್ರ ತನಿಖಾ ಸಂಸ್ಥೆ ಕೇಂದ್ರ ಸರಕಾರದ ಅಡಿಯಲ್ಲಿ.
ಕೇಂದ್ರದಂದು ಪಕ್ಷ, ರಾಜ್ಯದಲ್ಲಿ ಇನ್ನೊಂದು ಪಕ್ಷ ಅಧಿಕಾರದಲ್ಲಿದ್ದಾಗ, ತನಿಖಾ ಸಂಸ್ಥೆಗಳನ್ನು ಅಸ್ತ್ರವಾಗಿ ಕೇಂದ್ರ ಬಳಸಿಕೊಳ್ಳುತ್ತಿದೆ ಎಂಬ ಪುಕಾರುಗಳು ಕೂಡ ಸಾಮಾನ್ಯ. ಅಂತೆಯೇ ಈ ಎಲ್ಲಾ ದೇಶಗಳಲ್ಲಿ ಪ್ರಕರಣ ಬಹುಚರ್ಚಿತವಾದಾಗ, ವಿವಾದಗಳಾದಾಗ ಕೇಂದ್ರ ತನಿಖಾ ಸಂಸ್ಥೆಗಳು ಪ್ರಕರಣವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವುದು ಕೂಡ ಸಾಮಾನ್ಯ. ಅಂತೆಯೇ ಬಹುತೇಕ ಕಡೆ- ಮೇಲೆ ಹೇಳಿದ ನಮ್ಮ ವ್ಯವಸ್ಥೆಯ ರೀತಿಯಲ್ಲಿಯೇ- ಪ್ರಕರಣ ನಡೆದ ಅದೆಷ್ಟೋ ತಿಂಗಳು- ವರ್ಷ ಗಳ ನಂತರ ಕೇಸ್ ಅವರ ಕೈ ಸೇರಿರುತ್ತದೆ. ಆಗ ಅವರಿಗೂ ಎದುರಿಗಿರುವ ಸಾಕ್ಷ್ಯ ಅವಕಾಶಗಳು ಬಹಳ ಸೀಮಿತ.
ಹಾಗಾಗಿ ಇಂತಹ ಪ್ರಕರಣಗಳಲ್ಲಿ ಕೇಂದ್ರ ತನಿಖಾ ತಂಡಗಳು ಹೆಚ್ಚಾಗಿ ಎಲ್ಲಾದರೂ ಗೋಲ್ ಮಾಲ್ ನಡೆದಿದೆಯೇ ಎನ್ನುವ ದೃಷ್ಟಿಕೋನದಲ್ಲಿಯೇ ಪ್ರಕರಣವನ್ನು ಕೈಗೆತ್ತಿಕೊಳ್ಳಬೇಕಾಗುತ್ತದೆ. ಆದರೆ ಅಮೆರಿಕಾದಲ್ಲಿ ಎಫ್ʼಬಿಐ (ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್) ಸ್ವಲ್ಪ ವಿಭಿನ್ನ ವಾಗಿ ಕಾರ್ಯ ನಿರ್ವಹಿಸುತ್ತದೆ. ಹೇಗೆ ನಮ್ಮಲ್ಲಿ ಸಿಬಿಐ ಇದೆಯೋ ಹಾಗೆಯೇ ಅಮೆರಿಕಾದಲ್ಲಿ ಎಫ್ʼಬಿಐ.
ಅಮೆರಿಕಾದ ಬಹುತೇಕ ನಗರ, ಹಾಗು ದೊಡ್ಡ ಊರುಗಳಲ್ಲಿ, ಜಿಲ್ಲಾ ಕೇಂದ್ರಗಳಲ್ಲಿ ಪೊಲೀಸ್ ಸ್ಟೇಷನ್ ರೀತಿಯಲ್ಲಿಯೇ ಎಫ್ʼಬಿಐ ಸ್ಥಳೀಯ ಕಚೇರಿಗಳಿರುತ್ತವೆ. ಅಲ್ಲಿ ಎಫ್ʼಬಿಐ ಅಧಿಕಾರಿಗಳು ತಮ್ಮ ವ್ಯಾಪ್ತಿ ಯಲ್ಲಿ ಬರುವ ಭಯೋತ್ಪಾದನೆ, ರಾಷ್ಟ್ರೀಯ ಮಟ್ಟದ ಸೈಬರ್ ಕ್ರೈಂ, ಬ್ಯಾಂಕ್ ಮೋಸ, ಅಂತರರಾಜ್ಯ ಕ್ರೈಂ ಮೊದಲಾದವುಗಳ ತನಿಖೆ ನಡೆಸುತ್ತಿರುತ್ತಾರೆ.
ಸಾಮಾನ್ಯವಾಗಿ ಎಫ್ʼಬಿಐ ಸ್ಥಳೀಯ ಪೊಲೀಸರ ಜೊತೆಗೂಡಿ- ಟಾಸ್ಕ್ ಫೋರ್ಸ್ ಮಾಡಿಕೊಂಡು ತನಿಖೆ ಮಾಡುತ್ತವೆ. ಹೀಗೆ ಜೊತೆಯಲ್ಲಿ ಕೆಲಸ ಮಾಡುವುದರಿಂದ ಯಾವುದೇ ದೊಡ್ಡ, ಬಹುಚರ್ಚೆ ಯಾಗುವ ಪ್ರಕರಣ ನಡೆದಲ್ಲಿ ಸ್ಥಳೀಯ ಪೊಲೀಸರ ಜೊತೆಯಲ್ಲಿದ್ದುಕೊಂಡೇ ಎಫ್ʼಬಿಐ ತನ್ನದೇ ಪ್ರತ್ಯೇಕ ತನಿಖೆ ಆರಂಭಿಸಿಬಿಡುತ್ತದೆ.
ಕೆಲವೊಮ್ಮೆ ಪ್ರಕರಣದ ವ್ಯಾಪ್ತಿ ಎಫ್ʼಬಿಐ ವ್ಯಾಪ್ತಿಯಲ್ಲಿ ಬರಬಹುದು, ಬರದೆಯೂ ಇರಬಹುದು. ಒಂದುವೇಳೆ ಪ್ರಕರಣ ಕೇವಲ ರಾಜ್ಯ ಪೊಲೀಸರ ವ್ಯಾಪ್ತಿಯಲ್ಲಿಯೇ ಉಳಿಯಿತೆನ್ನಿ, ಆಗ ತನ್ನ ತನಿಖೆಯ ಮಾಹಿತಿಯನ್ನು ಎಫ್ʼಬಿಐ ಸ್ಥಳೀಯ ಪೊಲೀಸರ ಜೊತೆ ಹಂಚಿಕೊಳ್ಳುತ್ತದೆ. ಇದೊಂದು ರೀತಿಯಲ್ಲಿ ಎರಡು ಸಮಾನಾಂತರ ತನಿಖೆಗಳು. ಹೀಗೆ ರಾಜ್ಯ ಪೊಲೀಸರು ಮತ್ತು ಎಫ್ʼಬಿಐ hands- on- hands ಜೊತೆಯಲ್ಲಿ ಕೆಲಸ ಮಾಡುವುದರಿಂದ ಹೆಚ್ಚಿನ ಹೈ ಪ್ರೊಫೈಲ್ ಎನ್ನಿಸಿ ಕೊಳ್ಳುವ ಪ್ರಕರಣಗಳಲ್ಲಿ ಮೊದಲ ಹಂತದಿಂದಲೇ ಕೇಂದ್ರ ತನಿಖಾ ಸಂಸ್ಥೆ ಎಫ್ʼಬಿಐ ಕೂಡ ಭಾಗಿಯಾಗಿರುತ್ತದೆ. ಈ ರೀತಿ ರಾಜ್ಯ ಮತ್ತು ಕೇಂದ್ರ ತನಿಖಾ ವ್ಯವಸ್ಥೆಗಳು ಜೊತೆಯಲ್ಲಿ ಆರಂಭದಿಂದ ಕೆಲಸ ಮಾಡುವುದಕ್ಕೂ ನಮ್ಮಲ್ಲಿ ಸಿಬಿಐ ಪ್ರಕರಣವೊಂದನ್ನು ತಿಂಗಳು, ವರ್ಷಗಳ ನಂತರ ವಹಿಸಿಕೊಳ್ಳವುದಕ್ಕೂ ಇರುವ ಅಂತರ ನಿಮಗೆ ಈಗ ನಾನು ವಿವರಿಸಬೇಕಿಲ್ಲ.
ಅಮೆರಿಕಾದಂತೆ- ಅಲ್ಲಿನ ಎಫ್ʼಬಿಐ ವ್ಯವಸ್ಥೆಯಂತೆಯೇ ನಮ್ಮಲ್ಲೂ ಬರಬೇಕು, ಅದುವೆ ಒಳ್ಳೆಯದು ಎನ್ನುವುದು ನನ್ನ ವಾದವಲ್ಲ. ಬದಲಿಗೆ ನಮ್ಮಲ್ಲಿ ಇಂಥದ್ದೊಂದು ಅಂತರವಿದೆಯಲ್ಲ ಎನ್ನುವುದು ಇಲ್ಲಿ ಯೋಚಿಸಬೇಕಾದ ವಿಷಯ. ಸಿಬಿಐ ಎಂದರೆ ನಮಗೆಲ್ಲರಿಗೂ ಅದೇನೋ ಒಂದು ಅಪರಿಮಿತ ನಂಬಿಕೆ. ಅಲ್ಲಿ ಪ್ರಕರಣ ಹೋಯಿತೆಂದರೆ ಸತ್ಯ ಗೆಲ್ಲುತ್ತದೆ ಎಂದೇ ನಾವೆಲ್ಲರೂ ನಂಬಿದ್ದೇವೆ. ಆದರೆ ಪ್ರಕರಣ ವೊಂದು ಸಿಬಿಐ ಹಂತಕ್ಕೆ ತಲುಪುವಾಗ ಕಳೆದುಹೋಗುವ ಸಮಯವಿದೆಯಲ್ಲ- ಅದು ಎಂದಿಗೂ ಹಿಂದಿರುಗಿ ಬಾರದು. ಹಾಗಿರುವಾಗ ನಮಗೆ ಸತ್ಯವೇ ಬೇಕೆಂದರೆ- ಸತ್ಯದ ಮೇಲೆ ನಂಬಿಕೆ ಉಳಿಯಬೇಕೆಂದರೆ ಈ ವ್ಯವಸ್ಥೆಯಲ್ಲಿ ಬದಲಾವಣೆ ಆಗಬೇಕಲ್ಲವೇ? ಎಲ್ಲಾ ಮುಗಿದು ತಿಂಗಳು- ವರ್ಷಗಳ ನಂತರ ಪ್ರಕರಣವೊಂದನ್ನು ಹೊಸತಾಗಿ ಬೇಧಿಸುವುದು ಎಷ್ಟು ಪ್ರಾಕ್ಟಿಕಲ್?