Shishir Hegde Column: ಅಕ್ಕ ಕೇಳವ್ವಾ… ಫಿಲಡೆಲ್ಫಿಯಾದಲ್ಲಿ ಕರ್ನಾಟಕವಾ ಕಂಡೆ..
ಪೆನ್ವಿಲ್ವೇನಿಯಾ ಕನ್ವೆನ್ಷನ್ ಸೆಂಟರ್ ಮೂವತ್ತು ಸಾವಿರ ಜನರು ಸೇರಬಹುದಾದಷ್ಟು ದೊಡ್ಡ ಒಳಾಂಗಣ. ಅಲ್ಲಿ ಆರೇಳು ಸಾವಿರ ಜನರು ಏಕಕಾಲದಲ್ಲಿ ಕುಳಿತುಕೊಳ್ಳುವಷ್ಟು ದೊಡ್ಡ ಹಾಲ್- ಮುಖ್ಯ ವೇದಿಕೆ. ಅಲ್ಲಿಯೇ ಎಲ್ಲ ಪ್ರಮುಖ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದದ್ದು. ಸುಮಾರು ನಾಲ್ಕೆ ದುನೂರು ಜನರು ಕುಳಿತುಕೊಳ್ಳುವ ಇನ್ನೂ ನಾಲ್ಕು ವೇದಿಕೆಗಳು. ಅದರ ನಡುವೆ ಸುಮಾರು ಇಪ್ಪತ್ತು ಮೀಟರಿಗಿಂತ ಜಾಸ್ತಿ ಅಗಲದ ಕಾರಿಡಾರ್- ರಾಜ ಹಜಾರಗಳು.
-
ಶಿಶಿರಕಾಲ
ಅಮೆರಿಕಾದ ಫಿಲಡೆಲ್ಫಿಯಾ. ಕಳೆದ ವಾರಾಂತ್ಯ ಸೆಪ್ಟೆಂಬರ್ 4, 5, 6 ಮೂರು ದಿನ ಈ ನಗರವೇ ಒಂದು ರೀತಿಯ ‘ಕಲ್ಚರಲ್ ಶಾಕ್’ - ಸಂಸ್ಕೃತಿ ತಲ್ಲಣ ಅನುಭವಿಸಿದಂತಿತ್ತು. ಏಕೆಂದರೆ ಅಕ್ಕ (ಅಮೆರಿಕಾ ಕನ್ನಡ ಕೂಟಗಳ ಅಗರ) ಆಚರಿಸುವ ವಿಶ್ವ ಕನ್ನಡ ಸಮ್ಮೇಳನ ರಜತ ಮಹೋತ್ಸವ ಕಾರ್ಯಕ್ರಮ. ಬರೋಬ್ಬರಿ ಮೂರ್ನಾಲ್ಕು ಸಾವಿರ ಕನ್ನಡಿಗರು ಫಿಲಡೆಲ್ಫಿಯಾದ ಹೃದಯಭಾಗ ದಲ್ಲಿರುವ ಪೆನ್ಸಿಲ್ವೇನಿಯಾ ಕನ್ವೆನ್ಷನ್ ಹಾಲ್‌ನಲ್ಲಿ ಸೇರಿದ್ದರು. ಆ ಮೂರು ದಿನ ಫಿಲಡೆಲ್ಫಿಯಾದ ಗಲ್ಲಿಗಲ್ಲಿಗಳಲ್ಲಿ ಇಂಗ್ಲೀಷಿಗಿಂತ ಕನ್ನಡವೇ ಹೆಚ್ಚು ಕೇಳಿಸುತ್ತಿತ್ತು.
ಇಷ್ಟೊಂದು ಮಂದಿ ಫಿಲಡೆಲ್ಫಿಯಾದ ಸಮಾವೇಶ ಕೇಂದ್ರದ ಆಚೀಚೆ ಲುಂಗಿ, ಸೀರೆ ಭಾರತೀಯ ಬಟ್ಟೆ ಧರಿಸಿ ಯಾವುದೋ ಅಜ್ಞಾತ ಭಾಷೆಗಳಲ್ಲಿ ಮಾತನಾಡುತ್ತ, ನಗುತ್ತ ಕೇಕೆ ಹಾಕುತ್ತಿದ್ದರೆ ಅಮೆರಿಕಾದ ಐತಿಹಾಸಿಕ ನಗರ ಫಿಲಡೆಲ್ಫಿಯಾ ಬೆರಗುಗಣ್ಣಿನಿಂದ ನೋಡುತ್ತಲಿತ್ತು!
ಪೆನ್ವಿಲ್ವೇನಿಯಾ ಕನ್ವೆನ್ಷನ್ ಸೆಂಟರ್ ಮೂವತ್ತು ಸಾವಿರ ಜನರು ಸೇರಬಹುದಾದಷ್ಟು ದೊಡ್ಡ ಒಳಾಂಗಣ. ಅಲ್ಲಿ ಆರೇಳು ಸಾವಿರ ಜನರು ಏಕಕಾಲದಲ್ಲಿ ಕುಳಿತುಕೊಳ್ಳುವಷ್ಟು ದೊಡ್ಡ ಹಾಲ್- ಮುಖ್ಯ ವೇದಿಕೆ. ಅಲ್ಲಿಯೇ ಎಲ್ಲ ಪ್ರಮುಖ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದದ್ದು. ಸುಮಾರು ನಾಲ್ಕೆ ದುನೂರು ಜನರು ಕುಳಿತುಕೊಳ್ಳುವ ಇನ್ನೂ ನಾಲ್ಕು ವೇದಿಕೆಗಳು. ಅದರ ನಡುವೆ ಸುಮಾರು ಇಪ್ಪತ್ತು ಮೀಟರಿಗಿಂತ ಜಾಸ್ತಿ ಅಗಲದ ಕಾರಿಡಾರ್- ರಾಜ ಹಜಾರಗಳು.
ಇದನ್ನೂ ಓದಿ: Shishir Hegde Column: ಇತಿಹಾಸವನ್ನು ಗಬ್ಬೆಬ್ಬಿಸುವ ದೇಸೀ ‘ಅಪಸ್ವರಾಗಳು’
ಒಂದೊಂದು ವೇದಿಕೆಯಲ್ಲಿ ಒಂದೊಂದು ರೀತಿಯ ಕಾರ್ಯಕ್ರಮಗಳು. ಒಂದರಲ್ಲಿ ಸಾಹಿತ್ಯ, ಇನ್ನೊಂದರಲ್ಲಿ ಸಿನಿಮಾ, ಮತ್ತೊಂದರಲ್ಲಿ ನಾಟಕ, ಹಾಡಿನ ಸ್ಪರ್ಧೆಗಳು, ಬಿಸಿನೆಸ್ ಫಾರಮ್, ಕಿರುಚಿತ್ರ ಪ್ರದರ್ಶನ, ಯಕ್ಷಗಾನ- ಹೀಗೆ ನೂರೆಂಟು. ಎಲ್ಲಾ ವೇದಿಕೆಯಲ್ಲೂ ಬೆಳಿಗ್ಗೆಯಿಂದ ಮಧ್ಯರಾತ್ರಿಯವರೆಗೆ ಒಂದರ ಹಿಂದೆ ಮತ್ತೊಂದು. ನಮಗೆ ಯಾವ ಕಾರ್ಯಕ್ರಮ ಇಷ್ಟವೋ ವೇಳಾಪಟ್ಟಿಯ ಪ್ರಕಾರ ಅಲ್ಲಿಗೆ ಹೋಗಿ ಕುಳಿತರಾಯ್ತು. ಹಾಗಾಗಿ ಕಾರಿಡಾರ್‌ನಲ್ಲಂತೂ ಜನರು ವಿಮಾನ ನಿಲ್ದಾಣಗಳಲ್ಲಿ, ಮೆಜೆಸ್ಟಿಕ್ಕಿನ ಪ್ಲಾಟ್ʼಫಾರ್ಮ್‌ಗಳಲ್ಲಿ ಓಡಾಡುವವರಂತೆ ಇತ್ತಿಂದತ್ತ ಸಾಂಪ್ರದಾಯಿಕ ಉಡುಗೆಯುಟ್ಟು ಓಡಾಡುತ್ತಲೇ ಇದ್ದರು.
ಇನ್ನು ಕೆಲವರು ಅದೇ ಕಾರಿಡಾರಿನಲ್ಲಿ ನಿಂತು ಹಳೆಯ ಕಾಲೇಜು ಸ್ನೇಹಿತರ ಜೊತೆ, ನೆಂಟರ ಜೊತೆ ಹರಟುತ್ತಿದ್ದರು. ಅಲ್ಲಿಯೇ- ಕಾರ್ಯಕ್ರಮ ಕೊಡುವವರು ಅಲ್ಲಲ್ಲಿ ಮೇಕಪ್, ಗೆಜ್ಜೆ ಇತ್ಯಾದಿ ಹಾಕಿಕೊಂಡು ಅವರದೇ ಗುಂಪಿನಲ್ಲಿ ನಮ್ಮ ಕಾರ್ಯಕ್ರಮ ಯಾವಾಗ ಬರಬಹುದು ಎಂದು ಸಮಯ ಎದುರು ನೋಡುತ್ತಿದ್ದರು. ಇನ್ನು ಕೆಲವರು ಅಲ್ಲಿಯೇ ಇನ್ನೊಮ್ಮೆ ತಾಲೀಮು ನಡೆಸು ತ್ತಿದ್ದರು, ಬೆವರು ಒರೆಸಿಕೊಳ್ಳುವಾಗ ಮೇಕಪ್ ಹಾಳಾಯ್ತಾ ಎಂದು ನಡುನಡುವೆ ಕನ್ನಡಿ ನೋಡುತ್ತಿದ್ದರು. ಇಂತಹ ತಾಲೀಮನ್ನು ನೋಡಲೂ ಜನ ಸೇರುತ್ತಿದ್ದರು. ಕೆಲವರು ಅಲ್ಲಿಯೇ ಪುಕ್ಸಟ್ಟೆ ಸಲಹೆಯನ್ನೂ ಕೊಡುತ್ತಿದ್ದರು! ನಡುವೆ ಅವರ ಸಂಬಂಧಿಕರು ತಮ್ಮ ಮೊಬೈಲ್‌ನಲ್ಲಿ ಬೇರೆ ಬೇರೆ ಆಂಗಲ್‌ನಿಂದ ಕ್ಯಾಂಡಿಡ್ ಫೋಟೋ ತೆಗೆಯುತ್ತಿದ್ದರು.
ಅದೆಲ್ಲದರ ನಡುವೆ ಸೆಲೆಬ್ರಿಟಿಗಳು ಮತ್ತು ಅವರ ಸುತ್ತ ಏಳೆಂಟು ಮಂದಿ ಬುಡುಬುಡು ಎಂದು ಇದೇ ಹಜಾರದಲ್ಲಿ ವೇದಿಕೆಗಳತ್ತ ಗಡಿಬಿಡಿಯಲ್ಲಿ ನಡೆದು ಹೋಗುತ್ತಿದ್ದರು. ಸೆಲೆಬ್ರಿಟಿಗಳು ಹಾಯು ವಾಗ ಅಂದು ಸಂಚಲನವಾಗುತ್ತಿತ್ತು. ಅವರನ್ನು ಅಲ್ಲಿ ಸೇರಿದ್ದ, ಆಚೀಚೆ ಹಾಯುತ್ತಿದ್ದ ಕನ್ನಡಿಗರು ಹಕ್ಕಿನಿಂದಲೇ ನಿಲ್ಲಿಸಿ ‘ಸಾರ್ ಒಂದು ಸೆಲ್ಫಿ’, ‘ಮೇಡಮ್ ಒಂದು ಸೆಲ್ಫಿ’ ಎಂದು ತಮ್ಮ ಮೊಬೈಲ್ ನೊಳಗೊಂದು ನೆನಪನ್ನು ದಾಖಲಿಸಿಕೊಳ್ಳುತ್ತಿದ್ದರು. ಕೆಲವರಿಗಂತೂ ಅವರು ಯಾರು ಎಂದೇ ತಿಳಿದಿರುತ್ತಿರಲಿಲ್ಲ. ಯಾವುದಕ್ಕೂ ಇದ್ದುಬಿಡಲಿ, ಆಮೇಲೆ ಪಶ್ಚಾತ್ತಾಪ ಪಡೋದು ಯಾಕೆ ಎಂದು ಅವರೂ ಈ ಸೆಲೆಬ್ರಿಟಿಗಳ ಜೊತೆ ಫೋಟೋ ಕ್ಲಿಕ್ಕಿಸಿಕೊಳ್ಳುತ್ತಿದ್ದರು.
ಆಮೇಲೆ ‘ಯಾರವರು?’ ಎಂದು ಅಲ್ಲಿಯೇ ಕೇಳಿಕೊಳ್ಳುತ್ತಿದ್ದರು. ಇಷ್ಟೆ ಕಾರ್ಯಕ್ರಮವಿದ್ದ ಕಾರಣ- ಕೆಲವೊಮ್ಮೆ ಕುಟುಂಬಗಳು ಮುಂದೆ ಯಾವ ವೇದಿಕೆಯ ಯಾವ ಕಾರ್ಯಕ್ರಮ ನೋಡಬೇಕೆಂದು ಸಂಸಾರದೊಳಗಿನ ಭಿನ್ನಾಭಿಪ್ರಾಯ. ಅದನ್ನು ಆಪಸ್ನಾತಿಯಲ್ಲಿ ಪರಿಹರಿಸಿಕೊಳ್ಳಲಾಗದೆ ಅಮ್ಮ ಮಗ ಒಂದು ಕಾರ್ಯಕ್ರಮಕ್ಕೆ ಹೋದರೆ ಮಗಳು ಇನ್ನೊಂದಕ್ಕೆ, ಅಪ್ಪ ಮತ್ತೊಂದಕ್ಕೆ. ಆಮೇಲೆ ಇಷ್ಟು ಹೊತ್ತಿಗೆ- ಊಟಕ್ಕೆ ಇಲ್ಲಿ ಸಿಗುತ್ತೇನೆ ಎಂದು ಹೇಳಿ ಹೊರಡುವುದು ಕೇಳಿಸುತ್ತಿತ್ತು. ಅಲ್ಲಿ ಮಕ್ಕಳಿಗೆ, ಹಿರಿಯರಿಗೆ, ಮಹಿಳೆಯರಿಗೆ, ಕುಟುಂಬಕ್ಕೆ ಹೀಗೆ ಎಲ್ಲರ ರುಚಿಗೆ ಹೊಂದುವ ಮನರಂಜನಾ ಕಾರ್ಯಕ್ರಮಗಳಿದ್ದುವು. ದೈತ್ಯ ಹಾಲ್‌ನಲ್ಲಿ ಮೂರ್ನಾಲ್ಕು ಸಾವಿರ ಜನರು ಏಕಕಾಲದಲ್ಲಿ ಊಟ ಮಾಡುವಷ್ಟು ಟೇಬಲ್, ಕುರ್ಚಿ- ಅಲ್ಲಿ ಊಟ ತಿಂಡಿ.
ಇದೆಲ್ಲದರ ಜೊತೆ ಕನ್ನಡಿಗರ ಸುಮಾರು ಐವತ್ತರವತ್ತು ವ್ಯಾಪಾರಿ ಮಳಿಗೆಗಳು. ಕೆಲವು ವರ್ತಕರು ಕರ್ನಾಟಕದಿಂದ ಬಂದಿದ್ದರು- ಕನ್ನಡದ ಪುಸ್ತಕ, ಕನ್ನಡದ ಆಹಾರದ ಬ್ರಾಂಡ್‌ಗಳು ಇತ್ಯಾದಿ ಯನ್ನು ತಂದಿದ್ದರು. ‘ಕನ್ನಡಿಗರ ಹೆಮ್ಮೆ ನಂದಿನಿ’ಯ ಅಂಗಡಿ ಅಲ್ಲಿತ್ತು. ‘ಟೋಟಲ್ ಕನ್ನಡ’ ಪುಸ್ತಕದ ಮಳಿಗೆಯಿತ್ತು. ಸಹಜವಾಗಿ ನನ್ನನ್ನು ಮೊದಲು ಸೆಳೆದದ್ದು ಈ ಮಳಿಗೆ. ನಾನು ಮತ್ತು ಗೆಳೆಯ ಶ್ರೀನಿವಾಸ ಭಟ್ ಅಲ್ಲಿ ಪುಸ್ತಕಗಳನ್ನು ಆರಿಸಿಕೊಳ್ಳುತ್ತಿದ್ದೆವು.
ಟೋಟಲ್ ಕನ್ನಡ ಮಾಲೀಕ ವಿ.ಲಕ್ಷ್ಮಿಕಾಂತ್ ಅಲ್ಲಿದ್ದರು. ಅವರು ನನ್ನನ್ನು ಸ್ವಲ್ಪ ಗೊಂದಲದಲ್ಲಿ ನೋಡಿದ್ದನ್ನು ಗೆಳೆಯ ಶ್ರೀನಿವಾಸ ಗ್ರಹಿಸಿದರು. ಅವರು ನನ್ನನ್ನು ಗುರುತಿಸಿದ್ದರು- ಆದರೆ ಎಲ್ಲಿ, ಏನು ಎತ್ತ ಎಂದು ಅವರಿಗೆ ಅಂದಾಜು ಹತ್ತಿದಂತಿರಲಿಲ್ಲ. ನನಗೂ ಅದು ಗೊತ್ತಾಯ್ತು. ನಮ್ಮದೇ ತುತ್ತೂರಿ ಹೋದ ಊದಿಕೊಳ್ಳುವುದು ಬಾಲಿಶವೂ ಹೌದು, ಅನವಶ್ಯವೂ ಹೌದು, ನಾಚಿಕೆಯೂ ಹೌದು. ಶ್ರೀನಿಗೆ ಅವರ ಮುಖದಲ್ಲಿನ ಗೊಂದಲ ಕಂಡು ಸುಮ್ಮನಿರಲಾಗಲಿಲ್ಲ, ‘ಇವರದೂ ಒಂದು ಪುಸ್ತಕ ಇತ್ತೀಚೆಗೆ ಪ್ರಕಟ ವಾಗಿದೆ’ ಎಂದು ಹೇಳಿ ಗೊಂದಲ ಭಂಗ ಮಾಡಿಬಿಟ್ಟರು!
ಸಹಜವಾಗಿ- ವಿಶ್ವೇಶ್ವರ ಭಟ್ಟರ ಪುಸ್ತಕದ ಜೊತೆ ನನ್ನದೂ ಬಿಡುಗಡೆಯಾಗಿದ್ದರಿಂದ ಮತ್ತು ಅವರು ಕೂಡ ಒಬ್ಬ ಪಬ್ಲಿಷರ್ ಆಗಿರುವುದರಿಂದ ವಿಶ್ವವಾಣಿ ಪುಸ್ತಕ ಬಿಡುಗಡೆ ಕಾರ್ಯಕ್ರಮ ನೋಡಿದ್ದರು. ಆ ತಕ್ಷಣ ಅವರಿಗೆ ಫ್ಲ್ಯಾಶ್ ಆದದ್ದಷ್ಟೇ ಅಲ್ಲ, ಅಲ್ಲಿಯೇ ಪುಸ್ತಕ ರಾಶಿಗಳ ಮಧ್ಯೆ ‘ಹ್ಯಾಶ್‌ಟ್ಯಾಗ್ ಶಿಶಿರಕಾಲ’ ಹೊರ ತೆಗೆದು ‘ಇಗಳಿ, ಇಲ್ಲಿದ್ದೀರಿ ನೀವು’ ಎಂದು ತೋರಿಸಿದರು. ಎಲ್ಲರೂ ನಕ್ಕೆವು. ಚಿಕ್ಕ ಘಟನೆ.
ನನ್ನನ್ನು ಅವರ ಮಳಿಗೆಯತ್ತ ಸೆಳೆದ ಕನ್ನಡ ಪುಸ್ತಕವೇ ನಮ್ಮಿಬ್ಬರನ್ನು ಈ ರೀತಿ ಜೋಡಿಸಿದ್ದು ಒಂದು ಅನುಭವ. ಸಮ್ಮೇಳನದ ವಿಚಾರ ಗೋಷ್ಠಿಯೊಂದರಲ್ಲಿ ಭಾಗಿಯಾಗುವ ಅವಕಾಶ ನನ್ನದಾಗಿತ್ತು. ಪ್ರೊ. ಕೃಷ್ಣೇಗೌಡರು, ಬರಹಗಾರ- ಕನ್ನಡಪ್ರಭ ಸಂಪಾದಕ ಜೋಗಿ, ಸಮೂಹ ಸಂಪಾದಕರಾದ ರವಿ ಹೆಗಡೆ, ನಿರ್ದೇಶಕ ಬಿ. ಸುರೇಶ್, ಪತ್ರಕರ್ತ ಮುರಳೀಧರ ಖಜಾನೆ ಮೊದಲಾದ ಹಿರಿಯರ ಜೊತೆ ಸೇರಿ ಚರ್ಚಿಸಿದ್ದು ನಾವು ನೀವೆಲ್ಲರೂ ಒಳಗೊಳಗೇ ಆತಂಕದಿಂದ ಆಗಾಗ ಕೇಳಿಕೊಳ್ಳುತ್ತಿರುವ ಪ್ರಶ್ನೆಯನ್ನೇ ಆಗಿತ್ತು.
ಕನ್ನಡ ಎತ್ತ ಸಾಗುತ್ತಿದೆ? ಕನ್ನಡ ನಿಧಾನವಾಗಿ ಸಾಯುತ್ತಿದೆಯೇ? ಮುಂದೆ ಹೋದಂತೆ ಕನ್ನಡಕ್ಕೇ ನಾಗಬಹುದು? ಏನು ಮಾಡಬಹುದು? ಹೊರದೇಶದಲ್ಲಿ ಬದುಕುವ ಮಕ್ಕಳಲ್ಲಿ ಕನ್ನಡ ಉಳಿಸುವುದು ಹೇಗೆ? ಎಂಬಿತ್ಯಾದಿ ವಿಷಯದ ಮೇಲೆ ವಿಚಾರ ವಿನಿಮಯಗಳಾದವು. ಕಾರ್ಯಕ್ರಮ ಆಲಿಸಿದ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿಯವರು ಅವರ ವಿಚಾರವನ್ನು ಕೂಡ ಹಂಚಿಕೊಂಡದ್ದು ವಿಶೇಷವಾಗಿತ್ತು, ಗೋಷ್ಠಿಗೊಂದು ಮೆರಗನ್ನು ನೀಡಿತು. ಆದರೆ ನಾವು ಅಲ್ಲಿ ಚರ್ಚಿಸಿದ ‘ಕನ್ನಡ ಎತ್ತ ಸಾಗುತ್ತಿದೆ?’ ಎಂಬ ಪ್ರಶ್ನೆಗೆ ಉತ್ತರ ಅಲ್ಲಿಯೇ ಅಕ್ಕ ಸಮ್ಮೇಳನದಲ್ಲಿಯೇ ನಮ್ಮೆದುರಿಗೇ ಇತ್ತು.
ಅಮೆರಿಕಾದಲ್ಲಿ ಹುಟ್ಟಿ, ಇಲ್ಲಿಯೇ ಬೆಳೆದ ಮಕ್ಕಳು ಶುದ್ಧ ಉಚ್ಛಾರದಲ್ಲಿ ಕನ್ನಡದ ಹಾಡುಗಳನ್ನು ಸುಸ್ಪಷ್ಟ, ಸುರಾಗದಲ್ಲಿ ಹಾಡುತ್ತಿದ್ದರು. ಈ ಮಕ್ಕಳೇ ಕನ್ನಡದಲ್ಲಿ ಚಿಕ್ಕ ವೇದಿಕೆಗಳ ಕಾರ್ಯಕ್ರಮ ನಿರ್ವಹಣೆಯನ್ನು ದೊಡ್ಡ ವೇದಿಕೆಯ ದೊಡ್ಡವರಿಗಿಂತ ಚೆನ್ನಾಗಿ, ಸ್ಪಷ್ಟ ಕನ್ನಡದಲ್ಲಿ ಮಾಡು ತ್ತಿದ್ದರು. ಹಾಗಂತ ಇದಷ್ಟೇ ಕಂಡು ಈ ಮಕ್ಕಳ ಮತ್ತು ಕನ್ನಡದ ಸಂಬಂಧವನ್ನು ವಿಶ್ಲೇಷಣೆ ಮಾಡುವಂತಿಲ್ಲ. ಅವರೆಲ್ಲ ತಮ್ಮ ಅಪ್ಪ, ಅಮ್ಮನ ಜೊತೆ ಬಂದವರು.
ಇನ್ನು ಇಪ್ಪತ್ತು ವರ್ಷ ನಂತರ ಈ ಮಕ್ಕಳು ಅಕ್ಕ ಸಮ್ಮೇಳನಕ್ಕೆ ಬರದಿರಬಹುದು. ಆದರೆ ಆ ಎಲ್ಲ ಮಕ್ಕಳೂ ಕನ್ನಡಿಗರಾಗಿಯೇ ಸಂಭ್ರಮಿಸಿದರು. ಫಿಲಡೆಲ್ಫಿಯಾದಲ್ಲಿ ಅಮೆರಿಕಾದ ಮೂಲೆ ಮೂಲೆ ಯಿಂದ ಕನ್ನಡಕ್ಕಾಗಿಯೇ ಸೇರಿದ್ದ ಪ್ರತಿಯೊಬ್ಬರಲ್ಲೂ ಕನ್ನಡ ಇತ್ತು. ಅದೇ ಕನ್ನಡ ಅವರೆಲ್ಲ ರನ್ನೂ (ನನ್ನನ್ನೂ) ಅಲ್ಲಿ ಸೇರಿಸಿತ್ತು. ಕನ್ನಡವೆಂಬ ಆಯಸ್ಕಾಂತ. ನನಗಿಲ್ಲಿ ಸೇರಿದ್ದ ಮೂರ್ನಾಲ್ಕು ಸಾವಿರ ಕನ್ನಡಿಗರ ಶ್ರಮ ಕಂಡು ಹೆಮ್ಮೆಯೆನಿಸಿತು.
ಮೂರು ದಿನದ ಕಾರ್ಯಕ್ರಮ, ಒಂದು ದಿನ ಹೋಗಲಿಕ್ಕೆ, ಒಂದು ದಿನ ಬರಲಿಕ್ಕೆ, ಖರ್ಚು ಕೂಡ- ದೂರವಾದರೆ ವಿಮಾನದ ಖರ್ಚು, ಸಾವಿರಾರು ಡಾಲರ್. ಉಳಿದುಕೊಳ್ಳಲು ಹೋಟೆಲ. ಯುದ್ಧದ ತುಟ್ಟಿಯ ಕಾಲವನ್ನೂ ಅವರೆಲ್ಲ ಕನ್ನಡಕ್ಕಾಗಿ ನಿರ್ಲಕ್ಷಿಸಿದ್ದರು. ಅಮೆರಿಕಾದಂತಹ ದೇಶದಲ್ಲಿ ಪ್ರತಿಯೊಬ್ಬರದೂ ಸ್ವಲ್ಪ ಜಾಸ್ತಿಯೇ ಬಿಡುವಿಲ್ಲದ ಬದುಕು.
ವೃತ್ತಿ, ವ್ಯಾಪಾರ-ವ್ಯವಹಾರ, ಮಕ್ಕಳು, ಶಿಕ್ಷಣ, ಪರೀಕ್ಷೆ, ಕುಟುಂಬ ಇತ್ಯಾದಿ. ಅದೆಲ್ಲದರ ನಡುವೆ ಸಂಘಟನೆ, ಕಾಸ್ಟ್ಯೂಮ್ ವಿಮಾನದಲ್ಲಿ, ಕಾರಿನಲ್ಲಿ ತುಂಬಿಸಿಕೊಂಡು ಬಂದು, ತಯಾರಾಗಿ ಪ್ರದರ್ಶನ ನೀಡುವುದು ಸಣ್ಣ ವಿಷಯವಲ್ಲ. ಎರಡು- ಹತ್ತು ನಿಮಿಷದ ಪ್ರದರ್ಶನಕ್ಕೆ ತಿಂಗಳು ಗಟ್ಟಲೆ ತಾಲೀಮು ಮಾಡಿಕೊಂಡು ಬಂದವರು ಅಲ್ಲಿದ್ದರು. ಆರೆಂಟು ತಿಂಗಳು- ಎರಡು ಮೂರು ವರ್ಷದ ಮಕ್ಕಳಿರುವ ಯುವ ಕನ್ನಡಿಗರು ಮಕ್ಕಳನ್ನು ಸ್ಟ್ರೋಲರ್‌ನಲ್ಲಿ ತಳ್ಳಿಕೊಂಡು ತಂದಿದ್ದರು. ಎಲ್ಲರ ಎಲ್ಲ ಶ್ರಮವೂ ಕೇವಲ ಕನ್ನಡಕ್ಕಾಗಿಯೇ.
ಹಾ.. ಹಾಗಂತ ಸಾವಿರಾರು ಜನರು ಸೇರುವ ಇಂತಹ ಕಾರ್ಯಕ್ರಮಗಳಲ್ಲಿ ಎಲ್ಲದೂ ಸುಸೂತ್ರವಾಗಿ ನಡೆಯುವುದು ಸಾಧ್ಯವಿಲ್ಲ. ಅಲ್ಲಿ ಆ ವ್ಯವಸ್ಥೆ ಸರಿಯಾಗಿಲ್ಲ, ಚಹಾ ಕಾಫಿ ತಣಿದು ಹೋಗಿದೆ, ಕಾಜು ಬರ್ಫಿ, ಹೋಳಿಗೆ ನನಗೆ ಸಿಗಲೇ ಇಲ್ಲ, ವಡೆ ಸ್ವಲ್ಪ ಎಣ್ಣೆ ಕುಡಿದಿತ್ತು, ಅನ್ನ ಸರಿಯಾಗಿ ಬೆಂದಿರಲಿಲ್ಲ, ನನಗೆ ನಿನ್ನೆಯಿಂದ ಗ್ಯಾಸು, ಈ ಕುರ್ಚಿ ಸರಿಯಿಲ್ಲ, ಬೆನ್ನು ನೋವು, ಅಲ್ಲಿ ಸೆಖೆ, ಇಲ್ಲಿ ಸ್ವಲ್ಪ ಚಳಿ ಜಾಸ್ತಿ, ಸೌಂಡ್ ಸಿಸ್ಟಮ್ ಇತ್ಯಾದಿ ಒಂದಿಷ್ಟು ಸಾರ್ವಜನಿಕ ದೂರುಗಳು ಸಾಮಾನ್ಯ. ಇವುಗಳಲ್ಲಿ ಕೆಲವು ಆರೋಪಗಳು ‘ಅಲ್ಲಲ್ಲಿ ಅಕ್ಕಳ’ ಮೇಲೆ ಕೇಳಿಬಂದದ್ದು ನಿಜ.
ಊಟಕ್ಕೆ ಕೂತಾಗ, ಮಾತಿಗೆ ವಿಷಯ ಸಿಗದಿದ್ದಾಗ, ಅಲ್ಲಿದ್ದ ಚಿಕ್ಕಪುಟ್ಟ ಅವ್ಯವಸ್ಥೆಗಳು ಬಾಯ್ಮಾತಿಗೆ ಆಹಾರವಾಗುತ್ತಿದ್ದವು. ಆದರೆ ಅಲ್ಲಿ ಬಂದಿದ್ದ ಎಲ್ಲರೂ ಅವರದೇ ಅಕ್ಕನ ಮನೆಯೆಂಬಂತೆ ಎಲ್ಲವನ್ನೂ ಸುಧಾರಿಸಿಕೊಂಡು ಹೋದರು. ಇದೆಲ್ಲವನ್ನು ಕಂಡು ಜೋಗಿಯವರಲ್ಲಿ ಹೇಳಿದಾಗ ಅವರು ‘ಶಿಶಿರ್, ಇದೆಲ್ಲ ಹೀಗೆಯೇ ಇರಬೇಕು ರೀ. ಹೀಗಿದ್ದರೇ ಚಂದ’ ಎಂದು ಹೇಳಿದ್ದು ನನಗೂ ಹೌದೆನಿಸಿತು.
ಗೋಣಾಡಿಸಿದೆ. ಹಾ.. ನಾನು ಅಲ್ಲಿ ವಿಶ್ವವಾಣಿ ಓದುಗರನ್ನು, ವಿಶ್ವವಾಣಿ ಕ್ಲಬ್ ಹೌಸ್ ಕೇಳುಗರನ್ನು ಕೂಡ ಭೇಟಿಯಾದೆ. ಬರವಣಿಗೆ ವಿಶುಯಲ್ ಮಿಡಿಯಾದಂತಲ್ಲ. ಆದರೂ ಈ ಲೇಖನದಲ್ಲಿ ನನ್ನ ಚಿಕ್ಕ ಭಾವಚಿತ್ರ ಕಾಣಿಸುತ್ತಿದೆಯಲ್ಲ, ಅಷ್ಟನ್ನೇ ಕಂಡು ಕೆಲವರು ಗುರುತಿಸಿದ್ದು ಸೊಕ್ಕಿನ ವಿಷಯ ಎನ್ನುವು ದಕ್ಕಿಂತ ನನಗೆ ಆಶ್ಚರ್ಯವಾಯಿತು. ಏಕೆಂದರೆ ಫೋಟೋದಲ್ಲಿ ಕಂಡ ವ್ಯಕ್ತಿಯನ್ನು ಎದುರು ಕಂಡಾಗ ಗುರುತಿಸುವುದು ನನಗಂತೂ ಕಷ್ಟವೇ.
ವಾರಕ್ಕೊಮ್ಮೆ ನಾನು ಬರೆಯುವ ಅಂಕಣದ ಓದುಗರು ಅಜ್ಞಾತರಿಂದ ಜ್ಞಾತರಾಗುವುದು, ಪರಿಚಯದ ಮುಖಗಳಾಗುವುದು ನಾನು ವಿನೀತನಾಗಿ ಸ್ವೀಕರಿಸುವ ಅನುಭವ. ಈ ಬೃಹತ್ ಒಳಾಂಗಣ ಸಭಾಂಗಣ ಇದ್ದದ್ದು ಫಿಲಡೆಲ್ಫಿಯಾದ ಮಧ್ಯಭಾಗದಲ್ಲಿ. ಕನ್ನಡ ಅಲ್ಲಿ, ಸಭಾಂಗಣದ ಒಳಗಷ್ಟೇ ಅಲ್ಲ ಹೊರಗಡೆ ನಾಲ್ಕಾರು ಬ್ಲಾಕ್, ನಗರದ ಕಾಲು ಭಾಗ ಆವರಿಸಿತ್ತು. ಅಲ್ಲ ಭಾರತೀಯ ಉಡುಗೆ ತೊಡುಗೆ ಧರಿಸಿ ಚಂದಕ್ಕೆ ತಯಾರಾಗಿ ಓಡಾಡುತ್ತಿರುವ, ಯಾವುದೋ ವಿಚಿತ್ರ ಭಾಷೆಯಲ್ಲಿ ಮಾತನಾಡುವ ಜನರನ್ನು ಈ ಪ್ರಮಾಣದಲ್ಲಿ ಕಂಡ ಫಿಲಡೆಲ್ಫಿಯಾ ಸ್ಥಳೀಯರು- ಅವರೇ ಅಕಸ್ಮಾತ್ ಭಾರತದ ಯಾವುದೋ ಅeತ ರಾಜ್ಯವೊಂದಕ್ಕೆ ಬಂದು ನಿಂತಂತೆನಿಸಿ ಗಾಬರಿ ಯಾದಂತಿತ್ತು. ಆ ಬೀದಿಗಳಲ್ಲಿ ಹಾದು ಹೋಗುವ ಅವರೆಲ್ಲ ಅಕ್ಷರಶಃ ಕರ್ನಾಟಕವನ್ನೇ ನಡೆದು, ದಾಟಿ ಹೋಗುತ್ತಿದ್ದರು.
ಕಾಲೇಜಿಗೆ ಹೋಗುವ ಇಲ್ಲಿನ ಅಮೆರಿಕನ್ ಹುಡುಗರ ಗುಂಪೊಂದು ನನ್ನ ಹತ್ತಿರ ಬಂದು ಏನಿದು ಕಾರ್ಯಕ್ರಮ, ಏನು ಎತ್ತ ಇಂದು ವಿಚಾರಿಸಿದರು. ಕೊನೆಯಲ್ಲಿ ಅಲ್ಲಿದ್ದ ಒಬ್ಬ ಹುಡುಗ ’ How old is your language?’ ನಿಮ್ಮ ಭಾಷೆ ಎಷ್ಟು ಹಳೆಯದು? ಇದನ್ನುತ್ತರಿಸುವಾಗ ನನ್ನ ಗಂಟಲ ನರಗಳು ಬಿಗುವೆನಿಸಿದವು. Two- two and a half thousand ಎರಡು ಎರಡೂವರೆ ಸಾವಿರ ! ಅಲ್ಲಿಯೇ ಪಕ್ಕದಲ್ಲಿದ್ದ ಇನ್ನೊಬ್ಬ ಉದ್ಗಾರ ತೆಗೆಯುತ್ತ Bruh, that is before Christ ! ‘ಗುರೂ ಅದು ಕ್ರಿಸ್ತನಿಗಿಂತ ಹಿಂದೆ!’ ಎಂದ.
ನನ್ನ ಎದೆ ಇನ್ನಷ್ಟು ಉಬ್ಬಿತು. ಸುಮ್ಮನೆ ಹೌದೆಂದು ತಲೆಯಾಡಿಸಿದೆ. ಉಳಿದಂತೆ- ಕರ್ನಾಟಕದಿಂದ ನಟರು, ಕಲಾವಿದರು, ವಾದ್ಯವೃಂದದವರು ಬಂದಿದ್ದರು. ದೊಡ್ಡ ವೇದಿಕೆಯಲ್ಲಿ ಅನ್ನಸಂತರ್ಪಣೆ ಯಂತೆ ಮನರಂಜನೆಯನ್ನು ಉಣಬಡಿಸಿ ಎಲ್ಲರನ್ನೂ ರಂಜಿಸಿದರು. ಕೇಂದ್ರದ ಭಾರಿ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ. ಕುಮಾರಸ್ವಾಮಿ, ಆದಿಚುಂಚನಗಿರಿ ಮಹಾಸ್ವಾಮೀಜಿ ನಿರ್ಮಲಾನಂದರು ಕೂಡ ಅಲ್ಲಿದ್ದರು. ಸೇರಿದ್ದ ಗಣ್ಯರ ಬಳಗ ದೊಡ್ಡದಿದೆ- ಇಲ್ಲಿ ಪಟ್ಟಿಮಾಡಲಿ ಕ್ಕಾಗುವುದಿಲ್ಲ! ಕಾರ್ಯಕ್ರಮ ಮುಗಿದು ಮೂರ್ನಾಲ್ಕು ದಿನ ಕಳೆದಿದೆ.
ಆದರೆ ನಾನಂತೂ ಅದೇ ಅಕ್ಕನ ಮನೆಯ ಕನ್ನಡದ ಗುಂಗಿನಲ್ಲಿಯೇ ಇದ್ದೇನೆ. ಎಷ್ಟೆಂದರೆ ಕಾರ್ಯಕ್ರಮ ಮುಗಿಸಿ ಮನೆಗೆ ಮರಳುವಾಗ ಏರ್‌ಪೋರ್ಟ್ ಸೆಕ್ಯುರಿಟಿ ಕೈ ಮಾಡಿ ಕರೆಯುವಾಗ ‘ಬಂದೆ’ ಎಂದೇ ಬಾಯಲ್ಲಿ ಬಂದುಬಿಟ್ಟಿತು. ಕರ್ನಾಟಕದಿಂದ ಹೊರಬಿದ್ದು ಫಿಲಡೆಲ್ಫಿಯಾಗೆ ಬರಲು ಕೆಲವು ತಾಸುಗಳೇ ಬೇಕಾದವು. ಈಗ, ಅಷ್ಟೆ ಕಾರ್ಯಕ್ರಮ ನೋಡಿದ ನನಗೆ ‘ಏನೇನು ನೋಡಿದೆ’ ಎಂದರೆ ಉತ್ತರ ಎಲ್ಲಿಂದ ಶುರುಮಾಡಬೇಕೆಂಬ ಗೊಂದಲವಾಗುತ್ತದೆ. ಆದರೆ ಸದಾ ನೆನಪಿನಲ್ಲುಳಿಯುವುದು ಆ ಇಷ್ಟಗಲದ ಹಜಾರದಲ್ಲಿ ನಡೆದಾಡಿದ ಅನುಭವ.
ಕಾರ್ಯಕ್ರಮಗಳ ನಡುವೆ ಎದ್ದು ಸುಮ್ಮನೆ, ವಿನಾಕಾರಣ ಆ ಕಾರಿಡಾರಿನಲ್ಲಿ ನಡೆದುಕೊಂಡು ಹೋಗುತ್ತಿದ್ದೆ. ಪದೇ ಪದೆ ಇತ್ತಿಂದತ್ತ- ಅತ್ತಿಂದಿತ್ತ ಹೋಗಿಬರುತ್ತಿದ್ದೆ. ಅಮೆರಿಕಾದ ಇಂತಲ್ಲಿ ಕೆಆರ್ ಮಾರುಕಟ್ಟೆಯ, ಕನ್ನಡದ ಮದುವೆ ಮನೆಯ ಗಿಜಿಬಿಜಿಯ ಮಾತನ್ನು ಕೇಳಿಸಿಕೊಳ್ಳುವ ಅನುಭವವೇ ಬೇರೆ. ನನಗೆ ಅಲ್ಲಿ ಕನ್ನಡಕ್ಕಾಗಿ ಹುಡುಕಿ ಹೋಗಬೇಕಿರಲಿಲ್ಲ. ಕರ್ನಾಟಕದಲ್ಲಿರು ವವರಿಗೆ ಇದು ಹುಚ್ಚೆನಿಸಬಹುದು. ನನಗಂತೂ ಇದೊಂದು ರೀತಿ ಅಂತರಿಕ್ಷದಲ್ಲಿ ಆಕ್ಸಿಜನ್ ಕೊಟ್ಟ ರೀತಿಯ ಅನುಭವವಪ್ಪ!
ಕನ್ನಡದ ಶಬ್ದ, ಗೌಜಿ, ಯಾರನ್ನೂ ಕೂಗಿ ಕರೆಯುವ ಮೇಲುಧ್ವನಿ, ಗಜಿಬಿಜಿ, ಗಡಿಬಿಡಿ. ಈಗ ಕಾರ್ಯಕ್ರಮ ಮುಗಿದಿದೆ. ಸೇರಿದ್ದ ಅಷ್ಟು ಸಾವಿರ ಕನ್ನಡಿಗರು ಅವರವರ ಗೂಡಿಗೆ, ಜಗತ್ತಿಗೆ ಮರಳಿದ್ದಾರೆ. ಸ್ವಯಂ ಸೇವಕರು, ಸಂಘಟಕರು ನಿಟ್ಟುಸಿರು ಬಿಟ್ಟಿದ್ದಾರೆ. ಎಲ್ಲರೂ ಅವರವರ ಉದ್ಯೋಗದಲ್ಲಿ ತೊಡಗಿಸಿಕೊಳ್ಳುತ್ತಾರೆ.
ಕನ್ನಡ ಮನೆಯೊಳಗೆ, ವ್ಯವಹಾರಿಕವಾಗಿ ಹಿನ್ನೆಲೆಗೆ ಫಕ್ಕನೆ ಸರಿದು ಬಿಡುತ್ತದೆ. ಆದರೆ ಅಕ್ಕ ಸಮ್ಮೇಳನವೆಂದರೆ ಮಿನುಗುಹುಳುಗಳು ಕಾಡಿನ ಯಾವುದೋ ಒಂದು ಮರಕ್ಕೆ ಆಂಟಿ ಇಡೀ ಮರವನ್ನು, ಕಾಡನ್ನು ಜೊತೆಯಾಗಿ ಮಿಂಚಿದಂತೆ. ಸಮುದಾಯ ಮನುಷ್ಯನ ಮೂಲಭೂತ ಅಗತ್ಯ. ನೆಲದಿಂದ 14 ಸಾವಿರ ಕಿಲೋಮೀಟರ್ ದೂರದಲ್ಲಿ ಸಾವಿರಾರು ಜನರನ್ನು, ಕನ್ನಡದ ಕಲಾವಿದರನ್ನು ಸೇರಿಸುವ ಕಾರ್ಯಕ್ರಮವನ್ನು ಸಂಘಟಿಸುವುದು ಸುಲಭದ ಮಾತೇ ಅಲ್ಲ. ಅಕ್ಕ ಸಮ್ಮೇಳನ ಕನ್ನಡಿಗರ ಸಂಘಟನೆಯ ಸಾಮರ್ಥ್ಯಕ್ಕೊಂದು ದಿಟ್ಟ ಉದಾಹರಣೆ. ಕಾರ್ಯಕ್ರಮ ವನ್ನು ಇಷ್ಟು ಅಚ್ಚುಕಟ್ಟಾಗಿ ಸಂಘಟಿಸಿದ ಅಧ್ಯಕ್ಷರಾದ ಮಧು ರಂಗಯ್ಯ, ಚೇರ್ಮನ್ ಡಾ. ಅಮರನಾಥ ಗೌಡ ಮತ್ತು ಅವರ ತಂಡ, ನೂರಾರು ಸ್ವಯಂ ಸೇವಕರು ಸ್ತುತ್ಯರ್ಹರು. ಅವರೆಲ್ಲ ಸೇರಿ ಫಿಲಡೆಲ್ಫಿಯಾದ ಆರ್ಕ್ ಸ್ಟ್ರೀಟ್‌ನಲ್ಲಿ, ಅಮೆರಿಕಾದಲ್ಲಿ ಕನ್ನಡದ ತೇರನ್ನು ಯಶಸ್ವಿಯಾಗಿ ಎಳೆದಿದ್ದಾರೆ.