ಬಸವ ಮಂಟಪ (ಭಾಗ-2)
ರವಿ ಹಂಜ್
ಭಾರತದಲ್ಲಿ ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯಗಳಿಗಾಗಿ ನೇರ ಧಾರ್ಮಿಕ ಮೀಸಲಾತಿ ಯಿಲ್ಲ. ಸಂವಿಧಾನವು ಧರ್ಮದ ಆಧಾರದ ಮೇಲೆ ನೇರ ಮೀಸಲಾತಿ ಒದಗಿಸುವುದಿಲ್ಲ, ಏಕೆಂದರೆ ಇದು ವಿಭಜನೆಯನ್ನು ಪ್ರೋತ್ಸಾಹಿಸುತ್ತದೆ ಎಂದು ವಿರೋಧಿಸಲಾಗಿದೆ. ಈ ಹಿನ್ನೆಲೆಯಲ್ಲಿಯೇ ಕರ್ನಾಟಕ ಸರಕಾರವು ಮುಸ್ಲಿಂ ಮೀಸಲಾತಿಯನ್ನು ರದ್ದು ಮಾಡಿತು.
ಇನ್ನು ಕರ್ನಾಟಕ ರಾಜ್ಯದ ಆಯೋಗವು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಕಾನೂನು-1995 ಪ್ರಕಾರ ಕಾರ್ಯ ನಿರ್ವಹಿಸುತ್ತಿದೆ. ಆಯೋಗವು ಈ ಕಾನೂನಿನ ಕಲಂ 11ರ ಪ್ರಕಾರ ಪ್ರತಿ ಹತ್ತು ವರುಷಗಳಿಗೆ ಒಮ್ಮೆ ರಾಜ್ಯದಲ್ಲಿರುವ ಎಲ್ಲ ಜಾತಿಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಮಾಡಿ, ಈ ಸಮೀಕ್ಷೆಯಲ್ಲಿ ಕಂಡುಬರುವ ವಾಸ್ತವಾಂಶದ ಆಧಾರದಲ್ಲಿ, ಜಾರಿಯಲ್ಲಿರುವ ಹಿಂದುಳಿದ ವರ್ಗ ಪಟ್ಟಿಯಲ್ಲಿರುವ ಯಾವ ಜಾತಿಗಳು ಅಭಿವೃದ್ಧಿ ಹೊಂದಿ, ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಮುಂದುವರಿಯಲು ಅನರ್ಹ ಆಗಿವೆಯೋ ಅವುಗಳನ್ನು ಹಿಂದುಳಿದ ವರ್ಗಗಳ ಪಟ್ಟಿಯಿಂದ ತೆಗೆದುಹಾಕಬೇಕಾಗಿರುತ್ತದೆ.
ಯಾವ ಜಾತಿಗಳು (ಒಂದೇ ವೃತ್ತಿಯನ್ನು ಮಾಡುವ ಜನರ ಸಮೂಹ) ಸಮೀಕ್ಷೆಯ ಪ್ರಕಾರ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರಿಸಲು ಅರ್ಹ ಎಂದು ಕಂಡುಬರುತ್ತವೆಯೋ ಅರ್ಹರನ್ನು ಹೊಸದಾಗಿ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರಿಸಬೇಕಾಗಿರುತ್ತದೆ. ಇದು ರಾಜ್ಯ ಆಯೋಗದ ಮೂಲಭೂತ ಕರ್ತವ್ಯ ಆಗಿರುತ್ತದೆ. ಆದರೆ ಕಳೆದ 50 ವರ್ಷಗಳಿಂದ ಅಂದರೆ 1975ರಿಂದ ಇಲ್ಲಿಯ ವರೆಗೆ ಹಿಂದುಳಿದ ವರ್ಗ ಪಟ್ಟಿಯಲ್ಲಿ ಸೇರಿಕೊಂಡು ಸೌಲಭ್ಯಗಳನ್ನು ಪಡೆದ ಒಂದೇ ಒಂದು ಜಾತಿಯನ್ನು ಹಿಂದುಳಿದ ವರ್ಗಗಳ ಪಟ್ಟಿಯಿಂದ ತೆಗೆದುಹಾಕಲು ಶಿಫಾರಸು ಮಾಡಿಲ್ಲ. ಇದೆಲ್ಲವೂ ಈ ಆಯೋಗದ ನಿಷ್ಕ್ರಿಯತೆಯನ್ನು ತೋರಿಸುತ್ತದೆ.
ಹಿಂದೂ ವೃತ್ತಿಯಾಧಾರಿತ ಜಾತಿಗಳಂತೆಯೇ ‘ಪ್ರವರ್ಗ 1-ಬಿ’ ಸೇರಬೇಕಾದ ವೀರಶೈವ ಲಿಂಗಾಯತ ಜಾತಿಯ ಲಿಂಗಾಯತ ಕುರುಬರನ್ನು ‘3-ಬಿ’ಗೆ ಸೇರಿಸಲಾಗಿದೆ. ‘ಪ್ರವರ್ಗ 1-ಎ’ ಸೇರಬೇಕಾದ ವೀರಶೈವ ಲಿಂಗಾಯತ ಭಂಡಾರಿ/ಹಡಪದ/ಕ್ಷೌರಿಕ ಮತ್ತು ಅಂಬಿಗರನ್ನು ‘3-ಬಿ’ ಪ್ರವರ್ಗಕ್ಕೆ ಸೇರಿಸಲಾಗಿದೆ.
‘ಪ್ರವರ್ಗ 2-ಎ’ ಸೇರಬೇಕಾದ ವೀರಶೈವ ಲಿಂಗಾಯತ ಹಟಗಾರರನ್ನು ‘3-ಬಿ’ ಪ್ರವರ್ಗಕ್ಕೆ ಸೇರಿಸ ಲಾಗಿದೆ. ‘ಪ್ರವರ್ಗ 2-ಎ’ ಸೇರಬೇಕಾದ ಪಂಚಮಸಾಲಿ, ಗಾಣಿಗರನ್ನು ‘3-ಬಿ’ಗೆ ಸೇರಿಸಲಾಗಿದೆ. ‘ಪ್ರವರ್ಗ 1-ಬಿ’ ಸೇರಬೇಕಾದ ವೀರಶೈವ ಲಿಂಗಾಯತ ಆದಿ ಬಣಜಿಗರನ್ನು ‘3-ಬಿ’ಗೆ ಸೇರಿಸಲಾಗಿದೆ. ಹೀಗೆ ಸಮಗ್ರವಾಗಿ ಒಟ್ಟು 52 ವೀರಶೈವ ಲಿಂಗಾಯತ ಜಾತಿಗಳಿಗೆ ಅನ್ಯಾಯವಾಗಿದೆ.
ಇದನ್ನೂ ಓದಿ: Ravi Hunj Column: ಪ್ರತ್ಯೇಕ ಧರ್ಮವೆಂಬ ಮೂಗಿನ ಮೇಲಿನ ತುಪ್ಪದ ಹಕೀಕತ್ತು !
ವೀರಶೈವ ಮಹಾಸಭಾದ ರಾಜ್ಯಾಧ್ಯಕ್ಷರಾದ ಶಂಕರ್ ಬಿದರಿಯವರು ಈ ಅನ್ಯಾಯದ ಬಗ್ಗೆ ಮಾತ ನಾಡಿದ್ದು ಬಿಟ್ಟರೆ ಮಹಾಸಭಾದ ರಾಷ್ಟ್ರಾಧ್ಯಕ್ಷ ಶಿವಶಂಕರಪ್ಪನವರು ಇದನ್ನು ಸರಿಪಡಿಸುವ ಮಾತಿರಲಿ, ಈ ಅನ್ಯಾಯದ ಬಗ್ಗೆ ಮಾತನಾಡಿಲ್ಲ!
ಸಮಾಜವಾದದ ಹಿನ್ನೆಲೆಯ ಬಿ.ಆರ್.ಪಾಟೀಲರಾಗಲಿ, ಸಮಸಮಾಜ ನಿರ್ಮಾಣದ ಬಸವರಾಜ ರಾಯರೆಡ್ಡಿಯವರಾಗಲಿ ಈ ಅಸಮಾನತೆಯ ಬಗ್ಗೆ ಉಸಿರೆತ್ತಿಲ್ಲ. ಶಂಕರ್ ಬಿದರಿಯವರು, “ವೀರಶೈ ವ ಲಿಂಗಾಯತ ಪರಂಪರೆಯ ಜಾತಿಗಳ ಅಂಕಗಳನ್ನು ಸರಾಸರಿ ಮಾಡಿ, ಅವುಗಳ ಹಿಂದುಳಿವಿಕೆ ಯನ್ನು ನಿರ್ಧರಿಸುವುದು ಸಂಪೂರ್ಣವಾಗಿ ತಪ್ಪು ವಿಧಾನವಾಗಿದೆ.
ಭಾರತೀಯ ಸಾಮಾಜಿಕ ಮತ್ತು ಧಾರ್ಮಿಕ ವಿಷಯಗಳ ಜ್ಞಾನ ಇರುವ ಯಾರೂ ಈ ವಿಧಾನವನ್ನು ಒಪ್ಪಲು ಸಾಧ್ಯವಿಲ್ಲ" ಎಂದು ಸ್ಪಷ್ಟವಾಗಿ ಹೇಳಿಕೆ ನೀಡಿದ್ದರೆ ಹೊರತು ಇನ್ಯಾವ ಲಿಂಗಾಯತ ಪ್ರತ್ಯೇಕತೆಯ ರಾಜಕಾರಣಿ ಈ ಬಗ್ಗೆ ಮಾತನಾಡಿಲ್ಲ ಎಂಬುದು ಗಮನಾರ್ಹ. ಈ ಎಲ್ಲ 52 ವೀರ ಶೈವ ಲಿಂಗಾಯತ ಉಪಜಾತಿಯ ಹಲವರು ತಾವು ‘ವೀರಶೈವ ಲಿಂಗಾಯತ’ ಎಂದು ಬರೆಸದೆ ಕೇವಲ ‘ಹಿಂದೂ’ ಎಂದು ನಮೂದಿಸಿ ಸವಲತ್ತುಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಅವರಿಗೆ ತಾವು ವೀರಶೈವ ಲಿಂಗಾಯತ ಎಂದು ಹೇಳಿಕೊಳ್ಳದಂಥ, ಬಾಯಿಮುಚ್ಚಿಕೊಂಡು ಗಗನಮುಖಿಯಾಗಿ ರುವ ಸನ್ನಿವೇಶದಲ್ಲಿರಬೇಕಾದ ದುಸ್ಥಿತಿಯನ್ನು ಈ ಎಲ್ಲಾ ವೀರಶೈವ ಲಿಂಗಾಯತ ಪ್ರೀತಿ, ಕಕ್ಕು ಲಾತಿ, ಕಾಳಜಿಯ ಹಸ್ತಮುಖಿ ಮತ್ತು ಕಮಲಮುಖಿ ನಾಯಕರು ನಿವಾರಿಸುತ್ತಿಲ್ಲ.
ಇವರೇಕೆ ಇಂಥ ತಪ್ಪುಗಳನ್ನು ಸರಿಪಡಿಸಲು ಮುಂದಾಗುತ್ತಿಲ್ಲ? ಪ್ರತ್ಯೇಕ ಧರ್ಮಕ್ಕಾಗಿ ಮೊಸಳೆ ಕಣ್ಣೀರು ಹರಿಸುವ ಲಿಂಗಾಯತ ಮಂತ್ರಿಗಳು, ಶಾಸಕರು ತಮ್ಮದೇ ಸರಕಾರವನ್ನು ಮತ್ತು ತಮ್ಮನ್ನು ಬೆಂಬಲಿಸುವ ತಮ್ಮ ಅಧಿನಾಯಕರನ್ನು ತಮ್ಮದೇ ಪರಿಮಿತಿಯೊಳಗಿನ ಇಂಥ ಸರಳ, ನೇರ, ಜನಸ್ನೇಹಿ ಮತ್ತು ಸಾಮಾಜಿಕ ನ್ಯಾಯಸಮ್ಮತ ಕಾರ್ಯವನ್ನು ಊರ್ಜಿತಗೊಳಿಸುತ್ತಿಲ್ಲ, ಏಕೆ? ಸಮಾಜದ ಕಲ್ಯಾಣಕ್ಕೆ ಪ್ರತ್ಯೇಕ ಧರ್ಮ ಕಾರ್ಯಸಿಂಧುವಲ್ಲ ಎಂಬುದರ ಅರಿವಿದ್ದೂ ಕೇವಲ ಸ್ವಹಿತಾಸಕ್ತಿಯ ಕ್ಯಾಪಿಟೇಶನ್ ಶುಲ್ಕ ನಿರ್ವಾಹಕ ರಾಜಕಾರಣಿಗಳು ಜನಸಾಮಾನ್ಯರ ಹಿತಾಸಕ್ತಿ ಯನ್ನು ಬಲಿಕೊಡುವುದು ಯಾವ ಸಾಮಾಜಿಕ ನ್ಯಾಯ? ಅಂದ ಹಾಗೆ, ಪ್ರತ್ಯೇಕ ಧರ್ಮದ ಮಾನ್ಯತೆ ಸ್ವರ್ಗವನ್ನೇ ಇಳೆಗೆ ಇಳಿಸುವುದೇ? ಭಾರತ ಗಣರಾಜ್ಯದುದಯದಿಂದ ಪ್ರತ್ಯೇಕ ಧರ್ಮದ ಮಾನ್ಯತೆ ಇರುವ ಮುಸ್ಲಿಮರ ಸ್ಥಿತಿಗತಿಗಳು ಹೇಗಿವೆ? ಬನ್ನಿ, ನೋಡೋಣ.
2005ರಲ್ಲಿ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರು ಧಾರ್ಮಿಕ ಅಲ್ಪಸಂಖ್ಯಾತರಾದ ಮುಸ್ಲಿಮರಿಗಾಗಿ ಇರುವ ಈವರೆ ಗಿನ ಯೋಜನೆಗಳು ಅವರನ್ನು ಎಷ್ಟರ ಮಟ್ಟಿಗೆ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಪ್ರಗತಿ ಯೆಡೆಗೆ ತೆಗೆದುಕೊಂಡು ಹೋಗುವಲ್ಲಿ ಫಲಪ್ರದವಾಗಿವೆ ಎಂದು ಅರಿಯಲು ಒಂದು ವರದಿ ಸಿದ್ಧಪಡಿಸಲು ನಿವೃತ್ತ ಮುಖ್ಯ ನ್ಯಾಯಾಧೀಶರಾದ ರಾಜಿಂದರ್ ಸಾಚಾರ್ ಅವರ ಅಧ್ಯಕ್ಷತೆಯಲ್ಲಿ ಒಂದು ಕಮಿಟಿಯನ್ನು ರಚಿಸಿದರು.
ಈ ಕಮಿಟಿಯು ಸಮಗ್ರವಾಗಿ ಎಲ್ಲ ಯೋಜನೆಗಳ ಪ್ರಗತಿಯನ್ನು ವಿಶ್ಲೇಷಿಸಿ 403 ಪುಟಗಳ ವರದಿ ಯನ್ನು ಸಿದ್ಧಪಡಿಸಿ, “ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕವಾಗಿ ಮುಸ್ಲಿಮರು ಪರಿಶಿಷ್ಟ ಜಾತಿ ಮತ್ತು ಹಿಂದುಳಿದ ವರ್ಗದವರಿಗಿಂತ ದಶಕಗಳಷ್ಟು ಹಿಂದುಳಿದಿದ್ದಾರೆ" ಎಂದಿತು.
ಅಲ್ಲಿಗೆ ಧಾರ್ಮಿಕ ಅಲ್ಪಸಂಖ್ಯಾತರಿಗಾಗಿ ರೂಪಿಸಿದ ಯೋಜನೆಗಳು ಎಷ್ಟರ ಮಟ್ಟಿಗೆ ಫಲಪ್ರದ ವಾಗಿವೆ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತದೆ. ಈ ವರದಿಯಲ್ಲಿ ಮುಸ್ಲಿಂ ಸಮುದಾಯದ ಹಿಂದುಳಿಯುವಿಕೆಯನ್ನಷ್ಟೇ ತೋರಿಸದೆ, ಮುಸ್ಲಿಮರು ಭಾರತದ ಮುಖ್ಯವಾಹಿನಿ ಸಮಾಜದಲ್ಲಿ ಪೂರ್ಣ ಭಾಗವಹಿಸಲು ಅಡ್ಡಿಯಾಗಿರುವ ಸಮಸ್ಯೆಗಳನ್ನು ಪರಿಹರಿಸುವ ಮಾರ್ಗೋಪಾಯಗಳ ಶಿಫಾರಸುಗಳನ್ನೂ ಹೇಳಿದೆ.
ಇದರ ಮುಖ್ಯ ಅಂಶಗಳು ಹೀಗಿವೆ: ಶೈಕ್ಷಣಿಕವಾಗಿ ಮುಸ್ಲಿಂ ಸಾಕ್ಷರತಾ ದರವು ರಾಷ್ಟ್ರೀಯ ಸರಾಸರಿ ಗಿಂತ ಕಡಿಮೆಯಿದೆ ಮತ್ತು ವಿಶೇಷವಾಗಿ ಹುಡುಗಿಯರಲ್ಲಿ ಶಾಲೆಯನ್ನು ತ್ಯಜಿಸುವ ಪ್ರಮಾಣ ಹೆಚ್ಚು. ಔದ್ಯೋಗಿಕವಾಗಿ ಸರಕಾರಿ ಮತ್ತು ಸಾರ್ವಜನಿಕ ವಲಯದ ಉದ್ಯೋಗಗಳನ್ನು ಒಳಗೊಂಡಂತೆ, ಔಪಚಾರಿಕ, ಸಂಬಳದ ಉದ್ಯೋಗಗಳಲ್ಲಿ ಮುಸ್ಲಿಮರ ಭಾಗವಹಿಸುವಿಕೆ ಕಡಿಮೆ.
ಅವರು ಕಡಿಮೆ ವೇತನ ಮತ್ತು ಪ್ರತಿಕೂಲ ಪರಿಸ್ಥಿತಿಗಳಿರುವ ಅನೌಪಚಾರಿಕ ವಲಯದ ಉದ್ಯೋಗ ಗಳಲ್ಲಿ ಕೇಂದ್ರೀಕೃತರಾಗಿzರೆ. ಆರ್ಥಿಕವಾಗಿ ಮುಸ್ಲಿಂ ಸಮುದಾಯದಲ್ಲಿ ಬಡತನದ ಮಟ್ಟವು ಅತ್ಯಧಿಕವಾಗಿದೆ. ಬ್ಯಾಂಕ್ ಸಾಲ ಮತ್ತು ಮೂಲಸೌಕರ್ಯಗಳು ಇತರರಿಗೆ ಹೋಲಿಸಿದರೆ ಅಸಮಾ ನತೆ ಎದ್ದು ಕಾಣುತ್ತದೆ.
ಸರಕಾರಿ ಇಲಾಖೆಗಳು ಮತ್ತು ಕಾರ್ಯಕ್ರಮಗಳಲ್ಲಿ ಮುಸ್ಲಿಮರ ಪ್ರಾತಿನಿಧ್ಯ ಕಡಿಮೆಯಿದೆ. ಶಿಫಾ ರಸುಗಳು ಮತ್ತು ಅನುಷ್ಠಾನ ಸೂಚಿಯಾಗಿ ವರದಿಯು, ಮುಸ್ಲಿಂ ಸಮುದಾಯಕ್ಕೆ ಗುಣಮಟ್ಟದ ಶಿಕ್ಷಣ ಮತ್ತು ವೃತ್ತಿಪರ ತರಬೇತಿಯ ಪ್ರವೇಶವನ್ನು ಸುಧಾರಿಸುವುದನ್ನು ಒಳಗೊಂಡಂತೆ ಹಲವಾರು ಶಿಫಾರಸುಗಳನ್ನು ಮಾಡಿದೆ.
ಸಂದರ್ಶನ ಪ್ಯಾನಲ್‌ಗಳು ಮತ್ತು ಮಂಡಳಿಗಳಲ್ಲಿ ಪ್ರಾತಿನಿಧ್ಯವನ್ನು ಸುಧಾರಿಸಲು, ಬೆಳವಣಿಗೆಯ ಸಾಮರ್ಥ್ಯವಿರುವ ಉದ್ಯೋಗಗಳಿಗೆ ಹಣಕಾಸಿನ ಸಹಾಯವನ್ನು ಒದಗಿಸಲು ಮತ್ತು ಆದ್ಯತಾ ವಲಯದ ಮುಂಗಡಗಳಿಗೆ ಪ್ರವೇಶವನ್ನು ಹೆಚ್ಚಿಸಲು ಸೂಚಿಸಲಾಗಿದೆ. ಆದರೆ ಕೆಲವು ವರದಿಗಳ ಪ್ರಕಾರ, ಬಜೆಟ್ ಕಡಿತಗಳು ಮತ್ತು ಸರಕಾರಿ ಯೋಜನೆಗಳಲ್ಲಿ ಸಮುದಾಯದ ಭಾಗವಹಿಸುವಿಕೆಯ ಕೊರತೆಯಂಥ ಅಂಶಗಳಿಂದಾಗಿ ಈ ವರದಿಯ ಶಿಫಾರಸುಗಳ ಅನುಷ್ಠಾನ ನಿಧಾನವಾಗಿದೆ ಎಂದು ತಿಳಿದುಬಂದಿದೆ.
ಇದು ಒಂದು ಪ್ರತ್ಯೇಕ ಧರ್ಮದ ಮಾನ್ಯತೆ ಪಡೆದಿರುವ ಅಲ್ಪಸಂಖ್ಯಾತರ ವಾಸ್ತವಿಕ ಮತ್ತು ಅಧಿ ಕೃತ ಸ್ಥಿತಿಗತಿ! ಇನ್ನು ಪ್ರತ್ಯೇಕ ಧರ್ಮ ತರುವ ಸ್ವರ್ಗಾದಪಿ ಮೀಸಲಾತಿಯ ಸೌಲಭ್ಯಗಳು ನಿಜವೇ? ಭಾರತದಲ್ಲಿ ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯಗಳಿಗಾಗಿ ನೇರ ಧಾರ್ಮಿಕ ಮೀಸಲಾತಿ ಯಿಲ್ಲ.
ಭಾರತದ ಸಂವಿಧಾನವು ಶುದ್ಧವಾಗಿ ಧರ್ಮದ ಆಧಾರದ ಮೇಲೆ ನೇರ ಮೀಸಲಾತಿಯನ್ನು ಒದಗಿಸುವುದಿಲ್ಲ, ಏಕೆಂದರೆ ಇದು ವಿಭಜನೆಯನ್ನು ಪ್ರೋತ್ಸಾಹಿಸುತ್ತದೆ ಎಂದು ವಿರೋಧಿಸ ಲಾಗಿದೆ. ಈ ಹಿನ್ನೆಲೆಯಲ್ಲಿಯೇ ಕರ್ನಾಟಕ ಸರಕಾರವು ತನ್ನ ಮುಸ್ಲಿಂ ಮೀಸಲಾತಿಯನ್ನು ರದ್ದು ಮಾಡಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಧಾರ್ಮಿಕ ಅಲ್ಪಸಂಖ್ಯಾತರು ಅವರ ಸಾಮಾಜಿಕ/ಶೈಕ್ಷಣಿಕ ಹಿಂದುಳಿದ ಸ್ಥಾನಮಾನಕ್ಕೆ ತಕ್ಕಂತೆ ಇತರ ಹಿಂದುಳಿದ ವರ್ಗಗಳ (ಒಬಿಸಿ) ಪಟ್ಟಿಯ ಮೂಲಕ ಸಾಮಾನ್ಯ ಲಾಭಗಳನ್ನು ಪಡೆಯುತ್ತಾರಷ್ಟೇ.
2011ರಲ್ಲಿ ಕೇಂದ್ರ ಸರಕಾರವು 27 ಪ್ರತಿಶತ ಒಬಿಸಿ ಮೀಸಲಾತಿಯೊಳಗಿಂದ ಧಾರ್ಮಿಕ ಅಲ್ಪ ಸಂಖ್ಯಾತರಿಗಾಗಿ (ಮುಸ್ಲಿಮರು, ಕ್ರೈಸ್ತರು, ಸಿಖ್ಖರು, ಬೌದ್ಧರು, ಪಾರ್ಸಿಗಳು, ಜೈನರು) 4.5 ಪ್ರತಿಶತ ಉಪ-ಮೀಸಲಾತಿಯನ್ನು ರಚಿಸಿತ್ತು. ಆದರೆ ಇದನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿ ದಾವೆ ಹೂಡಲಾಗಿದೆ. ಹಾಗಾಗಿ ಇದರ ಅನುಷ್ಠಾನವಾಗುವುದು ಅನಿಶ್ಚಿತವಾಗಿದೆ.
ಒಂದು ವೇಳೆ ಅನುಷ್ಠಾನಗೊಂಡರೂ ಇದರ ಲಾಭ ಅಷ್ಟಕ್ಕಷ್ಟೇ. ಈಗ ಇಡೀ 27 ಪ್ರತಿಶತದಲ್ಲಿ ಪಡೆಯಬಹುದಾದ ಲಾಭವನ್ನು ಮುಂದೆ ಕೇವಲ 4.5 ಪ್ರತಿಶತದಲ್ಲಿ ಲಿಂಗಾಯತರು ಇತರೆ ಆರು ಅಲ್ಪಸಂಖ್ಯಾತ ಧರ್ಮೀಯರೊಟ್ಟಿಗೆ ಹಂಚಿಕೊಳ್ಳಬೇಕಾಗುತ್ತದೆ. ಇದು ಒಟ್ಟಾರೆ, ಪ್ರತ್ಯೇಕ ಧರ್ಮ ವೆಂಬ ಮೂಗಿನ ಮೇಲಿನ ತುಪ್ಪ ಎನ್ನುವ ಡಾಲ್ಡಾದ ಹಕೀಕತ್ತು ಮತ್ತು ಹಿಂದೂ ಆಗಿದ್ದು ಕೊಂಡೇ ಪಡೆಯಬಹುದಾದ ಅಂಗೈಯೊಳಗಿನ ಬೆಣ್ಣೆಯ ಅಸಲಿಯತ್ತು!
ಇದು ವಿದ್ಯಾವ್ಯಾಪಾರಿ ರಾಜಕಾರಣಿಗಳು ಸಾಮಾನ್ಯರ ಅಂಗೈಗೆ ಪ್ರತ್ಯೇಕ ಧರ್ಮ ಎಂಬ ಕಾರ್ಬನ್ ಲಿಂಗ ಕೊಟ್ಟು ಜನರ ಬೆಣ್ಣೆಯನ್ನು ಕಿತ್ತುಕೊಂಡು ತಮ್ಮ ಅಸಲಿ ಲಿಂಗಕ್ಕೆ ಬೆಣ್ಣೆ ಅಲಂಕಾರ ಮಾಡಿಕೊಳ್ಳುವ ಪರಿ! ಇದಕ್ಕೆ ‘ಹೌದಪ್ಪ ಹುಲಿಯಾ’ ಎಂದು ‘ಗೀ ಗೀ ಪದ’ ಹಾಡುವ ರಂಗಜಂಗಮ ಎನ್ನುವ ನಟುವಾಂಗರು, ‘ಜೀ ಹುಜೂರ್’ ಎನ್ನುವ ಮಹಾಮಂಗಮ ಭೀಷಣ ಭಾಷಣಶೂರರು, ಕೋರಸ್ ಕುಟ್ಟುವ ಶ್ವೇತವಸ್ತ್ರಧಾರಿ ಶರಣ ಶರಣೆಯರು!
ಹೋಳಿಗೆ ತುಪ್ಪ ಹೊಡೆದು ಪ್ರತ್ಯೇಕತೆಯ ಗಾಢ ಗುಂಗಿನಲ್ಲಿರುವ ಅಖಂಡ ವೀರಶೈವ ಲಿಂಗಾಯತ ಸಮಾಜವು ಈ ಎಲ್ಲ ಹಕೀಕತ್ತು ಅಸಲಿಯತ್ತುಗಳನ್ನು ಪರಾಂಬರಿಸಿ ಎಚ್ಚೆತ್ತುಕೊಂಡು ಹಾಲನ್ನು ಹಾಲಿಗೆ ನೀರನ್ನು ನೀರಿಗೆ ಹಾಕಿ ಸಕಾಲದಲ್ಲಿ ಬೆಣ್ಣೆ, ತುಪ್ಪ ಪಡೆದುಕೊಳ್ಳದಿದ್ದರೆ, ಈ ಧರ್ಮ ಭಂಜನೆ “ಜಯ ಕಲ್ಯಾಣಕೆ ಜಯ ಕಲ್ಯಾಣಕೆ ಜಯ ಕಲ್ಯಾಣಕೆ ಜಯಹೇ" ಎಂದು ರಂಗಜಂಗಮ ರೊಟ್ಟಿಗೆ ಮಹಾಮಂಗಮರಂತೆ ನರ್ತಿಸುತ್ತ ವಿಸ್ಮೃತಿಯ ಜಂಗಮದೆಡೆಗೆ ಸಾಗುತ್ತಲೇ ಇರಬೇಕಾಗುತ್ತದೆ!
(ಲೇಖಕರು ಶಿಕಾಗೊ ನಿವಾಸಿ ಮತ್ತು ಸಾಹಿತಿ)