Dr Vijay Darda Column: ಚೀನಾ ವಿರುದ್ದ ಟ್ರಂಪ್ ಕಾರ್ಡ್ ಕೆಲಸ ಮಾಡುವುದೆ ?
ಚೀನಾ ವಿರುದ್ದ ಟ್ರಂಪ್ ಕಾರ್ಡ್ ಕೆಲಸ ಮಾಡುವುದೆ? ನಮ್ಮಂತೆ ಅವರೂ ದ್ವೀಪ ನಿರ್ಮಿಸುತ್ತಿದ್ದಾರೆ, ಆದರೆ ಎಷ್ಟು ವ್ಯತ್ಯಾಸ? ರಷ್ಯಾವನ್ನು ಹೊರತುಪಡಿಸಿ ಇನ್ನಾವ ಪ್ರಮುಖ ದೇಶಗಳೂ ಬಹಿರಂಗವಾಗಿ ಚೀನಾವನ್ನು ಬೆಂಬಲಿಸುವುದಿಲ್ಲ. ಇನ್ನುಳಿದ ಇಡೀ ಜಗತ್ತನ್ನು ತನ್ನ ಜೊತೆಗೆ ಇರಿಸಿಕೊಂಡು ಟ್ರಂಪ್ ಆರ್ಥಿಕ ಸಮರವನ್ನು ಮುನ್ನಡೆಸಿದರೆ ಚೀನಾ ಅಕ್ಷರಶಃ ಕಣ್ಣೀರು ಹಾಕಬೇಕಾಗುತ್ತದೆ. ಯಾವುದೇ ದೇಶಕ್ಕಾದರೂ ಅಮೆರಿಕವನ್ನು ಎದುರು ಹಾಕಿಕೊಳ್ಳುವುದು ಕಷ್ಟ.


ಸಂಗತ
ಡಾ.ವಿಜಯ್ ದರಡಾ
ಅಮೆರಿಕ ಫಸ್ಟ್ ಎಂದು ಘೋಷಣೆ ಮಾಡಿ, ಅಧಿಕಾರಕ್ಕೆ ಬಂದ ಬಳಿಕ ಅದನ್ನೇ ಕಾಯಾ ವಾಚಾ ಮನಸಾ ಅಳವಡಿಸಿಕೊಂಡು ಒಂದಾದ ಮೇಲೊಂದು ನಿರ್ಧಾರಗಳನ್ನು ತಾಪ್ಡ್‌ತೋಪ್ಡ್ ಕೈಗೊಳ್ಳು ತ್ತಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದೀಗ ಜಗತ್ತಿನಲ್ಲಿ ಆರ್ಥಿಕ ಅಲ್ಲೋಲ ಕಲ್ಲೋಲ ವನ್ನೇ ಸೃಷ್ಟಿಸಿದ್ದಾರೆ. ಆದರೆ, ಅವರು ಕೈಗೊಳ್ಳುತ್ತಿರುವ ನಿರ್ಧಾರಗಳನ್ನು ನೋಡಿದಾಗ ಉತ್ತರ ಕ್ಕಿಂತ ಹೆಚ್ಚು ಪ್ರಶ್ನೆಗಳೇ ಏಳುತ್ತವೆ. ಮೊದಲಿಗೆ ಅವರು 60 ದೇಶಗಳ ಮೇಲೆ ದುಬಾರಿ ತೆರಿಗೆ ವಿಧಿಸಿದರು. ಅಂದರೆ, ಆ 60 ದೇಶಗಳು ಅಮೆರಿಕಕ್ಕೆ ರಫ್ತು ಮಾಡುವ ವಸ್ತುಗಳಿಗೆ ಅಮೆರಿಕದಲ್ಲಿ ಭಾರೀ ಪ್ರಮಾಣದ ಸುಂಕ ಹೇರುವುದಾಗಿ ಪ್ರಕಟಿಸಿದರು. ನಂತರ ಆ ನಿರ್ಧಾರಕ್ಕೆ ತಾವೇ 90 ದಿನಗಳ ಕಾಲ ತಡೆ ನೀಡಿದರು.
ಇದನ್ನೂ ಓದಿ: Dr Vijay Darda Column: ಚಿಕನ್ಸ್ ನೆಕ್ ಮೇಲೆ ಚೀನಾ ಹೊಸ ಸಂಚು !
ಇದೇಕೆ? ಅಮೆರಿಕ ಮತ್ತು ಜಾಗತಿಕ ಮಾರುಕಟ್ಟೆಯ ಒತ್ತಡ ಹಾಗೂ ಅಮೆರಿಕದಲ್ಲಿ ಅವರ ವಿರುದ್ಧ ಆರಂಭವಾದ ಪ್ರತಿಭಟನೆಗಳಿಗೆ ಟ್ರಂಪ್ ಬೆಚ್ಚಿದರೆ? ಅಥವಾ ಚೀನಾದ ವಿರುದ್ಧ ವ್ಯಾಪಾರ ಸಮರ ನಡೆಸಲು ಅವರಿಗೆ ಯುರೋಪ್ ನಂತಹ ಹಳೆಯ ಸ್ನೇಹಿತರ ಬೆಂಬಲ ಅಗತ್ಯವಿದೆಯೆ? ಟ್ರಂಪ್ ಉರುಳಿಸಿದ ದಾಳಕ್ಕೆ ಪತರುಗುಟ್ಟಿ ಚೀನಾ ಇಕ್ಕಟ್ಟಿನಲ್ಲಿ ಸಿಲುಕಿಕೊಂಡಿದೆಯೆ? ಸದ್ಯಕ್ಕೆ ಅಮೆರಿಕದ ವಿದ್ಯಮಾನಗಳನ್ನು ಗಮನಿಸಿದರೆ ಇನ್ನೂ ಸಾಕಷ್ಟು ಪ್ರಶ್ನೆಗಳು ಮನಸ್ಸಿನಲ್ಲಿ ಏಳುತ್ತವೆ.
ಆದರೆ ಅವುಗಳಿಗೆ ಉತ್ತರ ಮಾತ್ರ ಸಿಗುವುದಿಲ್ಲ. ಇಷ್ಟಕ್ಕೂ ಟ್ರಂಪ್ ಕೈಗೊಳ್ಳುತ್ತಿರುವ ನಿರ್ಧಾರಗಳು ತುಂಬಾ ಚೆನ್ನಾಗಿ ಯೋಚನೆ ಮಾಡಿ ಜಾರಿಗೊಳಿಸುತ್ತಿರುವ ವ್ಯೂಹಾತ್ಮಕ ತಂತ್ರಗಳೇ ಆಗಿದ್ದರೆ ಅವು ನಿಜಕ್ಕೂ ಎಷ್ಟರಮಟ್ಟಿಗೆ ಯಶಸ್ಸು ಕಾಣುತ್ತವೆ? ಇದೂ ಕೂಡ ಮಹತ್ವದ ಪ್ರಶ್ನೆ. ಟ್ರಂಪ್ ಹೇರಿದ ಸುಂಕಕ್ಕೆ ಹೆದರಿ ಎಲ್ಲಾ 60 ದೇಶಗಳೂ ಏನಾದರೊಂದು ಪರಿಹಾರ ಕಂಡುಕೊಳ್ಳಲು ಹೆಣಗಾಟ ಆರಂಭಿಸಿದ್ದವು.
ಅದರ ಬೆನ್ನಲ್ಲೇ ಅವರು ಚೀನಾವೊಂದನ್ನು ಹೊರತುಪಡಿಸಿ ಇನ್ನೆಲ್ಲಾ ದೇಶಗಳಿಗೂ 90 ದಿನಗಳ ಕಾಲ ಹೆಚ್ಚುವರಿ ತೆರಿಗೆಯಿಂದ ವಿನಾಯಿತಿ ಘೋಷಿಸಿದರು. ಈಗಲೂ ಶೇ.10ರ ಟ್ರಂಪ್ ಟ್ಯಾರಿ- ಜಾರಿಯಲ್ಲೇ ಇದೆ. ಆದರೆ ಇದೇನೂ ಅಷ್ಟೊಂದು ದೊಡ್ಡ ಮೊತ್ತದ ಹೊರೆಯಲ್ಲ. ಈ ತೆರಿಗೆಯನ್ನು ತಾಳಿಕೊಳ್ಳುವ ಶಕ್ತಿ ಎಲ್ಲಾ ದೇಶಗಳಿಗೂ ಇದೆ. ನಿಜವಾಗಿಯೂ ವಿವಿಧ ದೇಶಗಳಿಗೆ ಕಳವಳ ಸೃಷ್ಟಿ ಸಿರುವ ಸಂಗತಿ ಏನೆಂದರೆ, ಟ್ರಂಪ್ ಮನಸ್ಸಿನಲ್ಲಿ ಏನಿದೆ ಎಂಬ ಪ್ರಶ್ನೆ.
ಅವರು ಇನ್ನೂ ಏನೇನು ಕ್ರಮಗಳನ್ನು ಕೈಗೊಳ್ಳುವವರಿದ್ದಾರೆ? ಅವರ ಮುಂದಿನ ದೊಡ್ಡ ಹೆಜ್ಜೆ ಏನಾಗಿರಲಿದೆ? ಇದನ್ನು ಅರ್ಥ ಮಾಡಿಕೊಳ್ಳಬೇಕು ಅಂದರೆ, ಚೀನಾಕ್ಕೆ ಶೇ.20ರಷ್ಟು ಇದ್ದ ತೆರಿಗೆಯನ್ನು ಶೇ.145ಕ್ಕೆ ಏರಿಸಿದ ಮೇಲೆ ಅದನ್ನು ಟ್ರಂಪ್ ಏಕೆ ಇಳಿಕೆ ಮಾಡಲಿಲ್ಲ ಅಥವಾ ಏಕೆ ಅದಕ್ಕೆ ತಡೆ ನೀಡಲಿಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಾಗುತ್ತದೆ.
ಟ್ರಂಪ್ ಕೈಗೊಂಡ ಕ್ರಮಕ್ಕೆ ಪ್ರತಿಯಾಗಿ ಚೀನಾ ಕೂಡ ಅಮೆರಿಕದ ವಸ್ತುಗಳಿಗೆ ತನ್ನ ದೇಶದಲ್ಲಿ ಶೇ.125ರಷ್ಟು ತೆರಿಗೆ ವಿಧಿಸುವ ಮೂಲಕ ಸೇಡಿನ ಕ್ರಮವನ್ನೇ ಕೈಗೊಂಡಿದೆ. ಅದರೊಂದಿಗೆ ಜಗತ್ತಿನ ಎರಡು ಪ್ರಬಲ ರಾಷ್ಟ್ರಗಳ ನಡುವೆ ಅಧಿಕೃತವಾಗಿ ವ್ಯಾಪಾರ ಸಮರ ಆರಂಭಗೊಂಡಿದೆ. ಈ ಯುದ್ಧವನ್ನು ಇಲ್ಲಿಗೇ ನಿಲ್ಲಿಸುವುದಿಲ್ಲ, ಕೊನೆಯವರೆಗೂ ಹೋರಾಡುತ್ತೇವೆ ಎಂದು ಚೀನಾ ಬಹಿರಂಗವಾಗಿ ಘೋಷಣೆ ಮಾಡಿದೆ. ಅಮೆರಿಕದ ಗೊಡ್ಡು ಬೆದರಿಕೆಗಳಿಗೆ ಮಣಿಯುವ ದೇಶ ನಮ್ಮದಲ್ಲ ಎಂದು ಚೀನಾ ದಿಟ್ಟ ಉತ್ತರ ನೀಡಿದೆ.
ಚೀನಾದ ನಿರೀಕ್ಷೆ ಏನು ಗೊತ್ತಾ? ಅಮೆರಿಕದ ನಿರ್ಧಾರಗಳಿಂದ ಹೊಡೆತ ತಿಂದ ದೇಶಗಳು ಈ ಸಮರದಲ್ಲಿ ತನ್ನ ಜೊತೆಗೆ ಕೈಜೋಡಿಸುತ್ತವೆ ಎಂಬ ಲೆಕ್ಕಾಚಾರದಲ್ಲಿ ಅಲ್ಲಿನ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಇದ್ದಾರೆ. ಕೊನೆಯ ಪಕ್ಷ ಆ ದೇಶಗಳು ತಮ್ಮನ್ನು ನೇರವಾಗಿ ಬೆಂಬಲಿಸದಿದ್ದರೂ ತಟಸ್ಥವಾಗಿ ಉಳಿಯಲಿವೆ ಎಂದು ಅವರು ಭಾವಿಸಿದ್ದಾರೆ. ಹೀಗಾಗಿಯೇ ಜಿನ್ ಪಿಂಗ್ ಯುರೋಪಿ ಯನ್ ಒಕ್ಕೂಟಕ್ಕೆ ಬಹಿರಂಗವಾಗಿ ಈ ಬಗ್ಗೆ ಕರೆ ನೀಡಿ, ಅಮೆರಿಕದ ಏಕಪಕ್ಷೀಯ ನಿರ್ಧಾರಗಳನ್ನು ವಿರೋಧಿಸಲು ಎಲ್ಲರೂ ಒಗ್ಗಟ್ಟಾಗಬೇಕು ಎಂದು ಹೇಳಿದ್ದಾರೆ.
ಆದರೆ, ಚೀನಾ ತನ್ನ ಮುಂದಿನ ಹೆಜ್ಜೆ ಇರಿಸುವುದಕ್ಕೂ ಮೊದಲೇ ಬೇರೆ ದೇಶಗಳಿಗೆ ವಿಧಿಸಿದ್ದ ದುಬಾರಿ ತೆರಿಗೆಗೆ 90 ದಿನಗಳ ಕಾಲ ತಡೆ ನೀಡುವ ಮೂಲಕ ಟ್ರಂಪ್ ಚೀನಾದ ಕನಸಿಗೆ ತಣ್ಣೀರು ಎರಚಿ ಬಿಟ್ಟಿದ್ದಾರೆ. ಕುತೂಹಲಕರ ಸಂಗತಿಯೆಂದರೆ ದುಬಾರಿ ಸುಂಕ ವಿಧಿಸುವುದಕ್ಕೂ ಮೊದಲು ಟ್ರಂಪ್ ಅಮೆರಿಕದ ಸ್ನೇಹಿತ ರಾಷ್ಟ್ರಗಳು ಎಂದು ಗುರುತಿಸಿಕೊಳ್ಳುವ ದೇಶಗಳನ್ನೇ ‘ಲೂಟಿಕೋರರು ಎಂದು ಕರೆದು ಆ ದೇಶಗಳ ಮೇಲೆ ಭಾವನಾತ್ಮಕ ಒತ್ತಡ ಹೇರುವ ಪ್ರಯತ್ನ ಮಾಡಿದ್ದರು. ಆದರೆ ವಾಣಿಜ್ಯ ವ್ಯವಹಾರಗಳಲ್ಲಿ ಭಾಷೆ ಅಷ್ಟೊಂದು ಮುಖ್ಯವಲ್ಲ. ಅಲ್ಲಿ ಲಾಭ ಮತ್ತು ಅನುಕೂಲಗಳೇ ಎಲ್ಲಕ್ಕಿಂತ ಮುಖ್ಯ. ಹೀಗಾಗಿ ಟ್ರಂಪ್ ತಮ್ಮನ್ನು ಲೂಟಿಕೋರರು ಎಂದು ಕರೆದಿದ್ದರೂ, ಅವರು ಒಂದಷ್ಟು ಅನುಕೂಲ ಮಾಡಿಕೊಟ್ಟರೆ ಈ ದೇಶಗಳು ಅಮೆರಿಕದ ಸ್ನೇಹಿತರಾಗಿಯೇ ಉಳಿಯುವ ಸಾಧ್ಯತೆಗಳು ಹೆಚ್ಚಿವೆ.
ಏಕೆಂದರೆ ಯಾವುದೇ ರೀತಿಯಲ್ಲೂ ಜಗತ್ತಿನ ಬಹುತೇಕ ದೇಶಗಳಿಗೆ ಚೀನಾ ವಿಶ್ವಾಸಾರ್ಹ ಪಾಲು ದಾರ ಅಲ್ಲ. ಚೀನಾವನ್ನು ಯಾರೂ ಅಷ್ಟು ಸುಲಭಕ್ಕೆ ನಂಬುವುದಿಲ್ಲ. ಹಾಗಿದ್ದರೆ ಈ ಪರಿಸ್ಥಿತಿ ಯಲ್ಲಿ ಚೀನಾದ ಕತೆ ಏನಾಗುತ್ತದೆ? ಜಗತ್ತಿನ ಎರಡನೇ ಅತಿದೊಡ್ಡ ಆರ್ಥಿಕ ಸೂಪರ್ ಪವರ್ ದೇಶವಾಗಿದ್ದರೂ ಚೀನಾದ ಆಂತರಿಕ ಆರ್ಥಿಕ ಪರಿಸ್ಥಿತಿ ಈಗಲೂ ಸ್ಥಿರವಾಗಿಲ್ಲ. ಚೀನಾದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಅಲ್ಲಿನ ರಿಯಲ್ ಎಸ್ಟೇಟ್ ಕ್ಷೇತ್ರ ಬಹಳ ಕಷ್ಟದಲ್ಲಿದೆ. ನಿರುದ್ಯೋಗ ಸಮಸ್ಯೆ ದಿನದಿಂದ ದಿನಕ್ಕೆ ಏರುತ್ತಿದೆ. ಇಂತಹ ದುಸ್ಥಿತಿಯಲ್ಲಿ ರಫ್ತು ಕೂಡ ಕಡಿಮೆಯಾದರೆ ಚೀನಾದಲ್ಲಿ ನೂರಾರು ಕಾರ್ಖಾನೆಗಳು ಬಾಗಿಲು ಮುಚ್ಚುತ್ತವೆ.
ಆಗ ಆಂತರಿಕ ಸಮಸ್ಯೆಗಳು ಇನ್ನಷ್ಟು ಉಲ್ಬಣಗೊಳ್ಳುತ್ತವೆ. ಅಮೆರಿಕವೊಂದಕ್ಕೇ ಚೀನಾ ದೇಶದ ಉದ್ದಿಮೆಗಳು ವರ್ಷಕ್ಕೆ ಅಂದಾಜು 440 ಶತಕೋಟಿ ಡಾಲರ್ ಮೌಲ್ಯದ ಸರಕುಗಳನ್ನು ರಫ್ತು ಮಾಡುತ್ತವೆ. ಆ ವಸ್ತುಗಳಿಗೆ ಶೇ.145ರಷ್ಟು ತೆರಿಗೆ ವಿಧಿಸಿದರೆ ಅಮೆರಿಕದಲ್ಲಿ ಅವುಗಳನ್ನು ಯಾರೂ ಖರೀದಿಸುವುದಿಲ್ಲ. ಮೂಲ ಬೆಲೆಯನ್ನೇ ಇಳಿಕೆ ಮಾಡಿದರೆ ಚೀನಾದ ಕಂಪನಿಗಳಿಗೆ ಲಾಭವೇ ಉಳಿಯುವುದಿಲ್ಲ. ಹೀಗಾಗಿ ಬೇರೆ ದೇಶಗಳ ಮೂಲಕ ಅಮೆರಿಕಕ್ಕೆ ವಸ್ತುಗಳನ್ನು ರಫ್ತು ಮಾಡಿ ದುಬಾರಿ ತೆರಿಗೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಎಂದು ಚೀನಾ ಪ್ರಯತ್ನಿಸಿತು. ಆದರೆ ಅದೂ ಫಲ ನೀಡಲಿಲ್ಲ. ಏಕೆಂದರೆ, ಇಂತಹ ಕ್ರಮಗಳನ್ನು ತಾನು ಹದ್ದಿನಗಣ್ಣಿನಿಂದ ಗಮನಿಸುತ್ತೇನೆ ಎಂದು ಟ್ರಂಪ್ ಅವರೇ ಹೇಳಿದ್ದಾರೆ.
ಆದರೆ ಅಮೆರಿಕ ಕೂಡ ಈ ಎಲ್ಲ ಕ್ರಮಗಳಿಂದ ಸಮಸ್ಯೆಗೆ ಸಿಲುಕಲಿದೆ. ಅದರ ಬಗ್ಗೆ ಅನುಮಾನವೇ ಬೇಡ. ಅಮೆರಿಕದಲ್ಲಿ ಹಣದುಬ್ಬರ ಏರಿಕೆಯಾಗಲಿದೆ. ಆದರೆ ಒಂದು ಸಂಗತಿಯನ್ನು ನೆನಪಿಟ್ಟು ಕೊಳ್ಳಿ. ಅಮೆರಿಕ ಶ್ರೀಮಂತ ದೇಶ. ಟ್ರಂಪ್ ಕೂಡ ಇದನ್ನು ಈಗಾಗಲೇ ಬಹಿರಂಗವಾಗಿ ಹೇಳಿ ಕೊಂಡಿದ್ದಾರೆ. ಇದರರ್ಥ ಇಷ್ಟೆ. ಏನೇ ಕಷ್ಟಗಳು ಎದುರಾದರೂ ಅದನ್ನು ಎದುರಿಸಲು ಅಮೆರಿಕ ಸಿದ್ಧವಿದೆ. ಟ್ರಂಪ್ ಅದಕ್ಕೆ ಸಿದ್ಧತೆ ಮಾಡಿಕೊಂಡೇ ತೆರಿಗೆ ಹೆಚ್ಚಳದ ನಿರ್ಧಾರಗಳನ್ನು ಪ್ರಕಟಿಸಿ ದ್ದಾರೆ.
ಹೀಗಾಗಿ ಅಮೆರಿಕಕ್ಕೆ ತೊಂದರೆ ನೀಡಬೇಕು ಅಂತಾದರೆ ಚೀನಾ ಬೇರೆ ದಾರಿಗಳನ್ನು ಹುಡುಕಬೇಕು. ಸದ್ಯ ತಾಮ್ರ ಮತ್ತು ಲೀಥಿಯಂನಂತಹ ಲೋಹಗಳ ಸಂಸ್ಕರಣೆಯಲ್ಲಿ ಜಗತ್ತಿನಲ್ಲೇ ಚೀನಾ ಅಗ್ರಸ್ಥಾನದಲ್ಲಿದೆ. ಈ ಉತ್ಪನ್ನಗಳಿಗಾಗಿ ಚೀನಾವನ್ನೇ ಅಮೆರಿಕ ಅವಲಂಬಿಸಿದೆ. ಹೀಗಾಗಿ ಇಂತಹ ಸಂಪನ್ಮೂಲಗಳು ಅಮೆರಿಕಕ್ಕೆ ಬೇರೆಲ್ಲೂ ಸಿಗದಂತೆ ಚೀನಾ ನೋಡಿಕೊಳ್ಳಬಹುದು. ಅಮೆರಿಕದ ಮಿಲಿಟರಿಗೆ ಥರ್ಮಲ್ ಇಮೇಜಿಂಗ್‌ಗಾಗಿ ದೊಡ್ಡ ಪ್ರಮಾಣದಲ್ಲಿ ಗ್ಯಾಲಿಯಂ ಮತ್ತು ಜೆರ್ಮೇನಿಯಂನಂತಹ ಲೋಹಗಳು ಬೇಕು.
ಅಮೆರಿಕದಲ್ಲಿ ಇವುಗಳ ಅಭಾವ ಸೃಷ್ಟಿಸಲು ಚೀನಾ ಈಗಾಗಲೇ ಪ್ರಯತ್ನಗಳನ್ನು ಆರಂಭಿಸಿದೆ. ಇದಕ್ಕೆ ಪ್ರತಿಯಾಗಿ ಅಮೆರಿಕದ ಮಿಲಿಟರಿ ಕೂಡ ಚೀನಾದ ಉದ್ದಿಮೆಗಳಿಗೆ ಅಗತ್ಯವಿರುವ ಪ್ರಮುಖ ಉತ್ಪನ್ನಗಳ ಅಭಾವ ಸೃಷ್ಟಿಸಲು ಪ್ರಯತ್ನಿಸಲಿದೆ. ಸುಧಾರಿತ ಮೈಕ್ರೋಚಿಪ್‌ಗಳು ಕೃತಕ ಬುದ್ಧಿ ಮತ್ತೆಗೆ ಸಂಬಂಧಿಸಿದ ಉಪಕರಣಗಳಿಗೆ ಬೇಕಾಗುತ್ತವೆ. ಇವುಗಳಿಗಾಗಿ ಅಮೆರಿಕವನ್ನು ಚೀನಾ ಅವಲಂಬಿಸಿದೆ.
ಚೀನಾದ ಬಹುದೊಡ್ಡ ಸಮಸ್ಯೆಯೇನೆಂದರೆ, ರಷ್ಯಾವನ್ನು ಹೊರತುಪಡಿಸಿ ಇನ್ನಾವ ಪ್ರಮುಖ ದೇಶಗಳೂ ಬಹಿರಂಗವಾಗಿ ಚೀನಾವನ್ನು ಬೆಂಬಲಿಸುವುದಿಲ್ಲ. ಇನ್ನುಳಿದ ಇಡೀ ಜಗತ್ತನ್ನು ತನ್ನ ಜೊತೆಗೆ ಇರಿಸಿಕೊಂಡು ಟ್ರಂಪ್ ಆರ್ಥಿಕ ಸಮರವನ್ನು ಮುನ್ನಡೆಸಿದರೆ ಚೀನಾ ಅಕ್ಷರಶಃ ಕಣ್ಣೀರು ಹಾಕಬೇಕಾಗುತ್ತದೆ. ಯಾವುದೇ ದೇಶಕ್ಕಾದರೂ ಅಮೆರಿಕವನ್ನು ಎದುರು ಹಾಕಿಕೊಳ್ಳುವುದು ಕಷ್ಟ. ಹಾಗಿರುವಾಗ ರಷ್ಯಾ ಮತ್ತು ಇನ್ನುಳಿದ ಕೆಲ ಚಿಲ್ಲರೆ ದೇಶಗಳನ್ನು ಹೊರತುಪಡಿಸಿ ಇನ್ನೆಲ್ಲಾ ದೇಶ ಗಳನ್ನೂ ಟ್ರಂಪ್ ತನ್ನೊಂದಿಗೆ ಇರಿಸಿಕೊಂಡರೆ ಚೀನಾ ಅಯ್ಯೋ ಎನ್ನಲೇಬೇಕು.
ಏನೇ ಹೇಳಿ, ಟ್ರಂಪ್‌ಗೆ ಟ್ರಂಪ್ ಅವರೇ ಸರಿಸಾಟಿ. ಅವರ ದೃಷ್ಟಿಯಲ್ಲಿ ತಾನು ಇರಿಸುವ ಎಲ್ಲಾ ಹೆಜ್ಜೆಗಳೂ ‘ಟ್ರಂಪ್ ಕಾರ್ಡ್’. ಅವರು ಎಸೆಯುವ ಮುಂದಿನ ಕಾರ್ಡ್ ಯಾವುದು ಎಂಬುದು ಯಾರಿಗೆ ಗೊತ್ತು! ಆರಜೂ ಕಾಜ್ಮಿಗೊಂದು ದೊಡ್ಡ ಸೆಲ್ಯೂಟ್! ಪಾಕಿಸ್ತಾನದ ನಿರ್ಭೀತ ಪತ್ರಕರ್ತೆ ಆರಜೂ ಕಾಜ್ಮಿ ಬಗ್ಗೆ ಅಂಕಣದ ಕೊನೆಯಲ್ಲಾದರೂ ಮೆಚ್ಚುಗೆಯ ಮಾತು ಹೇಳಲೇಬೇಕು. 1947ರಲ್ಲಿ ದೇಶ ವಿಭಜನೆಯಾದಾಗ ತನ್ನ ಪೂರ್ವಜರು ಭಾರತವನ್ನು ಬಿಟ್ಟು ಪಾಕಿಸ್ತಾನಕ್ಕೆ ವಲಸೆ ಬಂದ ಬಗ್ಗೆ ಆಕೆ ಪಶ್ಚಾತ್ತಾಪ ವ್ಯಕ್ತಪಡಿಸಿದ್ದಾಳೆ. ಆರಜೂ ಇಸ್ಲಾಮಾಬಾದ್‌ನಲ್ಲಿ ನೆಲೆಸಿರುವ ಪತ್ರಕರ್ತೆ.
ಪಾಕಿಸ್ತಾನದ ರಾಜಧಾನಿಯ ಹೃದಯದಲ್ಲಿ ಇದ್ದುಕೊಂಡೇ ಆಕೆ ಪಾಕಿಸ್ತಾನದ ಸರಕಾರ, ಗುಪ್ತಚರ ಸಂಸ್ಥೆಗಳು ಮತ್ತು ಮಿಲಿಟರಿ ಮುಖ್ಯಸ್ಥರು ಮಾಡುತ್ತಿರುವ ಎಡವಟ್ಟುಗಳನ್ನು ಧೈರ್ಯವಾಗಿ ಬಹಿರಂಗಪಡಿಸುತ್ತಿದ್ದಾಳೆ. ಅದೇ ವೇಳೆ, ಭಾರತದ ಅಭಿವೃದ್ಧಿಯನ್ನು ಮುಕ್ತ ಕಂಠದಿಂದ ಶ್ಲಾಘಿಸು ತ್ತಿದ್ದಾಳೆ. ಪಾಕಿಸ್ತಾನ ಅಧೋಗತಿಗೆ ತಲುಪಲು ಯಾರು ಕಾರಣ ಎಂಬುದನ್ನು ಧೈರ್ಯವಾಗಿ ಹೇಳಿ ತರಾಟೆ ತೆಗೆದುಕೊಳ್ಳುತ್ತಿದ್ದಾಳೆ.
ಹಲವು ವರ್ಷಗಳಿಂದ ಆಕೆ ನಿರ್ಭೀತ ಪತ್ರಿಕೋದ್ಯಮದ ಧ್ವಜ ಹಿಡಿದು ಓಡಾಡುತ್ತಿದ್ದಾಳೆ. ಈಗ ಆಕೆಯ ಜೀವಕ್ಕೆ ಅಪಾಯ ಎದುರಾಗಿದೆ. ಅವಳ ಬ್ಯಾಂಕ್ ಖಾತೆಗಳು, ಕಾರ್ಡ್‌ಗಳು, ಪಾಸ್‌ಪೋರ್ಟ್ ಮತ್ತು ಇನ್ನಿತರ ಪ್ರಮುಖ ದಾಖಲೆಗಳನ್ನು ಪಾಕಿಸ್ತಾನದ ಸರಕಾರ ಜಪ್ತಿ ಮಾಡಿದೆ. ಅವಳೀಗ ಅಕ್ಷರಶಃ ಅತಂತ್ರ ಸ್ಥಿತಿಯಲ್ಲಿ ಸಿಲುಕಿದ್ದಾಳೆ. ಇದರ ಬಗ್ಗೆ ವಿಡಿಯೋ ಬಿಡುಗಡೆ ಮಾಡಿರುವ ಅವಳು, ಯಾವುದೇ ಕಾರಣಕ್ಕೂ ತಾನು ತಲೆಬಾಗುವುದಿಲ್ಲ ಎಂದು ಜಗತ್ತಿಗೆ ಸಾರಿ ಹೇಳಿದ್ದಾಳೆ. ನಿನ್ನ ಧೈರ್ಯಕ್ಕೊಂದು ಸೆಲ್ಯೂಟ್, ಆರಜೂ! ನಿನ್ನ ಸುರಕ್ಷತೆಗಾಗಿ ನಾವು ಪ್ರಾರ್ಥಿಸುತ್ತೇವೆ.