Dr Vijay Darda Column: ಚಿಕನ್ಸ್ ನೆಕ್ ಮೇಲೆ ಚೀನಾ ಹೊಸ ಸಂಚು !
1971ರ ಪಾಕಿಸ್ತಾನದ ಜತೆಗಿನ ಯುದ್ಧದಲ್ಲಿ ಚಿಕನ್ಸ್ ನೆಕ್ ಪ್ರದೇಶದ ವಾಯುನೆಲೆಗಳು ಮಹತ್ವದ ಪಾತ್ರ ನಿಭಾಯಿಸಿದ್ದವು. ಆದ್ದರಿಂದ ಭಾರತದ ಈ ಶಕ್ತಿಯನ್ನು ದುರ್ಬಲಗೊಳಿಸಲು ಚೀನಾ ಮತ್ತು ಪಾಕಿಸ್ತಾನ ಪ್ರಯತ್ನಿಸುತ್ತಿವೆ. ಮೊಹಮ್ಮದ್ ಯೂನಸ್ ಅವರನ್ನೂ ಜೊತೆಗೆ ಸೇರಿಸಿಕೊಂಡರೆ ತಮ್ಮ ಕೈ ಇನ್ನಷ್ಟು ಬಲವಾಗುತ್ತದೆ ಎಂಬುದು ಈ ದೇಶಗಳ ಲೆಕ್ಕಾಚಾರ. ಹೀಗಾಗಿ ಅವರಲ್ಲೊಬ್ಬ ಸ್ನೇಹಿತ ಪಾಕ್ ಮತ್ತು ಚೀನಾಕ್ಕೆ ಕಾಣಿಸಿದ್ದಾನೆ. ಯೂನಸ್‌ಗೂ ಅಧಿಕಾರದಲ್ಲಿ ಮುಂದುವರೆಯಬೇಕು ಅಂತಾದರೆ ಭಾರತದ ಇಬ್ಬರು ಶತ್ರುಗಳ ಬೆಂಬಲ ಬೇಕು.


ಸಂಗತ
ಡಾ.ವಿಜಯ್ ದರಡಾ
ಕೊನೆಗೂ ಈ ವಿಷಯ ಸ್ಪಷ್ಟವಾಗಿದೆ. ಬಾಂಗ್ಲಾದೇಶದಲ್ಲಿ ಉಂಟಾದ ಗಲಭೆಯ ಬಳಿಕ ಅಲ್ಲಿನ ಸರಕಾರ ಪತನಗೊಂಡು, ಹೊಸ ಮಧ್ಯಂತರ ಸರಕಾರದ ಮುಖ್ಯ ಸಲಹೆಗಾರನಾಗಿ ನೇಮಕ ಗೊಂಡಿರುವ ಮೊಹಮ್ಮದ್ ಯೂನಸ್ ಪಾಕಿಸ್ತಾನ ಮತ್ತು ಚೀನಾದ ಮಡಿಲಿಗೆ ಹೋಗಿ ಕುಳಿತಿದ್ದಾರೆ ಎಂಬುದರಲ್ಲಿ ಈಗ ಯಾವ ಅನುಮಾನವೂ ಉಳಿದಿಲ್ಲ. ಭಾರತದ ವಿರುದ್ಧ ಅವರು ಮಾಡುತ್ತಿರುವ ಕಿತಾಪತಿಗಳನ್ನು ನೋಡಿದರೆ ನಮ್ಮ ದೇಶದ ಬಗ್ಗೆ ಏನೋ ಹಳೆಯ ಜಿದ್ದು ತೀರಿಸಿಕೊಳ್ಳುತ್ತಿರು ವಂತಿದೆ! ಭಾರತದ ಈಶಾನ್ಯ ರಾಜ್ಯಗಳು ಲ್ಯಾಂಡ್‌ಲಾಕ್ ಆಗಿವೆ, ಅವುಗಳ ಕೆಳಗೆ ಬರುವ ಸಮುದ್ರಕ್ಕೆ ನಾನೇ ಯಜಮಾನ ಎಂಬಂತೆ ಅವರೀಗ ಮಾತನಾಡಿ ದ್ದಾರೆ.
ಅಂದರೆ ಅವರ ಮೆದುಳೀಗ ಸಂಪೂರ್ಣವಾಗಿ ಚೀನಾದ ಹಿಡಿತದಲ್ಲಿದೆ ಎಂಬುದು ಸ್ಪಷ್ಟವಾಗುತ್ತದೆ. ಚಿಕನ್ಸ್ ನೆಕ್ ಪ್ರದೇಶವನ್ನು ಕಬಳಿಸಲು ಇದು ಚೀನಾ ಹೂಡಿರುವ ಹೊಸ ಷಡ್ಯಂತ್ರ. ಪಾಕಿಸ್ತಾನದ ಸೇನೆ ಮತ್ತು ಗುಪ್ತಚರ ಸಂಸ್ಥೆ ಐಎಸ್‌ಐ ಕೂಡ ಇದರಲ್ಲಿ ಸೇರಿಕೊಂಡಿದೆ. ಚೀನಾದ ದುಷ್ಟ ಯೋಜನೆಯನ್ನು ಅರ್ಥ ಮಾಡಿಕೊಳ್ಳಬೇಕು ಅಂದರೆ ಅದಕ್ಕೂ ಮೊದಲು ‘ಚಿಕನ್ಸ್ ನೆಕ್ ಎಂದರೇನು ಎಂಬುದನ್ನು ತಿಳಿದುಕೊಳ್ಳಬೇಕು. ಬಳಿಕ ನಮಗೆ ಮೊಹಮ್ಮದ್ ಯೂನಸ್ ಅವರ ಹೇಳಿಕೆ ಎಷ್ಟು ಅಪಾಯಕಾರಿ ಎಂಬುದು ತಿಳಿಯುತ್ತದೆ.
ನೀವು ಭಾರತದ ನಕಾಶೆಯನ್ನು ನೋಡಿದರೆ ಎಂಟು ಈಶಾನ್ಯ ರಾಜ್ಯಗಳಾದ ಅರುಣಾಚಲ ಪ್ರದೇಶ, ಅಸ್ಸಾಂ, ಮಣಿಪುರ, ಮೇಘಾಲಯ, ಮಿಜೋರಂ, ನಾಗಾಲ್ಯಾಂಡ್, ಸಿಕ್ಕಿಂ ಮತ್ತು ತ್ರಿಪುರಾವನ್ನು ಪಶ್ಚಿಮ ಬಂಗಾಳದೊಂದಿಗೆ ಸಂಪರ್ಕಿಸುವ ಸಣ್ಣದೊಂದು ಕಾರಿಡಾರ್ ರೀತಿಯ ಜಾಗ ಕಾಣಿಸುತ್ತದೆ. ನೋಡುವುದಕ್ಕೆ ಅದು ಕೋಳಿಯ ಕುತ್ತಿಗೆಯಂತಿದೆ. ಅದೇ ಚಿಕನ್ಸ್ ನೆಕ್ ಪ್ರದೇಶ. ಆ ಕಾರಿಡಾರ್ 60 ಕಿ.ಮೀ. ಉದ್ದ ಮತ್ತು ಕೆಲ ಪ್ರದೇಶಗಳಲ್ಲಿ ಸುಮಾರು 22 ಕಿ.ಮೀ. ಮಾತ್ರ ಅಗಲವಿದೆ.
ಇದನ್ನೂ ಓದಿ: Dr Vijay Darda Column: ಭಾರತಕ್ಕೆ ಮಸಿ ಬಳಿದು ಅಮೆರಿಕಕ್ಕೆ ಏನಾಗಬೇಕಿದೆ ?
ಇನ್ನೊಂದೆಡೆ, ಅರುಣಾಚಲ ಪ್ರದೇಶ ತನಗೆ ಸೇರಿದ್ದು ಎಂದು ಚೀನಾ ಬಹಳ ವರ್ಷಗಳಿಂದ ಹೇಳಿ ಕೊಳ್ಳುತ್ತಾ ಬರುತ್ತಿದೆ. ತನ್ನ ನಕಾಶೆಯಲ್ಲಿ ಅರುಣಾಚಲ ಪ್ರದೇಶದ ಬೇರೆ ಬೇರೆ ಊರುಗಳಿಗೆ ತನ್ನದೇ ಹೆಸರನ್ನೂ ಇರಿಸಿಕೊಂಡಿದೆ. ಚೀನಾದ ದೀರ್ಘಾವಧಿಯ ಗುರಿಯೆಂದರೆ ಈಶಾನ್ಯ ರಾಜ್ಯ ಗಳನ್ನು ಸಂಪೂರ್ಣವಾಗಿ ಭಾರತದ ಕೈತಪ್ಪಿಸಿ ತಾನು ಕಬಳಿಸುವುದು.
ಜಾಗತಿಕ ಮಟ್ಟದಲ್ಲಿ ಸಿಲಿಗುರಿ ಕಾರಿಡಾರ್ ಎಂದು ಕರೆಯಲ್ಪಡುವ ಚಿಕನ್ಸ್ ನೆಕ್ ಕಾರಿಡಾರ್ ಭಾರತದ ಬಹಳ ದುರ್ಬಲ ಪ್ರದೇಶ ಎಂಬುದನ್ನು ಚೀನಾ ಗುರುತಿಸಿದೆ. ಚಿಕನ್ಸ್ ನೆಕ್ ಪ್ರದೇಶದ ಒಂದು ಕಡೆಯಲ್ಲಿ ಭೂತಾನ್ ಮತ್ತು ನೇಪಾಳ ದೇಶವಿದೆ. ಇನ್ನೊಂದು ಕಡೆಗೆ ಬಾಂಗ್ಲಾದೇಶವಿದೆ. 2017ರಲ್ಲಿ ಚೀನಾದ ಸೇನೆ ಭೂತಾನ್ ದೇಶದ ಒಳಗೆ ನುಗ್ಗಿ ಡೋಕ್ಲಾಂನಲ್ಲಿ ರಸ್ತೆ ನಿರ್ಮಿಸಲು ಪ್ರಯತ್ನಿಸಿದ್ದು ನಿಮಗೆ ನೆನಪಿರಬಹುದು. ಈ ಡೋಕ್ಲಾಂ ಪ್ರದೇಶ ಚಿಕನ್ಸ್ ನೆಕ್‌ಗೆ ಬಹಳ ಹತ್ತಿರ ದಲ್ಲಿದೆ.
ಭೂತಾನ್ ದೇಶದೊಳಗೆ ಚೀನಾ ಮಿಲಿಟರಿ ನುಗ್ಗಿದ್ದನ್ನು ಭಾರತದ ಸೈನಿಕರು ಕೆಚ್ಚೆದೆಯಿಂದ ಹೋರಾಡಿ ಹಿಮ್ಮೆಟ್ಟಿಸಿದ್ದರು. ಚೀನಾ ಯಾವಾಗಲೂ ಡೋಕ್ಲಾಂ ಪ್ರದೇಶ ತನಗೆ ಸೇರಿದ್ದು ಎಂದು ಹೇಳಿಕೊಳ್ಳುತ್ತದೆ. ಹೀಗಾಗಿ ಡೋಕ್ಲಾಂನಲ್ಲಿ ಏರ್ಪಟ್ಟ ಸಂಘರ್ಷ ಕೊನೆಯಾಗುವುದಕ್ಕೆ ಬಹಳ ಸಮಯ ಹಿಡಿಯಿತು.

ಕೊನೆಗೂ ಭಾರತದ ಬಿಗಿಪೆಟ್ಟು ತಾಳಲಾಗದೆ ಚೀನಾ ಹಿಂದೆ ಸರಿದಿತ್ತು. ಆಗೇನಾದರೂ ಅಲ್ಲಿ ಚೀನಾದ ಮಿಲಿಟರಿಯವರು ರಸ್ತೆ ನಿರ್ಮಿಸುವಲ್ಲಿ ಯಶಸ್ವಿಯಾಗಿದ್ದರೆ ಭಾರತಕ್ಕೆ ಇನ್ನೂ ಹೆಚ್ಚಿನ ಅಪಾಯವಿತ್ತು. ಭವಿಷ್ಯದಲ್ಲಿ ಏನೇ ಸಂಘರ್ಷ ಏರ್ಪಟ್ಟರೂ ಚಿಕನ್ಸ್ ನೆಕ್ ಪ್ರದೇಶದಲ್ಲಿ ಭಾರತದ ವ್ಯೂಹಾತ್ಮಕ ಶಕ್ತಿಯೇ ದುರ್ಬಲವಾಗುತ್ತಿತ್ತು. ಈಶಾನ್ಯ ರಾಜ್ಯಗಳಿಗೆ ಭಾರತದ ಮುಖ್ಯ ಭೂಮಿ ಯೊಂದಿಗೆ ಸಂಪರ್ಕ ಕಲ್ಪಿಸುವ ಏಕೈಕ ಕಾರಿಡಾರ್ ಇದು. ಹೀಗಾಗಿ ಈ ಪ್ರದೇಶವು ಭಾರತಕ್ಕೆ ಈಶಾನ್ಯ ರಾಜ್ಯಗಳಲ್ಲಿ ಮಿಲಿಟರಿ ಪ್ರಾಬಲ್ಯವನ್ನು ಉಳಿಸಿಕೊಳ್ಳುವುದಕ್ಕೂ ಏಕೈಕ ದಾರಿಯಾಗಿದೆ. ದೇಶದ ರಕ್ಷಣೆಯ ವಿಷಯದಲ್ಲಿ ಈಶಾನ್ಯದ ರಾಜ್ಯಗಳು ಮತ್ತು ಚಿಕನ್ಸ್ ನೆಕ್ ಕಾರಿಡಾರ್ ಬಹಳ ಸೂಕ್ಷ್ಮವಾದ ಪ್ರದೇಶಗಳು.
1971ರ ಪಾಕಿಸ್ತಾನದ ಜತೆಗಿನ ಯುದ್ಧದಲ್ಲಿ ಚಿಕನ್ಸ್ ನೆಕ್ ಪ್ರದೇಶದ ವಾಯುನೆಲೆಗಳು ಮಹತ್ವದ ಪಾತ್ರ ನಿಭಾಯಿಸಿದ್ದವು. ಆದ್ದರಿಂದ ಭಾರತದ ಈ ಶಕ್ತಿಯನ್ನು ದುರ್ಬಲಗೊಳಿಸಲು ಚೀನಾ ಮತ್ತು ಪಾಕಿಸ್ತಾನ ಪ್ರಯತ್ನಿಸುತ್ತಿವೆ. ಮೊಹಮ್ಮದ್ ಯೂನಸ್ ಅವರನ್ನೂ ಜೊತೆಗೆ ಸೇರಿಸಿಕೊಂಡರೆ ತಮ್ಮ ಕೈ ಇನ್ನಷ್ಟು ಬಲವಾಗುತ್ತದೆ ಎಂಬುದು ಈ ದೇಶಗಳ ಲೆಕ್ಕಾಚಾರ. ಹೀಗಾಗಿ ಅವರಲ್ಲೊಬ್ಬ ಸ್ನೇಹಿತ ಪಾಕ್ ಮತ್ತು ಚೀನಾಕ್ಕೆ ಕಾಣಿಸಿದ್ದಾನೆ.
ಯೂನಸ್‌ಗೂ ಅಧಿಕಾರದಲ್ಲಿ ಮುಂದುವರೆಯಬೇಕು ಅಂತಾದರೆ ಭಾರತದ ಇಬ್ಬರು ಶತ್ರುಗಳ ಬೆಂಬಲ ಬೇಕು. ಅದಕ್ಕಾಗಿ ಅವರು ಯಾವುದೇ ಹಂತಕ್ಕೂ ಹೋಗಲು ಸಿದ್ಧರಿದ್ದಾರೆ. ಕೊನೆಗೆ ತಮ್ಮ ದೇಶವನ್ನು ಮಾರಾಟ ಮಾಡುವುದಕ್ಕೂ ಅವರು ರೆಡಿಯೇ! ಇಲ್ಲದಿದ್ದರೆ ಬಾಂಗ್ಲಾದೇಶದ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಎಸಗಿದ ಮತ್ತು ಬಾಂಗ್ಲಾದಲ್ಲಿ ಮಾರಣಹೋಮ ನಡೆಸಿದ ಪಾಕಿಸ್ತಾನಿ ಮಿಲಿಟರಿಯ ಜೊತೆಗೆ ಅವರು ಸ್ನೇಹ ಮಾಡಿಕೊಳ್ಳುತ್ತಿದ್ದರೇ? ಬಾಂಗ್ಲಾದೇಶದಲ್ಲಿ ಅಧಿಕಾರ ಬದಲಾದ ಮೇಲೆ ಮೊಹಮ್ಮದ್ ಯೂನಸ್ ಅವರು ಚೀನಾದ ಜೊತೆಗಿನ ಸಂಬಂಧವನ್ನು ಬಲಪಡಿಸಿಕೊಂಡಿದ್ದಾರೆ.
ಅದು ಭಾರತವನ್ನು ವಿರೋಧಿಸುವುದಕ್ಕೂ ಬಳಕೆಯಾಗುತ್ತಿದೆ. ಈ ತ್ರಿಕೋನದಲ್ಲಿ ಪಾಕಿಸ್ತಾನ ಕೂಡ ಸೇರಿಕೊಂಡಿದೆ. ಈ ಷಡ್ಯಂತ್ರದ ಭಾಗವಾಗಿಯೇ ಯೂನಸ್ ಇತ್ತೀಚೆಗೆ ಚೀನಾಕ್ಕೂ ಹೋಗಿ ಬಂದರು. ಅಲ್ಲೇ ಅವರು ಭಾರತದ ಈಶಾನ್ಯ ರಾಜ್ಯಗಳು ಲ್ಯಾಂಡ್ ಲಾಕ್ (ಬೇರೆ ದೇಶಗಳಿಂದ ಸುತ್ತುವರಿಯ ಲ್ಪಟ್ಟ) ರಾಜ್ಯಗಳು ಎಂದು ಹೇಳಿದ್ದು. ಅಲ್ಲದೆ, ತಮ್ಮನ್ನು ತಾವು ‘ಸಮುದ್ರದ ರಕ್ಷಕ ಎಂದೂ ಕರೆದುಕೊಂಡರು. ಹಾಗೆ ಹೇಳುವುದರ ಹಿಂದೆ ಅವರಿಗಿರುವ ಉದ್ದೇಶ ಏನಿರಬಹುದು? ಬಹುಶಃ ಅವರು ತಮ್ಮ ದೇಶವನ್ನು ಚೀನಾಕ್ಕೆ ರಕ್ಷಣಾ ನೆಲೆಯಾಗಿ ಬಿಟ್ಟುಕೊಡಲು ಸಿದ್ಧರಿದ್ದಾರೆ.
ಮಿಲಿಟರಿ ಉದ್ದೇಶಗಳಿಗೆ ಬಾಂಗ್ಲಾದೇಶದ ನೆಲವನ್ನೂ, ಸಮುದ್ರವನ್ನೂ ಚೀನಾ ರಾಜಾರೋಷವಾಗಿ ಬಳಸಿಕೊಳ್ಳಬಹುದು ಎಂಬುದು ಅವರ ಆಶಯ ಇರಬಹುದು. ಚೀನಾಕ್ಕೆ ಹೋಗಿ ವ್ಯಾಪಾರ ಮತ್ತು ವಾಣಿಜ್ಯ ಸಂಬಂಧಿ ಮಾತುಕತೆ ನಡೆಸಿದ್ದೇನೆ ಎಂದು ಅವರು ಹೇಳಿಕೊಂಡಿರುವುದು ಕೇವಲ ತೋರುಗಾಣಿಕೆಗೆ.
ಆ ಭೇಟಿಯ ನಿಜವಾದ ಉದ್ದೇಶ ಭಾರತದ ವಿರುದ್ಧ ಕತ್ತಿ ಮಸೆಯುವುದು. ಬಾಂಗ್ಲಾದೇಶವನ್ನು ಭಾರತ ಮೂರು ಕಡೆಯಿಂದ ಸುತ್ತುವರೆದಿದೆ ಎಂದಾದರೆ, ಬಾಂಗ್ಲಾದೇಶ ಕೂಡ ಭಾರತವನ್ನು ಮೂರು ಕಡೆಯಿಂದ ಸುತ್ತುವರೆದಿದೆ ಎಂಬುದನ್ನು ಜಗತ್ತಿಗೆ ತಿಳಿಸುವುದು ಮೊಹಮ್ಮದ್ ಯೂನಸ್ ಗೆ ಬೇಕಿತ್ತು. ತನ್ನ ಜೊತೆಗೆ ಚೀನಾ ಕೈಜೋಡಿಸಿದರೆ ಒಟ್ಟಾರೆ ರಕ್ಷಣಾ ಸಾಮರ್ಥ್ಯ ಇನ್ನೂ ಹೆಚ್ಚುತ್ತದೆ ಎಂಬುದು ಅವರ ಲೆಕ್ಕಾಚಾರ. ಅದಕ್ಕೆಂದೇ ಬಾಂಗ್ಲಾದೇಶದಲ್ಲಿ ವಾಯುನೆಲೆ ಸ್ಥಾಪಿಸುವಂತೆ ಚೀನಾಕ್ಕೆ ಯೂನಸ್ ಆಹ್ವಾನ ನೀಡಿದ್ದಾರೆಂಬ ಸುದ್ದಿಗಳು ಈಗ ಬರುತ್ತಿವೆ.
ಬಾಂಗ್ಲಾದೇಶದ ಲಾಲ್‌ಮೋನಿರ್‌ಹಟ್ ಜಿಲ್ಲೆಯಲ್ಲಿ ವಾಯುನೆಲೆ ನಿರ್ಮಿಸಲು ಚೀನಾ ಒಪ್ಪಿಗೆ ಕೂಡ ನೀಡಿದೆ ಎನ್ನಲಾಗಿದೆ. ಆ ವಾಯುನೆಲೆಯನ್ನು ಪಾಕಿಸ್ತಾನದ ಕಂಪನಿಯೊಂದು ನಿರ್ಮಿಸ ಬೇಕು ಎಂದೂ ನಿರ್ಧಾರವಾಗಿದೆಯಂತೆ. ಅಂದರೆ ಪಾಕಿಸ್ತಾನದ ಗೂಢಚರರು ಬಾಂಗ್ಲಾದೇಶದ ಒಂದೊಂದು ಇಂಚು ಜಾಗದಲ್ಲೂ ನಿಂತಿರುತ್ತಾರೆ. ಈಗಾಗಲೇ ಬಾಂಗ್ಲಾದೇಶದ ಸೇನೆಗೆ ಪಾಕಿಸ್ತಾನದ ಸೇನೆಯ ಅಧಿಕಾರಿಗಳು ತರಬೇತಿ ನೀಡಬೇಕು ಎಂಬುದು ನಿರ್ಧರಿತವಾಗಿದೆ.
ಇನ್ನು, ಚೀನಾ ಸರ್ಕಾರ ಮತ್ತು ಚೀನಾದ ಕಂಪನಿಗಳು ಬಾಂಗ್ಲಾದೇಶದಲ್ಲಿ ಬಂಡವಾಳ ಹೂಡಿಕೆ ಮಾಡುವುದಕ್ಕೂ ಒಪ್ಪಿಕೊಂಡಿವೆ. ಅದೇ ವೇಳೆ, ಬಾಂಗ್ಲಾಕ್ಕೆ ಸಾಲ ನೀಡಲು ಮತ್ತು 2.1 ಬಿಲಿಯನ್ ಡಾಲರ್‌ಗಳಷ್ಟು ನೆರವು ನೀಡುವುದಕ್ಕೂ ಚೀನಾ ನಿರ್ಧರಿಸಿದೆ ಎಂದು ತಿಳಿದುಬಂದಿದೆ. ಚೀನಾದ ಕಂಪನಿಗಳು ತೀಸ್ತಾ ನದಿ ಸಮಗ್ರ ನಿರ್ವಹಣೆ ಮತ್ತು ಪುನರುಜ್ಜೀವನ ಯೋಜನೆಯ ಗುತ್ತಿಗೆ ಬಾಚಿಕೊಳ್ಳುವ ಸಾಧ್ಯತೆಯಿದೆ. ಹೀಗೆ ಬಾಂಗ್ಲಾದೇಶದ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸುವು ದಕ್ಕೆ ಚೀನಾಕ್ಕೆ ಯಾವುದೇ ರೀತಿಯಲ್ಲೂ ಕಷ್ಟವಾಗಲಾರದು.
ಈಗ ಯೋಚಿಸಿ. ಬಾಂಗ್ಲಾದೇಶದಲ್ಲಿ ಚೀನಾ ವಾಯುನೆಲೆ ಸ್ಥಾಪಿಸಿ, ಬಂಗಾಳ ಕೊಲ್ಲಿಗೂ ಪ್ರವೇಶ ಪಡೆದು, ಚೀನಾದ ಸೇನಾಪಡೆಗಳು ಬೇರೆ ಬೇರೆ ರೀತಿಯಲ್ಲಿ ಬಾಂಗ್ಲಾದೇಶದೊಳಗೆ ನಿಯೋಜನೆ ಗೊಂಡರೆ ಭಾರತದ ಕತೆ ಏನಾಗಬೇಕು? ಇದು ಭಾರತಕ್ಕೆ ಅತ್ಯಂತ ದೊಡ್ಡ ಅಪಾಯ ತಂದೊಡ್ಡುವ ಬೆಳವಣಿಗೆ.
ಇದರ ಜೊತೆಗೆ ಪಾಕಿಸ್ತಾನದ ಸೇನೆ ಮತ್ತು ಐಎಸ್‌ಐ ಕೂಡ ತಮ್ಮ ಯೋಜನೆಗಳನ್ನು ರಹಸ್ಯವಾಗಿ ಕಾರ್ಯಗತಗೊಳಿಸುತ್ತಿರುತ್ತವೆ. ಚೀನಾ ಈಗಾಗಲೇ ಭಾರತದ ಈಶಾನ್ಯ ರಾಜ್ಯಗಳಲ್ಲಿ ಬಹಳ ದೊಡ್ಡ
ಪ್ರಮಾಣದಲ್ಲಿ ಬಂಡುಕೋರ ಚಟುವಟಿಕೆಗಳು ಮತ್ತು ಭಯೋತ್ಪಾದಕ ಚಟುವಟಿಕೆಗಳು
ನಡೆಯುವಂತೆ ಪ್ರಚೋದನೆ ನೀಡುತ್ತಿದೆ.
ಮಣಿಪುರದಲ್ಲಿ ನಡೆದ ಇತ್ತೀಚಿನ ಕಾರ್ಯಾಚರಣೆಯಲ್ಲಿ ವಶಪಡಿಸಿಕೊಳ್ಳಲಾದ ಹೆಚ್ಚಿನ ಶಸ್ತ್ರಾಸ್ತ್ರ ಗಳು ಚೀನಾ ಮೇಡ್ ಆಗಿದ್ದವು. ಈಶಾನ್ಯ ರಾಜ್ಯಗಳಲ್ಲಿ ಅನೇಕ ವರ್ಷಗಳಿಂದ ಬಂಡುಕೋರ ಗುಂಪು ಗಳಿಗೆ ಚೀನಾ ಹಣಕಾಸಿನ ನೆರವು ಮತ್ತು ಶಸ್ತ್ರಾಸ್ತ್ರಗಳ ನೆರವು ನೀಡುತ್ತಲೇ ಬಂದಿದೆ. ಒಟ್ಟಿನಲ್ಲಿ ಭಾರತವನ್ನು ಒಳಗಿನಿಂದಲೇ ದುರ್ಬಲಗೊಳಿಸುವುದಕ್ಕೆ ಷಡ್ಯಂತ್ರ ನಡೆಯುತ್ತಿರುವುದು ಈಗ ಬೆಳಕಿಗೆ ಬರುತ್ತಿದೆ. ಸರಿಯಾದ ಸಮಯ ನೋಡಿ ಗಡಿಯಲ್ಲಿ ಒಗ್ಗಟ್ಟಿನ ದಾಳಿ ನಡೆಸುವುದಕ್ಕೂ ಮೂವರು ಶತ್ರುಗಳು ಹೊಂಚು ಹಾಕುತ್ತಿದ್ದಾರೆ.
ಕೆಲವರಿಗೆ ಇದು ಉತ್ಪ್ರೇಕ್ಷೆ ಅನ್ನಿಸಬಹುದು. ಆದರೆ ಚೀನಾ ಮತ್ತು ಪಾಕಿಸ್ತಾನದ ಈ ಹಿಂದಿನ ನಡವಳಿಕೆಯನ್ನು ನೋಡಿದರೆ ಈ ರೀತಿಯ ಆತಂಕ ಆಧಾರ ರಹಿತ ಖಂಡಿತ ಅಲ್ಲ. ಭಾರತಕ್ಕೆ ನಿಸ್ಸಂಶಯವಾಗಿ ಯೂ ಅನೇಕ ಸವಾಲುಗಳಿವೆ. ಆದರೆ ಅಂತಹ ಸವಾಲುಗಳನ್ನು ಹೇಗೆ ಎದುರಿಸ ಬೇಕು ಎಂಬುದು ಗೊತ್ತಿರುವವರ ಕೈಯಲ್ಲಿ ಸದ್ಯ ನಮ್ಮ ದೇಶವಿದೆ ಎಂಬುದೇ ಸಮಾಧಾನಕರ ಸಂಗತಿ.
ಥಾಯ್ಲೆಂಡ್‌ನಲ್ಲಿ ನಡೆದ ಸಭೆಯಲ್ಲಿ ಮೊಹಮ್ಮದ್ ಯೂನಸ್‌ಗೆ ಪ್ರಧಾನಿ ನರೇಂದ್ರ ಮೋದಿ ನೇರ ವಾಗಿ ಎಚ್ಚರಿಕೆ ನೀಡಿದ್ದಾರೆ. ನಮ್ಮಲ್ಲಿ ನರೇಂದ್ರ ಮೋದಿ, ಅಮಿತ್ ಶಾ ಮತ್ತು ಅಜಿತ್ ದೋವಲ್ ಎಂಬ ಪ್ರಭಾವಿ ತ್ರಿವಳಿಗಳಿವೆ! ದೇಶದ ವಿರುದ್ಧ ನಡೆಯುವ ಷಡ್ಯಂತ್ರಗಳನ್ನು ಹೇಗೆ ಮಟ್ಟ ಹಾಕಬೇಕು ಎಂಬುದು ಇವರಿಗೆ ಗೊತ್ತಿದೆ. ಎಸ್.ಜೈಶಂಕರ್ ಅವರಂತೂ ರಾಜತಾಂತ್ರಿಕ ವ್ಯವಹಾರ ಗಳಲ್ಲಿ ಚಾಣಕ್ಯನಿದ್ದಂತೆ. ಇನ್ನು, ನಮ್ಮ ಕೆಚ್ಚೆದೆಯ ಯೋಧರು ಶತ್ರುಗಳನ್ನು ಚಚ್ಚಿ ಹಾಕಲು ಸದಾ ಸನ್ನದ್ಧರಾಗಿರುತ್ತಾರೆ. ಹೀಗಾಗಿ ಭಯಕ್ಕೆ ಆಸ್ಪದವಿಲ್ಲ.