#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Thimmanna Bhagwat Column: ಉಯಿಲಿನ ಹುಯಿಲು: ಶಿವನ ಪಾದ ಸೇರಿದವರನ್ನು ಸಾಕ್ಷ್ಯಕ್ಕೆ ಕರೆಯಲಾಗದು !

ಹಿಂದೂಗಳಲ್ಲಿ ‘ವಿಲ್’ ಎಂಬ ವ್ಯವಸ್ಥೆಯೇ ಇರಲಿಲ್ಲ. ಉತ್ತರಾಧಿಕಾರ ಶಾಸನ ಅಥವಾ ಸಂಪ್ರ ದಾಯದ ಪ್ರಕಾರವೇ ಆಸ್ತಿಯ ವಿಂಗಡಣೆ ಆಗುತ್ತಿತ್ತು. ಆದರೆ 1867ರಷ್ಟು ಹಿಂದೆಯೇ ಪ್ರಿವಿ ಕೌನ್ಸಿಲ್, ಹಿಂದೂಗಳು ವಿಲ್ ಮೂಲಕ ಆಸ್ತಿಗಳ ವಿಲೇವಾರಿ ಮಾಡುವುದನ್ನು ಎತ್ತಿ ಹಿಡಿಯಿತು. ಆನಂತರ ಬ್ರಿಟಿಷ್ ಸರಕಾರವು ಹಿಂದೂ ವಿಲ್ ಕಾಯಿದೆ 1870ನ್ನು ಜಾರಿಗೆ ತಂದಿತು.

ಉಯಿಲಿನ ಹುಯಿಲು: ಶಿವನ ಪಾದ ಸೇರಿದವರನ್ನು ಸಾಕ್ಷ್ಯಕ್ಕೆ ಕರೆಯಲಾಗದು !

ಅಂಕಣಕಾರ ತಿಮ್ಮಣ್ಣ ಭಾಗ್ವತ್

Profile Ashok Nayak Feb 12, 2025 11:44 AM

ಉಯಿಲು ಬರೆಯುವಾತನಿಗೆ 18 ವರ್ಷಕ್ಕಿಂತ ಹೆಚ್ಚಿನ ವಯಸ್ಸಾಗಿರಬೇಕು. ಮಾನಸಿಕ ಅಸ್ವಸ್ಥತೆ, ಗಂಭೀರ ಕಾಯಿಲೆ ಮುಂತಾದ ಕಾರಣದಿಂದ ಕಾಗದ-ಪತ್ರದಲ್ಲಿರುವ ವಿಷಯ ಮತ್ತು ಅದರ ಪರಿಣಾಮಗಳನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯವಿಲ್ಲದವರು ಉಯಿಲು ಬರೆಯಲು ಅರ್ಹರಲ್ಲ. ಯಾವುದೇ ಒತ್ತಾಯ ಅಥವಾ ಮುಲಾಜಿಗೆ ಒಳಪಡದೆ ಸ್ವ-ಇಚ್ಛೆ ಯಿಂದ ಉಯಿಲು ಮಾಡಬೇಕು. ವಂಚನೆಯಿಂದ ಮಾಡಿಸಲ್ಪಟ್ಟ ಉಯಿಲಿಗೆ ಸಿಂಧುತ್ವ ವಿಲ್ಲ. ಸ್ವಯಾರ್ಜಿತ ಆಸ್ತಿಗಳನ್ನು ಮಾತ್ರ ಉಯಿಲಿನ ಮೂಲಕ ಹಂಚಿಕೆ ಮಾಡಬಹುದು.

ಜೀವನವಿಡೀ ಕಷ್ಟಪಟ್ಟು ಗಳಿಸಿದ ಆಸ್ತಿಯು ತಮ್ಮ ಮರಣಾನಂತರ ತಮಗೆ ಹೆಚ್ಚು ಪ್ರಿಯರಾದ ವರಿಗೆ ಸೇರಬೇಕು ಎಂಬುದು ಎಲ್ಲರ ಇಚ್ಛೆಯಾದರೂ, ಅಂಥ ಇಚ್ಛೆಗೆ ದಾಖಲೆ ಇಲ್ಲದಿದ್ದಲ್ಲಿ ಉತ್ತರಾ ಧಿಕಾರದ ಹಕ್ಕು ಮೇಲುಗೈ ಸಾಧಿಸುತ್ತದೆ. ಈ ಕಾರಣಕ್ಕಾಗಿಯೇ ಉಯಿಲು (ವಿಲ್) ಬರೆಯುವ ಪದ್ಧತಿ ಜಾರಿಗೆ ಬಂತು.

ಹಿಂದೂಗಳಲ್ಲಿ ‘ವಿಲ್’ ಎಂಬ ವ್ಯವಸ್ಥೆಯೇ ಇರಲಿಲ್ಲ. ಉತ್ತರಾಧಿಕಾರ ಶಾಸನ ಅಥವಾ ಸಂಪ್ರ ದಾಯದ ಪ್ರಕಾರವೇ ಆಸ್ತಿಯ ವಿಂಗಡಣೆ ಆಗುತ್ತಿತ್ತು. ಆದರೆ 1867ರಷ್ಟು ಹಿಂದೆಯೇ ಪ್ರಿವಿ ಕೌನ್ಸಿಲ್, ಹಿಂದೂಗಳು ವಿಲ್ ಮೂಲಕ ಆಸ್ತಿಗಳ ವಿಲೇವಾರಿ ಮಾಡುವುದನ್ನು ಎತ್ತಿ ಹಿಡಿಯಿತು. ಆನಂತರ ಬ್ರಿಟಿಷ್ ಸರಕಾರವು ಹಿಂದೂ ವಿಲ್ ಕಾಯಿದೆ 1870ನ್ನು ಜಾರಿಗೆ ತಂದಿತು.

ಇದನ್ನೂ ಓದಿ: Thimmanna Bhagwat Column: ಚಿಕಿತ್ಸೆಗೆ ಹಣವಿಲ್ಲ ವೆಂದರೆ ಯಮರಾಜ ಕಾಯುವನೇ ?

ಹಿಂದೂಗಳು, ಸಿಖ್ಖರು, ಜೈನರು, ಬೌದ್ಧರು, ಪಾರ್ಸಿಗಳು ಮತ್ತು ಕ್ರೈಸ್ತರಿಗೆ 1925ರ ಭಾರತೀಯ ಉತ್ತರಾಧಿಕಾರ ಕಾಯ್ದೆ ಹಾಗೂ ಮುಸಲ್ಮಾನರಿಗೆ 1937ರ ಮುಸ್ಲಿಂ ವೈಯಕ್ತಿಕ ಕಾನೂನುಗಳು ಅನ್ವಯವಾಗುತ್ತವೆ. ಭಾರತೀಯ ಉತ್ತರಾಧಿಕಾರ ಕಾಯ್ದೆಯ ಪೂರ್ತಿ ನಾಲ್ಕನೇ ಭಾಗವು ಟೆಸ್ಟಾ ಮೆಂಟರಿ ಅಥವಾ ಉಯಿಲಿನ ಮೂಲಕದ ಉತ್ತರಾಧಿಕಾರದ ಕುರಿತಾಗಿಯೇ ಇದೆ. ವಿವಿಧ ಪ್ರಕಾರದ ಉಯಿಲುಗಳು ಕಾಯ್ದೆಯಲ್ಲಿ ಇದ್ದರೂ ‘ವಿಶೇಷ’ ಮತ್ತು ‘ಸಾಮಾನ್ಯ’ ಉಯಿಲುಗಳು ಹೆಚ್ಚು ಚಾಲ್ತಿ ಯಲ್ಲಿವೆ.

65 ಮತ್ತು 66ನೇ ಕಲಮುಗಳ ಪ್ರಕಾರ, ಭೂಸೈನಿಕರಿಗೆ, ನೌಕಾಪಡೆ ಮತ್ತು ವಾಯುಪಡೆಯ ಯೋಧ ರಿಗೆ ಯಾವುದೇ ಕ್ಷಣದಲ್ಲಿ ಸಾವು ಸಂಭವಿಸಬಹುದಾದ್ದರಿಂದ, ಅಂಥ ಸಂದರ್ಭಗಳಲ್ಲಿ ಸಹಿ, ಸಾಕ್ಷಿ ಮುಂತಾದ ಸಂಕೀರ್ಣ ಪ್ರಕ್ರಿಯೆಗಳಿಲ್ಲದೆ ತಾವೇ ಬರೆದ ಅಥವಾ ಇತರರಿಂದ ಬರೆಯಿಸಿದ ಅಥವಾ ಇಬ್ಬರು ಜತೆಗಾರರ ಸಮಕ್ಷಮ ಬಾಯಿಮಾತಿನ ಮೂಲಕ ವ್ಯಕ್ತಪಡಿಸಿದ ಇಚ್ಛೆಗೆ ‘ವಿಶೇಷ ಉಯಿಲು’ ಎಂದು ಕಾನೂನಿನ ಸಿಂಧುತ್ವ ಒದಗಿಸಲಾಗಿದೆ.

63ನೇ ಕಲಮಿನನ್ವಯ ಸಾಮಾನ್ಯ ಉಯಿಲಿಗೆ ಕೂಡಾ ಯಾವುದೇ ನಿರ್ದಿಷ್ಟ ನಮೂನೆ ಅಥವಾ ಕಾನೂನು ಭಾಷೆಯ ಬರವಣಿಗೆಯ ಅವಶ್ಯಕತೆ ಇಲ್ಲ. ತಮ್ಮ ಆಸ್ತಿಗಳು ಯಾರ‍್ಯಾರಿಗೆ ಸೇರಬೇಕು ಎಂದು ವಿವರಿಸಿ ಬರೆದ, ಬರೆಯಿಸಿದ ಅಥವಾ ಟೈಪ್ ಮಾಡಿದ ಉಯಿಲಿಗೆ, ಉಯಿಲು ಮಾಡುವ ವ್ಯಕ್ತಿಯು ತಾವೇ ಸಹಿ ಅಥವಾ ಗುರುತು ಹಾಕಬಹುದು ಅಥವಾ ಅವರ ಸಮಕ್ಷಮ ಮತ್ತು ಅವರ ಆದೇಶದಂತೆ ಇನ್ನೊಬ್ಬರು ಕೂಡ ಸಹಿ ಅಥವಾ ಗುರುತು ಹಾಕಬಹುದು.

ಅಂಥ ಸಹಿ ಅಥವಾ ಗುರುತನ್ನು, ಆ ಉಯಿಲನ್ನು ಮಾಡುವ ಉದ್ದೇಶದಿಂದ ಹಾಕಿರಬೇಕು. ಉಯಿಲು ಮಾಡುವ ವ್ಯಕ್ತಿಯು ಉಯಿಲಿನ ಮೇಲೆ ಸಹಿ ಅಥವಾ ಗುರುತು ಮಾಡಿದ್ದನ್ನು ಅಥವಾ ಮಾಡಿಸಿದ್ದನ್ನು ಸ್ವತಃ ನೋಡಿದ ಕನಿಷ್ಠ ಇಬ್ಬರು ವ್ಯಕ್ತಿಗಳ ‘ಸಾಕ್ಷಿ ಸಹಿ’ ಅಗತ್ಯ. ಉಯಿಲು ಬರೆಯುವಾತನಿಗೆ 18 ವರ್ಷಕ್ಕಿಂತ ಹೆಚ್ಚಿನ ವಯಸ್ಸಾಗಿರಬೇಕು.

ಮಾನಸಿಕ ಅಸ್ವಸ್ಥತೆ, ಗಂಭೀರ ಕಾಯಿಲೆ ಮುಂತಾದ ಕಾರಣದಿಂದ ಕಾಗದ-ಪತ್ರದಲ್ಲಿರುವ ವಿಷಯ ಮತ್ತು ಅದರ ಪರಿಣಾಮಗಳನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯವಿಲ್ಲದವರು ಉಯಿಲು ಬರೆ ಯಲು ಅರ್ಹರಲ್ಲ. ಯಾವುದೇ ಒತ್ತಾಯ ಅಥವಾ ಮುಲಾಜಿಗೆ ಒಳಪಡದೆ ಸ್ವ-ಇಚ್ಛೆಯಿಂದ ಉಯಿಲು ಮಾಡಬೇಕು.

ಮೋಸ, ವಂಚನೆಯಿಂದ ಮಾಡಿಸಲ್ಪಟ್ಟ ಉಯಿಲಿಗೆ ಸಿಂಧುತ್ವವಿಲ್ಲ. ಸ್ವಯಾರ್ಜಿತ ಆಸ್ತಿಗಳನ್ನು ಮಾತ್ರ ಉಯಿಲಿನ ಮೂಲಕ ಹಂಚಿಕೆ ಮಾಡಬಹುದು. ಸಹಜ ವಾರಸುದಾರರ ಪೈಕಿ ಯಾರಿಗಾ ದರೂ ಆಸ್ತಿಯನ್ನು ನೀಡದಿದ್ದಲ್ಲಿ, ಹಾಗೆ ನೀಡದಿರಲು ಸೂಕ್ತ ಕಾರಣವನ್ನು ಬರೆಯುವುದು ಒಳ್ಳೆಯದು.

ಉಯಿಲಿನಲ್ಲಿ ಎಲ್ಲಾ ಆಸ್ತಿಗಳ ವಿವರವನ್ನು ದಾಖಲಿಸುವುದರಿಂದ, ಆ ಕುರಿತು ವಾರಸುದಾರರಿಗೆ ಪೂರ್ತಿ ಮಾಹಿತಿ ಲಭಿಸಿದಂತಾಗುತ್ತದೆ. ಮುಸಲ್ಮಾನನೊಬ್ಬ ತನ್ನ ಸಾಲ ಮತ್ತು ಅಂತ್ಯಕ್ರಿಯೆಯ ವೆಚ್ಚಗಳನ್ನು ಕಳೆದು ಉಳಿಯುವ ಆಸ್ತಿಯ ೩ನೇ ಒಂದು ಭಾಗಕ್ಕಿಂತ ಹೆಚ್ಚಿನದನ್ನು ವಿಲ್ ಮಾಡುವುದಿದ್ದಲ್ಲಿ, ಉಳಿದ ವಾರಸುದಾರರ ಒಪ್ಪಿಗೆ

ಅಗತ್ಯ. ಆದರೆ ಈ ನಿಯಮ ಖೋಜಾ ಮುಸ್ಲಿಮರಿಗೆ ಮತ್ತು ಭಾರತೀಯ ವಿವಾಹ ಕಾಯ್ದೆಯಡಿ ವಿವಾಹವಾದ ಮುಸ್ಲಿಮರಿಗೆ ಅನ್ವಯಿಸುವುದಿಲ್ಲ. ಮೌಖಿಕ ಉಯಿಲಿಗೆ ಕೂಡ ಮುಸ್ಲಿಂ ಕಾಯ್ದೆ ಯಲ್ಲಿ ಮಾನ್ಯತೆ ಇದೆ. ಉಯಿಲು ಬರೆಯುವಾಗ, ಆಸ್ತಿಗಳು ಮತ್ತು ಫಲಾನುಭವಿಗಳ ಕುರಿತು ಸ್ಪಷ್ಟ ವಿವರಣೆ ಅಗತ್ಯ. ಉದಾಹರಣೆಗೆ, ‘ನನ್ನ ಎರಡನೇ ಮಗ ಶಂಕರ’ ಎಂದು ಬರೆದಿದ್ದು, ಎರಡನೇ ಮಗನ ಹೆಸರು ಶಂಭು ಆಗಿದ್ದರೆ ಮತ್ತು ಶಂಕರ ಎಂಬ ಇನ್ನೊಬ್ಬ ಮಗ ಇದ್ದರೆ ಅಥವಾ ‘ಊರ ಹೊರಗಿನ ಕೆರೆಯ ಅಂಚಿನಲ್ಲಿರುವ ತೋಟ’ ಎಂದು ಬರೆದಿದ್ದು ಅಲ್ಲಿ ಈಗ ಕೆರೆ ಇಲ್ಲದಿದ್ದರೆ ಅಥವಾ ಈಗ ಅದರಾಚೆಗೂ ಊರು ಬೆಳೆದಿದ್ದರೆ ಗೊಂದಲವಾಗುತ್ತದೆ.

ಇಂಥ ಅನೇಕ ಗೊಂದಲಮಯ ಸನ್ನಿವೇಶಗಳ ಕುರಿತು ಕಾಯ್ದೆಯಲ್ಲಿ ವಿವರಣೆ ಮತ್ತು ಉದಾ ಹರಣೆಗಳಿವೆ. ಆಸ್ತಿಗಳ ಸರ್ವೇಸಂಖ್ಯೆ, ಕ್ಷೇತ್ರಫಲ ಮುಂತಾದ ವಿವರಗಳು ಮತ್ತು ಫಲಾನುಭವಿಗಳ ಹೆಸರು, ವಿಳಾಸ ಮುಂತಾದವುಗಳ ಕುರಿತು ಸ್ಪಷ್ಟತೆ ಇರಬೇಕು. ಪುಟಗಳ ಅಕ್ರಮ ಬದಲಾವಣೆ ತಡೆಯಲು, ಉಯಿಲು ಮಾಡುವವರು ಮತ್ತು ಸಾಕ್ಷಿದಾರರು ಎಲ್ಲಾ ಪುಟಗಳ ಮೇಲೆ ಸಹಿ ಮಾಡುವುದು ಒಳ್ಳೆಯದು.

ಉಯಿಲಿನ ರದ್ದತಿ ಅಥವಾ ತಿದ್ದುಪಡಿ: ತನ್ನ ಮರಣದ ಮೊದಲು ಉಯಿಲನ್ನು ನಾಶಮಾಡುವ ಇಲ್ಲವೇ ರದ್ದತಿ ಪತ್ರದ ಮೂಲಕ ಅದನ್ನು ರದ್ದುಮಾಡುವ ಅಧಿಕಾರವು ಉಯಿಲು ಬರೆದಾತನಿಗೆ ಇದೆ. ‘ಕೊಡಿಸಿಲ್’ ಎಂದು ಕರೆಯಲ್ಪಡುವ ಅನುಬಂಧದ ಮೂಲಕ ಉಯಿಲನ್ನು ಭಾಗಶಃ ತಿದ್ದು ಪಡಿ ಮಾಡಬಹುದು. ಮೂಲ ಉಯಿಲು ನೋಂದಣಿಯಾಗಿದ್ದರೆ, ಕೊಡಿಸಿಲ್ ಕೂಡ ನೋಂದಣಿ ಯಾಗಬೇಕಾಗುತ್ತದೆ. ಪೂರ್ತಿ ಬದಲು ಮಾಡುವುದಾದಲ್ಲಿ ಹೊಸ ಉಯಿಲು ಬರೆಯುವುದು ಉತ್ತಮ. ಕಟ್ಟಕಡೆಯ ಉಯಿಲು ನೋಂದಣಿಯಾಗದಿದ್ದರೂ ಊರ್ಜಿತವಾಗಿರುತ್ತದೆ. ಅವಿವಾಹಿತ ಮಾಡಿದ ಉಯಿಲು, ಆತ ವಿವಾಹವಾದ ಕೂಡಲೇ ರದ್ದಾಗುತ್ತದೆ.

ಉಯಿಲಿನ ನೋಂದಣಿ: ನೋಂದಣಿ ಕಾಯ್ದೆ, ಸ್ಥಿರಾಸ್ತಿ ವರ್ಗಾವಣಾ ಕಾಯ್ದೆ ಅಥವಾ ಉತ್ತರಾಧಿ ಕಾರ ಕಾಯ್ದೆಗಳಡಿ ಉಯಿಲನ್ನು ಸ್ಟ್ಯಾಂಪ್ ಕಾಗದದ ಮೇಲೆ ಬರೆಯಬೇಕಾಗಿಲ್ಲ ಮತ್ತು ನೋಂದಣಿ ಕಡ್ಡಾಯವಲ್ಲ.

ಆದರೆ ಉಯಿಲು ನೋಂದಣಿಯಾದರೆ ಅದನ್ನು ಅಕ್ರಮವಾಗಿ ತಿದ್ದಲು ಅಥವಾ ಬದಲು ಮಾಡಲು ಸಾಧ್ಯವಿಲ್ಲವಾದ್ದರಿಂದ, ಅದು ಹೆಚ್ಚು ವಿಶ್ವಾಸಾರ್ಹ. ಅಂಥ ಉಯಿಲು ಯಾವುದೇ ಕಾರಣಕ್ಕೆ ನಾಶ ವಾದರೆ ಅಥವಾ ಕಳೆದುಹೋದರೆ, ದೃಢೀಕೃತ ಪ್ರತಿಯನ್ನು ಪಡೆಯಬಹುದು. ಉಯಿಲು ಮಾಡು ವವ ಇಚ್ಛಿಸಿದರೆ, ಉಯಿಲನ್ನು ಜಿಲ್ಲಾ ನಿಬಂಧಕರ ಕಚೇರಿಯಲ್ಲಿ ಮುಚ್ಚಿದ ಲಕೋಟೆಯಲ್ಲಿ ಗೌಪ್ಯವಾಗಿ ಲಾಕರ್‌ನಲ್ಲಿ ಇಡಬಹುದು (ನೋಂದಣಿ ಕಾಯ್ದೆ ಕಲಮು 42-46). ಉಯಿಲು ಮಾಡಿದ ವನ ಮರಣಾನಂತರ ಅರ್ಜಿದಾರರ ಸಮಕ್ಷಮ ಅದನ್ನು ತೆರೆದು ಉಯಿಲಿನ ದೃಢೀಕೃತ ಪ್ರತಿ ಯನ್ನು ಕೊಡಲಾಗುವುದು ಮತ್ತು ಮೂಲಪ್ರತಿಯನ್ನು ಪುನಃ ಲಾಕರ್‌ನಲ್ಲಿ ಇಡಲಾಗುವುದು.

ನಾಮಿನೇಷನ್ ಮತ್ತು ವಿಲ್: ವಿಮಾ ಪಾಲಿಸಿಗಳು ಮತ್ತು ಬ್ಯಾಂಕುಗಳಲ್ಲಿರುವ ಠೇವಣಿ, ಲಾಕರ್ ಮುಂತಾದವುಗಳಿಗೆ ಮಾಡಲಾಗುವ ನಾಮಿನೇಷನ್, ಉಯಿಲಿಗೆ ಪರ್ಯಾಯವಲ್ಲ. ನಾಮಿನೇಷನ್ ಎಂಬುದು ಉತ್ತರಾಧಿಕಾರದ ಹಕ್ಕನ್ನು ನೀಡುವುದಿಲ್ಲ. ನಾಮಿನಿಯು ಹಣ ಪಡೆಯಲು ಉತ್ತರಾಧಿ ಕಾರಿಗಳ ಪ್ರತಿನಿಧಿಯಾಗಿರುತ್ತಾನೆ ಮತ್ತು ನಾಮಿನೇಷನ್ ಮೂಲಕ ತಾನು ಪಡೆದ ಹಣವನ್ನು ನಿಜವಾದ ಉತ್ತರಾಧಿಕಾರಿಗಳಿಗೆ ವಿತರಿಸಲು ಬಾಧ್ಯಸ್ಥನಾಗಿರುತ್ತಾನೆ. ನಾಮಿನೇಷನ್ ಮತ್ತು ಉಯಿ ಲುಗಳ ನಡುವೆ ಒಂದೊಮ್ಮೆ ವೈರುಧ್ಯವಿದ್ದರೆ, ಬ್ಯಾಂಕು ನಾಮಿನಿಗೇ ಹಣ ನೀಡಿದರೂ ಅಂತಿಮವಾಗಿ ಉಯಿಲಿನ ಪ್ರಕಾರವೇ ಹಂಚಿಕೆಯಾಗಬೇಕು.

ಉಯಿಲಿನ ಪ್ರೊಬೇಟ್: ವಿಶೇಷವಾಗಿ ಸ್ಥಿರಾಸ್ತಿಗಳಿಗೆ ಸಂಬಂಧಿಸಿದಂತೆ ಯಾವುದೇ ಉಯಿಲನ್ನು ಜಾರಿಗೊಳಿಸಲು ಅದನ್ನು ನ್ಯಾಯಾಲಯದಿಂದ ದೃಢೀಕರಣಗೊಳಿಸುವುದು ಅಗತ್ಯ. ಈ ಪ್ರಕ್ರಿಯೆಗೆ ಪ್ರೊಬೇಟ್ ಎನ್ನುತ್ತಾರೆ. ಪ್ರೊಬೇಟ್ ಪಡೆಯಲು ಉಯಿಲಿನಲ್ಲಿ ಹೆಸರಿಸಿದ ನಿರ್ವಾಹಕರು ಅಥವಾ ಹಾಗೆ ಹೆಸರಿಸದಿದ್ದಲ್ಲಿ ಉಯಿಲಿನ ಫಲಾನುಭವಿಗಳು ಸಂಬಂಧಿಸಿದ ನ್ಯಾಯಾಲಯಕ್ಕೆ ಉಯಿಲಿನ ಮೂಲಪ್ರತಿ, ಉಯಿಲು ಮಾಡಿದವನ ಮರಣ ದಾಖಲೆಗಳ ಜತೆಗೆ ಅರ್ಜಿ ಸಲ್ಲಿಸಬೇಕು.

ಸಲ್ಲಿಸಲಾದ ಉಯಿಲು ಮೃತನ ಕಟ್ಟಕಡೆಯ ಉಯಿಲು ಎಂಬುದನ್ನು ದೃಢೀಕರಿಸಬೇಕು. ಸಂಬಂ ಧಿಸಿದ ಎಲ್ಲರಿಗೂ ಕೋರ್ಟು ನೋಟಿಸ್ ನೀಡುತ್ತದೆ ಮತ್ತು ಉಯಿಲನ್ನು ಪ್ರಕಟಿಸಲು ಆದೇಶಿ ಸುತ್ತದೆ. ಯಾವುದೇ ಆಕ್ಷೇಪಣೆ ಬರದಿದ್ದಲ್ಲಿ ಉಯಿಲಿನ ಸಿಂಧುತ್ವವನ್ನು ದೃಢೀಕರಿಸಿ, ಅದರ ಪ್ರತಿ ಯನ್ನು ಕೋರ್ಟಿನ ಮುದ್ರೆಯೊಂದಿಗೆ ನೀಡಲಾಗುವುದು. ಆಕ್ಷೇಪಣೆಗಳು ಬಂದಲ್ಲಿ ಸದರಿ ಅರ್ಜಿ ಯು ಮೂಲದಾವೆಯಾಗಿ ಬದಲಾಗುವುದು. ವಾದ-ಪ್ರತಿ ವಾದಗಳು, ಸಾಕ್ಷ್ಯ-ಪುರಾವೆಗಳ ಆಧಾರ ದಲ್ಲಿ ನ್ಯಾಯಾಲಯವು ಅಂತಿಮವಾಗಿ ಡಿಕ್ರಿಯನ್ನು ನೀಡುತ್ತದೆ.

ಮೋಸ-ವಂಚನೆಯಿಂದ ಅಥವಾ ಬೆದರಿಸಿ ಬರೆಸಿದ ಉಯಿಲು: ಉತ್ತರಾಧಿಕಾರ ಕಾಯ್ದೆಯ 61ನೇ ಕಲಮಿನ ಪ್ರಕಾರ, ಮೋಸ-ವಂಚನೆಯ ಮೂಲಕ ಅಥವಾ ಬೆದರಿಸಿ ಪಡೆದ ಉಯಿಲು ಅಸಿಂಧುವಾಗುತ್ತದೆ. ಇತರ ದಸ್ತಾವೇಜುಗಳು ಮತ್ತು ಉಯಿಲಿನ ನಡುವೆ ಇರುವ ಮುಖ್ಯ ವ್ಯತ್ಯಾಸ ವೆಂದರೆ, ಉಯಿಲು ಅದನ್ನು ಬರೆದವನ ಮರಣಾನಂತರವೇ ಜಾರಿಯಾಗುತ್ತದೆ. ಶಿವನ ಪಾದ ಸೇರಿದವ ಬಂದು ಸಾಕ್ಷ್ಯ ಹೇಳಲು ಸಾಧ್ಯವಿಲ್ಲ.

ಇಲ್ಲಿ ಸಾಕ್ಷಿದಾರರ ಸಾಕ್ಷ್ಯವೇ ಆಧಾರವಾಗುವುದರಿಂದ, ನಂಬಿಕಸ್ಥ ವ್ಯಕ್ತಿಗಳ ‘ಸಾಕ್ಷಿಸಹಿ’ ಹಾಕಿಸ ಬೇಕು. ಉಯಿಲು ಮಾಡಿದವನ ಮರಣದ ನಂತರವೂ ಈ ವ್ಯಕ್ತಿಗಳು ಬದುಕಿರುವಂತಿರಬೇಕು. ಸಾಮಾನ್ಯವಾಗಿ, ಉಯಿಲು ಮಾಡಿದವನ ಮತ್ತು ಸಾಕ್ಷಿದಾರರ ಸಹಿಗಳು ನಿಜವೆಂದು ಸಾಬೀತಾದರೆ, ಅಂಥ ಉಯಿಲು ‘ಸಾಚಾ’ ಎಂದು ಪರಿಗಣಿಸಲ್ಪಡುತ್ತದೆ; ಅದು ‘ನಕಲಿ’ ಅಥವಾ ‘ಮೋಸದಿಂದ ಪಡೆದದ್ದು’ ಎಂಬುದನ್ನು ಸಾಬೀತುಪಡಿಸುವ ಹೊಣೆ ಪ್ರತಿವಾದಿಗೆ ಸೇರಿದ್ದು. ಆದರೆ, ಸಂಶಯಾ ಸ್ಪದ ಎನಿಸಬಹುದಾದ ಸಂದರ್ಭಗಳು ಕಂಡುಬಂದಲ್ಲಿ, ಹಾಜರುಪಡಿಸಿದವರು ಉಯಿಲನ್ನು ‘ಸಾಚಾ’ ಎಂದು ಸಾಬೀತುಪಡಿಸಬೇಕಾಗುತ್ತದೆ.

ಎಚ್.ವೆಂಕಟಾಚಲ ಅಯ್ಯಂಗಾರ್ ವರ್ಸಸ್ ಬಿ.ಎನ್.ತಿಮ್ಮಾಜಮ್ಮ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪು ನ್ಯಾಯಾಂಗದ ದಕ್ಷತೆಯ ಮೇಲಿನ ಗೌರವವನ್ನು ನೂರ್ಮಡಿಗೊಳಿಸು ವಂತಿದೆ. ಈ ಪ್ರಕರಣದಲ್ಲಿ, ಕೆಳ ನ್ಯಾಯಾಲಯಗಳು ಉಯಿಲನ್ನು ‘ಸಾಚಾ’ ಎಂದು ಪರಿಗಣಿಸಿ ದರೂ, ಸರ್ವೋಚ್ಚ ನ್ಯಾಯಾಲಯವು ವ್ಯತಿರಿಕ್ತ ತೀರ್ಪನ್ನು ನೀಡಿತು. ಅತಿ ವಿವರವಾದ ಪೀಠಿಕೆಯ ಪ್ಯಾರಾ, ಉಯಿಲಿನಲ್ಲಿದ್ದ ವಿವರಗಳು ಮತ್ತು ಸಾಕ್ಷ್ಯದ ನಡುವೆ ಇರುವ ಅಸಮತೋಲನ, ಉಯಿಲು ಬರೆದ ವಿವಿಧ ಹಾಳೆಗಳ ಬಣ್ಣಗಳಲ್ಲಿನ ವ್ಯತ್ಯಾಸ, ಕೆಲವು ಹಾಳೆಗಳ ಹಿಂಬದಿಯ ಪುಟದಲ್ಲಿ ಸಹಿ ಇಲ್ಲದಿರುವುದು, ಸಹಿ ಮಾಡಿದ ಜಾಗದಲ್ಲಿನ ವ್ಯತ್ಯಾಸ, ಉಯಿಲಿನ ಮುಖ್ಯ ಫಲಾನುಭವಿಯು ಉಯಿಲನ್ನು ಬರೆಸುವಲ್ಲಿ ತೋರಿದ ಅತೀವ ಆಸಕ್ತಿ ಮುಂತಾದ ಸೂಕ್ಷ್ಮ ವಿಷಯಗಳ ಆಧಾರದಲ್ಲಿ ‘ಸದರಿ ಉಯಿಲು ಮೃತರ ನಿಜವಾದ ಇಚ್ಛೆಯಂತೆ ಬರೆದದ್ದಲ್ಲ’ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿತು.

ಅಲ್ಲದೆ, ಉಯಿಲು ಮಾಡಿದ್ದರೆನ್ನಲಾದ ಮಹಿಳೆಯು ಕಾಯಿಲೆಯಿಂದ ಹಾಸಿಗೆ ಹಿಡಿದಿದ್ದ ಸಂದ ರ್ಭದಲ್ಲಿ ಅಷ್ಟೊಂದು ದೀರ್ಘವಾದ, ಕಾನೂನು ಪರಿಭಾಷೆಯ ಉಯಿಲನ್ನು ಬರೆಯಲು ನಿರ್ದೇ ಶನ ನೀಡುವುದು ಅಥವಾ ಆಕೆಗೆ ಅರ್ಥವಾಗುವಂತೆ ಓದಿ ಹೇಳಿರುವುದು ಅಸಾಧ್ಯ ಎಂದು ಕೋರ್ಟ್ ಅಭಿಪ್ರಾಯಪಟ್ಟಿತು.

ಯಾವುದೇ ವ್ಯಕ್ತಿಯ ಮರಣಾನಂತರ, ಆತನ ಆಸ್ತಿಯ ಹಂಚಿಕೆಯು ಮೃತನ ವಾರಸುದಾರರ ನಡುವೆ ವಿವಾದ, ಗೊಂದಲಗಳಿಲ್ಲದೆ, ಮೃತನ ಇಚ್ಛೆಯಂತೆ ನೆರವೇರಲು ಆರೋಗ್ಯ ಮತ್ತು ಸ್ವಸ್ಥ ಮನಸ್ಸು ಇರುವಾಗಲೇ ನಿಯಮಬದ್ಧವಾದ ಉಯಿಲನ್ನು ಸೂಕ್ತ ನ್ಯಾಯವಾದಿಗಳ ಸಹಾಯ ದಿಂದ ಬರೆದಿಡುವುದು ಅಪೇಕ್ಷಣೀಯ. ಇದರಿಂದಾಗಿ, ನಿಜವಾದ ವಾರಸುದಾರರಲ್ಲದವರಿಂದ ಬರಬಹುದಾದ ವ್ಯಾಜ್ಯಗಳ ಸಾಧ್ಯತೆ ಕೂಡ ಕಡಿಮೆಯಾಗುತ್ತದೆ.

(ಲೇಖಕರು ಕಾನೂನು ತಜ್ಞರು ಮತ್ತು ಕೆವಿಜಿ ಬ್ಯಾಂಕ್‌ನ ನಿವೃತ್ತ ಎಜಿಎಂ)