ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Susan Thomas Column: ಮಹಿಳೆಯರು ಕಾರ್ಯಕ್ಷೇತ್ರದಲ್ಲಿ ತುಮುಲಕ್ಕೆ ಒಡ್ಡಿಕೊಳ್ಳಬೇಕಿಲ್ಲ

ಕಾಲೇಜಿನ ಪ್ರತಿಯೊಂದು ಕಾರ್ಯಕ್ರಮ, ಪ್ರತಿಯೊಂದು ಸಭೆ-ಸಮ್ಮೇಳನ, ಪ್ಯಾನಲ್ ಚರ್ಚೆ, ಪಾಲ್ಗೊಳ್ಳುವ ಪ್ರತಿಯೊಂದು ಪ್ರಸ್ತುತಿ ಹೀಗೆ ಬಹುತೇಕ ಸಂದರ್ಭಗಳಲ್ಲಿ ನನಗೆ ಸ್ಪಷ್ಟವಾಗಿ ಕಾಣ‌ ಬರುವ ಸಂಗತಿಯೆಂದರೆ, ‘ಇಂಥ ಬಾಬತ್ತಿನಲ್ಲಿ ಮಹಿಳೆಯರು ಒಂದಿಷ್ಟು ಹೆಚ್ಚುವರಿ ಕಸರತ್ತುಗಳನ್ನು ಮಾಡುತ್ತಾರೆ’ ಎಂಬುದು.

ಮಹಿಳೆಯರು ಕಾರ್ಯಕ್ಷೇತ್ರದಲ್ಲಿ ತುಮುಲಕ್ಕೆ ಒಡ್ಡಿಕೊಳ್ಳಬೇಕಿಲ್ಲ

-

Profile
Ashok Nayak Mar 29, 2026 8:39 AM

ಹೊರಸೂಸುವ ಮನ

ಸುಸಾನ್‌ ಥಾಮಸ್

ಯಾವುದೇ ಹಬ್ಬ-ಹರಿದಿನಗಳು, ಸಮಾರಂಭಗಳು ಬರಲಿ ಅಲ್ಲಿ ಮಹಿಳೆಯರ ಪರಿಶ್ರಮ ವಿರಲೇಬೇಕು; ಮೇಜಿನ ಮೇಲಿನ ನ್ಯಾಪ್‌ಕಿನ್‌ಗಳನ್ನು ಸೂಕ್ತ ಶೈಲಿಯಲ್ಲಿ ಅಲಂಕರಿಸಿರ ಬೇಕು, ಟೊಮೇಟೋಗಳನ್ನು ರೋಸೆಟ್‌ಗಳಾಗಿ ಕತ್ತರಿಸಿ ಹೋಳು ಮಾಡಿರಬೇಕು ಹೀಗೆ ನಿರೀಕ್ಷೆಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಮತ್ತೊಂದೆಡೆ, ನಮ್ಮಲ್ಲಿ ಎದ್ದು ಕಾಣು ವಂತಿರುವ ನ್ಯೂನತೆಗಳನ್ನು ನೆನಪಿಸುವುದೂ ನಮ್ಮ ಸುತ್ತಮುತ್ತಲಿನ ಮಹಿಳೆಯರೇ ಆಗಿರುತ್ತಾರೆ!

ನನ್ನ ಅಜ್ಜಿಯರು, ಚಿಕ್ಕಮ್ಮ-ದೊಡ್ಡಮ್ಮಂದಿರು, ಹಿರಿಯ ಸಹೋದ್ಯೋಗಿಗಳು ಮತ್ತು ಗೆಳತಿಯರು ಹೀಗೆ ನನ್ನ ಸುತ್ತಮುತ್ತಲಿನ ಮಹಿಳೆಯರಿಂದ ನಾನು ಸಾಕಷ್ಟು ಕಲಿತಿರುವೆ. ಇಂದು ಬೋರ್ಡ್ ರೂಮ್, ಪೌಡರ್ ರೂಮ್, ಡ್ರಾಯಿಂಗ್ ರೂಮ್‌ಗಳಲ್ಲಿ ಕಾಣಿಸಿಕೊಳ್ಳುವ ಓರ್ವ ಹಿರಿಯ ಮಹಿಳೆ ಯಾಗಿ, ಯುವತಿಯರಿಗೆ ಒಂದು ಸರಳ ಮಂತ್ರವನ್ನು ತಿಳಿಸಲು ನಾನು ಬಯಸುತ್ತೇನೆ.

ಅದೇನೆಂದರೆ, ನಾನು ಇದುವರೆಗೂ ಕಲಿತದ್ದೆಲ್ಲವೂ ವಾಡಿಕೆಯ ಮಾರ್ಗದಲ್ಲಿ ಅಲ್ಲ, ಬದಲಿಗೆ ನಿಖರವಾಗಿ ಅದರ ವಿರುದ್ಧದ ಮಾರ್ಗದಲ್ಲಿ. ಅದೆಂದರೆ, ‘ನಮ್ಮ ಮಾತು, ಚಹರೆ, ವರ್ತನೆಗಳು ಇನ್ನೊಬ್ಬರ ಮೇಲೆ ಪ್ರಭಾವ ಬೀರುವಂತಿರಬೇಕು’ ಎಂಬಂಥ ನಿರಂತರ ಆಗ್ರಹ ಅಥವಾ ನಿರೀಕ್ಷೆ ಯಿಂದ ಹೊರಬರಬೇಕು ಎಂಬುದು. ಯಾರನ್ನೋ ಮೆಚ್ಚಿಸಬೇಕು ಎಂಬ ಗ್ರಹಿಕೆಯಲ್ಲಿ ಎಂತೆಂಥ ದೋ ಲೇಪಗಳನ್ನು ಚರ್ಮದ ಮೇಲೆ ಮೆತ್ತಿಕೊಂಡು ಗಂಟೆಗಟ್ಟಲೆ ತೋಯಿಸಿಕೊಂಡು ಕೂರಬೇಡಿ.

’‘ನೀವು ಧರಿಸುವ ಪ್ರತಿಯೊಂದು ಉಡುಗೆ-ತೊಡುಗೆಯೂ ಪರಸ್ಪರ ಹೊಂದಿಕೆಯಾಗುವಂತಿ ರಬೇಕು, ನಿಮ್ಮ ಪ್ರತಿಯೊಂದು ಅರ್ಜಿ ಅಥವಾ ಕಾಗದಪತ್ರವನ್ನೂ ಇದುವರೆಗೂ ಯಾರೂ ನೋಡಿ ರದ ಅಕ್ಷರ ವಿನ್ಯಾಸದಲ್ಲಿ (ಆಂದರೆ ಫಾಂಟ್‌ಗಳಲ್ಲಿ) ರೂಪಿಸಬೇಕು ಮತ್ತು ನೀವು ಉಣ್ಣುವ ಪ್ರತಿಯೊಂದು ತಿಂಡಿ-ತಿನಿಸು, ಊಟವೂ ಸಾಕಷ್ಟು ಅಲಂಕಾರಿಕವಾಗಿರಬೇಕು" ಎಂದು ನಿಮಗೆ ಯಾರಾದರೂ ಹೇಳಿದ್ದರೆ, ಅಂಥ ಕಸರತ್ತುಗಳನ್ನು ತಕ್ಷಣವೇ ಬಿಟ್ಟುಬಿಡಿ.

ಪರಿಪೂರ್ಣತೆಯ ಹುಕಿಯನ್ನು ಕೈಬಿಟ್ಟು, ನಿಮ್ಮನ್ನು ನೀವು ಸರಿಪಡಿಸಿಕೊಳ್ಳಲೆಂದು ನಿಮ್ಮ ದೈಹಿಕ-ಮಾನಸಿಕ ವ್ಯವಸ್ಥೆಯನ್ನು ರೀಬೂಟ್ ಮಾಡಿಕೊಳ್ಳಿ. ಮತ್ತಾರನ್ನೋ ಮೆಚ್ಚಿಸಬೇಕು ಎಂಬ ಹರಸಾಹಸದ ಬಲಿಪಶುವಾಗುವ ಬದಲು, ನಿಮಗೆ ಇಷ್ಟವಾಗುವ ರೀತಿಯಲ್ಲಿ ಹಗುರವಾದ ಮತ್ತು ಸರಾಗವಾದ ಅನುಭವವನ್ನು ನೀಡುವಂಥ ಉಡುಪನ್ನು ಧರಿಸಿ.

ಇದನ್ನೂ ಓದಿ: ‌Susan Thomas: ಬೆಂಬಿಡದೆ ಕಾಡುವ ಸವಿರುಚಿಯ ಗುಂಗು

ಕಾಲೇಜಿನ ಪ್ರತಿಯೊಂದು ಕಾರ್ಯಕ್ರಮ, ಪ್ರತಿಯೊಂದು ಸಭೆ-ಸಮ್ಮೇಳನ, ಪ್ಯಾನಲ್ ಚರ್ಚೆ, ಪಾಲ್ಗೊಳ್ಳುವ ಪ್ರತಿಯೊಂದು ಪ್ರಸ್ತುತಿ ಹೀಗೆ ಬಹುತೇಕ ಸಂದರ್ಭಗಳಲ್ಲಿ ನನಗೆ ಸ್ಪಷ್ಟವಾಗಿ ಕಾಣ ಬರುವ ಸಂಗತಿಯೆಂದರೆ, ‘ಇಂಥ ಬಾಬತ್ತಿನಲ್ಲಿ ಮಹಿಳೆಯರು ಒಂದಿಷ್ಟು ಹೆಚ್ಚುವರಿ ಕಸರತ್ತು ಗಳನ್ನು ಮಾಡುತ್ತಾರೆ’ ಎಂಬುದು.

ಭಾವನೆಗಳು, ಸಂಪನ್ಮೂಲಗಳು ಮತ್ತು ಸಮಯವನ್ನು ಹೇರಳವಾಗಿ ವ್ಯಯಿಸುವ ಮೂಲಕ ಅತೀವ ಪ್ರದರ್ಶನಾತ್ಮಕತೆಗೆ ಒಡ್ಡಿಕೊಂಡು ಮಹಿಳೆಯರು ಮತ್ತೊಬ್ಬರನ್ನು ಪ್ರಭಾವಿಸುತ್ತಾರೆ ಎಂಬು ದೊಂದು ಸ್ಥಾಪಿತ ಗ್ರಹಿಕೆಯಾಗಿದೆ. ಇದಕ್ಕೆ ಪುಷ್ಟಿ ನೀಡುವಂತೆ, ಯೋಜನೆಯ ಪ್ರಸ್ತುತಿಯ ಸಂದರ್ಭದಲ್ಲಿ ‘ಕಿಟನ್ ಹೀಲ್ಸ್’ ಪಾದರಕ್ಷೆಗಳನ್ನು ಧರಿಸಿರುವಿಕೆ, ಪರಿಪೂರ್ಣತೆಯು ಮುಕ್ಕಾಗದ ರೀತಿಯಲ್ಲಿ ಸೀರೆಯನ್ನು ಭರ್ಜರಿಯಾಗಿ ಉಡುವಿಕೆ, ತ್ವಚೆಯು ಥಳಥಳ ಮಿನುಗುತ್ತಿರಬೇಕೆಂಬ ಹಪಹಪಿಯಲ್ಲಿ ತರಹೇವಾರಿ ಕ್ರೀಮುಗಳನ್ನು ಮೆತ್ತಿಕೊಳ್ಳುವಿಕೆ ಹಾಗೂ ಮಾಡಿಕೊಂಡ ಮೇಕಪ್ ಸಾಕಾಗುತ್ತಿಲ್ಲವೇನೋ ಎಂದೇ ಚಿಂತಿಸುತ್ತಿರುವಿಕೆ ಹೀಗೆ ಸಾಗುತ್ತದೆ ಕೆಲ ಮಹಿಳೆಯರ ಇಂಥ ಕಸರತ್ತುಗಳು.

ಯಾವುದೇ ಹಬ್ಬ-ಹರಿದಿನಗಳು, ಸಮಾರಂಭಗಳು ಬರಲಿ ಅಲ್ಲಿ ಮಹಿಳೆಯರ ಪರಿಶ್ರಮ ಮಡು ಗಟ್ಟಿರಲೇಬೇಕು; ಮೇಜಿನ ಮೇಲಿನ ನ್ಯಾಪ್‌ಕಿನ್‌ಗಳನ್ನು ಸೂಕ್ತವಾದ ಶೈಲಿಯಲ್ಲಿ ಅಲಂಕರಿಸಿರ ಬೇಕು, ಟೊಮೇಟೋಗಳನ್ನು ರೋಸೆಟ್‌ಗಳಾಗಿ ಕತ್ತರಿಸಿ ಹೋಳುಮಾಡಿರಬೇಕು ಹೀಗೆ ನಿರೀಕ್ಷೆಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.

ಮತ್ತೊಂದೆಡೆ, ನಮ್ಮಲ್ಲಿ ಎದ್ದುಕಾಣುವಂತಿರುವ ನ್ಯೂನತೆ/ಕೊರತೆಗಳನ್ನು ನೆನಪಿಸುವುದೂ ನಮ್ಮ ಸುತ್ತಮುತ್ತಲಿನ ಮಹಿಳೆಯರೇ. ಒಂದು ವೇಳೆ ಕಣ್ಣಿನ ಹುಬ್ಬುಗಳನ್ನು ಥ್ರೆಡಿಂಗ್ ಮಾಡಿಕೊಳ್ಳ ದಿರುವುದು ಕಂಡಲ್ಲಿ ಅದನ್ನೇ ದಿಟ್ಟಿಸುತ್ತಾ ನೋಡುವವರಿದ್ದಾರೆ ಅಥವಾ ‘ನೀವು ಸಲಾಡನ್ನು ತಯಾರಿಸಿಲ್ಲವೇಕೆ?’ ಎಂದು ದೂರುವವರಿದ್ದಾರೆ.

ಅಂದರೆ, ಯಾವ ಕೆಲಸವು ಅಪೂರ್ಣವಾಗಿದೆಯೇ ಅದರ ಕಡೆಗೆ ಹದ್ದಿನ ಕಣ್ಣು ಬೀರುವುದು ಬಹುತೇಕ ಮಹಿಳೆಯರ ಜಾಯಮಾನ. ಇಲ್ಲಿ ಎದುರಾಗುವ ಅಪಾಯವೆಂದರೆ, ಅನಗತ್ಯವಾದ ಸಣ್ಣಪುಟ್ಟ ವಿಷಯಗಳ ಕಡೆಗೇ ಬೆವರು ಸುರಿಸುತ್ತಾ ಹೋಗುವ ನಾವು, ಆ ಭರಾಟೆಯಲ್ಲಿ ಮಹತ್ತರ ದೃಶ್ಯದ ವೀಕ್ಷಣೆಯನ್ನೇ ತಪ್ಪಿಸಿಕೊಳ್ಳುತ್ತೇವೆ.

ಆದ್ದರಿಂದ, ಇಂಥ ಜಂಜಾಟಗಳಿಗೆ ಒಡ್ಡಿಕೊಳ್ಳುವ ಬದಲು ನಿರಾಳರಾಗಿರಲೆಂದು ಯಾವುದಾದ ರೊಂದು ಆರೋಗ್ಯಕರ ಹವ್ಯಾಸದಲ್ಲಿ ತೊಡಗಿಸಿಕೊಂಡು ಅದರಲ್ಲೇ ಮುಂದುವರಿದರೆ, ನೀವು ಜವಾಬ್ದಾರರಲ್ಲದ ವಿಷಯಗಳಿಗೆ ಸಂಬಂಽಸಿ ತಪ್ಪಿತಸ್ಥ ಭಾವನೆಯನ್ನು ಅನುಭವಿಸುವುದು ತಪ್ಪುತ್ತದೆ.

ಹವ್ಯಾಸದಲ್ಲಿ ತೊಡಗಿಸಿಕೊಂಡಾಗ, ಅದರಲ್ಲಿ ಪರಿಪೂರ್ಣತೆಯನ್ನು ದಕ್ಕಿಸಿಕೊಳ್ಳಲು ಇನ್ನೂ ಎಷ್ಟೊಂದು ಶ್ರಮಪಡುವುದಿದೆ ಎಂಬುದು ನಿಮಗೆ ಅರಿವಾಗಿ, ಕೌಶಲದ ಮತ್ತು ವ್ಯಕ್ತಿತ್ವದ ಔನ್ನತ್ಯಕ್ಕೆ ಅದು ಇಂಬುನೀಡುತ್ತದೆ.

ಭಾರತದಲ್ಲಿ ಮೇಕಪ್ ಸಾಮಗ್ರಿಗಳ ಬ್ರ್ಯಾಂಡ್‌ಗಳು ಇನ್ನಿಲ್ಲದಂತೆ ಹಬ್ಬುತ್ತಿವೆ; ಹೆಚ್ಚುತ್ತಿರುವ ಅಭದ್ರತೆ ಮತ್ತು ಸಾಮಾಜಿಕ ಮಾಧ್ಯಮಗಳಿಂದ ಪ್ರಚೋದಿಸಲ್ಪಟ್ಟಿರುವ ಅವಾಸ್ತವಿಕ ಸೌಂದರ್ಯ ದ ಮಾನದಂಡಗಳಿಗೂ ಈ ಹಬ್ಬುವಿಕೆಗೂ ಸಂಬಂಧವಿದೆ ಎನ್ನಲಡ್ಡಿಯಿಲ್ಲ. ವೃತ್ತಿ ಅಥವಾ ವ್ಯವಹಾರಕ್ಕೆ ಸಂಬಂಧಿಸಿದ ಸಭೆಯೊಂದರ ದಿನಾಂಕವು ನಿಗದಿಯಾಗುತ್ತಿದ್ದಂತೆ, ಆ ದಿನದಂದು ನಮ್ಮ ತಲೆಗೂದಲು ಮಂಕಾಗದಂತೆ ನೋಡಿಕೊಳ್ಳಲು ಏನೆಲ್ಲಾ ಉಪಚಾರವನ್ನು ಮಾಡಿಕೊಳ್ಳ ಬೇಕು ಎಂಬುದರ ಕಡೆಗೇ ಮನಸ್ಸು ತಳಮಳಿಸತೊಡಗುತ್ತದೆ.

ಸಭೆಯಲ್ಲಿ ವಿಷಯ ಸಂಬಂಧವಾಗಿ ನೀಡಬೇಕಾಗುವ ಪ್ರಸ್ತುತಿಗಿಂತ ಇಂಥ ಅಮುಖ್ಯ ವಿಷಯದ ಕಡೆಗೇ ಗಮನಹರಿಸುವಂತಾಗುತ್ತದೆ. ‘ಸೂಪರ್‌ವುಮನ್’ ಎಂಬ ಮಾದರಿಯನ್ನು ನಾವು ತೀರಾ ಗಂಭೀರ ಆಯಾಮದೆಡೆಗೆ ತಿರುಗಿಸಿಬಿಟ್ಟಿದ್ದೇವೆ; ಆದರೆ ನಿಜಾರ್ಥದ ಮನುಷ್ಯರಂತೆ ನಡೆದು ಕೊಳ್ಳಲು ನಮಗೆ ಸಾಕಷ್ಟು ಸಮಯವಿದೆ, ಶಕ್ತಿಯಿದೆ ಮತ್ತು ಚಿಂತನೆಗೆ ಅವಕಾಶವಿದೆ ಎಂಬುದನ್ನೇ ಮರೆತುಬಿಟ್ಟಿದ್ದೇವೆ.

ಕಚೇರಿಯ ಕೆಲಸವನ್ನು ಮುಗಿಸಿಕೊಂಡು ಮುಂಬೈ ಲೋಕಲ್ ಟ್ರೇನುಗಳಲ್ಲಿ ಮನೆಗೆ ಮರಳು ತ್ತಿರುವ ಉದ್ಯೋಗಸ್ಥ ಮಹಿಳೆಯರು ಅಲ್ಲಿಯೇ ತರಕಾರಿಯನ್ನು ಕತ್ತರಿಸಿಕೊಂಡು ಹೋಗುವುದನ್ನು ನೋಡಿದಾಗ, ನಮ್ಮ ‘ಸೂಪರ್‌ಮಾಮ್’ಗಳ ಪರಿಕಲ್ಪನೆಗೆ ಪುಷ್ಟಿ ದೊರಕುತ್ತದೆ ಎನ್ನಬೇಕು.

ಕಚೇರಿಗಳಲ್ಲಿ ಮಹಿಳೆಯರು ಕೆಲಸ ಮಾಡುತ್ತಿರುವಾಗ ಅಲ್ಲಿನ ಸೋಫಾದಲ್ಲಿ ಅವರ ಮಕ್ಕಳು ನಿದ್ರಿಸುತ್ತಿರುವ ಚಿತ್ರಗಳು ಮಹಿಳಾ ಸಬಲೀಕರಣದ ನಿದರ್ಶನಗಳಲ್ಲ, ಬದಲಿಗೆ ಅವು ಸಾಂಸ್ಥಿಕ ವೈಫಲ್ಯದ ಉದಾಹರಣೆಗಳೆನಿಸಿಕೊಳ್ಳುತ್ತವೆ.

ನನ್ನೊಂದಿಗೆ ಕಾರ್ಯ ನಿರ್ವಹಿಸುವ ಸ್ಟೆನೋಗ್ರಾಫರ್ ಒಬ್ಬಾಕೆಯು, ದೆಹಲಿಯಲ್ಲಿ ಕೃತಕ ಬುದ್ಧಿ ಮತ್ತೆ (ಎಐ) ಸಂಬಂಧಿತ ಶೃಂಗಸಭೆಯು ಉದ್ಘಾಟನೆಯಾದ ದಿನದಂದು ಕಚೇರಿಗೆ ಒಂದು ಗಂಟೆ ಯಷ್ಟು ತಡವಾಗಿ ಆಗಮಿಸಿದಾಗ, ಆಕೆಯ ಕಂಗಳು ಕೊಳಗಳೇ ಆಗಿ ಬಿಟ್ಟಿದ್ದವು; ‘ಕರ್ತವ್ಯದ ನಿಭಾವಣೆಯಲ್ಲಿ ನಾನು ವಿಫಲಳಾದೆ’ ಎಂಬ ಅಪರಾಧಿ ಭಾವನೆಯೇ ಅದಕ್ಕೆ ಕಾರಣವಾಗಿತ್ತು.

ಆದರೆ, ಆಕೆಯ ಪುರುಷ ಸಹೋದ್ಯೋಗಿಯು ಮಾರ್ಗಮಧ್ಯದಲ್ಲಿ ತನಗೆ ಒದಗಿದ ಸಂಚಾರ ದಟ್ಟಣೆ ಮತ್ತು ಸಾರಿಗೆ ವ್ಯವಸ್ಥೆಯಲ್ಲಿನ ಅಡಚಣೆಗಳ ಕುರಿತು ದೂಷಿಸುತ್ತಲೇ ಕಚೇರಿಯ ಒಳಗೆ ಹೆಜ್ಜೆಯಿಡುತ್ತಾ ಬಂದರು. ಮಹಿಳೆಯರು ಬೇಗನೆ ದೂಷಣೆಗೆ ಒಳಗಾಗುತ್ತಾರೆ ಅಥವಾ ಆರೋಪ ವನ್ನು ಹೊತ್ತುಕೊಳ್ಳುತ್ತಾರೆ ಹಾಗೂ ಈ ಸಂಬಂಧವಾಗಿ ಅತಿಯಾಗಿ ವಿವರಿಸಲು ಮುಂದಾಗುತ್ತಾರೆ.

ಆದರೆ, ಮತ್ತೊಂದು ಬದಿಯಲ್ಲಿದ್ದು ಈ ಚಟುವಟಿಕೆಗಳನ್ನೆಲ್ಲ ಗಮನಿಸುವ ಹಿರಿಯ ಮಹಿಳೆಯಾದ ನಾನು, ನನ್ನ ಸುತ್ತಮುತ್ತಲೂ ಕಾರ್ಯನಿರ್ವಹಿಸುವ ಮಹಿಳೆಯರಿಗಾಗಿ ನಿಯಮಗಳಲ್ಲಿ ಒಂದಿಷ್ಟು ಸಡಿಲಿಕೆಯನ್ನು ನೀಡುವುದುಂಟು.

“ನಿಮ್ಮ ಉಡುಪಿಗೆ ಈ ದುಪ್ಪಟ್ಟಾ ಏಕೆ ಹೊಂದಿಕೆಯಾಗುತ್ತಿಲ್ಲ? ಇವತ್ತೇಕೆ ನೀವು ಕಣ್ಣಿಗೆ ಕಾಡಿಗೆ ಹಚ್ಚಿಕೊಂಡು ಬಂದಿಲ್ಲ" ಅಂತೆಲ್ಲಾ ನಾನು ಯಾರನ್ನೂ ಪ್ರಶ್ನಿಸಲು ಹೋಗುವುದಿಲ್ಲ. ಪೋಷಕರಿಗೆ ಮಕ್ಕಳಿಂದ ಅಡಚಣೆಗಳು ಒದಗುವುದು ಸರ್ವೇಸಾಮಾನ್ಯವಾದ ಸಂಗತಿ ಎಂಬುದು ನನಗೆ ಗೊತ್ತಿದೆ.

ನಾನಾಗಲೀ ಅಥವಾ ನನ್ನಂಥ ಮತ್ತೊಬ್ಬ ಮಹಿಳೆಯಾಗಲೀ ಪ್ರತಿಯೊಂದು ಅರ್ಜಿ ನಮೂನೆ ಯಲ್ಲೂ ಉಲ್ಲೇಖಿಸಿರುವ ‘ಲಿಂಗ’ ಎಂಬ ವಿಭಾಗದಲ್ಲಿ ‘ಮಹಿಳೆ’ ಎಂದೇ ಬರೆಯಬೇಕಾಗುವು ದರಿಂದ, ಮತ್ತೊಬ್ಬ ಮಹಿಳೆಯ ಮುಖದಲ್ಲಿನ ಮೊಡವೆಗಳ ಬಗ್ಗೆಯಾಗಲೀ ಅಥವಾ ಆಕೆ ಯಾವಾಗ ಮಕ್ಕಳನ್ನು ಮಾಡಿಕೊಳ್ಳಲಿದ್ದಾಳೆ ಎಂಬುದರ ಬಗ್ಗೆಯಾಗಲಿ ನಾನು ಕಮೆಂಟ್ ಮಾಡಲು ಹೋಗಬಾರದು; ಇದು ಇತರ ಮಹಿಳೆಯರ ವಿಷಯದಲ್ಲಿ ನಾನು ತಳೆಯುವ ಧೋರಣೆ.

ಕಚೇರಿಯಲ್ಲಿನ ಓರ್ವ ಹಿರಿಯ ಮಹಿಳೆಯಾಗಿ ನಾನು ಕಿರಿಯರಿಗೆ ಹೇಳಲು ಬಯಸುವುದೇನೆಂದರೆ- ಇಲ್ಲಿ ‘ನೈತಿಕ ಬೆಂಗಾಡು’ ಎನ್ನುವಂಥದ್ದೇನೂ ಇಲ್ಲ ಮತ್ತು ಬದುಕೆಂಬುದು ಎಲ್ಲರ ವಿಷಯ ದಲ್ಲೂ ಒಂದೇ ತೆರನಾಗಿರುವುದಿಲ್ಲ. ಉದ್ಯೋಗಸ್ಥರ ಸರಪಳಿಯಲ್ಲಿ ಯಾರು ಸರಿಯಾದ ವ್ಯಕ್ತಿ ಎಂಬುದು ಸೂಕ್ತ ಸಮಯದಲ್ಲಿ ಸಂಬಂಧಪಟ್ಟವರ ಗಮನಕ್ಕೆ ಬರುವುದರಿಂದ, ಯಥೋಚಿತ ಗೌರವ ಮತ್ತು ಮಾನ್ಯತೆ ಅಂಥವರಿಗೆ ದಕ್ಕುತ್ತದೆ.

ಕೆಲವೊಮ್ಮೆ ಅಷ್ಟೊಂದು ಅರ್ಹರಲ್ಲದ ಪುರುಷರೂ, ಮಹಿಳೆಯರೂ ಇಂಥ ಗೌರವಕ್ಕೆ ಪಾತ್ರ ರಾಗಬಹುದು. ಅದರ ಬಗ್ಗೆ ತಲೆಕೆಡಿಸಿಕೊಳ್ಳಬಾರದು. ಈ ಬದುಕಿನಲ್ಲಿ ನಾವು ನಿಯಂತ್ರಿಸಬಹು ದಾದ ಮಿಕ್ಕ ಸಂಗತಿಗಳು ಸಾಕಷ್ಟಿವೆ. ಆದ್ದರಿಂದ, ನಿಮ್ಮೊಳಗೆ ಇರುವುದನ್ನು, ಅಂದರೆ ನಿಮ್ಮ ಮನಸ್ಸನ್ನು ನಿಯಂತ್ರಿಸಿ.

ಕಚೇರಿಗಳಲ್ಲಿ ಸಲ್ಲದ ರಾಜಕೀಯವು ನಡೆಯುವುದು ನಿಜ. ಪಿತೃಪ್ರಭುತ್ವದ ಮೇಲೆ ಹೇರಲ್ಪಟ್ಟ ಕುಟುಂಬ ಶ್ರೇಣಿಗಳು, ಬೇರೆಲ್ಲಿಯೂ ಕಾಣಬರದಷ್ಟು ಹೆಚ್ಚು ಗುಂಪುಗಾರಿಕೆಯನ್ನು ಬೆಳೆಸುವುದಿದೆ. ಹಾಗಂತ ನೀವು ವಿಚಲಿತರಾಗದೆ, ಸ್ಥಿರತೆಯನ್ನು ಕಾಯ್ದುಕೊಳ್ಳಬೇಕು ಮತ್ತು ಶಾಂತರಾಗಿರಬೇಕು. ಮರೆಯದಿರಿ, ಇದು ಮನಸ್ಸಿನ ತರಬೇತಿಗೆ ಸಂಬಂಧಿಸಿದ ಬಾಬತ್ತು.

ಅದನ್ನು ಬಿಟ್ಟು, ಬೇಡದ ಸಂಗತಿಗಳ ಕುರಿತು ಮತ್ತೆ ಮತ್ತೆ ಮಾತನಾಡುವುದು, ಪರರೊಂದಿಗೆ ಅದನ್ನು ಅತಿಯಾಗಿ ಹಂಚಿಕೊಳ್ಳುವುದು, ಮನದ ಹತಾಶೆಗಳನ್ನು ಕೋಪೋದ್ರಿಕ್ತ ಭಾವದಲ್ಲಿ ಹೊರಹಾಕುವುದು ಮುಂತಾದ ನಡೆಗಳಿಗೆ ಒಡ್ಡಿಕೊಂಡರೆ, ಅದು ನಿಮ್ಮ ದೌರ್ಬಲ್ಯದ ಸಂಕೇತ ವಾಗುತ್ತದೆ.

ಸಾಂಸ್ಥಿಕ ನಾಯಕತ್ವದ ಪಾತ್ರಗಳಲ್ಲಿ ಹೆಚ್ಚೆಚ್ಚು ಮಹಿಳೆಯರು ಕಾಣಿಸಿಕೊಳ್ಳಬೇಕಾದ್ದು ಇಂದಿನ ಅಗತ್ಯವಾಗಿದೆ. ಆದ್ದರಿಂದ ನಾವು ಅನಗತ್ಯ ವಿಷಯಗಳಿಗೆ ತಲೆಕೆಡಿಸಿಕೊಳ್ಳುವುದರ ಬದಲು ನಿರಾಳ ರಾಗಿದ್ದುಕೊಂಡು, ನಾಯಕತ್ವದ ಪಾತ್ರದ ಗುರಿ ಸಾಧನೆಯ ಕಡೆಗೆ ಗಮನ ಹರಿಸಬೇಕಿದೆ. ಅತಿಯಾಗಿ ವಿವರಿಸುವುದಾಗಲೀ/ಸ್ಪಷ್ಟೀಕರಣ ನೀಡುವುದಾಗಲೀ, ಕ್ಷಮೆ ಯಾಚಿಸುವುದಾಗಲೀ, ಪ್ರತಿಯೊಂದು ವಿಷಯಕ್ಕೂ ಗಡಸು ಪ್ರತಿಕ್ರಿಯೆ ತೋರುವುದಾಗಲೀ ನಮ್ಮ ವರ್ತನೆಯಾಗುವುದು ಬೇಡ.

ನಮ್ಮೆಡೆಗೆ ಯಾರಾದರೂ ಅಗೌರವ ತೋರುತ್ತಿದ್ದಾರೆಂದರೆ, ಅಂಥ ಕ್ಷಣದಿಂದ ದೂರವಿರುವುದು ನಮ್ಮ ನಿರ್ಧಾರವಾಗಬೇಕು.

(ಲೇಖಕಿ ಐಆರ್‌ಎಸ್ ಅಧಿಕಾರಿ. ಪ್ರಸ್ತುತ ಆದಾಯ ತೆರಿಗೆ

ಪ್ರಧಾನ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ)