ಪ್ರಸ್ತುತ
ರವಿ ಮಡೋಡಿ
ಯಕ್ಷಗಾನದ ಕುರಿತು ಸಮಗ್ರ ದಾಖಲೆಗಳನ್ನು ಸಂಗ್ರಹಿಸಿ, ಅವುಗಳನ್ನು ಡಿಜಿಟಲೀಕರಣಗೊಳಿಸಿ, ಅಂತರ್ಜಾಲದ ಮೂಲಕ ವಿಶ್ವದ ಎಡೆಯ ಆಸಕ್ತರಿಗೆ ಲಭ್ಯವಾಗುವಂತೆ ಮಾಡುವ ಮಹತ್ವಾ ಕಾಂಕ್ಷಿ ಯೋಜನೆಗೆ ಕರ್ನಾಟಕ ಸರ್ಕಾರ ಮುಂದಾಗಿರುವುದು ಅತ್ಯಂತ ಸ್ವಾಗತಾರ್ಹ ಬೆಳವಣಿಗೆ. ‘ಯಕ್ಷಗಾನ ಕ್ಕೊಂದು ಡಿಜಿಟಲ್ ಆರ್ಕೈವ್’ ಎಂಬ ಈ ಯೋಜನೆಗೆ ಸರ್ಕಾರವು ದೊಡ್ಡ ಮೊತ್ತದ ಅನುದಾನವನ್ನು ಮಂಜೂರು ಮಾಡಿದೆ.
ಯಕ್ಷಗಾನದ ಪ್ರದರ್ಶನಗಳು, ತಾಳಮದ್ದಳೆ, ಕಲಾವಿದರ ಸಂದರ್ಶನಗಳು, ಹಳೆಯ ಧ್ವನಿಮುದ್ರಣ ಗಳು, ಛಾಯಾಚಿತ್ರಗಳು, ಕರೆಯೋಲೆಗಳು, ಪತ್ರಿಕಾ ಪ್ರಕಟಣೆಗಳು ಹಾಗೂ ಅಪರೂಪದ ಪ್ರಸಂಗ ಸಾಹಿತ್ಯವನ್ನು ವ್ಯವಸ್ಥಿತವಾಗಿ ಸಂಗ್ರಹಿಸಿ, ಸಂರಕ್ಷಿಸಿ ಸಾರ್ವಜನಿಕರಿಗೆ ಮುಕ್ತವಾಗಿ ಲಭ್ಯವಾಗುವಂತೆ ಮಾಡುವುದು ಇದರ ಮೂಲ ಆಶಯ. ಯಕ್ಷಗಾನದಂತಹ ವಿಶಾಲ ಹಾಗೂ ಬಹುಮುಖಿ ಕಲಾಪರಂಪರೆಗೆ ಇಂತಹದ್ದೊಂದು ಯೋಜನೆಯ ಅಗತ್ಯ ಬಹುಕಾಲದಿಂದಲೂ ಇತ್ತು.
ಇದನ್ನೂ ಓದಿ: Ravi Madodi Column: ಕಲೆಯ ವಾಣಿಜ್ಯೀಕರಣ: ಯಕ್ಷಗಾನದ ಪಥಪಲ್ಲಟ
ಹಲವು ದಶಕಗಳಿಂದ ಅನೇಕ ಆಸಕ್ತರು, ಕಲಾವಿದರು, ಸಂಶೋಧಕರು ಮತ್ತು ಸಂಘ-ಸಂಸ್ಥೆಗಳು ತಮ್ಮದೇ ನೆಲೆಯಲ್ಲಿ ಅಮೂಲ್ಯ ದಾಖಲೆಗಳನ್ನು ಸಂಗ್ರಹಿಸುತ್ತ ಬಂದಿದ್ದಾರೆ. ಆದರೆ ಇವೆಲ್ಲವೂ ಬಹುತೇಕ ಚದುರಿದ ಸ್ಥಿತಿಯಲ್ಲಿವೆ. ಈ ಸಂಪತ್ತನ್ನು ಒಂದೇ ವ್ಯವಸ್ಥೆಯಡಿ ತರಲು ಮುಂದಾ ಗಿರುವುದು ಯಕ್ಷಗಾನದ ಇತಿಹಾಸದಲ್ಲಿ ಮಹತ್ವದ ಹೆಜ್ಜೆಯಾಗಬಲ್ಲದು. ಆದರೆ ಯೋಜನೆಯ ಉದ್ದೇಶ ಎಷ್ಟು ಮಹತ್ವz, ಅದರ ಅನುಷ್ಠಾನವೂ ಅಷ್ಟೇ ಮುಖ್ಯ. ಇದು ಕೇವಲ ಘೋಷಣೆಯಾಗಿ ಉಳಿಯದೆ ಸರಿಯಾದ ದಿಕ್ಕಿನಲ್ಲಿ ಕಾರ್ಯರೂಪಕ್ಕೆ ಬರಬೇಕು ಎನ್ನುವುದೇ ಸದ್ಯದ ಮುಖ್ಯ ಕಾಳಜಿ.
ಇಂತಹ ಆತಂಕ ಮೂಡಲು ಹಿಂದಿನ ಅನುಭವಗಳೇ ಕಾರಣ. ಯಕ್ಷಗಾನಕ್ಕೆ ಸಂಬಂಧಿಸಿದಂತೆ ಸರ್ಕಾರಿ ಸಂಸ್ಥೆಗಳು ಈ ಹಿಂದೆ ಸಾಕಷ್ಟು ದಾಖಲಾತಿ ಕಾರ್ಯಕ್ರಮಗಳನ್ನು ನಡೆಸಿವೆ. ಯಕ್ಷಗಾನ ಅಕಾಡೆಮಿಯೂ ಹಲವು ವರ್ಷಗಳಿಂದ ಕಲಾವಿದರ ಸಂದರ್ಶನಗಳು, ಪ್ರದರ್ಶನಗಳು ಮತ್ತು ವಿಚಾರಗೋಷ್ಠಿಗಳ ಧ್ವನಿ-ದೃಶ್ಯ ದಾಖಲಾತಿಗಳನ್ನು ಮಾಡಿದೆ. ಆದರೆ ಅವುಗಳಲ್ಲಿ ಎಷ್ಟು ಸಾರ್ವಜನಿಕರಿಗೆ ಲಭ್ಯವಿವೆ? ಯಾವ ವ್ಯವಸ್ಥೆಯಲ್ಲಿ ಸಂಗ್ರಹಿಸಲಾಗಿದೆ? ಸಂಶೋಧಕರು ಅಥವಾ ಆಸಕ್ತರು ಅವುಗಳನ್ನು ಹೇಗೆ ಪಡೆಯಬಹುದು? ಎಂಬ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರವಿಲ್ಲ.
ಕೇವಲ ದಾಖಲಿಸುವುದಷ್ಟೇ ಸಂರಕ್ಷಣೆಯಲ್ಲ. ಅದನ್ನು ಸರಿಯಾಗಿ ವರ್ಗೀಕರಿಸಿ, ಸೂಚ್ಯಂಕ ಗೊಳಿಸಿ, ಸುರಕ್ಷಿತವಾಗಿ ಉಳಿಸಿ, ಸಾರ್ವಜನಿಕ ಬಳಕೆಗೆ ತರುವುದು ಕೂಡ ಅಷ್ಟೇ ಮುಖ್ಯ. ಮಹತ್ವಾ ಕಾಂಕ್ಷೆಯಿಂದ ಆರಂಭವಾದ ‘ಯಕ್ಷಗಾನ ವಿಶ್ವಕೋಶ’ದಂತಹ ಯೋಜನೆಗಳು ಒಂದು ಹಂತದ ನಂತರ ಯಾವ ಸ್ಥಿತಿಯಲ್ಲಿವೆ ಎಂಬುದು ಸಾರ್ವಜನಿಕರಿಗೆ ಸ್ಪಷ್ಟವಾಗಿಲ್ಲ. ಹಾಗೆಯೇ ಹಿಂದಿನ ಸರ್ಕಾರದ ಅವಧಿಯಲ್ಲಿ ನಡೆದ ಯಕ್ಷಗಾನ ಸಮ್ಮೇಳನವೂ ಆರಂಭದಲ್ಲಿ ದೊಡ್ಡ ನಿರೀಕ್ಷೆ ಮೂಡಿಸಿ ನಂತರ ಮುಂದುವರಿಯಲಿಲ್ಲ.
ಸರ್ಕಾರ ಬದಲಾದಾಗಲೋ, ಸಂಬಂಧಿತ ಹುದ್ದೆಗಳಲ್ಲಿ ಇರುವವರು ಬದಲಾದಾಗಲೋ ಯೋಜನೆ ಗಳು ತಮ್ಮ ಹಿಂದಿನ ವೇಗವನ್ನು ಕಳೆದುಕೊಳ್ಳುವುದು ಹೊಸ ಸಂಗತಿಯೇನಲ್ಲ. ಆದರೆ ಡಿಜಿಟಲ್ ಆರ್ಕೈವ್‌ನಂತಹ ಯೋಜನೆಗೆ ನಿರಂತರತೆ ಅತ್ಯಂತ ಮುಖ್ಯ. ದಾಖಲೀಕರಣವೆಂಬುದು ಒಂದು ವರ್ಷ ಅಥವಾ ಒಂದು ಆಡಳಿತಾವಧಿಗೆ ಸೀಮಿತವಾಗುವ ಕೆಲಸವಲ್ಲ. ಹೊಸ ದಾಖಲೆಗಳು, ಹೊಸ ಸಂಗ್ರಹಗಳು ಸಿಗುತ್ತಲೇ ಇರುತ್ತವೆ. ಅವುಗಳನ್ನು ನಿರಂತರವಾಗಿ ಸೇರಿಸಿ, ನವೀಕರಿಸುವ ವ್ಯವಸ್ಥೆ ಇದ್ದಾಗ ಮಾತ್ರ ಇದು ನಿಜವಾದ ಅರ್ಥದಲ್ಲಿ ಆರ್ಕೈವ್ ಆಗಬಲ್ಲದು.
ಡಿಜಿಟಲ್ ಆರ್ಕೈವ್ ಎಂದರೆ ಕೇವಲ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಜಾಲತಾಣಕ್ಕೆ ಹಾಕುವು ದಲ್ಲ. ಮೂಲದ ದೃಢೀಕರಣ, ಹಕ್ಕುಸ್ವಾಮ್ಯದ ನಿರ್ವಹಣೆ, ತಾಂತ್ರಿಕ ಗುಣಮಟ್ಟ, ವಿಷಯ ವರ್ಗೀಕರಣ, ಪರಿಣಾಮಕಾರಿ ಹುಡುಕಾಟ ವ್ಯವಸ್ಥೆ, ಡಿಜಿಟಲ್ ಸಂರಕ್ಷಣೆ ಮತ್ತು ನಿರಂತರ ನಿರ್ವಹಣೆ-ಇವೆಲ್ಲವೂ ಅದರ ಅವಿಭಾಜ್ಯ ಅಂಗಗಳು. ಈ ಯೋಜನೆ ಒಬ್ಬ ವ್ಯಕ್ತಿಯ ಆಸಕ್ತಿ ಅಥವಾ ಒಂದು ಅವಧಿಯ ಆಡಳಿತಕ್ಕೆ ಸೀಮಿತವಾಗದೆ ದೀರ್ಘಕಾಲಿಕ ಸಂಸ್ಥಾತ್ಮಕ ವ್ಯವಸ್ಥೆಯಾಗಿ ರೂಪುಗೊಳ್ಳಬೇಕು.
ಇಲ್ಲವಾದರೆ ಉತ್ತಮ ಉದ್ದೇಶದ ಯೋಜನೆಯೂ ಕೆಲವು ವರ್ಷಗಳ ನಂತರ ಮತ್ತೊಂದು ಅಪೂರ್ಣ ಸರ್ಕಾರಿ ಯೋಜನೆಯಾಗಿ ಉಳಿಯುವ ಅಪಾಯವಿದೆ. ‘ಯಕ್ಷಗಾನ ಡಿಜಿಟಲ್ ಆರ್ಕೈವ್’ ಯಶಸ್ವಿಯಾಗಲಿ ಎಂಬುದು ಎಲ್ಲ ಯಕ್ಷಗಾನಾಸಕ್ತರ ಆಶಯ. ಆದರೆ ಅದರ ಯಶಸ್ಸಿನ ಮಾನದಂಡ ಕೇವಲ ಮಂಜೂರಾದ ಹಣದ ಮೊತ್ತವಾಗಬಾರದು. ಸಂಗ್ರಹಿಸಿದ ಅಮೂಲ್ಯ ದಾಖಲೆಗಳು ಮುಂದಿನ ತಲೆಮಾರುಗಳಿಗೂ ಸುರಕ್ಷಿತವಾಗಿ, ಸುಲಭವಾಗಿ ಮತ್ತು ವಿಶ್ವಾಸಾರ್ಹ ವಾಗಿ ಲಭ್ಯವಾದಾಗ ಮಾತ್ರ ಅದರ ನಿಜವಾದ ಸಾರ್ಥಕತೆ.
ಯೋಜನೆಯನ್ನು ಸ್ವಾಗತಿಸುವ ಜೊತೆಗೆ, ಅದರ ಕಾರ್ಯವಿಧಾನ, ಹೊಣೆಗಾರಿಕೆ ಮತ್ತು ನಿರಂತರ ನಿರ್ವಹಣೆಗೆ ಆರಂಭದ ಸ್ಪಷ್ಟವಾದ ಹಾಗೂ ಪಾರದರ್ಶಕವಾದ ವ್ಯವಸ್ಥೆ ರೂಪುಗೊಳ್ಳಲಿ.