ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ravi Madodi Column: ಕಲೆಯ ವಾಣಿಜ್ಯೀಕರಣ: ಯಕ್ಷಗಾನದ ಪಥಪಲ್ಲಟ

ಯಕ್ಷಗಾನದ ಬೆಳವಣಿಗೆಯ ಕುರಿತ ಈ ವಿಚಾರಗಳು ಯಕ್ಷಗಾನ ವಲಯಕ್ಕೆ ಹೊಸದಾಗಿರದಿದ್ದರೂ, ಇಂದಿನ ಸಂದರ್ಭದಲ್ಲಿ ಅವುಗಳನ್ನು ಪುನರ್‌ಪರಿಶೀಲಿಸುವ ಅಗತ್ಯ ಸ್ಪಷ್ಟವಾಗಿ ಕಾಣಿಸುತ್ತದೆ. ಯಕ್ಷಗಾನವು ಮೂಲತಃ ದೇವಸ್ಥಾನಕೇಂದ್ರಿತ ಆರಾಧನಾ ಕಲೆಯಾಗಿ ರೂಪುಗೊಂಡಿದ್ದು, ಅದರ ಆವಾಸ ಹಾಗೂ ಅಸ್ತಿತ್ವ ಎರಡೂ ಧಾರ್ಮಿಕ ಆಚರಣೆಯೊಂದಿಗೇ ಆಳವಾಗಿ ಸಂಬಂಧಿಸಿಕೊಂಡಿವೆ.

ಕಲೆಯ ವಾಣಿಜ್ಯೀಕರಣ: ಯಕ್ಷಗಾನದ ಪಥಪಲ್ಲಟ

-

Ashok Nayak
Ashok Nayak Dec 31, 2025 9:49 AM

ತಪ್ಪಿದ ತಾಳ

ರವಿ ಮಡೋಡಿ

ಆರಾಧನೆಯಿಂದ ಉದ್ಭವಿಸಿದ ಯಕ್ಷಗಾನವು ಕಳೆದ ಶತಮಾನದಲ್ಲಿ ಎದುರಿಸಿದ ಪಲ್ಲಟಗಳು ಕೇವಲ ರೂಪಾಂತರಗಳಷ್ಟೇ ಅಲ್ಲ; ಅವು ಅದರ ಮೂಲ ತಾತ್ವಿಕ ನೆಲೆಯನ್ನೇ ಪ್ರಶ್ನಿಸುವ ಹಂತಕ್ಕೆ ತಲುಪಿವೆ. ಈ ಪಲ್ಲಟಗಳಲ್ಲಿ ಕೆಲವು ಕಲೆಗೆ ಹೊಸ ಆಯಾಮಗಳನ್ನು ನೀಡಿದ್ದರೂ, ಕೆಲವು ಬದಲಾವಣೆಗಳು ಯಕ್ಷಗಾನದ ಅಂತಃಸತ್ವಕ್ಕೆ ಗಂಭೀರ ಧಕ್ಕೆಯನ್ನುಂಟು ಮಾಡಿವೆ.

ವಿಶೇಷವಾಗಿ ಕಲೆಯ ವಾಣಿಜ್ಯೀಕರಣದ ಪರಿಣಾಮವಾಗಿ ರೂಪಾಂತರಗೊಂಡ ಕಲಾ ಸೌಂದರ್ಯ, ಯಕ್ಷಗಾನವನ್ನು ಪರಂಪರೆ ಮತ್ತು ವ್ಯಾಪಾರದ ನಡುವಿನ ತಕ್ಕಡಿಯಲ್ಲಿ ಸಮತೋಲನ ಹುಡುಕುವ ಸಂಕೀರ್ಣ ಹಾಗೂ ಗಂಭೀರ ಸ್ಥಿತಿಗೆ ತಳ್ಳಿದೆ.

ಯಕ್ಷಗಾನದ ಬೆಳವಣಿಗೆಯ ಕುರಿತ ಈ ವಿಚಾರಗಳು ಯಕ್ಷಗಾನ ವಲಯಕ್ಕೆ ಹೊಸದಾಗಿರದಿದ್ದರೂ, ಇಂದಿನ ಸಂದರ್ಭದಲ್ಲಿ ಅವುಗಳನ್ನು ಪುನರ್‌ಪರಿಶೀಲಿಸುವ ಅಗತ್ಯ ಸ್ಪಷ್ಟವಾಗಿ ಕಾಣಿಸುತ್ತದೆ. ಯಕ್ಷಗಾನವು ಮೂಲತಃ ದೇವಸ್ಥಾನಕೇಂದ್ರಿತ ಆರಾಧನಾ ಕಲೆಯಾಗಿ ರೂಪುಗೊಂಡಿದ್ದು, ಅದರ ಆವಾಸ ಹಾಗೂ ಅಸ್ತಿತ್ವ ಎರಡೂ ಧಾರ್ಮಿಕ ಆಚರಣೆಯೊಂದಿಗೇ ಆಳವಾಗಿ ಸಂಬಂಧಿಸಿ ಕೊಂಡಿವೆ.

ಭಕ್ತರು ತಮ್ಮ ಮನದ ಬೇಡಿಕೆಗಳನ್ನು ದೇವರಿಗೆ ಹರಕೆಯ ರೂಪದಲ್ಲಿ ಅರ್ಪಿಸುವ ಉದ್ದೇಶದಿಂದ ‘ಬೆಳಕಿನ ಸೇವೆ’ ಎಂಬ ವಿಶೇಷ ಆಚರಣೆಯ ಮೂಲಕ ಯಕ್ಷಗಾನವನ್ನು ಪ್ರದರ್ಶಿಸುತ್ತಿದ್ದರು. ಕಾಲಕ್ರಮೇಣ ಈ ಆಚರಣೆ ವಿಕಸನಗೊಂಡು, ಯಕ್ಷಗಾನವನ್ನು ರಂಗಭೂಮಿಯ ದೃಷ್ಟಿಯಿಂದ ಅವಲೋಕಿಸುವ ಪರಿಪಾಠ 1950-60ರ ದಶಕದಲ್ಲಿ ಸ್ಪಷ್ಟವಾಗಿ ರೂಪುಗೊಂಡಿತು.

ಈ ಹಂತದಲ್ಲಿ ಆರಾಧನೆಯಿಂದ ಹೊರತಾದ ಪ್ರದರ್ಶನಗಳೂ ಆರಂಭವಾದವು. ಇದುವರೆಗೆ ದೇವತಾ ಆರಾಧನೆಯ ಭಾವದಿಂದ ಉಚಿತವಾಗಿ ಬಯಲಿನಲ್ಲಿ ನಡೆಯುತ್ತಿದ್ದ ಪ್ರದರ್ಶನಗಳು, ನಾಟಕ ರಂಗಭೂಮಿಯ ಪ್ರಭಾವದಿಂದ ಡೇರೆ ರಂಗಭೂಮಿಗೆ ಸ್ಥಳಾಂತರಗೊಂಡು ಹಣಕೊಟ್ಟು ನೋಡುವ ವ್ಯವಸ್ಥೆಗೆ ಒಳಪಟ್ಟವು.

ಇದನ್ನೂ ಓದಿ: Ravi Sajangadde Column: ಕೃತಘ್ಞ ಬಾಂಗ್ಲಾದೇಶದ ಬಾಲ ಕತ್ತರಿಸಲು ಇದು ಸಕಾಲ !

ಇದರ ಪರಿಣಾಮವಾಗಿ ಯಕ್ಷಗಾನವು ಕ್ರಮೇಣ ವೃತ್ತಿಪರ ಕಲಾರೂಪವಾಗಿ ರೂಪುಗೊಂಡಿತು; ಕಲಾವಿದರ ಕಾರ್ಯಕ್ಷಮತೆ, ಪ್ರದರ್ಶನದ ಶಿಸ್ತು ಹಾಗೂ ಪ್ರೇಕ್ಷಕಾಕರ್ಷಣೆಯ ಅಂಶಗಳು ಮೌಲ್ಯ ಮಾಪನದ ಮಾನದಂಡಗಳಾಗಿ ಪರಿಗಣಿಸಲ್ಪಟ್ಟವು. ಈ ಬೆಳವಣಿಗೆಯನ್ನು ಒಂದು ಹಂತದಲ್ಲಿ ಕಲೆಯ ವಿಸ್ತರಣೆಯ ಭಾಗವೆಂದು ಪರಿಗಣಿಸಬಹುದಾದರೂ, ನಂತರದ ದಶಕಗಳಲ್ಲಿ ಪೌರಾಣಿಕ ಪ್ರಸಂಗಗಳ ಮಿತಿಯನ್ನು ಮೀರಿಸಿ ಐತಿಹಾಸಿಕ, ಸಾಮಾಜಿಕ ಹಾಗೂ ಕಾಲ್ಪನಿಕ ಕಥನಗಳನ್ನು ರಂಗಕ್ಕೆ ತರುವ ಪ್ರಯತ್ನಗಳು ಹೆಚ್ಚಿದವು.

ಇದರೊಂದಿಗೆ ಯಕ್ಷಗಾನ ರಂಗದಲ್ಲಿ ಕಲಾವ್ಯವಹಾರಿ ಕತೆಯ ಅಂಶಗಳು ಕ್ರಮೇಣ ಬಲವಾಗಿ ಬೇರೂರಿದವು. ಪ್ರೇಕ್ಷಕರನ್ನು ಸೆಳೆಯುವ ಉದ್ದೇಶದಿಂದ ನಡೆದ ಪ್ರಯೋಗಗಳು ಅನೇಕ ಸಂದರ್ಭ ಗಳಲ್ಲಿ ಯಕ್ಷಗಾನದ ಶಿಸ್ತು ಮತ್ತು ಪರಿಧಿಯನ್ನು ಮೀರಿದವು.

‘ಇದು ಯಕ್ಷಗಾನವೇ?’ ಎಂಬ ಪ್ರಶ್ನೆ ಉದ್ಭವಿಸುವಷ್ಟರ ಮಟ್ಟಿಗೆ ಕ್ಷಣಿಕ ಮನೋರಂಜನೆಯೇ ಮಾನದಂಡವಾಗಿ ಬದಲಾಗಿರುವುದು ಈ ಕಾಲಘಟ್ಟದ ಪ್ರಮುಖ ಸಮಸ್ಯೆಯಾಗಿದೆ. ಇದರ ಪರಿಣಾಮವಾಗಿ, ಯಕ್ಷಗಾನದ ಬೆಳವಣಿಗೆ ಜತೆಗೆ ಅದರ ಅಸ್ತಿತ್ವ ಮತ್ತು ಮೂಲ ತಾತ್ವಿಕ ನೆಲೆಯ ಕುರಿತಾದ ಗಂಭೀರ ಪ್ರಶ್ನೆಗಳು ಉದ್ಭವಿಸಿವೆ.

ಯಕ್ಷಗಾನವು ಭಾರತೀಯ ರಂಗಕಲೆಗಳಂದು ಪ್ರಮುಖ ಕಲಾರೂಪವಾಗಿದೆ. ಭಾರತೀಯ ರಂಗಕಲೆ ಗಳು ಅನೇಕವಾಗಿದ್ದರೂ, ಪ್ರತಿಯೊಂದು ಕಲೆ ತನ್ನದೇ ಆದ ಗುಣ, ಲಕ್ಷಣ ಮತ್ತು ಪರಂಪರೆಯನ್ನು ಹೊಂದಿದ್ದು, ಆ ಪ್ರತ್ಯೇಕತೆಯಲ್ಲಿಯೇ ಅದರ ಸಾಂಸ್ಕೃತಿಕ ಶ್ರೀಮಂತಿಕೆ ಅಡಗಿದೆ. ಈ ತಾತ್ವಿಕ ಅಂಶವು ಯಕ್ಷಗಾನಕ್ಕೂ ಅನ್ವಯಿಸುತ್ತದೆ.

ಆದ್ದರಿಂದ ಒಂದೊಂದು ಕಲೆಯನ್ನು ಮತ್ತೊಂದರಲ್ಲಿ ಯಥೇಚ್ಛವಾಗಿ ಬೆರೆಸುವುದು ಸಹಜವಲ್ಲ; ಎಲ್ಲ ಅಂಶಗಳೂ ಎಲ್ಲಾ ಕಲೆಗಳಿಗೆ ಪರಸ್ಪರ ಪೂರಕವಾಗು ವುದಿಲ್ಲ. ಆದರೆ ಇಂಥ ಅಸಂಗತ ಅಂಶಗಳನ್ನು ಯಕ್ಷಗಾನದಲ್ಲಿ ಅಳವಡಿಸುವ ಪ್ರವೃತ್ತಿ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿರುವುದು ಗಮನಾರ್ಹವಾಗಿದೆ.

ಇದರ ಜತೆಗೆ, ಯಕ್ಷಗಾನದ ಸಾಂಪ್ರದಾಯಿಕ ಮಟ್ಟುಗಳಿಗೆ ಬದಲಾಗಿ ಪರ್ಯಾಯ ಮಟ್ಟುಗಳನ್ನು ಯಾವುದೇ ವಿಮರ್ಶಾತ್ಮಕ ಪರಿಶೀಲನೆಯಿಲ್ಲದೆ ಅಳವಡಿಸುವ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿರುವುದು ಸ್ಪಷ್ಟವಾಗಿದೆ. ಇಂಥ ಪ್ರವೃತ್ತಿಗಳನ್ನು ಕಲೆಯ ಮೇಲಿನ ಸ್ವಾತಂತ್ರ್ಯದ ಅಭಿವ್ಯಕ್ತಿಯೆಂದು ಪರಿಗಣಿಸಲು ಸಾಧ್ಯವಿಲ್ಲ; ಬದಲಾಗಿ ಅವನ್ನು ಕಲೆಯ ಸ್ವಭಾವ ಮತ್ತು ಅಂತಃಸತ್ವವನ್ನು ಲೆಕ್ಕಿಸದ ಸ್ವೇಚ್ಛಾಚಾರವೆಂದು ವ್ಯಾಖ್ಯಾನಿಸಬೇಕಾಗುತ್ತದೆ.

ಈ ಪ್ರವೃತ್ತಿಗೆ ಸ್ಪಷ್ಟ ಉದಾಹರಣೆಯಾಗಿ, ಇತ್ತೀಚಿನ ಕೆಲವು ಮೇಳಗಳಲ್ಲಿ ಕನ್ನಡದ ಜನಪ್ರಿಯ ಚಲನಚಿತ್ರ ಗೀತೆಗಳನ್ನು ಯಥಾವತ್ತಾಗಿ ಯಕ್ಷಗಾನ ರಂಗಕ್ಕೆ ತರುವ ಪ್ರಯತ್ನಗಳು ಆಗುತ್ತಿರುವು ದನ್ನು ಉಲ್ಲೇಖಿಸಬಹುದು.

ಇಂದಿನ ಕೆಲವು ಇಡೀ ರಾತ್ರಿ ಪ್ರಸಂಗಗಳಲ್ಲಿ ಎಂಟರಿಂದ ಹತ್ತರವರೆಗೆ ಚಲನಚಿತ್ರಾಧಾರಿತ ಗೀತೆ ಗಳನ್ನು ಬಳಸಲಾಗುತ್ತಿರುವುದು ಕಂಡುಬರುತ್ತಿದೆ. ಇಂಥ ಪ್ರಯೋಗಗಳನ್ನು ಯಕ್ಷಗಾನಕ್ಕೆ ಹೊಸತನ್ನು ನೀಡುವ ಸೃಜನಾತ್ಮಕ ಪ್ರಯತ್ನಗಳೆಂದು ಪರಿಗಣಿಸುವುದಕ್ಕಿಂತ, ಕಲೆಯ ಮೂಲ ಆಶಯ ಮತ್ತು ಸಂಗೀತಾತ್ಮಕ ಶಿಸ್ತಿಗೆ ಉಂಟಾಗುತ್ತಿರುವ ಧಕ್ಕೆಯಾಗಿ ವಿಶ್ಲೇಷಿಸುವುದೇ ಹೆಚ್ಚು ಸೂಕ್ತ ವಾಗಿದೆ.

ಇದರ ಜತೆಗೆ, ಯಕ್ಷಗಾನದ ಸಾಂಪ್ರದಾಯಿಕ ಸಂಗೀತ ವಿನ್ಯಾಸ ಮಾತ್ರವಲ್ಲದೆ ಅದರ ಮೂಲ ವೇಷಭೂಷಣಗಳಲ್ಲಿಯೂ ಅಸಂಗತ ಬದಲಾವಣೆಗಳು ಕಾಣಿಸುತ್ತಿವೆ. ಹಾಸ್ಯದ ಹೆಸರಿನಲ್ಲಿ ದ್ವಂದ್ವಾರ್ಥ ಮತ್ತು ಕೀಳುಮಟ್ಟದ ಅಶ್ಲೀಲತೆ ಯನ್ನು ಮಿತಿಮೀರಿ ಬಳಸುವ ಪ್ರವೃತ್ತಿಯೂ ಹೆಚ್ಚುತ್ತಿದೆ. ಇಂಥ ಪ್ರವೃತ್ತಿಗಳು ತೆಂಕು, ಬಡಗು, ಡೇರೆ ಅಥವಾ ಬಯಲಾಟ ಎಂಬ ಶೈಲಿಭೇದ ವಿಲ್ಲದೆ ಹಲವು ಮೇಳಗಳಲ್ಲಿ ವ್ಯಾಪಿಸಿರುವುದು ಯಕ್ಷಗಾನದ ಸಾಂಸ್ಕೃತಿಕ ಭವಿಷ್ಯದ ದೃಷ್ಟಿ ಯಿಂದ ಗಂಭೀರ ಆತಂಕಕ್ಕೆ ಕಾರಣವಾಗಿದೆ.

ಯಕ್ಷಗಾನವು ತನ್ನ ಉದ್ಭವದಲ್ಲಿಯೇ ದೇವತಾ ಆರಾಧನೆಯನ್ನು ಕೇಂದ್ರವಾಗಿಟ್ಟುಕೊಂಡ ಕಲಾ ರೂಪವಾಗಿದ್ದು, ಧರ್ಮ, ದೈವಿಕತೆ, ಭಕ್ತಿ ಮತ್ತು ಪರಮಾರ್ಥದ ಮೌಲ್ಯಗಳನ್ನು ಆಚರಣೆಯ ಮೂಲಕ ಸಮಾಜಕ್ಕೆ ತಲುಪಿಸುವ ಉದ್ದೇಶವನ್ನು ಹೊಂದಿದೆ. ಭಾರತೀಯ ಕಾವ್ಯಪರಂಪರೆ ಹಾಗೂ ಪುರಾಣಕಥನಗಳನ್ನು ಭಾರತೀಯ ಅಸ್ಮಿತೆಯ ಭಾಗವಾಗಿ ಜನಸಾಮಾನ್ಯರಿಗೆ ತಲುಪಿಸು ವಲ್ಲಿ ಈ ಕಲೆ ಮಹತ್ವದ ಪಾತ್ರ ವಹಿಸಿದೆ.

ಈ ಕಾರಣದಿಂದಲೇ ದೇವಾಲಯಗಳ ಆಶ್ರಯದಲ್ಲಿ ಹುಟ್ಟಿ ಬೆಳೆದ ಯಕ್ಷಗಾನವು ಆರಾಧನಾ ಪರಂಪರೆಯ ಅವಿಭಾಜ್ಯ ಅಂಗವಾಗಿಯೇ ತನ್ನ ಅಸ್ತಿತ್ವವನ್ನು ನಿರ್ಮಿಸಿಕೊಂಡಿದೆ. ಇಂದಿಗೂ ಯಕ್ಷಗಾನ ವಲಯದಲ್ಲಿ ನಲ್ವತ್ತಕ್ಕೂ ಹೆಚ್ಚು ಮೇಳಗಳು ಕಾರ್ಯನಿರ್ವಹಿಸುತ್ತಿದ್ದು, ಅನೇಕ ದೇವಸ್ಥಾನಗಳ ಹೆಸರಿನಲ್ಲಿ ಹರಿಕೆ ಬಯಲಾಟಗಳು ನಡೆಯುತ್ತಿವೆ.

ಆದರೆ ಈ ಮೇಳಗಳಲ್ಲಿ ಕಾರ್ಯ ನಿರ್ವಹಿಸುವ ಕಲಾವಿದರು ಹಾಗೂ ಸಿಬ್ಬಂದಿಗಳು ದೇವಸ್ಥಾನಗಳ ಉದ್ಯೋಗಿಗಳಲ್ಲ; ಮೇಳಗಳ ಕಾರ್ಯಾಚರಣೆಗಳ ಮೇಲೆ ದೇವಸ್ಥಾನಗಳಿಗೆ ನೇರ ನಿಯಂತ್ರಣವೂ ಇಲ್ಲ. ಸಾಮಾನ್ಯವಾಗಿ ಮೇಳದ ಸಂಚಾಲಕರು ಮತ್ತು ದೇವಸ್ಥಾನಗಳ ನಡುವೆ ತಾತ್ಕಾಲಿಕ ಒಪ್ಪಂದಗಳ ಆಧಾರದಲ್ಲಿ ಪ್ರದರ್ಶನಗಳನ್ನು ಆಯೋಜಿಸಲಾಗುತ್ತವೆ. ಆದರೂ, ವೃತ್ತಿಪರ ಪ್ರದರ್ಶನಕಲೆಯಾಗಿ ಯಕ್ಷಗಾನ ರೂಪುಗೊಂಡಿದ್ದರೂ, ಅದರ ಆರಾಧನಾ ಸ್ವರೂಪವನ್ನು ಕಾಪಾಡಿಕೊಳ್ಳುವುದು ಮೇಳಗಳ ಮೇಲಿರುವ ಅನಿವಾರ್ಯ ಸಾಂಸ್ಕೃತಿಕ ಹೊಣೆಗಾರಿಕೆಯಾಗಿದೆ.

ಇಂಥ ಸಂಘಟನಾ ಮತ್ತು ವೃತ್ತಿಪರ ವ್ಯವಸ್ಥೆಗಳ ನಡುವೆಯೂ, ಆರಾಧನಾ ಹಿನ್ನೆಲೆಯಿಂದ ಉದ್ಭವಿಸಿದ ಈ ಕಲೆಯು ತನ್ನ ಮೂಲ ತಾತ್ವಿಕ ನೆಲೆಯಿಂದ ದೂರ ಸರಿಯುತ್ತಿರುವ ಪ್ರವೃತ್ತಿ ಗಂಭೀರ ಆತ್ಮಾವಲೋಕನಕ್ಕೆ ಕಾರಣವಾಗುತ್ತದೆ. ಮೇಳಗಳು ದೇವಸ್ಥಾನಗಳನ್ನು ಕೇಂದ್ರ ವಾಗಿಟ್ಟುಕೊಂಡೇ ತಿರುಗಾಟ ನಡೆಸುತ್ತಿದ್ದರೂ, ದೇವಾಲಯ ಮತ್ತು ದೇವರ ಹೆಸರಿನಲ್ಲಿ ನಡೆಯುವ ಈ ಮೇಳಗಳಲ್ಲಿ ಆ ಹೆಸರಿಗೆ ಚ್ಯುತಿ ತರುವಂಥ ಅಂಶಗಳು ಕಾಣಿಸಿಕೊಳ್ಳುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.

ಈ ಹಿನ್ನೆಲೆಯಲ್ಲಿ ಭಕ್ತರು, ದೇವಸ್ಥಾನಗಳ ಆಡಳಿತಗಾರರು ಹಾಗೂ ಯಕ್ಷಗಾನವನ್ನು ಪ್ರೀತಿಸುವ ವರು ಗಂಭೀರವಾಗಿ ಚಿಂತನೆ ನಡೆಸಬೇಕಾದ ಸಂದರ್ಭ ಬಂದಿದೆ. ಯಕ್ಷಗಾನದ ಮೂಲ ಆಶಯಕ್ಕೆ ವಿರುದ್ಧವಾಗಿ, ಭಿನ್ನ ನೆಲೆಯಲ್ಲಿ ಪ್ರಸಂಗಗಳು, ಪದ್ಯಗಳು ಹಾಗೂ ಕೀಳು ಅಭಿರುಚಿಯ ಹಾಸ್ಯ ಅಂಶಗಳನ್ನು ರಂಗಕ್ಕೆ ತರುವ ಪ್ರಯತ್ನಗಳು ನಡೆಯುತ್ತಿರುವುದು ಕೇವಲ ಕಲಾತ್ಮಕ ವ್ಯತ್ಯಯ ವಷ್ಟೇ ಅಲ್ಲ; ಒಂದು ಅರ್ಥದಲ್ಲಿ ದೈವಿಕ ಮೌಲ್ಯಗಳಿಗೆ ವಿರುದ್ಧವಾಗಿ ನಡೆಯುವ ಆಚರಣೆ ಯಂತೆಯೂ ಕಾಣಿಸುತ್ತದೆ.

ಇಂಥ ಅಸಂಗತ ಅಂಶಗಳ ಕುರಿತು ಮೇಳಗಳಿಗೆ ಅರಿವಿಲ್ಲವೆಂದು ಹೇಳಲಾಗದು. ಆದರೆ ಯಕ್ಷಗಾನ ಕಲಾವರ್ಗ ಹಾಗೂ ಅದಕ್ಕೆ ಸಂಬಂಧಪಟ್ಟ ವಲಯಗಳಲ್ಲಿ ವಿಮರ್ಶೆಯನ್ನು ಸ್ವೀಕರಿಸುವ ಸಂಸ್ಕೃತಿ ಇನ್ನೂ ಪರಿಪಕ್ವ ಹಂತವನ್ನು ತಲುಪಿಲ್ಲ ಎಂಬುದು ಮೆಲ್ನೋಟಕ್ಕೆ ಸ್ಪಷ್ಟವಾಗುತ್ತದೆ. ವಿಮರ್ಶೆಯನ್ನು ಹಳಿಯುವಿಕೆ ಅಥವಾ ವೈಯಕ್ತಿಕ ಅಟ್ಟಕ್ಕೇರಿಸುವಿಕೆಯಂತೆ ಗ್ರಹಿಸುವ ಮನೋಭಾವವೇ ಇಲ್ಲಿ ಪ್ರಧಾನವಾಗಿದೆ. ಈ ಹಿನ್ನೆಲೆಯಲ್ಲಿ ‘ಹೊಸತನವನ್ನು ಆಕ್ಷೇಪಿಸಲಾಗುತ್ತಿದೆ’ ಎಂಬ ಆರೋಪವನ್ನು ಮುಂದಿಟ್ಟುಕೊಳ್ಳಲಾಗುತ್ತದೆ.

ಆದರೆ ಈ ಕಲಾಪರಿಧಿಯಲ್ಲಿ ಹೊಸತನವೆಂದರೆ ಏನು ಎಂಬ ಮೂಲಭೂತ ಪ್ರಶ್ನೆಯನ್ನು ಎದುರಿಸದೆ ಮುಂದೆ ಸಾಗಲು ಸಾಧ್ಯವಿಲ್ಲ. ಕಲಾಪರಿಧಿಯನ್ನು ಮೀರಿಸುವುದೇ ಹೊಸತನವೇ? ಚಲನಚಿತ್ರ ಗೀತೆಯನ್ನು ಯಥಾವತ್ತಾಗಿ ಅಳವಡಿಸುವುದೇ ಹೊಸತನವೇ? ಕೀಳುಮಟ್ಟದ ಹಾಸ್ಯ ವನ್ನು ತುರುಕುವುದೇ ಹೊಸತನವೇ? ಇಂಥ ಪ್ರಶ್ನೆಗಳು ಉದ್ಭವಿಸಿದಾಗ, ಅಳವಡಿಸಿಕೊಂಡಿರುವ ಅಂಶಗಳ ಔಚಿತ್ಯ ಮತ್ತು ಅವುಗಳ ಕಲಾತ್ಮಕ ಸಮನ್ವತೆಯ ಕುರಿತು ವಿಮರ್ಶಾತ್ಮಕ ಚರ್ಚೆ ಅನಿವಾರ್ಯವಾಗುತ್ತದೆ.

ಆದರೆ ಇಂಥ ಅಪಸವ್ಯಗಳನ್ನು ಪ್ರಶ್ನಿಸುವುದೇ ಮಹಾ ಅಪರಾಧವೆಂಬ ವಾತಾವರಣ ನಿರ್ಮಾಣ ವಾಗಿರುವುದು ಈ ಸಂದರ್ಭದ ಮತ್ತೊಂದು ಗಂಭೀರ ದುರಂತವಾಗಿದೆ. ಈ ಜಗತ್ತಿನಲ್ಲಿ ಯಾರೂ ಪ್ರಶ್ನಾತೀತರಲ್ಲ. ಕಲೆ ಯಾರೊಬ್ಬರ ಸ್ವತ್ತೂ ಅಲ್ಲ. ಅದನ್ನು ಉಳಿಸಿ ಬೆಳೆಸಬೇಕಾದ ಹೊಣೆ ಎಲ್ಲರ ಮೇಲಿದೆ. ಆ ಹೊಣೆಗಾರಿಕೆಯನ್ನು ಮರೆತು, ಆರಾಧನೆಯಿಂದ ಹುಟ್ಟಿಕೊಂಡ ದೈವಿಕ ಕಲೆಯನ್ನು ಮತ್ತಷ್ಟು ವಾಣಿಜ್ಯೀಕರಣದತ್ತ ಹೊರಳಿಸುವ ಮತ್ತು ಅದರ ಪಾವಿತ್ರ್ಯವನ್ನು ಕ್ಷೀಣಗೊಳಿಸುವ ಪ್ರಕ್ರಿಯೆ, ಒಂದು ಅರ್ಥದಲ್ಲಿ ಧಾರ್ಮಿಕ ಭಾವನೆಗಳ ಹರಣ ವಾಗಿಯೇ ಕಾಣಿಸುತ್ತದೆ.

ದೇವಾಲಯಗಳ ಹೆಸರಿನಲ್ಲಿ ನಡೆಯುವ ಮೇಳಗಳಲ್ಲಿ ಆರಾಧನಾ ಶಿಷ್ಟಾಚಾರ ಮತ್ತು ಪಾವಿತ್ರ್ಯ ವನ್ನು ಕಾಪಾಡುವ ನೈತಿಕ ಹೊಣೆಗಾರಿಕೆ ಯಾರದ್ದು? ಅದು ಕಲಾವಿದರದ್ದೋ, ಸಂಚಾಲಕ ರದ್ದೋ, ಪ್ರೇಕ್ಷಕರದ್ದೋ? ಬಹುಶಃ ಈ ಪ್ರಶ್ನೆಗಳಿಗೆ ಉತ್ತರ ಹುಡುಕುವ ಆತ್ಮಾವಲೋಕನವೇ ಯಕ್ಷಗಾನವನ್ನು ಕೇವಲ ಮನೋರಂಜನೆಯ ಕಲೆಯಾಗಿ ಅಲ್ಲ, ಆರಾಧನಾ ಸಂಸ್ಕೃತಿಯ ಜೀವಂತ ಪ್ರತಿನಿಧಿಯಾಗಿ ಉಳಿಸಬಲ್ಲದು.

(ಲೇಖಕರು ಸಾಫ್ಟ್‌ʼವೇರ್ ಎಂಜಿನಿಯರ್ ಮತ್ತು ಯಕ್ಷಗಾನ ಪ್ರೇಮಿ)