Australian Open: ಬೋಪಣ್ಣ ಜೋಡಿಗೆ ಸೋಲು; ಸೆಮಿಗೆ ಲಗ್ಗೆಯಿಟ್ಟ ಸಬಲೆಂಕಾ, ಜ್ವರೇವ್
Australian Open: ಸಬಲೆಂಕಾ ಅವರು ಅನಿಸಿಮೋವಾ ಪಾವ್ಲ್ಯುಚೆಂಕೋವಾ ವಿರುದ್ಧ ಮೂರು ಸೆಟ್‌ಗಳ ಹೋರಾಟದಲ್ಲಿ 6-2, 2-6, 6-3 ಅಂತರದಿಂದ ಗೆದ್ದು ಸೆಮಿ ಪ್ರವೇಶಿಸಿದರು.
ಮೆಲ್ಬರ್ನ್: ವಿಶ್ವದ ನಂ.2, ಜರ್ಮನಿಯ ಅಲೆಕ್ಸಾಂಡರ್ ಜ್ವರೇವ್, ಮಹಿಳಾ ಸಿಂಗಲ್ಸ್‌ನಲ್ಲಿ ಅಗ್ರ ಶ್ರೇಯಾಂಕದ ಆಟಗಾರ್ತಿ ಅರಿನಾ ಸಬಲೆಂಕಾ ಮತ್ತು ಸ್ಪೇನ್‌ನ ಪೌಲಾ ಬಡೋಸಾ ಅವರು ಮಂಗಳವಾರ ನಡೆದ ಆಸ್ಟ್ರೇಲಿಯನ್ ಓಪನ್(Australian Open) ಗ್ರಾಂಡ್ ಸ್ಲಾಂ ಟೆನಿಸ್ ಟೂರ್ನಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಗೆದ್ದು ಸೆಮಿಫೈನಲ್ ಪ್ರವೇಶಿಸಿದ್ದಾರೆ. ಆದರೆ ವಿಶ್ರ ಡಬಲ್ಸ್‌ನಲ್ಲಿ ರೋಹನ್ ಬೋಪಣ್ಣ ಅವರ ಚೀನಾದ ಜತೆಗಾರ್ತಿ ಶುವಾಯ್ ಜಾಂಗ್ ಸೋತು ಟೂರ್ನಿಯಿಂದ ಹೊರಬಿದ್ದಿದ್ದಾರೆ.
ಬೆಳಗ್ಗೆ ನಡೆದ ಮಹಿಳಾ ಸಿಂಗಲ್ಸ್‌ನ ಕ್ವಾರ್ಟರ್ ಫೈನಲ್‌ನಲ್ಲಿ 11ನೇ ಶ್ರೇಯಾಂಕದ ಪೌಲಾ ಬಡೋಸಾ ಅವರು 3ನೇ ಶ್ರೇಯಾಂಕದ, ಅಮೆರಿಕದ ಸ್ಟಾರ್ ಆಟಗಾರ್ತಿ ಕೊಕೊ ಗಾಫ್ಕೊಕೊ ಗಾಫ್ ಅವರನ್ನು 7-5,6-4 ನೇರ ಸೆಟ್‌ಗಳಿಂದ ಮಣಿಸಿ ಚೊಚಲ ಬಾರಿಗೆ ಸೆಮಿಫೈನಲ್‌ಗೆ ಲಗ್ಗೆಯಿಟ್ಟರು. ಗುರುವಾರ ನಡೆಯುವ ಸೆಮಿಯಲ್ಲಿ ಅಗ್ರ ಶ್ರೇಯಾಂಕದ ಅರಿನಾ ಸಬಲೆಂಕಾ ಸವಾಲು ಎದುರಿಸಲಿದ್ದಾರೆ. ಸಬಲೆಂಕಾ ಅವರು ಅನಿಸಿಮೋವಾ ಪಾವ್ಲ್ಯುಚೆಂಕೋವಾ ವಿರುದ್ಧ ಮೂರು ಸೆಟ್‌ಗಳ ಹೋರಾಟದಲ್ಲಿ 6-2, 2-6, 6-3 ಅಂತರದಿಂದ ಗೆದ್ದು ಸೆಮಿ ಪ್ರವೇಶಿಸಿದರು.
ಜ್ವೆರೇವ್‌ಗೆ ಪ್ರಯಾಸದ ಗೆಲುವು
ಪುರುಷರ ಸಿಂಗಲ್ಸ್ ವಿಭಾಗದ ಕ್ವಾರ್ಟರ್ ಫೈನಲ್‌ನಲ್ಲಿ ಅನುಭವಿ ಆಟಗಾರ ಅಲೆಕ್ಸಾಂಡರ್ ಜ್ವರೇವ್, 12ನೇ ಶ್ರೇಯಾಂಕದ ಟಾಮಿ ಪೌಲ್ ವಿರುದ್ಧ ನಾಲ್ಕು ಸೆಟ್‌ಗಳ ಕಠಿನ ಹೋರಾಟದಲ್ಲಿ 7-6 (7-1), 7-6 (7-0), 2-6, 6-1 ಅಂತರದ ಪ್ರಯಾಸದ ಗೆಲುವು ಸಾಧಿಸಿದರು. ಸೆಮಿ ಪಂದ್ಯದಲ್ಲಿ ಜ್ವರೇವ್ ಅವರು ಜೋಕೊವಿಕ್ ಮತ್ತು ಅಲ್ಕರಾಜ್ ನಡುವಿನ ವಿಜೇತರನ್ನು ಎದುರಿಸಲಿದ್ದಾರೆ.
𝟭𝟵-𝟬 at Melbourne Park 😍
— #AusOpen (@AustralianOpen) January 21, 2025
Aryna Sabalenka's title defence is STILL ALIVE as she battles past Pavlyuchenkova's challenge 6-2 2-6 6-3. #AusOpen • #AO2025 pic.twitter.com/AyJnkxpyo8
ಬೋಪಣ್ಣ ಜೋಡಿಗೆ ಸೋಲು
ಮಿಶ್ರ ಡಬಲ್ಸ್‌ನ ದ್ವಿತೀಯ ಸುತ್ತಿನ ಪಂದ್ಯದಲ್ಲಿ ವಾಕ್ ಓವರ್ ಲಭಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದ ಭಾರತದ ಅನುಭವಿ ಆಟಗಾರ ರೋಹನ್ ಬೋಪಣ್ಣ ಅವರ ಚೀನಾದ ಜತೆಗಾರ್ತಿ ಶುವಾಯ್ ಜಾಂಗ್ ಮಂಗಳವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸ್ಥಳೀಯ ಜೋಡಿ ಆಸ್ಟ್ರೇಲಿಯಾದ ಜಾನ್ ಪೀರ್ಸ್ ಮತ್ತು ಒಲಿವಿಯಾ ಗಡೆಕಿ ವಿರುದ್ಧ 6-2, 4-6, 9-11ರ ಕಠಿಣ ಅಂತರದಲ್ಲಿ ಸೋಲನುಭವಿಸಿತು. ಮೊದಲ ಸೆಟ್ ಗೆದ್ದು ಮುನ್ನಡೆ ಸಾಧಿಸಿದ ಬೋಪಣ್ಣ-ಜಾಂಗ್ ಜೋಡಿ ಆ ಬಳಿಕದ ಎರಡು ಸೆಟ್‌ಗಳಲ್ಲಿ ಸತತವಾಗಿ ಸೋಲು ಕಂಡರು.