ವಿನಾಯಕ ಮಠಪತಿ ಬೆಳಗಾವಿ
ಬಿಜೆಪಿ ನಾಯಕರ ಹಣ ಎಂದ ಕಾಂಗ್ರೆಸ್ ಮುಖಂಡರು
400 ಕೋಟಿ ರು. ಹಣ ಇದ್ದ ಕಂಟೇನರ್ ದರೋಡೆ ಪ್ರಕರಣ ಅಂತೆ ಕಂತೆಗಳ ಮೇಲೆ ಸಾಗಿದೆ. ಈ ನಡುವೆ ಅಪಹರಣ ಪ್ರಕರಣ ಬಂಧನಕ್ಕೆ ಒಳಗಾದ ವಿರಾಟ್ ಗಾಂಧಿ ಹಾಗೂ ಜಯೇಶ್ ಮಧ್ಯೆ ನಡೆದ ವಾಟ್ಸಪ್ ಕರೆ ಸಂಭಾಷಣೆ ವೈರಲ್ ಆಗಿದೆ. ಸಂಭಾಷಣೆ ಪ್ರಕಾರ ಹಣ ಗುಜರಾತ್ ಮೂಲದ ರಾಜಕಾರಣಿಗೆ ಸೇರಿದ್ದು ಎಂದು ಹೇಳಲಾಗುತ್ತಿದ್ದು, ಬಾಲಾಜಿ ಟ್ರಸ್ಟ್ ಹೆಸರು ತಳುಕು ಹಾಕಿಕೊಂಡಿದೆ.
ವೈರಲ್ ಆಗಿರುವ ಆಡಿಯೊ ಪ್ರಕಾರ 2 ಸಾವಿರ ಮುಖ ಬೆಲೆಯ ಸರಿ ಸುಮಾರು 400 ಕೋಟಿ ಹಣ ಕಂಟೇನರ್ʼನಲ್ಲಿ ಗೋವಾದಿಂದ ಕರ್ನಾಟಕ ಮಾರ್ಗವಾಗಿ ಸಾಗಿಸಿ ಬಾಲಾಜಿ ಟ್ರಸ್ಟ್‌ಗೆ ತಗೆದುಕೊಂಡು ಹೋಗುವ ಮೂಲಕ ವಿನಿಮಯ ಮಾಡಲು ಸಿದ್ಧತೆ ನಡೆದಿತ್ತು ಎಂದು ಹೇಳಲಾಗುತ್ತಿದೆ. ಆದರೆ ಈ ದರೋಡೆ ಪ್ರಕರಣದ ಕುರಿತು ಮಹಾರಾಷ್ಟ್ರ ಸರಕಾರ ರಚಿಸಿ ರುವ ಎಸ್‌ಐಟಿ ತಂಡ ಈವರೆಗೂ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡದಿರುವುದು ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ಕಳೆದ ವರ್ಷ 2025ರ ಅಕ್ಟೋಬರ್ 16ರಂದು 400ಕೋಟಿ ಹಣ ತುಂಬಿದ್ದ ಎರಡು ಕಂಟೇನರ್‌ಗಳನ್ನು ಬೆಳಗಾವಿ ಚೋರ್ಲಾ ಘಾಟ್ ನಲ್ಲಿ ತಡೆದು ದರೋಡೆ ಮಾಡಲಾಗಿ ರುವ ಪ್ರಕರಣಕ್ಕೆ ಸಂಬಂಧಿಸಿ ಈವರೆಗೂ ಕರ್ನಾಟಕ, ಮಹಾರಾಷ್ಟ್ರ ಹಾಗೂ ಗೋವಾ ಪೊಲೀಸರಿಗೆ ಸಣ್ಣ ಸುಳಿವು ಸಿಕ್ಕಿಲ್ಲ. ಅಷ್ಟಕ್ಕೂ ಈ ಘಟನೆ ನಡೆದಿರುವುದು ಅನುಮಾನ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: Ranjith H Ashwath Column: ರಾಜ್ಯಪಾಲರ ಭಾಷಣವೆಂಬ 'ಗ್ರೇ ಏರಿಯಾ'
ಹಾಗಾದರೆ ಇಷ್ಟು ದೊಡ್ಡ ಮೊತ್ತದ ಹಣದ ಕಥೆ ಶುರುವಾಗಿದ್ದು ಏಕೆ ಎಂಬ ಸಂಶಯವೂ ಪೊಲೀಸರನ್ನು ಕಾಡುತ್ತಿದೆ. ಮಹಾರಾಷ್ಟ್ರ ಉದ್ಯಮಿಗೂ ಸೇರಿಲ್ಲ ಈ ಹಣ: 400 ಕೋಟಿ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಣ ಮಹಾರಾಷ್ಟ್ರದ ರಿಯಲ್ ಎಸ್ಟೇಟ್ ಉದ್ಯಮಿ ಕಿಶೋರ್ ಸೇಠ್ ಅವರಿಗೂ ಸಂಬಂಧಿಸಿದ್ದಲ್ಲ ಎಂದು ಹೇಳಲಾಗುತ್ತಿದೆ.
ಗುಜರಾತ್ ಮೂಲದ ಪ್ರಭಾವಿ ರಾಜಕಾರಣಿ 2 ಸಾವಿರ ಮುಖ ಬೆಲೆಯ 400 ಕೋಟಿ ಹಣ ವನ್ನು ಚಲಾವಣೆಯ ನೋಟಾಗಿ ವರ್ಗಾವಣೆ ಮಾಡಲು ಉದ್ಯಮಿಗೆ ಒಪ್ಪಿಸಿದ್ದ ಎಂದು ಹೇಳಲಾಗುತ್ತಿದೆ. ಅಪಹರಣಕ್ಕೆ ಒಳಗಾದ ವ್ಯಕ್ತಿ ಸಂದೀಪ್ ಪಾಟೀಲ್‌ಗೆ ಚಿತ್ರ ಹಿಂಸೆ ನೀಡಿ ಹಣವನ್ನು ದರೋಡೆ ಮಾಡಿದ್ದು ನೀನು.
ಇದನ್ನು ಮರಳಿಸು ಎಂದು ಕಿರುಕುಳ ನೀಡಿದ್ದಾಗಿ ಉದ್ಯಮಿ ಕಿಶೋರ್ ಸೇಠ್ ಸೇರಿ ಅನೇಕರ ವಿರುದ್ಧ ಪ್ರಕರಣ ದಾಖಲಾಗಿದೆ. ಹಾಗಿದ್ದರೆ ಇಷ್ಟು ದೊಡ್ಡ ಮೊತ್ತದ ಕಪ್ಪು ಹಣ ಹೊಂದಿ ರುವ ಗುಜರಾತ್ ಉದ್ಯಮಿ ಯಾರು ಎಂಬುದು ಸದ್ಯದ ಕುತೂಹಲ.
ದರೋಡೆ ಹಾಗೂ ಹಣ ನೋಡಿದವರೂ ಒಬ್ಬರೂ ಇಲ್ಲ: ಅಷ್ಟಕ್ಕೂ 400 ಕೋಟಿ ರು. ಇದ್ದ ಕಂಟೇನರ್ ದರೋಡೆ ಹಾಗೂ ಹಣವನ್ನು ನೋಡಿರುವುದಾಗಿ ಈವರೆಗೂ ಬಂಧನಕ್ಕೆ ಒಳಗಾದ ಯಾವೊಬ್ಬ ಆರೋಪಿ ಪೊಲೀಸರ ಮುಂದೆ ಹೇಳಿಲ್ಲ. ಕೇವಲ ವಾಟ್ಸಪ್ ಸಂದೇಶ ಮತ್ತು ಪ್ರಕರಣ ದಾಖಲಿಸಿದ ಸಂದೀಪ್ ಪಾಟೀಲ್ ಹೇಳಿಕೆ ಆಧಾರದ ಮೇಲೆ ಈ ಪ್ರಕರಣಕ್ಕೆ ಇಷ್ಟೊಂದು ಮಹತ್ವ ನೀಡಲಾಗುತ್ತಿದೆ. ಮಹಾರಾಷ್ಟ್ರ ಸರಕಾರ ರಚಿಸಿರುವ ಐಪಿಎಸ್ ಅಧಿಕಾರಿ ಆದಿತ್ಯ ಮಿರ್ಖಲ್ಕರ್ ನೇತೃತ್ವದಲ್ಲಿ ಎಸ್‌ಐಟಿ ತಂಡವೂ ಅಧಿಕೃತವಾಗಿ ದರೋಡೆ ಪ್ರಕರಣ ನಡೆದಿದೆ ಎಂದು ಈವರೆಗೂ ಅಧಿಕೃತ ಹೇಳಿಕೆ ನೀಡಿಲ್ಲ.
ಕೇವಲ ಊಹಾಪೋಹಗಳ ಮೇಲೆ ಕರ್ನಾಟಕ ಹಾಗೂ ಗೋವಾ ಪೊಲೀಸರಿಗೆ ಸಹಕಾರ ನೀಡುವಂತೆ ಪತ್ರ ಬರೆದಿದ್ದು ಬಿಟ್ಟರೆ ಯಾರಿಂದಲೂ ಈವರೆಗೂ ಹೇಳಿಕೆ ಸಿಕ್ಕಿಲ್ಲ.
ಬಾಲಾಜಿ ಟ್ರಸ್ಟ್ ನಂಟು!
ಬಂಧನಕ್ಕೆ ಒಳಗಾದ ಇಬ್ಬರು ಆರೋಪಿಗಳ ನಡುವಿನ ಸಂಭಾಷಣೆ ಸಧ್ಯ ಕುತೂಹಲ ಮೂಡಿಸಿದೆ. ಆರೋಪಿತರಾದ ಕಿಶೋರ್ ಹಾಗೂ ಜಯೇಶ್ ನಡುವಿನ ಸಂಭಾಷಣೆಯಲ್ಲಿ 400 ಕೋಟಿ ಹಣದ ಮೂಲ ಯಾವುದು ಎಂಬುದು ಸ್ಪಷ್ಟವಾಗಿ ತಿಳಿದಿಲ್ಲ. ಗುಜರಾತ್‌ನ ರಾಜಕಾರಣಿ 2 ಸಾವಿರ ನೋಟನ್ನು ಬದಲಾಯಿಸುವ ಜವಾಬ್ದಾರಿಯನ್ನು ಮಹಾರಾಷ್ಟ್ರದ ರಿಯಲ್ ಎಸ್ಟೇಟ್ ಉದ್ಯಮಿ ಕಿಶೋರ್ ಶೇಟ್‌ಗೆ ನೀಡಿದ್ದರಂತೆ. ಕಿಶೋರ್ ತನ್ನ ಐದಾರು ಗೆಳೆಯರನ್ನು ಈ ಕೃತ್ಯಕ್ಕೆ ಬಳಸಿದ್ದಾನೆ. ಕಿಶೋರ್‌ನ ಸ್ನೇಹಿತ ವಿರಾಟ್ ಗಾಂಧಿ ಎಂಬಾತ ಬಾಲಾಜಿ ಟ್ರಸ್ಟ್‌ನಲ್ಲಿ ಹಣದ ಎಕ್ಸೆಂಜ್ ಮಾಡುವ ಏಜೆಂಟ್ ಎಂದು ಹೇಳಲಾಗುತ್ತಿದೆ. ವಿರಾಟ್ ಗಾಂಧಿ ಮೂಲಕ 400 ಕೋಟಿ ಹಣವನ್ನು ವಿನಿಮಯ ಮಾಡುವ ಉದ್ದೇಶಕ್ಕೆ ಬೆಳಗಾವಿ ಮಾರ್ಗವಾಗಿ ಆಂಧ್ರಪ್ರದೇಶದ ಬಾಲಾಜಿ ಟ್ರಸ್ಟ್‌ಗೆ ಕಳುಹಿಸುವ ಕೆಲಸ ನಡೆದಿತ್ತು ಎಂಬುದು ಆರೋಪಿಗಳ ಸಂಭಾಷಣೆಯ ಸಾರಾಂಶ.
*
ಪ್ರಕರಣಕ್ಕೆ ಸಂಬಂಧಿಸಿದಂತೆ ಯಾರಾದರೂ ಬಂದು ದೂರು ಕೊಟ್ಟರೆ ನಮ್ಮ ಅಧಿಕಾರಿ ಗಳು ತನಿಖೆ ನಡೆಸುತ್ತಾರೆ. ಹಣ ದರೋಡೆ ಆಗಿದ್ದು ಎಲ್ಲಿ ಎಂಬ ಗೊಂದಲ ಇದೆ. ಪ್ರಕರಣ ದ ಸತ್ಯಾಸತ್ಯತೆ ಏನು ಎಂಬುದು ಗೊತ್ತಿಲ್ಲ. 400 ಕೋಟಿ ಎಂದು ಹೇಳಲು ಹಣ ಯಾರೂ ಎಣಿಸಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಓಡಾಡುತ್ತಿರುವುದು ಮಾತ್ರ ವಿಷಯವಾಗಿದೆ. ಮಹಾರಾಷ್ಟ್ರದ ತನಿಖೆಗೆ ನಾವು ಸಹಕಾರ ನೀಡುತ್ತೇವೆ.
- ಸತೀಶ್ ಜಾರಕಿಹೊಳಿ, ಲೋಕೋಪಯೋಗಿ ಸಚಿವ
*
ದರೋಡೆ ಪ್ರಕರಣದಲ್ಲಿ ಕಾಂಗ್ರೆಸ್ ಅಥವಾ ಬಿಜೆಪಿ ಯಾರೇ ಇರಲಿ, ಸತ್ಯ ಹೊರಬರಬೇಕು. ಮಾಧ್ಯಮಗಳ ವರದಿ ಪ್ರಕಾರ ಈ ಹಣಕ್ಕೆ ಗುಜರಾತ್, ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳ ಲಿಂಕ್ ಇದೆ. ಈ ಮೂರೂ ರಾಜ್ಯಗಳಲ್ಲಿ ಬಿಜೆಪಿ ಆಡಳಿತವಿದ್ದು, ಸರಕಾರಗಳ ಮೂಗಿನಡಿಯೇ ಇಷ್ಟೊಂದು ದೊಡ್ಡ ಮೊತ್ತದ ಹಣದ ಚಲನವಲನ ಹೇಗೆ ಸಾಧ್ಯ?
-ಪ್ರಿಯಾಂಕ್ ಖರ್ಗೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ