ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಶಿರಸಿ ಜಾತ್ರೆಗೆ ದಾಳಿ ಇಡಲಿದೆ ಕಲ್ಲಂಗಡಿ ಹಣ್ಣಿನ ರಾಶಿ

‘ಕಳೆದ ಜಾತ್ರೆಯ ಅವಧಿಯಲ್ಲಿ ಸುಮಾರು 2 ಎಕರೆ ಪ್ರದೇಶದಲ್ಲಿ ಕಲ್ಲಂಗಡಿ ಬೆಳೆದಿದ್ದೆವು. ಜಾತ್ರೆಗೆ ಲಕ್ಷಾಂತರ ಜನ ಬರುವುದರಿಂದ ಸ್ಥಳೀಯವಾಗಿಯೇ ಟನ್ ಗಟ್ಟಲೆ ಹಣ್ಣು ಖರ್ಚಾಯಿತು. ಅಂದು ಸುಮಾರು 2 ರಿಂದ 3 ಲಕ್ಷ ರೂಪಾಯಿಗಳವರೆಗೂ ನಿವ್ವಳ ಲಾಭ ಕೈ ಸೇರಿತ್ತು. ಈ ಬಾರಿಯೂ ಅದೇ ನಿರೀಕ್ಷೆಯಲ್ಲಿ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡಿದ್ದೇವೆ,‘ ಎನ್ನುತ್ತಾರೆ ಸ್ಥಳೀಯ ಬೆಳೆಗಾರರು.

ವಿನುತಾ ಹೆಗಡೆ ಶಿರಸಿ

ಸುಪರ್ಣ ನದಿಯ ತಟದಲ್ಲಿ ಬೆಳೆಯುವ ಕಲ್ಲಂಗಡಿ

ಮಾರಿಕಾಂಬೆ ಜಾತ್ರೆ ಹೊತ್ತಿಗೆ ಹಣ್ಣುಗಳ ಮಾಗಿಸುವ ಗುರಿ

ಉತ್ತರ ಕನ್ನಡ ಜಿಲ್ಲೆಯ ಸಾಂಸ್ಕೃತಿಕ ನಗರಿ ಬನವಾಸಿ ಈಗ ಕೇವಲ ಕದಂಬರ ಇತಿಹಾಸಕ್ಕಷ್ಟೇ ಅಲ್ಲ, ಸುಪರ್ಣ ನದಿಯ ತಟದ ಫಲವತ್ತಾದ ಭೂಮಿಯಲ್ಲಿ ಬೆಳೆಯುವ ಕಲ್ಲಂಗಡಿ ಹಣ್ಣಿಗೂ ಹೆಸರುವಾಸಿ. ಈ ಬಾರಿ ಬನವಾಸಿ ಭಾಗದ ಕೃಷಿಕರು ಹೆಚ್ಚಿನ ಉತ್ಸಾಹದಲ್ಲಿದ್ದು, ಫೆಬ್ರವರಿ ತಿಂಗಳಿ ನಲ್ಲಿ ನಡೆಯಲಿರುವ ಸುಪ್ರಸಿದ್ಧ ಶಿರಸಿ ಮಾರಿಕಾಂಬಾ ಜಾತ್ರೆಯ ವೇಳೆಗೆ ಹಣ್ಣುಗಳನ್ನು ಮಾರು ಕಟ್ಟೆಗೆ ಬಿಡುಗಡೆ ಮಾಡಲು ಭರ್ಜರಿ ಸಿದ್ಧತೆ ನಡೆಸಿದ್ದಾರೆ.

ಬನವಾಸಿ ಹೋಬಳಿಯ ನರಗುಂದ, ಅಜ್ಜರಣಿ, ಬದನಗೋಡು ಮತ್ತು ಕದಂಬಪುರ ಭಾಗದ ಗದ್ದೆಗಳಲ್ಲಿ ಈಗ ಕಲ್ಲಂಗಡಿ ಬೀಜಗಳು ಮೊಳಕೆಯೊಡೆದು ಹಸಿರು ಬಳ್ಳಿಗಳು ಹಬ್ಬತೊಡಗಿವೆ. ಇಲ್ಲಿನ ಮರಳು ಮಿಶ್ರಿತ ಮಣ್ಣು ಕಲ್ಲಂಗಡಿ ಬೆಳೆಗೆ ಅತ್ಯಂತ ಪೂರಕವಾಗಿದೆ. ಪ್ರಸ್ತುತ ರೈತರು ದಿನರಾತ್ರಿ ಎನ್ನದೆ ಗದ್ದೆಗಳಲ್ಲಿ ದುಡಿಯುತ್ತಿದ್ದು, ಜಾತ್ರೆಯ ಹೊತ್ತಿಗೆ ಹಣ್ಣುಗಳನ್ನು ಮಾಗಿಸುವ ಗುರಿ ಹೊಂದಿದ್ದಾರೆ.

ಬನವಾಸಿ ಭಾಗದ ಪ್ರಗತಿಪರ ರೈತರಾದ ಮಂಜುನಾಥ ಗೌಡ ಮತ್ತು ಬಸವರಾಜಪ್ಪ ಅವರಂತಹ ಅನೇಕರು ಈ ಕೃಷಿಯಲ್ಲಿ ಸೈ ಎನಿಸಿಕೊಂಡಿದ್ದಾರೆ. ಕಳೆದ ಬಾರಿ ಶಿರಸಿ ಮಾರಿಕಾಂಬಾ ಜಾತ್ರೆಯ ಸಂದರ್ಭದಲ್ಲಿ ಇವರು ಕಂಡ ಯಶಸ್ಸು ಈ ಭಾಗದ ಇತರ ರೈತರಿಗೂ ಸ್ಪೂರ್ತಿಯಾಗಿದೆ.

‘ಕಳೆದ ಜಾತ್ರೆಯ ಅವಧಿಯಲ್ಲಿ ಸುಮಾರು 2 ಎಕರೆ ಪ್ರದೇಶದಲ್ಲಿ ಕಲ್ಲಂಗಡಿ ಬೆಳೆದಿದ್ದೆವು. ಜಾತ್ರೆಗೆ ಲಕ್ಷಾಂತರ ಜನ ಬರುವುದರಿಂದ ಸ್ಥಳೀಯವಾಗಿಯೇ ಟನ್ ಗಟ್ಟಲೆ ಹಣ್ಣು ಖರ್ಚಾಯಿತು. ಅಂದು ಸುಮಾರು 2 ರಿಂದ 3 ಲಕ್ಷ ರೂಪಾಯಿಗಳವರೆಗೂ ನಿವ್ವಳ ಲಾಭ ಕೈ ಸೇರಿತ್ತು. ಈ ಬಾರಿಯೂ ಅದೇ ನಿರೀಕ್ಷೆಯಲ್ಲಿ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡಿದ್ದೇವೆ,‘ ಎನ್ನುತ್ತಾರೆ ಸ್ಥಳೀಯ ಬೆಳೆಗಾರರು.

ಇದನ್ನೂ ಓದಿ: Water Melon Jewel Fashion 2025: ಹುಡುಗಿಯರ ಕಿವಿಯನ್ನು ಅಲಂಕರಿಸುತ್ತಿರುವ ಕಲ್ಲಂಗಡಿ ಆಕ್ಸೆಸರೀಸ್

ಕಳೆದ ಬಾರಿ ಶಿರಸಿ ಜಾತ್ರೆಯ ಅವಧಿಯಲ್ಲಿ ಬನವಾಸಿ ಕಲ್ಲಂಗಡಿಗೆ ಭಾರಿ ಬೇಡಿಕೆ ಇತ್ತು. ಮಾರು ಕಟ್ಟೆಯಲ್ಲಿ ಪ್ರತಿ ಕೆ.ಜಿ.ಗೆ 15 ರಿಂದ 20 ರೂಪಾಯಿ ದರ ಸಿಕ್ಕಿದ್ದರಿಂದ, ಎಕರೆಗೆ ಸರಾಸರಿ 15 ರಿಂದ 20 ಟನ್ ಇಳುವರಿ ಪಡೆದ ರೈತರು ಖರ್ಚು ಕಳೆದು ಉತ್ತಮ ಆದಾಯ ಗಳಿಸಿದ್ದರು. ಈ ಬಾರಿ ಗೊಬ್ಬರ ಮತ್ತು ಬೀಜದ ಬೆಲೆ ಏರಿಕೆಯಾಗಿದ್ದರೂ, ಮಾರುಕಟ್ಟೆ ದರ ಸ್ಥಿರವಾಗಿದ್ದರೆ ಲಾಭದ ಪ್ರಮಾಣ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ.

ಈ ಭಾಗದ ರೈತರು ಈಗ ಸಾಂಪ್ರದಾಯಿಕ ಪದ್ಧತಿ ಬಿಟ್ಟು ಮಲ್ಚಿಂಗ್ ಮತ್ತು ಹನಿ ನೀರಾವರಿ ಮೊರೆ ಹೋಗಿದ್ದಾರೆ. ಇದರಿಂದ ಕಳೆ ನಿಯಂತ್ರಣ ಸುಲಭವಾಗಿದೆ. ನೀರಿನ ಬಳಕೆ ಶೇ.40 ರಷ್ಟು ಉಳಿತಾಯ ವಾಗುತ್ತಿದೆ. ಹಣ್ಣಿನ ಗಾತ್ರ ಮತ್ತು ಹೊಳಪು ಹೆಚ್ಚಿರುವುದರಿಂದ ವ್ಯಾಪಾರಿಗಳು ಗದ್ದೆಗೇ ಬಂದು ಖರೀದಿ ಮಾಡುತ್ತಿದ್ದಾರೆ.

ಸವಾಲುಗಳ ನಡುವೆಯೂ ಭರವಸೆ: ಕಾಡು ಹಂದಿಗಳ ಹಾವಳಿ ಮತ್ತು ದಿಢೀರ್‌ ಹವಾಮಾನ ಬದಲಾವಣೆಯ ಆತಂಕ ರೈತರನ್ನು ಕಾಡುತ್ತಿದೆ. ಆದರೂ, ಶಿರಸಿ ಮಾರಿಕಾಂಬೆಯ ಜಾತ್ರೆಯು ತಮ್ಮ ಬದುಕಿನಲ್ಲಿ ಸುಭೀಕ್ಷೆ ತರುತ್ತದೆ ಎಂಬ ಅಚಲ ನಂಬಿಕೆ ಅವರಲ್ಲಿದೆ. ತೋಟಗಾರಿಕಾ ಇಲಾಖೆಯು ರೈತರಿಗೆ ಸಕಾಲದಲ್ಲಿ ರೋಗ ನಿಯಂತ್ರಣದ ಬಗ್ಗೆ ಮಾಹಿತಿ ನೀಡುತ್ತಿರುವುದು ಕೃಷಿಕರಿಗೆ ಆನೆಯ ಬಲ ನೀಡಿದೆ.

ತಂತ್ರಜ್ಞಾನದ ಸ್ಪರ್ಶ