ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು
ಸಂಪನ್ಮೂಲ ಕುಸಿತ, ವೆಚ್ಚಗಳ ಗಾತ್ರದ ಏರುಗತಿ, ಸಾಲಕ್ಕೆ ಮಿತಿ ನಡುವೆ ಆಯವ್ಯಯ ತಯಾರಿ ತಿಣುಕಾಟ
ರಾಜ್ಯ ಸರಕಾರ ಈ ಬಾರಿ ಚುನಾವಣೆಗಳ ಬಜೆಟ್ ಸಿದ್ಧಪಡಿಸುತ್ತಿದ್ದು, ಇದಕ್ಕೆ ಸಂಪೂನ್ಮೂಲ ಹೊಂದಿಸಲು ತಿಣಕಾಡುವಂತಾಗಿದೆ. ಅದರಲ್ಲೂ ಈತನಕ 16 ಬಾರಿಯೂ ಉತ್ತಮ ಬಜೆಟ್ ಮಂಡಿಸುವ ಮೂಲಕ ದೇಶದ ಗಮನ ಸೆಳೆದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಈ ಬಾರಿ 17ನೇ ಬಜೆಟ್ ದೊಡ್ಡ ಸವಾಲೇ ಆಗಿದೆ.
ಕಾರಣ, ಗ್ಯಾರಂಟಿಗಳ ಹಣಕಾಸು ಆರ್ಭಟ ಹಾಗೂ ಕೇಂದ್ರ ಸರಕಾರದ ಆರ್ಥಿಕ ಅಸಹಕಾರದಿಂದ ರಾಜ್ಯ ಸರಕಾರ ಅನೇಕ ಯೋಜನೆಗಳಿಗೆ ಹಣವಿಲ್ಲದೆ ಪರದಾಡುವಂತಾಗಿದೆ. ಇಂಥ ಸ್ಥಿತಿಯಲ್ಲಿ ಮುಂಬರುವ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಬಜೆಟ್ ತಯಾರಿಸಬೇಕಿದೆ. ಇದರೊಂದಿಗೆ ನಡೆಸಲೇ ಬೇಕಾದ ಅನಿವಾರ್ಯದ ಐದು ಪಾಲಿಕೆಗಳ ಜಿಬಿಎ ಚುನಾವಣೆ. ಅಷ್ಟಕ್ಕೂ ಈ ಹಿಂದೆ ಹಾಗೊಮ್ಮೆ ಹೀಗೊಮ್ಮೆ ಬರುತ್ತಿದ್ದ ಚುನಾ ವಣೆಗಳು ಸಾಲಾಗಿ ಈಗ ಒಮ್ಮೆಲೇ ಬಂದು ಧುತ್ತೆಂದು ಬಂದು ನಿಂತಿರುವುದು ಹಾಗೂ ಅವುಗಳನ್ನು ಎದುರಿಸಲು ಯೋಜನೆಗಳಿಗೆ ಅನುದಾನ ಹೊಂದಿಸು ವುದು ಸರಕಾರಕ್ಕೆ ತ್ರಾಸದಾಯಕ ಎನ್ನಲಾಗಿದೆ.
ಈ ಮಧ್ಯೆ ಕಳೆದ ಎರಡೂ ಬಜೆಟ್‌ಗಳಲ್ಲೂ ಹೆಚ್ಚಿನ ಅನುದಾನ ಆದ್ಯತೆ ಪಡೆದುಕೊಂಡಿದ್ದ ಗ್ಯಾರಂಟಿಗಳಿಂದ ಕ್ಷೇತ್ರಗಳ ಅಭಿವೃದ್ಧಿಯ ಬಂಡವಾಳ ವೆಚ್ಚಕ್ಕೆ ಆದ್ಯತೆ ಸಿಗುತ್ತಿಲ್ಲ ಎನ್ನುವ ಕಾಂಗ್ರೆಸ್ ಶಾಸಕರ ಅಳಲು ಅಳಿಸಬೇಕಿದೆ. ಆದರೆ ವಾಣಿಜ್ಯ ತೆರಿಗೆ, ಆಸ್ತಿಗಳ ನೋಂದಣಿ ಸೇರಿದಂತೆ ಪ್ರಮುಖ ಆದಾಯ ಮೂಲಗಳಿಂದ ನಿರೀಕ್ಷಿತ ಆದಾಯ ಕ್ರೋಢೀಕರಣವಾಗದ ಕಾರಣ ಎಲ್ಲ ಯೋಜನೆಗಳಿಗೂ ಎಲ್ಲಿಂದ ಸಂಪನ್ಮೂಲ ಕ್ರೋಢೀಕರಿಸುವುದು ಎನ್ನುವ ತಲೆ ನೋವು ಸರಕಾರ ದ್ದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: Karnataka Budget 2025: ರಾಜ್ಯದ ಪ್ರಗತಿಗೆ ಪೂರಕ ಬಜೆಟ್- ಲಕ್ಷ್ಮೀ ಹೆಬ್ಬಾಳಕರ್
ಸಿದ್ದುಗೆ ಈ ಬಾರಿ ವಿಶೇಷ ಸವಾಲು: ಹೆಚ್ಚು ಬಾರಿ ಬಜೆಟ್ ಮಂಡಿಸಿದ ಖ್ಯಾತಿಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಈ ಬಾರಿ ಬಜೆಟ್ ವಿಶೇಷ ಸವಾಲನ್ನೇ ಒಡ್ಡಿದೆ ಎನ್ನಲಾಗಿದೆ. ಕಳೆದ ಬಾರಿ 4.09 ಲಕ್ಷ ಕೋಟಿ ಗಾತ್ರದ ಬಜೆಟ್ ಮಂಡಿಸಿದ್ದ ಸಿದ್ದರಾಮಯ್ಯ ಅವರು ಈ ಸಾಲಿನಲ್ಲಿ ಕಡಿಮೆ ಮೊತ್ತವನ್ನಾದರೂ ದಾಖಲಿಸಿ ಗಾತ್ರ ಹೆಚ್ಚಿಸುವ ಸಾಧ್ಯತೆ ಇದೆ.
ಹಾಗಂತ ಸಾಲದ ಪ್ರಮಾಣವನ್ನೂ ಹೆಚ್ಚಿಸುವಂತಿಲ್ಲ. ಕಳೆದ ಬಾರಿಯಂತೆ ಕೊರತೆ ಬಜೆಟ್ ಮಂಡಿಸುವಂತಿಲ್ಲ. ಹಾಗೆಯೇ ಹಿಂದಿನ ಸಾಲಿನಲ್ಲಿದ್ದ ವಿತ್ತೀಯ ಕೊರತೆ (ಜಿಎಸ್‌ಡಿಪಿಯ ಶೇ.3ರ ಮೀರದಂತೆ) 90,428 ಕೋಟಿ ರು.ಗಳಿಗಿಂತ ಈಗ ಹೆಚ್ಚಿಸಬೇಕಾದ ಅನಿವಾರ್ಯವೂ ಬಜೆಟ್ ಕತೃ ಸಿದ್ದರಾಮಯ್ಯ ಅವರಿಗೆ ಇದೆ ಎನ್ನಲಾಗಿದೆ.
ಇನ್ನು ಸಿಗ್ನೇಚರ್ ಯೋಜನೆ ಎನ್ನಲಾದ ಗ್ಯಾರಂಟಿಗಳಿಗೂ ಅನುದಾನ ಕೊರತೆ ಮಾಡದೆ, ಅತ್ತ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಹಾಗೂ ಪಾಲಿಕೆಗಳ ಚುನಾವಣೆಗಳ ಹಿನ್ನೆಲೆಯಲ್ಲಿ ಗ್ರಾಮೀಣ ಮತ್ತು ಬೆಂಗಳೂರು ಹಾಗೂ ಇತರ ನಗರ ಪ್ರದೇಶಗಳಿಗೆ ಹೆಚ್ಚಿನ ಅನುದಾನ ಘೋಷಣೆ ಮಾಡಬೇಕಾದ ಸಂದಿಗ್ಧತೆಯಲ್ಲೂ ಸರಕಾರವಿದೆ ಎಂದು ಹೇಳಲಾಗಿದೆ.
ಇನ್ನು ರಾಜಕೀಯ ದಾಳವಾದ ಅಹಿಂದ ಸಂತುಷ್ಠಿಯ ಒಂದಷ್ಟು ಕಾರ್ಯಕ್ರಮಗಳನ್ನೂ ಪ್ರಕಟಿಸ ಬೇಕಿದೆ. ಆದರೆ ಕೇಂದ್ರ ಸರಕಾರದ ಅಸಹಕಾರ ಮತ್ತು ತೆರಿಗೆ ಕೊರತೆ ದೊಡ್ಡ ಸಮಸ್ಯೆಯಾಗಿದೆ. ಇಂಥ ಸ್ಥಿತಿಯಲ್ಲಿ ಎಲ್ಲರನ್ನೂ ಸಂತೈಸುವ ಬಜೆಟ್ ಸೃಷ್ಟಿ ಹೇಗೆ ಸಾಧ್ಯ ಎನ್ನುವ ಪ್ರಶ್ನೆ ಮುಂದಿಟ್ಟು ಕೊಂಡು ಸಿದ್ದರಾಮಯ್ಯ ಬಜೆಟ್ ಸಿದ್ಧಪಡಿಸುತ್ತಿರುವ ಅರ್ಥಿಕ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಸಂಪನ್ಮೂಲ ಕೊರತೆ ಎಲ್ಲಿ? ಹೇಗೆ?
ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆಗಳನ್ನು ನಡೆಸಿ 5 ವರ್ಷಗಳಿಗೂ ಹೆಚ್ಚಿನ ಅವಧಿಯಾಗಿದ್ದು, ಹೈಕೋರ್ಟ್ ತಪರಾಕಿಯಿಂದ ಜೂನ್ ಒಳಗೆ ಚುನಾವಣೆ ನಡೆಸಬೇಕಿದೆ. ಇದೇ ರೀತಿ 6 ವರ್ಷಗಳಿಂದ ಚುನಾವಣೆಯನ್ನೇ ಕಾಣದ ಬೆಂಗಳೂರಿನಲ್ಲಿ ಐದು ಪಾಲಿಕೆಗಳ ಚುನಾವಣೆಗೆ ಸುಪ್ರೀಂಕೋರ್ಟ್ ಕಟ್ಟುನಿಟ್ಟಿನ ಸೂಚನೆ ನೀಡಿರುವ ಕಾರಣ ಚುನಾವಣೆ ನಡೆಸಲೇಬೇಕಿದೆ.
ಇಲ್ಲಿ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಬಹುತೇಕ ಮೂರು ವರ್ಷಗಳಿಂದ ಹೆಚ್ಚಿನ ಅನುದಾನ ಸಿಗದ ಕಾರಣ ಈ ಬಾರಿ ಹೆಚ್ಚಿನ ಅನುದಾನ ನೀಡುವುದು ಸಿದ್ದರಾಮಯ್ಯ ಅವರಿಗೆ ಅನಿವಾರ್ಯ. ಇನ್ನು ಬೆಂಗಳೂರಿನಲ್ಲಿ ಜಿಬಿಎ ಚುನಾವಣೆ ಹಿನ್ನೆಲೆಯಲ್ಲಿ ಸುರಂಗ ಮಾರ್ಗ ಸೇರಿದಂತೆ ಅನೇಕ ಮೇಲು ಸೇತುವೆ, ಉಪನಗರ, ಅಂಡರ್‌ಪಾಸ್‌ನಂಥ ಬೃಹತ್ ಯೋಜನೆಗಳನ್ನು ಪ್ರಕಟಿಸಬೇಕಿದೆ. ಆದರೆ ಬಜೆಟ್‌ನ ಮೂಲ ಆದಾಯವಾಗಿರುವ ವಾಣಿಜ್ಯ ತೆರಿಗೆಯಲ್ಲಿ ನಿರೀಕ್ಷಿತ ಪ್ರಗತಿ ಕಂಡಿಲ್ಲ. ಅಂದರೆ ಕಳೆದ ಬಾರಿ 1 ಲಕ್ಷ ಕೋಟಿ ರು. ಮೀರಿದ್ದ ತೆರಿಗೆ ಸಂಗ್ರಹ ಈ ಬಾರಿ 90 ಸಾವಿರ ಕೋಟಿ ರು. ಗಳಿಗೆ ಸುಸ್ತಾಗಿದೆ.
ಇದೇ ರೀತಿ ಮುಂದ್ರಾಂಕ ಮತ್ತು ನೋಂದಣಿಯಲ್ಲೂ 1000 ಕೋಟಿ ರು.ಗಳಿಗೂ ಹೆಚ್ಚಿನ ಕೊರತೆ ಉಂಟಾಗಿದೆ. ಹಾಗೆಯೇ ಮೋಟಾರ್ ವಾಹನ ನೋಂದಣಿಯಲ್ಲೂ ಕುರಿತ ವಾಗಿದೆ. ಇನ್ನು ಪ್ರಮುಖ ಆದಾಯವಾಗಿದ್ದ ಅಬಕಾರಿಯಲ್ಲೂ ನಿರೀಕ್ಷಿತ ಆದಾಯ ಸಂಗ್ರಹವಾಗಿಲ್ಲ. ಅಷ್ಟಕ್ಕೂ ಹೊಸದಾಗಿ 600 ಲೈಸೆನ್ಸ್ʼಗಳನ್ನು ಹರಾಜು ಮಾಡಿದ್ದರೆ ಕನಿಷ್ಠ 500 ಕೋಟಿ ರು. ಹೆಚ್ಚುವರಿ ಆದಾಯ ಸಿಗುತ್ತಿತ್ತು. ಆದರೆ ಸದ್ಯಕ್ಕೆ ಅದೂ ದೂರದ ಮಾತಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗ್ಯಾರಂಟಿಗಳಿಗೆ ಕತ್ತರಿ ಪ್ರಯೋಗ
ಸಂಪನ್ಮೂಲ ಕೊರತೆ ಹಿನ್ನೆಲೆಯಲ್ಲಿ ಈ ಬಾರಿ ಗ್ಯಾರಂಟಿಗಳಿಗೆ ಕೊಂಚ ಕಠಿಣ ನಿಯಮಗಳನ್ನು ಹಾಕಿ ಅನಗತ್ಯ ವೆಚ್ಚ ಕಡಿಮೆ ಮಾಡಲು ಚಿಂತಿಸಲಾಗಿದೆ. ಅಂದರೆ ಸರಕಾರಿ ನೌಕರರು, ಹೆಚ್ಚಿನ ಭೂಮಿ ಹೊಂದಿರುವವರ ಬಿಪಿಎಲ್ ಕಾರ್ಡ್‌ಗಳು ಸೇರಿದಂತೆ 2 ಲಕ್ಷಕ್ಕೂ ಹೆಚ್ಚು ಕಾಡ್ಗಳು ರದ್ದು ಗೊಳಿಸುವುದು, ಆದಾಯ ತೆರಿಗೆ ಪಾವತಿಸುವವರು ಹಾಗೂ ಜೀವಿತ ಪ್ರಮಾಣಪತ್ರ ನೀಡದವರಿಗೆ ಗೃಹಲಕ್ಷ್ಮೀ ಯೋಜನೆಯಿಂದ ಮುಕ್ತಿ ನೀಡುವುದು, ಶಕ್ತಿ ಯೋಜನೆ ಮತ್ತು ಗೃಹಜ್ಯೋತಿ ವೆಚ್ಚಕ್ಕೆ ಕೊಂಚ ಕಡಿವಾಣ ಹಾಕಿ, ಸುಮಾರು 60 ಸಾವಿರ ಕೋಟಿಗಳ ಹೊರೆಯನ್ನು 50 ಸಾವಿರ ಕೋಟಿಗೆ ಇಳಿಸಲು ಸಾಧ್ಯವೇ ಎನ್ನುವ ಚಿಂತನೆ ಆರ್ಥಿಕ ಅಧಿಕಾರಿಗಳದ್ದು, ಇದರ ಜತೆಗೆ ಅಬಕಾರಿ ಮತ್ತು ಸಿಗರೇಟ್‌ನಂತಹ ರಾಜ್ಯ ವ್ಯಾಪ್ತಿಯ ಕೆಲವು ವಿಲಾಸಿ ವಸ್ತುಗಳ ಮೇಲೆ ತೆರಿಗೆ ಏರಿಕೆ ಮಾಡಿ ಸಂಪನ್ಮೂಲ ಹೊಂದಾಣಿಕೆ ಮಾಡುವ ನಿಟ್ಟಿನಲ್ಲಿ ಚರ್ಚೆ ನಡೆದಿದೆ ಎಂದು ಆರ್ಥಿಕ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.