ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಮಳೆ ಕೈ ಕೊಟ್ಟ ಹಿನ್ನೆಲೆ ಕೃಷಿಗೆ ಸಂಕಷ್ಟ, ಬರ ಘೋಷಣೆಗೆ ರೈತರ ಒತ್ತಾಯ: 1000 ಕೋಟಿ ವಿಶೇಷ ಪ್ಯಾಕೇಜ್‌ಗೆ ಆಗ್ರಹ

ಕಲಬುರಗಿಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆಗಮಿಸಿರುವ ಸಂದರ್ಭದಲ್ಲೇ ರೈತರ ಈ ಬೇಡಿಕೆ ಮತ್ತಷ್ಟು ಮುನ್ನೆಲೆಗೆ ಬಂದಿದೆ. ಬರದ ಸಂಕಷ್ಟದಲ್ಲಿರುವ ಕೃಷಿಕರಿಗೆ ಸರಕಾರ ತಕ್ಷಣ ಸ್ಪಂದಿಸಬೇಕು. ನೈಜ ಬೆಳೆನಷ್ಟ ಗುರುತಿಸಿ ಪರಿಹಾರ ಕಲ್ಪಿಸುವ ಜತೆಗೆ ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಹಾಗೂ ಕೃಷಿ ಪುನಶ್ಚೇತನಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು.

ದೇವೇಂದ್ರ ಜಾಡಿ ಕಲಬುರಗಿ

ಮಳೆ ಕೈಕೊಟ್ಟಿದೆ ಬೆಳೆ ಕೈಗೆ ಸಿಗುತ್ತಿಲ್ಲ ಕೃಷಿಯನ್ನೇ ನಂಬಿ ಬದುಕುತ್ತಿರುವ ಅನ್ನದಾತ ಸಂಕಷ್ಟಕ್ಕೆ ಸಿಲುಕಿ ದ್ದಾನೆ. ಜಮೀನಿನಲ್ಲಿ ಬೆಳೆ ಒಣಗುವ ಆತಂಕ ಒಂದೆಡೆ ಯಾದರೆ, ಮುಂದಿನ ಹಂಗಾಮಿನ ಕೃಷಿಗೆ ಹಣ ಹೊಂದಿಸುವ ಚಿಂತೆ ಮತ್ತೊಂದೆಡೆ. ಹೀಗಾಗಿ ಜಿಲ್ಲೆಯಲ್ಲಿ ಬರದ ಛಾಯೆ ಗಾಢ ವಾಗಿದ್ದು, ಕಲಬುರಗಿ ಜಿಲ್ಲೆಯನ್ನು ಬರಪೀಡಿತವೆಂದು ಘೋಷಿಸಬೇಕು ಎಂಬುದು ರೈತರ ಪ್ರಮುಖ ಬೇಡಿಕೆಯಾಗಿದೆ.

ಕಲಬುರಗಿಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆಗಮಿಸಿರುವ ಸಂದರ್ಭದಲ್ಲೇ ರೈತರ ಈ ಬೇಡಿಕೆ ಮತ್ತಷ್ಟು ಮುನ್ನೆಲೆಗೆ ಬಂದಿದೆ. ಬರದ ಸಂಕಷ್ಟದಲ್ಲಿರುವ ಕೃಷಿಕರಿಗೆ ಸರಕಾರ ತಕ್ಷಣ ಸ್ಪಂದಿಸ ಬೇಕು. ನೈಜ ಬೆಳೆನಷ್ಟ ಗುರುತಿಸಿ ಪರಿಹಾರ ಕಲ್ಪಿಸುವ ಜತೆಗೆ ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಹಾಗೂ ಕೃಷಿ ಪುನಶ್ಚೇತನಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು.

ಜಿಲ್ಲೆಯ ಸಂಕಷ್ಟಕ್ಕೆ 1000 ಕೋಟಿ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂಬ ಆಗ್ರಹವೂ ಕೇಳಿ ಬರುತ್ತಿದೆ. 2026-27ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಗೆ 8,90,633.8 ಹೆಕ್ಟೇರ್ ಬಿತ್ತನೆ ಗುರಿ ನಿಗದಿ ಯಾಗಿತ್ತು. ಆದರೆ 7,63,157 ಹೆಕ್ಟೇರ್ ನಲ್ಲಷ್ಟೇ ಬಿತ್ತನೆಯಾಗಿದೆ. ಶೇ.86ರಷ್ಟು ಗುರಿ ಸಾಧನೆಯಾಗಿದ್ದು, 1,27,476.8 ಹೆಕ್ಟೇರ್ ಗುರಿ ತಲುಪಿಲ್ಲ. ಈ ಅಂತರವನ್ನು ನೇರವಾಗಿ ಬೆಳೆನಷ್ಟ ವೆಂದು ಪರಿಗಣಿಸಲು ಸಾಧ್ಯವಿಲ್ಲ. ಆದರೆ ಕೃಷಿ ಚಟುವಟಿಕೆಯ ಮೇಲಿನ ಒತ್ತಡವನ್ನು ಇದು ಸೂಚಿಸುತ್ತದೆ. ಬಿತ್ತನೆ ನಡೆದ ಪ್ರದೇಶದಲ್ಲಿಯೂ ಮಳೆ ಲಭ್ಯತೆ, ಬೆಳೆ ಬೆಳವಣಿಗೆ ಹಾಗೂ ನಿರೀಕ್ಷಿತ ಇಳುವರಿ ಸಿಗಲಿದೆಯೇ ಎಂಬುದು ರೈತರ ಮುಂದಿರುವ ದೊಡ್ಡ ಪ್ರಶ್ನೆಯಾಗಿದೆ. ನೈಜ ಬೆಳೆ ನಷ್ಟವನ್ನು ಕ್ಷೇತ್ರ ಸಮೀಕ್ಷೆಯ ಮೂಲಕವೇ ಖಚಿತಪಡಿಸಬೇಕಿದೆ. ಆಹಾರ ಧಾನ್ಯಗಳ ಲ್ಲಿಯೂ ಕೊರತೆ ಕಂಡುಬಂದಿದ್ದು, 7,20,316.8 ಹೆಕ್ಟೇರ್ ಗುರಿಗೆ 5,96,036 ಹೆಕ್ಟೇರ್ ಸಾಧನೆಯಾಗಿದೆ.

ಇದನ್ನೂ ಓದಿ: IT Park at Kalaburagi: ಸ್ಪೋರ್ಟ್ಸ್ ಸಿಟಿ, ಕೆಆರ್‌ಐಎ, ಕೋಟಿ ವೃಕ್ಷ ಅಭಿಯಾನ ಸೇರಿ ಹಲವು ಯೋಜನೆ: ಕಲಬುರಗಿಗೆ ಐಟಿ ಪಾರ್ಕ್, 50 ಸಾವಿರ ನಿವೇಶನ

ಜೇವರ್ಗಿ-ಯಡ್ರಾಮಿಯಲ್ಲಿ ಮಳೆ ಕೊರತೆ: ತಾಲೂಕುವಾರು ಅಂಕಿ-ಅಂಶದಲ್ಲಿ ಜೇವರ್ಗಿ ಹೆಚ್ಚು ಹಿಂದುಳಿದಿದೆ. 93,793 ಹೆಕ್ಟೇರ್ ಗುರಿಗೆ 67,858 ಹೆಕ್ಟೇರ್ ಬಿತ್ತನೆಯಾಗಿದ್ದು, ಶೇ.72ರಷ್ಟು ಸಾಧನೆ ಯಾಗಿದೆ. ಯಡ್ರಾಮಿ ಹಾಗೂ ಅಫಜಲಪುರ ಶೇ.80, ಸೇಡಂ ಶೇ.83, ಚಿಂಚೋಳಿ ಮತ್ತು ಕಲಬುರಗಿ ತಾಲೂಕುಗಳು ಶೇ.86 ಹಾಗೂ ಕಮಲಾಪುರ ಶೇ.96 ಸಾಧಿಸಿವೆ. ಜೇವರ್ಗಿ ಯಡ್ರಾಮಿ ಭಾಗದಲ್ಲಿ ಮಳೆ ಕೊರತೆಯ ಪರಿಣಾಮ ಹತ್ತಿ, ಹೆಸರು ಸೇರಿದಂತೆ ಬೆಳೆಗಳ ಸ್ಥಿತಿಯ ಕುರಿತು ಅಧಿಕಾರಿಗಳ ಮಟ್ಟದಲ್ಲಿ ಪರಿಶೀಲನೆ ನಡೆದಿದೆ. ಹೀಗಾಗಿ ಈಗ ಬಿತ್ತನೆ ಎಷ್ಟು? ಎನ್ನುವುದಕ್ಕಿಂತ ಬಿತ್ತಿದ ಬೆಳೆ ಎಷ್ಟು ಉಳಿದಿದೆ? ಎಂಬುದೇ ಪ್ರಮುಖ ಪ್ರಶ್ನೆಯಾಗಿದೆ.

ಬರ ಘೋಷಣೆಗೆ ಪಟ್ಟು: ಕಲಬುರಗಿ ಜಿಲ್ಲೆಯ ಯಾವುದೇ ತಾಲೂಕು ಮೊದಲ ಹಂತದಲ್ಲಿ ಘೋಷಿಸಲಾದ 101 ಬರಪೀಡಿತ ತಾಲೂಕುಗಳ ಪಟ್ಟಿ ಯಲ್ಲಿ ಇರಲಿಲ್ಲ. ಆದರೆ ಮಳೆ ಕೊರತೆ, ಬೆಳೆ ಪರಿಸ್ಥಿತಿ ಹಾಗೂ ನೆಲಮಟ್ಟದ ವರದಿಗಳ ಆಧಾರದಲ್ಲಿ ಮರು ಪರಿಶೀಲನೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆ ಯನ್ನು ಬರಪೀಡಿತವೆಂದು ಘೋಷಿಸಬೇಕು ಎಂಬ ಒತ್ತಾಯ ಹೆಚ್ಚಿದೆ.

ಮುಖ್ಯಮಂತ್ರಿಗಳ ಭೇಟಿಯ ವೇಳೆ ಸರಕಾರ ರೈತರ ಸಂಕಷ್ಟಕ್ಕೆ ಸ್ಪಷ್ಟ ಸ್ಪಂದನೆ ನೀಡಬೇಕು. ಜಮೀನುಗಳಿಗೆ ತೆರಳಿ ನೈಜ ಪರಿಸ್ಥಿತಿ ಪರಿಶೀಲಿಸಿ, ಬೆಳೆನಷ್ಟದ ವೈಜ್ಞಾನಿಕ ಸಮೀಕ್ಷೆ ನಡೆಸಬೇಕು. ಬರ ಘೋಷಣೆ, ಪರಿಹಾರ ಹಾಗೂ ವಿಶೇಷ ಪ್ಯಾಕೇಜ್ ಕುರಿತು ತ್ವರಿತ ನಿರ್ಧಾರ ಕೈಗೊಳ್ಳಬೇಕು ಎಂಬುದು ರೈತರ ಆಗ್ರಹ. ಮಳೆ ಇಲ್ಲದಿದ್ದರೆ ಬೆಳೆ ಇಲ್ಲ, ಬೆಳೆ ಇಲ್ಲದಿದ್ದರೆ ರೈತನ ಬದುಕೇ ಸಂಕಷ್ಟಕ್ಕೆ ಸಿಲುಕಲಿದೆ. ಹೀಗಾಗಿ ಕಲಬುರಗಿಯ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿ ಸರಕಾರ ಅನ್ನದಾತನ ನೆರವಿಗೆ ಧಾವಿಸಬೇಕಿದೆ.

ಸರಕಾರಕ್ಕೆ ರೈತರ ಒತ್ತಾಯ ಏನು?

ಬರದ ಪರಿಣಾಮ ಕೃಷಿ ಕ್ಷೇತ್ರಕ್ಕೆ ಎದುರಾಗಿರುವ ಒತ್ತಡ ನಿವಾರಣೆಗೆ ಕಲಬುರಗಿ ಜಿಲ್ಲೆಗೆ 1000 ಕೋಟಿ ವಿಶೇಷ ಪ್ಯಾಕೇಜ್ ನೀಡಬೇಕು ಎಂಬ ಬೇಡಿಕೆ ಬಲಗೊಂಡಿದೆ. ನೀರಾವರಿ ಮೂಲಸೌಕರ್ಯ ಬಲ ಪಡಿಸುವುದು, ಕೃಷಿ ಪುನಶ್ಚೇತನ, ಗ್ರಾಮೀಣ ಉದ್ಯೋಗ ಸೃಷ್ಟಿ, ಜಾನುವಾರು ಸಂರಕ್ಷಣೆ ಹಾಗೂ ಮುಂದಿನ ಹಂಗಾಮಿನ ಕೃಷಿಗೆ ನೆರವು ನೀಡುವ ರೀತಿಯಲ್ಲಿ ಪ್ಯಾಕೇಜ್ ರೂಪದಲ್ಲಿ ಅನುದಾನ ನೀಡಬೇಕು ಎಂದು ರಾಜ್ಯ ಸರಕಾರಕ್ಕೆ ರೈತರು ಒತ್ತಾಯ ಮಾಡಿದರು.

ರೈತರ ಪ್ರಮುಖ ಬೇಡಿಕೆಗಳು

ಕಲಬುರಗಿ ಬರಪೀಡಿತ ಜಿಲ್ಲೆ ಘೋಷಣೆ

ಬೆಳೆ ನಷ್ಟ ವೈಜ್ಞಾನಿಕ ಸಮೀಕ್ಷೆಗೆ ಆಗ್ರಹ

ಅರ್ಹ ರೈತರಿಗೆ ಬೆಳೆ ನಷ್ಟ ಪರಿಹಾರ ಕೊಡಿ

ಬೆಳೆ ವಿಮೆ ಪರಿಹಾರ ಶೀಘ್ರ ಬಿಡುಗಡೆ ಆಗಲಿ

ರೈತರ ಸಾಲದ ಒತ್ತಡ ಕಡಿಮೆ ಮಾಡಲು ಕ್ರಮ ಆಗಲಿ

ಜಾನುವಾರುಗಳಿಗೆ ಸಮರ್ಪಕ ಮೇವು ಒದಗಿಸಬೇಕು

ಗ್ರಾಮೀಣ ಪ್ರದೇಶಗಳಿಗೆ ಕುಡಿಯುವ ನೀರು ಪೂರೈಕೆ

ಹಿಂಗಾರು ಹಂಗಾಮಿಗೆ ಬೀಜಗೊಬ್ಬರ ನೆರವು ನೀಡಿ

image

ಮಳೆ ಕೊರತೆಯಿಂದ ರೈತರ ಬೆಳೆಗಳು ಸಂಕಷ್ಟಕ್ಕೆ ಸಿಲುಕಿವೆ. ಕೇವಲ ಅಂಕಿ-ಅಂಶಗಳ ಆಧಾರದಲ್ಲಿ ಪರಿಸ್ಥಿತಿ ಅಳೆಯದೆ ಜಮೀನುಗಳಿಗೆ ತೆರಳಿ ನೈಜ ಸ್ಥಿತಿ ಪರಿಶೀಲಿಸಬೇಕು. ಕಲಬುರಗಿಯನ್ನು ಬರಪೀಡಿತ ಜಿಲ್ಲೆ ಎಂದು ಘೋಷಿಸಿ 1000 ಕೋಟಿ ಪ್ಯಾಕೇಜ್ ನೀಡಬೇಕು. ಇಲ್ಲದಿದ್ದರೆ ಸರಕಾರ ಜಾಗ ಖಾಲಿ ಮಾಡಲಿ.

-ಶರಣಬಸಪ್ಪ ಮಾಮಶೆಟ್ಟಿ, ರೈತ ಹೋರಾಟಗಾರ