ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

IT Park at Kalaburagi: ಸ್ಪೋರ್ಟ್ಸ್ ಸಿಟಿ, ಕೆಆರ್‌ಐಎ, ಕೋಟಿ ವೃಕ್ಷ ಅಭಿಯಾನ ಸೇರಿ ಹಲವು ಯೋಜನೆ: ಕಲಬುರಗಿಗೆ ಐಟಿ ಪಾರ್ಕ್, 50 ಸಾವಿರ ನಿವೇಶನ

ಕಲಬುರಗಿಯಲ್ಲಿ ಈಗಾಗಲೇ 120ಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗಳು ಸ್ಥಾಪನೆಯಾಗಿದ್ದು, 2030ರ ವೇಳೆಗೆ 500ಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗಳ ಸ್ಥಾಪನೆಯ ಗುರಿ ಹೊಂದಲಾಗಿದೆ. ಯುವ ಉದ್ಯಮಿ ಗಳು ಹಾಗೂ ನವೋದ್ಯಮಿಗಳಿಗೆ ಉತ್ತೇಜನ ನೀಡಲು ಕೆಆರ್‌ಐಎ (Kalaburagi Research, Innovation and Youth Accelerator) ಸ್ಥಾಪಿಸಲಾಗುವುದು ಎಂದರು.

ಕಲಬುರಗಿಗೆ ಐಟಿ ಪಾರ್ಕ್, 50 ಸಾವಿರ ನಿವೇಶನ

-

Profile
Ashok Nayak Sep 17, 2026 10:34 AM

ಕಲಬುರಗಿ: ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಹೊಸ ದಿಕ್ಕು ನೀಡುವ ಉದ್ದೇಶದಿಂದ ಕಲಬುರಗಿಯಲ್ಲಿ 30 ಎಕರೆ ಪ್ರದೇಶದಲ್ಲಿ ಐಟಿ ಪಾರ್ಕ್ ಅಭಿವೃದ್ಧಿಪಡಿಸುವುದು ಸೇರಿದಂತೆ ಹಲವು ಮಹತ್ವದ ಯೋಜನೆಗಳನ್ನು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್(Chief Minister DK Shivakumar) ಘೋಷಿಸಿದರು.

ಶುಕ್ರವಾರ ನಗರದ ಡಿಎಆರ್ ಪರೇಡ್ ಮೈದಾನದಲ್ಲಿ ಕಲ್ಯಾಣ ಕರ್ನಾಟಕ ಉತ್ಸವದ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಕೈಗಾರಿಕೆ, ನಾವೀನ್ಯತೆ, ಕೃಷಿ, ಪ್ರವಾಸೋ ದ್ಯಮ, ಕ್ರೀಡೆ ಹಾಗೂ ನಗರ ಮೂಲಸೌಕರ್ಯಕ್ಕೆ ಆದ್ಯತೆ ನೀಡುವ ಸರ್ಕಾರದ ಯೋಜನೆಗಳನ್ನು ಪ್ರಕಟಿಸಿದರು.

ಕಲ್ಯಾಣ ಕರ್ನಾಟಕದಲ್ಲಿ ಕೈಗಾರಿಕಾ ಬೆಳವಣಿಗೆ ಮತ್ತು ಹೂಡಿಕೆಗೆ ವೇಗ ನೀಡಲು ಕಲ್ಯಾಣ ಕರ್ನಾಟಕ ಎಕಾನಮಿ ಮಿಷನ್ (ಕೆಕೆಇಎಂ) ಅನ್ನು ಸೆಕ್ಷನ್-8 ಕಂಪನಿಯಾಗಿ ಸ್ಥಾಪಿಸಲಾಗುವುದು. ದೊಡ್ಡ ಪ್ರಮಾಣದ ಹೂಡಿಕೆಗಳನ್ನು ಆಕರ್ಷಿಸುವ ಜತೆಗೆ ಈ ಭಾಗದಲ್ಲಿ ಹೊಸ ಆರ್ಥಿಕ ಅವಕಾಶಗಳನ್ನು ಸೃಷ್ಟಿಸುವುದು ಮಿಷನ್‌ನ ಉದ್ದೇಶ ಎಂದು ಮುಖ್ಯಮಂತ್ರಿ ತಿಳಿಸಿದರು.

ಇದನ್ನೂ ಓದಿ: CM DK Shivakumar: ಸಿಎಂ ಡಿ.ಕೆ ಶಿವಕುಮಾರ್ ಆರೋಗ್ಯದಲ್ಲಿ ಏರುಪೇರು; ವಿಧಾನಸೌಧದಲ್ಲೇ ಚಿಕಿತ್ಸೆ

ಕಲಬುರಗಿಯಲ್ಲಿ ಈಗಾಗಲೇ 120ಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗಳು ಸ್ಥಾಪನೆಯಾಗಿದ್ದು, 2030ರ ವೇಳೆಗೆ 500ಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗಳ ಸ್ಥಾಪನೆಯ ಗುರಿ ಹೊಂದಲಾಗಿದೆ. ಯುವ ಉದ್ಯಮಿ ಗಳು ಹಾಗೂ ನವೋದ್ಯಮಿಗಳಿಗೆ ಉತ್ತೇಜನ ನೀಡಲು ಕೆಆರ್‌ಐಎ (Kalaburagi Research, Innovation and Youth Accelerator) ಸ್ಥಾಪಿಸಲಾಗುವುದು ಎಂದರು.

ಕೃಷಿ ಉತ್ಪನ್ನಗಳಿಗೆ ಮೌಲ್ಯವರ್ಧನೆ

ರೈತರ ಆದಾಯ ಹೆಚ್ಚಿಸುವ ಉದ್ದೇಶದಿಂದ ಜೈವಿಕ ಆರ್ಥಿಕ ಮಿಷನ್ ಸ್ಥಾಪಿಸಲಾಗುವುದು. ತೊಗರಿ ಬೇಳೆ, ಕಮಲಾಪುರ ಬಾಳೆಹಣ್ಣು, ಒಣದ್ರಾಕ್ಷಿ ಹಾಗೂ ಸಿರಿಧಾನ್ಯಗಳ ಸಂಸ್ಕರಣೆ ಮತ್ತು ಮೌಲ್ಯ ವರ್ಧನೆಗೆ ಆದ್ಯತೆ ನೀಡಲಾಗುವುದು ಎಂದು ಹೇಳಿದರು.

ನಗರ ಸಂಚಾರಕ್ಕೆ ಹೊಸ ಯೋಜನೆ

ವೇಗವಾಗಿ ಬೆಳೆಯುತ್ತಿರುವ ಕಲಬುರಗಿ ನಗರದ ಸಂಚಾರ ವ್ಯವಸ್ಥೆ ಸುಧಾರಿಸಲು ಸೇಡಂ ರಸ್ತೆಯ ರಿಂಗ್‌ರೋಡ್‌ನಲ್ಲಿ ಮೇಲ್ಸೇತುವೆ ನಿರ್ಮಿಸಲಾಗುವುದು. ಹೊಸ ಪೆರಿಫೆರಲ್ ರಿಂಗ್‌ರೋಡ್‌ಗಾಗಿ ಡಿಪಿಆರ್ ಸಿದ್ಧಪಡಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.

WhatsApp Image 2026-09-17 at 10.18.44_Flag

ನಗರದಲ್ಲಿ ₹30 ಕೋಟಿ ವೆಚ್ಚದಲ್ಲಿ ಹೊಸ ಕೆರೆ ಹಾಗೂ ಮನರಂಜನಾ ಉದ್ಯಾನ ಅಭಿವೃದ್ಧಿಪಡಿ ಸುವ ಯೋಜನೆಯನ್ನೂ ಪ್ರಕಟಿಸಿದರು. ನಗರ ಮತ್ತು ತಾಲೂಕು ಕೇಂದ್ರಗಳಲ್ಲಿ ಸಾರ್ವಜನಿಕ ಸುರಕ್ಷತೆ, ಸಂಚಾರ ನಿರ್ವಹಣೆ ಹಾಗೂ ನಾಗರಿಕ ಸೇವೆಗಳ ಮೇಲ್ವಿಚಾರಣೆಗೆ ಎಐ ಆಧಾರಿತ ಸಿಸಿಟಿವಿ ಜಾಲ ಅಳವಡಿಸಲಾಗುವುದು ಎಂದರು.

50 ಸಾವಿರ ನಿವೇಶನ

ಕಲಬುರಗಿ ಜಿಲ್ಲೆಯಲ್ಲಿ ನಿವೇಶನರಹಿತ ಕುಟುಂಬಗಳಿಗೆ 50 ಸಾವಿರ ವಸತಿ ನಿವೇಶನಗಳನ್ನು ಅಭಿವೃದ್ಧಿಪಡಿಸಲಾಗುವುದು. ಸಮಗ್ರ ಮತ್ತು ಎಲ್ಲರನ್ನೂ ಒಳಗೊಂಡ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.

ಗಾಣಗಾಪುರಕ್ಕೆ ₹50 ಕೋಟಿ

ಕಲಬುರಗಿ ಕೋಟೆ, ಶರಣಬಸವೇಶ್ವರ ದೇವಸ್ಥಾನ, ಖ್ವಾಜಾ ಬಂದೇ ನವಾಜ್ ದರ್ಗಾ, ಬುದ್ಧ ವಿಹಾರ, ಮಳಖೇಡ, ಸನ್ನತಿ ಹಾಗೂ ಗಾಣಗಾಪುರವನ್ನು ಸಂಪರ್ಕಿಸುವ ಪ್ರವಾಸೋದ್ಯಮ ಮತ್ತು ಪುಣ್ಯಯಾತ್ರಾ ಸರ್ಕ್ಯೂಟ್ ಅಭಿವೃದ್ಧಿಪಡಿಸಲಾಗುವುದು. ಮೊದಲ ಹಂತದಲ್ಲಿ ಗಾಣಗಾಪುರ ಅಭಿವೃದ್ಧಿಗೆ ₹50 ಕೋಟಿ ವೆಚ್ಚ ಮಾಡಲಾಗುವುದು ಎಂದರು.

WhatsApp Image 2026-09-17 at 10.18.45 Flag

ಮಳಖೇಡ, ನಾಗಾವಿ, ಕಾಳಗಿ ಹಾಗೂ ಸನ್ನತಿ ಸೇರಿದಂತೆ ಪಾರಂಪರಿಕ ತಾಣಗಳ ಪುನರಾಭಿ ವೃದ್ಧಿಗೂ ಕ್ರಮ ಕೈಗೊಳ್ಳಲಾಗುವುದು. ಬಸವಣ್ಣನವರ ತತ್ವಗಳು ಹಾಗೂ ವಚನ ಪರಂಪರೆಯನ್ನು ಯುವ ಪೀಳಿಗೆಗೆ ಪರಿಚಯಿಸಲು ಕಲಬುರಗಿಯಲ್ಲಿ ವಚನ ಮಂಟಪ ಸ್ಥಾಪಿಸಲಾಗುವುದು ಎಂದು ಘೋಷಿಸಿದರು.

ಸ್ಪೋರ್ಟ್ಸ್ ಸಿಟಿ ಸ್ಥಾಪನೆ

ಮುಂದಿನ ಎರಡು ವರ್ಷಗಳಲ್ಲಿ ಚಂದ್ರಶೇಖರ ಪಾಟೀಲ ಕ್ರೀಡಾಂಗಣವನ್ನು ಆಧುನಿಕ ಸೌಲಭ್ಯ ಗಳೊಂದಿಗೆ ಸಮಗ್ರವಾಗಿ ಪುನರಾಭಿವೃದ್ಧಿಪಡಿಸಲಾಗುವುದು. ಕಲ್ಯಾಣ ಕರ್ನಾಟಕಕ್ಕೆ ಅನುಕೂಲ ವಾಗುವಂತೆ ಕ್ರಿಕೆಟ್ ಸೌಲಭ್ಯ ಅಭಿವೃದ್ಧಿಗೆ ಕೆಎಸ್‌ಸಿಎ ಜತೆ ಒಡಂಬಡಿಕೆ ಮಾಡಿಕೊಳ್ಳಲಾಗುವುದು ಎಂದರು. ಕಲಬುರಗಿ ತಾಲೂಕಿನ ಹಡಗಿಲ ಹಾರುತಿ ಗ್ರಾಮದಲ್ಲಿ ವಿವಿಧ ಕ್ರೀಡೆಗಳಿಗೆ ಅಂತಾ ರಾಷ್ಟ್ರೀಯ ಮಟ್ಟದ ಒಳಾಂಗಣ ಹಾಗೂ ಹೊರಾಂಗಣ ಸೌಲಭ್ಯಗಳನ್ನು ಹೊಂದಿರುವ ಸ್ಪೋರ್ಟ್ಸ್ ಸಿಟಿ ಸ್ಥಾಪಿಸಲಾಗುವುದು ಎಂದು ತಿಳಿಸಿದರು.

ಕೋಟಿ ಗಿಡ ನೆಡುವ ಗುರಿ: ಕಲ್ಯಾಣ ಕರ್ನಾಟಕದ ಹಸಿರು ಹೊದಿಕೆ ಹೆಚ್ಚಿಸುವ ಉದ್ದೇಶದಿಂದ ಮುಂದಿನ ಎರಡು ವರ್ಷಗಳಲ್ಲಿ ಕೋಟಿ ವೃಕ್ಷ ಅಭಿಯಾನ ಕೈಗೊಳ್ಳಲಾಗುವುದು. ಒಂದು ಕೋಟಿ ಗಿಡಗಳನ್ನು ನೆಟ್ಟು ಪೋಷಿಸುವ ಗುರಿ ಹೊಂದಲಾಗಿದೆ ಎಂದರು. ಈ ಪ್ರದೇಶದಲ್ಲಿ ರಕ್ತಹೀನತೆ ಪ್ರಮಾಣ ತಗ್ಗಿಸಲು ಮುಂದಿನ ಎರಡು ವರ್ಷಗಳ ಕಾಲ ವಿಶೇಷ ಅಭಿಯಾನ ನಡೆಸಲಾಗುವುದು. ಗರ್ಭಿಣಿಯರು, ಹದಿಹರೆಯದವರು ಹಾಗೂ ಹಾಲುಣಿಸುವ ತಾಯಂದಿರ ತಪಾಸಣೆ, ತಡೆಗಟ್ಟುವಿಕೆ ಮತ್ತು ಚಿಕಿತ್ಸೆಗೆ ಹೆಚ್ಚಿನ ಗಮನ ನೀಡಲಾಗುವುದು ಎಂದು ಹೇಳಿದರು.

ನೀರಾವರಿಗೆ ಸಮತೋಲನ ಜಲಾಶಯ: ಕೊಪ್ಪಳದ ನವಲಿಯಲ್ಲಿ ತುಂಗಭದ್ರಾ ಜಲಾಶಯಕ್ಕೆ ಸಮತೋಲನ ಜಲಾಶಯ ನಿರ್ಮಿಸಲು ನಿರ್ಧರಿಸಲಾಗಿದೆ. ಕೇಂದ್ರ ಜಲಶಕ್ತಿ ಸಚಿವ ಸಿ.ಆರ್. ಪಾಟೀಲ ನೇತೃತ್ವದಲ್ಲಿ ಕರ್ನಾಟಕ, ಆಂಧ್ರಪ್ರದೇಶ ಹಾಗೂ ತೆಲಂಗಾಣದ ಮುಖ್ಯಮಂತ್ರಿಗಳನ್ನು ಒಂದೇ ವೇದಿಕೆಗೆ ಕರೆತಂದು ಈ ಕುರಿತು ನಿರ್ಣಯ ಕೈಗೊಳ್ಳಲಾಗಿದೆ ಎಂದರು.

ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಕಳೆದ 12 ವರ್ಷಗಳಲ್ಲಿ ಸುಮಾರು ₹25 ಸಾವಿರ ಕೋಟಿ ವಿಶೇಷ ಅನುದಾನ ನೀಡಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು. 41,103 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, 32,985 ಕಾಮಗಾರಿಗಳು ಪೂರ್ಣಗೊಂಡಿವೆ. 8,118 ಕಾಮಗಾರಿಗಳು ಪ್ರಗತಿ ಯಲ್ಲಿವೆ ಎಂದರು.

ಕಲಬುರಗಿಯಲ್ಲಿ ನಡೆದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ₹11,770 ಕೋಟಿ ಮೊತ್ತದ ಬೃಹತ್ ಯೋಜನೆಗಳಿಗೆ ನಿರ್ಧಾರ ಕೈಗೊಳ್ಳಲಾಗಿದೆ. 350 ಕೆಪಿಎಸ್ ಶಾಲೆಗಳ ನಿರ್ಮಾಣದ ಗುರಿ ಹೊಂದಲಾಗಿದೆ. ಆರೋಗ್ಯ ಕ್ಷೇತ್ರಕ್ಕೆ ₹1,797 ಕೋಟಿ ಹಾಗೂ ಸಣ್ಣ ಕೈಗಾರಿಕೆಗಳಿಗೆ ₹200 ಕೋಟಿ ಒದಗಿಸಲಾಗಿದೆ ಎಂದರು.

ಕಲ್ಯಾಣ ಕರ್ನಾಟಕವನ್ನು ಆರೋಗ್ಯ ಹಬ್ ಆಗಿ ರೂಪಿಸಲಾಗುತ್ತಿದ್ದು, ಯಾದಗಿರಿ, ಕೊಪ್ಪಳ ಹಾಗೂ ಬೀದರ್‌ನಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ಸ್ಥಾಪಿಸಲಾಗುತ್ತಿದೆ. ಇಂದಿರಾಗಾಂಧಿ ತಾಯಿ–ಮಕ್ಕಳ ಆಸ್ಪತ್ರೆ, ಕಿದ್ವಾಯಿ ಹಾಗೂ ಜಯದೇವ ಆಸ್ಪತ್ರೆಗಳ ಅಭಿವೃದ್ಧಿಗೆ ₹423 ಕೋಟಿ ವೆಚ್ಚ ಮಾಡಲಾಗುತ್ತಿದೆ ಎಂದು ಹೇಳಿದರು.

ಸಚಿವ ಪ್ರಿಯಾಂಕ್ ಖರ್ಗೆ, ಶಾಸಕರಾದ ಅಲ್ಲಮಪ್ರಭು ಪಾಟೀಲ, ಎಂ.ವೈ. ಪಾಟೀಲ, ಬಿ.ಆರ್. ಪಾಟೀಲ, ಬಸವರಾಜ ಮತ್ತಿಮಡು, ಖನೀಜ್ ಫಾತಿಮಾ, ವಿಧಾನ ಪರಿಷತ್ ಸದಸ್ಯರಾದ ಶಶೀಲ್ ನಮೋಶಿ, ಜಗದೇವ ಗುತ್ತೇದಾರ್, ತಿಪ್ಪಣ್ಣಪ್ಪ ಕಮಕನೂರ್ ಸೇರಿದಂತೆ ಮತ್ತಿತರರು ಉಪಸ್ಥಿತ ರಿದ್ದರು.

371(ಜೆ)ಯಿಂದ ಅವಕಾಶಗಳ ವಿಸ್ತರಣೆ

ಕಲ್ಯಾಣ ಕರ್ನಾಟಕದ ಇತಿಹಾಸದಲ್ಲಿ 371(ಜೆ) ಜಾರಿಗೆ ಬಂದ ಬಳಿಕ ಶಿಕ್ಷಣ, ಉದ್ಯೋಗ ಹಾಗೂ ಆಡಳಿತಾತ್ಮಕ ಅವಕಾಶಗಳ ವಿಸ್ತರಣೆ ಕಂಡಿದೆ. ಕಳೆದ 12 ವರ್ಷಗಳಲ್ಲಿ ₹25 ಸಾವಿರ ಕೋಟಿ ವಿಶೇಷ ಅನುದಾನ ನೀಡಲಾಗಿದೆ. 41,103 ಕಾಮಗಾರಿಗಳ ಪೈಕಿ 32,985 ಪೂರ್ಣಗೊಂಡಿವೆ.

ಉಳಿದ 8,118 ಕಾಮಗಾರಿಗಳು ಪ್ರಗತಿಯಲ್ಲಿವೆ. ಅಸಮಾನತೆ ತಗ್ಗಿಸುವ ಉದ್ದೇಶದೊಂದಿಗೆ ಕೈಗೊಂಡ ಕ್ರಮಗಳ ವ್ಯಾಪ್ತಿ ದೊಡ್ಡದಿದೆ. ಯುವಜನರಿಗೆ ಸ್ಥಳೀಯ ಮಟ್ಟದಲ್ಲಿ ಅವಕಾಶ ಸೃಷ್ಟಿಸುವ ಪ್ರಯತ್ನ ಮುಂದುವರಿದಿದೆ. ಶಿಕ್ಷಣ, ಆರೋಗ್ಯ, ರಸ್ತೆ ಹಾಗೂ ಕುಡಿಯುವ ನೀರಿನ ಮೂಲಸೌಕರ್ಯ ವಿಸ್ತರಣೆಗೆ ಅನುದಾನವಾಗಿದೆ. ಬಾಕಿ ಕಾಮಗಾರಿಗಳ ಪೂರ್ಣಗೊಳಿಸುವಿಕೆಗೆ ಒತ್ತು ನೀಡಲಾಗಿದೆ.

ಕುಟುಂಬಗಳಿಗೆ ಗ್ಯಾರಂಟಿ ಯೋಜನೆಗಳ ನೆರವು

ಮಹಿಳೆಯರ ಕಲ್ಯಾಣಕ್ಕಾಗಿ ಜಾರಿಗೊಳಿಸಿರುವ ಯೋಜನೆಗಳಡಿ ಕಲ್ಯಾಣ ಕರ್ನಾಟಕದಲ್ಲಿ 25.74 ಲಕ್ಷ ಕುಟುಂಬಗಳ ಯಜಮಾನಿಯರಿಗೆ ಗೃಹಲಕ್ಷ್ಮಿ ನೆರವು ನೀಡಲಾಗಿದೆ. 23 ಲಕ್ಷ ಮನೆಗಳಿಗೆ ಗೃಹಜ್ಯೋತಿ ಸಂಪರ್ಕದ ಮೂಲಕ ವಿದ್ಯುತ್ ಸೌಲಭ್ಯ ಕಲ್ಪಿಸಲಾಗಿದೆ. ಶಕ್ತಿ ಯೋಜನೆಯಡಿ ಮಹಿಳೆಯರು 93.06 ಕೋಟಿ ಟ್ರಿಪ್‌ಗಳಲ್ಲಿ ಉಚಿತ ಪ್ರಯಾಣ ನಡೆಸಿದ್ದು, ಸರ್ಕಾರ ₹3,452.90 ಕೋಟಿ ವೆಚ್ಚ ಮಾಡಿದೆ. ನಿರುದ್ಯೋಗಿ ಯುವಕ–ಯುವತಿಯರಿಗೆ ₹382 ಕೋಟಿ ನೆರವು ಒದಗಿಸ ಲಾಗಿದೆ. ನೆರವು ಕುಟುಂಬಗಳ ಆರ್ಥಿಕ ಹೊರೆ ತಗ್ಗಿಸುವ ಜೊತೆಗೆ ಮಹಿಳೆಯರ ಸಂಚಾರ ಮತ್ತು ವಿದ್ಯುತ್ ಸೌಲಭ್ಯ ವಿಸ್ತರಣೆಗೆ ಸಹಕಾರಿಯಾಗಿದೆ. ಯೋಜನೆಗಳ ಅನುಷ್ಠಾನಕ್ಕೆ ಸರ್ಕಾರ ಒತ್ತು ನೀಡಿದೆ.

image

ಕಲ್ಯಾಣ ಕರ್ನಾಟಕದ ನೆಲ ಬಸವಣ್ಣನವರ ಸಾಮಾಜಿಕ ಕ್ರಾಂತಿಯ ಸಾಕ್ಷಿಯಾಗಿದೆ. ಸಮಾನತೆ, ಮಾನವೀಯತೆ ಮತ್ತು ಸಹಬಾಳ್ವೆಯ ಮೌಲ್ಯಗಳನ್ನು ಮುಂದಕ್ಕೆ ಕೊಂಡೊಯ್ಯಬೇಕು. ಅಭಿವೃದ್ಧಿ ಯ ಫಲ ಕಟ್ಟಕಡೆಯ ಕುಟುಂಬಕ್ಕೂ ತಲುಪಬೇಕು. ಜನರ ಬದುಕಿನಲ್ಲಿ ನೆಮ್ಮದಿ ಮೂಡಿಸುವ ಕೆಲಸವೇ ಸರ್ಕಾರದ ನಿಜವಾದ ಗುರಿಯಾಗಬೇಕು. ಕೈಗಾರಿಕೆ, ಶಿಕ್ಷಣ, ಆರೋಗ್ಯ, ಉದ್ಯೋಗ ಕ್ಷೇತ್ರಗಳಲ್ಲಿ ಹೊಸ ಅವಕಾಶಗಳನ್ನು ಸೃಷ್ಟಿಸುವ ಮೂಲಕ ಈ ಪ್ರದೇಶದ ಸಾಮರ್ಥ್ಯ ವನ್ನು ಇನ್ನಷ್ಟು ಬೆಳೆಸಲಾಗುವುದು.

- ಡಿ.ಕೆ. ಶಿವಕುಮಾರ್, ಮುಖ್ಯಮಂತ್ರಿ,