ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

West Bengal Election ground report by Raghava Sharma Nidle: ಚಹಾ ತೋಟದ ಆದಿವಾಸಿಗಳ ಚಿತ್ತ ಕೇಸರಿಯತ್ತ ?

ಬಂಗಾಳದಲ್ಲಿ ಕಾರ್ಮಿಕರ ಕೊರತೆ ಹಾಗೂ ಹವಾಮಾನ ಬದಲಾವಣೆಗಳಿಂದಾಗಿ ಈಚಿನ ವರ್ಷ ಗಳಲ್ಲಿ ಚಹಾ ಉತ್ಪಾದನೆ ಸಣ್ಣ ಮಟ್ಟಿಗೆ ತಗ್ಗಿದೆ. ಇಲ್ಲಿನ ಪಟ್ಟಣ-ಗ್ರಾಮೀಣ ಭಾಗಗಳ ವಿಶಾಲ ಜಮೀನುಗಳಲ್ಲಿ ಹಸಿರೆಲೆಗಳಿಂದ ಕಂಗೊಳಿಸುವ ಟೀ ಗಾರ್ಡನ್‌ಗಳಲ್ಲಿ ಆದಿವಾಸಿ ಸಮುದಾಯದ ಕಾರ್ಮಿಕರು ಮಳೆ, ಚಳಿ, ಬಿಸಿಲನ್ನು ಲೆಕ್ಕಿಸದೆ ಎಲೆಗಳನ್ನು ಕೀಳುತ್ತಿರುವ ದೃಶ್ಯ ಕಾಣಸಿಗುತ್ತದೆ.

ಗ್ರೌಂಡ್‌ ರಿಪೋರ್ಟ್

ವಿಶ್ವವಾಣಿ ಬಂಗಾಳ ಚುನಾವಣಾ ಯಾತ್ರೆ

ಡಾರ್ಜಿಲಿಂಗ್ ಜಿಲ್ಲೆ (ಬಂಗಾಳ): 1840ರ ಸಂದರ್ಭದಲ್ಲಿ ಭಾರತದಲ್ಲಿದ್ದ ಬ್ರಿಟಿಷರು ಉತ್ತರ ಬಂಗಾಳದ ಡಾರ್ಜಿಲಿಂಗ್ ಜಿಲ್ಲೆಯಲ್ಲಿ ಟೀ ಗಿಡಗಳನ್ನು ನೆಟ್ಟು, ಚಹಾ ಉದ್ಯಮ ಆರಂಭಿಸಿದರು. ಅದು ಬೃಹತ್ ಉದ್ಯಮವಾಗಿ ಬೆಳೆದು ಲಕ್ಷಾಂತರ ಮಂದಿಗೆ ಜೀವನೋಪಾಯದ ಹಾದಿಯಾಗಿದೆ. ಉ. ಬಂಗಾಳದ ಹಲವು ಜಿಗಳಲ್ಲಿ ಟೀ ಎಸ್ಟೇಟ್‌ಗಳು ವಿಸ್ತಾರವಾಗಿ ಹಬ್ಬಿದ್ದು, ಇಲ್ಲಿ ಉತ್ಪಾದನೆ ಯಾಗುವ ಟೀ ಪೌಡರ್‌ಗಳು ವಿಶ್ವದೆಡೆ ಪೂರೈಕೆಯಾಗುತ್ತಿವೆ.

ಬಂಗಾಳದಲ್ಲಿ ಕಾರ್ಮಿಕರ ಕೊರತೆ ಹಾಗೂ ಹವಾಮಾನ ಬದಲಾವಣೆಗಳಿಂದಾಗಿ ಈಚಿನ ವರ್ಷ ಗಳಲ್ಲಿ ಚಹಾ ಉತ್ಪಾದನೆ ಸಣ್ಣ ಮಟ್ಟಿಗೆ ತಗ್ಗಿದೆ. ಇಲ್ಲಿನ ಪಟ್ಟಣ-ಗ್ರಾಮೀಣ ಭಾಗಗಳ ವಿಶಾಲ ಜಮೀನುಗಳಲ್ಲಿ ಹಸಿರೆಲೆಗಳಿಂದ ಕಂಗೊಳಿಸುವ ಟೀ ಗಾರ್ಡನ್‌ಗಳಲ್ಲಿ ಆದಿವಾಸಿ ಸಮುದಾಯದ ಕಾರ್ಮಿಕರು ಮಳೆ, ಚಳಿ, ಬಿಸಿಲನ್ನು ಲೆಕ್ಕಿಸದೆ ಎಲೆಗಳನ್ನು ಕೀಳುತ್ತಿರುವ ದೃಶ್ಯ ಕಾಣಸಿಗುತ್ತದೆ.

ಈ ಆದಿವಾಸಿ ಕಾರ್ಮಿಕ ವರ್ಗದವರು ಚುನಾವಣೆಗಳಲ್ಲಿ ಮಹತ್ವದ ಪಾತ್ರ ವಹಿಸುತ್ತಾರೆ. ಆರಂಭ ದಲ್ಲಿ ಎಡಪಕ್ಷಗಳು, ಕಾಂಗ್ರೆಸ್, ನಂತರ ಟಿಎಂಸಿ, ಬಿಜೆಪಿ ಆದಿವಾಸಿ ಮತಬ್ಯಾಂಕ್ ಅನ್ನು ಸೆಳೆಯು ತ್ತಲೇ ಬಂದಿವೆ. ಸಿಲಿಗುರಿಯಿಂದ ಡಾರ್ಜಿಲಿಂಗ್‌ಗೆ ತೆರಳುತ್ತಿದ್ದಾಗ ಸುಕ್ನಾ ಎಂಬ ಪ್ರದೇಶದಲ್ಲಿ ಆದಿವಾಸಿ ಮಹಿಳೆಯರು ಟೀ ಗಾರ್ಡನ್‌ನಲ್ಲಿ ಎಲೆಗಳನ್ನು ಕೀಳುತ್ತಿದ್ದರು.

ಬೆಳಗ್ಗೆ 8 ರಿಂದಲೇ ಕೆಲಸ ಆರಂಭಿಸಿದ್ದ ತಾರಾ ನಗಾಸಿಯಾ ಎಂಬ 30ರ ಆಸುಪಾಸಿನ ಮಹಿಳೆ ಯನ್ನು ಚುನಾವಣೆ ಕುರಿತ ಮಾತಿಗೆಳೆದೆ. ಆರಂಭದಲ್ಲಿ ಆಕೆ ಹೆಚ್ಚು ಆಸಕ್ತಿ ತೋರಿಸದಿದ್ದರೂ, “ನಮ್ಮ ಜೀವನ ಸುಧಾರಿಸುವ ಮಂದಿ ಅಧಿಕಾರಕ್ಕೆ ಬರಬೇಕು" ಎನ್ನುತ್ತಾ, ತನ್ನ ಜೀವನದ ಬವಣೆ‌ ಗಳನ್ನು ಬಿಚ್ಚಿಟ್ಟಳು.

“ಬೆಳಗ್ಗೆ 8.30ರ ಆಸುಪಾಸಿಗೆ ಕೆಲಸ ಆರಂಭ. 11.30ರಿಂದ 1 ಗಂಟೆ ತನಕ ಮಧ್ಯಾಹ್ನ ಭೋಜನ ವಿರಾಮ. 1 ಗಂಟೆಯಿಂದ ಸಂಜೆ 4.30 ಅಥವಾ 5 ಗಂಟೆ ತನಕ ಗಾರ್ಡನ್‌ನಲ್ಲಿ ಕೆಲಸ. ಆದರೆ ಸಂಬಳ ದಿನಕ್ಕೆ 250 ರು. ಮಾತ್ರ" ಎಂದಳು ತಾರಾ. “ಎಸ್ಟೇಟ್ ಮಾಲೀಕರು ಕಾರ್ಮಿಕರಿಗೆ 15 ದಿನಕ್ಕೊಮ್ಮೆ ವೇತನ ನೀಡುತ್ತಾರೆ. ಅಂದರೆ, ತಿಂಗಳಿಗೆ 7500 ರುಪಾಯಿ.

ಇದನ್ನೂ ಓದಿ: West Bengal Election ground report by Raghava Sharma Nidle: ದೀದಿ 1500 ರುಪಾಯಿ V/s ಮೋದಿ 3000 ರುಪಾಯಿ +33%

ಕರ್ನಾಟಕದ ಕೃಷಿ ತೋಟಗಳಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಊಟ-ತಿಂಡಿ ಜತೆಗೆ ದಿನಕ್ಕೆ 500-650 ರು. ನೀಡುತ್ತಾರೆ" ಎಂಬ ನನ್ನ ಮಾತು ಕೇಳಿ ಆಕೆಗೆ ಪರಮಾಶ್ಚರ್ಯವಾಗಿತ್ತು. ಕೆಲ ಟೀ ಎಸ್ಟೇಟ್ ಮಾಲೀಕರು ಎಸ್ಟೇಟ್ ಪಕ್ಕದ ಕಾರ್ಮಿಕರಿಗಾಗಿ ಜೋಪಡಿಗಳನ್ನು ನಿರ್ಮಾಣ ಮಾಡಿ ಕೊಟ್ಟಿದ್ದಾರೆ. ಮತ್ತೆ ಕೆಲವರನ್ನು ಬಸ್, ಟೆಂಪೋಗಳಲ್ಲಿ ಅವರ ಗ್ರಾಮದಿಂದ ಕರೆದುಕೊಂಡು ಬರುತ್ತಾರೆ. ಆದರೆ, ಊಟ ಅಥವಾ ತಿಂಡಿ ವ್ಯವಸ್ಥೆಯಿಲ್ಲ.

ಅವುಗಳನ್ನು ಕಾರ್ಮಿಕರು ಮನೆಯಿಂದಲೇ ತರಬೇಕು. ಕಾರ್ಮಿಕರನ್ನು ಕೆಲಸಕ್ಕಾಗಿ ಕರೆದು ಕೊಂಡು ಬರುವ ಮತ್ತು ಅಲ್ಲಿನ ಗಾರ್ಡನ್ ಕಾರ್ಮಿಕರ ಉಸ್ತುವಾರಿ ವಹಿಸಿದ್ದ ಆದಿವಾಸಿ ಪುರುಷ ಬಂಧನ್ ಉರಾವ್ ‘ವಿಶ್ವವಾಣಿ’ ಜತೆ ಮಾತನಾಡುತ್ತಾ, “ವೇತನ ಜಾಸ್ತಿ ಮಾಡುತ್ತೇವೆ ಎಂದು ಮಾಲೀಕರು ಹೇಳುತ್ತಲೇ ಇದ್ದಾರೆ. ಆದರೆ ಮಾಡಿಲ್ಲ.

ಪಿಎಫ್ ಮತ್ತು ವಿಮೆ ಹಣವನ್ನು ಸಂಬಳದ ಕಟ್ ಮಾಡುವುದರಿಂದ ವೇತನವನ್ನು 350-400 ರು. ಮಾಡಬೇಕು ಎಂಬುದು ನಮ್ಮ ನಿರೀಕ್ಷೆ. ಆದರೆ, 50 ರು. ಹೆಚ್ಚಿಸಬಹುದು ಎಂದು ತಿಳಿಸಿದರು. ಚಹಾ ಉತ್ಪಾದನೆ ಕಡಿಮೆಯಾಗಿದೆ. ದರವೂ ಹೆಚ್ಚಿಲ್ಲ. ಹೀಗಾಗಿ, ಕಾರ್ಮಿಕರ ವೇತನ ಏರಿಕೆ ಸಾಧ್ಯ ವಾಗುತ್ತಿಲ್ಲ ಎಂದು ಮಾಲೀಕರು ಹೇಳುತ್ತಾರೆ. ಎಲ್ಲಾ ಟೀ ಎಸ್ಟೇಟ್‌ಗಳಲ್ಲಿ ಏಕರೂಪದ ವೇತನ ನೀಡಲಾಗುತ್ತದೆ.

ಟೀ ಎಸ್ಟೇಟ್ ಮಾಲೀಕರ ಅಸೋಸಿಯೇಷನ್ ವೇತನ ಹೆಚ್ಚಳದ ಬಗ್ಗೆ ತೀರ್ಮಾನ ಮಾಡುತ್ತದೆ. ಸರಕಾರ ಈ ಮಾಲೀಕರಿಗೆ ಒತ್ತಡ ಹೇರಬಹುದು. ಅದನ್ನು ಮಮತಾ ದೀದಿ ಮಾಡಿಲ್ಲ. ಟೀ ಗಾರ್ಡನ್ ಕಾರ್ಮಿಕರ ಸಮಸ್ಯೆಗಳನ್ನು ಕೇಳಲು ಸಿಎಂ ಈ ಭಾಗಕ್ಕೆ ಬಂದೇ ಇಲ್ಲ" ಎಂದು ಬಂಧನ್ ಉರಾವ್ ದೂರಿದರು.

ತಾರಾ ನಗಾಸಿಯಾ ಸೇರಿದಂತೆ ಡಾರ್ಜಿಲಿಂಗ್ ಜಿಲ್ಲೆಯ ಕರ್ಸಾಂಗ್ ವಿಧಾನಸಭೆ ವ್ಯಾಪ್ತಿಯ ನ್ಯೂಚಮ್ತಾ ಆದಲ್ಪುರ ಹಳ್ಳಿಯಿಂದ ಬಂದಿದ್ದ ಹಿರಿ ವಯಸ್ಸಿನ ಆದಿವಾಸಿ ಮಹಿಳೆಯರಾದ ರಾಯ್ಮುನಿ ಮುಂಡಾ, ಮನಿಷಾ ಇಂದ್ವಾರ್ ನಗಾಸಿಯಾ ಕೂಡ ಬದಲಾವಣೆಗೆ ಮತ ಹಾಕುವು ದಾಗಿ ತಿಳಿಸಿದರು.

“ಪ್ರಧಾನಿ ಮೋದಿ ಅವರು ಟೀ ತೋಟದ ಕಾರ್ಮಿಕರ ಸುಧಾರಣೆಗೆ ಕ್ರಮ ಕೈಗೊಳ್ಳುತ್ತೇವೆ ಎಂದಿ ದ್ದಾರೆ. ಸಿಎಂ ಮಮತಾ ಬ್ಯಾನರ್ಜಿ, ನಮ್ಮ ವೇತನ ಹೆಚ್ಚಿಸುವ ಬಗ್ಗೆ ಕ್ರಮ ವಹಿಸಿಲ್ಲ. ಹೀಗಾಗಿ, ನಾವೆಲ್ಲರೂ ದಾದಾಗೆ (ಮೋದಿ) ಬೆಂಬಲ ನೀಡುತ್ತೇವೆ" ಎಂದರು.

ಆದಿವಾಸಿ ವೋಟ್‌ಬ್ಯಾಂಕ್ ಸೆಳೆಯಲು ಬಿಜೆಪಿ ಭಾರಿ ಗ್ರೌಂಡ್‌ವರ್ಕ್ ಮಾಡುತ್ತಿದ್ದು, ಕೆಲ ದಿನಗಳ ಹಿಂದೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಉತ್ತರ ಬಂಗಾಳದಲ್ಲಿ ಜನಸಭೆ ಉದ್ದೇಶಿಸಿ ಮಾತನಾಡಿದ್ದಾಗಲೂ, ಟೀ ಕಾರ್ಮಿಕರು ಮತ್ತು ಬುಡಕಟ್ಟು ಸಮುದಾಯದ ಏಳಿಗೆಗೆ ಶ್ರಮಿಸುವ ಭರವಸೆ ನೀಡಿದ್ದರು. ಇದು ಆದಿವಾಸಿ ಮುಖಂಡರ ಮನೆಗಳಲ್ಲಿ ಚರ್ಚೆಯಾಗಿದೆ.

ಟಿಎಂಸಿ ಸರಕಾರ ‘ಲಕ್ಷ್ಮೀರ್ ಭಂಡಾರ್’ ಯೋಜನೆ ಅಡಿಯಲ್ಲಿ ನೀಡುತ್ತಿರುವ 1500 ರು. ಹಣ ಆದಿವಾಸಿ ಮಹಿಳೆಯರ ಖಾತೆಗೂ ಬರುತ್ತಿದೆ. ವಿಚಿತ್ರ ಎಂದರೆ, ಬಿಜೆಪಿ ಅಧಿಕಾರಕ್ಕೆ ಬಂದರೆ 25 ವರ್ಷ ಮೇಲ್ಪಟ್ಟ ಮಹಿಳೆಯರಿಗೆ 3000ರು. ನೆರವು ನೀಡುತ್ತೇವೆ ಎಂದು ಘೋಷಿಸಿರುವುದು ಅನೇಕ ಆದಿವಾಸಿ ಮಹಿಳಾ ಕಾರ್ಮಿಕರಿಗೆ ಗೊತ್ತೇ ಇಲ್ಲವಂತೆ.

“3000 ರು. ನಿಜಕ್ಕೂ ನೀಡುತ್ತಾರಾ?" ಎಂದು ನನ್ನಲ್ಲಿ ಪ್ರಶ್ನಿಸಿದರು. ಅವರಲ್ಲಿ ಲೀಲಾ ಕಿರ್ಕಿತ್ತಾ ಎಂಬ ಮಹಿಳೆಗೆ 3000 ರು. ಘೋಷಣೆ ಕುರಿತ ಮಾಹಿತಿ ಇತ್ತು. ಆದರೆ, “3000 ರು. ಕೊಟ್ಟ ಬಳಿಕ ನಮಗೆ ನೀಡುತ್ತಿರುವ ಉಚಿತ ಅಕ್ಕಿ, ಧಾನ್ಯಗಳ ವಿತರಣೆಯನ್ನು ನಿಲ್ಲಿಸುತ್ತಾರಂತೆ, ಹೌದೇ?" ಎಂದು ಪ್ರಶ್ನಿಸಿದರು.

“ಆ ರೀತಿ ಘೋಷಣೆ ಮಾಡಿದಂತಿಲ್ಲ" ಎಂದು ಉತ್ತರಿಸಿ ನಾನು ಸುಕ್ನಾದ ಸಿಮಲ್ ಬಾಡಿ ಪ್ರದೇಶ ದಲ್ಲಿರುವ ಟೀ ಗಾರ್ಡನ್‌ನತ್ತ ತೆರಳಿದೆ. ಸುಮಾರು 30 ಕಿಮೀ ದೂರದ ಸಿತುಬಿಟಾ ಹಳ್ಳಿಯಿಂದ ಬಂದು ಕೆಲಸ ಮಾಡುತ್ತಿದ್ದ ಜ್ಯೋತಿ ಮುಂಡಾ, ತನ್ನ ಮಗಳನ್ನೂ ಟೀ ಎಸ್ಟೇಟ್‌ಗೆ ಕರೆದು ತಂದು ಅಲ್ಲಿ ಕೆಲಸ ಮಾಡಿಸುತ್ತಿದ್ದಳು.

“9ನೇ ತರಗತಿಗೆ ಓದು ನಿಲ್ಲಿಸಿ ಇಲ್ಲಿಗೇಕೆ ಕರೆದು ತಂದಿದ್ದೀರಿ?" ಎಂದು ಆಕೆ ಬಳಿ ಕೇಳಿದೆ. “ನನ್ನ ತಂಗಿಯ ಮಗ ಡಿಗ್ರಿ ಮಾಡಿzನೆ. ನೌಕರಿ ಸಿಗದೆ ಕೊನೆಗೆ ಇಲ್ಲೇ ಚಹಾ ಎಲೆ ಕೀಳುತ್ತಿದ್ದಾನೆ" ಎಂದು ಆತನತ್ತ ಬೆರಳು ತೋರಿಸಿದರು. “ನಮ್ಮಲ್ಲಿ ಯಾರಿಗೂ ಒಳ್ಳೆ ಕೆಲಸ ಸಿಗುತ್ತಿಲ್ಲ. ಪದವಿ ಮಾಡಿದ ಎಷ್ಟೋ ಮಂದಿ ಟೀ ಗಾರ್ಡನ್, ಮೇಸಿ ಕೆಲಸಕ್ಕೆ ಹೋಗುತ್ತಿದ್ದಾರೆ.

ಬಂಗಾಳದಲ್ಲಿ ನಿರುದ್ಯೋಗದ ಸಮಸ್ಯೆ ಇದೆ. ಹೀಗಿದ್ದಾಗ ಮಗಳನ್ನು ಓದಿಸಿ ಏನು ಮಾಡಲಿ?" ಎಂದು ಪ್ರಶ್ನಿಸಿದಳು. ಜ್ಯೋತಿ ಮುಂಡಾಳ ಪತಿ ದೆಹಲಿಯ ಲಜಪತನಗರದ ಗೆಸ್ಟ್ ಹೌಸ್ ಒಂದರಲ್ಲಿ ಕೆಲಸ ಮಾಡುತ್ತಿದ್ದಾರಂತೆ. ಕೆಲ ದಿನಗಳ ಹಿಂದಷ್ಟೇ ಆಕೆ ಕೂಡ ದೆಹಲಿಗೆ ಹೋಗಿ, ಇದ್ದಷ್ಟು ದಿನ ಬೇರೆಯವರ ಮನೆಗಳಲ್ಲಿ ಅಡುಗೆ, ಕಸ ಗುಡಿಸುವ, ಪಾತ್ರೆ ತೊಳೆಯುವ ಕೆಲಸ ಮಾಡಿದಳಂತೆ. ಈಗ ಟೀ ಗಾರ್ಡನ್‌ಗೆ ವಾಪಸಾಗಿದ್ದಾಳೆ.

ಸಿಮಲ್ಬಾಡಿ ಟೀ ಗಾರ್ಡನ್‌ನ ಸರ್ದಾರ್ (ಉಸ್ತುವಾರಿ) ರಾಜ್‌ಕುಮಾರ್ ನಗಾಸಿಯಾಗೆ ತಿಂಗಳಿಗೆ 9000 ರು. ಸಾವಿರ ಸಂಬಳ. ಜತೆಗೆ ಕಟ್ಟಡ ಕಾಂಟ್ರಾಕ್ಟ್‌ ಕೆಲಸಕ್ಕೆ ಕಾರ್ಮಿಕರನ್ನು ಪೂರೈಸುವ ಕೆಲಸ ಮಾಡುತ್ತಾ ತಿಂಗಳಿಗೆ 15000 ರು. ಹೆಚ್ಚುವರಿ ದುಡಿಯುತ್ತಾನೆ. ಒಬ್ಬ ಮಗ ದೆಹಲಿಯಲ್ಲಿ ಮತ್ತೊಬ್ಬ ಸುಕ್ನಾ ಆರ್ಮಿ ಕಂಟೋನ್ಮೆಂಟ್‌ನಲ್ಲಿ ಸಣ್ಣಪುಟ್ಟ ಕೆಲಸ ಮಾಡುತ್ತಾ ತಿಂಗಳಿಗೆ ತಿಂಗಳಿಗೆ 15 ಸಾವಿರ ರು. ಸಂಪಾದಿಸುತ್ತಾನಂತೆ.

“ನಮ್ಮಲ್ಲಿ ಎಲ್ಲರೂ ದುಡಿಯುವುದರಿಂದ ಸ್ವಂತ ಮನೆ ಕಟ್ಟಿದ್ದೇವೆ. ಆದರೆ ಎಲ್ಲರ ಜೀವನ ಹೀಗಿಲ್ಲ. ಟೀ ತೋಟದ ಕಾರ್ಮಿಕರ ಸಂಬಳ ಹೆಚ್ಚಿಸಲೇಬೇಕು. ನಮ್ಮ ವೃತ್ತಿಗೆ ಘನತೆ ಇಲ್ಲವೇ? ಎಲ್ಲಾ ಸಾಮಗ್ರಿಗಳ ಬೆಲೆ ಏರಿರುವಾಗ ದಿನಕ್ಕೆ ಬರೀ 250 ರು. ನೀಡುವುದು ಎಷ್ಟು ಸರಿ?" ಎಂದು ಬೇಸರ ಹೊರಹಾಕಿದರು.

“15 ವರ್ಷ ದೀದಿಗೆ ಅವಕಾಶ ನೀಡಿದ್ದೇವೆ. ಹೊಸಬರಿಗೆ ಅವಕಾಶ ನೀಡುವ ಸಮಯ ಬಂದಿದೆ. ಇಲ್ಲಿ ಬಿಜೆಪಿ ಸರಕಾರವನ್ನೂ ಒಮ್ಮೆ ನೋಡಬೇಕು" ಎನ್ನುತ್ತಾ ತಮ್ಮದು ಬದಲಾವಣೆಗೆ ಮತ ಎಂದು ಖಚಿತಪಡಿಸಿದರು.

ಬಿಜೆಪಿ ಪ್ರಭಾವಲಯ ಹೆಚ್ಚಿರುವ ಉತ್ತರ ಬಂಗಾಳದ ಡಾರ್ಜಿಲಿಂಗ್, ಸಿಲಿಗುರಿ, ಕರ್ಸಂಗ್ ಸುತ್ತ ಮುತ್ತಲಿನ ಟೀ ಎಸ್ಟೇಟ್ ಕಾರ್ಮಿಕರು ಈ ಬಾರಿ ಬದಲಾವಣೆಗೆ ತೆರೆದುಕೊಳ್ಳಲು ಯೋಚಿಸಿದ್ದಾ ರೆನ್ನುವುದು ಅವರ ಮಾತುಗಳಲ್ಲೇ ವ್ಯಕ್ತವಾಗುತ್ತಿತ್ತು. ಇದೇ ಕಾರಣಕ್ಕೆ ಭೂತಾನ್, ನೇಪಾಳ ಮತ್ತು ಬಾಂಗ್ಲಾದೇಶಗಳೊಂದಿಗೆ ಗಡಿ ಹಂಚಿಕೊಂಡಿರುವ ಡಾರ್ಜಿಲಿಂಗ್, ಜಲ್‌ಪಯ್‌ ಗುರಿ, ಸಿಲಿಗುರಿ, ಕೂಚ್ ಬೆಹಾರ್, ಅಲಿಪುರ್‌ದ್ವಾರ್, ಕಲಿಂಪಾಂಗ್ ಜಿಲ್ಲೆಗಳ ಬಹುಪಾಲು ಸೀಟುಗಳನ್ನು ನಾವು ಗೆಲ್ಲಲಿದ್ದೇವೆ ಎಂಬ ವಿಶ್ವಾಸದಲ್ಲಿ ಕೇಸರಿ ನಾಯಕರೂ ಇದ್ದಾರೆ.

ಕನ್ನಡಿಗ ಅರುಣ್ ಬಿನ್ನಡಿಗೆ 28 ಕ್ಷೇತ್ರಗಳ ಉಸ್ತುವಾರಿ

ಕಳೆದ ಬಾರಿ ಅತಿ ಹೆಚ್ಚು ರಾಜಕೀಯ ಹಿಂಸಾಚಾರ- ದಾಳಿ ಪ್ರಕರಣಗಳಿಗೆ ಸಾಕ್ಷಿಯಾಗಿದ್ದ ಉತ್ತರ ಬಂಗಾಳದ ಕೂಚ್ ಬೆಹಾರ್, ಅಲಿಪುರ್‌ದ್ವಾರ್ ಸೇರಿದಂತೆ ಜಲ್‌ಪೈಗುರಿ, ಡಾರ್ಜಿಲಿಂಗ್, ಕಲಿಂಪಾಂಗ್, ಸಿಲಿಗುರಿ ಜಿಲ್ಲೆಗಳ ಒಟ್ಟು 28 ಕ್ಷೇತ್ರಗಳ ಉಸ್ತುವಾರಿಯನ್ನು ಬಿಜೆಪಿ ಪೂರ್ಣಾವಧಿ ಕಾರ್ಯಕರ್ತ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿನ್ನೆಲೆಯಿಂದ ಬಂದ ಚಿಕ್ಕಮಗಳೂರು ಮೂಲದ ಅರುಣ್ ಬಿನ್ನಡಿ ಅವರಿಗೆ ನೀಡಲಾಗಿದೆ. ಕಳೆದ 6 ತಿಂಗಳಿನಿಂದ ಅರುಣ್ ಇಲ್ಲೇ ಬೀಡು ಬಿಟ್ಟಿದ್ದಾರೆ. ನಿತ್ಯವೂ ವಿವಿಧ ಕ್ಷೇತ್ರಗಳಿಗೆ ಪ್ರವಾಸ ಮಾಡುತ್ತಾ, ಕಾರ್ಯಕರ್ತರನ್ನು ಒಗ್ಗೂಡಿಸಿ, ಪಕ್ಷ ಸಂಘಟನೆ ಬಲಗೊಳಿಸುವಲ್ಲಿ ಅರುಣ್ ತೊಡಗಿದ್ದಾರೆ.

ಅರುಣ್ ಬಿನ್ನಡಿ ಮೇಲೆ ಟಿಎಂಸಿ ಕಾರ್ಯಕರ್ತರ ಕೆಂಗಣ್ಣು ಬಿದ್ದಿದ್ದು, ಎರಡು ಬಾರಿ ದಾಳಿ ಯತ್ನವೂ ನಡೆದಿದೆ. ಒಮ್ಮೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಕಚ್ಚಾ ಬಾಂಬ್ ಎಸೆದಿದ್ದರು. ಸಿಟಾಯ್ ಕ್ಷೇತ್ರದಲ್ಲಿ ಕಾರ್ಯಕರ್ತರ ಮೀಟಿಂಗ್ ಮಾಡುತ್ತಿದ್ದಾಗ ಮತ್ತೊಮ್ಮೆ ವೇದಿಕೆಯ ಪಕ್ಕಕ್ಕೇ ಬಾಂಬ್ ಎಸೆದು ಪರಾರಿಯಾಗಿದ್ದರು. ಈ ಹಿಂದೆ ಬೆಂಗಳೂರು ಯುವ ಮೋರ್ಚಾ ಯಶವಂತಪುರ ಘಟಕದ ಕಾರ್ಯದರ್ಶಿ, ‘ಸಿವಿಕ್ ಇನಿಷಿಯೇಟಿವ್ ಫಾರ್ ಬೆಟರ್ ಬೆಂಗಳೂರು’ ಸಂಸ್ಥೆಯಲ್ಲಿ ಹಲವು ವರ್ಷ ಸೇವೆ ಸಲ್ಲಿಸಿದ್ದರು.

ಅಣ್ಣಾ ಹಜಾರೆ ಆಂದೋಲನದಲ್ಲೂ ಭಾಗಿಯಾಗಿದ್ದ ಅರುಣ್, ನಂತರ ರಾಷ್ಟ್ರೀಯ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರೊಂದಿಗೂ ದಿಲ್ಲಿಯಲ್ಲಿ ಕೆಲಸ ಮಾಡಿದ್ದರು. ಜಮ್ಮು-ಕಾಶ್ಮೀರ, ಪಂಜಾಬ್ ಚುನಾವಣೆ ಸಂದರ್ಭದಲ್ಲೂ ಆ ಭಾಗಗಳಲ್ಲಿ ಸಂಘಟನೆ ಪರ ದುಡಿದಿದ್ದ ಅರುಣ್, ಸಂಘರ್ಷಮಯ ರಾಜಕೀಯ ವಾತಾವರಣವಿರುವ ಬಂಗಾಳದಲ್ಲಿ, ಟಿಎಂಸಿಯ ಸವಾಲುಗಳಿಗೆ ಮೈ ಒಡ್ಡುತ್ತಾ ಕಾರ್ಯಕರ್ತರೊಂದಿಗೆ ಪಕ್ಷ ಸಂಘಟನೆಯಲ್ಲಿ ತೊಡಗಿ ರುವುದು ವಿಭಿನ್ನ ಅನುಭವ ನೀಡುತ್ತಿದೆ. ‌28 ಸೀಟುಗಳಲ್ಲಿ 23ನ್ನು ಗೆಲ್ಲುವ ಪೂರ್ಣ ವಿಶ್ವಾಸವಿದೆ ಎಂದು ಅವರು ‘ವಿಶ್ವವಾಣಿ’ ಜತೆ ಅನಿಸಿಕೆ ಹಂಚಿಕೊಂಡರು.

ಬ್ಲಡ್ ಟೀ ಅಭಿಯಾನ

ಡಾರ್ಜಿಲಿಂಗ್ ಅನ್ನು ‘ಶಾಂಪೇನ್ ಆಫ್‌ ಟೀಸ್’ ಎಂದು ಕರೆಯಲಾಗುತ್ತದೆ. ಆದರೆ ಇಲ್ಲಿನ ಟೀ ಕಾರ್ಮಿಕರಿಗೆ ಕಡಿಮೆ ವೇತನ ಮತ್ತು ಬೋನಸ್ ಖಂಡಿಸಿ 2024ರಲ್ಲಿ ಡಾರ್ಜಿಲಿಂಗ್‌ನ ‘ಗೋರ್ಖಾ ಜನಶಕ್ತಿ ಫ್ರಂಟ್’ನ ನಾಯಕ ಅಜಯ್ ಎಡ್ವರ್ಡ್ ಅವರು 2024ರಲ್ಲಿ ‘ಬ್ಲಡ್ ಟೀ’ ಎಂಬ ಅಭಿಯಾನ ವನ್ನು ಡಾರ್ಜಿಲಿಂಗ್ ಜಿಯಲ್ಲಿ ಆರಂಭಿಸಿದ್ದರು. ಕಾರ್ಮಿಕರ ಬವಣೆ, ಶೋಷಣೆ, ನೋವನ್ನು ಬಿಂಬಿಸಲು ಟೀ ಎಲೆ ಮೇಲೆ ರಕ್ತ ಚಿಮ್ಮಿಸಿದ್ದರು. ಇದಕ್ಕೆ ಉದ್ಯಮಿಗಳು ಅಸಮಾಧಾನ ಹೊರ ಹಾಕಿ, “ಡಾರ್ಜಿಲಿಂಗ್ ಟೀ ಜಗತ್ತಿನಾದ್ಯಂತ ಪ್ರಸಿದ್ಧಿ ಪಡೆದಿದೆ. ಆದರೆ, ಇಂಥಾ ಅಭಿಯಾನದ ಮೂಲಕ ಹೆಸರು ಹಾಳು ಮಾಡಲಾಗುತ್ತಿದೆ" ಎಂದಿದ್ದರು. ಹಾಗಂತ, ಕಾರ್ಮಿಕರ ಬವಣೆ ಮಾತ್ರ ನಿಂತಿಲ್ಲ.

ಕೆ. ರಾಘವ ಶರ್ಮ ನಿಡ್ಲೆ

View all posts by this author