West Bengal Election ground report by Raghava Sharma Nidle: ದೀದಿ 1500 ರುಪಾಯಿ V/s ಮೋದಿ 3000 ರುಪಾಯಿ +33%
ಎಸ್‌ಸಿ/ಎಸ್‌ಟಿ ಸಮುದಾಯದ ಮಹಿಳೆಯರಿಗೆ 1700 ರು. ನೀಡಲಾಗುತ್ತಿದೆ. ರಾಜ್ಯದ ಕಾಯಂ ಸರಕಾರಿ ನೌಕರರನ್ನು ಹೊರತುಪಡಿಸಿ ಅರ್ಹ ಮಹಿಳೆಯರ ಖಾತೆಗೆ ಹಣ ಜಮೆಯಾಗುತ್ತಿದೆ. ಸರಕಾರದ ಮತ್ತಿತರ ಮಹಿಳಾಪರ ಯೋಜನೆಗಳೂ ಗಮನ ಸೆಳೆದಿವೆ. ಏತನ್ಮಧ್ಯೆ, ಬಿಜೆಪಿ 3000 ರು. ನೆರವಿನ (2 ಪಟ್ಟು ಹೆಚ್ಚು) ಘೋಷಣೆಯ ಜತೆಗೆ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ನೀಡುವುದನ್ನು ಗಟ್ಟಿ ಧ್ವನಿಯಿಂದ ಪ್ರಚಾರ ಮಾಡುತ್ತಿದೆ.
-
ಗ್ರೌಂಡ್ ರಿಪೋರ್ಟ್
ವಿಶ್ವವಾಣಿ ಬಂಗಾಳ ಚುನಾವಣಾ ಯಾತ್ರೆ
ರಾಜ್‌ಗಂಜ್ (ಜಲ್‌ಪಯ್‌ಗುರಿ ಜಿಲ್ಲೆ): ಮಹಿಳಾ ಕೇಂದ್ರಿತ ಯೋಜನೆಗಳನ್ನು ಪ್ರಕಟಿಸುತ್ತಾ ಮತ್ತು ಮುಖ್ಯವಾಗಿ ಖಾತೆಗಳಿಗೆ ಹಣ ವರ್ಗಾಯಿಸುವ ಕ್ರಮಗಳೊಂದಿಗೆ ಮಹಿಳಾ ಮತಬ್ಯಾಂಕ್ ಅನ್ನು ಸೆಳೆಯುವ ರಾಜಕೀಯ ಪಕ್ಷಗಳ ಪ್ರವೃತ್ತಿ ಹೆಚ್ಚಾಗಿದ್ದು, ಪಶ್ಚಿಮ ಬಂಗಾಳ ಕೂಡ ಇದರಿಂದ ಹೊರತಾಗಿಲ್ಲ.
2021ರಲ್ಲಿ ವಿಧಾನಸಭೆ ಚುನಾವಣೆ ಗೆದ್ದ ಕೂಡಲೇ ಸಿಎಂ ಮಮತಾ ಬ್ಯಾನರ್ಜಿ ಅವರು 25 ವರ್ಷ ಮೇಲ್ಪಟ್ಟ ಮಹಿಳೆಯರ ಆರ್ಥಿಕ ಬಲ ವೃದ್ಧಿಗಾಗಿ ಮಾಸಿಕ 1000 ರು. ನೆರವನ್ನು ಖಾತೆಗೆ ಜಮೆ ಮಾಡುವ ‘ಲಕ್ಷ್ಮೀ ಭಂಡಾರ್’ ಯೋಜನೆಯನ್ನು ಜಾರಿಗೊಳಿಸಿದ್ದರು. ಈಗ ನೆರವನ್ನು 1500 ರು.ಗೆ ಏರಿಸಲಾಗಿದೆ.
ಎಸ್‌ಸಿ/ಎಸ್‌ಟಿ ಸಮುದಾಯದ ಮಹಿಳೆಯರಿಗೆ 1700 ರು. ನೀಡಲಾಗುತ್ತಿದೆ. ರಾಜ್ಯದ ಕಾಯಂ ಸರಕಾರಿ ನೌಕರರನ್ನು ಹೊರತುಪಡಿಸಿ ಅರ್ಹ ಮಹಿಳೆಯರ ಖಾತೆಗೆ ಹಣ ಜಮೆಯಾಗುತ್ತಿದೆ. ಸರಕಾರದ ಮತ್ತಿತರ ಮಹಿಳಾಪರ ಯೋಜನೆಗಳೂ ಗಮನ ಸೆಳೆದಿವೆ. ಏತನ್ಮಧ್ಯೆ, ಬಿಜೆಪಿ 3000 ರು. ನೆರವಿನ (2 ಪಟ್ಟು ಹೆಚ್ಚು) ಘೋಷಣೆಯ ಜತೆಗೆ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ನೀಡುವು ದನ್ನು ಗಟ್ಟಿ ಧ್ವನಿಯಿಂದ ಪ್ರಚಾರ ಮಾಡುತ್ತಿದೆ.
ನಾನು ಭಾರತ-ಬಾಂಗ್ಲಾದೇಶ ಗಡಿಭಾಗದ ಜಲ್‌ಪಯ್‌ಗುರಿ ಜಿಲ್ಲೆಯ ರಾಜ್‌ಗಂಜ್ ವಿಧಾನಸಭೆ ಕ್ಷೇತ್ರದಲ್ಲಿದ್ದೆ. ಗಡಿಯುದ್ದಕ್ಕೂ ಬಲಿಷ್ಠ ಗಡಿಬೇಲಿಗಳನ್ನು ನಿರ್ಮಾಣ ಮಾಡಲಾಗಿದೆ. ಅವುಗಳನ್ನು ವೀಕ್ಷಿಸುತ್ತಿದ್ದಾಗ ಪಕ್ಕದ ಸೌದಾಬೀಟಾ ಗ್ರಾಮಕ್ಕೆ ಸೈಕಲ್‌ನಲ್ಲಿ ತೆರಳುತ್ತಿದ್ದ ರಕಲ್‌ಚಂದ್ರ ರಾಯ್ ಮತ್ತು ಮೊಯಿನುಲ್ ಹಕ್ ಎಂಬ ಇಬ್ಬರು ವೃದ್ಧರನ್ನು ನಿಲ್ಲಿಸಿ ಮಾತನಾಡಿದೆ.
ಇದನ್ನೂ ಓದಿ: West Bengal Election ground report by Raghava Sharma Nidle: ಬಂಗಾಳಿಗರ ಮೌನದೊಳಗೊಂದು ಸಂದೇಶವಿದೆಯೇ?
“ನಮಗೆ ಟಿಎಂಸಿ ಸರಕಾರ ಮುಂದುವರಿಯುವುದರಲ್ಲಿ ಯಾವುದೇ ಸಮಸ್ಯೆ ಇಲ್ಲ" ಎಂದ ರಕಲ್ ಚಂದ್ರ ರಾಯ್, “ಮನೆಯಲ್ಲಿ ಮೂವರು ಮಹಿಳೆಯರಿದ್ದು, ಮೂವರ ಖಾತೆಗೆ 1500 ರು.ನಂತೆ ಒಟ್ಟು 4500 ರು. ಹಣ ಜಮೆಯಾಗುತ್ತಿದೆ. ನನಗೆ ಮತ್ತು ಪತ್ನಿಗೆ ವೃದ್ಧಾಪ್ಯ ವೇತನ ತಲಾ 1000 ರು. ಸಿಗುತ್ತಿದೆ. ಹೀಗಾಗಿ, ಮಮತಾ ದೀದಿಯೇ ಬೇಕು" ಎಂದು ಸಮರ್ಥಿಸಿಕೊಂಡರು.
“ಬಡವರಿಗೆ ದುಡ್ಡು ಕೊಟ್ಟು ಕಷ್ಟಕ್ಕೆ ನೆರವಾಗುತ್ತಿರುವಾಗ ಬೇಡ ಎನ್ನಲೇಕೆ?" ಎಂದವರು ಪ್ರಶ್ನಿಸು ತ್ತಾರೆ. ಗಡಿಬೇಲಿ ತೋರಿಸಿದ ರಾಯ, “ಮೊದಲು ಇಲ್ಲಿ ಯಾವುದೇ ಬೇಲಿಗಳಿರಲಿಲ್ಲ. ನಾವು ಆಗಾಗ ಬಾಂಗ್ಲಾದೇಶಕ್ಕೆ ಇಲ್ಲಿಂದಲೇ ಹೋಗಿ ಬರುತ್ತಿದ್ದೆವು. ನಾವು ಮೂಲತಃ ಪಾಕಿಸ್ತಾನದವರು (ಈಗ ಬಾಂಗ್ಲಾದೇಶ). ಈ ಗಡಿಯಿಂದ 8-10 ಕಿ.ಮೀ. ದೂರದಲ್ಲಿದ್ದ ಹಳ್ಳಿಯಲ್ಲಿ ನೆಲೆಸಿದ್ದ ತಂದೆ ಉಖಮ್ರಾಮ್ ರಾಯ್ 1950-60ರ ದಶಕದಲ್ಲಿ ಗಡಿದಾಟಿ ಇಲ್ಲಿ ಬಂದು ನೆಲೆಸಿದರು" ಎಂದು ಮಾಹಿತಿ ಹಂಚಿಕೊಂಡರು.
ಮೊಯಿನುಲ್ ಹಕ್ ಮನೆಯಲ್ಲೂ ಮೂವರು ಮಹಿಳೆಯರಿದ್ದು, “ಲಕ್ಷ್ಮೀ ಭಂಡಾರ್ ಯೋಜನೆ ಯಡಿಯಲ್ಲಿ ತಿಂಗಳಿಗೆ 4500 ರು. ಸಿಗುತ್ತಿದೆ. ಆತನಿಗೂ ವೃದ್ಧಾಪ್ಯ ವೇತನ ಸಿಗುತ್ತಿದೆ. ಹೀಗಾಗಿ, ಇಬ್ಬರೂ ದೀದಿ ಹೀ ಠೀಕ್ ಹೇ" ಎಂದು ಸೈಕಲ್ ಹತ್ತಿ ತಮ್ಮ ಗ್ರಾಮದತ್ತ ಮುಖ ಮಾಡಿದರು.
ಬೆಂಗುಪಾರಾ ಗ್ರಾಮದ ಗೋವಿಂದೋ ರಾಯ್ ಮತ್ತು ರಾಜು ರಾಯ್ ಸೋದರರು, ಟಿಎಂಸಿ ಗೂಂಡಾ ಪಾರ್ಟಿ ಎಂಬುದನ್ನು ಒಪ್ಪಿಕೊಂಡರೂ, ‘ಇಬ್ಬರು ಮಹಿಳೆಯರಿಗೆ ಸೇರಿ 3000 ರು. ಹಣ ಜಮೆಯಾಗುತ್ತಿರುವುದರಿಂದ ಟಿಎಂಸಿಯನ್ನೇ ಬೆಂಬಲಿಸಲು ತೀರ್ಮಾನಿಸಿದ್ದೇವೆ ಎಂದರು.
“ನಮ್ಮಲ್ಲಿ ಸುಸಜ್ಜಿತ ಆಸ್ಪತ್ರೆಯ ಕೊರತೆ ಇದೆ" ಎಂದ ಸೋದರರು, “ಗ್ರಾಮದಲ್ಲಿ ರಸ್ತೆ ಹಾಗೂ ಶಿಕ್ಷಣ ವ್ಯವಸ್ಥೆ ಚೆನ್ನಾಗಿದೆ. ನಮಗೆ ದೀದಿಯೇ ಸೂಕ್ತ" ಎಂದರು. ಆದರೆ, ಜುರಾನ್‌ಪಾಡಾ ಹಳ್ಳಿಯ ಯುವತಿಯರಾದ ಮಂಟಿ ಬಿಸ್ವಾಸ್ ಮತ್ತು ಕೃಷ್ಣ ಬಿಸ್ವಾಸ್ 1500 ರು. ಹಣದ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿಲ್ಲ.
ಬಂಗಾಳಕ್ಕೆ ಹೊಸ ಸರಕಾರ ಬೇಕು ಎಂಬ ಖಚಿತ ನಿಲುವು ಹೊರ ಹಾಕಿದ ಅವರು, “ರಾಜ್ಯ ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿದೆ. ಮಹಿಳೆಯರು ಸುರಕ್ಷಿತವಾಗಿಲ್ಲ. ಟಿಎಂಸಿ ಗೂಂಡಾಗಿರಿಗೆ ಕಡಿವಾಣ ಹಾಕಲೇಬೇಕು. ಬಾಂಗ್ಲಾದೇಶದಲ್ಲಿ ಹಿಂದೂಗಳನ್ನು ಸಜೀವವಾಗಿ ದಹಿಸಿದರು. ಆ ದೃಶ್ಯಗಳನ್ನು ನೋಡಲು ಸಾಧ್ಯವಾಗಲಿಲ್ಲ. ಹೀಗೂ ಹಿಂದೂಗಳನ್ನು ಕೊಲ್ಲುತ್ತಾರಾ? ಈಗ ಬಂಗಾಳದಲ್ಲೂ ಹಿಂದೂಗಳು ಸುರಕ್ಷಿತರಾಗಿಲ್ಲ. ಮಮತಾ ದೀದಿ ಈ ಬಗ್ಗೆ ಏಕೆ ಮಾತನಾಡಲಿಲ್ಲ? ಮತ್ತೊಂದು ಕೋಮಿನವರಿಗೆ ಬೇಸರವಾಗುತ್ತದೆ ಎಂದೇ? ನಿಮಗೆ ಗೊತ್ತಿರಲಿ, ಟಿಎಂಸಿ ಶಾಸಕರಿರುವ ಪ್ರತಿ ಕ್ಷೇತ್ರಗಳಲ್ಲಿ ಮುಸ್ಲಿಂ ಗೂಂಡಾಗಳಿದ್ದಾರೆ" ಎಂದರು.
“ಬಿಜೆಪಿ ಬಂದರೆ ಈ ಹಳ್ಳಿ ಅಭಿವೃದ್ಧಿಯಾಗುತ್ತದೋ ಇಲ್ಲವೋ ಗೊತ್ತಿಲ್ಲ. ರಾಜ್ಯದ ಸಮಗ್ರ ಅಭಿವೃದ್ಧಿಗಾಗಿ ಬದಲಾವಣೆ ಬೇಕೇ ಬೇಕು" ಎಂದರು ಮಂಟಿ ಬಿಸ್ವಾಸ್. ಜಲ್‌ಪಯ್‌ಗುರಿಯ ರಾಜ್‌ಗಂಜ್‌ನಲ್ಲಿ ಬುಧವಾರದಂದು ಗೃಹ ಸಚಿವ ಅಮಿತ್ ಶಾ ಅವರ ಜನಸಭೆ ಆಯೋಜಿಸ ಲಾಗಿತ್ತು ಮತ್ತು ನಿರೀಕ್ಷೆಗೂ ಮೀರಿದ ಸಂಖ್ಯೆಯಲ್ಲಿ ಜನ ಸೇರಿದ್ದರು.
ಯುವಕರು, ಮಹಿಳೆಯರ ಬಾಯಲ್ಲೂ ‘ಜೈ ಶ್ರೀರಾಮ್; ಘೋಷಣೆಗಳು ಕೇಳುತ್ತಿದ್ದವು. ‘ಜೈ ಮಾ ದುರ್ಗಾ’ ಎನ್ನುತ್ತಿದ್ದವರು ‘ಜೈ ಶ್ರೀರಾಮ್’ ಎಂದೂ ಹೇಳುತ್ತಿರುವುದು ಬಂಗಾಳದಲ್ಲಿನ ಹೊಸ ಬೆಳವಣಿಗೆ. ಇದು ರಾಜಕೀಯ ಮತ್ತು ಚುನಾವಣೆ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎನ್ನುವುದರ ಸೂಚಕವೂ ಹೌದು.
ಅಮಿತ್ ಶಾ ಜನಸಭೆ ಬಳಿಕ ನಾನು ಪಕ್ಕದ ಗ್ರಾಮವೊಂದರಲ್ಲಿ ಇತಾಲಿ ಬಿಸ್ವಾಸ್ ಮತ್ತು ಫುಲ್ ಶ್ರೀ ಬಿಸ್ವಾಸ್ ಎಂಬ ಇಬ್ಬರು ವಿವಾಹಿತ ಯುವತಿಯರೊಂದಿಗೆ ಮಾತನಾಡಲು ಯತ್ನಿಸಿದೆ. ತಮ್ಮ ಗ್ರಾಮದಲ್ಲಿ ಈವರೆಗೆ ಮಾಧ್ಯಮದವರನ್ನು ನೋಡಿಯೇ ಇರದ ಕಾರಣ, ನನ್ನ ಪ್ರೆಸ್ ಐಡಿ ಕಾರ್ಡ್ ತೋರಿಸಿ, ‘ನಾನು ಯಾವುದೇ ಪಾರ್ಟಿಗೆ ಸೇರಿಲ್ಲ’ ಎಂದು ಖಾತರಿಪಡಿಸಿದೆ. ಅವರಿಗೂ ದೀದಿಯ ಉಚಿತ ಹಣಕಾಸು ನೆರವಿನ ಬಗ್ಗೆ ಖುಷಿಯಿದೆ ಎನ್ನುವುದು ಮಾತುಗಳಲ್ಲಿ ಸ್ಪಷ್ಟವಾಯ್ತು.
“ದೇಶಕ್ಕೆ ಮೋದಿ, ರಾಜ್ಯಕ್ಕೆ ದೀದಿ" ಎಂದ ಇಬ್ಬರು, “ನಮಗೆ ಮೋದಿ ಬಗ್ಗೆ ಯಾವುದೇ ಸಿಟ್ಟಿಲ್ಲ. ದೇಶಕ್ಕೆ ಅವರೇ ಒಳ್ಳೆಯದು" ಎಂದರು.
ರಾಜ್‌ಗಂಜ್ ಪಟ್ಟಣ ಭಾಗಕ್ಕೆ ತೆರಳಿ ಟ್ಯಾಕ್ಸಿ ಮಾಲೀಕ ರಿಪುಜಾಯ್ ಚೌಧುರಿ ಮತ್ತು ದಿನಸಿ ಸಾಮಗ್ರಿ ಅಂಗಡಿ ನಡೆಸುತ್ತಿರುವ ಅವರ ಪತ್ನಿ ರಾಖಿ ಚೌಧುರಿ ದಂಪತಿಯನ್ನು ಭೇಟಿ ಮಾಡಿದೆ. ರಾಖಿ ಚೌಧುರಿ ತಮ್ಮ ಅಂಗಡಿ ಮುಂದಿರುವ ರಸ್ತೆ, ವಿದ್ಯುತ್‌ಕಂಬ ಮತ್ತು ನೀರಿನ ಬೋರ್‌ವೆಲ್ ತೋರಿಸಿ “ಇದು ಟಿಎಂಸಿ ಸರಕಾರದ ಕೊಡುಗೆ.
ನನಗೂ 1500 ರು. ಬರುತ್ತಿದೆ. ಲೋಕಸಭೆ ಚುನಾವಣೆಯಲ್ಲಿ ಮೋದಿಗೆ ವೋಟು ಹಾಕಿದ್ದೆ. ಆದರೆ, ಈ ಬಾರಿ ದೀದಿ" ಎಂದು ಹೇಳಿದರು. ಪತ್ನಿಯ ನಿಲುವನ್ನು ವಿರೋಧಿಸಿದ ಪತಿ ರಿಪುಜಾಯ್, “ಅವಳಿಗೆ 1500 ರು. ಬರುತ್ತಿದೆ. ಅದಕ್ಕೆ ಹಾಗೆ ಹೇಳುತ್ತಿದ್ದಾಳೆ. ಅಭಿವೃದ್ಧಿಯಿಂದ ಹಿಂದೆ ಬಿದ್ದಿರುವ ರಾಜ್ಯದಲ್ಲಿ ಬದಲಾವಣೆ ಆಗಬೇಕು. ಇರಾನ್-ಅಮೆರಿಕ ಸಂಘರ್ಷಗಳ ಮಧ್ಯೆಯೂ ದೇಶದ ಜನರಿಗೆ ಸಿಲಿಂಡರ್ ಸಮಸ್ಯೆಯಾಗಿಲ್ಲ ಎಂದರೆ ಅದಕ್ಕೆ ಮೋದಿ ನಾಯಕತ್ವ ಕಾರಣ. ಬಂಗಾಳಕ್ಕೂ ಅವರ ಕಣ್ಗಾವಲಿನಲ್ಲಿ ಒಳ್ಳೆಯದಾಗಲಿದೆ" ಎಂದು ಭರವಸೆ ವ್ಯಕ್ತಪಡಿಸಿದರು.
ಮೋದಿ-ದೀದಿ ವಿಷಯದಲ್ಲಿ ದಂಪತಿಯಲ್ಲಿ ಭಿನ್ನಮತವಿದ್ದದ್ದು ಸ್ಪಷ್ಟವಾಗಿತ್ತು. “ಬಂಗಾಳಿ ಹೊಸ ವರ್ಷದ ದಿನದಂದು ನಮ್ಮ ಅಂಗಡಿಗೆ ಬಂದಿದ್ದೀರಿ" ಎಂದು ಇಬ್ಬರೂ ನನಗೆ ಮತ್ತು ಚಾಲಕನಿಗೆ ಸಿಹಿತಿನಿಸು ಕೊಟ್ಟು ಕಳುಹಿಸಿದರು. ರಾಜ್‌ಗಂಜ್ ನಿಂದ ಸಿಲಿಗುರಿಗೆ ಬರುವ ದಾರಿಯಲ್ಲಿದ್ದ ರಾಯ್ ಜನರಲ್ ಸ್ಟೋರ್ಸ್‌ಗೆ ಭೇಟಿ ನೀಡಿದೆ.
ಮಾಲೀಕ ದೀಪಕ್ ರಾಯ್ ‘ವಿಶ್ವವಾಣಿ’ ಜತೆ ಮಾತನಾಡಿ, “ಹೆಂಡತಿಗೆ ಹಣ ಬರುತ್ತಿದೆ. ಆದರೆ, ರಾಜ್‌ಗಂಜ್ ಮಾತ್ರವಲ್ಲ, ಜಲ್‌ಪಯ್‌ಗುರಿಯ 7 ವಿಧಾನಸಭೆ ಕ್ಷೇತ್ರಗಳಲ್ಲಿ ಬಹುಪಾಲನ್ನು ಈ ಬಾರಿ ಬಿಜೆಪಿ ಗೆಲ್ಲಲಿದೆ. ಹವಾ ಹೇಗಿದೆ ಎಂದು ನೀವೇ ನೋಡುತ್ತಿದ್ದೀರಿ. ಹಿಂದೆ ಈ ಪರಿಯಲ್ಲಿ ಜನ ಕೇಸರಿ ಬಾವುಟ ಹಿಡಿದು ಹೋಗುತ್ತಿದ್ದ ದೃಶ್ಯವನ್ನು ನಾನು ನೋಡಿಯೇ ಇಲ್ಲ" ಎಂದು ಆ ಭಾಗದ ರಾಜಕೀಯ ಚಿತ್ರಣವನ್ನು ಮುಂದಿಟ್ಟರು.
ಬಿಜೆಪಿ ಗೇಮ್‌ಪ್ಲಾನ್
ಮಮತಾ ಬ್ಯಾನರ್ಜಿಯವರ ಮಹಿಳಾ ಮತಬ್ಯಾಂಕ್ ಬಿಗಿಯಾಗಿರುವುದನ್ನು ಅರಿತೇ ಬಿಜೆಪಿ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಅರ್ಹ ಮಹಿಳೆಯರಿಗೆ 3000 ರು. ಹಣಕಾಸು ನೆರವು ನೀಡುವ ಘೋಷಣೆ ಮಾಡಿದೆ. ಅಲ್ಲದೆ, 2029ರಿಂದ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳಲ್ಲಿ ಶೇ.33ರಷ್ಟು ಮಹಿಳಾ ಮೀಸಲಾತಿ ಜಾರಿಯಾಗಲಿದೆ ಎಂದು ಖುದ್ದು ಪ್ರಧಾನಿ ನರೇಂದ್ರ ಮೋದಿ ಯವರೇ ಬಂಗಾಳದ ಪ್ರಚಾರ ಭಾಷಣಗಳಲ್ಲಿ ಒತ್ತಿ ಹೇಳುತ್ತಿದ್ದಾರೆ. ಕೋಲ್ಕತ್ತಾದ ಆರ್‌ಜಿ ಕರ್ ಆಸ್ಪತ್ರೆಯಲ್ಲಿ ಅತ್ಯಾಚಾರ-ಹತ್ಯೆಗೊಳಗಾದ ಯುವತಿಯ ತಾಯಿ ರತ್ನ ದೇಬ್‌ನಾಥ್ ಅವರನ್ನು ಪಾಣಿ ಹಾಟಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಸಲಾಗಿದ್ದು, ಮಹಿಳಾಪರ ಪ್ರಚಾರಕ್ಕೆ ಅದು ಸಾಂಕೇತಿಕ ಮಹತ್ವ ನೀಡುತ್ತಿದೆ. ಈಚಿನ ಬಿಹಾರ ವಿಧಾನಸಭೆ ಚುನಾವಣೆಯಲ್ಲೂ ಬಿಜೆಪಿ-ಜೆಡಿಯು ಒಳಗೊಂಡ ಎನ್‌ಡಿಎ ಸರಕಾರ ಮುಖ್ಯಮಂತ್ರಿ ಮಹಿಳಾ ರೋಜ್ಗಾರ್ ಯೋಜನೆ ಅಡಿಯಲ್ಲಿ 10000 ರು. ನೆರವನ್ನು ಮಹಿಳೆಯರ ಖಾತೆಗೆ ಜಮೆ ಮಾಡಿತ್ತು. ಇದು ಅಭೂತಪೂರ್ವ ಗೆಲುವಿನ ಪ್ರಮುಖ ಕಾರಣಗಳಲ್ಲಿ ಒಂದಾಗಿತ್ತು.
ಆರ್‌ಜೆಡಿಯ ತೇಜಸ್ವಿ ಯಾದವ್ ಅದಕ್ಕಿಂತ ಹೆಚ್ಚು ನೆರವು ನೀಡುತ್ತೇನೆ ಎಂದರೂ ಸಿಗುತ್ತಿದೆ ಮತ್ತು ಸಿಗಲಿದೆ ಎಂಬುದರ ವ್ಯತ್ಯಾಸವನ್ನು ಬಿಹಾರದ ಮತದಾರರು ಅರಿತಿದ್ದರು. ಈಗ ಇದೇ ಸವಾಲನ್ನು ಬಿಜೆಪಿ ಬಂಗಾಳದಲ್ಲಿ ಎದುರಿಸುತ್ತಿದೆ. ‘ದೀದಿ ನೆರವು ನೀಡುತ್ತಿದ್ದಾರೆ, ಮೋದಿ ನೆರವು ನೀಡುತ್ತೇವೆ ಎಂದಿzರಷ್ಟೇ’ ಎಂಬ ಮಾತುಗಳು ಗ್ರಾಮೀಣ ಭಾಗಗಳಲ್ಲಿ ಕೇಳುತ್ತಿವೆ.
ಹೆಸರು ಆಚೀಚೆಯಾಗಿ ಡಿಲೀಟ್!
ಜಲ್‌ಪಯ್‌ಗುರಿಯ ಬೈರಾಗಿಪಾರಾ ಗ್ರಾಮದ ಸಬಿಜುದ್ದೀನ್ ಮಹಮ್ಮದ್ “ನಮ್ಮ ಇಬ್ಬರ ಮಕ್ಕಳ ಹೆಸರು ಮತಪಟ್ಟಿಯಿಂದ ಡಿಲೀಟ್ ಆಗಿದೆ. ಇದನ್ನು ಸರಿ ಮಾಡಿ ಎಂದು ಎರಡು ಬಾರಿ ಅಪ್ಲಿಕೇಷನ್ ಕೊಟ್ಟಿದ್ದೇನೆ. ಏನಾಗುತ್ತದೋ ಗೊತ್ತಿಲ್ಲ. ನಮಗೆ ಗ್ರಾಮೀಣ ಭಾಗದವರಿಗೆ ಇದು ಅರ್ಥವಾಗುವುದೂ ಇಲ್ಲ" ಎಂದರು. ಸಬೀಜುದ್ದೀನ್ ಮಗ ಮುಸ್ತಾ- ನೂರುಲ್‌ನ ಹೆಸರು ಆಧಾರ್ ಕಾರ್ಡಿನಲ್ಲಿ ‘ಮುಸ್ತಫಾ ಆಲಂ’ ಎಂದಿದ್ದರೆ, ರೇಷನ್ ಕಾರ್ಡಿನಲ್ಲಿ ‘ಮುಸ್ತ- ನೂರುಲ್’ ಎಂದು ಇದೆಯಂತೆ. ಮಗಳು ಸುಪಿಯಾ ಕಾತುನ್ ಮದುವೆಯಾಗಿ ಬೇರೆ ಗ್ರಾಮಕ್ಕೆ ಹೋಗಿದ್ದರೂ ಮತಚೀಟಿ ಬದಲಾಯಿಸಿಲ್ಲ. ಆದರೆ, ಆಕೆ ಹೆಸರು ಈಗ ‘ಸುಪಿಯಾ ಬೇಗಂ’ ಎಂದು ಆಗಿದೆಯಂತೆ. ಹಾಗಾಗಿ, ಈ ವ್ಯತ್ಯಾಸಗಳಿಂದ ಡಿಲೀಟ್ ಆಗಿದೆ ಎಂದರು ಸಬೀಜುದ್ದೀನ್. ಅವರ ಗ್ರಾಮದಲ್ಲಿ ಸುಮಾರು 240 ಮಂದಿ ಹೆಸರು ಮತಪಟ್ಟಿಯಿಂದ ಡಿಲೀಟ್ ಆಗಿದೆಯಂತೆ. “ನಾವು ಮತ ಹಾಕುವುದು ಮಮತಾ ದೀದಿಗೆ" ಎಂದು ನಮ್ಮ ಪ್ರಶ್ನೆಗೆ ಉತ್ತರಿಸಿದ ಅವರು, “ನಿಮ್ಮ ಗ್ರಾಮ ಬಾಂಗ್ಲಾ ಗಡಿಗೆ ಹೊಂದಿರುವು ದರಿಂದ ಬಾಂಗ್ಲಾದೇಶದಿಂದ ಗಡಿದಾಟಿ ಬಂದವರು ಇದ್ದಾರಾ?" ಎಂದು ಕೇಳಿದ್ದಕ್ಕೆ, “600ಕ್ಕೂ ಹೆಚ್ಚು ಮಂದಿ ಅಲ್ಲಿಂದಲೇ ಬಂದು ಇಲ್ಲಿ ಸೆಟಲ್ ಆಗಿದ್ದಾರೆ" ಎಂದು ತಿಳಿಸಿದರು.
“ಅವರಿಗೆಲ್ಲ ರೇಷನ್ ಕಾರ್ಡು, ವೋಟರ್ ಐಡಿ ಹೇಗೆ ಸಿಕ್ಕಿತು?" ಎಂದು ಕೇಳಿದ್ದಕ್ಕೆ, “ಇಲ್ಲಿ ದುಡ್ಡು ಕೊಟ್ಟರೆ ಎಲ್ಲವೂ ಆಗುತ್ತದೆ" ಎಂದು ನಕ್ಕರು.