ಗ್ರೌಂಡ್ ರಿಪೋರ್ಟ್
ವಿಶ್ವವಾಣಿ ಬಂಗಾಳ ಚುನಾವಣಾ ಯಾತ್ರೆ
ಪಾನಿಹಟಿ (ಪ.ಬಂಗಾಳ): 2024ರ ಆಗ ತಿಂಗಳು. ಕೋಲ್ಕತ್ತಾದ ಆರ್.ಜಿ. ಕರ್ ಸರಕಾರಿ ಆಸ್ಪತ್ರೆಯ ಟ್ರೈನಿ ಮೆಡಿಕಲ್ ವಿದ್ಯಾರ್ಥಿನಿಯ ಅತ್ಯಾಚಾರ ಮತ್ತು ಬರ್ಬರ ಹತ್ಯೆ ಘಟನೆ ಇಡೀ ರಾಜ್ಯವನ್ನು ಬಡಿದೆಬ್ಬಿಸಿತ್ತು. ರಾಜ್ಯ ಸರಕಾರದ ನಿಷ್ಕ್ರಿಯತೆಗೆ ಮತ್ತು ಸಂತ್ರಸ್ತೆಯ ಕುಟುಂಬಕ್ಕೆ ನ್ಯಾಯ ಒದಗಿಸುವಲ್ಲಿ ಸರಕಾರ ವಿಫಲವಾಗಿದೆ ಎಂದು ಜನರು ಜಾತಿ-ಧರ್ಮ ನೋಡದೆ ಬೀದಿಗಿಳಿದಿದ್ದರು.
ಸಿಎಂ ಮಮತಾ ಬ್ಯಾನರ್ಜಿ ತಮ್ಮ 15 ವರ್ಷಗಳ ಅಧಿಕಾರಾವಧಿಯಲ್ಲಿ ಎದುರಿಸಿದ್ದ ಅತ್ಯಂತ ಸವಾಲಿನ ಘಟನೆ ಇದಾಗಿತ್ತು. ರಾಜ್ಯದಲ್ಲಿ ಮಹಿಳೆಯರು ಸುರಕ್ಷಿತರಾಗಿಲ್ಲ ಎಂಬ ಬಿಜೆಪಿ, ಎಡಪಕ್ಷ ಗಳ ಆರೋಪಕ್ಕೂ ವೇಗ ಸಿಕ್ಕಿತ್ತು. ಪ್ರಕರಣದಲ್ಲಿ ರಾಜ್ಯ ಪೊಲೀಸರ ವೈಫಲ್ಯದಿಂದಾಗಿ ಕಲ್ಕತ್ತಾ ಹೈಕೋರ್ಟ್ ಮಧ್ಯಪ್ರವೇಶಿಸಿ ಕೇಸ್ ಅನ್ನು ಸಿಬಿಐಗೆ ವರ್ಗಾವಣೆ ಮಾಡಿತ್ತು.
ಸುಪ್ರೀಂಕೋರ್ಟ್ ಕೂಡ ‘ರಾಜ್ಯ ಸರಕಾರ ಬೇಜವಾಬ್ದಾರಿಯಂತೆ ವರ್ತಿಸಿದೆ’ ಎಂದು ಆಕ್ರೋಶ ಹೊರ ಹಾಕಿತ್ತು. 2025ರಲ್ಲಿ, ಆರೋಪಿ ಸಂಜಯ್ ರಾಯ್ ಅಪರಾಧಿ ಎಂದು ಸಾಬೀತಾಗಿ ಜೀವಾ ವಧಿ ಶಿಕ್ಷೆಗೆ ಗುರಿಯಾದ. ಮರಣದಂಡನೆ ಶಿಕ್ಷೆಗೆ ಆಗ್ರಹಿಸಿದ ವೈದ್ಯೆ ವಿದ್ಯಾರ್ಥಿನಿ ಅಭಯಾಳ ಕುಟುಂಬ, ಆಕೆಯ ನೆನಪಿನ ದಿನ ದೂಡುತ್ತಿದೆ.
ಇದನ್ನೂ ಓದಿ: West Bengal Election ground report by Raghav Sharma Nidle: ಬಾಂಕ್ರಾದಲ್ಲಿದ್ದ ಬಾಂಗ್ಲಾದೇಶಿಯರು ಓಡಿಹೋಗಿದ್ದೇಕೆ?
ಮಗಳು ವೈದ್ಯೆಯಾಗಿ ಜನರ ಕಷ್ಟಕ್ಕೆ ಸ್ಪಂದಿಸುತ್ತಾಳೆ, ಜನಮನ ಗೆಲ್ಲುತ್ತಾಳೆ ಎಂದು ಏನೇನೋ ಕನಸು ಕಂಡಿದ್ದ ತಾಯಿಗೆ ಜೀವನವೇ ಶೂನ್ಯ ಎಂದನಿಸಿತ್ತು. ಸರಕಾರದ ನಿಷ್ಕ್ರಿಯತೆ ವಿರುದ್ಧ ಸೆಟೆದು ನಿಂತು, ಬಹಿರಂಗವಾಗಿ ಮಮತಾ ಬ್ಯಾನರ್ಜಿ ವಿರುದ್ಧ ಕೆಂಡಕಾರಿದರು. ಪಾಣಿಹಟಿಯ ಇತರೆ ಸಾಮಾನ್ಯರಂತೆ ಪತಿಯ ಟೈಲರಿಂಗ್ ಸಂಪಾದನೆಯಿಂದ ಕುಟುಂಬ ನಿರ್ವಹಿಸುತ್ತಿದ್ದ ರತ್ನ ದೇಬ್ನಾಥ್ ಎಂದಿಗೂ ರಾಜಕೀಯದ ಬಗ್ಗೆ ಆಸಕ್ತಿ ತೋರಿದವರಲ್ಲ, ಅಧಿಕಾರದ ಕನಸು ಕಂಡವ ರಲ್ಲ. ಆದರೆ ಮಗಳನ್ನು ಕಳೆದುಕೊಂಡ ತಾಯಿಗೆ, ವ್ಯವಸ್ಥೆ ಮೇಲಿದ್ದ ಆಕ್ರೋಶ ರಾಜಕೀಯದ ಹಾದಿ ತುಳಿಯುವಂತೆ ಮಾಡಿತು.
“ವ್ಯವಸ್ಥೆಯ ಭಾಗವಾಗದೇ ಇದ್ದರೆ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯ ಇಲ್ಲ. ಹೀಗಾಗಿ, ರಾಜ್ಯದ ಮಹಿಳೆಯರ ನೋವಿಗೆ ದನಿಯಾಗುವ ಸಲುವಾಗಿ, ನಿಮ್ಮೆಲ್ಲರ ಮಗಳಾಗಿ ಸೇವೆ ಮಾಡು ತ್ತೇನೆ" ಎಂದು ರಾಜ್ಯ ವಿಧಾನಸಭೆ ಚುನಾವಣೆ ಕಣಕ್ಕೆ ಇಳಿದಿದ್ದಾರೆ.
ರತ್ನ ದೇಬ್ನಾಥ್ ಈಗ ಪಾನಿಹಟಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ. 2011ರಿಂದ ಸತತ 3 ಬಾರಿ ಗೆದ್ದ ನಿರ್ಮಲ್ ಘೋಷ್ ಬದಲಿಗೆ ಅವರ ಪುತ್ರ ತೀರ್ಥಂಕರ್ ಘೋಷ್‌ಗೆ ಟಿಎಂಸಿ ಟಿಕೆಟ್ ನೀಡಿದೆ. “ಅಭಯಾ ಅತ್ಯಾಚಾರ ಘಟನೆ ವೇಳೆ ನಾವು ಕುಟುಂಬದೊಂದಿಗೆ ಇದ್ದು, ಹೋರಾಟ ನಡೆಸಿದೆವು. ಆದರೆ, ರತ್ನ ದೇಬ್ನಾಥ್ ಬಿಜೆಪಿಯನ್ನು ಆಯ್ಕೆ ಮಾಡಿಕೊಂಡರು" ಎಂದು ಎಡ ಪಕ್ಷಗಳ ನಾಯಕ ರಿಗೆ ಬೇಸರವಿದೆ.
ಬಂಗಾಳದಲ್ಲಿ ಪ್ರಸ್ತುತತೆ ಕಳೆದುಕೊಂಡಿರುವ ಸಿಪಿಐನಿಂದ ಸ್ಪರ್ಧಿಸಿದರೆ, ವ್ಯವಸ್ಥೆಯ ಭಾಗ ಆಗಲು ಸಾಧ್ಯ ಇಲ್ಲ ಎಂದು ರತ್ನ ದೇಬ್ನಾಥ್ ಬಿಜೆಪಿ ಸೇರ್ಪಡೆಯಾದರು ಮತ್ತು ಸಿಎಂ ಮಮತಾ ಬ್ಯಾನರ್ಜಿ ಯಿಂದ ರಾಜ್ಯಕ್ಕೆ ಮುಕ್ತಿ ಬೇಕು ಎಂದು ಪ್ರಚಾರ ಮಾಡುತ್ತಿದ್ದಾರೆ.
ನಾನು ಪಾನಿಹಟಿಯ ನಾಟಗರ್ ಪ್ರದೇಶದಲ್ಲಿರುವ ಅಭಯಾ ಮನೆ ಮುಂದೆ ನಿಂತಿದ್ದೆ. ಅಭಯಾಳ ನೈಜ ಹೆಸರನ್ನು ಮನೆಯ ಮುಂದೆ ಬರೆಯಲಾಗಿತ್ತು. ಒಂದಿಷ್ಟು ಮಹಿಳೆಯರು ಶಾಲೆಯಿಂದ ತಮ್ಮ ಮಕ್ಕಳ ಬರುವಿಕೆಗಾಗಿ ಕಾಯುತ್ತಿದ್ದರು. ಅಭಯಾ ಅತ್ಯಾಚಾರ, ಚುನಾವಣೆ ಹೋರಾಟದ ಬಗ್ಗೆ ಮಾತನಾಡಲು ಯತ್ನಿಸಿದರೂ, “ಒಳ್ಳೆ ಕೆಲಸ ಮಾಡಿದವರು ಚುನಾವಣೆ ಗೆಲ್ಲುತ್ತಾರೆ" ಎಂದಷ್ಟೇ ಹೇಳಿ, ರಾಜಕೀಯ ಒಲವು-ನಿಲುವುಗಳ ಬಗ್ಗೆ ಅವರು ಉತ್ತರ ನೀಡಲು ಹಿಂಜರಿದರು.
ಶುಕ್ರವಾರದಂದು ಪ್ರಧಾನಿ ನರೇಂದ್ರ ಮೋದಿ ಕೂಡ ಪಾನಿಹಟಿಯಲ್ಲಿದ್ದರು ಮತ್ತು ವಿಶಾಲ ಜನ ಸಭೆ ಉದ್ದೇಶಿಸಿ ಮಾತನಾಡುತ್ತಾ, “ಬಂಗಾಳದ ಮಗಳನ್ನು (ಅಭಯಾ) ಮಮತಾ ದೀದಿ ಕಿತ್ತು ಕೊಂಡರು" ಎಂದು ಟಿಂಎಂಸಿ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದರು. ಅದೇ ಸಂದರ್ಭದಲ್ಲಿ ನಾನು ಪಾನಿಹಟಿಯ ಎಚ್.ಬಿ. ಟೌನ್‌ನಲ್ಲಿದ್ದ ಆಶಿಮ್ ದಾಸ್, ಸುಶಾಂತ್ ಕರ್ಮಾಕರ್, ರಂಜಿತ್ ಕರ್ಮಾಕರ್ ಜತೆ ಮಾತನಾಡುತ್ತಿದ್ದೆ.
"ರತ್ನ ದೇಬ್ನಾಥ್ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಬೇಕಿತ್ತು. ಆದರೆ, ಬಿಜೆಪಿಗೆ ಸೇರ್ಪಡೆ ಯಾದ್ದರಿಂದ ಅಭಯಾ ಹೋರಾಟ ರಾಜಕೀಕರಣಗೊಂಡಿದೆ. ಅಭಯಾ ಹೆಸರನ್ನು ಬಿಜೆಪಿ ತನ್ನ ಲಾಭಕ್ಕೆ ಬಳಸಿಕೊಳ್ಳುತ್ತಿದೆ. ಹೋರಾಟದ ಸಂದರ್ಭದಲ್ಲಿ ಎಲ್ಲಾ ಪಕ್ಷಗಳು, ಜನರು ಅವರೊಂದಿಗೆ ಇದ್ದರು. ಆದರೆ, ಈಗ ಬಿಜೆಪಿಯವರು ಮಾತ್ರ.
ಹಾಗಿದ್ದರೂ, ಕುಟುಂಬಕ್ಕೆ ನಮ್ಮ ನೈತಿಕ ಬೆಂಬಲ ಇರಲಿದೆ, ರಾಜಕೀಯವಾಗಿ ಅಲ್ಲ" ಎಂದು ಮೂವರೂ ಹೇಳಿದರು. “ರಾಜ್ಯದಲ್ಲಿ ಆಡಳಿತದ ಪರಿವರ್ತನೆ ಆಗಬೇಕು ಎಂಬ ಅಶಯವಿದ್ದರೂ, ಧರ್ಮ ರಾಜಕಾರಣ ಮಾಡುವ ಬಿಜೆಪಿಯನ್ನು ಒಪ್ಪಲು ಕಷ್ಟವಾಗುತ್ತದೆ. ಬಾಂಗ್ಲಾದೇಶಿಯರು, ರೋಹಿಂಗ್ಯಾಗಳು ಇಲ್ಲಿದ್ದಾರೆ ಎನ್ನುತ್ತಾರಲ್ಲ... ಅವರ ಬಗ್ಗೆ ಚುನಾವಣೆ ಆಯೋಗ ಡೇಟಾಗಳನ್ನು ಏಕೆ ನೀಡುತ್ತಿಲ್ಲ?" ಎಂದು ಪ್ರಶ್ನಿಸಿದರು ಆಶಿಮ್ ದಾಸ್.
ಈ ಮೂವರು ಅಲ್ಲಿಂದ ತೆರಳಿದ ಮೇಲೆ ನನ್ನೊಂದಿಗೆ ಮಾತನಾಡಿದ ಟೀ ಅಂಗಡಿ ಮಾಲಕಿ ಚಂದನ ದತ್ತೋರಾಯ, “15 ವರ್ಷದ ನಂತರ ಪರಿವರ್ತನೆ ಆಗಬೇಕು. ನಮಗೆ ಮೋದಿ ಆಡಳಿತ ಬೇಕು. ರಕ್ಷಣೆ, ನೌಕರಿ ಬೇಕು" ಎಂದು ಮೆಲುದನಿಯಲ್ಲಿ ಮನದಾಳ ಹೊರ ಹಾಕಿದರು. ಪಾನಿ ಹಟಿಯ ಮೊರ್‌ಹಾಟ್ ಪ್ರದೇಶದ ಸಕೀಮಾ ಬೀಬಿ, ರೋಮಿತಾ ಬಿಸ್ವಾಸ್ ಮತ್ತು ದುಲಾರಿ ಸರೋಜ್ “ಈ ಬಾರಿ ಬದಲಾವಣೆ ಆಗಲೇಬೇಕು" ಎನ್ನುತ್ತಾ, “ಮನೆ ಮಕ್ಕಳಿಗೆ ಸೂಕ್ತ ನೌಕರಿ ಸಿಗದೆ, ಸಣ್ಣಪುಟ್ಟ ಕೆಲಸ ಮಾಡಿಕೊಂಡು ಕೂಲಿಗಳಂತೆ ಬದುಕುತ್ತಿದ್ದಾರೆ.
ಒಳ್ಳೆ ಸಂಬಳ ಬೇಕು ಎಂದರೆ ಬೇರೆ ರಾಜ್ಯಕ್ಕೆ ಹೋಗಬೇಕು. ‘ಲಕ್ಷ್ಮಿ ಭಂಡಾರ್’ ಹಣದಿಂದ ಜೀವನ ನಡೆಯುತ್ತದಾ? ಒಂದು ಸಿಲಿಂಡರ್ ಖರೀದಿಯಲ್ಲಿ ಹಣ ಖಾಲಿಯಾಗಿ ಬಿಡುತ್ತದೆ. ನೌಕರಿ ಕೊಡಿಸಲು ಮಮತಾ ದೀದಿ ಏನು ಮಾಡಿದ್ದಾರೆ?" ಎಂದು ಕಿಡಿಕಾರಿದರು.
“ರಾಜ್ಯದಲ್ಲಿ ಸುರಕ್ಷತೆ ಇದ್ದಿದ್ದರೆ ಆರ್.ಜಿ.ಕರ್ ಆಸ್ಪತ್ರೆಯಲ್ಲಿ ನಮ್ಮೂರಿನ ಬೇಟಿಗೆ ಈ ದುರ್ಗತಿ ಬರುತ್ತಿತ್ತಾ?" ಎಂದು ಪ್ರಶ್ನಿಸಿದರು. “ಪಾಣಿಹಟಿಯಲ್ಲಿ ರತ್ನ ದೇಬ್ನಾಥ್‌ರನ್ನೇ ಜನ ಬೆಂಬಲಿಸಬೇಕು, ರಾಜ್ಯದಲ್ಲೂ ಪರಿವರ್ತನೆ ಆಗಬೇಕು" ಎನ್ನುವುದು ಪಾನಿಹಟಿಯ ಬಟ್ಟೆ ಅಂಗಡಿಯೊಂದರ ಸಿಬ್ಬಂದಿ ಸುಭಾಷ್ ಸಿಂಗ್ ಅನಿಸಿಕೆ. ಆದರೆ, ದೇಶದಲ್ಲಿ ‘ನೋಟಾ’ ಜಾರಿಯಾದ ನಂತರದಿಂದ ಆತ ‘ನೋಟಾ’ವನ್ನೇ ಆಯ್ಕೆ ಮಾಡುತ್ತಿದ್ದಾನಂತೆ.
ಯಾವ ಅಭ್ಯರ್ಥಿಗೂ ನಮ್ಮ ಕಷ್ಟ ಅರ್ಥ ಆಗುವುದಿಲ್ಲ ಎನ್ನುವ ಸುಭಾಷ್, “ರಾಜಕಾರಣಿಗಳ ಹಿಂದೆ-ಮುಂದೆ ಇದ್ದವರಿಗಷ್ಟೇ ಬೆಲೆ. ಬಡವರ ನೋವನ್ನು ಯಾರು ಕೇಳುತ್ತಾರೆ? ನನ್ನ ಮಗ ದುಡ್ಡು ಮಾಡಬೇಕು ಎಂದರೆ ಅವನನ್ನು ರಾಜಕಾರಣಿ ಜತೆ ಸೇರಿಸಬೇಕಷ್ಟೇ. ಇಲ್ಲಿ ಇದ್ದ ಸರಕಾರಿ ಶಾಲೆಯನ್ನು ನಡೆಸಲಾಗದೆ ಮುಚ್ಚಿದರು. ನಾನು ಮಗನನ್ನು ಈಗ ಖಾಸಗಿ ಶಾಲೆಗೆ ಹಾಕಿದ್ದೇನೆ. ತಿಂಗಳಿಗೆ 10 ಸಾವಿರ ಸಂಬಳದಲ್ಲಿ ಜೀವನ ನಡೆಯುತ್ತದೆಯೇ? ಟಿಎಂಸಿ, ಬಿಜೆಪಿ ಯಾರ ಬಗ್ಗೆಯೂ ನನಗೆ ಭರವಸೆ ಉಳಿದುಕೊಂಡಿಲ್ಲ.
ಅಭಯಾ ತಾಯಿ ಗೆಲ್ಲಲಿ. ರಾಜಕಾರಣದಿಂದ ಅವರಿಗೆ ಒಳ್ಳೆಯದಾಗಲಿ" ಎಂದು ಹಾರೈಸಿದ. “ನೀವು ಬೆಂಗಳೂರಿನಿಂದ ಅಷ್ಟು ಹಣ ಖರ್ಚು ಮಾಡಿಕೊಂಡು ಇಲ್ಲಿಗೆ ಬಂದಿದ್ದೀರಲ್ಲ. ನಿಮ್ಮಿಂದಲೂ ಈ ಸಮಾಜ ಬದಲಾಯಿಸಲು ಸಾಧ್ಯವಿಲ್ಲ" ಎಂದು ನನಗೂ ಹೇಳಿದ. “ಆಯ್ತು, ಇಷ್ಟು ಹೊತ್ತು ಮಾತಾಡಿದ್ದಕ್ಕೆ ಶುಕ್ರಿಯಾ ಭಾಯ್ ಸಾಬ್" ಎನ್ನುತ್ತಾ ನಾನು ಮುಂದೆ ಸಾಗಿದೆ.
ರತ್ನಾ ದೇಬ್ನಾಥ್‌ರನ್ನು ಅಭಯಾ ಕೇಸಿನ ಕಾರಣಕ್ಕಾಗಿ ಇಲ್ಲಿ ಎಲ್ಲರೂ ಬಲ್ಲರು. ಅವರು ಮನೆ ಮುಂದೆ ನಿಂತು ಮತ ಯಾಚಿಸುವಾಗ ತಮ್ಮ ಮನೆ ಮಗಳು ಎಂದು ಮಹಿಳೆಯರು ತಬ್ಬಿಕೊಂಡು ಕಣ್ಣೀರು ಹಾಕುವ ದೃಶ್ಯ ನಿತ್ಯವೂ ಕಾಣುತ್ತಿದೆ. ಕರುಳ ಕುಡಿ ಕಳೆದುಕೊಂಡ ನೋವು ಆ ತಾಯಿ ಯಂದಿರಿಗಿಂತ ಚೆನ್ನಾಗಿ ಬೇರೆ ಯಾರಿಗೆ ತಾನೇ ಅರ್ಥವಾದೀತು? ಆದರೆ, ಮಗಳ ಸಾವಿಗೆ ನ್ಯಾಯ ಬೇಕು ಎಂದು ಕೇಳಿದ ಹೋರಾಟವೇ ಬೇರೆ, ಚುನಾವಣಾ ರಾಜಕೀಯವೇ ಬೇರೆ.
ರಾಜಕೀಯಕ್ಕಿಳಿದು ಹೋರಾಡಿದರೆ ಮಗಳ ಆತ್ಮಕ್ಕೆ ಶಾಂತಿ ಸಿಕ್ಕೀತು ಎಂದು ಕೇಸರಿ ಶಾಲು ಧರಿಸಿರುವ ರತ್ನ ದೇಬ್ನಾಥ್‌ರನ್ನು ಪಾಣಿಹಟಿ ಮತದಾರ ಅಪ್ಪಿಕೊಳ್ಳುವನೇ..?
ಆರ್.ಜಿ.ಕರ್. ಆಸ್ಪತ್ರೆಯಲ್ಲಿ ಓಡಾಡುತ್ತಾ...
ಆರ್.ಜಿ. ಕರ್ ಆಸ್ಪತ್ರೆಗೆ ‘ವಿಶ್ವವಾಣಿ’ ಭೇಟಿ ನೀಡಿದಾಗ ಆಸ್ಪತ್ರೆ ಆವರಣ ರೋಗಿಗಳ ಕುಟುಂಬಸ್ಥ ರಿಂದ ಗಿಜಿಗುಡುತ್ತಿತ್ತು. ಒಂದೊಂದು ಕುಟುಂಬದ್ದೂ ಒಂದೊಂದು ಗೋಳಿನ ಕಥೆ. ವಾಹನ ಓಡಾಟಕ್ಕೂ ಜಾಗವಿಲ್ಲ ಎಂಬಂತೆ ಅಲ್ಲಿ ಜನ ತುಂಬಿದ್ದರು. ರಸ್ತೆ, ಓಣಿಗಳಲ್ಲಿ ಹಾಸು ಗೋಣಿ ಹಾಕಿದ ಮಂದಿ ಅಲ್ಲೇ 10-20 ದಿನ, ತಿಂಗಳಿಂದ ವಾಸ್ತವ್ಯ ಹೂಡಿದ್ದರು. ಆಸ್ಪತ್ರೆಗೆ ಬರುವ ಬಹು ತೇಕ ಮಂದಿ ಬಡವರು, ಆರ್ಥಿಕ ಸಂಕಷ್ಟದಲ್ಲಿರುವವರು. ಉತ್ತಮ ಚಿಕಿತ್ಸೆ ಸಿಗುತ್ತದೆ ಎಂದು ಕೆಲ ಮಧ್ಯಮ ವರ್ಗದವರೂ ಇದ್ದುದನ್ನು ನಾನು ನೋಡಿದೆ. ಆದರೆ, ಸುತ್ತಮುತ್ತ ಲವಲೇಶವೂ ಸ್ವಚ್ಛತೆ ಇರಲಿಲ್ಲ.
ಚರಂಡಿ ನೀರು ಹರಿಯುತ್ತಿದ್ದ ಪಕ್ಕದ ಬಟ್ಟೆಗಳನ್ನು ಹಾಸಿ ಜನ ಕೂತಿದ್ದರು. ಹೂಗ್ಲಿ ಜಿಲ್ಲೆಯ ಚಂಡಿತಾಲದಿಂದ ಬಂದಿದ್ದ ಅಬ್ದುಲ್ ಹುಸೇನ್ ಮಲಿಕ್ ಎಂಬಾತನ ಪತ್ನಿಯ ತೊಡೆ ಸ್ನಾಯು ಸೆಳೆತ ವಿಪರೀತ ಮಟ್ಟಕ್ಕೆ ಹೋಗಿ, ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾಳೆ.
ಕಳೆದ 12 ದಿನದಿಂದ ಆಸ್ಪತ್ರೆಯ ಹೊರಭಾಗದಲ್ಲಿ, ಆ ಬಿರುಬಿಸಿಲಿನ ಪತ್ನಿಗಾಗಿ ಕಾದು ಕುಳಿತಿದ್ದಾನೆ ಪತಿ. “ಹೋಟೆಲ್‌ಗೆ ಹೋಗಬಹುದಲ್ಲ?" ಎಂದು ಕೇಳಿದ್ದಕ್ಕೆ, “ಅಷ್ಟೊಂದು ದುಡ್ಡು ಎಲ್ಲಿದೆ ಸರ್.." ಎಂಬ ಉತ್ತರ ಬಂತು. ರಾಜ್ಯದಲ್ಲಿ ಪರಿವರ್ತನೆ ಬೇಕು ಎಂದು ಹೇಳಿದರೂ, ಟಿಎಂಸಿ ಹೊರತಾಗಿ ಆತನಲ್ಲಿ ಬೇರೆ ಆಯ್ಕೆಗಳಿರಲಿಲ್ಲ. ಆತನ ಪಕ್ಕದ ಉತ್ತರ ಪರಗಣ ಜಿಲ್ಲೆಯ ರಿಂಕಿ ಬೊಯಿತೊ ಎಂಬ ಮಧ್ಯ ವಯಸ್ಸಿನ ಮಹಿಳೆ ಇದ್ದಳು.
“ಪತಿಗೆ ಮಿದುಳಿನ ಸ್ಟ್ರೋಕ್ ಆಗಿರುವುದರಿಂದ ಹೇಗೇಗೋ ವರ್ತಿಸುತ್ತಿದ್ದಾರೆ. ಚಿಕಿತ್ಸೆ ನಡೆಯುತ್ತಿದೆ. ಇನ್ನೂ ಸ್ಪಷ್ಟ ಚಿತ್ರಣ ಸಿಕ್ಕಿಲ್ಲ" ಎಂದಳು. “ನಿಮ್ಮಲ್ಲಿ 29ಕ್ಕೆ ಚುನಾವಣೆ ಇದೆ. ಏನು ಮನಸ್ಸು ಮಾಡಿದ್ದೀರಿ?" ಎಂದು ಕೇಳಿದೆ. “ನಮಗೆ ದೀದಿಯೇ ಸೂಕ್ತ. ಸರಕಾರದ ‘ಲಕ್ಷ್ಮಿ ಭಂಡಾರ್’ ಯೋಜನೆಯ ಮಾಸಿಕ 1500 ರು. ಹಣದಿಂದ ತುಂಬಾ ನೆರವಾಗಿದೆ.
ನಮ್ಮ ಕಷ್ಟ ದೀದಿಗೆ ಅರ್ಥವಾಗುತ್ತದೆ" ಎಂದು ಮೆಚ್ಚುಗೆ ವ್ಯಕ್ತಪಡಿಸಿದಳು. “2024ರಲ್ಲಿ ಇಂದು ಅತ್ಯಾಚಾರ ಘಟನೆ ನಡೆದಿತ್ತು, ಗೊತ್ತಿದೆಯೇ?" ಎಂಬ ಪ್ರಶ್ನೆಗೆ, “ಅದು ದುರದೃಷ್ಟಕರ. ಇಲ್ಲಿ ಮಾತ್ರ ವಲ್ಲ, ದೇಶದೆಡೆ ದೌರ್ಜನ್ಯಗಳಾಗುತ್ತಲೇ ಇರುತ್ತವೆ. ಇದನ್ನು ಹೇಗೆ ನಿಯಂತ್ರಿಸುವುದು ನೀವೇ ಹೇಳಿ?" ಎಂದು ನನ್ನನ್ನೇ ಪ್ರಶ್ನಿಸಿದಳು.
ಹೌರಾದ ಸಿರಾಂಪುರ್‌ನಿಂದ ಬಂದಿದ್ದ ಸಾಜೋಲ್ ಚಕ್ರವರ್ತಿ ಎಂಬಾತನ ಜತೆ ಮಾತನಾಡಿದಾಗ, “ಪತ್ನಿಯು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ" ಎಂದ.
“ಹಾಗಾದರೆ ನಿಮ್ಮ ಮನೆಗೆ ಲಕ್ಷ್ಮಿ ಭಂಡಾರ್ ಬಂತು" ಎಂದು ಕಿಚಾಯಿಸಿದೆ. ಅವನೂ ಜೋರಾಗಿ ನಕ್ಕು “1500 ರು.ನಿಂದ ನೌಕರಿ ಸಿಗುವುದೇ? ಯುವಕರಿಗೆ ಉದ್ಯೋಗಗಳಿಲ್ಲ. ಜನರ ಜೀವನ ಸುಧಾರಿ ಸುತ್ತಿಲ್ಲ" ಎಂದರೂ, ಬಿಜೆಪಿಯನ್ನು ಆಯ್ಕೆ ಮಾಡುವ ಬಗ್ಗೆ ಆತನಲ್ಲಿ ಗೊಂದಲಗಳಿದ್ದವು. “ಯಾರು ಗೆದ್ದರೂ ನಮ್ಮಂಥರಿಗೆ ಏನು ಲಾಭ, 29ರಂದೇ ತೀರ್ಮಾನಿಸುವೆ" ಎಂದು ತಿಳಿಸಿದ.
ಬೆಂಕಿ ಬಿಸಿಲಿನ ಮಧ್ಯೆ, ಕಸಕಡ್ಡಿಗಳಿಂದ ತುಂಬಿದ್ದ, ಕೂರಲೂ ಸರಿಯಾಗಿ ವಿಶಾಲ ಕೋಣೆಗಳಿಲ್ಲದ ಆಸ್ಪತ್ರೆಯ ಆವರಣದಲ್ಲಿ ಗಾಳಿ ಬೀಸಿಕೊಳ್ಳುತ್ತಿದ್ದ ಜನರು ಇಲ್ಲಿನ ಶೋಚನೀಯ ಸ್ಥಿತಿಗೆ ಕನ್ನಡಿ ಯಾಗಿದ್ದರು. “ನಗರಗಳಲ್ಲಿರುವ ಬಹುತೇಕ ಸರಕಾರಿ ಆಸ್ಪತ್ರೆಗಳ ಪರಿಸ್ಥಿತಿ ಹೀಗೇ ಇದ್ದರೂ, ಜನರಿಗೆ ಉಚಿತ ಗ್ಯಾರಂಟಿಗಳನ್ನು ಘೋಷಿಸುವ ಸರಕಾರಗಳು, ಆಸ್ಪತ್ರೆಗಳಲ್ಲಿ ಜನರು ಕನಿಷ್ಠಮಟ್ಟದ ಘನತೆಯಿಂದ ಇರಲು ವ್ಯವಸ್ಥೆ ಮಾಡುವುದಿಲ್ಲ.
ಭೀಕರ ಅತ್ಯಾಚಾರ ಘಟನೆ ನಡೆದ ನಂತರವೂ ಈ ಆಸ್ಪತ್ರೆ ಸುಧಾರಿಸುವ ಯತ್ನ ನಡೆದಿಲ್ಲ" ಎನ್ನುತ್ತಾ ಸಿಡಿಮಿಡಿಗೊಂಡ ಕಾರು ಚಾಲಕ ಸೋಮನಾಥ್, ಆಸ್ಪತ್ರೆಯ ಎಕ್ಸಿಟ್ ಗೇಟ್ ಬಳಿ ಕಾರು ತಿರುಗಿಸಿದ.