ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

West Bengal Election ground report by Raghav Sharma Nidle: ಬಾಂಕ್ರಾದಲ್ಲಿದ್ದ ಬಾಂಗ್ಲಾದೇಶಿಯರು ಓಡಿಹೋಗಿದ್ದೇಕೆ?

ಪಶ್ಚಿಮ ಬಂಗಾಳದಲ್ಲಿ ಉತ್ತರ 24 ಪರಗಣದ ‘ದಂ-ದಂ ಉತ್ತರ’ ವಿಧಾನಸಭೆ ಕ್ಷೇತ್ರದಲ್ಲಿ ಬಾಂಕ್ರಾ ಎಂಬ ಪ್ರದೇಶವಿದೆ. ಕೋಲ್ಕತ್ತಾದ ದಂ-ದಂ ವಿಮಾನ ನಿಲ್ದಾಣಕ್ಕೆ ಸನಿಹದ ಈ ಪ್ರದೇಶವಿದ್ದು, ಮುಸ್ಲಿಂ ಜನಸಂಖ್ಯೆ ಈ ಭಾಗದಲ್ಲಿ ಹೆಚ್ಚಿದೆ. ಕೇಂದ್ರ ಚುನಾವಣಾ ಆಯೋಗವು ಬಂಗಾಳದಲ್ಲಿ ವಿಶೇಷ ಮತಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ಆರಂಭಿಸಿ, ರಾಜ್ಯಾದ್ಯಂತ ದಾಖಲೆಗಳ ಪರಿಶೀಲನೆ ಶುರುವಾಗುತ್ತಿದ್ದಂತೆಯೇ ಬಾಂಕ್ರಾದ ಕಾಲೊನಿಗಳಲ್ಲಿದ್ದ ಬಾಂಗ್ಲಾದೇಶಿ ನಿವಾಸಿಗಳು ರಾತ್ರೋರಾತ್ರಿ ಜಾಗ ಖಾಲಿ ಮಾಡಿದ್ದರು.

ಬಾಂಕ್ರಾದಲ್ಲಿದ್ದ ಬಾಂಗ್ಲಾದೇಶಿಯರು ಓಡಿಹೋಗಿದ್ದೇಕೆ?

-

ಗ್ರೌಂಡ್‌ ರಿಪೋರ್ಟ್‌

ವಿಶ್ವವಾಣಿ ಬಂಗಾಳ ಚುನಾವಣಾ ಯಾತ್ರೆ

ದಂ ದಂ, 24 ಉತ್ತರ ಪರಗಣ ಜಿಲ್ಲೆ: ಪಶ್ಚಿಮ ಬಂಗಾಳದಲ್ಲಿ ಉತ್ತರ 24 ಪರಗಣದ ‘ದಂ-ದಂ ಉತ್ತರ’ ವಿಧಾನಸಭೆ ಕ್ಷೇತ್ರದಲ್ಲಿ ಬಾಂಕ್ರಾ ಎಂಬ ಪ್ರದೇಶವಿದೆ. ಕೋಲ್ಕತ್ತಾದ ದಂ-ದಂ ವಿಮಾನ ನಿಲ್ದಾಣಕ್ಕೆ ಸನಿಹದ ಈ ಪ್ರದೇಶವಿದ್ದು, ಮುಸ್ಲಿಂ ಜನಸಂಖ್ಯೆ ಈ ಭಾಗದಲ್ಲಿ ಹೆಚ್ಚಿದೆ. ಕೇಂದ್ರ ಚುನಾವಣಾ ಆಯೋಗವು ಬಂಗಾಳದಲ್ಲಿ ವಿಶೇಷ ಮತಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ಆರಂಭಿಸಿ, ರಾಜ್ಯಾದ್ಯಂತ ದಾಖಲೆಗಳ ಪರಿಶೀಲನೆ ಶುರುವಾಗುತ್ತಿದ್ದಂತೆಯೇ ಬಾಂಕ್ರಾದ ಕಾಲೊನಿಗಳಲ್ಲಿದ್ದ ಬಾಂಗ್ಲಾದೇಶಿ ನಿವಾಸಿಗಳು ರಾತ್ರೋರಾತ್ರಿ ಜಾಗ ಖಾಲಿ ಮಾಡಿದ್ದರು.

ಇದು ಸ್ಥಳೀಯ ಮಟ್ಟದಲ್ಲಿ ಭಾರಿ ಸುದ್ದಿಯಾಗಿತ್ತು. ದಂ-ದಂ ವಿಧಾನಸಭೆ ಕ್ಷೇತ್ರದ ಮತದಾರ ರೊಬ್ಬರು ಈ ಕುರಿತು ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ನಾನು ಬಾಂಕ್ರಾಗೆ ಭೇಟಿ ನೀಡಿದೆ. ಟಿಎಂಸಿ ಬಾವುಟಗಳಿಂದಲೇ ರಾರಾಜಿಸುತ್ತಿದ್ದ ಬಾಂಕ್ರಾದಲ್ಲಿ ಹಿಂದೂಗಳು ಕಡಿಮೆ ಸಂಖ್ಯೆಯಲ್ಲಿದ್ದು, ಮುಸ್ಲಿಂ ಜನಸಂಖ್ಯೆ ಗಣನೀಯ ಪ್ರಮಾಣದಲ್ಲಿದೆ.

ಇಲ್ಲಿ ನೆಲೆಸಿದ್ದ ಬಾಂಗ್ಲಾದೇಶಿ ಮುಸ್ಲಿಮರಲ್ಲಿ ಭಾರತ ಸರಕಾರದ ದಾಖಲೆಗಳಿಲ್ಲದಿದ್ದರೂ, ತಮ್ಮ ಜಾಗಗಳಲ್ಲಿ ಆಸರೆ ನೀಡಿದ್ದ ಸ್ಥಳೀಯ ಮುಸ್ಲಿಮರ ಬಗ್ಗೆ ಹಿಂದೂಗಳಿಗೆ ಅಸಮಾಧಾನವಿದ್ದದ್ದು ಅವರ ಮಾತುಗಳ ವ್ಯಕ್ತವಾಯ್ತು. “ಚುನಾವಣಾ ಆಯೋಗ ಎಸ್‌ಐಆರ್ ಪ್ರಕ್ರಿಯೆ ಕೈಗೊಂಡಿದ್ದ ರಿಂದ ಸುಮಾರು 200 ಮಂದಿ ಬಾಂಗ್ಲಾದೇಶದವರು ಇಲ್ಲಿಂದ ಸುಮಾರು 100 ಕಿ.ಮೀ. ದೂರದಲ್ಲಿ ರುವ ಇಂಡೋ-ಬಾಂಗ್ಲಾದೇಶ ಸಂಪರ್ಕಿಸುವ ಬೊಂಗೈ ಪ್ರದೇಶದ ಪೆಟ್ರಾಪೋಲ್ ಬಾರ್ಡರ್ ಮೂಲಕ ಬಾಂಗ್ಲಾದೇಶಕ್ಕೆ ವಾಪಸಾಗಿದ್ದಾರೆ.

ಇದನ್ನೂ ಓದಿ: West Bengal Assembly Election: ಮತದಾನದ ವೇಳೆ ಟಿಎಂಸಿ, ಎಯುಜೆಪಿ ಪಕ್ಷದ ನಡುವೆ ಘರ್ಷಣೆ; ಲಾಠಿ ಚಾರ್ಜ್‌

ಟಿಎಂಸಿ ಮತ್ತೆ ಅಧಿಕಾರಕ್ಕೆ ಬಂದರೆ, ಆ ಬಾಂಗ್ಲಾದೇಶಿಗಳನ್ನು ಸ್ಥಳೀಯರು ಮತ್ತೆ ವಾಪಸು ಕರೆಸಿಕೊಳ್ಳುತ್ತಾರೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಬಾಂಗ್ಲಾದೇಶಿಗಳು ಬರುವುದು ಶಾಶ್ವತವಾಗಿ ನಿಲ್ಲಬಹುದೇನೋ.." ಎಂದು ಬಾಂಕ್ರಾ ನಿವಾಸಿ ರಮಾಕಾಂತ್ ಸಹಾನಿ ಅಭಿಪ್ರಾಯಪಟ್ಟರು.

ಬಾಂಗ್ಲಾದೇಶಿಗಳು ಮನೆಗಳನ್ನು ಕಟ್ಟಿಕೊಂಡಿದ್ದ ಕಾಲೊನಿಗೆ ತೆರಳಿ ಕೆಲ ಮುಸ್ಲಿಮರೊಂದಿಗೆ ಚುನಾವಣೆ ಕುರಿತು ಚರ್ಚೆ ಮಾಡಿದೆ. ಪೈಂಟಿಂಗ್ ವೃತ್ತಿಯಲ್ಲಿರುವ ಅಲ್ ಅಮೀನ್ ಎಂಬಾತ ‘ವಿಶ್ವವಾಣಿ’ ಜತೆ ಮಾತನಾಡುತ್ತಾ, ಟಿಎಂಸಿ ಬಿಟ್ಟು ಹೊಸ ‘ಆಮ್ ಜನತಾ ಉನ್ನಯನ್ ಪಾರ್ಟಿ’ ಸ್ಥಾಪಿಸಿರುವ ಹುಮಾಯೂನ್ ಕಬೀರ್ ಬಗ್ಗೆ ತೀವ್ರ ಅಸಮಾಧಾನ ಹೊರ ಹಾಕಿ, “ಬಿಜೆಪಿ ಜತೆ ಅಪವಿತ್ರ ಮೈತ್ರಿ ಮಾಡಿಕೊಂಡು, ಟಿಎಂಸಿಯನ್ನು ಸೋಲಿಸಲು ಅವರೊಂದಿಗೆ ಕೈಜೋಡಿಸಿದ್ದಾನೆ.

ಆತ ಮುಸ್ಲಿಂ ಧರ್ಮೀಯ ಎನ್ನುವುದೇ ಅನುಮಾನ. ಮುಸ್ಲಿಂ ವ್ಯಕ್ತಿಯೊಬ್ಬ ಗಡ್ಡ ಬಿಡುವುದನ್ನು ನಾವು ಪವಿತ್ರ ಎಂದು ಭಾವಿಸುತ್ತೇವೆ. ಆದರೆ ಹುಮಾಯೂನ್ ಕಬೀರ್ ಹಾಗಿಲ್ಲ. ಬಾಬರಿ ಮಸೀದಿ ಯನ್ನು ಮುರ್ಷಿದಾಬಾದ್‌ನಲ್ಲಿ ನಿರ್ಮಾಣ ಮಾಡುತ್ತೇವೆ ಎಂದು ಘೋಷಣೆ ಮಾಡಿ, ಅದನ್ನೂ ರಾಜಕೀಯಗೊಳಿಸಿದರು.

Screenshot_1

ಬಂಗಾಳದ ಜನ ಬುದ್ಧಿವಂತರು. ಹುಮಾಯೂನ್ ರ ಪಾರ್ಟಿಗೆ ಮತ ಹಾಕಿ ಟಿಎಂಸಿಯ ಮತ ವಿಭಜನೆಗೆ ಅವಕಾಶ ಕೊಡುವುದಿಲ್ಲ. ಆದರೂ ನಮ್ಮಲ್ಲೂ ಅಂಥವರನ್ನು ಬೆಂಬಲಿಸುವ ಕೆಲ ಅಂಧಭಕ್ತರು ಇದ್ದಾರೆ" ಎಂದು ತಿಳಿಸಿದರು.

“ಬಾಂಕ್ರಾದ ನಿಮ್ಮ ಈ ಕಾಲೊನಿಯಲ್ಲಿ ಬಾಂಗ್ಲಾದೇಶೀಯರು ಇದ್ದರಂತೆ.. ಎಸ್‌ಐಆರ್ ಪ್ರಕ್ರಿಯೆ ಶುರುವಾದ ಮೇಲೆ ಅವರು ಬಾಂಗ್ಲಾದೇಶಕ್ಕೆ ವಾಪಸ್ ಹೋದರು ಎಂದು ಕೇಳ್ಪಟ್ಟೆ. ಅದು ನಿಜವೇ?" ಎಂದು ಅಲ್ಲಿದ್ದವರ ಬಳಿ ಕೇಳಿದೆ. “ಪೊಲೀಸರು ಅವರ ಬಳಿ ನಿಮ್ಮ ದೇಶಕ್ಕೆ ಹೋಗಿ ಎಂದರೆ ಹೋಗುತ್ತಿದ್ದರು. ಅವರೆಲ್ಲರೂ ಹೆದರಿ ಹೋಗಿದ್ದಾರೆ" ಎಂದರು ಅಲ್ ಅಮೀನ್.

“ಅವರಿದ್ದ ಮನೆಗಳನ್ನು ತೋರಿಸಿ" ಎಂದಾಗ ಅಲ್ ಅಮೀನ್ ನನ್ನನ್ನು ಕರೆದೊಯ್ಯಲು ಮುಂದಾದರು. ಆದರೆ ಪಕ್ಕದ ಅಂಗಡಿ ಮಾಲೀಕ ಆತನನ್ನು ತಡೆದರು. “ನಾನು ವರದಿ ಮಾಡಲು ಬಂದಿದ್ದೇನೆ, ಯಾವುದೇ ಪಕ್ಷದಿಂದ ಅಲ್ಲ" ಎಂದರೂ, ಅಂಗಡಿ ಮಾಲೀಕನಿಗೆ ಬಿಜೆಪಿ ಪಕ್ಷದವರು ಕಳುಹಿಸಿರ ಬಹುದು ಎಂಬ ಅನುಮಾನ ಇತ್ತು.

Screenshot_2

ಇಬ್ಬರಿಗೂ ಮತ್ತೆ ಸ್ಪಷ್ಟನೆ ನೀಡಿ ನನ್ನ ಪ್ರೆಸ್ ಕಾರ್ಡನ್ನು ತೋರಿಸಿ, ಅಲ್ ಅಮೀನ್ ಜತೆ ತೆರಳಿದೆ. ಕಾಲೊನಿಯ ಮೂಲೆಯಲ್ಲಿದ್ದ ಮರದ ಬೆತ್ತಗಳಿಂದ ಮಾಡಿದ ಬಾಂಗ್ಲಾ ನಿವಾಸಿಗಳ ಮನೆ ಖಾಲಿ ಹೊಡೆಯುತ್ತಿತ್ತು. ಕಾಗದ ಪತ್ರಗಳಿಲ್ಲದ ಕಾರಣ ಅವರು ವಾಪಸು ಹೋದರು ಎಂದು ಅಲ್ಲಿದ್ದವರು ಮಾಹಿತಿ ನೀಡಿದರು. ವಾಪಸು ಬರುತ್ತಾರೋ ಇಲ್ಲವೋ ಎಂಬ ಬಗ್ಗೆ ಸ್ಥಳೀಯರಿಗೆ ಖಚಿತತೆ ಇರಲಿಲ್ಲ.

ಬಾಂಗ್ಲಾಕ್ಕೆ ವಾಪಸ್ ಹೋದವರಲ್ಲಿ ಬಹುಪಾಲು ಮಹಿಳೆಯರು ಬಾಂಕ್ರಾದಲ್ಲಿ ಮನೆ ಕೆಲಸ ದಾಳುಗಳಾಗಿ ಕೆಲಸ ಮಾಡುತ್ತಿದ್ದರು. ಅವರು ವಾಸ್ತವ್ಯವಿರುತ್ತಿದ್ದ ಜಾಗಕ್ಕೆ ಸ್ಥಳೀಯರು ‘ಮೈಡ್ ಕಾಲನಿ’ ಎಂದೇ ಕರೆಯುತ್ತಿದ್ದರು. ಈ ಬಾಂಗ್ಲಾ ಮುಸ್ಲಿಂ ಮಹಿಳೆಯರು ಹಿಂದೂಗಳ ಮನೆಯಲ್ಲೂ ಕೆಲಸದಾಳುಗಳಾಗಿ ಕಾರ್ಯ ನಿರ್ವಹಿಸುತ್ತಿದ್ದರು.

Screenshot_3

“ಬಾಂಗ್ಲಾ ಪ್ರಜೆಗಳು ಇಲ್ಲಿರುವ ಬಗ್ಗೆ ಈ ಹಿಂದೆ ಪೊಲೀಸರಿಗೆ ಕಂಪ್ಲೇಂಟ್ ನೀಡಲು ಮುಂದಾದರೂ ಪ್ರಯೋಜನವಾಗಲಿಲ್ಲ. ಇಲ್ಲಿ ಬಾಂಗ್ಲಾದವರು ಇzರೆ ಎನ್ನುವುದು ಗೊತ್ತಿದ್ದರೂ ಪೊಲೀಸರು, ಸರಕಾರ ಏನು ಮಾಡಿತು? ಹೀಗಾಗಿ ನಾವೂ ಸುಮ್ಮನಾಗಿ, ಹೊಂದಿಕೊಂಡು ಹೋದೆವು. ನಾವು ಇಲ್ಲಿನ ಮೂಲನಿವಾಸಿಗಳು. ಇಲ್ಲಿನ ಸಂಪನ್ಮೂಲ, ಅನುಕೂಲಗಳು ನಮಗೆ ಸಿಗಬೇಕೆ ವಿನಾ ಹೊರ ದೇಶದವರಿಗಲ್ಲ. ಆದರೆ, ಬಾಂಗ್ಲಾದೇಶೀಯರಿಗೆ ಇಲ್ಲಿನ ಮುಸ್ಲಿಮರೇ ಆಸರೆ ನೀಡಿ, ಕಾಗದ ಪತ್ರಗಳನ್ನು ಮಾಡಿಸಿಕೊಡುತ್ತಾರೆ.

25-30 ವರ್ಷಗಳ ಹಿಂದೆ ಬಂದವರೆಲ್ಲ ಈಗ ಸರಕಾರಿ ದಾಖಲೆಗಳನ್ನು ಮಾಡಿಕೊಂಡು ಭಾರತದ ಪ್ರಜೆಗಳಾಗಿ ಬಿಟ್ಟಿದ್ದಾರೆ. ದುಡ್ಡು ಕೊಟ್ಟರೆ ಎಲ್ಲವೂ ಆಗುತ್ತದೆ" ಎಂದು ಸ್ಥಳೀಯ ನಿವಾಸಿ ಬುದ್ಧದೇವ್ ಬಸು ಮಾಹಿತಿ ಹಂಚಿಕೊಂಡರು. “ನುಸುಳುಕೋರರಿಂದ ಮುಕ್ತಿ ಸಿಗಬೇಕು ಎಂದೇ ನಾವು ಈ ಬಾರಿ ಬಿಜೆಪಿಗೆ ಮತ ಹಾಕುತ್ತಿದ್ದೇವೆ" ಎಂದರು ಬುದ್ಧದೇವ್.

Screenshot_4

ಬಂಕುರಾದಲ್ಲಿ ಸಿಮೆಂಟ್ ವ್ಯಾಪಾರ ನಡೆಸುತ್ತಿರುವ ಎ.ಕೆ.ಹುಸೇನ್ ‘ವಿಶ್ವವಾಣಿ’ ಜತೆ ಮಾತನಾಡು ತ್ತಾ, “ಈ ಹಿಂದೆ ಬಾಂಗ್ಲಾದೇಶೀಯರು ಗಡಿಯಿಂದ ಭಾರತ ಪ್ರವೇಶಿಸಿದ್ದು ಹೇಗೆ ಎನ್ನುವುದನ್ನೂ ಯೋಚಿಸಬೇಕು. ಸೇನೆಯವರು ಮತ್ತು ಪೊಲೀಸರ ಕಣ್ಗಾವಲಿನ ಹೊರತಾಗಿಯೂ ಹೇಗೆ ಬಂಗಾಳಕ್ಕೆ ಬರಲು ಸಾಧ್ಯವಾಯಿತು? ಪೊಲೀಸರು ಗಡಿ ಭಾಗದ ಪ್ರದೇಶಗಳಿಗೆ ಪೋಸ್ಟಿಂಗ್ ನೀಡಿ ಎಂದು ಲಾಬಿ ಮಾಡುವುದು ಏಕೆ? ಎಂಬುದನ್ನೆ ಆಳವಾಗಿ ಆಲೋಚಿಸಬೇಕು. ನಮ್ಮೊಳಗಿನ ವ್ಯವಸ್ಥೆ ಸರಿಯಾ ಗದೆ, ನುಸುಳುಕೋರರು ತುಂಬಿಕೊಂಡಿದ್ದಾರೆ ಎಂದು ಬೊಬ್ಬಿಟ್ಟರೆ ಏನೂ ಪ್ರಯೋಜನವಿಲ್ಲ" ಎಂದು ಬಾಂಗ್ಲಾ ನುಸುಳುಕೋರರ ಕುರಿತ ಮತ್ತೊಂದು ಆಯಾಮವನ್ನು ಬಿಚ್ಚಿಟ್ಟರು.

ಚುನಾವಣಾ ಆಯೋಗದ ಎಸ್‌ಐಆರ್ ಪ್ರಕ್ರಿಯೆಯನ್ನು ಬೆಂಬಲಿಸಿದ ಎ.ಕೆ. ಹುಸೇನ್, “ದಾಖಲೆ ಪತ್ರಗಳು, ಹೆಸರು ಸರಿಯಾಗಿರುತ್ತಿದ್ದರೆ ಮತಪಟ್ಟಿಯಿಂದ ಹೆಸರು ಏಕೆ ಅಳಿಸುತ್ತಿದ್ದರು? ಬಂಗಾಳದಲ್ಲಿ ಇಂಥದ್ದೊಂದು ಪ್ರಕ್ರಿಯೆಯ ಅಗತ್ಯವಿತ್ತು. ಇಲ್ಲಿನ ಬಿರುಸಿನ ರಾಜಕೀಯ ಕದನ ನೋಡಿದರೆ ಬಿಜೆಪಿಗೆ ಈ ಬಾರಿ ಅವಕಾಶ ಹೆಚ್ಚಿದಂತಿದೆ. ಹಾಗಂತ, ದೀದಿ ಕೂಡ ಉತ್ತಮ ಕೆಲಸ ಮಾಡಿದ್ದಾರೆ. ಎರಡೂ ಪಕ್ಷಗಳು ತುಷ್ಟೀಕರಣ ರಾಜಕೀಯ ಬಿಡಬೇಕು. ಜನರಿಗೆ ಮೂರು ಹೊತ್ತಿನ ಊಟ, ನೆಮ್ಮದಿಯ ಬದುಕು ಮುಖ್ಯ. ಆದರೆ, ಬಂಗಾಳದಲ್ಲೂ ಹಿಂದೂ-ಮುಸ್ಲಿಂ ವಿಚಾರ ಚರ್ಚೆಯಾಗುತ್ತಿರುವುದು ವಿಪರ್ಯಾಸ" ಎಂದು ಬೇಸರ ವ್ಯಕ್ತಪಡಿಸಿದರು.

Screenshot_5

ದಂದಂ ಉತ್ತರ ವಿಧಾನಸಭೆ ಕ್ಷೇತ್ರ ಈ ಬಾರಿ ಹೈವೋಲ್ಟೇಜ್ ಸ್ಪರ್ಧೆಗೆ ಸಜ್ಜಾಗಿದ್ದು, ಟಿಎಂಸಿಯಿಂದ ಚಂದ್ರಿಮಾ ಭಟ್ಟಾಚಾರ್ಯ, ಬಿಜೆಪಿಯ ಸೌರವ್ ಸಿಕ್ದಾರ್ ಮತ್ತು ಸಿಪಿಐ(ಎಂ)ನ ದೀಪ್ಸಿತಾ ಧರ್ ವಿರುದ್ಧ ತ್ರಿಕೋನ ಹೋರಾಟ ನಡೆಯುತ್ತಿದೆ. 2011 ಮತ್ತು 2021ರಲ್ಲಿ ಗೆದ್ದಿದ್ದ ಚಂದ್ರಿಮಾ ಭಟ್ಟಾ ಚಾರ್ಯಗೆ ಸಿಪಿಐ(ಎಂ) ಕೂಡ ಕಣದಲ್ಲಿರುವುದು ಮತ ವಿಭಜನೆಯ ಭೀತಿ ಒಡ್ಡಿದೆ. ಮಾಜಿ ಕೇಂದ್ರ ಸಚಿವ ತಪನ್ ಸಿಕ್ದಾರ್ ಅವರ ಸೋದರಳಿಯ ಸೌರವ್ ಸಿಕ್ದಾರ್‌ಗೆ ಇದು ಚೊಚ್ಚಲ ಚುನಾವಣೆ. ಕಳೆದ ಎರಡು ವರ್ಷಗಳಲ್ಲಿ ಈ ಭಾಗದಲ್ಲಿ ಬಿಜೆಪಿ ತನ್ನ ನೆಲೆ ವಿಸ್ತರಿಸಿರುವ ಜತೆಗೆ ಮುಸ್ಲಿಂ ಮತ ವಿಭಜನೆಯ ಲಾಭವೂ ಬಿಜೆಪಿಗೆ ಅನುಕೂಲವಾಗಬಹುದು ಎನ್ನಲಾಗುತ್ತಿದೆ.

Screenshot_6

ವಿಶ್ವಾಸ ಕಳೆದುಕೊಂಡರೇ ಹುಮಾಯೂನ್?

ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಬಾಬರಿ ಮಸೀದಿ ನೆಲಸಮ ಮಾಡಿ, ರಾಮ ಮಂದಿರ ನಿರ್ಮಾಣವಾದ ಹಿನ್ನೆಲೆಯಲ್ಲಿ ಬಂಗಾಳದ ಮುರ್ಷಿದಾಬಾದ್‌ನಲ್ಲಿರುವ ರಾಷ್ಟ್ರೀಯ ಹೆದ್ದಾರಿ 12ರ ಪಕ್ಕದ ಚೇಟಿಯಾನಿ ಹಳ್ಳಿಯಲ್ಲಿ ಬೃಹತ್ ಬಾಬರಿ ಮಸೀದಿ ನಿರ್ಮಾಣ ಮಾಡಲು ಉದ್ದೇಶಿ ಸಲಾಗಿದೆ. ಮಸೀದಿ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿದ್ದ ನಂತರ ಮುಸ್ಲಿಂ ಧರ್ಮೀಯರ ನಡುವೆ ಹುಮಾಯೂನ್ ಕಬೀರ್ ಜನಪ್ರಿಯತೆಯೂ ಹೆಚ್ಚಾಗಿತ್ತು. ಮಸೀದಿಗಾಗಿ ಈಗಾಗಲೇ ಮುಸ್ಲಿಮರು ಲಕ್ಷಗಳ ಸಂಖ್ಯೆಯಲ್ಲಿ ಇಟ್ಟಿಗೆಗಳನ್ನು ತಂದು ಗ್ರಾಮದ ಮಸೀದಿ ನಿರ್ಮಾಣ ಸ್ಥಳದಲ್ಲಿರಿಸಿದ್ದಾರೆ. ವಿವಿಧ ರಾಜ್ಯಗಳು ಹಾಗೂ ಪಕ್ಕದ ಬಾಂಗ್ಲಾದೇಶದಿಂದಲೂ ಮುಸ್ಲಿಂ ಧರ್ಮೀಯರು ಚೇಟಿಯಾನಿ ಗ್ರಾಮಕ್ಕೆ ಬಂದು ಬಾಬರಿ ಮಸೀದಿ ನಿರ್ಮಾಣ ಸ್ಥಳವನ್ನು ವೀಕ್ಷಿಸುತ್ತಿದ್ದಾರೆ.

ಮಸೀದಿಯು ಭಾವನಾತ್ಮಕ ವಿಷಯವಾಗಿರುವುದರಿಂದ ಪ್ರವಾಸಿಗರು ಬರುತ್ತಲೇ ಇದ್ದಾರೆ. ಭವಿಷ್ಯ ದಲ್ಲಿ ಈ ಸ್ಥಳವು ಮುಸ್ಲಿಂ ಧರ್ಮೀಯರ ಅತಿದೊಡ್ಡ ಪವಿತ್ರ ತಾಣವಾಗಿ ಬದಲಾಗುವ ನಿರೀಕ್ಷೆ ಯಿದೆ. ಟಿಎಂಸಿ ತೊರೆದು ‘ಆಮ್ ಜನತಾ ಉನ್ನಯನ್ ಪಕ್ಷ’ ಕಟ್ಟಿದಾಗಲೂ ಹುಮಾಯೂನ್ ಕಬೀರ್ ಬಗ್ಗೆ ಮುಸ್ಲಿಮರಿಗೆ ಅಷ್ಟೊಂದು ಅಸಮಾಧಾನ ಆಗಿರಲಿಲ್ಲ. ಆದರೆ, ಚುನಾವಣೆಗೆ ಬಿಜೆಪಿಯವರ ಜತೆ 1000 ಕೋಟಿ ರು. ಡೀಲ್ ಆಗಿದೆ ಎಂದು ಮಾತನಾಡುತ್ತಿರುವ ವೈರಲ್ ವಿಡಿಯೋ ಬಂಗಾಳದ ಮುಸ್ಲಿಮರ ಮಧ್ಯೆ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಅನೇಕರು ಹುಮಾಯೂನ್‌ರನ್ನು ‘ಗದ್ದಾರ್’ ಎಂದೇ ಕರೆದು ಕಿಡಿಕಾರುತ್ತಿದ್ದಾರೆ.

Screenshot_7

ಒಟ್ಟು 142 ಕ್ಷೇತ್ರಗಳಲ್ಲಿ ಆಮ್ ಜನತಾ ಉನ್ನಯನ್ ಪಾರ್ಟಿ ಅಭ್ಯರ್ಥಿಗಳು ಕಣದಲ್ಲಿದ್ದು, ಹುಮಾ ಯೂನ್ ಮುರ್ಷಿದಾಬಾದ್‌ನ ರೆಜಿನಗರ್ ಮತ್ತು ನಾವ್ಡಾ ಎಂಬ 2 ಕ್ಷೇತ್ರಗಳಿಂದ ಸ್ಪರ್ಧಿಸು ತ್ತಿದ್ದಾರೆ. ವೈರಲ್ ವಿಡಿಯೋ ಬೆಳಕಿಗೆ ಬಂದ ನಂತರ ಆಲ್ ಇಂಡಿಯಾ ಮಜ್ಲಿಸ್ ಇತ್ತೆಹದುಲ್ ಮುಸ್ಲಿಮೀನ್ (ಎಐಎಂಐಎಂ) ಪಕ್ಷದ ಅಸಾದುದ್ದೀನ್ ಓವೈಸಿ ಕೂಡ ಹುಮಾಯೂನ್ ಪಕ್ಷ ದೊಂದಿಗಿನ ಮೈತ್ರಿ ಕಡಿದುಕೊಂಡರು.

2 ದಿನಗಳ ನಂತರ ಸ್ವಾತಂತ್ರ್ಯ ಸಿಕ್ಕಿತ್ತು!

ಭಾರತಕ್ಕೆ ಬ್ರಿಟಿಷರಿಂದ ಸ್ವಾತಂತ್ರ್ಯ ಸಿಕ್ಕಿದ್ದು 1947ರ ಆಗಸ್ಟ್ 15ರದ್ದಾದರೂ, 22 ವಿಧಾನಸಭೆ ಕ್ಷೇತ್ರ ಗಳನ್ನು ಹೊಂದಿರುವ ಬಾಂಗ್ಲಾ ಗಡಿಭಾಗದ ಮುರ್ಷಿದಾಬಾದ್ ಜಿಲ್ಲೆಗೆ ಸ್ವಾತಂತ್ರ್ಯ ಸಿಕ್ಕಿದ್ದು ಆಗಸ್ಟ್ 17ರಂದು! ಭಾರತ-ಪಾಕಿಸ್ತಾನ ರಾಡ್‌ಕ್ಲಿಫ್ ಲೈನ್‌ನ (ಗಡಿ ಗೆರೆ) ಗೊಂದಲದಿಂದಾಗಿ ಮುರ್ಷಿದಾ ಬಾದ್ 2-3 ದಿನ ಪಾಕಿಸ್ತಾನದ ಭಾಗವಾಗಿತ್ತು. ಮುಸ್ಲಿಂ ಬಾಹುಳ್ಯದ ಈ ಭಾಗವನ್ನು ಆರಂಭದಲ್ಲಿ ಪೂರ್ವ ಪಾಕಿಸ್ತಾನಕ್ಕೆ ಸೇರಿಸಲಾಗಿತ್ತು ಮತ್ತು 1947ರ ಆಗಸ್ಟ್ 15ರಂದು ಬೆಹ್ರಾಂಪೋರ್‌ ನಲ್ಲಿ (ಕಾಂಗ್ರೆಸ್‌ನ ಹಿರಿಯ ನಾಯಕ ಅಧೀರ್ ರಂಜನ್ ಚೌಧುರಿ ಈ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ) ಪಾಕಿಸ್ತಾನಿ ಧ್ವಜವನ್ನು ಹಾರಿಸಲಾಗಿತ್ತು.

ಆಗಸ್ಟ್ 17ರಂದು ಭಾರತಕ್ಕೆ ಸೇರಿಸಿದ್ದರಿಂದ, ಭಾರತದ ಬಾವುಟ ಹಾರಿಸಲಾಯಿತು. ಮುರ್ಷಿದಾ ಬಾದ್ ಜತೆಗೆ ಮಾಲ್ಡಾ, ನದಿಯಾ ಜಿಗಳ ಕೆಲ ಹಳ್ಳಿಗಳಲ್ಲಿ ಕೂಡ ಆಗಸ್ಟ್ 17ರಂದೇ ಸ್ವಾತಂತ್ರ್ಯ ದಿನ ಆಚರಿಸಲಾಗುತ್ತದೆ. ಹೂಗ್ಲಿ ನದಿ ಮತ್ತು ಕಣಿವೆ ಪ್ರದೇಶಗಳು ಸಂಪೂರ್ಣವಾಗಿ ಭಾರತದೊಳಗೆ ಇದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ಈ ಜಿಲ್ಲೆಯನ್ನು ಅಧಿಕೃತವಾಗಿ ಭಾರತಕ್ಕೆ ವರ್ಗಾಯಿಸ ಲಾಯಿತು. ಇದಕ್ಕಾಗಿ ಭಾರತ ಆ ದಿನಗಳಲ್ಲಿ ಹಿಂ ದೂ ಜನಸಂಖ್ಯೆ (ಅಂದಾಜು ಶೇ.55ರಷ್ಟು) ಹೆಚ್ಚಿದ್ದ ಕುಲ್ನಾ ಜಿಲ್ಲೆಯನ್ನು (ಹೂಗ್ಲಿ ವ್ಯಾಪ್ತಿಯಲ್ಲಿರದ) ಪೂರ್ವ ಪಾಕಿಸ್ತಾನಕ್ಕೆ ಬಿಟ್ಟು ಕೊಡಬೇಕಾಗಿ ಬಂದಿತ್ತು.