ನರೇಂದ್ರ ಪಾರೆಕಟ್
ಏಷ್ಯನ್ ದೇಶಗಳ ನಡುವಿನ ‘ಏಷ್ಯಾಕಪ್ ಕ್ರಿಕೆಟ್’ ಕದನಕ್ಕೆ ದಿನಗಣನೆ ಶುರುವಾಗಿದೆ. ಮುಂದಿನ ವಾರ, ಅಂದರೆ ಸೆ.9ರಿಂದ ಯುಎಇಯಲ್ಲಿ ಪಂದ್ಯಾವಳಿಯು ಪ್ರಾರಂಭವಾಗಲಿದೆ. ಒಟ್ಟು 8 ತಂಡಗಳು ಈ ಸಲ ಪ್ರಶಸ್ತಿಗಾಗಿ ಕಾದಾಟ ನಡೆಸಲಿದ್ದು, ಟಿ20 ಮಾದರಿಯಲ್ಲಿ ಟೂರ್ನಿಯು ನಡೆಯಲಿದೆ. ಸೂರ್ಯಕುಮಾರ್ ಯಾದವ್ ನಾಯಕತ್ವದ ‘ಟೀಮ್ ಇಂಡಿಯಾ’ ಟ್ರೋಫಿ ಗೆಲ್ಲುವತ್ತ ತನ್ನ ಚಿತ್ತ ನೆಟ್ಟಿದೆ. ಹಾಗಾಗಿ ಅದು ಏಷ್ಯಾ ಕಪ್ ಟ್ರೋಫಿ ಗೆಲ್ಲುವ ಫೇವರಿಟ್ ತಂಡ ಆಗಲಿದೆ ಎಂಬ ನಿರೀಕ್ಷೆ ಗರಿಗೆದರಿದೆ.
ಅದು 1983ನೇ ಇಸವಿ. ದಕ್ಷಿಣ ಏಷ್ಯಾದ ನೆರೆಯ ದೇಶಗಳಾದ ಭಾರತ, ಪಾಕಿಸ್ತಾನ ಮತ್ತು ಶ್ರೀಲಂಕಾ ನಡುವಿನ ದ್ವಿಪಕ್ಷೀಯ ಸಂಬಂಧಗಳನ್ನು ಸುಧಾರಿಸಲು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಸ್ಥಾಪನೆ ಯಾಯಿತು. ಅದರ ನೇತೃತ್ವದಲ್ಲೇ ಮರುವರ್ಷವೇ, ಅಂದರೆ 1984ರಲ್ಲಿ ಚೊಚ್ಚಲ ಷ್ಯಾಕಪ್ ಪಂದ್ಯಾವಳಿ ಶುರುವಾಯಿತು.
ಮೊದಲ ಆವೃತ್ತಿಯ ಏಷ್ಯಾಕಪ್ ಅನ್ನು ಯುಎಇ ಆಯೋಜಿಸಿತ್ತು. 1983ರ ಐಸಿಸಿ ವಿಶ್ವಕಪ್ ಕ್ರಿಕೆಟ್ ವಿಜೇತ ತಂಡವಾದ ಭಾರತವು ಮೊದಲ ಏಷ್ಯಾ ಕಪ್‌ನಲ್ಲಿ ಭಾಗವಹಿಸಿದ್ದರಿಂದ ಆ ಪಂದ್ಯಾವಳಿಗೆ ಹೆಚ್ಚಿನ ಪ್ರಾಮುಖ್ಯತೆ ದೊರೆಯಿತು. ಆದರೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ವಿಶ್ವಕಪ್ ವಿಜೇತ ಸಂಪೂರ್ಣ ತಂಡವನ್ನು 1984ರಲ್ಲಿ ನಡೆದಿದ್ದ ಚೊಚ್ಚಲ ಏಷ್ಯಾ ಕಪ್ ಪಂದ್ಯಾವಳಿಗೆ ಕಳುಹಿಸಿರಲಿಲ್ಲ.
ಕಪಿಲ್ ದೇವ್, ಕೆ. ಶ್ರೀಕಾಂತ್, ಸೈಯದ್ ಕಿರ್ಮಾನಿ ಮತ್ತು ಮೊಹಿಂದರ್ ಅಮರನಾಥ್ ಅವರಂತಹ ಅಂದಿನ ಸ್ಟಾರ್ ಆಟಗಾರರಿಗೆ ವಿಶ್ರಾಂತಿ ನೀಡಲಾಯಿತು. ಅವರ ಸ್ಥಾನದಲ್ಲಿ ಮನೋಜ್ ಪ್ರಭಾಕರ್, ಚೇತನ್ ಶರ್ಮಾ ಮತ್ತು ಸುರಿಂದರ್ ಖನ್ನಾ ಅವರಂತಹ ಆಟಗಾರರು ಆ ಏಷ್ಯಾಕಪ್‌ನಲ್ಲಿ ಭಾಗವಹಿಸಿದ್ದರು. ಸುನಿಲ್ ಗವಾಸ್ಕರ್ ನೇತೃತ್ವದ ಭಾರತೀಯ ತಂಡವು ಶ್ರೀಲಂಕಾ ವಿರುದ್ಧದ ಮೊದಲ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ತೋರಿತು.
ಇದನ್ನೂ ಓದಿ: Asia Cup 2025: ಅಭ್ಯಾಸ ಆರಂಭಿಸಿದ ಟೀಮ್ ಇಂಡಿಯಾ ಆಟಗಾರರು
ಆ ಚೊಚ್ಚಲ ಆವೃತ್ತಿಯಲ್ಲಿ ಭಾರತ, ಶ್ರೀಲಂಕಾ ಮತ್ತು ಪಾಕಿಸ್ತಾನ ಮಾತ್ರ ಭಾಗವಹಿಸಿದ್ದವು. ಫೈನಲ್ ಪಂದ್ಯದಲ್ಲಿ ಶ್ರೀಲಂಕಾವನ್ನು ಸೋಲಿಸಿದ್ದ ಭಾರತ ತಂಡ 1984ರ ಮೊದಲ ಏಷ್ಯಾಕಪ್ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿತ್ತು. ಏಷ್ಯಾ ಕಪ್ ಪಂದ್ಯಾವಳಿಯು 1984ರಿಂದ 2023ರ ವರೆಗೆ ಒಟ್ಟು 16 ಬಾರಿ ನಡೆದಿದೆ. ಪಂದ್ಯಾವಳಿಯ ಇತಿಹಾಸದಲ್ಲಿ ಭಾರತವು ಎಂಟು ಬಾರಿ ಚಾಂಪಿಯನ್ ಆಗಿದೆ. ಏಕದಿನ ಸ್ವರೂಪದಲ್ಲಿ 7 ಬಾರಿ ಹಾಗೂ ಒಮ್ಮೆ ಟಿ20 ಸ್ವರೂಪದಲ್ಲಿ ಪ್ರಶಸ್ತಿ ಗೆದ್ದಿದೆ.
ಏಷ್ಯಾಕಪ್ ಮೇಲೆ ಐಸಿಸಿ ಹಸ್ತಕ್ಷೇಪ: ಏಷ್ಯಾ ಕಪ್‌ಗೆ ಸಂಬಂಧಿಸಿದಂತೆ 2015ರಲ್ಲಿ ಒಂದು ಪ್ರಮುಖ ಬೆಳವಣಿಗೆ ನಡೆಯಿತು. ಪಂದ್ಯಾವಳಿಯನ್ನು ಆಯೋಜಿಸುವ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ನ ಅಧಿಕಾರವನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಕಡಿತಗೊಳಿತು. ಅಂದಿನಿಂದ ಏಷ್ಯಾ ಕಪ್ ಅನ್ನು ಪ್ರತೀ ಎರಡು ವರ್ಷಗಳಿಗೊಮ್ಮೆ ಏಕದಿನ ಮತ್ತು ಟಿ20 ಸ್ವರೂಪಗಳಲ್ಲಿ ಸರದಿ ವ್ಯವಸ್ಥೆಯಲ್ಲಿ ನಡೆಸಲು ಅನುಮತಿ ನೀಡಿತು.
ಏಷ್ಯಾ ಕಪ್ ಅನ್ನು ಐಸಿಸಿ ಪಂದ್ಯಾವಳಿಗಳಿಗೆ ಅನುಗುಣವಾಗಿ ನಡೆಸಲಾಗುವುದು ಎಂದು ಅದು ಹೇಳಿತು, ಆ ಪರಿಣಾಮವಾಗಿ 2016ರಲ್ಲಿ ಮೊದಲ ಬಾರಿಗೆ ಏಷ್ಯಾ ಕಪ್ ಅನ್ನು ಟಿ20 ಸ್ವರೂಪದಲ್ಲಿ ಆಯೋಜಿಸಲಾಯಿತು. ಅದು ಟಿ20 ವಿಶ್ವಕಪ್ ಪಂದ್ಯಾವಳಿಗೆ ಮೊದಲು ಅಭ್ಯಾಸ ಪಂದ್ಯಾವಳಿ ಯಾಗಿ ನೆರವಾಗಲೂ ಕಾರಣವಾಯಿತು. ಆ ಬಾರಿಯ ಪ್ರಶಸ್ತಿ ಭಾರತದ ಮುಡಿಗೇರಿತ್ತು.
ಟೀಮ್ ಇಂಡಿಯಾದ್ದೇ ಮೇಲುಗೈ: 1984ರಲ್ಲಿ ನಡೆದ ಚೊಚ್ಚಲ ಏಷ್ಯಾಕಪ್ ಗೆಲುವಿನ ಬಳಿಕ, 1988ರಲ್ಲಿ, 1990-91ರಲ್ಲಿ ಮತ್ತು 1995ರ ಟೂರ್ನಿಯಲ್ಲಿ ಶ್ರೀಲಂಕಾ ತಂಡದ ವಿರುದ್ಧ ಫೈನಲ್ ಪಂದ್ಯದಲ್ಲಿ ಗೆದ್ದು ಏಷ್ಯಾ ಕಪ್ ಹ್ಯಾಟ್ರಿಕ್ ಪ್ರಶಸ್ತಿಯನ್ನೂ ಭಾರತ ತಂಡ ತನ್ನ ಮುಡಿಗೇರಿಸಿತ್ತು.
ಬಳಿಕ 2010, 2016, 2018 ಮತ್ತು 2023ರಲ್ಲೂ ಟೀಮ್ ಇಂಡಿಯಾ ಏಷ್ಯಾ ಕಪ್ ಟೂರ್ನಿಯಲ್ಲಿ ಪ್ರಾಬಲ್ಯ ಮೆರೆದು ಪಂದ್ಯಾವಳಿಯ ಫೇವರಿಟ್ ತಂಡ ಎನಿಸಿಕೊಂಡಿತ್ತು. ಭಾರತವನ್ನು ಹೊರತು ಪಡಿಸಿ, ಶ್ರೀಲಂಕಾ ಆರು ಬಾರಿ ಮತ್ತು ಪಾಕಿಸ್ತಾನವು ಎರಡು ಬಾರಿ ಏಷ್ಯಾ ಕಪ್ ಟ್ರೋಫಿಯನ್ನು ಗೆದ್ದಿದೆ. ಹೀಗೆ ಭಾರತ, ಶ್ರೀಲಂಕಾ ಮತ್ತು ಪಾಕಿಸ್ತಾನ ತಂಡಗಳನ್ನು ಹೊರತುಪಡಿಸಿ, ಏಷ್ಯಾ ಖಂಡದ ಬೇರೆ ಯಾವ ದೇಶಗಳೂ ಇದುವರೆಗೂ ಏಪ್ಯಾ ಕಪ್ ಗೆದ್ದಿಲ್ಲ.
ಟೂರ್ನಿಯ ಸ್ವರೂಪ: ಟಿ೨೦ ಮಾದರಿಯಲ್ಲಿ ನಡೆಯುವ ಈ ಸಲದ ಏಷ್ಯಾ ಕಪ್‌ನ ಪಂದ್ಯಾವಳಿ ಯಲ್ಲಿ ಭಾಗವಹಿಸುತ್ತಿರುವ ತಂಡಗಳೆಂದರೆ ಭಾರತ, ಶ್ರೀಲಂಕಾ, ಪಾಕಿಸ್ತಾನ, ಬಾಂಗ್ಲಾದೇಶ, ಯು.ಎ.ಇ, ಅ-ನಿಸ್ತಾನ, ಹಾಂಗ್‌ಕಾಂಗ್ ಮತ್ತು ಒಮಾನ್. ೮ ತಂಡಗಳನ್ನು ಎ ಮತ್ತು ಬಿ ಬಣಗಳಾಗಿ ವರ್ಗೀಕರಿಸಲಾಗಿದ್ದು, ಭಾರತ, ಪಾಕಿಸ್ತಾನ, ಒಮಾನ್ ಮತ್ತು ಯು.ಎ.ಇ ಎ-ಬಣದಲ್ಲಿ ಸ್ಥಾನ ಪಡೆದಿದ್ದರೆ, ಶ್ರೀಲಂಕಾ, ಬಾಂಗ್ಲಾದೇಶ, ಅ-ನಿಸ್ತಾನ ಮತ್ತು ಹಾಂಗ್‌ಕಾಂಗ್ ತಂಡಗಳು ಬಿ-ಬಣದಲ್ಲಿವೆ.
ಸೆಪ್ಟೆಂಬರ್-9ರಿಂದ 19ರ ತನಕ ಗ್ರೂಪ್ ಪಂದ್ಯಗಳು ನಡೆಯಲಿದ್ದು, ಸೆಪ್ಟೆಂಬರ್-20ರಿಂದ 26ರ ತನಕ ಸೂಪರ್ ಫಾರ್ ಪಂದ್ಯಗಳು ಹಾಗೂ ಸೆಪ್ಟೆಂಬರ್-28ರಂದು ಫೈನಲ್ ಪಂದ್ಯ ಈ ಸಲ ನಡೆಯಲಿವೆ.
ಈ ಟೂರ್ನಿಯಲ್ಲೂ ಭಾರತವೇ ಫೈವರಿಟ್: ಭಾರತ ತಂಡದ ನಾಯಕರಾಗಿದ್ದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಟೆಸ್ಟ್ ಮತ್ತು ಟಿ೨೦ ಪಂದ್ಯಗಳಿಗೆ ವಿದಾಯ ಹೇಳಿದ್ದ ಕಾರಣಕ್ಕಾಗಿ ಜುಲೈ ತಿಂಗಳಿನಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಟೀಮ್ ಇಂಡಿಯಾ ಹೊರಟಿದ್ದಾಗ, ಅಲ್ಲಿ ವೈಟ್ ವಾಶ್ ಮುಖಭಂಗವಾಗಿ ಮರಳಿ ಬರುವುದೇನೋ ಎಂದೇ ಭಾರತೀಯ ಕ್ರಿಕೆಟ್‌ಪ್ರೇಮಿಗಳು ಅಂದುಕೊಂಡಿದ್ದರು. ಆದರೆ ಸಂಘಟಿತ ಪ್ರಯತ್ನದ ಮೂಲಕ ಟೀಮ್ ಇಂಡಿಯಾ ಟೆಸ್ಟ್ ಸರಣಿಯನ್ನು 2-2 ಅಂತರದಲ್ಲಿ ಡ್ರಾ ಮಾಡಿದಾಗ ಎಲ್ಲರೂ ಹುಬ್ಬೇರಿಸಿದ್ದರು.
ಸೂರ್ಯಕುಮಾರ್ ನಾಯಕತ್ವದ ಯುವ ತಂಡವು ಈ ಏಷ್ಯಾ ಕಪ್‌ನಲ್ಲಿ ಈ ಬಾರಿ ಇತರ ತಂಡಗಳ ವಿರುದ್ಧ ಸೆಣಸಾಡಲಿದ್ದು, ಶುಭ್‌ಮನ್ ಗಿಲ್ ಉಪ ನಾಯಕರಾಗಿದ್ದಾರೆ. ಬ್ಯಾಟಿಂಗ್‌ನಲ್ಲಿ ಸೋಟಕ ಬ್ಯಾಟ್ಸ್‌ಮನ್ ಅಭಿಷೇಕ್ ಶರ್ಮ, ಅಕ್ಷರ್ ಪಟೇಲ್ ಶಿವಂ ದುಬೆ ಉತ್ತಮ ಫಾರ್ಮ್‌ನಲ್ಲಿದ್ದಾರೆ.
ಬೌಲಿಂಗ್‌ನಲ್ಲಿ ಜಸ್ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್ ಉತ್ತಮ ನಿರ್ವಹಣೆಯ ನಿರೀಕ್ಷೆಯಲ್ಲಿದ್ದಾರೆ. ಹಾಗೆಯೇ ತಂಡದಲ್ಲಿರುವ ಆಲ್‌ರೌಂಡರ್‌ಗಳಾದ ಹಾರ್ದಿಕ್ ಪಾಂಡ್ಯ ಮತ್ತು ವರುಣ್ ಚಕ್ರವರ್ತಿ ಹಲವಾರು ಟಿ೨೦ ಪಂದ್ಯಗಳಲ್ಲಿ ತಮ್ಮ ಸಾಮರ್ಥ್ಯ ಸಾಬೀತುಪಡಿಸಿ, ನಿರ್ಣಾಯಕ ಪಂದ್ಯಗಳನ್ನು ಗೆಲ್ಲಿಸಿಕೊಡುವ ಸಾಮರ್ಥ್ಯ ಹೊಂದಿರುವ ಕಾರಣಕ್ಕೆ ಈ ಟೂರ್ನಿಯಲ್ಲೂ ಮಿಂಚುವ ನಿರೀಕ್ಷೆ ದೆ. ಈ ಕಾರಣಕ್ಕಾಗಿಯೇ ಯಂಗ್ ಇಂಡಿಯಾ ಈ ಸಲ ಏಷ್ಯಾ ಕಪ್ ಗೆಲ್ಲುವ ಫೇವರಿಟ್ ತಂಡ ಎಂದೆನಿಸಿದೆ
ಏಷ್ಯಾ ಕಪ್: ಭಾರತ ತಂಡ ಸೂರ್ಯ ಕುಮಾರ್ ಯಾದವ್ (ನಾಯಕ), ಶುಭಮನ್ ಗಿಲ್ (ಉಪನಾಯಕ), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್, ಜಿತೇಶ್ ಶರ್ಮಾ (ಕೀಪರ್), ಜಸ್ಪ್ರೀತ್ ಬುಮ್ರಾ, ಅರ್ಶದೀಪ್ ಸಿಂಗ್, ವರುಣ್ ಚಕ್ರವರ್ತಿ, ಕುಲದೀಪ್ ಯಾದವ್, ಸಂಜು ಸ್ಯಾಮ್ಸನ್ (ಕೀಪರ್), ಹರ್ಷಿತ್ ರಾಣಾ.
ಭಾರತ-ಪಾಕ್ ಹೈವೋಲ್ಟೆಜ್ ಕದನ
ಈ ಏಷ್ಯಾ ಕಪ್ ಪಂದ್ಯಾವಳಿಯಲ್ಲಿ ಭಾರತ-ಪಾಕ್ ಮುಖಾಮುಖಿಯ ಬಗ್ಗೆ ಹಲವಾರು ತಿಂಗಳಿನಿಂದ ಚರ್ಚೆಗಳು ನಡೆದಿದ್ದವು. ಕೊನೆಗೂ ಇದೊಂದು ಬಹುರಾಷ್ಟ್ರೀಯ ಪಂದ್ಯಾವಳಿ ಆಗಿರುವುದರಿಂದ ಕೇಂದ್ರ ಸರಕಾರವು ಪಾಕ್ ವಿರುದ್ಧ ಆಡಲು ಕೊನೆಗೂ ಅನುಮತಿ ನೀಡಿತ್ತು. ಹಾಗಾಗಿ ಭಾರತ-ಪಾಕ್ ಹೈ ವೋಲ್ಟೇಜ್ ಪಂದ್ಯದ ಬಗ್ಗೆ ಅಭಿಮಾನಿಗಳ ಕಣ್ಣು ನೆಟ್ಟಿದೆ. ಭಾರತ ಮತ್ತು ಪಾಕಿಸ್ತಾನ ಒಂದೇ ಗುಂಪಿನಲ್ಲಿ ಸ್ಥಾನ ಪಡೆದಿವೆ. ಅಂತಹ ಪರಿಸ್ಥಿತಿಯಲ್ಲಿ, ಈ ಪಂದ್ಯಾವಳಿಯಲ್ಲಿ ಎರಡು ತಂಡಗಳ ನಡುವೆ ಒಟ್ಟು 3 ಪಂದ್ಯಗಳು ನಡೆಯಬಹುದು.
ಅಭಿಮಾನಿಗಳು ಕಾತರದಿಂದ ಕಾಯುತ್ತಿರುವ ಗ್ರೂಪ್ ಪಂದ್ಯದಲ್ಲಿ ಭಾರತವು ಸೆ.14ರಂದು ಪಾಕಿಸ್ತಾನವನ್ನು ದುಬೈನಲ್ಲಿ ಎದುರಿಸಲಿದೆ. ಎರಡೂ ತಂಡಗಳು ಮುಂದಿನ ಸುತ್ತನ್ನು ತಲುಪಿದರೆ, ಸೆಪ್ಟೆಂಬರ್ 21, ಭಾನುವಾರದಂದು ಭಾರತ ಮತ್ತು ಪಾಕಿಸ್ತಾನ ಮತ್ತೆ ಪರಸ್ಪರ ಮುಖಾಮುಖಿ ಯಾಗಲಿವೆ. ಅಲ್ಲಿಂದಲೂ ಎರಡೂ ತಂಡಗಳು ಫೈನಲ್ ತಲುಪುವಲ್ಲಿ ಯಶಸ್ವಿಯಾದರೆ, ಸೆಪ್ಟೆಂಬರ್ 28ರಂದು ನಡೆಯುವ ಫೈನಲ್ ಪಂದ್ಯದಲ್ಲಿ ಮತ್ತೆ ಎರಡೂ ತಂಡಗಳು ಪರಸ್ಪರ ಮುಖಾಮುಖಿಯಾಗಲಿವೆ.