ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಬೆಳಗಾವಿ ಅಧಿವೇಶನದಲ್ಲಿ ಬಿಜೆಪಿಗೆ ಬಂದೆರಗಿದ ಯುದ್ಧೋತ್ಸಾಹ ಬರ

ಬೆಳಗಾವಿಯಲ್ಲಿ ಆರಂಭವಾಗಿರುವ ರಾಜ್ಯ ವಿಧಾನಮಂಡಲ ಅಧಿವೇಶನದಲ್ಲಿ ಯುದ್ಧ ಸಿದ್ಧತೆ ಯಂತೆ ಸಜ್ಜಾಗಬೇಕಿದ್ದ ಪ್ರತಿಪಕ್ಷ ಬಿಜೆಪಿಯಲ್ಲಿ ಅಷ್ಟೇನೂ ಹೋರಾಟದ ಆಸಕ್ತಿ ಕಾಣುತ್ತಿಲ್ಲ. ಅಷ್ಟೇ ಅಲ್ಲ, ಈ ಅಧಿವೇಶನದಲ್ಲಿ ಆಡಳಿತ ಪಕ್ಷಕ್ಕೆ ಸವಾಲು ಹಾಕಬೇಕಿದ್ದ ಬಿಜೆಪಿಯೇ ಕಾಂಗ್ರೆಸ್ ಸವಾಲು ಎದುರಿಸಲು ಹೆದರುವಂತಾಗಿದೆ.

ಬೆಳಗಾವಿ ಅಧಿವೇಶನದಲ್ಲಿ ಬಿಜೆಪಿಗೆ ಬಂದೆರಗಿದ ಯುದ್ಧೋತ್ಸಾಹ ಬರ

-

Ashok Nayak
Ashok Nayak Dec 8, 2025 7:44 AM

ಶಿವಕುಮಾರ ಬೆಳ್ಳಿತಟ್ಟೆ

ಪ್ರತಿಪಕ್ಷದ ಬತ್ತಳಿಕೆಯಲ್ಲಿ ಅಸ್ತ್ರ ಗಳ ಕೊರತೆ, ನಾಯಕರಿಗೆ ಹಳೇ ಕೇಸುಗಳ ಭೀತಿ, ಕಾಂಗ್ರೆಸ್ ಖುಷಿ

ರಾಜ್ಯ ಗಡಿನಾಡ ರಣರಂಗ ಎಂದೇ ಬಣ್ಣಿಸಲಾಗುವ ಬೆಳಗಾವಿ ಕದನದಲ್ಲಿ ಕಮಲ ಪಾಳಯದಲ್ಲಿ ಯುದ್ಧೋತ್ಸಾಹ ಕೊರತೆ ಎದ್ದುಕಾಣುತ್ತಿದೆ.

ಬೆಳಗಾವಿಯಲ್ಲಿ ಆರಂಭವಾಗಿರುವ ರಾಜ್ಯ ವಿಧಾನಮಂಡಲ ಅಧಿವೇಶನದಲ್ಲಿ ಯುದ್ಧ ಸಿದ್ಧತೆ ಯಂತೆ ಸಜ್ಜಾಗಬೇಕಿದ್ದ ಪ್ರತಿಪಕ್ಷ ಬಿಜೆಪಿಯಲ್ಲಿ ಅಷ್ಟೇನೂ ಹೋರಾಟದ ಆಸಕ್ತಿ ಕಾಣುತ್ತಿಲ್ಲ. ಅಷ್ಟೇ ಅಲ್ಲ, ಈ ಅಧಿವೇಶನದಲ್ಲಿ ಆಡಳಿತ ಪಕ್ಷಕ್ಕೆ ಸವಾಲು ಹಾಕಬೇಕಿದ್ದ ಬಿಜೆಪಿಯೇ ಕಾಂಗ್ರೆಸ್ ಸವಾಲು ಎದುರಿಸಲು ಹೆದರುವಂತಾಗಿದೆ. ಅಂದರೆ ಇತ್ತೀಚೆಗಷ್ಟೇ ಮಾಗಡಿ ಶಾಸಕ ಎಚ್.ಸಿ.ಬಾಲ ಕೃಷ್ಣ ಅವರು, ಅಧಿವೇಶನದಲ್ಲಿ ಮುಖ್ಯಮುಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಎದುರಿಸುವ ನಾಯಕರು ಯಾರಿದ್ದಾರೆ ಹೇಳಿ ಎಂದು ಸವಾಲು ಹಾಕಿದ್ದಾರೆ. ಬಿಜೆಪಿ ಸತ್ತು ಹೋದ ಪಕ್ಷ ಎಂದು ಟೀಕಿಸಿದ್ದಾರೆ. ಆದರೆ ಈ ಸವಾಲಿಗೆ ಪ್ರತಿಪಕ್ಷ ಬಿಜೆಪಿಯಿಂದ ಯಾವುದೇ ಸವಾಲಾಗಲಿ, ಪ್ರತಿ ಸವಾಲಾಗಲಿ ಬರಲಿಲ್ಲ.

ಹೀಗಾಗಿ ಈ ಬಾರಿ ಚಳಿಗಾಲದ ಅಧಿವೇಶನದ ಬಿಸಿ ಆಡಳಿತ ಪಕ್ಷಕ್ಕಿಂತ ಪ್ರತಿಪಕ್ಷಕ್ಕೇ ಹೆಚ್ಚು ಬಿಸಿ ಮುಟ್ಟಿಸುವ ಸಾಧ್ಯತೆ ಕಾಣುತ್ತಿದೆ. ಕಾರಣ ಪಕ್ಷದ ಬತ್ತಳಿಕೆಯಲ್ಲಿ ಪಾಶುಪತಾಸ್ತ್ರದಂತಹ ಯಾವುದೇ ಅಸಗಳು ಕಾಣುತ್ತಿಲ್ಲ. ಇದರ ಮಧ್ಯೆ ನಾಯಕರಲ್ಲಿ ಸಮನ್ವಯ ಮತ್ತು ಸಮಸ್ಯೆಗಳ ಅರಿವಿನ ಕೊರತೆ ಹಾಗೂ ಜಿಲ್ಲಾ ಪ್ರವಾಸಗಳ ಕೊರತೆ, ರೈತರ ಸಮಸ್ಯೆಗಳ ವಾಸ್ತವ ಮಾಹಿತಿ ಇಲ್ಲದಿರುವು ದರಿಂದ ಹೋರಾಟದ ಪೂರ್ವ ಸಿದ್ಧತೆಯ ಸಮಸ್ಯೆ ಬಿಜೆಪಿಯನ್ನು ಕಾಡುತ್ತಿದೆ.

ಇದನ್ನೂ ಓದಿ: Vishweshwar Bhat Column: ಒಂದು ಫೋಟೋ ಹುಟ್ಟಿಸಿದ ಭೀತಿ

ಆದ್ದರಿಂದ ಬಿಜೆಪಿ ಹೋರಾಟದ ಅಸ್ತ್ರಗಳಿಲ್ಲದ ಕಂಗೆಟ್ಟಿದೆ. ಇನ್ನು ಮಿತ್ರಪಕ್ಷ ಜೆಡಿಎಸ್ ಉತ್ತರದ ಈ ರಣರಂಗದಲ್ಲಿ ಯಾವ ರೀತಿ ಕತ್ತಿ ಝಳಪಿಸುವುದೋ, ಬಿಜೆಪಿಯ ಹೋರಾಟಕ್ಕೆ ಸಾರಥಿಯಾಗು ವುದೋ ಎಂದು ಕೌತಕ ಬಿಜೆಪಿಯ ಕೆಲವು ಕೆಲವು ಶಾಸಕರದು. ಆದರೆ ನಿರಂತರ ಆಂತರಿಕ ಸಮಸ್ಯೆಗಳಿಂದ ನರಳುತ್ತಾ ಏನೂ ಆಗಿಯೇ ಇಲ್ಲ ಎನ್ನುವಂತೆ ತೋರಿಸಿಕೊಳ್ಳುತ್ತಿರುವ ಆಡಳಿತ ಪಕ್ಷಕ್ಕೆ ಪ್ರತಿಪಕ್ಷದ ಕೊರತೆಗಳು ಹೆಚ್ಚು ಅನುಕೂಲವಾಗಲಿದ್ದು, ಈ ಅಧಿವೇಶನದ ಹೆಚ್ಚಿನ ಸದ್ಬಳಕೆ ಮಾಡಿಕೊಳ್ಳಲು ಕಾಂಗ್ರೆಸ್ ಲೆಕ್ಕಾಚಾರ ಹಾಕಿದೆ.

ಅದರಲ್ಲೂ ವಿಶೇಷವಾಗಿ ಮುಂಬರುವ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗೆ ಹೆಚ್ಚಿನ ಅನುಕೂಲವಾಗುವಂತೆ ಸ್ಥಳೀಯ ಸಮಸ್ಯೆಗಳಿಗೆ ಪರಿಹಾರ ಭರವಸೆ ನೀಡಿ ಉತ್ತರ ಕರ್ನಾಟಕದ ಅಧಿವೇಶನದ ಶಾಸ್ತ್ರ ಮುಗಿಸಿಕೊಳ್ಳಲು ಕಾಂಗ್ರೆಸ್ ತಯಾರಿ ಮಾಡಿಕೊಂಡಿದೆ ಎಂದು ರಾಜಕೀಯ ವಿಶ್ಲೇಷಕರು ಹೇಳಿದ್ದಾರೆ.

ಉತ್ತರ ಕರ್ನಾಟಕದ ಸಮಸ್ಯೆಗಳು ಕೈಗೆಟುಕುತ್ತಿಲ್ಲ

ಈ ಬಾರಿ ಅಧಿವೇಶನದಲ್ಲಿ ಬಿಜೆಪಿಗೆ ಉತ್ತರ ಕರ್ನಾಟಕದ ಬಹುತೇಕ ಸಮಸ್ಯೆಗಳನ್ನು ಮುಂದಿಟ್ಟು ಹೋರಾಡಲು ಆಗುತ್ತಿಲ್ಲ. ಕಾರಣ ಬಹುತೇಕ ಸಮಸ್ಯೆಗಳು ಕೇಂದ್ರ ಸರಕಾರದ ನಿರ್ಣಯದ ಮೇಲೆ ನಿಂತಿದೆ. ವಿಶೇಷವಾಗಿ ಕೃಷ್ಣಾ ಮೇಲ್ದಂಡೆ ಯೋಜನೆಗೆ ಸಂಬಂಧಿಸಿದಂತೆ ನೆರೆ ರಾಜ್ಯಗಳು ತಕರಾರು ತೆಗೆದಿದ್ದು ಇದನ್ನು ಕೇಂದ್ರ ಸರಕಾರದ ಮಧ್ಯಸ್ಥಿಕೆಯಲ್ಲಿ ಸರಿಪಡಿಸಬೇಕಿದೆ. ಕೋರ್ಟ್ ನಲ್ಲಿರುವ ತಡೆಯಾeಯನ್ನು ಕೇಂದ್ರವೇ ತೆರವುಗೊಳಿಸಬೇಕಿದೆ. ಇದೇ ರೀತಿ ಕಳಸಾ ಬಂಡೂರಿ ಯೋಜನೆಗೆ ಕೇಂದ್ರ ಸರಕಾರದ ಪರಿಸರ ಇಲಾಖೆಯೇ ಅನುಮತಿ ನೀಡಿಲ್ಲ.

ಇನ್ನು ಕಬ್ಬು ಬೆಳೆಗಾರರ ಸಮಸ್ಯೆಗೆ ಪರಿಹಾರ ಕೇಂದ್ರದ ಇದೆ ಎಂದು ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ತೋರಿಸಿಕೊಟ್ಟಿದ್ದಾರೆ. ಹೀಗಾಗಿ ಉತ್ತರದ ಅನೇಕ ಸಮಸ್ಯೆಗಳನ್ನು ಮುಂದಿಟ್ಟು ಹೋರಾಟ ಮಾಡಲು ಬಿಜೆಪಿಗಾಗಲಿ, ಜೆಡಿಎಸ್ ಗಾಗಲಿ ಕಷ್ಟವಾಗುತ್ತಿದೆ ಎಂದು ಎರಡೂ ಪಕ್ಷಗಳ ನಾಯಕರು ಹೇಳಿದ್ದಾರೆ.

ಏನಾಗಬೇಕಿತ್ತು? ಏನಾಗಿದೆ?

ಈ ಬಾರಿ ಅಧಿವೇಶನದಲ್ಲಿ ಗ್ಯಾರಂಟಿ ಅಡ್ಡಪರಿಣಾಮ ಸೇರಿದಂತೆ ರಾಜ್ಯದ ಹತ್ತು ಹಲವು ಸಮಸ್ಯೆ ಗಳನ್ನು ಮುಂದಿಟ್ಟುಕೊಂಡು ಪ್ರತಿಪಕ್ಷ ಬಿಜೆಪಿ ಮತ್ತು ಜೆಡಿಎಸ್ ಸೇರಿಕೊಂಡು ಆಡಳಿತ ಕಾಂಗ್ರೆಸ್ ಪಕ್ಷವನ್ನು ಕಟ್ಟಿ ಹಾಕಲು ಸಜ್ಜಾಗಬೇಕಿತ್ತು. ಆದರೆ ಈಗಿನ ಸನ್ನಿವೇಶ ಹಾಗೆ ಕಾಣುತ್ತಿಲ್ಲ. ಕಾರಣ ಪ್ರತಿಪಕ್ಷದ ಬಹುತೇಕ ಹಿರಿಯ ನಾಯಕರ ಅಧಿಕಾರದ ಆಡಳಿತ ಅವಧಿಯ ಅಕ್ರಮವನ್ನು ಕಾಂಗ್ರೆಸ್ ಸರಕಾರ ತನಿಖೆ ನಡೆಸುತ್ತಿದೆ. ಇದರ ಮಧ್ಯೆ ಸದನದಲ್ಲಿರುವ ಪ್ರತಿಪಕ್ಷ ನಾಯಕ ಆರ್.ಅಶೋಕ ಹಾಗೂ ನಾಯಕರಾದ ವಿಜಯೇಂದ್ರ, ಸಿ.ಟಿ.ರವಿ, ಅಶ್ವತ್ ನಾರಾಯಣ್ ಹಾಗೂ ಸುನೀಲ್ ಕುಮಾರ್ ಸೇರಿದಂತೆ ಬಹುತೇಕರಿಗೆ ಸಂಬಂಧಿಸಿ ಅಕ್ರಮಗಳು ಹಾಗೂ ಮಾಹಿತಿಗಳನ್ನು ದಾಖಲೆಗಳನ್ನು ಕಾಂಗ್ರೆಸ್ ಸಂಗ್ರಹಿಸಿಟ್ಟುಕೊಂಡಿದೆ. ಹೀಗಾಗಿ ಆಡಳಿತ ಪಕ್ಷ ವಿರುದ್ಧ ಎರಗಲು ಕೆಲವು ನಾಯಕರು ಹಿಂದೇಟು ಹಾಕುವಂತಾಗಿದೆ ಎಂದು ಬಿಜೆಪಿ ಶಾಸಕರೇ ತಿಳಿಸಿದ್ದಾರೆ.

ಹಾಗೆ ನೋಡಿದರೆ, ಬಿಜೆಪಿ ನಾಯಕರು, ಪ್ರತಿಪಕ್ಷ ನಾಯಕರ ನೇತೃತ್ವದಲ್ಲಿ ನಿರಂತರ ಪ್ರವಾಸ ಮಾಡಬೇಕಿತ್ತು, ಇದರಿಂದ ರಾಜ್ಯದಲ್ಲಿ ತಲೆದೋರಿರುವ ಕಬ್ಬು ಬೆಳೆಗಾರರ ಸಮಸ್ಯೆ, ಮೆಕ್ಕೆಜೋಳ, ಭತ್ತ, ಟೊಮ್ಯಾಟೋ ಬೆಲೆ ಸಮಸ್ಯೆಗಳು ಸೇರಿದಂತೆ ರೈತರ ಕಣ್ಣೀರಿನ ವಾಸ್ತದ ಅರಿವಾಗುತ್ತಿತ್ತು. ಆದರೆ ಪಕ್ಷದ ನಾಯಕರು ರಾಜ್ಯ ಪ್ರವಾಸ ಮಾಡಿದಂತೆ ಕಾಣುತ್ತಿಲ್ಲ. ಇಷ್ಟೇ ಅಲ್ಲ, ಅಧಿವೇಶನಕ್ಕೂ ಪೂರ್ವದಲ್ಲಿ ಎಲ್ಲ ಜಿಲ್ಲಾ ನಾಯಕರು ಹಾಗೂ ರಾಜ್ಯ ನಾಯಕರ ನಡುವೆ ಸಭೆ ನಡೆಸಿ ಅಧಿವೇಶನಕ್ಕೆ ಬೇಕಾದ ಕಾರ್ಯತಂತ್ರ ರೂಪಿಸಬೇಕಿತ್ತು.

ಆದರೆ ಅಂಥ ಯಾವುದೇ ಸಿದ್ಧತೆ ಪ್ರತಿಪಕ್ಷದಲ್ಲಿ ಕಾಣುತ್ತಿಲ್ಲ ಎಂದು ಪಕ್ಷದ ನಾಯಕರು ಹೇಳಿದ್ದಾರೆ. ವಿಚಿತ್ರ ಎಂದರೆ ಕಬ್ಬು ಬೆಳೆಗಾರರ ಸಮಸ್ಯೆ ತಾರಕಕ್ಕೇರಿ ಟ್ಯಾಕ್ಟರ್‌ಗಳಿಗೆ ಬೆಂಕಿ ಹಚ್ಚಲಾಗಿತ್ತು. ಅಂಥ ಸ್ಥಳಗಳಿಗೂ ಬಿಜೆಪಿ ಪ್ರತಿಪಕ್ಷ ನಾಯಕರು ಭೇಟಿ ನೀಡಲಿಲ್ಲ.

ಮೆಕ್ಕೆಜೋಳ ರೈತರು ಬೀದಿಗಿಳಿದರು. ಅವರ ಅಳಲು ಕೇಳುವುದಕ್ಕೂ ಇವರು ಮುಂದಾಗಲಿಲ್ಲ. ತನ್ನದೇ ಆಸಕ್ತಿ ವಿಚಾರವಾದ ಒಳಮೀಸಲು ಹೋರಾಟ ಅಂತಿಮವಾಗಿಲ್ಲ. ಅದರ ಬಗ್ಗೆಯೂ ಚಕಾರ ಎತ್ತಲಿಲ್ಲ ಪಕ್ಷದ ಕೆಲವು ಮುಖಂಡರು ಹೇಳಿದ್ದಾರೆ.