ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಬುರುಡೆ ಪ್ರಕರಣ: ದಿಕ್ಕು ತಪ್ಪಿತೇ ಎಸ್‌ಐಟಿ ತನಿಖೆ?

ವಿಚಾರಣೆಯ ವೇಳೆ ಚಿನ್ನಯ್ಯ ಸಹ ತಿಮರೋಡಿ ಗ್ಯಾಂಗ್ ಹೇಳಿಕೊಟ್ಟಿದ್ದ ಗಿಳಿಪಾಠ ಮಾತ್ರ ನಾನು ಹೇಳಿದ್ದೇನೆ ಎನ್ನುವುದನ್ನು ಒಪ್ಪಿಕೊಂಡಿದ್ದ. ಬಳಿಕ ತಿಮರೋಡಿ ನಿವಾಸದಲ್ಲಿ ನಡೆದ ಸ್ಥಳ ಮಹಜರಿನ ವೇಳೆಯೂ ಷಡ್ಯಂತ್ರದಲ್ಲಿ ತಿಮರೋಡಿ ಹಾಗೂ ಮಟ್ಟಣ್ಣನವರ್ ಪಾತ್ರವಿರುವುದು ಸ್ಪಷ್ಟವಾಗಿತ್ತು. ಇಷ್ಟೆಲ್ಲ ಸಾಕ್ಷ್ಯವಿದ್ದರೂ ಈವರೆಗೂ ಈ ಇಬ್ಬರ ವಿರುದ್ಧ ಕ್ರಮ ವಹಿಸದೇ ಇರುವುದು ಏಕೆ? ಎನ್ನುವ ಸಂದೇಹ ಜನರಲ್ಲಿ ಮೂಡಿದೆ.

ರಂಜಿತ್ ಎಚ್. ಅಶ್ವತ್ಥ ಬೆಂಗಳೂರು

ವಿಚಾರಣೆಗೆ ರಚನೆಯಾದ ಎಸ್‌ಐಟಿ ತನಿಖೆಯ ಹಾದಿ ಬಗ್ಗೆಯೇ ಸಾರ್ವಜನಿಕರಲ್ಲಿ ಅನುಮಾನ

ರಾಷ್ಟ್ರಮಟ್ಟದಲ್ಲಿ ತೀವ್ರ ವಿವಾದಕ್ಕೆ ಕಾರಣವಾಗಿದ್ದ ಬುರುಡೆ ಪ್ರಕರಣದ ಷಡ್ಯಂತ್ರದ ಬಗ್ಗೆ ಸ್ಪಷ್ಟ ಸಾಕ್ಷ್ಯವಿದ್ದರೂ ಎಸ್‌ಐಟಿ ಅಧಿಕಾರಿಗಳು ಆ ದಿಕ್ಕಿನಲ್ಲಿ ತನಿಖೆ ನಡೆಸುವಲ್ಲಿ ‘ತಡ’ ಮಾಡುತ್ತಿರು ವುದು ಸಾರ್ವಜನಿಕ ವಲಯದಲ್ಲಿ ಹಲವು ಸಂದೇಹಗಳನ್ನು ಹುಟ್ಟು ಹಾಕಿದೆ.

ಧರ್ಮಸ್ಥಳ ಹಾಗೂ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಕುಟುಂಬದ ವಿರುದ್ಧ ಷಡ್ಯಂತ್ರದ ಭಾಗವಾಗಿ ನಡೆದಿದ್ದ ಬುರುಡೆ ಕಥೆಗೆ ತಾರ್ತಿಕ ಅಂತ್ಯ ನೀಡುವುದಾಗಿ ರಾಜ್ಯ ಸರಕಾರ ಹೇಳುತ್ತಿದೆ ಯಾದರೂ ಇತ್ತೀಚಿನ ದಿನಗಳಲ್ಲಿ ಎಸ್‌ಐಟಿಯ ತನಿಖಾ ಮಾರ್ಗ ಸಾರ್ವಜನಿಕರಿಗೆ ಸಂದೇಹ ಮೂಡುವಂತೆ ಮಾಡಿದೆ.

ಆರಂಭದಲ್ಲಿ ಮಾಸ್ಕ್ ಮ್ಯಾನ್ ಚಿನ್ನಯ್ಯ ತಂದಿದ್ದ ಬುರುಡೆ ಹಾಗೂ ನೂರಾರು ಶವಗಳನ್ನು ಹೂತ್ತಿರುವ ಆರೋಪದ ತನಿಖೆಗೆ ರಾಜ್ಯ ಸರಕಾರ ಪ್ರಣಬ್ ಮೊಹಂತಿ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಿತ್ತು. ಸರಕಾರದ ಈ ನಡೆಗೆ ಸ್ವತಃ ವೀರೇಂದ್ರ ಹೆಗ್ಗಡೆ ಸೇರಿದಂತೆ ಧರ್ಮಸ್ಥಳ ಪರವಾಗಿರುವವರೂ ಸ್ವಾಗತಿಸಿದ್ದರು. ಬಳಿಕ 16 ಗುಂಡಿಗಳನ್ನು ತೋಡಿದ ಬಳಿಕ, ಧರ್ಮಸ್ಥಳದ ವಿರುದ್ಧ ಷಡ್ಯಂತ್ರದ ಭಾಗವಾಗಿ ಬುರುಡೆ ಬಿಟ್ಟಿರುವುದು ಸ್ಪಷ್ಟವಾಗಿತ್ತು.

ಬಳಿಕ ಮಾಸ್ಕ್ ಮ್ಯಾನ್ ಚಿನ್ನಯ್ಯನನ್ನು ವಿಚಾರಣೆ ಒಳಪಡಿಸಿದಾಗ ಇಡೀ ಷಡ್ಯಂತ್ರದ ಹಿಂದೆ ಮಹೇಶ್ ತಿಮರೋಡಿ, ಗಿರೀಶ್ ಮಟ್ಟಣ್ಣನವರ್ ಹಾಗೂ ಇನ್ನಿತರರು ಇರುವುದು ಬಹಿರಂಗ ವಾಗಿತ್ತು.

ಇದನ್ನೂ ಓದಿ: Ranjith H Ashwath Column: ಮಾಹಿತಿಯಿಲ್ಲದಿದ್ದರೂ ವೈಜ್ಞಾನಿಕ ಸಮೀಕ್ಷೆಯೇ ?!

ವಿಚಾರಣೆಯ ವೇಳೆ ಚಿನ್ನಯ್ಯ ಸಹ ತಿಮರೋಡಿ ಗ್ಯಾಂಗ್ ಹೇಳಿಕೊಟ್ಟಿದ್ದ ಗಿಳಿಪಾಠ ಮಾತ್ರ ನಾನು ಹೇಳಿದ್ದೇನೆ ಎನ್ನುವುದನ್ನು ಒಪ್ಪಿಕೊಂಡಿದ್ದ. ಬಳಿಕ ತಿಮರೋಡಿ ನಿವಾಸದಲ್ಲಿ ನಡೆದ ಸ್ಥಳ ಮಹಜರಿನ ವೇಳೆಯೂ ಷಡ್ಯಂತ್ರದಲ್ಲಿ ತಿಮರೋಡಿ ಹಾಗೂ ಮಟ್ಟಣ್ಣನವರ್ ಪಾತ್ರವಿರುವುದು ಸ್ಪಷ್ಟವಾಗಿತ್ತು. ಇಷ್ಟೆಲ್ಲ ಸಾಕ್ಷ್ಯವಿದ್ದರೂ ಈವರೆಗೂ ಈ ಇಬ್ಬರ ವಿರುದ್ಧ ಕ್ರಮ ವಹಿಸದೇ ಇರುವುದು ಏಕೆ? ಎನ್ನುವ ಸಂದೇಹ ಜನರಲ್ಲಿ ಮೂಡಿದೆ.

ಚಿನ್ನಯ್ಯ ಮಾತ್ರ ಜೈಲಿಗೆ: ಚಿನ್ನಯ್ಯನ ಹೇಳಿಕೆ ಆಧರಿಸಿ ಗಿರೀಶ್ ಮಟ್ಟಣ್ಣನವರ್, ಮಹೇಶ್ ತಿಮರೋಡಿಗೆ ಎಸ್‌ಐಟಿ ನೋಟಿಸ್ ನೀಡಿದ್ದು, ಮಟ್ಟಣ್ಣನವರ್ ವಿಚಾರಣೆಗೂ ಹಾಜರಾಗಿದ್ದಾನೆ. ಷಡ್ಯಂತ್ರದಲ್ಲಿ ಆತನ ಪಾಲಿದೆ ಎನ್ನುವುದು ಎಸ್‌ಐಟಿ ಅಧಿಕಾರಿಗಳಿಗೆ ಮನವರಿಕೆಯಾಗಿದ್ದರೂ ಆತನನ್ನು ವಶಕ್ಕೆ ಪಡೆಯದೇ ಇರಲು ಕಾರಣವೇನು ಎನ್ನುವ ಪ್ರಶ್ನೆ ಅನೇಕರಿಗಿದೆ.

ಇದೇ ರೀತಿ ವಿಚಾರಣೆಗೆ ಹಾಜರಾಗುವಂತೆ ಸರಣಿ ನೋಟಿಸ್ ಕೊಟ್ಟರೂ ತಿಮರೋಡಿ ವಿರುದ್ಧ ಪೊಲೀಸರು ಯಾವುದೇ ಕ್ರಮ ವಹಿಸಿಲ್ಲ. ಇದೇ ರೀತಿ ಎಐ ಮೂಲಕ ವಿಡಿಯೊಗಳನ್ನು ಸೃಷ್ಟಿಸಿ, ಜನರನ್ನು ನಂಬಿಸಿದ್ದ ಯೂಟ್ಯೂಬರ್ ಸಮೀರ್‌ನನ್ನು ವಿಚಾರಣೆಗೆ ಮಾತ್ರ ಸೀಮಿತಗೊಳಿಸಲು ಕಾರಣವೇನು? ಈ ಎಲ್ಲರೂ ಷಡ್ಯಂತ್ರದ ಭಾಗವಾಗಿರುವುದಕ್ಕೆ ಸ್ಪಷ್ಟ ದಾಖಲೆಗಳಿದ್ದರೂ ಎಸ್‌ಐಟಿ ಈ ಮೂವರನ್ನು ಹೊರಗೆ ತಿರುಗಾಡಿಕೊಂಡಿರಲು ಅವಕಾಶ ನೀಡಿರುವುದೇಕೆ? ಅವರನ್ನು ಬಂಧಿಸದೇ ಕೇವಲ ಚಿನ್ನಯ್ಯನನ್ನು ಮಾತ್ರ ಬಂಧಿಸಿರುವುದು ಏಕೆ? ಎನ್ನುವ ಪ್ರಶ್ನೆಗಳು ಸಾರ್ವ ಜನಿಕ ವಲಯದಲ್ಲಿ ಶುರುವಾಗಿವೆ.

ಯಾವುದೇ ಒತ್ತಡಕ್ಕೆ ಮಣಿಯದೇ ತಪ್ಪಿತಸ್ಥರ ವಿರುದ್ಧ ಕ್ರಮ ವಹಿಸುವುದಾಗಿ ಸರಕಾರ ಹೇಳುತ್ತಿದ್ದರೂ ಎಸ್‌ಐಟಿಯ ವಿಚಾರಣೆಯ ದಿಕ್ಕು ದಿನದಿಂದ ದಿನಕ್ಕೆ ‘ತಿರುವು’ ಪಡೆಯುತ್ತಿದೆ. ತಿಮರೋಡಿ ಗ್ಯಾಂಗ್ ಷಡ್ಯಂತ್ರ ಮಾಡಿರುವುದಕ್ಕೆ ದಾಖಲೆಗಳಿದ್ದರೂ ಆ ಆಯಾಮದಲ್ಲಿ ವಿಶೇಷ ತನಿಖಾ ತಂಡ ಏಕೆ ಕೆಲಸ ಮಾಡುತ್ತಿಲ್ಲ? ತಿಮರೋಡಿ ಗ್ಯಾಂಗ್ ವಿರುದ್ಧ ಕ್ರಮವಹಿಸುವ ಬದಲು, ಆ ತಂಡದಿಂದ ಹೊಸದಾಗಿ ಬರುವ ‘ಕಥೆ’ಗಳನ್ನು ಮುಂದಿಟ್ಟುಕೊಂಡು ತನಿಖೆ ನಡೆಸುವ ಉತ್ಸಾಹವನ್ನು ನೋಡಿರುವ ಸಾರ್ವಜನಿಕರು ಎಸ್‌ಐಟಿಯನ್ನು ಸಂದೇಹದ ಕಣ್ಣಿನಿಂದ ನೋಡುತ್ತಿದ್ದಾರೆ.

ವೀರೇಂದ್ರ ಹೆಗ್ಗಡೆ ಕ್ಷಮೆ ಕೇಳುವೆ: ಸುಜಾತಾ ಭಟ್

ಅನನ್ಯ ಭಟ್ ಎಂಬ ಕಾಲ್ಪನಿಕ ಪಾತ್ರವನ್ನು ಸೃಷ್ಟಿಸಿ, ತನ್ನ ಮಗಳು ನಾಪತ್ತೆಯಾಗಿದ್ದಾಳೆ ಎಂದು ದೂರು ನೀಡಿದ್ದ ಸುಜಾತಾ ಭಟ್, ಇದೀಗ ಪ್ರಕರಣದಲ್ಲಿ ತಾನು ತಪ್ಪು ಮಾಡಿದ್ದು ಈ ಬಗ್ಗೆ ಕ್ಷಮೆ ಕೇಳುತ್ತೇನೆ. ನನ್ನ 60 ವರ್ಷದ ಜೀವನದಲ್ಲಿ ಇದೊಂದು ನನಗೆ ಕಪ್ಪು ಚುಕ್ಕಿ ಎಂದು ಹೇಳಿದ್ದಾರೆ. ಮುಂದೆ ಉತ್ತಮ ಜೀವನ ನಡೆಸುವ ಆಸೆಯಿದೆ. ಧರ್ಮಸ್ಥಳಕ್ಕೆ ಹೋಗಿ ತಪ್ಪು ಕಾಣಿಕೆ ಹಾಕುತ್ತೇನೆ, ಧರ್ಮಸ್ಥಳಕ್ಕೆ ಹೋಗಿ ಕಲ್ಲು ಒಡೆಯುತ್ತೇನೆ. ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಿ ಕ್ಷಮೆ ಕೇಳುತ್ತೇನೆ ಎಂದು ಹೇಳಿದ್ದಾರೆ. ನಟನ ಸೋದರನಿಗೂ ನನಗೂ ಯಾವುದೇ ಸಂಬಂಧವಿಲ್ಲ, ನಟನ ಸೋದರನ ಮನೆಯಲ್ಲಿ ವಾಸಂತಿ ಇರಬಹುದು ಎಂಬ ಶಂಕೆ ನನಗಿದೆ. ಅದನ್ನು ಎಸ್‌ಐಟಿ ತನಿಖೆ ವೇಳೆ ಹೇಳಿದ್ದೇ, ಅವರು ತನಿಖೆ ಮಾಡಬಹುದು. ನಾನು ತಪ್ಪು ಮಾಡಿ ಬಿಟ್ಟೆ. ಕೆಲವರ ಮಾತು ಕೇಳಿ ಕೆಟ್ಟಿದ್ದೇನೆ. ನನ್ನ ಜೀವನವೇ ಹಾಳಾಗಿ ಹೋಯಿತು. ದೇವರ ಬಳಿ ಕ್ಷಮೆ ಕೇಳುವೆ ಎಂದು ಹೇಳಿದ್ದಾರೆ.

*

ಶೀಘ್ರವೇ ಧರ್ಮಸ್ಥಳಕ್ಕೆ ಹೋಗುತ್ತೇನೆ. ದೇವಸ್ಥಾನದ ಮುಂದೆ ದೀರ್ಘದಂಡ ನಮಸ್ಕಾರ ಹಾಕುತ್ತೇನೆ. ಪಾಪಪ್ರಜ್ಞೆ ನನ್ನನ್ನು ಕಾಡುತ್ತಿದೆ. ಅನನ್ಯ ಭಟ್ ನನ್ನ ಮಗಳು ಎಂದು ಸುಳ್ಳು ಹೇಳಿದೆ. ಸುಳ್ಳಿನ ಮೇಲೆ ಸುಳ್ಳು ಸೃಷ್ಟಿಸಿದೆ. ನನ್ನದು ಸ್ವಲ್ಪ ಜಮೀನಿನ ವಿಚಾರವಿತ್ತು. ಹೀಗಾಗಿ ನಾನು ತಪ್ಪು ಮಾಡಿದ್ದೇನೆ. ಬುರುಡೆ ಗ್ಯಾಂಗ್‌ಗೂ ನನಗೂ ಯಾವುದೇ ಸಂಬಂಧವಿಲ್ಲ. ಅವರ ಮಾತು ಕೇಳಿಯೇ ನಾನು ಕೆಟ್ಟೆ. ಇನ್ನು ನನ್ನ ಮನೆ ಬಾಗಿಲಿಗೆ ಅವರು ಬಂದರೂ ನಾನು ಒಳಗೆ ಬಿಡಲ್ಲ.

-ಸುಜಾತಾ ಭಟ್

*

ತಿಮರೋಡಿ ಗ್ಯಾಂಗ್‌ನ ಷಡ್ಯಂತ್ರದ ಬಗ್ಗೆ ಸಾಕ್ಷ್ಯವಿದ್ದರೂ ಕ್ರಮ ವಹಿಸದ ಎಸ್‌ಐಟಿ

ಗಿರೀಶ್ ಮಣ್ಣಟ್ಟಣವರ್, ಸಮೀರ್ ವಿರುದ್ಧ ಸಾಕ್ಷ್ಯವಿದ್ದರೂ ವಿಚಾರಣೆಗೆ ಸೀಮಿತ

ನೋಟಿಸ್ ನೀಡಿದರೂ ವಿಚಾರಣೆಗೆ ಬಾರದ ತಿಮರೋಡಿ ವಿರುದ್ಧ ಕ್ರಮವಿಲ್ಲವೇಕೆ?

ರಂಜಿತ್​ ಎಚ್​ ಅಶ್ವತ್ಥ್

View all posts by this author