ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಅರ್ಧ ಸೆಂಚುರಿ ಹೊಡೆದರೂ ಅಪ್ರಸ್ತುತವಾಗದ ಬೂತಯ್ಯ..!

ಗೊರೂರು ರಾಮಸ್ವಾಮಿ ಅಯ್ಯಂಗಾರರ ‘ವಯ್ಯಾರಿ’ ಎಂಬ ಕಥೆಯನ್ನಾಧರಿಸಿದ, ಸಿದ್ದಲಿಂಗಯ್ಯ ನವರ ನಿದೇರ್ಶನದ ಈ ಚಿತ್ರ ಬಿಡುಗಡೆಯಾಗಿದ್ದು 1974ರ ಫೆಬ್ರವರಿ ೨ರಂದು. ಅಂದರೆ, ಬರೋಬ್ಬರಿ 50 ವರ್ಷಗಳನ್ನು ದಾಟಿದ್ದರೂ ಅಪ್ರಸ್ತುತವಾಗಿಲ್ಲ ಎಂಬುದೇ ಈ ಚಿತ್ರದ ವಿಶೇಷ.

ಚಲನಚಿತ್ರಗಳನ್ನು ಕಟ್ಟಿಕೊಡುವವರಲ್ಲಿ ಒಂದಷ್ಟು ವಿಧಗಳಿವೆ. ಎರಡು ಫೈಟು, ಮೂರು ಹಾಡು, ಕಣ್ಣೀರಕೋಡಿ ಹರಿಸುವ ದೃಶ್ಯಗಳು, ಮಧ್ಯೆ ಒಂದಿಷ್ಟು ಕಾಮಿಡಿ ಟ್ರ್ಯಾಕು- ಹೀಗೆ ಸಿದ್ಧಸೂತ್ರ ಗಳನ್ನಿಟ್ಟುಕೊಂಡವರು, ಸಿಗುವ ಸಬ್ಸಿಡಿಯ ಆಸೆಗೋ ಅಥವಾ ವಾಹಿನಿಗಳಿಗೆ ಮಾರಿಕೊಳ್ಳುವ ತೆವಲಿಗೋ ಬಿದ್ದು, ಯಾವುದೋ ಅಥವಾ ಯಾರದೋ ದಾಕ್ಷಿಣ್ಯಕ್ಕೆ ‘ಸಂತೆ ಹೊತ್ತಿಗೆ ಮೂರು ಮೊಳ’ ನೆಯ್ದಂತೆ ಚಿತ್ರ ತೆಗೆದು ಅದನ್ನು ಬಡಪಾಯಿ ಪ್ರೇಕ್ಷಕರ ಮೇಲೆ ಹೇರುವವರು, ‘ನಮಗೆ ಪ್ರೇಕ್ಷಕರ ಹಂಗಿಲ್ಲ, ರಾಷ್ಟ್ರಪ್ರಶಸ್ತಿ ಸಿಕ್ಕರೆ’ ಸಾಕು ಎಂಬ ಧೋರಣೆಯವರು ಹೀಗೆ ನಮ್ಮ ಚಿತ್ರರಂಗ ದಲ್ಲಿ ಸಾಕಷ್ಟು ಭಿನ್ನ ‘ಅಭಿರುಚಿ’ಗಾರರು ಸಿಗುತ್ತಾರೆ. ಇಷ್ಟಾಗಿಯೂ, ಚಲನಚಿತ್ರ ಕಟ್ಟೋಣವನ್ನು ಬದುಕಿನ ಉಸಿರಿನಂತೆ, ಮನೆಮಗುವಿನಂತೆ ಪೋಷಿಸಿದವರೂ ಇದ್ದಾರೆ. ಇಂಥ ಚಿತ್ರಗಳನ್ನು ಹುಡುಕಿದಾಗ ಎದ್ದು ಕಾಣುವ ಹೆಸರು ‘ಬೂತಯ್ಯನ ಮಗ ಅಯ್ಯು’.

ಗೊರೂರು ರಾಮಸ್ವಾಮಿ ಅಯ್ಯಂಗಾರರ ‘ವಯ್ಯಾರಿ’ ಎಂಬ ಕಥೆಯನ್ನಾಧರಿಸಿದ, ಸಿದ್ದಲಿಂಗಯ್ಯ ನವರ ನಿದೇರ್ಶನದ ಈ ಚಿತ್ರ ಬಿಡುಗಡೆಯಾಗಿದ್ದು 1974ರ ಫೆಬ್ರವರಿ ೨ರಂದು. ಅಂದರೆ, ಬರೋಬ್ಬರಿ 50 ವರ್ಷಗಳನ್ನು ದಾಟಿದ್ದರೂ ಅಪ್ರಸ್ತುತವಾಗಿಲ್ಲ ಎಂಬುದೇ ಈ ಚಿತ್ರದ ವಿಶೇಷ. ವಿಷ್ಣುವರ್ಧನ್, ಎಂ.ಪಿ. ಶಂಕರ್, ಲೋಕೇಶ್, ಲೋಕನಾಥ್, ಬಾಲಕೃಷ್ಣ, ಭವಾನಿ, ದಿನೇಶ್, ಧಿರೇಂದ್ರ ಗೋಪಾಲ್ ಮುಂತಾದವರ ತಾರಾಗಣವಿದ್ದ ಈ ಚಿತ್ರ ಹಾಡು-ಹಾಸ್ಯ-ಫೈಟು-ಡಾನ್ಸ್‌ ನಂಥ ಕಮರ್ಷಿಯಲ್ ಅಂಶಗಳನ್ನು ಒಳಗೊಂಡಿದ್ದೂ ‘ಕ್ಲಾಸಿಕ್’ ಎನಿಸಿಕೊಂಡಿದೆ. ಗುಪ್ತ ಗಾಮಿನಿಯಾಗಿ ಹಲವು ಸ್ತರದಲ್ಲಿ ಹರಿಯುವ ಸಾಮಾಜಿಕ ಸಂದೇಶಗಳು ಚಿತ್ರದಲ್ಲಿ ಕೆನೆಗಟ್ಟಿರು ವುದೇ ಇದಕ್ಕೆ ಕಾರಣ.

ಇದನ್ನೂ ಓದಿ: Yagati Raghu Naadig Column: ನಳಪಾಕನ ಸಂಚನ್ನು ಗ್ರಹಿಸಿ ಜಾಗೃತಳಾದ ಶಾರದೆ

ಇಲ್ಲಿ, ‘ಊರಿನ ಮಿಕ್ಕ ಜನರನ್ನು ಬಂದೂಕಿನ ಹೆದರಿಕೆಯಲ್ಲಿಟ್ಟು ಕೊಂಡಿದ್ದರೆ ಮಾತ್ರವೇ ನಿನ್ನ ಅಸ್ತಿತ್ವ ಉಳಿಯಲು ಸಾಧ್ಯ’ ಎಂದು ಮಗ ಅಯ್ಯುವಿಗೆ ದುರ್ಬೋಧನೆ ಮಾಡುವ ಬೂತಯ್ಯನೂ ಇದ್ದಾನೆ, ‘ಪ್ರೀತಿ- ವಿಶ್ವಾಸಗಳೇ ಮಾನವ ಅಸ್ತಿತ್ವಕ್ಕೆ ಮೂಲಾಧಾರ, ಜನರ ವಿಶ್ವಾಸಕ್ಕೆ ಯಾವತ್ತಿಗೂ ಸಂಚಕಾರ ತಂದುಕೊಳ್ಳಬೇಡ’ ಎಂದು ಮಗ ಗುಳ್ಳನಿಗೆ ಉಪದೇಶಿಸುವ ದೇವಯ್ಯನೂ ಇದ್ದಾನೆ. ಬೂತಯ್ಯನ ಮನೆ ಬಳಿಯ ಮರದ ನೆರಳಲ್ಲಿ ಚಪ್ಪಲಿ ಹೊಲಿಯುವ ಅವಕಾಶ ಸಿಕ್ಕಿದೆ ಎಂಬ ಕಾರಣಕ್ಕೆ, ಬೂತಯ್ಯನ ಚಪ್ಪಲಿ ಹೊಲಿದುಕೊಟ್ಟಾಗಲೂ ದುಡ್ಡುಕೇಳಬಾರದಂಥ ನಿರ್ಬಂಧಕ್ಕೆ -ಭಯಕ್ಕೆ ಒಳಗಾಗಿರುವ ಚಮ್ಮಾರನೂ ಇದ್ದಾನೆ.

ಇನ್ನು, ‘ಮನೆ ಅಥವಾ ಊರು ಎಂದ ಮೇಲೆ ಹುಟ್ಟಿಕೊಳ್ಳಬಹುದಾದ ಸಣ್ಣಪುಟ್ಟ ಜಗಳಗಳನ್ನು ನಾವು ನಾವೇ ಇತ್ಯರ್ಥ ಮಾಡಿಕೊಳ್ಳಬೇಕು; ಕೋರ್ಟ್ ಮೆಟ್ಟಿಲೇರಿದರೆ ಅಸ್ತವ್ಯಸ್ತವಾಗುವುದು ನಮ್ಮ ಬಾಳೇ’ ಎಂಬ ಸರಳಸತ್ಯವನ್ನೂ ‘ಕೋರ್ಟಲ್ಲಿ ಗೆದ್ದೋನು ಸೋತ, ಸೋತೋನು ಸತ್ತ’ ಎಂಬ ಅಪ್ರಿಯ ಸತ್ಯವನ್ನೂ ನೋಡುಗರ ಮನದಾಳದಲ್ಲಿ ಪರಿಣಾಮಕಾರಿಯಾಗಿ ಹುದುಗಿಸುವಲ್ಲಿ ಗೊರೂರರ ಕಥೆ, ಸಿದ್ದಲಿಂಗಯ್ಯ ನವರ ಚಿತ್ರಕಥೆಗಳು ಔನ್ನತ್ಯ ಮೆರೆದಿವೆ ಎನ್ನಲಡ್ಡಿಯಲ್ಲ. ಇದರ ಪರಮಾವಧಿ ಕಾಣಬರುವುದು ಗುಳ್ಳನ ಜತೆಗೆ ನ್ಯಾಯಾಲಯಕ್ಕೆ ಅಂಡಲೆಯಬೇಕಾಗಿ ಬರುವ ನಾಲ್ವರು ಸಹಚರರ ದೃಶ್ಯದಲ್ಲಿ. ಊಟಕ್ಕೂ ದುಡ್ಡಿಲ್ಲದೆ ‘ಫ್ಲೋಲ್‌ಮೀಲ್ಸ್’ನ ಒಂದೇ ಟೋಕನ್ ಪಡೆದು, ಅದರಲ್ಲೇ ಈ ನಾಲ್ವರೂ ಗಡದ್ದಾಗಿ ಊಟಮಾಡುವಂಥ ಭಂಡತನ ತೋರುವ ಈ ಸನ್ನಿವೇಶದ ಚಿತ್ರಣ ನೋಡುಗರಲ್ಲಿ ನಗೆಯುಕ್ಕಿಸಿದರೂ, ಜಗಳವನ್ನು ಮೊಳಕೆಯಲ್ಲೇ ಚಿವುಟ ದಿದ್ದರೆ ಅದರ ವ್ಯತಿರಿಕ್ತ ಪರಿಣಾಮಕ್ಕೆ ಯಾರೆಲ್ಲ ಪಾಲುದಾರರಾಗಬೇಕಾಗುತ್ತದೆ ಎಂಬುದನ್ನು ನಮುಟ್ಟುವಂತೆ ಹಿಡಿದಿಟ್ಟಿದೆ.

ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯವಂತೂ ನಿರ್ದೇಶಕರ ಕಸುಬುದಾರಿಕೆಗೆ ಹಿಡಿದ ಕೈಗನ್ನಡಿಯೇ. ತಂತ್ರಜ್ಞಾನ ಮುಂದುವರಿದಿರುವ, ತಾಂತ್ರಿಕ ಸಲಕರಣೆಗಳ ಲಭ್ಯತೆಹೇರಳವಾಗಿರುವ ಈಗಿನ ಕಾಲಘಟ್ಟದಲ್ಲಿ, ಹಡಗು ಮುಳುಗುವ ‘ಟೈಟಾನಿಕ್’ನಂಥ ಚಿತ್ರವನ್ನು ತೆಗೆಯುವುದು ಕಷ್ಟವೇನಲ್ಲ. ಆದರೆ, ‘ಬೂತಯ್ಯ...’ ಚಿತ್ರದಲ್ಲಿ ಅಂಥ ಯಾವ ಪರಿಕರಗಳ ನೆರವಿಲ್ಲದೆಯೇ ಕಲಾವಿದರು-ತಂತ್ರಜ್ಞರ ಇಚ್ಛಾಶಕ್ತಿಯನ್ನೇ ಅಸ್ತ್ರವಾಗಿಸಿಕೊಂಡು ನಿರ್ದೇಶಕರು ತಮ್ಮ ಕಲ್ಪನೆಯ ಮೂಸೆಯಲ್ಲಿ ರೂಪಿಸಿರುವ ಕ್ಲೈಮ್ಯಾಕ್ಸ್ ದೃಶ್ಯವನ್ನು ಕಣ್ತುಂಬಿಕೊಂಡಾಗ ಎಂಥವರಿಗೂ ಮೈ ‘ಝುಂ’ ಎನ್ನಿಸುತ್ತದೆ. ಅಯ್ಯುವಿನ ಹೆಂಡತಿ-ಮಕ್ಕಳು ಪ್ರವಾಹದಲ್ಲಿ ಸಿಲುಕಿರುವ ತೋಟದ ಮನೆಯಲ್ಲಿ ರುವ ಸಂಗತಿ ಹೆಂಡತಿಯಿಂದ ಗೊತ್ತಾಗುತ್ತಿದ್ದಂತೆ, ಅಯ್ಯು ತನ್ನ ಬದ್ಧವೈರಿಯಾಗಿದ್ದರೂ ಶತ್ರುತ್ವ ವನ್ನು ಕಿತ್ತೊಗೆಯುವ ಗುಳ್ಳ ತನ್ನ ಜೀವಕ್ಕೊದಗುವ ಅಪಾಯವನ್ನೂ ಲೆಕ್ಕಿಸದೆ ಅಯ್ಯು ವಿನ ಹೆಂಡತಿ-ಮಕ್ಕಳನ್ನು ಬದುಕಿಸಲು ಹರಸಾಹಸ ಪಡುತ್ತಾನೆ. ಪಶುಸದೃಶ ದ್ವೇಷಕ್ಕಿಂತ, ಮಾನವ ಸಹಜ ಮಾನವೀಯತೆ ಯಾವತ್ತಿಗೂ ಉನ್ನತವಾದದ್ದು ಎಂಬ ಸಂದೇಶ ಸಾರುವ ಈ ದೃಶ್ಯ ನಿಜಕ್ಕೂ ಮುಕುಟಮಣಿ.

ಮಿಕ್ಕಂತೆ, ಜನವಿರೋಧಿ ಬೂತಯ್ಯ ಸತ್ತಾಗ ಹೆಣ ಹೊರುವವರೂ ಸಿಗದೆ ಅನುಭವಿಸಬೇಕಾಗಿ ಬರುವ ಪಡಿಪಾಟಲು, ಅದೇ ಜನಾನುರಾಗಿ ದೇವಯ್ಯ ಸತ್ತಾಗ ಊರಿಗೆ ಊರೇ ಶವಯಾತ್ರೆಯ ಜತೆಗೆ ಸಾಗುವುದು (ಹಿನ್ನೆಲೆಯಲ್ಲಿ ‘ರಘುಪತಿ ರಾಘವ ರಾಜಾರಾಂ’ ಗೀತೆಯ ಸಂಗೀತ ಬರುವುದು), ಭಂಗಿ ಸೇದಲು ಕಾಸು ಹೊಂದಿಸಲು ದಿನೇಶ್ ತನ್ನ ಹೆಂಡತಿಯ ಸೀರೆಯುಟ್ಟು ಹಸುವಿನ ಕಾಲು ಕರೆಯಲು ಹೋಗಿ ಅದರಿಂದ ಒದೆಸಿಕೊಂಡು ಕರೆದ ಹಾಲನ್ನೂ ಚೆಲ್ಲಿಕೊಳ್ಳುವುದು, ಕೇಸಿಲ್ಲದೆ ನೊಣ ಹೊಡೆಯುತ್ತಿದ್ದರೂ ಕಕ್ಷಿಗಾರ ಬಂದಿದ್ದು ಗೊತ್ತಾಗುತ್ತ ಲೇ ಒಳಗಿನಿಂದ ಕಾನೂನು ಪುಸ್ತಕ ಓದಿಕೊಂಡೇ ಬರುತ್ತ ಮನೆಬಾಗಿಲು ತೆರೆದು ಪೋಸು ಕೊಡುವ ತರಲೆ ವಕೀಲ, ಉದ್ರಿಕ್ತ ಊರ ಜನ ಬೂತಯ್ಯನ ಮನೆಗೆ ಬೆಂಕಿ ಹಚ್ಚಿ ಸಿಕ್ಕಸಿಕ್ಕದನ್ನೆಲ್ಲ ಲೂಟಿ ಹೊಡೆದುಕೊಂಡು ಹೋಗುವಾಗ, ಉಪ್ಪಿನಕಾಯಿ ಜಾಡಿಯನ್ನು ಲಪಟಾಯಿಸುವ ಮನೆಮುಂದಿನ ಚಮ್ಮಾರ- ಹೀಗೆ ಮಾನವ ಸ್ವಭಾವದ ವಿವಿಧ ಮುಖಗಳನ್ನು ಅನಾವರಣಗೊಳಿಸುತ್ತದೆ ‘ಬೂತಯ್ಯನ ಮಗ ಅಯ್ಯು’.

ಕೆಲವು ಚಲನಚಿತ್ರಗಳು ಕಾಲ ಸರಿದಂತೆ ಮಸುಕಾಗಿ ಬಿಡುತ್ತವೆ. ಆದರೆ ಯಾವ ಕಾಲಘಟ್ಟದಲ್ಲಿ ನೋಡಿದರೂ ‘ಇದು ಇಂದಿಗೂ ಪ್ರಸ್ತುತ’ ಎಂಬ ಅನುಭೂತಿಯನ್ನು ನೋಡುಗರಲ್ಲಿ ಸುರಿಸುವ ಚಿತ್ರವಿದು. ನೀವಿದನ್ನು ಒಂದೊಮ್ಮೆ ಇನ್ನೂ ನೋಡಿಲ್ಲದಿದ್ದರೆ ‘ಕ್ಲಾಸಿಕ್’ ಚಿತ್ರವೊಂದನ್ನು ಮಿಸ್ ಮಾಡಿಕೊಂಡಿದ್ದೀರಿ ಎಂದೇ ಅರ್ಥ!

ಯಗಟಿ ರಘು ನಾಡಿಗ್

View all posts by this author