ವಿನುತಾ ಹೆಗಡೆ ಶಿರಸಿ
ಕರಾವಳಿ ಹಾಗೂ ಮಲೆನಾಡಿನ ಸೊಬಗಿನ ನೆಲೆವೀಡಾದ ಉತ್ತರ ಕನ್ನಡ ಜಿಲ್ಲೆ ಇಂದು ಅಕ್ಷರಶಃ ಅಶಾಂತಿ ಮತ್ತು ಆತಂಕದ ಸುಳಿಯಲ್ಲಿ ಸಿಲುಕಿದೆ. ನೈಸರ್ಗಿಕ ಸಂಪತ್ತು ಮತ್ತು ಪಶ್ಚಿಮ ಘಟ್ಟದ ಜೀವ ವೈವಿಧ್ಯತೆ ಯಿಂದ ಕೂಡಿದ ಈ ಜಿಲ್ಲೆಯ ಜನಸಾಮಾನ್ಯರ ನೆಮ್ಮದಿ ಇಂದು ಸಂಪೂರ್ಣವಾಗಿ ಹದಗೆಟ್ಟಿದೆ.
ಒಂದೆಡೆ ಪರಿಸರ ಸಂರಕ್ಷಣೆ ಹೆಸರಿನಲ್ಲಿ ಕತ್ತಿ ಮಸೆಯುತ್ತಿರುವ ಕಾನೂನುಗಳು, ಮತ್ತೊಂದೆಡೆ ಜನವಿರೋಧಿ ನದಿ ತಿರುವು ಯೋಜನೆಗಳು ಹಾಗೂ ಸ್ಥಳೀಯ ಸ್ವಾಯತ್ತತೆಗೆ ಧಕ್ಕೆ ತರುವ ಆಡಳಿ ತಾತ್ಮಕ ಆದೇಶಗಳು ಜಿಲ್ಲೆಯ ಜನರನ್ನು ಬೀದಿಗಿಳಿಯುವಂತೆ ಮಾಡಿದೆ. ತಮ್ಮ ಅಸ್ತಿತ್ವ, ಬದುಕು ಮತ್ತು ಉಳಿವಿಗಾಗಿ ಜಿಲ್ಲೆಯ ಜನತೆ ಹೋರಾಟದ ಹಾದಿ ಹಿಡಿದಿದ್ದು, ಈ ಮೂರು ಪ್ರಮುಖ ಬಿಕ್ಕಟ್ಟುಗಳು ಜಿಲ್ಲೆಯ ಒಟ್ಟು ವ್ಯವಸ್ಥೆಯನ್ನು ಅಸ್ತವ್ಯಸ್ತಗೊಳಿಸಿವೆ.
ಮೊದಲನೆಯದಾಗಿ, ಕಸ್ತೂರಿ ರಂಗನ್ ವರದಿಯ ಶಿಫಾರಸುಗಳು ಜಿಲ್ಲೆಯ ಜನರಲ್ಲಿ ತೀವ್ರ ಆತಂಕ ವನ್ನು ಸೃಷ್ಟಿಸಿವೆ. ಈ ವರದಿ ಜಾರಿಯಾದರೆ ತಾಲೂಕುಗಳ ನೂರಾರು ಗ್ರಾಮಗಳು ಪರಿಸರ ಸೂಕ್ಷ್ಮ ವಲಯದ ವ್ಯಾಪ್ತಿಗೆ ಸೇರಲಿವೆ. ಇದರಿಂದ ಅಲ್ಲಿನ ರೈತರು ತಮ್ಮ ಜಮೀನುಗಳಲ್ಲಿ ಕೃಷಿ ಚಟು ವಟಿಕೆಗಳನ್ನು ನಡೆಸಲು, ಮನೆಗಳನ್ನು ನಿರ್ಮಿಸಲು ಅಥವಾ ಸಣ್ಣಪುಟ್ಟ ಅಭಿವೃದ್ಧಿ ಕೆಲಸ ಗಳನ್ನು ಮಾಡಲು ಸಹ ಅರಣ್ಯ ಮತ್ತು ಪರಿಸರ ಇಲಾಖೆಯ ಅನುಮತಿ ಪಡೆಯ ಬೇಕಾಗುತ್ತದೆ.
ಇದನ್ನೂ ಓದಿ: Sirsi News: ಆಧ್ಯಾತ್ಮ-ಆರೋಗ್ಯ ಹೂವು-ಪರಿಮಳದ ಸಂಬಂಧ: ವಿಭೂತಿಪುರ ಮಠದ ಶ್ರೀ
ಶತಮಾನಗಳಿಂದ ಕಾಡಿನ ಜತೆ ಜತೆಗೇ ಬದುಕು ಕಟ್ಟಿಕೊಂಡಿರುವ ಸ್ಥಳೀಯರ ಹಕ್ಕುಗಳಿಗೆ ಕುತ್ತು ಬರುವ ಭೀತಿ ಎದುರಾಗಿದ್ದು, ವರದಿ ವಿರೋಧಿಸಿ ಜಿಲ್ಲೆಯಾದ್ಯಂತ ತೀವ್ರ ಸ್ವರೂಪದ ಹೋರಾಟ ಗಳು ನಿರಂತರವಾಗಿ ನಡೆಯುತ್ತಿವೆ. ಎರಡನೆಯದಾಗಿ, ಬೇಡ್ತಿ, ವರದಾ ಮತ್ತು ಅಘನಾಶಿನಿ ನದಿಗಳನ್ನು ತಿರುಗಿಸುವ ಸರಕಾರಿ ಯೋಜನೆಗಳು ಜಿಲ್ಲೆಯ ಪರಿಸರ ಪ್ರಿಯರು ಹಾಗೂ ರೈತರ ನಿದ್ದೆಗೆಡಿಸಿವೆ. ಈ ನದಿ ತಿರುವು ಯೋಜನೆಗಳು ಜಾರಿಗೆ ಬಂದರೆ ಜಿಲ್ಲೆಯ ಜಲಮೂಲಗಳು ಬತ್ತಿ ಹೋಗುವುದಲ್ಲದೆ, ಅಪರೂಪದ ಜೀವವೈವಿಧ್ಯತೆ ಸಂಪೂರ್ಣ ನಾಶವಾಗಲಿದೆ.
ಕೃಷಿ ಹಾಗೂ ಕುಡಿಯುವ ನೀರಿಗೂ ತೀವ್ರ ಅಭಾವ ಎದುರಾಗುವ ಹಿನ್ನೆಲೆಯಲ್ಲಿ, ಪರಿಸರ ವಿಜ್ಞಾನಿಗಳು ಮತ್ತು ಸಾರ್ವಜನಿಕರ ಜತೆಗೆ ವಿವಿಧ ಮಠಾಧೀಶರು ಹಾಗೂ ಧಾರ್ಮಿಕ ಶ್ರೀಗಳ ನೇತೃತ್ವದಲ್ಲಿ ಬೃಹತ್ ಜನಜಾಗೃತಿ ಮತ್ತು ಪ್ರತಿಭಟನಾ ಹೋರಾಟಗಳು ರೂಪುಗೊಂಡಿವೆ. ನಿಸರ್ಗದತ್ತವಾದ ನದಿಗಳನ್ನು ಕೃತಕವಾಗಿ ತಿರುಗಿಸುವ ಸಾಹಸಕ್ಕೆ ಮುಂದಾಗಿರುವ ಸರಕಾರದ ಧೋರಣೆಯನ್ನು ಜನತೆ ಒಕ್ಕೊರಲಿನಿಂದ ಖಂಡಿಸುತ್ತಿದ್ದಾರೆ.
ಮೂರನೆಯದಾಗಿ, ಗ್ರಾಮ ಪಂಚಾಯತ್ ಮಟ್ಟದಿಂದ ಕರ ಪಾವತಿಸದಂತೆ ಸಾರ್ವಜನಿಕರಿಗೆ ಸೂಚಿಸಿರುವ ಸರಕಾರದ ವಿವಾದಾತ್ಮಕ ಆದೇಶ ಜನಸಾಮಾನ್ಯರ ಆಕ್ರೋಶಕ್ಕೆ ಕಾರಣವಾಗಿದೆ. ಸ್ಥಳೀಯ ಆಡಳಿತದ ಬೆನ್ನೆಲುಬಾಗಿರುವ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಹತ್ತಿಕ್ಕುವ ಹಾಗೂ ಜನಸಾಮಾನ್ಯರ ಮೂಲಭೂತ ಹಕ್ಕುಗಳನ್ನು ಮೊಟಕುಗೊಳಿಸುವ ಈ ಕ್ರಮವನ್ನು ವಿರೋಽಸಿ ಜನತೆ ಹೋರಾಟ ನಡೆಸುತ್ತಿದ್ದಾರೆ.
ತಮ್ಮದೇ ಜಮೀನು ಮತ್ತು ಮನೆಗಳಿಗೆ ತೆರಿಗೆ ಕಟ್ಟಲು ಸರಕಾರದ ನಿರ್ಬಂಧವಿರುವುದು ಆಡಳಿತ ವ್ಯವಸ್ಥೆಯ ದೋಷಕ್ಕೆ ಹಿಡಿದ ಕನ್ನಡಿಯಾಗಿದೆ. ಈ ಮೂರು ಪ್ರಮುಖ ಸಮಸ್ಯೆಗಳು ಒಟ್ಟಾಗಿ ಜಿಲ್ಲೆಯ ಜನರನ್ನು ತಳಮಳಕ್ಕೆ ಈಡು ಮಾಡಿದ್ದು, ಇದು ಕೇವಲ ಒಂದು ಪ್ರದೇಶದ ಸಮಸ್ಯೆ ಯಲ್ಲದೆ ಇಡೀ ಜಿಲ್ಲೆಯ ಅಸ್ತಿತ್ವದ ಪ್ರಶ್ನೆಯಾಗಿ ಮಾರ್ಪಟ್ಟಿದೆ.
ಸರಕಾರ ಜನವಿರೋಧಿ ನೀತಿ ಕೈಬಿಡಲಿ
ಈ ಸಮಸ್ಯಾತ್ಮಕ ಸನ್ನಿವೇಶದಲ್ಲಿ ಜಿಲ್ಲೆಯ ಜನರ ನೋವಿಗೆ ಸ್ಪಂದಿಸಿರುವ ಹೋರಾಟಗಾರ ರವೀಂದ್ರ ನಾಯ್ಕ ಅವರ ನೇತೃತ್ವದಲ್ಲಿ ಜನಪರ ಹೋರಾಟಗಳು ತೀವ್ರಗೊಂಡಿವೆ. ಸರಕಾರದ ಜನವಿರೋಧಿ ನೀತಿಗಳ ವಿರುದ್ಧ ಧ್ವನಿ ಎತ್ತಿರುವ ಇವರಿಗೆ ಸ್ಥಳೀಯ ಸಂಸದರೂ ಸೇರಿದಂತೆ ಹಲವು ಜನಪ್ರತಿನಿಧಿಗಳು ಸಾತ್ ನೀಡಿರುವುದು ಹೋರಾಟಕ್ಕೆ ಮತ್ತಷ್ಟು ಬಲ ತಂದಿದೆ.
ಜನರ ಅಸ್ತಿತ್ವದ ಪ್ರಶ್ನೆ ಬಂದಾಗ ರಾಜಕೀಯ ಭೇದ-ಭಾವಗಳನ್ನು ಮರೆತು ಎಲ್ಲರೂ ಒಂದಾಗಿ ನಿಲ್ಲಬೇಕಾದ ಅನಿವಾರ್ಯತೆ ಇದೆ. ಸರಕಾರವು ಜನರ ಆಕ್ರೋಶವನ್ನು ಗಂಭೀರವಾಗಿ ಪರಿಗಣಿಸಿ, ಕಸ್ತೂರಿ ರಂಗನ್ ವರದಿ, ನದಿ ತಿರುವು ಯೋಜನೆ ಹಾಗೂ ಪಂಚಾಯತ್ ಕರ ವಿವಾದದಂತಹ ಜನವಿರೋಧಿ ಧೋರಣೆಗಳನ್ನು ಕೈಬಿಟ್ಟು, ಉತ್ತರ ಕನ್ನಡ ಜಿಲ್ಲೆಯ ನೆಮ್ಮದಿಯನ್ನು ಮರುಸ್ಥಾಪಿ ಸಲು ತುರ್ತು ಕ್ರಮ ಕೈಗೊಳ್ಳಬೇಕಿದೆ.