ವೈದ್ಯರ ವರ್ಗಾವಣೆ: ಇಲಾಖೆಗೆ ಅನಾರೋಗ್ಯ
ಸರಕಾರಿ ಆಸ್ಪತ್ರೆಗಳಲ್ಲಿ ತಜ್ಞ ವೈದ್ಯರ ಕೊರತೆ ಇದ್ದು, ಇಷ್ಟೊಂದು ಸಂಖ್ಯೆಯಲ್ಲಿ ಸ್ವಯಂ ನಿವೃತ್ತಿ ಪಡೆದರೆ ಪರಿಣತ ವೈದ್ಯರ ಕೊರತೆ ಎದುರಾಗಬಹುದೆಂಬ ಆತಂಕ ವ್ಯಕ್ತವಾಗಿದೆ. ಆರೋಗ್ಯ ಸಚಿವರ ಮಧ್ಯಸ್ಥಿಕೆ ಬಳಿಕವೂ ಬಿಕ್ಕಟ್ಟು ಪರಿಹಾರವಾಗಿಲ್ಲ. ಇಲಾಖೆಯ ಹಿರಿಯ ಅಧಿಕಾರಿಗಳು ಹೊಸ ಆದೇಶ ವನ್ನು ಸಮರ್ಥಿಸಿಕೊಳ್ಳುತ್ತಿದ್ದು, ಸಚಿವರ ಅಸಹಾಯಕರಾಗಿದ್ದಾರೆ

-

ಶಿವಕುಮಾರ್ ಬೆಳ್ಳಿತಟ್ಟೆ
ರಾಜ್ಯ ಸರಕಾರದ ಆರೋಗ್ಯ ಇಲಾಖೆಯ ಆರೋಗ್ಯ ಇಲಾಖೆ ವ್ಯಾಪ್ತಿಯ ಹಿರಿಯ ತಜ್ಞ ವೈದ್ಯರಲ್ಲಿ ಸ್ವಯಂ ನಿವೃತ್ತಿ ವೈರಸ್ ಕಾಣಿಸಿಕೊಂಡಿದೆ. ಸರಕಾರದ ವರ್ಗಾವಣೆ ನೀತಿ ವಿರೋಧಿಸಿ ಸುಮಾರು 120 ಹಿರಿಯ ತಜ್ಞ ವೈದ್ಯರು ಸ್ವಯಂ ನಿವೃತ್ತಿಗೆ ಅರ್ಜಿ ಸಲ್ಲಿಸಿದ್ದಾರೆ. ಇವರಲ್ಲಿ ಬಹುತೇಕರು ಖಾಸಗಿ ಆಸ್ಪತ್ರೆ ಅಥವಾ ಮೆಡಿಕಲ್ ಕಾಲೇಜು ಸೇರಲು ಸಿದ್ಧತೆ ನಡೆಸಿದ್ದಾರೆ.
ಸರಕಾರಿ ಆಸ್ಪತ್ರೆಗಳಲ್ಲಿ ತಜ್ಞ ವೈದ್ಯರ ಕೊರತೆ ಇದ್ದು, ಇಷ್ಟೊಂದು ಸಂಖ್ಯೆಯಲ್ಲಿ ಸ್ವಯಂ ನಿವೃತ್ತಿ ಪಡೆದರೆ ಪರಿಣತ ವೈದ್ಯರ ಕೊರತೆ ಎದುರಾಗಬಹುದೆಂಬ ಆತಂಕ ವ್ಯಕ್ತವಾಗಿದೆ. ಆರೋಗ್ಯ ಸಚಿವರ ಮಧ್ಯಸ್ಥಿಕೆ ಬಳಿಕವೂ ಬಿಕ್ಕಟ್ಟು ಪರಿಹಾರವಾಗಿಲ್ಲ. ಇಲಾಖೆಯ ಹಿರಿಯ ಅಧಿಕಾರಿಗಳು ಹೊಸ ಆದೇಶವನ್ನು ಸಮರ್ಥಿಸಿಕೊಳ್ಳುತ್ತಿದ್ದು, ಸಚಿವರ ಅಸಹಾಯಕರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ:Medical Technology: ಮೈಂಡ್ ರೀಡಿಂಗ್ ಯಂತ್ರ ಅವಿಷ್ಕರಿಸಿದ ಚೀನಾ ತಂತ್ರಜ್ಞರು; ಈ ಪ್ರಯೋಗ ನಡೆದಿದ್ದು ಹೀಗೆ...
ಆರೋಗ್ಯ ಸಚಿವರು ಈ ವಿಷಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೂ ತಂದಿದ್ದಾರೆ. ಆದರೆ ಅಧಿಕಾರಿಗಳು ಮುಖ್ಯಮಂತ್ರಿಯವರಿಗೂ ಎಲ್ಲವೂ ಹಸನಾಗಿದೆ ಎಂಬ ಮಾಹಿತಿ ನೀಡಿದ್ದಾರೆನ್ನಲಾಗಿದೆ. ವೈದ್ಯಾಧಿಕಾರಿಗಳ ಸಂಘವೂ ಆದೇಶದ ಪರ ನಿಂತಿರುವುದು ವೈದ್ಯಕೀಯ ವಲಯದಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.
ಇಲಾಖೆ ಆರೋಗ್ಯ ಹದಗೆಟ್ಟಿದ್ದು ಹೇಗೆ ?
ಇಲಾಖೆಯ 49 ಸಾವಿರ ಪೈಕಿ 21 ಸಾವಿರಕ್ಕೂ ಹೆಚ್ಚಿನ ಹುದ್ದೆಗಳು ಖಾಲಿ ಇವೆ. 15ಕ್ಕೂ ಹೆಚ್ಚು ಜಂಟಿ ನಿರ್ದೇಶಕರು ಹಾಗೂ 6ಕ್ಕೂ ಹೆಚ್ಚು ಹೆಚ್ಚುವರಿ ನಿರ್ದೇಶಕರ ಹುದ್ದೆಗಳೂ ಭರ್ತಿಯಾಗಿಲ್ಲ. ಹಾಲಿ ಇರುವ ಸುಮಾರು 28 ಸಾವಿರ ಹುzಗಳ ಪೈಕಿ ಶೇ.5ರಷ್ಟು ವರ್ಗಾವಣೆಗೆ ಅವಕಾಶವಿದೆ.
ಆದರೆ ಈ ಬಾರಿ ಕೌನ್ಸೆಲಿಂಗ್ ಮೂಲಕ ಶೇ.15ರಷ್ಟು ವೈದ್ಯರ ವರ್ಗಾವಣೆಗೆ ಇಲಾಖೆ ಸರಕಾರದ ಅನುಮತಿ ಪಡೆದಿದೆ. ಕೌನ್ಸೆಲಿಂಗ್ ಮೂಲಕ ವರ್ಗಾವಣೆಯಿಂದ ದೀರ್ಘ ಕಾಲದಿಂದ ಒಂದೇ ಕಡೆ ಸೇವೆ ಸಲ್ಲಿಸಿದ ವೈದ್ಯರ ವರ್ಗಾವಣೆ ಮಾಡಲು ಅನುಕೂಲವಾದರೂ ಕೌಶಲ್ಯ ಮತ್ತು ತಜ್ಞತೆ ಅವಕಾಶ ಇಲ್ಲದ ಅನಗತ್ಯ ಸ್ಥಳಗಳಿಗೆ ವರ್ಗಾವಣೆ ನಡೆದಿದ್ದು, ಇಡೀ ವರ್ಗಾವಣೆ ಪ್ರಕ್ರಿಯೆ ವ್ಯರ್ಥ ವಾಗಿದೆ ಎನ್ನುವುದು ಹಿರಿಯ ವೈದ್ಯರ ಆರೋಪ.
ಇಲಾಖೆ ಖಾಲಿ ಇರುವ ಹುದ್ದೆಗಳ ಭರ್ತಿಗೆ ಆದ್ಯತೆ ಮೇಲೆ ಕ್ರಮ ಕೈಗೊಳ್ಳಬೇಕಿತ್ತು. ಮುಖ್ಯವಾಗಿ 30ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಸಿ ಅಂಡ್ ಆರ್ ನಿಯಮಗಳನ್ನು ರೂಪಿಸಬೇಕಿತ್ತು. ಬಾಕಿ ಉಳಿದಿರುವ ಬಡ್ತಿಯನ್ನು ನೀಡಲು ಸೇವಾ ಜೇಷ್ಠತಾ ಪಟ್ಟಿ ಸಿದ್ಧಪಡಿಸಬೇಕಿತ್ತು. ಆದರೆ ಇದಾವು ದನ್ನೂ ಮಾಡದೇ ವರ್ಗಾವಣೆಗೆ ಹೆಚ್ಚು ಆಸಕ್ತಿ ವಹಿಸಿರುವುದು ಅಸಮಾಧಾನಕ್ಕೆ ಕಾರಣವಾಗಿದೆ ಎಂದು ಮೂಲಗಳು ತಿಳಿಸಿವೆ.