ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಬಂಡೆಕಲ್ಲಿಗೆ ಡೈನಾಮೈಟ್: ಜಿಲ್ಲಾಡಳಿತಕ್ಕೆ ನೋ ಸೆಂಟಿಮೆಂಟ್

ಬಂಡೆ ಸಿಡಿಸಿ ಜಮೀನನ್ನು ಮಾಡಿ ಹುರುಳಿ ಚೆಲ್ಲುವುದು, ಸೈಟ್ ವಿಂಗಡಿಸುವುದು, ಪಕ್ಕದಲ್ಲಿರುವ ಭೂಮಿ ಒತ್ತುವರಿ ಮಾಡಿಕೊಂಡು ಮತ್ತೊಂದು ಕಟ್ಟಡ ನಿರ್ಮಾಣ ಮಾಡುವ ದಂಧೆಯೂ ಅಂತರ ಗಂಗೆ ಬೆಟ್ಟದ ಮೇಲೆ ನಿರಂತರವಾಗಿ ನಡೆಯುತ್ತಿದ್ದರೂ ಕಂದಾಯ ಇಲಾಖೆ ಜಾಣಮೌನ ವಹಿಸಿದೆ.

ಕೆ.ಎಸ್.ಮಂಜುನಾಥ ರಾವ್, ಕೋಲಾರ

ಅಂತರಗಂಗೆಗೆ ಭೂ ಮಾಫಿಯಾ ಕಾಟ

ಕಂದಾಯ ಅಧಿಕಾರಿಗಳ ಆಟ

ನಗರಕ್ಕೆ ಅಂಟಿಕೊಂಡಿರುವ ಶತಶೃಂಗ ಬೆಟ್ಟ ಸಾಲಿನಲ್ಲಿರುವ ಅಂತರಗಂಗೆ ಸುತ್ತಮುತ್ತ ಭೂ ಕಬಳಿಕೆದಾರರ ಅಟ್ಟಹಾಸ ಮಿತಿಮೀರಿದ್ದು ಸರ್ಕಾರಿ ಜಾಗವನ್ನು ಉಳಿಸಬೇಕಾದ ಕಂದಾಯ ಇಲಾಖೆ ಮೌನಕ್ಕೆ ಶರಣಾಗಿರುವುದು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ.

ಹೌದು. ಅಂತರಗಂಗೆ ಬೆಟ್ಟದ ಮೇಲೆ ಬರುವ 7 ಹಳ್ಳಿಗಳಲ್ಲಿ ಬಹುತೇಕ ಜಮೀನು ಅರಣ್ಯ ಇಲಾಖೆಗೆ ಸೇರಿದ್ದು ಅಳಿದುಳಿದ ಭೂಮಿ ಗೋಮಾಳವಾಗಿದ್ದು ಸಣ್ಣ ಪುಟ್ಟ ಕಲ್ಲು ಗುಡ್ಡಗಳನ್ನು ಹೊಂದಿದೆ. ಇಂತಹ ಸ್ಥಳದ ಮೇಲೆ ಕಣ್ಣಾಕಿರುವ ಭೂಕಬಳಿಕೆದಾರರು ೧೦೦ ರೂ. ಛಾಪಾ ಕಾಗದದ ಮೇಲೆ ಯಾರ ಹೆಸರಿನಿಂದಲೋ ಖರೀದಿ ಮಾಡಿರುವಂತೆ ನಕಲಿ ದಾಖಲೆ ಸೃಷ್ಟಿಸಿ ರಾತ್ರೋ ರಾತ್ರಿ ಕಲ್ಲು ಗುಡ್ಡಗಳಿಗೆ ಡೈನಾಮೆಂಟ್ ಇಟ್ಟು ಬೆಳಕಾಗುವುದರೊಳಗೆ ಜೆಸಿಬಿ ಸಹಾಯದಿಂದ ಹಸನು ಮಾಡಿ ಫೆನ್ಸ್ ಹಾಕುವ ಮೂಲಕ ರಾಜಾರೋಷವಾಗಿ ಭೂಮಿ ಕೈವಶ ಮಾಡಿಕೊಳ್ಳುತ್ತಿದ್ದರೂ ಕಂದಾಯ ಇಲಾಖೆ ಅಧಿಕಾರಿಗಳು ಗಮನಹರಿಸುತ್ತಿಲ್ಲ.

ಸಂಬಂಧಪಟ್ಟ ಗ್ರಾಮಲೆಕ್ಕಿಗರು ಮತ್ತು ರೆವಿನ್ಯೂ ಇನ್ಸ್ ಪೆಕ್ಟರ್‌ಗಳಿಗೆ ಪಂಚಾಯತಿ ಸಿಬ್ಬಂದಿ ಮಾಹಿತಿ ನೀಡಿದರೂ ಕ್ರಮ ಕೈಗೊಳ್ಳದಿರುವುದು ಸಾರ್ವಜನಿಕರಲ್ಲಿ ಕಂದಾಯ ಇಲಾಖೆ ಮೇಲೆ ನಂಬಿಕೆ ಕಳೆದುಕೊಳ್ಳುವಂತೆ ಮಾಡಿದೆ.

ಇದನ್ನೂ ಓದಿ: Kolar News: ಹಾಸ್ಟೆಲ್‌ನಲ್ಲಿ ದೆವ್ವ ಇದೆ ಎಂದಿದ್ದಕ್ಕೆ ವಿದ್ಯಾರ್ಥಿಗೆ ಬಾಸುಂಡೆ ಬರುವಂತೆ ಹೊಡೆದ ವಾರ್ಡನ್‌!

ಬಂಡೆ ಸಿಡಿಸಿ ಜಮೀನನ್ನು ಮಾಡಿ ಹುರುಳಿ ಚೆಲ್ಲುವುದು, ಸೈಟ್ ವಿಂಗಡಿಸುವುದು, ಪಕ್ಕದಲ್ಲಿರುವ ಭೂಮಿ ಒತ್ತುವರಿ ಮಾಡಿಕೊಂಡು ಮತ್ತೊಂದು ಕಟ್ಟಡ ನಿರ್ಮಾಣ ಮಾಡುವ ದಂಧೆಯೂ ಅಂತರಗಂಗೆ ಬೆಟ್ಟದ ಮೇಲೆ ನಿರಂತರವಾಗಿ ನಡೆಯುತ್ತಿದ್ದರೂ ಕಂದಾಯ ಇಲಾಖೆ ಜಾಣಮೌನ ವಹಿಸಿದೆ. ಸಾರ್ವಜನಿಕರಿಂದ ಮತ್ತು ಗ್ರಾಮ ಪಂಚಾಯತಿಯಿಂದ ಕಂದಾಯ ಇಲಾಖೆ ಅಧಿಕಾರಿ ಗಳ ಮೇಲೆ ಒತ್ತಡ ಹೆಚ್ಚಾದಾಗ ತಹಸಿಲ್ದಾರ್ ಡಾ.ನಯನಾ ಮತ್ತು ರೆವಿನ್ಯೂ ಇನ್ಸ್‌ಪೆಕ್ಟರ್ ರಾಜು ಮತ್ತಿತರ ತಂಡ ಸ್ಥಳ ಪರಿಶೀಲನೆ ನಡೆಸಿದೆ.

ಸ್ಥಳ ಪರಿಶೀಲನೆ ಶಾಸ್ತ್ರ : ಅಧಿಕಾರಿಗಳ ದಂಡು ಸ್ಥಳ ಪರಿಶೀಲನೆ ನಡೆಸುವ ಶಾಸ್ತ್ರ ನಡೆಸಿದ್ದರೂ ನಂತರದಲ್ಲಿ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳದಿರುವುದು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ. ಆದರೆ ಅಂತರಗಂಗೆ ಬೆಟ್ಟದ ವ್ಯಾಪ್ತಿಯನ್ನು ಹೊಂದಿರುವ ಕೊಂಡರಾಜನಹಳ್ಳಿ ಗ್ರಾಮ ಪಂಚಾಯತಿಯವರು ಅಕ್ರಮ ದಾಖಲೆಗಳ ಮೂಲಕ ಮಾಡಲಾಗಿದ್ದ 12 ಖಾತೆಗಳನ್ನು ರದ್ದು ಮಾಡುವ ಮೂಲಕ ದಂಧೆಕೋರರ ಅಟ್ಟಹಾಸಕ್ಕೆ ಬರೆಹಾಕುವ ಮಾದರಿ ಕೆಲಸ ಮಾಡಿದ್ದಾರೆ. ಪಂಚಾಯತಿ ಜತೆಗೆ ಕಂದಾಯ ಇಲಾಖೆಯೂ ಕೈ ಜೋಡಿಸಿದರೆ ದಂಧೆಕೋರರ ಹುಟ್ಟಡಗಿಸ ಬಹುದಾಗಿದೆ.

ಏನಾಗಬೇಕು: ಅಂತರಗಂಗೆ ಬೆಟ್ಟ ಮತ್ತು ೭ ಹಳ್ಳಿಗಳಲ್ಲಿರುವ ಸರ್ಕಾರಿ ಭೂಮಿಯನ್ನು ಗುರ್ತಿಸಿ ಕಬಳಿಕೆ ಆಗದಂತೆ ಕಂದಾಯ ಇಲಾಖೆ ಎಚ್ಚರಿಕೆ ವಸಬೇಕು. ಈಗಾಗಲೇ ಅಕ್ರಮ ದಾಖಲಾತಿಗಳ ಮೂಲಕ ಬಂಡೆಗಳನ್ನು ಸಿಡಿಸಿ ಭೂ ಕಬಳಿಕೆ ಮಾಡಿರುವ ದಂಧೆಕೋರರ ರುದ್ಧ ಕ್ರಿನಲ್ ಕೇಸ್ ದಾಖಲಿಸುವ ಮೂಲಕ ಮುಂದೆ ಒತ್ತುವರಿ ಆಗದಂತೆ ಸಮಾಜಕ್ಕೆ ಸಂದೇಶ ರವಾನಿಸಬೇಕು. ಗ್ರಾಮಲೆಕ್ಕಿಗರು ಕನಿಷ್ಟ ತಿಂಗಳಿಗೊಮ್ಮೆಯಾದರೂ ಬೆಟ್ಟಕ್ಕೆ ಭೇಟಿ ನೀಡುವ ಮೂಲಕ ಸರ್ಕಾರಿ ಭೂಮಿಯನ್ನು ಸಂರಕ್ಷಣೆ ಮಾಡಬೇಕು

*

ಅಂತರಗಂಗೆ ಬೆಟ್ಟದಲ್ಲಿ ಹತ್ತಾರು ಎಕರೆ ಭೂಮಿಯನ್ನು ಭೂಮಾಫಿಯಾಗಳು ನಕಲಿ ದಾಖಲೆ ಮೂಲಕ ಕೈವಶ ಮಾಡಿಕೊಂಡಿದ್ದನ್ನು ಪತ್ತೆ ಹಚ್ಚಿದ ಅಂದಿನ ಸಂಸದ ಮುನಿಸ್ವಾಮಿ ಅವರು ಭೂಕಬಳಿಕೆಯನ್ನು ಕಂದಾಯ ಇಲಾಖೆಗೆ ವಾಪಸ್ ಆಗುವಂತೆ ಮಾಡಿದ್ದರು. ಆದರೂ ದಂಧೆ ನಡೆಯುತ್ತಿದ್ದು ಡಿಸಿ ಮಧ್ಯ ಪ್ರವೇಶಿಸುವ ಮೂಲಕ ಭೂಕಬಳಿಕೆಗೆ ಕಡಿವಾಣ ಹಾಕಬೇಕು. ತಪ್ಪಿದರೆ ರೈತ ಸಂಘದಿಂದ ಹೋರಾಟ ಆರಂಭಿಸಲಾಗುತ್ತದೆ.

-ಕೆ.ನಾರಾಯಣಗೌಡ, ರಾಜ್ಯ ಉಪಾಧ್ಯಕ್ಷ, ರೈತ ಸಂಘ