ಬಸವರಾಜ ಎಚ್. ಹುಲಗಣ್ಣಿ
ನಿದ್ದೆ ಜಾರಿದ ಪೊಲೀಸ್ ಇಲಾಖೆ, ಪುರಸಭೆ
ತೆರವಿಗೆ ಸಾರ್ವಜನಿಕರ ಆಗ್ರಹ
ಮುದ್ದೇಬಿಹಾಳ: ಪಟ್ಟಣ ಅತಿ ವೇಗವಾಗಿ ಬೆಳೆಯುತ್ತಿರುವ ನಗರವಾಗಿದೆ. ಇಲ್ಲಿನ ವ್ಯಾಪಾರ ವಹಿವಾಟುಗಳು ಬೆಳೆಯುತ್ತಿದ್ದು ಪಟ್ಟಣದಲ್ಲಿ ವಾಹನ ಸಂಚಾರ ದಟ್ಟವಾಗಿದೆ ಕಳೆದ ಒಂದು ವರ್ಷದಿಂದ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆ ಈಗ ನಗರ ಸಾರಿಗೆಯಾಗಿದೆ, ತಾಲೂಕಿನ ಯರಗಲ್ಲ ಗ್ರಾಮದ ಬಳಿ ಬೃಹತ್ ಸಕ್ಕರೆ ಕಾರ್ಖಾನೆ ಇದ್ದು ನಗರದ ಮೂಲಕವೇ ಕಬ್ಬು ಸಾಗಾಣಿಕೆ ನಿರಂತರವಾಗಿ ನಡೆಯುತ್ತಿದೆ.
ಆದರೆ ಈ ನಗರದಲ್ಲಿ ಸಂಚಾರ ನಿಯಂತ್ರಣ ವ್ಯವಸ್ಥೆಯೇ ಇಲ್ಲ. ರಸ್ತೆಯ ಎರಡೂ ಬದಿಗಳಲ್ಲಿನ ಪಾದಾಚಾರಿಗಳ ಓಡಾಟಕ್ಕೆ ಅಂತಾ ಮೀಸಲಾಗಿರುವ ಪುಟ್ ಪಾತಗಳ ಬದಿ ವ್ಯಾಪಾರಸ್ಥರು ಮತ್ತು ಅದಕ್ಕೆ ಹೊಂದಿಕೊಂಡಿರುವ ಅಂಗಡಿಕಾರರು ಅವುಗಳ ಮೇಲೆ ತಗಡಿನ ಮೇಲ್ಛಾವಣಿ ಹಾಕಿಕೊಂಡು ಮತ್ತು ತಮ್ಮ ಅಂಗಡಿಗಳ ಜಾಹಿರಾತು ಫಲಕಗಳನ್ನು ಇಟ್ಟುಕೊಂಡು ಅತಿಕ್ರಮಣ ಮಾಡಿದ್ದಾರೆ.
ವ್ಯಾಪಾರಕ್ಕೆ ಬರುವವರು ಮತ್ತು ಅಂಗಡಿಕಾರರು ರಸ್ತೆಯಲ್ಲಿಯೇ ಅಡ್ಡಾದಿಡ್ಡಿಯಾಗಿ ತಮ್ಮ ವಾಹನಗಳನ್ನು ನಿಲ್ಲಿಸುತ್ತಾರೆ ಇದರಿಂದ ಸಾರ್ವಜನಿಕರು ರಸ್ತೆಯಲ್ಲಿ ತಿರುಗಾಡಲು ಪರದಾಡು ವಂತಾಗಿದೆ. ಇದರಿಂದ ಪ್ರತಿನಿತ್ಯ ಅಪಘಾತಗಳು ಸಂಭವಿಸುತ್ತಿರುತ್ತವೆ, ನಗರದಲ್ಲಿ ಇಷ್ಟೊಂದು ಅವ್ಯವಸ್ಥೆ ಇದ್ದರೂ ಸಂಬಂಧಿಸಿದ ಪುರಸಭೆ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳು ಕುಂಬ ನಿದ್ರೆಗೆ ಜಾರಿದಂತೆ ವರ್ತಿಸುತ್ತಿದ್ದಾರೆ. ಅಲ್ಲದೇ ರಾತ್ರಿ ಹೊತ್ತಲ್ಲಿ ಅನೈತಿಕ ಚಟುವಟಿಕೆಗಳ ಕೇಂದ್ರವಾಗಿದೆ. ಈ ಜಾಗೆಯನ್ನು ಸಂಬಂಧಿಸಿದ ಇಲಾಖೆಯ ಸಹಯೋಗದೊಂದಿಗೆ ಬೀದಿ ಬದಿ ವ್ಯಾಪಾರಸ್ಥರಿಗೆ ತಾತ್ಕಾಲಿಕವಾಗಿ ವ್ಯಾಪಾರ ಮಾಡಿಕೊಳ್ಳಲು ಅನುಕೂಲ ಕಲ್ಪಿಸಿದರೆ ಇದರಿಂದ ನಗರದಲ್ಲಿ ಸಂಚಾರ ವ್ಯವಸ್ಥೆ ಸುಧಾರಿಸಬಹುದಾಗಿದೆ.
ಇದನ್ನೂ ಓದಿ: Dr Ramakrishna Muddepala Column: ತಾಳಮದ್ದಳೆಯಲ್ಲಿ ಆತ್ಮಾವಲೋಕನ ಅಗತ್ಯ
ಸದ್ಯ ಅಧಿಕಾರಿಗಳ ಕಾರ್ಯ ವೈಖರಿ ನೋಡಿದರೆ ಅಧಿಕಾರಿಗಳಲ್ಲಿ ಇಚ್ಛಾಶಕ್ತಿ ಕೊರತೆ ಕಾಣುತ್ತಿದೆ ಇನ್ನಾದರೂ ಪೊಲೀಸ್ ಹಾಗೂ ಪುರಸಭೆ ಅಧಿಕಾರಿಗಳು ಎಚ್ಚೆತ್ತು ಸಮಸ್ಯೆಗೆ ಪರಿಹಾರ ಕಲ್ಪಿಸುತ್ತಾರಾ ಎನ್ನುವುದನ್ನು ಕಾದುನೋಡಬೇಕಿದೆ.
ನಗರದ ಹೃದಯ ಬಾಗದಲ್ಲಿ ಹಾಯ್ದು ಹೋಗಿರುವ ರಾಜ್ಯ ಹೆದ್ದಾರಿಯನ್ನು ಮಾಡುವಾಗ ಇಲ್ಲಿನ ಪುಟಪಾತಗಳನ್ನು ನಿಯಮಾನುಸಾರ ಮಾಡಿಲ್ಲ. ಕಾಡುವ ದೇವರ ಕಾಟ ಕಳೆಯುವಂತೆ ಮನಸ್ಸಿಗೆ ಬಂದಂತೆ ಮಾಡಿರುವದರಿಂದ ಈ ಅವ್ಯವಸ್ಥೆ ಉಂಟಾಗಿದೆ. ಮತ್ತು ರಸ್ತೆಯನ್ನು ಇನ್ನೊಮೆ-- ಡಾಂಬರೀಕರಣ ಮಾಡಿ ನಿಯಮಾನುಸಾರ ಬಿಳಿ ಪಟ್ಟಿಗಳನ್ನು ಪಾದಾಚಾರಿಗಳ ಪಟ್ಟಿಗಳನ್ನು ಹಾಕಬೇಕು. ಈಗ ಉಂಟಾಗುತ್ತಿರುವ ಸಮಸ್ಯೆಗಳಿಗೆ ಸ್ಥಳೀಯ ಶಾಸಕರು ಗಂಭೀರವಾಗಿ ಪರಿಹಾರ ಕಲ್ಪಿಸಬೇಕು.
-ಪಿ.ಬಿ.ಗೌಡರ ವಕೀಲರು, ಕಾರ್ಯದರ್ಶಿಗಳು
*
ಈ ಅವ್ಯವಸ್ಥೆಗೆ ಜನಪ್ರತಿನಿಧಿಗಳ ಮತ್ತು ಸಂಬಂಧಿಸಿದ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣವಾಗಿದೆ. ಈ ಹಿಂದೆ ಇಂತಹ ಸಂದರ್ಭಗಳಲ್ಲಿ ಜನರನ್ನು ಪ್ರಚೋದಿಸಿ ಅಂದಿನ ಶಾಸಕ ಎ.ಎಸ್.ಪಾಟೀಲರ ಮನೆಗೆ ಮುತ್ತಿಗೆ ಹಾಕಲು ಕಳಿಸುತ್ತಿದ್ದ ಧುರೀಣರು ಈಗ ಏನು ಮಾಡುತ್ತಿದ್ದಾರೆ.
-ರಾಜಶೇಖರ ಹೊಳಿ (ಬಿಜೆಪಿ ಮುಖಂಡರು)
*
ಬಸ್ ನಿಲ್ದಾಣದ ಪಕ್ಕದ ಜಾಗೆ ಬಳಸಿಕೊಳ್ಳಿ. ಬಸ್ ನಿಲ್ದಾಣದ ಪಕ್ಕದಲ್ಲಿ ವಿಶಾಲವಾದ ಖಾಲಿ ಜಾಗೆ ಇದೆ. ಸಾರ್ವಜನಿಕರ ಶೌಚಾಲಯ ಮತ್ತು ಪುರಸಭೆಯ ಕಸ ಸಂಗ್ರಹ ಮಾಡುವ ಅಡ್ಡೆಯಾಗಿದೆ.