Dr Ramakrishna Muddepala Column: ತಾಳಮದ್ದಳೆಯಲ್ಲಿ ಆತ್ಮಾವಲೋಕನ ಅಗತ್ಯ
ತಾಳಮದ್ದಳೆ ಕ್ಷೇತ್ರವನ್ನು ಅವಲೋಕಿಸಿದರೆ ಅದು ತನ್ನ ಅಂತಸ್ಸತ್ವ, ಸೃಜನಶೀಲತೆ, ಮೌಲ್ಯ ಪ್ರತಿಪಾದನೆ, ಗಾಂಭೀರ್ಯ, ಶೃಂಗಾರ ಮುಂತಾದ ವೈವಿಧ್ಯಮಯ ಮತ್ತು ವೈಶಿಷ್ಟ್ಯಪೂರ್ಣ ಅಂಶಗಳಿಂದ ಕಲಾಪ್ರಕಾರವಾಗಿ ಎತ್ತರದ ಸ್ಥಾನದಲ್ಲಿದ್ದರೂ ಕೂಡ ಪ್ರಸ್ತುತ ಕಾಲಘಟ್ಟದಲ್ಲಿ ಸಂಧಿಸ್ಥಳದಲ್ಲಿದೆ. ಸ್ಪೇನ್‌ನ ತತ್ವಜ್ಞಾನಿ ಜಾರ್ಜ್ ಸಾಂಟಿಯಾನಾ ಅವರ ಪ್ರಸಿದ್ಧ ಹೇಳಿಕೆ ಈ ಸಂದರ್ಭದಲ್ಲಿ ನೆನಪಿಗೆ ಬರುತ್ತದೆ.
-
ತಪ್ಪಿದ ತಾಳ
ಡಾ.ರಾಮಕೃಷ್ಣ ಮುದ್ದೇಪಾಲ
ಆಟ-ಕೂಟಗಳನ್ನೊಳಗೊಂಡಿರುವ ಕರ್ನಾಟಕದ ಹೆಮ್ಮೆಯ ಕಲೆ ಯಕ್ಷಗಾನ ಅದರಲ್ಲಿ ಯೂ ತಾಳಮದ್ದಳೆ ಈ ಮೊದಲು ಮುಖ್ಯವಾಹಿನಿ ಮಾಧ್ಯಮಗಳಲ್ಲಿ ಚರ್ಚಿಸುವ ವಿಷಯ ವಾಗಿರಲಿಲ್ಲ. ವಿಶ್ವೇಶ್ವರ ಭಟ್ಟರ ಉಪಕ್ರಮದಿಂದ ಇದೀಗ ತಾಳಮದ್ದಳೆಯ ಕುರಿತು ಮುಕ್ತ ಅಭಿಪ್ರಾಯ ವಿನಿಮಯಕ್ಕೆ ಮತ್ತು ಅರ್ಥಪೂರ್ಣ ಸಂವಾದಕ್ಕೆ ವೇದಿಕೆ ದೊರೆತಿರು ವುದು ಯಕ್ಷಗಾನಾಭಿಮಾನಿ ಗಳಿಗೆ ಸಂತಸದ ವಿಷಯವೇ ಸರಿ.
ಹಾಗೆ ನೋಡಿದರೆ ಕೂಟವೆಂದು ಕರೆಯಿಸಿಕೊಳ್ಳುವ ತಾಳಮದ್ದಳೆಗಿಂತಲೂ ಆಟವೆಂದು ಪ್ರಸಿದ್ಧವಾಗಿರುವ ಯಕ್ಷಗಾನ ಪ್ರದರ್ಶನದಲ್ಲಿ ಕಂಡುಬರುತ್ತಿರುವ ಅಪಸವ್ಯಗಳು ಹೆಚ್ಚಾಗಿವೆ. ಇದು ಸಾಮಾನ್ಯ ಪ್ರೇಕ್ಷಕನಿಗೂ ವಿದಿತವಾಗಿರುವ ವಿಷಯ. ಈ ಅಸಂಗತ ಅಪಸವ್ಯಗಳಿಗೆ ಕಲಾವಿದರು ಮತ್ತು ಪ್ರೇಕ್ಷಕರು ಸಮಾನರಾಗಿ ಹೊಣೆಗಾರರಾಗಿದ್ದಾರೆ ಎಂದೆನಿಸುತ್ತದೆ.
ತಾಳಮದ್ದಳೆ ಕ್ಷೇತ್ರವನ್ನು ಅವಲೋಕಿಸಿದರೆ ಅದು ತನ್ನ ಅಂತಸ್ಸತ್ವ, ಸೃಜನಶೀಲತೆ, ಮೌಲ್ಯಪ್ರತಿಪಾದನೆ, ಗಾಂಭೀರ್ಯ, ಶೃಂಗಾರ ಮುಂತಾದ ವೈವಿಧ್ಯಮಯ ಮತ್ತು ವೈಶಿಷ್ಟ್ಯಪೂರ್ಣ ಅಂಶಗಳಿಂದ ಕಲಾಪ್ರಕಾರವಾಗಿ ಎತ್ತರದ ಸ್ಥಾನದಲ್ಲಿದ್ದರೂ ಕೂಡ ಪ್ರಸ್ತುತ ಕಾಲಘಟ್ಟದಲ್ಲಿ ಸಂಧಿಸ್ಥಳದಲ್ಲಿದೆ. ಸ್ಪೇನ್‌ನ ತತ್ವಜ್ಞಾನಿ ಜಾರ್ಜ್ ಸಾಂಟಿಯಾನಾ ಅವರ ಪ್ರಸಿದ್ಧ ಹೇಳಿಕೆ ಈ ಸಂದರ್ಭದಲ್ಲಿ ನೆನಪಿಗೆ ಬರುತ್ತದೆ.
Culture is on the horns of this dilemma. If profound and noble, it must remain rare, if common it must become mean. ಸಂಸ್ಕೃತಿ ಈ ಸಂದಿಗ್ಧತೆಯ ಕೊಂಬಿನ ಮೇಲೆ ನಿಂತಿದೆ. ಅಗಾಧ ಮತ್ತು ಉದಾತ್ತವಾಗಬೇಕಾದರೆ ಅದು ಅಪರೂಪವಾಗಿರಬೇಕು.
ಅದು ಸಾಮಾನ್ಯವಾದರೆ ಕಳಪೆಯಾಗುತ್ತದೆ. ಯಕ್ಷಗಾನ ಮತ್ತು ತಾಳಮದ್ದಳೆ ಕ್ಷೇತ್ರಗಳ ನ್ನೊಳಗೊಂಡಂತೆ ನಮ್ಮ ಸಂಸ್ಕ್ರತಿಯ ಅವಿಭಾಜ್ಯ ಅಂಗವಾಗಿರುವ ಎಲ್ಲ ಕಲಾಪ್ರಕಾರ ಗಳಿಗೆ ಈ ಹೇಳಿಕೆ ಒಪ್ಪುತ್ತದೆ.
ತಾಳಮದ್ದಳೆ ಒಂದು ವರ್ಗಕ್ಕೆ ಸೀಮಿತವಾಗದೆ ಬಹುಜನ ಮಾನಸದಲ್ಲಿ ನೆಲೆನಿಲ್ಲ ಬೇಕಾದರೆ ಕೆಲವು ಬದಲಾವಣೆಗಳು ಅನಿವಾರ್ಯವಾಗಬಹುದು. ಅದು ತನ್ನ ಶಾಸ್ತ್ರೀ ಯತೆ ಮತ್ತು ಸಾಂಪ್ರದಾಯಿಕತೆಯನ್ನು ಕಾಯ್ದುಕೊಂಡೇ ತನ್ನ ಪ್ರಾದೇಶಿಕ ನೆಲೆಯನ್ನು ವಿಸ್ತರಿಸಿಕೊಳ್ಳುತ್ತ ಸಮಾಜದ ವಿವಿಧ ಸ್ತರಗಳಲ್ಲಿರುವ ವ್ಯಕ್ತಿಗಳಿಗೆ ತಲುಪಬೇಕಿದೆ.
ಇವತ್ತು ತಾಳಮದ್ದಳೆಯ ಪ್ರದರ್ಶನಕ್ಕೆ ಬರುವವರು ಹೆಚ್ಚಿನವರು ಇಳಿವಯಸ್ಸಿನವರು ಮತ್ತು ಮಧ್ಯವಯಸ್ಕರು. ಯುವಜನತೆಗೆ ಈ ಕಲಾಪ್ರಕಾರವನ್ನು ಪರಿಚಯಿಸಲು ತಾಳ ಮದ್ದಳೆಯ ಪಾರಂಪರಿಕ ಚೌಕಟ್ಟಿನಲ್ಲಿಯೇ ಯಾವ ಗುಣಾತ್ಮಕ ಬದಲಾವಣೆಯ ಅಥವಾ ವಿಭಿನ್ನ ಪ್ರಸ್ತುತಿಯ ಅಗತ್ಯವಿದೆ ಎನ್ನುವುದು ಗಂಭೀರವಾದ ಚಿಂತನೆಯ ವಿಷಯ.
ಯಕ್ಷಗಾನ ಮತ್ತು ತಾಳಮದ್ದಳೆ ಇವೆರಡು ಪದಗಳು ಗಾಯನ ಮತ್ತು ವಾದನ ಈ ಕಲೆಯ ಮೂಲವಾಗಿರುವುದನ್ನು ಸೂಚಿಸುತ್ತವೆ. ಪ್ರದರ್ಶನ ಕಲೆಯಾಗಿ ಬೆಳೆದ ಹಾಗೇ ಇತರ ಅಂಶ ಗಳು ಆಮೇಲೆ ಸೇರ್ಪಡೆಯಾಗಿರಬಹುದು. ತಾಳಮದ್ದಳೆಯಲ್ಲಿ ಹಿಮ್ಮೇಳ ಮತ್ತು ಅರ್ಥ ಗಾರಿಕೆ ಇವೆರಡರಲ್ಲಿ ಸಮತೋಲನವಿರಬೇಕಾಗುತ್ತದೆ. ಈ ಸಮತೋಲನದ ಕೊರತೆ ಇವತ್ತು ಹೆಚ್ಚಿನ ಪ್ರದರ್ಶನಗಳಲ್ಲಿ ಕಂಡುಬರುತ್ತದೆ. ಹಿಮ್ಮೇಳದಲ್ಲಾಗಲೀ ಅರ್ಥಗಾರಿಕೆ ಯಲ್ಲಾಗಲೀ ಅತಿಬೇಡವೆಲ್ಲಿಯುಂ ಮಂಕುತಿಮ್ಮ ಎಂಬ ಡಿವಿಜಿಯವರ ಮಾತಿನಂತೇ ಮಿತಿಯನ್ನು ಪಾಲಿಸಿದರೆ ಹಿತ.
ಹಿಮ್ಮೇಳದ ಪ್ರಧಾನ ಭಾಗವಾಗಿರುವ ಭಾಗವತಿಕೆಯಲ್ಲಾಗಿರುವ ಸ್ಥಿತ್ಯಂತರ ಕಳವಳಕಾರಿ. ಯಕ್ಷಗಾನ ಸಂಗೀತವು ಕರ್ನಾಟಕ ಸಂಗೀತ ಮೂಲದಿಂದ ಬಂದರೂ ಅದು ತನ್ನದೇ ಆದ ಸಾಂಪ್ರದಾಯಿಕ ರಾಗಗಳನ್ನು ಮತ್ತು ಮಟ್ಟುಗಳನ್ನು ಹೊಂದಿದೆ. ಪ್ರಸಂಗಕರ್ತರು ಪದ್ಯಗಳ ರಾಗತಾಳಗಳನ್ನು ಸೂಚಿಸಿದರೂ ಸಹ ಭಾಗವತನು ತಾಳಮದ್ದಳೆಯಲ್ಲಿ ಪದ್ಯದ ಪ್ರಸ್ತುತಿಯಲ್ಲಿ ಸಂಪೂರ್ಣ ಸ್ವಾತಂತ್ರ್ಯ ಹೊಂದಿರುತ್ತಾನೆ. ಈ ಸ್ವಾತಂತ್ರ್ಯದ ದುರುಪಯೋಗ, ರಾಗಗಳ ಬಳಕೆ ಮತ್ತು ಪ್ರಸ್ತುತಿಯಲ್ಲಿ ವಿವೇಚನೆಯ ಕೊರತೆ ಮತ್ತು ಅತಿರಂಜನೆಯಿಂದ ಭಾಗವತಿಕೆ ಅಯಕ್ಷಗಾನೀಯವೆನಿಸುತ್ತಿದೆ.
ಪ್ರಬುದ್ಧ ಪ್ರೇಕ್ಷಕ ಯಾವುದು ಯಕ್ಷಗಾನೀಯ ಯಾವುದು ಅಯಕ್ಷಗಾನೀಯ ಎಂದು ಗುರುತಿಸಬಲ್ಲ. ತಾಳಮದ್ದಳೆ ಸಂಗೀತ ಕಛೇರಿಯಲ್ಲ. ಅತಿಯಾದ ರಾಗವಿಸ್ತಾರ, ಭಾಮಿನಿ ಪದ್ಯಗಳ ಮಿತಿಮೀರಿದ ಪ್ರಸ್ತುತಿ ಮತ್ತು ಅವುಗಳಿಗೆ ಪ್ರೇಕ್ಷಕರ ಚಪ್ಪಾಳೆ ಈ ಕಲೆ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂಬುದರ ಸೂಚನೆ.
ಕೇವಲ ಪದ್ಯಗಳನ್ನು ಪ್ರಸ್ತುತಪಡಿಸುವ ಯಕ್ಷಗಾನ ಹಿಮ್ಮೇಳ ವೈಭವ ಎನ್ನುವ ಪ್ರದರ್ಶನ ಗಳ ಪ್ರಭಾವವು ತಾಳಮದ್ದಳೆಯ ಹಿಮ್ಮೇಳದ ಮೇಲೆ ಆಗುತ್ತಿದೆ. ದಿ.ನಾರ್ಣಪ್ಪ ಉಪ್ಪೂರರ ಸಾಂಪ್ರದಾಯಿಕ ಭಾಗವತಿಕೆಯ ಸೊಬಗು, ದಿ.ನೆಬ್ಬೂರು ನಾರಾಯಣ ಭಾಗವತರ ಸುಮಧುರ ನಿನಾದದ ಆಸ್ವಾದ, ಮದ್ದಳೆಯ ಮಾಂತ್ರಿಕ ದಿ.ದುರ್ಗಪ್ಪ ಗುಡಿಗಾರರ ಸಾಂಗತ್ಯದಲ್ಲಿ ಸವ್ಯಸಾಚಿ ಭಾಗವತರೆನಿಸಿಕೊಂಡ ದಿ.ಕಡತೋಕ ಮಂಜುನಾಥ ಭಾಗವ ತರ ಪ್ರಯೋಗಶೀಲತೆಯನ್ನು ಇಂದಿನ ಪ್ರದರ್ಶನಗಳಲ್ಲಿ ನೋಡಲಿಕ್ಕೆ ಅಥವಾ ಕೇಳಲಿಕ್ಕೆ ಸಾಧ್ಯವಿದೆಯೆ? ಯಕ್ಷಗಾನದ ಅಬ್ಬರ ಗಂಭೀರ ಭಾವಾಭಿ ವ್ಯಕ್ತಿಯೇ ವಿನಃ ಗದ್ದಲ, ಕೂಗಾಟ, ಕಿರಿಚಾಟ ಅಥವಾ ಕೃತಕ ಧ್ವನಿ ಹೊರಡಿಸುವಿಕೆಯಲ್ಲಲ್ಲ.
ಗಾಂಭೀರ್ಯ ಯಕ್ಷಗಾನದ ಮೂಲಗುಣವಾದರೂ ಸಹ ಅದರಲ್ಲಿ ಮಾಧುರ್ಯ ಸಂಪೂರ್ಣ ಮರೆಯಾದರೆ ಹೇಗೆ ಅರಗಿಸಿಕೊಳ್ಳುವುದು? ಕಲಾವಿದನ ದೋಷ ವ್ಯವಸ್ಥೀ ಕರಣಗೊಂಡು ಕಲೆಯ ದೋಷವಾಗಿ ಪರಿಣಮಿಸಿದರೆ ಏನು ಮಾಡುವುದು? ಗಾಯನ ದೊಂದಿಗೆ ಮದ್ದಳೆ ಚಂಡೆಯೊಳಗೊಂಡ ವಾದನವು ಈ ಸ್ಥಿತ್ಯಂತರಕ್ಕೆ ಹೊರತಾಗಿಲ್ಲ.
ವಾದನ ವೈಯಕ್ತಿಕ ಪ್ರದರ್ಶನದ ವೈಭವೀಕರಣವಾಗದೇ ಭಾವಾಭಿವ್ಯಕ್ತಿಯ ಮತ್ತು ಒಟ್ಟಾರೆ ಪ್ರದರ್ಶನದ ಪೂರಕಾಂಶವಾಗಬೇಕು. ಈ ದೃಷ್ಟಿಕೋನದಲ್ಲಿ ಇತ್ತೀಚೆಗೆ ನಮ್ಮನ್ನ ಗಲಿದ ಯಕ್ಷಗಾನ ಪ್ರಪಂಚದ ಶ್ರೇಷ್ಠ ಮದ್ದಳೆಗಾರರಲ್ಲೊಬ್ಬರಾದ ದಿ.ಕರ್ಕಿ ಪ್ರಭಾಕರ ಭಂಡಾರಿಯವರನ್ನು ಮಾದರಿಯನ್ನಾಗಿ ಪರಿಗಣಿಸಬಹುದು.
ತಾಳಮದ್ದಳೆಯ ಅರ್ಥಗಾರಿಕೆಯಗುತ್ತಿರುವ ಅನಪೇಕ್ಷಿತ ಬೆಳವಣಿಗೆಗಳ ಬಗ್ಗೆ ಈಗಾಗಲೇ ವಿಸ್ತೃತ ಚರ್ಚೆ ನಡೆಯುತ್ತಿದೆ. ಯಕ್ಷಗಾನ ವೃತ್ತಿರಂಗಭೂಮಿಯಂತೇ ತಾಳಮದ್ದಳೆಯು ಹೊಸಪ್ರಸಂಗಗಳ ಹಾವಳಿಗೆ ಅಷ್ಟಾಗಿ ತುತ್ತಾಗದಿರುವುದು ಸಮಾಧಾನಕರ ವಿಷಯ ವಾದರೂ ಹಲವು ನಕಾರಾತ್ಮಕ ಅಂಶಗಳು ಒಳನುಸುಳಿರುವುದು ಕಳವಳಕಾರಿ.
ವಾದೇವಾದೇ ಜಾಯತೇ ತತ್ವಬೋಧಃ ಎಂದ ಹಾಗೆ ತಾಳಮದ್ದಳೆಯ ಅರ್ಥಧಾರಿಗಳು ವಿವಾದ ಮತ್ತು ವಾಗ್ವಾದಗಳಲ್ಲಿ ತೊಡಗಿಸಿಕೊಳ್ಳದೇ ಅರ್ಥಪೂರ್ಣ ಸಂವಾದದ ಮೂಲಕ ಪ್ರೇಕ್ಷಕರ ಅಭಿರುಚಿಯನ್ನು ಸಂಸ್ಕರಿಸಿ ಪ್ರಭಾವಿಸಿ ಕಲೆಯನ್ನು ಎತ್ತರಕ್ಕೆ ಕೊಂಡೊಯ್ಯು ವತ್ತ ಗಮನ ನೀಡಬೇಕಾಗಿದೆ.
ಪೀಠಿಕೆಯನ್ನು ಹೊರತುಪಡಿಸಿ ಉಳಿದ ಭಾಗ ಸ್ವಗತ ಭಾಷಣ ಅಥವಾ ಏಕಾಲಾಪವಾಗದೇ ಸ್ವಾರಸ್ಯಕರ ರಸಾಭಿವ್ಯಕ್ತಿಯಾಗಲು ಅರ್ಥಧಾರಿಗಳು ಶ್ರಮಿಸಬೇಕು. ಕಲಾವಿದರು ಕಲಾ ಪ್ರತಿಭೆಯೊಂದಿಗೆ ಸಂವೇದನಾಶೀಲತೆ ಬೆಳೆಸಿಕೊಳ್ಳಬೇಕು.
ಪ್ರೇಕ್ಷಕನೂ ಸಹ ಅಪ್ರಬುದ್ಧತೆ, ಅಂಧಾಭಿಮಾನ, ವ್ಯಕ್ತಿಪೂಜೆ, ಅಸಹಿಷ್ಣುತೆ, ಪೂರ್ವಾಗ್ರಹ ಇತ್ಯಾದಿಗಳನ್ನು ತೊಡೆದು ಕಲೆಯ ಸ್ತರವನ್ನು ಎತ್ತರಿಸಲು ತನ್ನ ಹೊಣೆಗಾರಿಕೆಯರಿತು ಪ್ರಯತ್ನಶೀಲನಾಗಬೇಕು ಮತ್ತು ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಈ ನಿಟ್ಟಿ ನಲ್ಲಿ ತಾಳಮದ್ದಳೆಯ ವೃತ್ತಿಪರ ಮತ್ತು ಹವ್ಯಾಸೀ ಕಲಾವಿದರು, ಪ್ರೇಕ್ಷಕರು, ವಿದ್ವಾಂಸರು ಮತ್ತು ವಿಮರ್ಶಕರು ತಾಳಮದ್ದಳೆಯ ಒಟ್ಟಂದದ ದೃಷ್ಟಿಯಿಂದ ಆತ್ಮಾವಲೋಕನ ಮಾಡಿಕೊಳ್ಳುವುದು ಅನಿವಾರ್ಯ. ಹಳೆಯದೆಲ್ಲವೂ ಶ್ರೇಷ್ಠ ಹೊಸದೆಲ್ಲವೂ ಕನಿಷ್ಠ ಎಂದು ಇಲ್ಲಿ ಹೇಳಹೊರಟಿಲ್ಲ.
ಪುರಾಣಮಿತ್ಯೇವ ನ ಸಾಧು ಸರ್ವಂ ನ ಚಾಪಿ ಕಾವ್ಯಂ ನವಮಿತ್ಯವದ್ಯಂ, ಸನ್ತಃ ಪರೀಕ್ಷ್ಯಾ ನ್ಯತರದ್ಭಜನ್ತೇ ಮೂಢಃ ಪರಪ್ರತ್ಯಯನೇಯಬುದ್ಧಿಃ ಎನ್ನುವ ಕಾಳಿದಾಸನ ಉಕ್ತಿಯನ್ನು ನೆನಪಿಸಿಕೊಳ್ಳೋಣ.
ಕಲೆಯ ಉತ್ಕೃಷ್ಟತೆಯ ದೃಷ್ಟಿಯಿಂದ ಹಳೆಯದಾಗಲೀ ಹೊಸದಾಗಲಿ ಎಲ್ಲವನ್ನೂ ಪರೀಕ್ಷಿಸಿ ಸ್ವೀಕರಿಸಿದರೆ ಕಗ್ಗದ ಕವಿಯ ಆಶಯದ ಹೊಸ ಚಿಗುರು ಹಳೆ ಬೇರು ಕೂಡಿರುವ ಮರದ ಸೊಬಗಿನಂತೆ ಹೊಸಯುಕ್ತಿ ಹಳೆತತ್ವ ಸಂಯೋಜನೆಯಿಂದ ಹೊರಹೊಮ್ಮಿದ ತಾಳಮದ್ದಳೆಯೆನ್ನುವ ಅದ್ಭುತ ಕಲಾಪ್ರಕಾರ ಕಂಗೊಳಿಸಲು ಮತ್ತು ಜಗತ್ತಿನ ಸಾಂಸ್ಕೃತಿಕ ಭೂಪಟದಲ್ಲಿ ತನಗೆ ಯೋಗ್ಯವಾದ ಸ್ಥಾನವನ್ನು ಅಲಂಕರಿಸಲು ಸಾಧ್ಯ.