ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ವಿಸಿ ನೇಮಕದಲ್ಲಿ ʼಸ್ತ್ರೀ ಎಂದರೆ ಅಷ್ಟೇ ಸಾಕುʼ ಎಂದ ಸರಕಾರ

ಗದಗ ಜಿಲ್ಲೆಯ ಆರ್ ಡಿಪಿಆರ್ ವಿಶ್ವವಿದ್ಯಾಲಯ, ಹಾವೇರಿಯ ಜಾನಪದ ವಿವಿ ಹಾಗೂ ಹಂಪಿಯ ಕರ್ನಾಟಕ ಕನ್ನಡ ವಿವಿಯ ಕುಲಪತಿ ನೇಮಕ ಮಾಡಲು ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ. ಇದಕ್ಕಾಗಿ ಅರ್ಹರ ಶೋಧನಾ ಸಮಿತಿಯನ್ನೂ ರಚಿಸಲಾಗಿದ್ದು, ಇವರಲ್ಲಾದರೂ ಮಹಿಳೆಯರಿಗೆ, ಪರಿಶಿಷ್ಟ ಜಾತಿ ಮಹಿಳೆಯರಿಗೆ ಅಥವಾ ಕಲ್ಯಾಣ ಕರ್ನಾಟಕ ಭಾಗದ ಮಹಿಳೆಯರಿಗೆ ಅವಕಾಶ ಸಿಗುವುದೇ ಎಂದು ನೋಡಬೇಕಿದೆ.

ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು

ರಾಜ್ಯದ ವಿವಿಗಳಲ್ಲಿ ಮಹಿಳಾ ಪ್ರಾತಿನಿಧ್ಯವಿಲ್ಲ

ಎಸ್ಸಿ, ಎಸ್ಟಿ, 371ಜೆ ಮೀಸಲಿನಲ್ಲೂ ಸಿಕ್ಕಿಲ್ಲ

ಮಹಿಳಾ ಪ್ರಾತಿನಿಧ್ಯ ವಿಚಾರ ಇತ್ತೀಚೆಗೆ ರಾಜ್ಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗುತ್ತಿದೆ. ಅದರಲ್ಲೂ ಸರಕಾರದ ಸ್ಥಾನಮಾನಗಳ ವಿಷಯದಲ್ಲಿ ’ಸ್ತ್ರೀ ಎಂದರೆ ಅಷ್ಟೇ ಸಾಕೆ’ ಎನ್ನುವ ಕವಿಯ ಮಾರ್ಮಿಕ ಸಾಲುಗಳನ್ನು ನೆನಪಿಸುತ್ತವೆ. ರಾಜ್ಯ ಸಚಿವ ಸಂಪುಟದಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯ ಸಿಕ್ಕಿಲ್ಲ ಎನ್ನುವುದು ಸಾಕಷ್ಟು ಟೀಕೆ, ಟಿಪ್ಪಣಿಗೆ ಅವಕಾಶ ನೀಡಿತ್ತು. ಆದರೆ ಸರಕಾರ ಇದಕ್ಕೆ ಇನ್ನೂ ಪರಿಹಾರದ ಉತ್ತರ ನೀಡಿಲ್ಲ.

ಇಂಥ ಸಂದರ್ಭದಲ್ಲಿ ರಾಜ್ಯದಲ್ಲಿ ಇತ್ತೀಚೆಗೆ ವಿಶ್ವವಿದ್ಯಾಲಯಗಳಿಗೆ ಕುಲಪತಿ ನೇಮಕ ಮಾಡುವ ವಿಷಯದಲ್ಲೂ ಸರಕಾರ ಇದೇ ನಿಲುವು ತಳೆದಿರುವುದು ವೇದ್ಯವಾಗುತ್ತಿದೆ. ಬಿಜಾಪುರದ ಮಹಿಳಾ ವಿಶ್ವವಿದ್ಯಾಲಯ ಹಾಗೂ ಸಂಸ್ಕೃತ ವಿಶ್ವವಿದ್ಯಾಲಯ ಹೊರತುಪಡಿಸಿದರೆ ಸರಕಾರ ಇತ್ತೀಚೆಗೆ ನೇಮಕ ಮಾಡಿದ ಸುಮಾರು 19ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳಲ್ಲಿ ಮಹಿಳಾ ನೇಮಕದ ಪ್ರಸ್ತಾಪವೇ ಆಗಿಲ್ಲ. ಆದರೆ ಒಂದು ಹೊಸ ಬೆಳವಣಿಗೆ ಎಂದರೆ ಇತ್ತೀಚಿನ ವಿಷಯಗಳ ನೇಮಕದಲ್ಲಿ ದಲಿತ ಕುಲಪತಿಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಸುಧಾರಣೆಯ ಸಂಕೇತವಾಗಿದೆ.

ಈ ಹಿಂದೆ ಆಗುತ್ತಿದ್ದ ನೇಮಕಗಳಲ್ಲಿ ಬಹುತೇಕ ಲಿಂಗಾಯತರು, ಒಕ್ಕಲಿಗರು ಹಾಗೂ ಬ್ರಾಹ್ಮಣ ಸಮಾಜದ ಕುಲಪತಿಗಳೇ ಹೆಚ್ಚಾಗಿದ್ದರು ಎನ್ನುವುದು ಗಮನಾರ್ಹ. ಆದರೆ ನೇಮಕದಲ್ಲಿ ಒಂದಷ್ಟು ಸುಧಾರಣೆಗಳು ಕಾಣುತ್ತಿದೆ. ಆದರೂ ಮಹಿಳೆಯರಿಗೆ ಅವಕಾಶ ಇಲ್ಲ ಎನ್ನುವುದು ಮಹಿಳಾ ವಲಯದಲ್ಲಿ ಭಾರೀ ಟೀಕೆಗೆ ಗ್ರಾಸವಾಗಿದೆ.

ಇದನ್ನೂ ಓದಿ: Lokesh Kayarga Column: ಮತ ವಂಚಿತರೇ ದೇಶ ಬಿಟ್ಟು ತೆರಳಲು ಸಜ್ಜಾಗಿ !

ಯಾವ ಸಮಾಜಕ್ಕೆ ಆದ್ಯತೆ ಸಿಕ್ಕಿದೆ ?: ರಾಜ್ಯದಲ್ಲಿ ಉನ್ನತ ಶಿಕ್ಷಣ ವ್ಯಾಪ್ತಿಗೆ ಬರುವ 32 ವಿಶ್ವವಿದ್ಯಾ ಲಯಗಳೂ ಸೇರಿದಂತೆ ಒಟ್ಟು 41 ವಿಶ್ವವಿದ್ಯಾಲಯಗಳಿವೆ. ಇದರಲ್ಲಿ ಜಿಲ್ಲೆಗೊಂದು ವಿಶ್ವವಿದ್ಯಾ ಲಯವಿದ್ದು, ಅವುಗಳಲ್ಲಿ ಕೆಲವು ಇನ್ನೂ ಆರಂಭವೇ ಆಗಿಲ್ಲ. 19 ವಿಶ್ವವಿದ್ಯಾಲಯಗಳಿಗೆ ಇತ್ತೀಚಿಗೆ ಕುಲಪತಿಗಳ ನೇಮಕವಾಗಿದ್ದು, ಇನ್ನೂ 4 ವಿಶ್ವವಿದ್ಯಾಲಯಗಳಿಗೆ ಇನ್ನೂ ಕುಲಪತಿ ನೇಮಕವೇ ಆಗಿಲ್ಲ.

ಇವುಗಳ ಪೈಕಿ ಜಾತಿವಾರು ಪ್ರಾತಿನಿಧ್ಯಗಳನ್ನು ನೋಡಿದರೆ, 10 ವಿವಿಗಳಲ್ಲಿ ಪರಿಶಿಷ್ಜ ಜಾತಿ ಬಲಗೈ ಸಮುದಾಯಕ್ಕೆ ಹಾಗೂ 1 ವಿವಿಯಲ್ಲಿ ಪರಿಶಿಷ್ಟಜಾತಿ ಎಡಗೈ ಸಮಾಜಕ್ಕೆ 2 ವಿವಿಯಲ್ಲಿಕುರುಬ ಸಮಾಜಕ್ಕೆ 1 ವಿವಿಯಲ್ಲಿ ಗೊಲ್ಲ ಸಮಾಜಕ್ಕೆ, ಅಲ್ಲ ಒಂದೊಂದು ವಿಧಿಯಲ್ಲಿ ಮುಸ್ಲಿಂ ಮತ್ತು ಕ್ರಿಶ್ಚಿಯನ್ ಸಮಾಜಕ್ಕೆ ಅವಕಾಶ ನೀಡಲಾಗಿದೆ. ಆದರೆ ಒಟ್ಟಾರೆ ಕುಲಪತಿಗಳ ನೇಮಕ ನೋಡಿದರೆ ಲಿಂಗಾಯಿತ ಸಮಾಜಕ್ಕೆ ಹೆಚ್ಚು ಅವಕಾಶ ಸಿಕ್ಕಿದ್ದು ಎರಡನೇ ಸ್ಥಾನ ಒಕ್ಕಲಿಗರಿಗೆ ಲಭಿಸಿದೆ. ಆದರೆ ಮಹಿಳೆಯರಿಗೆ ಮಾತ್ರ ಎಲ್ಲಿಯೂ ಪ್ರಾತಿನಿಧ್ಯ ಸಿಕ್ಕಿಲ್ಲ. ಅದರಲ್ಲೂ ಪರಿಶಿಷ್ಟಜಾತಿ ಮಹಿಳೆಗೆ ಈತನಕ ಅವಕಾಶವೇ ಸಿಕ್ಕಿಲ್ಲ.

ಇನ್ನು 371 ಜೆ ಅಡಿಯಲ್ಲಿ ನೀಡಲಾಗುವ ಪ್ರಾತಿನಿಧ್ಯದಲ್ಲಿಯೂ ಈ ತನಕ ಮಹಿಳೆಯರಿಗೆ ಅವಕಾಶ ನೀಡುವ ಪ್ರಯತ್ನ ನಡೆದಿಲ್ಲ. ಇದರ ಮಧ್ಯೆ ತುಮಕೂರು, ಗದಗ ಜಿಲ್ಲೆಯ ಆರ್ ಡಿಪಿಆರ್ ವಿಶ್ವವಿದ್ಯಾಲಯ, ಹಾವೇರಿಯ ಜಾನಪದ ವಿವಿ ಹಾಗೂ ಹಂಪಿಯ ಕರ್ನಾಟಕ ಕನ್ನಡ ವಿವಿಯ ಕುಲಪತಿ ನೇಮಕ ಮಾಡಲು ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ. ಇದಕ್ಕಾಗಿ ಅರ್ಹರ ಶೋಧನಾ ಸಮಿತಿಯನ್ನೂ ರಚಿಸಲಾಗಿದ್ದು, ಇವರಲ್ಲಾದರೂ ಮಹಿಳೆಯರಿಗೆ, ಪರಿಶಿಷ್ಟ ಜಾತಿ ಮಹಿಳೆಯರಿಗೆ ಅಥವಾ ಕಲ್ಯಾಣ ಕರ್ನಾಟಕ ಭಾಗದ ಮಹಿಳೆಯರಿಗೆ ಅವಕಾಶ ಸಿಗುವುದೇ ಎಂದು ನೋಡಬೇಕಿದೆ.

ಇಲ್ಲಿ ಪ್ರಭಾವಿಗಳದ್ದೇ ಆಟ

ಅಚ್ಚರಿ ಎಂದರೆ ಕಳೆದ ಮೂರು ವರ್ಷಗಳಿಂದ ಮಹಾರಾಣಿ ಕ್ಲಷ್ಟರ್ ವಿವಿಯಲ್ಲಿ ಸುಮಾರು 11 ಮಂದಿ ಪ್ರಭಾರಿ ಕುಲಪತಿಗಳು ಬಂದು ಹೋಗಿದ್ದಾರೆ. ಇನ್ನೂ ವಿವಿ ಯಲ್ಲಿ ಪ್ರಭಾರಿ ಕುಲಪತಿಯೇ ಇದ್ದಾರೆ. ಆದರೆ ಸರಕಾರ ಈತನಕ ಕುಲಪತಿ ನೇಮಕ ಮಾಡುವ ನಿಟ್ಟಿನಲ್ಲಿ ಪ್ರಯತ್ನ ಮಾಡಿಲ್ಲ. ಇನ್ನು ಮಹಿಳಾ ಕುಲಪತಿ ನೇಮಕ ಮಾಡುವ ಬಗ್ಗೆ ಸರಕಾರದ ಮುಂದೆ ಯಾವುದೇ ಪ್ರಸ್ತಾಪಗಳೇ ಆಗಿಲ್ಲ ಅಧಿಕಾರಿಗಳು ಹೇಳುತ್ತಿದ್ದಾರೆ.

ಇಲ್ಲೂ ಮಹಿಳೆಗಿಲ್ಲ ಅವಕಾಶ

ಬೆಂಗಳೂರಿನಲ್ಲಿರುವ ಮಹಾರಾಣಿ ಕ್ಲಷ್ಟರ್ ವಿವಿಯಲ್ಲಿ ಸುಮಾರು 3 ವರ್ಷಗಳಿಂದ ಕುಲಪತಿ ಯನ್ನೇ ನೇಮಕ ಮಾಡದೆ ಡೀನ್‌ಗಳನ್ನೇ ಪ್ರಭಾವಿ ಕುಲಪತಿಗಳನ್ನಾಗಿ ಪ್ರತೀ ಮೂರ್ನಾಲ್ಕು ತಿಂಗಳಿಗೆ ಒಬ್ಬರನ್ನು ಬದಲಾಯಿಸಲಾಗುತ್ತಿದೆ. ಈ ಬದಲಾವಣೆಯಲ್ಲೂ ಮಹಿಳೆಯರಿಗೆ ಅವಕಾಶ ನೀಡಬೇಕೆನ್ನುವ ಚಿಂತನೆ ಸರಕಾರಕ್ಕೆ ಬಂದಿಲ್ಲ.