ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Lokesh Kayarga Column: ಮತ ವಂಚಿತರೇ ದೇಶ ಬಿಟ್ಟು ತೆರಳಲು ಸಜ್ಜಾಗಿ !

ಎಸ್‌ಐಆರ್ ಪ್ರಕ್ರಿಯೆ ಪೂರ್ಣಗೊಳ್ಳಲು ಇನ್ನು ಒಂದು ಹೆಜ್ಜೆಯಷ್ಟೇ ಬಾಕಿ ಇದೆ. ಈ ಹಂತದಲ್ಲಾದರೂ ನೈಜ ಪ್ರಜೆಗಳಲ್ಲಿ ಯಾರೊಬ್ಬರೂ ಮತಹಕ್ಕಿನಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕಾಗಿದೆ. ಆದರೆ ಮೊದಲ ಹಂತದಲ್ಲಿ ಸರಿಯಾಗಿ ಕೆಲಸ ನಿರ್ವಹಿಸದ ‘ಸೋಮಾರಿ’ ಬಿಎಲ್‌ಒಗಳು ಒಮ್ಮೆಲೇ ಚುರುಕಾಗು ತ್ತಾರೆ ಎನ್ನಲಾಗದು. ಮತದಾರರ ಮನೆಗೆ ಭೇಟಿ ಕೊಡದೆ ಮತಗಟ್ಟೆಯಲ್ಲಿ ಕುಳಿತೇ ಫಾರ್ಮ್ ವಿತರಿಸಿದ ಮತ್ತು ಮನ ಬಂದಂತೆ ವಿವರಗಳನ್ನು ದಾಖಲಿಸಿದ ಅಧಿಕಾರಿಗಳಿದ್ದಾರೆ. ಇಂತಹ ಮತಗಟ್ಟೆಗಳಲ್ಲಿಯೇ ಅತಿ ಹೆಚ್ಚು ಮತದಾರರಿಗೆ ನೋಟಿಸ್ ಜಾರಿಯಾಗಿದೆ. ಆದರೆ ಈ ನೋಟಿಸ್‌ಗಳೂ ಸಂಬಂಧಿತರಿಗೆ ತಲುಪುತ್ತಿಲ್ಲ.

ಮತ ವಂಚಿತರೇ ದೇಶ ಬಿಟ್ಟು ತೆರಳಲು ಸಜ್ಜಾಗಿ !

-

ಲೋಕಮತ

ಕೆಲ ತಿಂಗಳ ಹಿಂದಷ್ಟೇ ಬಿಜೆಪಿ ಸೇರಿದ ಆಪ್ ಯುವ ನಾಯಕ ರಾಘವ್ ಚಡ್ಡಾ, ಮತಪಟ್ಟಿಯ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಬಳಿಕ ತಮ್ಮ ಹೆಸರು ಮತದಾರರ ಪಟ್ಟಿಯಿಂದ ನಾಪತ್ತೆ ಯಾಗಿದೆ ಎಂದು ದೂರಿಕೊಂಡಿದ್ದಾರೆ. ಇದು ಜನರಿಂದ ಚುನಾಯಿತ ಸಂಸದರೊಬ್ಬರ ಕಥೆ. ದೇಶಾದ್ಯಂತ ಇಂತಹ ಕೋಟ್ಯಂತರ ಜನರು ಈಗ ಮತಪಟ್ಟಿಯಿಂದ ಹೊರಗುಳಿದಿದ್ದಾರೆ.

ಅನೇಕರಿಗೆ ತಮ್ಮ ಹೆಸರು ಪಟ್ಟಿಯಿಂದ ಹೊರಗುಳಿದಿದೆ ಎಂಬ ವಿಚಾರ ತಿಳಿದೇ ಇಲ್ಲ. ಈ ಮಧ್ಯೆ ‘‘ಮತಪಟ್ಟಿಯಿಂದ ಹೊರಗುಳಿದವರಿಗೆ ಸರಕಾರದ ಯಾವ ಸೌಲಭ್ಯವನ್ನೂ ಕೊಡುವುದಿಲ್ಲ. ಇಂತವರನ್ನು ದೇಶದಿಂದ ಹೊರ ಹಾಕಲಾಗುತ್ತದೆ’’ ಎಂಬ ಬೆದರಿಕೆಯ ತೂಗುಗತ್ತಿಗಳನ್ನು ಹರಿಬಿಡಲಾಗುತ್ತಿದೆ. ಇದು ನಿಜವಾದರೆ ನಮ್ಮ ಬಂಧುಮಿತ್ರರಲ್ಲೇ ಅನೇಕರು ದೇಶ ಬಿಟ್ಟು ತೆರಳಲು ಸಿದ್ಧರಾಗಬೇಕಿದೆ !

ದೇಶದ ಹಿತದೃಷ್ಟಿಯಿಂದ ಹಮ್ಮಿಕೊಂಡಿರುವ ಒಂದು ಒಳ್ಳೆಯ ಯೋಜನೆ, ಉದ್ದೇಶ, ಅತ್ಯಂತ ಕಳಪೆ ಅನುಷ್ಠಾನದ ಕಾರಣಕ್ಕೆ ಹೇಗೆ ಜನವಿರೋಧಿ ಎನಿಸಿಕೊಳ್ಳಬಹುದು ಎನ್ನುವುದಕ್ಕೆ ಈ ಯೋಜನೆ ಅತ್ಯುತ್ತಮ ಉದಾಹರಣೆ. ‘‘ಈಗ ಯಾರ ಹೆಸರು ಬಿಟ್ಟು ಹೋಗಿದೆಯೋ ಅವರೆಲ್ಲರಿಗೂ ಸಾಕಷ್ಟು ಕಾಲಾವಕಾಶ ನೀಡಲಾಗಿದೆ.

ಫಾರ್ಮ್ ಭರ್ತಿ ಮಾಡಿ ಸಲ್ಲಿಸದೇ ಹೋದರೆ, ತಪ್ಪು ಅವರದ್ದೇ’’ ಎನ್ನುವುದು ಚುನಾವಣೆ ಆಯೋಗದ ವಾದ. ಆದರೆ ಸುತ್ತು ಬಳಸಿ ಮತದಾರರ ಸಾಚಾತನವನ್ನು ಅರಿಯಲು ಹೊರಟ ಆಯೋಗದ ತಪ್ಪು ನಡೆ, ಬಿಎಲ್‌ಒಗಳು ಮತ್ತು ಅವರ ಮೇಲಿನ ಅಧಿಕಾರಿಗಳ ಬೇಜವಾಬ್ದಾರಿ, ಸೋಮಾರಿತನದಿಂದ ಹೆಸರು ಲಿಂಕ್ ಮಾಡಲಾಗದಿದ್ದರೆ ಏನು ಪರಿಹಾರ ?

ಇದನ್ನೂ ಓದಿ: Lokesh Kayarga Column: ಕಸ್ತೂರಿರಂಗನ್‌ ವರದಿ ತಿರಸ್ಕಾರ ಪರಿಹಾರವಲ್ಲ

ಆಯೋಗವು ಈ ತನಕ ವಿತರಿಸಿದ ಮತದಾರರ ಗುರುತಿನ ಚೀಟಿಯಲ್ಲಿ ಎಷ್ಟು ಮತದಾರರ ವಿವರಗಳು ಸರಿಯಾಗಿವೆ ಎಂದು ಪರಿಶೀಲಿಸಲು ಹೊರಟರೆ, ಮುಕ್ಕಾಲು ಪಾಲು ಗುರುತಿನ ಚೀಟಿ ಗಳು ಅನರ್ಹಗೊಳ್ಳುತ್ತವೆ. ಎಷ್ಟೇ ದಾಖಲೆಗಳನ್ನು ಕೊಟ್ಟರೂ ಮತದಾರರ ಹೆಸರನ್ನು ಇಂಗ್ಲಿಷ್ ಮತ್ತು ಕನ್ನಡದಲ್ಲಿ ಸರಿಯಾಗಿ ನಮೂದಿಸಲು, ಅವರ ಪೋಷಕರು, ಸಂಗಾತಿಗಳ ಹೆಸರನ್ನು, ಅವರ ನಡುವಿನ ಸಂಬಂಧ ಮತ್ತು ವಯಸ್ಸನ್ನು ತಪ್ಪಿಲ್ಲದೆ ದಾಖಲಿಸಲು ನಮ್ಮ ಅಧಿಕಾರಿಗಳಿಗೆ ಸಾಧ್ಯವಾಗಿಲ್ಲ. ಇಂತಹ ನೂರೆಂಟು ಲೋಪಗಳನ್ನು ಇಟ್ಟುಕೊಂಡೇ ಆಯೋಗ ಸಮಗ್ರ ಪರಿಷ್ಕರಣೆ ಯ ಕಸರತ್ತು ನಡೆಸುತ್ತಿದೆ. ಸಹಜವಾಗಿಯೇ ಇಲ್ಲಿ ತಪ್ಪುಗಳಾಗಿವೆ. ಆದರೆ ಈ ಎಲ್ಲ ತಪ್ಪುಗಳಿಗೂ ಈಗ ಮತದಾರರನ್ನು ಹೊಣೆ ಮಾಡಲಾಗುತ್ತಿದೆ.

ಚುನಾವಣಾ ಆಯೋಗದ ಪ್ರಕಾರ, ಇದು ಅಂತಿಮ ಪಟ್ಟಿಯಲ್ಲ. ಸೆಪ್ಟೆಂಬರ್ 23ರವರೆಗೆ ಸಾರ್ವಜನಿಕರಿಗೆ ಅವರ ಹಕ್ಕು-ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದ್ದು, ಫಾರ್ಮ್- 6 ಸಲ್ಲಿಸುವ ಮೂಲಕ, ನಾನಾ ಕಾರಣಗಳಿಂದ ಹೊರಗುಳಿದ ಅರ್ಹ ಮತದಾರರು ಮತ್ತೆ ಹೆಸರು ಸೇರಿಸಿಕೊಳ್ಳಬಹುದು. ಆದರೆ ಅಧಿಕಾರಿಗಳ ಎಡವಟ್ಟಿನಿಂದ ಈಗಾಗಲೇ ಹೆಸರು ತಪ್ಪಿಸಿಕೊಂಡ ವರು, ಸರಿಯಾಗಿ ಫಾರ್ಮ್ ಭರ್ತಿ ಮಾಡಿ ಸಲ್ಲಿಸಿದ್ದರೂ ನೋಟಿಸ್ ಪಡೆದವರು ಯಾರನ್ನು ದೂರಬೇಕು? 60 ವರ್ಷ ಮೇಲ್ಪಟ್ಟ ಲಕ್ಷಾಂತರ ಹಿರಿಯ ನಾಗರಿಕರೂ ಈಗ ಯಾವುದೋ ಅಧಿಕಾರಿ ಮುಂದೆ ನಿಂತು ತಮ್ಮ ಗುರುತನ್ನು ಸಾಬೀತು ಮಾಡಿಕೊಳ್ಳಬೇಕಾದ ಪರಿಸ್ಥಿತಿಗೆ ಯಾರು ಹೊಣೆ ?

vote _ok

ದೆಹಲಿ ಹೈಕೋರ್ಟ್ ಇತ್ತೀಚೆಗೆ ನೀಡಿರುವ ತೀರ್ಪಿನ, ಮತದಾರರ ಪಟ್ಟಿಯಿಂದ ಹೊರಗುಳಿದವರು ಬಿಎಲ್‌ಒಗಳನ್ನು ಹೊಣೆ ಮಾಡುವಂತಿಲ್ಲ. ಅಂದರೆ ಅಪ್ಪಿ ತಪ್ಪಿ ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇಲ್ಲದಿದ್ದರೆ ನಿಮ್ಮ ಹಣೆಬರಹವನ್ನು ದೂರಬೇಕೇ ಹೊರತು ಇನ್ನಾರನ್ನೂ ದೂರು ವಂತಿಲ್ಲ. ಆದರೆ ಬಿಎಲ್‌ಒಗಳು ಎಲ್ಲಿ ಸರಿಯಾಗಿ ಕರ್ತವ್ಯ ನಿರ್ವಹಿಸಿದ್ದಾರೋ ಅಂತಹ ಮತಗಟ್ಟೆ ಗಳಲ್ಲಿ ಯಾರೂ ನೋಟಿಸ್ ಪಡೆದಿಲ್ಲ. ನಿರ್ದಿಷ್ಟ ಮತಗಟ್ಟೆಯಲ್ಲಿ ಸರಾಸರಿ ಸಂಖ್ಯೆಗಿಂತ ಹೆಚ್ಚು ಮತದಾರರು ಪಟ್ಟಿಯಿಂದ ಹೊರಗುಳಿದಿದ್ದಾರೆ ಅಥವಾ ನೋಟಿಸ್ ಪಡೆಯುತ್ತಿದ್ದಾರೆ ಎಂದರೆ ಅಲ್ಲಿನ ಬಿಎಲ್‌ಒ ಸರಿಯಾಗಿ ಕೆಲಸ ನಿರ್ವಹಿಸಿಲ್ಲ ಎನ್ನುವುದು ಸ್ಪಷ್ಟ.

ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದ ಮತಗಟ್ಟೆಯೊಂದರಲ್ಲಿ ನನಗೆ ಪರಿಚಿತ ಶಿಕ್ಷಕಿಯೊಬ್ಬರು ಬಿಎಲ್‌ಒ ಆಗಿ ಕಾರ್ಯನಿರ್ವಹಿಸಿದ್ದರು. ಮಾಜಿ ಸಿಎಂ ಸಿದ್ದರಾಮಯ್ಯ ಅವರ ಮನೆಗೆ ಸಮೀಪ ವಿರುವ ಈ ಮತಗಟ್ಟೆಯ ಕೆಲಸವನ್ನು ಅವರು ಅತ್ಯಂತ ಮುತುವರ್ಜಿಯಿಂದ ನಿರ್ವಹಿಸಿದ್ದರು. ಅವರಿಂದ ಫಾರ್ಮ್ ಪಡೆದವರಲ್ಲಿ ಒಬ್ಬ ಮತದಾರರೂ ನೋಟಿಸ್ ಪಡೆದಿಲ್ಲ. ಮೃತಪಟ್ಟವರು, ವರ್ಗಾವಣೆಯಾದವರು ಬಿಟ್ಟರೆ ಇನ್ನಾರೂ ಯಾದಿಯಿಂದ ಹೊರಗುಳಿದಿಲ್ಲ. ಇದೇ ಮತಗಟ್ಟೆ ಯಲ್ಲಿ ಕಾರ್ಯ ನಿರ್ವಹಿಸಿದ ಇನ್ನೊಬ್ಬ ಬಿಎಲ್‌ಒ ಅವರ ವ್ಯಾಪ್ತಿಯಲ್ಲಿ ನೂರಾರು ಮಂದಿ ನೋಟಿಸ್ ಪಡೆದಿದ್ದಾರೆ. ಹಾಗಿದ್ದರೆ ತಪ್ಪು ಯಾರದ್ದು ?

ಆಯೋಗವು ನಾಗರಿಕರಿಗೆ ನೀಡಿದ ನೋಟಿಸ್‌ಗಳಲ್ಲಿ ನಮೂದಿಸಿದ ಕಾರಣಗಳು ಹಾಸ್ಯಾಸ್ಪದ ವಾಗಿವೆ. 67 ವರ್ಷದ ನಿವೃತ್ತ ಶಿಕ್ಷಕಿಯೊಬ್ಬರಿಗೆ ಬಂದ ನೋಟಿಸ್‌ನಲ್ಲಿ, ‘‘ನಿಮ್ಮ ಮಗ/ಮಗಳು ಎಂದು ಒಬ್ಬರೊಂದಿಗೆ ಜೋಡಿಸಲಾಗಿದೆ. ಅವರನ್ನು ಆರು ಜನರು ತಮ್ಮ ತಂದೆ ಎಂದು ಹೇಳಿ ಕೊಂಡಿದ್ದಾರೆ. ಇದು ತಪ್ಪಾದ ಜೋಡಣೆಯಾಗಿರುವಂತೆ ತೋರುತ್ತದೆ’’ ಎಂದು ಮೊದಲ ಕಾರಣ ನೀಡಲಾಗಿದೆ. ಈ ವಾಕ್ಯವನ್ನು ಹೇಗೆ ಅರ್ಥ ಮಾಡಿಕೊಳ್ಳಬೇಕೋ ಆಯೋಗದ ಭಾಷಾ ತಜ್ಞರೇ ತಿಳಿಸಬೇಕು.

ಇದೇ ನೋಟಿಸ್‌ನಲ್ಲಿ ವ್ಯಕ್ತಪಡಿಸಿದ ಮತ್ತೊಂದು ಸಂಶಯ ಹೀಗಿದೆ- ‘‘ಹಿಂದಿನ ಎಸ್‌ಐಆರ್ ಸಮಯದಲ್ಲಿ ಮತದಾರರ ಪಟ್ಟಿಯೊಂದಿಗೆ ನಿಮ್ಮನ್ನು ಜೋಡಿಸಲು ಬಳಸಲಾದ ನಿಮ್ಮ ಪೋಷಕರ ವಿವರಗಳು ಮತ್ತು ನಿಮ್ಮ ನಡುವಿನ ವಯಸ್ಸಿನ ವ್ಯತ್ಯಾಸವು 15 ವರ್ಷಗಳಿಗಿಂತ ಕಡಿಮೆ ಇದೆ. ಇದು ತಪ್ಪಾದ ಜೋಡಣೆಯಂತೆ ತೋರುತ್ತಿದೆ’’. ಈ ಹಿರಿಯ ನಾಗರಿಕರ ಪೋಷಕರು ಹೆತ್ತವರು ಮೃತಪಟ್ಟು ಮೂರು ದಶಕಗಳೇ ಕಳೆದಿವೆ. ಮತದಾರರ ಪಟ್ಟಿಗೆ ಸೇರಲು ತಮ್ಮ ಪತಿಯ ಹೆಸರು ಮತ್ತು ವಿಳಾಸ ಕೊಟ್ಟಿದ್ದರೂ ಈ ರೀತಿಯ ಸಬೂಬುಗಳನ್ನು ನೀಡಲಾಗಿದೆ. ಎಸ್‌ಐಆರ್ ಪ್ರಕ್ರಿಯೆ ಮುಗಿಸಿಕೊಂಡು ಮುಂಬಯಿನಲ್ಲಿರುವ ತಮ್ಮ ಪುತ್ರಿ ಮನೆಗೆ ತೆರಳಿರುವ ಈ ಹಿರಿಯ ಮಹಿಳೆ ಈಗ ದಾಖಲೆಗಳನ್ನು ಹಿಡಿದುಕೊಂಡು ಮತ್ತೆ ಮೈಸೂರಿಗೆ ಬರಬೇಕಾಗಿದೆ. ಅವರ ಸಮಯಕ್ಕೆ, ತಗುಲುವ ಖರ್ಚಿಗೆ, ಮಾನಸಿಕ ಸಂಕಷ್ಟಕ್ಕೆ ಆಯೋಗ ಪರಿಹಾರ ನೀಡಲು ಸಾಧ್ಯವಿದೆಯೇ ?

ಇದು ಒಂದು ಉದಾಹರಣೆಯಷ್ಟೇ. ಎಸ್‌ಐಆರ್ ಪ್ರಕ್ರಿಯೆಯಲ್ಲಿ 2002ರ ಹಿಂದಿನ ಮತದಾರರ ಪಟ್ಟಿಯೊಂದಿಗೆ ತಮ್ಮ ವಿವರಗಳನ್ನು ವ್ಯಾಪ್ ಮಾಡಲು ಸಾಧ್ಯವಾಗದ ಲಕ್ಷಾಂತರ ಮತದಾರರಿಗೆ ನೋಟಿಸ್ ನೀಡಲಾಗುತ್ತಿದೆ. ಇವರೆಲ್ಲರೂ ಈಗ ತಮ್ಮ ಕೆಲಸ ಕಾrfyಗಳೆಲ್ಲವನ್ನೂ ಬದಿಗೊತ್ತಿ, ಸೂಚಿಸಿದ ದಿನಾಂಕದಂದು ಚುನಾವಣಾ ಅಧಿಕಾರಿ ಮುಂದೆ ಖುದ್ದು ಹಾಜರಾಗಿ ದಾಖಲೆಗಳನ್ನು ಸಲ್ಲಿಸಬೇಕಾಗಿದೆ.

ಕರ್ನಾಟಕದಲ್ಲಿ ಪರಿಷ್ಕರಣೆಗೂ ಮುನ್ನ ಇದ್ದ 5.54 ಕೋಟಿ ಮತದಾರರಲ್ಲಿ ಸುಮಾರು 1.09 ಕೋಟಿಯಿಂದ 1.10 ಕೋಟಿ ಮತದಾರರನ್ನು (ಸುಮಾರು 19.4% ರಿಂದ 19.6%) ಗೈರು, ಸ್ಥಳಾಂತರ, ನಿಧನ, ನಕಲಿ ಮತ್ತು ಇತರ (ಎಎಸ್‌ಡಿಡಿಒ) ಕಾರಣಗಳನ್ನಿತ್ತು ಕರಡು ಪಟ್ಟಿಯಿಂದ ಹೊರಗಿಡ ಲಾಗಿದೆ. ಅರ್ಜಿ ನಮೂನೆಗಳಲ್ಲಿ ಲೋಪದೋಷಗಳಿದ್ದ ಅಥವಾ ವಿವರ ಹೊಂದಾಣಿಕೆಯಾಗದ ಕಾರಣಗಳ ಮೇಲೆ ಸುಮಾರು 43.80 ಮತದಾರರಿಗೆ ಆಯೋಗದಿಂದ ನೋಟಿಸ್‌ಗಳನ್ನು ನೀಡಲಾಗಿದೆ.

ಮತಪಟ್ಟಿಯಿಂದ ಹೊರಗುಳಿದ 1.10 ಕೋಟಿ ಮತದಾರರಲ್ಲಿ ಒಂದು ಲಕ್ಷ ನೈಜ ಮತದಾರರು ಇದ್ದಾರೆ ಎಂದುಕೊಂಡರೂ ಅದು ಇದೇ ದೇಶದ ನಾಗರಿಕರ ಮೂಲಭೂತ ಹಕ್ಕನ್ನು ಕಸಿದು ಕೊಂಡತ್ತಲ್ಲವೇ ? ಒಂದು ವೇಳೆ ನಮ್ಮ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಈಗಾಗಲೇ ಎಚ್ಚರಿಸಿದಂತೆ, ವೋಟರ್ಸ್‌ ಲಿಸ್ಟಿನಲ್ಲಿ ಹೆಸರಿಲ್ಲದ ಕಾರಣಕ್ಕೆ ಅವರಿಗೆ ಸರಕಾರಿ ಸೌಲಭ್ಯಗಳನ್ನು ನಿರಾಕರಿಸಿದರೆ, ಅದನ್ನು ಸರಿಪಡಿಸುವವರಾರು ? ಒಂದು ವೇಳೆ ಇವರು ಭಾರತದ ನಾಗರಿಕರೇ ಅಲ್ಲ ಎಂದು ಆಡಳಿತಾರೂಢ ಸರಕಾರ ಈ ದೇಶದಿಂದ ಹೊರದಬ್ಬಲು ಮುಂದಾದರೆ ಇವರು ಎಲ್ಲಿಗೆ ಹೋಗಬೇಕು ? ಪದ್ಮಶ್ರೀ ಪುರಸ್ಕೃತ ಹಾಜಬ್ಬ ಅವರಂತಹ ಚಿರಪರಿಚಿತರಿಗೂ ಅಧಿಕಾರಿ ಗಳು ನೋಟಿಸ್ ನೀಡುತ್ತಾರೆ ಎಂದ ಮೇಲೆ ಉಳಿದವರ ಪಾಡೇನು ?

ಎಸ್‌ಐಆರ್ ಪ್ರಕ್ರಿಯೆಯ ಮೂರನೇ ಹಂತದ ಕರಡು ಪಟ್ಟಿ ಸಿದ್ಧವಾಗಿರುವ ಈ ಹೊತ್ತಿನಲ್ಲಿ ದೇಶಾದ್ಯಂತ ಸುಮಾರು 6.15 ಕೋಟಿಗಿಂತಲೂ ಹೆಚ್ಚು ಮತದಾರರ ಹೆಸರುಗಳನ್ನು ಮತಪಟ್ಟಿ ಯಿಂದ ಹೊರಗಿಡಲಾಗಿದೆ. ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಅಂದರೆ ಸುಮಾರು 1.58 ಕೋಟಿ (17.08%) ಮತದಾರರ ಹೆಸರುಗಳನ್ನು ಕರಡು ಪಟ್ಟಿಯಿಂದ ತೆರವುಗೊಳಿಸಲಾಗಿದೆ. ಶೇಕಡಾವಾರು ಆಧಾರದಲ್ಲಿ ನೋಡಿದರೆ ಕೇಂದ್ರಾಡಳಿತ ಪ್ರದೇಶ ದೆಹಲಿ (35.89%) ಹಾಗೂ ಚಂಡೀಗಢದಲ್ಲಿ (31.84%) ಅತಿ ಹೆಚ್ಚಿನ ಶೇಕಡಾವಾರು ಪ್ರಮಾಣದ ಮತದಾರರ ಹೆಸರುಗಳು ಕಡಿಮೆಯಾಗಿವೆ.

ನೋಟಿಸೂ ತಲುಪುತ್ತಿಲ್ಲ

ಎಸ್‌ಐಆರ್ ಪ್ರಕ್ರಿಯೆ ಪೂರ್ಣಗೊಳ್ಳಲು ಇನ್ನು ಒಂದು ಹೆಜ್ಜೆಯಷ್ಟೇ ಬಾಕಿ ಇದೆ. ಈ ಹಂತದಲ್ಲಾ ದರೂ ನೈಜ ಪ್ರಜೆಗಳಲ್ಲಿ ಯಾರೊಬ್ಬರೂ ಮತಹಕ್ಕಿನಿಂದ ವಂಚಿತರಾಗದಂತೆ ನೋಡಿಕೊಳ್ಳ ಬೇಕಾಗಿದೆ. ಆದರೆ ಮೊದಲ ಹಂತದಲ್ಲಿ ಸರಿಯಾಗಿ ಕೆಲಸ ನಿರ್ವಹಿಸದ ‘ಸೋಮಾರಿ’ ಬಿಎಲ್‌ಒಗಳು ಒಮ್ಮೆಲೇ ಚುರುಕಾಗುತ್ತಾರೆ ಎನ್ನಲಾಗದು. ಮತದಾರರ ಮನೆಗೆ ಭೇಟಿ ಕೊಡದೆ ಮತಗಟ್ಟೆಯಲ್ಲಿ ಕುಳಿತೇ ಫಾರ್ಮ್ ವಿತರಿಸಿದ ಮತ್ತು ಮನ ಬಂದಂತೆ ವಿವರಗಳನ್ನು ದಾಖಲಿಸಿದ ಅಧಿಕಾರಿಗಳಿ ದ್ದಾರೆ. ಇಂತಹ ಮತಗಟ್ಟೆಗಳಲ್ಲಿಯೇ ಅತಿ ಹೆಚ್ಚು ಮತದಾರರಿಗೆ ನೋಟಿಸ್ ಜಾರಿಯಾಗಿದೆ. ಆದರೆ ಈ ನೋಟಿಸ್‌ಗಳೂ ಸಂಬಂಧಿತರಿಗೆ ತಲುಪುತ್ತಿಲ್ಲ.

ಆಯೋಗವು ನೀಡಿರುವ ಮಾಹಿತಿ ಪ್ರಕಾರ, ಸೆಪ್ಟೆಂಬರ್ ಮೊದಲ ವಾರದ ತನಕ ಶೇ.83ರಷ್ಟು ಮತದಾರರಿಗೆ ನೋಟಿಸ್ ತಲುಪಿಲ್ಲ. ರಾಜ್ಯದಲ್ಲಿ ಇದುವರೆಗೆ 43.8 ಲಕ್ಷ ನೋಟಿಸ್‌ಗಳನ್ನು ಸಿದ್ಧಪಡಿಸಲಾಗಿದ್ದು, ಈ ಪೈಕಿ ಕೇವಲ 7.3 ಲಕ್ಷ ನೋಟಿಸ್‌ಗಳು ಮಾತ್ರ ಸಂಬಂಧಿತ ಮತದಾರರಿಗೆ ತಲುಪಿವೆ. ಸುಮಾರು 36.4 ಲಕ್ಷ ನೋಟಿಸ್‌ಗಳು ಇನ್ನೂ ವಿತರಣೆಗೆ ಬಾಕಿಯಿವೆ. ಬಹುತೇಕ ಕಡೆಗಳಲ್ಲಿ ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇಲ್ಲದಿರುವುದನ್ನು ಕಂಡು ಮತದಾರರೇ ಬಿಎಲ್‌ಒಗಳ ಬಳಿ ಸಾಗುತ್ತಿದ್ದಾರೆ. ಇಂತವರಿಗಷ್ಟೇ ಇವರು ನೋಟಿಸ್ ಕೈಗಿಡುತ್ತಿದ್ದಾರೆ.

ಮತದಾರರ ಅಸಲಿತನ ತಿಳಿಯುವಲ್ಲೂ ಬೂತ್ ಮಟ್ಟದ ಅಧಿಕಾರಿಗಳ (ಬಿಎಲ್‌ಒ) ನಡುವೆ ಏಕರೂಪತೆಯಿಲ್ಲ. ಆಯೋಗವು ನೀಡಿರುವ ಮಾಹಿತಿ ಪ್ರಕಾರ ಆಧಾರ್, ಜನನ ಪ್ರಮಾಣ ಪತ್ರ ಸೇರಿದಂತೆ ಕನಿಷ್ಠ ಎರಡು ದಾಖಲೆಗಳನ್ನು ನೀಡಿ ಮತದಾರರು ತಮ್ಮ ಹೆಸರನ್ನು ಉಳಿಸಿಕೊಳ್ಳ ಬಹುದು. ಆದರೆ ಕೆಲವೊಂದು ಮತಗಟ್ಟೆಗಳಲ್ಲಿ ಜಾತಿ ಸಿಂಧುತ್ವ ಪ್ರಮಾಣ ಪತ್ರ, ಪ್ಯಾನ್ ಕಾರ್ಡ್, ಪಾಸ್‌ಪೋರ್ಟ್, ಎಲ್‌ಐಸಿ ಬಾಂಡ್, ಬ್ಯಾಂಕ್ ಪಾಸ್‌ಬುಕ್, ಪಿಂಚಣಿ ಪ್ರಮಾಣ ಪತ್ರ ಸೇರಿ ನಾಲ್ಕೈದು ದಾಖಲೆಗಳನ್ನು ಕೇಳುತ್ತಿದ್ದಾರೆ.

ಯಥಾ ಪ್ರಕಾರ ಇಲ್ಲೂ ಅಧಿಕಾರಿಗಳು ತಮ್ಮ ಮರ್ಜಿ ಪ್ರದರ್ಶಿಸುತ್ತಿದ್ದಾರೆ. ತಮ್ಮ ಹಕ್ಕನ್ನು ಕೇಳಲು ಬಂದ ನಾಗರಿಕರನ್ನು ಅಪರಾಧಿಗಳಂತೆ ಕಾಣುತ್ತಿದ್ದಾರೆ. ಆ ದಾಖಲೆ, ಈ ದಾಖಲೆ ಎಂದು ಹೇಳಿ, ‘ನಾಳೆ’ ಬರಲು ತಿಳಿಸುತ್ತಿದ್ದಾರೆ. ದೂರದ ಊರಲ್ಲಿ ಇರುವವರಿಗೆ ವಿಡಿಯೋ ಮೂಲಕ ಹಕ್ಕು ಮಂಡನೆ ಸಾಧ್ಯವಿದ್ದರೂ ಈ ಅವಕಾಶದ ಬಗ್ಗೆ ಮಾಹಿತಿ ನೀಡುತ್ತಿಲ್ಲ.

ನೋಟಿಸ್ ನೀಡಬೇಕಾದ ಮತದಾರರ ಪಟ್ಟಿಯನ್ನು ಅಧಿಕಾರಿಗಳು ಆನ್‌ಲೈನ್‌ನಲ್ಲಿ ಪ್ರಕಟಿಸಿ ದ್ದರೂ, ಹಲವೆಡೆ ವಿಚಾರಣೆಯ ನಿಖರ ದಿನಾಂಕವನ್ನು ನಮೂದಿಸಿಲ್ಲ. ವಾರದ ಕೆಲಸದ ದಿನಗಳಲ್ಲೇ ವಿಚಾರಣೆಗಳನ್ನು ನಿಗದಿಪಡಿಸಿರುವುದರಿಂದ ಸರಕಾರಿ ಹಾಗೂ ಖಾಸಗಿ ವಲಯದ ನೌಕರರು, ವೃತ್ತಿಪರರು ತೊಂದರೆ ಅನುಭವಿಸುವಂತಾಗಿದೆ. ವಿಚಾರಣೆಗೆ ಹಾಜರಾಗಲು ರಜೆ ಪಡೆಯಬೇಕಾದ ಅನಿವಾರ್ಯತೆ ಎದುರಾಗಿದೆ.

ದೇಶದಲ್ಲಿ ಕನಿಷ್ಠ ಒಂದು ಕೋಟಿ ಜನರು ಅಧಿಕಾರಿಗಳ ಎಡವಟ್ಟಿನಿಂದ ಮತದಾನದ ಹಕ್ಕಿನಿಂದ ಹೊರಗುಳಿದಿದ್ದಾರೆ ಎಂದು ಭಾವಿಸಿದರೂ ಅಷ್ಟು ಜನರ ಮೂಲಭೂತ ಹಕ್ಕನ್ನು ನಾವು ನಿರಾಕರಿಸಿ ದಂತೆ. ಪ್ರಜಾಪ್ರಭುತ್ವದಲ್ಲಿ ಈ ಅನ್ಯಾಯ ಎಂದಿಗೂ ಆಗಕೂಡದು. ನೈಜ ಮತದಾರರನ್ನು ಗುರುತಿಸಿ, ಅವರ ಹಕ್ಕನ್ನು ಮರಳಿ ದೊರಕಿಸುವುದು ಚುನಾವಣೆ ಆಯೋಗ ಮತ್ತು ಸರಕಾರದ ಆದ್ಯ ಕರ್ತವ್ಯ.