ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Huge demand for Pots: ನಗರದಲ್ಲಿ ಮಡಿಕೆಗಳಿಗೆ ಭಾರಿ ಬೇಡಿಕೆ

ಜಿಲ್ಲೆಯಲ್ಲಿ ಬೆಳಗಾದರೆ ಭಾಸ್ಕರನ ಅಬ್ಬರ ದಿನೇದಿನೇ ಹೆಚ್ಚುತ್ತಿದ್ದು, ಮಾರ್ಚ್ ಮಧ್ಯ ಭಾಗ ದಲ್ಲೇ ಉಷ್ಣಾಂಶವು ದಾಖಲೆ ಮಟ್ಟಕ್ಕೆ ಏರುತ್ತಿದೆ. ಸದ್ಯ ಜಿಲ್ಲೆಯಲ್ಲಿ ತಾಪಮಾನವು ಗರಿಷ್ಠ ಮಟ್ಟದಲ್ಲಿದ್ದು, ಬಿಸಿಲಿನ ಪ್ರಖರತೆಗೆ ಜನ ಹೈರಾಣಾಗುತ್ತಿದ್ದಾರೆ. ದಿನದಿಂದ ದಿನಕ್ಕೆ ತಾಪಮಾನ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ತಂಪು ನೀರಿಗಾಗಿ ಮಣ್ಣಿನ ಮಡಕೆಗಳನ್ನು ಖರೀದಿಸಲು ಮಾರುಕಟ್ಟೆಗೆ ಮುಗಿ ಬೀಳುತ್ತಿದ್ದಾರೆ.

ದೇವೇಂದ್ರ ಜಾಡಿ ಕಲಬುರಗಿ

ಜಿಲ್ಲೆಯಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಬಿಸಿಲ ತಾಪ

ಮಣ್ಣಿನ ಮಡಿಕೆ ಮೊರೆ ಹೋದ ಜನ

ವ್ಯಾಪಾರ ಜೋರು

ಸದಾ ರಣಬಿಸಿಲಿಗೆ ಸವಾಲೊಡ್ಡಿ ನಿಲ್ಲುವ ಕಲಬುರಗಿ ಜಿಲ್ಲೆಯಲ್ಲಿ ಈ ಬಾರಿ ಬೇಸಿಗೆಯ ಆರಂಭದಲ್ಲೇ ಸೂರ್ಯದೇವ ಪ್ರತಾಪ ತೋರುತ್ತಿದ್ದಾನೆ. ಕೇವಲ ವಾರದ ಹಿಂದೆಯಷ್ಟೇ ಬಿಸಿಲು ಶುರುವಾಗಿದ್ದರೂ, ಮಾರುಕಟ್ಟೆಯಲ್ಲಿ ಈಗ ಮಣ್ಣಿನ ಮಡಕೆಗಳಿಗೆ ಭಾರಿ ಬೇಡಿಕೆ ವ್ಯಕ್ತವಾಗುತ್ತಿದೆ.

ನಗರದ ಶರಣಬಸವೇಶ್ವರ ದೇವಸ್ಥಾನದ ಮುಂಭಾಗ ಹಾಗೂ ಸೂಪರ್ ಮಾರ್ಕೆಟ್ ಗಳಲ್ಲಿ ಗೋಲಾಕಾರದ, ನಳ ಹೊಂದಿರುವ ಆಧುನಿಕ ವಿನ್ಯಾಸದ ಮಡಕೆಗಳು ಜನರನ್ನು ಆಕರ್ಷಿಸುತ್ತಿದ್ದು, ಕುಂಬಾರ ಸಮುದಾಯಕ್ಕೆ ಈ ಬಾರಿ ಉತ್ತಮ ವ್ಯಾಪಾರದ ನಿರೀಕ್ಷೆ ಮೂಡಿಸಿದೆ.

ಜಿಲ್ಲೆಯಲ್ಲಿ ಬೆಳಗಾದರೆ ಭಾಸ್ಕರನ ಅಬ್ಬರ ದಿನೇದಿನೇ ಹೆಚ್ಚುತ್ತಿದ್ದು, ಮಾರ್ಚ್ ಮಧ್ಯ ಭಾಗದಲ್ಲೇ ಉಷ್ಣಾಂಶವು ದಾಖಲೆ ಮಟ್ಟಕ್ಕೆ ಏರುತ್ತಿದೆ. ಸದ್ಯ ಜಿಲ್ಲೆಯಲ್ಲಿ ತಾಪಮಾನವು ಗರಿಷ್ಠ ಮಟ್ಟದಲ್ಲಿದ್ದು, ಬಿಸಿಲಿನ ಪ್ರಖರತೆಗೆ ಜನ ಹೈರಾಣಾಗುತ್ತಿದ್ದಾರೆ. ದಿನದಿಂದ ದಿನಕ್ಕೆ ತಾಪಮಾನ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ತಂಪು ನೀರಿಗಾಗಿ ಮಣ್ಣಿನ ಮಡಕೆಗಳನ್ನು ಖರೀದಿಸಲು ಮಾರುಕಟ್ಟೆಗೆ ಮುಗಿಬೀಳುತ್ತಿದ್ದಾರೆ.

ಇದನ್ನೂ ಓದಿ: Clay Pot: ಬೇಸಿಗೆಯಲ್ಲಿ ಮಣ್ಣಿನ ಮಡಕೆಯಲ್ಲಿಟ್ಟು ನೀರು ಕುಡಿದರೆ ಈ ಪ್ರಯೋಜನಗಳಿವೆ!

ಗುಜರಾತ್, ರಾಜಸ್ಥಾನಿ ಮಡಿಕೆಗಳ ಹೆಚ್ಚಿದ ಬೇಡಿಕೆ: ಕಲಬುರಗಿ ಮಾರುಕಟ್ಟೆಯಲ್ಲಿ ಈ ಬಾರಿ ಹೊರ ರಾಜ್ಯದ ಮಡಿಕೆಗಳಿಗೆ ಬೇಡಿಕೆ ಹೆಚ್ಚಿದ್ದು, ಸ್ಥಳೀಯ ಮೇಳಕುಂದದ ಮಡಿಕೆಗಳ ಜತೆಗೆ ರಾಜಸ್ಥಾನ ಹಾಗೂ ಗುಜರಾತ್‌ನ ವಿನ್ಯಾಸದ ಮಡಕೆಗಳು ಈ ಬಾರಿ ಗ್ರಾಹಕರನ್ನು ಸೆಳೆಯುತ್ತಿವೆ. ರಾಜಸ್ಥಾನದ ಕಲಾತ್ಮಕ ವಿನ್ಯಾಸದ ಮಡಿಕೆಗಳು ಹಾಗೂ ಗುಜರಾತ್‌ನ ನಳ (ಟ್ಯಾಪ್) ಅಳವಡಿಸಿದ ಆಧುನಿಕ ಮಡಿಕೆಗಳಿಗೆ ಗ್ರಾಹಕರು ಫಿದಾ ಆಗಿದ್ದಾರೆ.

ನೀರನ್ನು ದೀರ್ಘಕಾಲ ತಂಪಾಗಿರಿಸುವ ಈ ಹೈಟೆಕ್ ಮಡಿಕೆಗಳು 250ರಿಂದ 650ವರೆಗೆ ಮಾರಾಟವಾಗುತ್ತಿವೆ. ಬಣ್ಣ ಬಣ್ಣದ ಕಲಾಕೃತಿಗಳಿಂದ ಕೂಡಿದ ಈ ಮಡಿಕೆಗಳು ಕೇವಲ ನೀರಿನ ಪಾತ್ರೆಯಾಗಿಯಲ್ಲದೆ, ಮನೆಯ ಅಂದ ಹೆಚ್ಚಿಸುವ ವಸ್ತುವಾಗಿಯೂ ಜನರ ಗಮನ ಸೆಳೆಯುತ್ತಿವೆ.

ಬಿಸಿಲ ಬೇಗೆಗೆ ಕಲ್ಲಂಗಡಿ, ಶರಬತ್ ಆಸರೆ: ಬಿಸಿಲಿನ ತಾಪದಿಂದ ಹೈರಾಣಾಗಿರುವ ಜನರಿಗೆ ಈಗ ಕಲ್ಲಂಗಡಿ ಹಣ್ಣು ಮತ್ತು ತಂಪು ಪಾನೀಯಗಳೇ ಸಂಜೀವಿನಿಯಾಗಿವೆ. ನಗರದ ಕೋರ್ಟ್ ವೃತ್ತ, ರಾಮಮಂದಿರ ಹಾಗೂ ಅಪ್ಪನ ಕೆರೆಯ ಸುತ್ತಮುತ್ತ ಕಲ್ಲಂಗಡಿ ಹಣ್ಣಿನ ರಾಶಿಗಳು ಕೈಬೀಸಿ ಕರೆಯುತ್ತಿವೆ. ಜೊತೆಗೆ ನಿಂಬೆ ಶರಬತ್, ಬಾದಾಮ್ ಜ್ಯೂಸ್ ಮತ್ತು ಎಳನೀರು ಕೇಂದ್ರಗಳು ಗ್ರಾಹಕರಿಂದ ತುಂಬಿ ತುಳುಕುತ್ತಿವೆ. ದೇಹದ ಉಷ್ಣಾಂಶ ತಣಿಸಲು ಸಾರ್ವಜನಿಕರು ಹಣ್ಣಿನ ರಸದ ಮೊರೆ ಹೋಗುತ್ತಿದ್ದು, ವ್ಯಾಪಾರ ಭರ್ಜರಿಯಾಗಿ ಸಾಗಿದೆ. ಆರೋಗ್ಯದ ದೃಷ್ಟಿಯಿಂದ ಜನರು ನೈಸರ್ಗಿಕ ಪಾನೀಯಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ

ರಾಜ್ಯದ ‘ಹಾಟ್ ಸ್ಪಾಟ್’ ಕಲಬುರಗಿ

ರಾಜ್ಯ ಹವಾಮಾನ ಇಲಾಖೆಯ (ಮಾ.14, 2026), ವರದಿಯಂತೆ ಕಲಬುರಗಿ ಜಿಲ್ಲೆಯು ಇಡೀ ರಾಜ್ಯದಲ್ಲೇ ಅತ್ಯಧಿಕ ಉಷ್ಣಾಂಶ ದಾಖಲಿಸಿ ಮೊದಲ ಸ್ಥಾನದಲ್ಲಿದೆ. ಜಿಲ್ಲೆಯಲ್ಲಿ ಈಗಾಗಲೇ 38.7 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಸುಡುವ ಬಿಸಿಲಿಗೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಬೆಂಗಳೂರಿನಲ್ಲಿ 33 ಡಿಗ್ರಿ ಸೆಲ್ಸಿಯಸ್ ಆಸುಪಾಸಿ ನಲ್ಲಿದ್ದರೆ, ಕಲಬುರಗಿಯಲ್ಲಿ ಮಾತ್ರ ತಾಪಮಾನ ಕೆಂಡದಂತಾಗಿದೆ. ದಿನೇದಿನೇ ಬಿಸಿಲಿನ ಪ್ರಖರತೆ ಹೆಚ್ಚುತ್ತಿದ್ದು, ಏಪ್ರಿಲ್ ವೇಳೆಗೆ ಉಷ್ಣಾಂಶ ಇನ್ನೂ ಏರಿಕೆಯಾಗುವ ಸಾಧ್ಯತೆ ದಟ್ಟವಾಗಿದೆ. ಬಿಸಿ ಗಾಳಿಯಿಂದ ರಕ್ಷಿಸಿಕೊಳ್ಳಲು ಸಾರ್ವಜನಿಕರು ಮಧ್ಯಾಹ್ನದ ವೇಳೆ ಮನೆಯಿಂದ ಹೊರಬರಲು ಹಿಂದೇಟು ಹಾಕುತ್ತಿದ್ದಾರೆ.

ಹೆಚ್ಚಿದ ಶಾಖ - ಆರೋಗ್ಯದ ಬಗ್ಗೆ ಇರಲಿ ಎಚ್ಚರ!

ಕಲಬುರಗಿಯಲ್ಲಿ ತಾಪಮಾನ ಏರುತ್ತಿದ್ದಂತೆ ‘ಹೀಟ್ ಸ್ಟ್ರೋಕ್’ ಭೀತಿ ಎದುರಾಗಿದೆ. ಮಧ್ಯಾಹ್ನ 12 ರಿಂದ 4 ಗಂಟೆಯವರೆಗೆ ಸೂರ್ಯನ ಕಿರಣಗಳು ನೇರವಾಗಿ ಬೀಳುತ್ತಿದ್ದು, ಅನಗತ್ಯವಾಗಿ ಹೊರ ಬರದಂತೆ ವೈದ್ಯರು ಸೂಚಿಸಿದ್ದಾರೆ. ಬಿಸಿಲ ಗಾಳಿಯಿಂದ ನಿರ್ಜಲೀ ಕರಣ ಉಂಟಾಗುವ ಸಾಧ್ಯತೆಯಿದ್ದು, ಸಾರ್ವಜನಿಕರು ಹೆಚ್ಚಿನ ಪ್ರಮಾಣದಲ್ಲಿ ನೀರು, ಮಜ್ಜಿಗೆ ಹಾಗೂ ಹಣ್ಣಿನ ರಸ ಸೇವಿಸಬೇಕು. ಕಣ್ಣಿನ ರಕ್ಷಣೆಗಾಗಿ ಕನ್ನಡಕ ಮತ್ತು ಬಿಸಿಲಿ ನಿಂದ ಬಚಾವಾಗಲು ಛತ್ರಿ ಅಥವಾ ಟೋಪಿ ಬಳಸುವುದು ಈ ಬಾರಿಯ ಬೇಸಿಗೆಯಲ್ಲಿ ಅನಿವಾರ್ಯವಾಗಿದೆ

image

ಮಡಕೆಗಳು ಬೇಸಿಗೆಯ ಬಿಸಿಲಿಗೆ ಉತ್ತಮ ಪರಿಹಾರ. ವ್ಯಾಪಾರ ಈಗಷ್ಟೇ ಚೇತರಿಸಿ ಕೊಳ್ಳುತ್ತಿದ್ದು, ದಿನಕ್ಕೆ 100 ಮಡಕೆಗಳವರೆಗೆ ಮಾರಾಟವಾಗುತ್ತಿವೆ. ಏಪ್ರಿಲ್ ವೇಳೆಗೆ ಬಿಸಿಲು ಹೆಚ್ಚಾದಂತೆ ವ್ಯಾಪಾರ ಇನ್ನೂ ಜೋರಾಗುವ ನಿರೀಕ್ಷೆಯಿದೆ.

- ಸಾವಿತ್ರಿ ಕುಂಬಾರ, ಮಡಿಕೆ ಅಂಗಡಿ ಮಾಲೀಕರು.
image

ಪ್ರತಿದಿನ ಮಧ್ಯಾಹ್ನ ಬಿಸಿಲು ಹೆಚ್ಚಾಗುತ್ತಿರುವುದರಿಂದ ಮಣ್ಣಿನ ಮಡಕೆಯ ನೀರು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು. ನೈಸರ್ಗಿಕವಾಗಿ ನೀರು ತಂಪಾಗಿರುವುದರಿಂದ ಮನೆಯಲ್ಲೇ ಬಳಕೆಗೆ ಇದು ಸೂಕ್ತ.

- ಕಾನು ಕೋವಿ, ಗ್ರಾಹಕ.