ನರೇಂದ್ರ ಪಾರೆಕಟ್
ಭಾರತ ಮತ್ತು ಪಾಕಿಸ್ತಾನದ ನಡುವಿನ ಗಡಿ ಸಮಸ್ಯೆಗಳು ಇಂದು ನಿನ್ನೆಯದಲ್ಲ.ಕಾಶ್ಮೀರ ಗಡಿಯಲ್ಲಿ ಆಗಾಗ ಭಯೋತ್ಪಾದನಾ ಚಟುವಟಿಕೆಗಳಿಗೆ ಪಾಕ್ ಪ್ರೋತ್ಸಾಹ ಕೊಡುತ್ತಾ, ಭಾರತದ ಕೆಂಗಣ್ಣಿಗೆ ಗುರಿಯಾಗುತ್ತಲೇ ಇದೆ. ಇದೀಗ ಗುಜರಾತ್‌ನ ಕಛ್ ಬಳಿಯಿರುವ ‘ಸರ್ ಕ್ರೀಕ್’ ಪ್ರದೇಶದಲ್ಲಿ ಮತ್ತೊಮ್ಮೆ ಗಡಿ ವಿವಾದದ ತಲೆ ಎತ್ತಿದೆ. ಈ ಪ್ರದೇಶದ ವಿವಾದ 1908ರಿಂದಲೂ ಆಗಾಗ ಸದ್ದು ಮಾಡುತ್ತಿತ್ತು. ಇದೀಗ ಏಕಾಏಕಿ ಅಲ್ಲಿ ನಡೆಸಲಾರಂಭಿಸಿದ ಚಟುವಟಿಕೆಗಳ ಮೂಲಕ ಭಾರತದ ಕಣ್ಣನ್ನು ಕೆಂಪಾಗಿಸಿದೆ. ಇನ್ನೂ ಇತ್ಯರ್ಥವಾಗದ ಆ ಪ್ರದೇಶದ ಬಗ್ಗೆ ಕಳೆದ ವಾರ ಕೇಂದ್ರ ಸರಕಾರವು ಪಾಕ್‌ಗೆ ದಿಟ್ಟ ಎಚ್ಚರಿಕೆ ನೀಡಿದೆ. ಹಾಗಾ ದರೆ ಏನದು ಸರ್ ಕ್ರೀಕ್ ಪ್ರದೇಶ? ಈಗ ವಿವಾದ ಭುಗಿಲೇಳಲು ಕಾರಣವೇನು ಎಂಬುದನ್ನು ಎಂಬುದನ್ನು ಈ ಲೇಖನದ ಮೂಲಕ ತಿಳಿಯೋಣ.
ಭಾರತ ಮತ್ತು ಪಾಕಿಸ್ತಾನದ ನಡುವಿನ ಕಾಶ್ಮೀರ ಗಡಿ ವಿವಾದ ಆಗಾಗ ಸುದ್ದಿಯಾಗುತ್ತಿರುವುದು ಸಹಜ. ಏನಾದರೊಂದು ತಂಟೆ-ತಕರಾರು ಮಾಡುವುದು ಪಾಕ್ ಗೊಂದು ಚಾಳಿ. ಉಗ್ರರಿಗೆ ಪ್ರೋತ್ಸಾಹ ನೀಡಿ ನಮ್ಮ ಸೈನಿಕರಿರುವ ಪ್ರದೇಶದಲ್ಲಿ ಅಶಾಂತಿ ನೆಲೆಸುವಂತೆ ಮಾಡುವುದು ಪಾಕಿಸ್ತಾನದ ಜಾಯಮಾನ. ಹಾಗಾಗಿಯೇ ಕಾಶ್ಮೀರದ ಗಡಿ ಪ್ರದೇಶ ಉದ್ವಿಗ್ನತೆಯನ್ನು ಆಗಾಗ ಎದುರಿಸುತ್ತಲೇ ಇರುತ್ತದೆ. ಪಾಕ್ ಉಗ್ರರು ಅದೆಷ್ಟೋ ಸಲ ನುಸುಳಲು ಯತ್ನಿಸಿದಾಗ ನಮ್ಮ ನೂರಾರು ಸೈನಿಕರು ಎದೆಗುಂದದೆ ಪಾಠ ಕಲಿಸಿದ್ದಾರೆ. ಕಳೆದ ಏಪ್ರಿಲ್‌ನಲ್ಲಿ ನಡೆದ ಪಹಲ್ಗಾಮ್ ಘಟನೆ ಎಲ್ಲರ ಮನಸ್ಸಿನಲ್ಲಿ ಈಗಲೂ ಅಚ್ಚಳಿಯದೆ ಉಳಿದಿದೆ. ಅದಕ್ಕೆ ಪ್ರತೀಕಾರವಾಗಿ ಭಾರತ ಸೇನೆಯ ಆಪರೇಷನ್ ಸಿಂದೂರ ಮೂಲಕ ಪಾಕ್ನ ಎಡೆಮುರಿ ಕಟ್ಟುವ ಮೂಲಕ ನಮ್ಮ ಸೇನೆಯ ಬಗ್ಗೆ ಹೆಮ್ಮೆ ಪಡುವ ಸರದಿ ನಮ್ಮೆಲ್ಲರದ್ದಾಯಿತು. ಭಾರತದ ಆ ಎದಿರೇಟಿನ ದಾಳಿಗೆ ಪತರುಗುಟ್ಟಿದ ಪಾಕ್ ಒಂದಷ್ಟು ತಿಂಗಳು ಸುಮ್ಮನಾಗಿದ್ದಂತೂ ಸುಳ್ಳಲ್ಲ.
ಆದರೆ ಇದೀಗ ಮತ್ತೆ ಪಾಕಿಸ್ತಾನವು ಬೇರೊಂದು ವಿವಾದದ ಮೂಲಕ ನಮ್ಮ ದೇಶವನ್ನು ಕೆಣಕುವ ದುಸ್ಸಾಹಸಕ್ಕೆ ಕೈ ಹಾಕಿದೆ. ಭಾರತ ಮತ್ತು ಪಾಕಿಸ್ತಾನದ ನಡುವೆ ಕಾಶ್ಮೀರ ಬಿಟ್ಟು ಮತ್ತೊಂದು ವ್ಯಾಜ್ಯವಿದೆ ಎಂಬುದು ಬಹುತೇಕರಿಗೆ ಗೊತ್ತಿಲ್ಲ. ಅದುವೇ ಗುಜರಾತ್‌ನ ಕಛ್ ಬಳಿಯಿರುವ ‘ಸರ್ ಕ್ರೀಕ್ ಪ್ರದೇಶ.
ಕ್ರೀಕ್ ಎಂಬ ಇಂಗ್ಲೀಷ್ ಪದದ ಅರ್ಥ ಕಡಲ್ಕೊರೆತದಿಂದ ಭೂಮಿಯ ಒಂದು ಭಾಗ ಸಂದಿಯಂತೆ ಆಗಿರುವ ಕೊರಕಲು ಪ್ರದೇಶ ಎಂದರ್ಥ. ಇದೀಗ ಚರ್ಚೆಗೆ ಗ್ರಾಸವಾಗಿರುವ ‘ಸರ್ ಕ್ರೀಕ್’ ಎಂಬುದು ಭಾರತದ ಗುಜರಾತ್ ರಾಜ್ಯದ ಕಛ್ ಪ್ರಾಂತ್ಯದ ಪಶ್ಚಿಮ ತುದಿಯಲ್ಲಿದೆ. ಅಲ್ಲಿನ ಕಛ್ ಪಕ್ಕದಲ್ಲಿ ಅರಬ್ಬೀ ಸಮುದ್ರವಿದ್ದು, ಅದರ ಕಡಲ್ಕೊರೆತದಿಂದ ಕಛ್‌ನ ಪಶ್ಚಿಮ ತಟದಲ್ಲಿ ಕೊರಕಲು ಏರ್ಪ ಟ್ಟಿದ್ದು ಅದೇ ಸರ್ ಕ್ರೀಕ್ ಎಂಬ ಹೆಸರಿನಿಂದ ಗುರುತಿಸಲ್ಪಟ್ಟಿದೆ. ಅಲ್ಲಿಂದ ಅರಬ್ಬೀ ಸಮುದ್ರ ಕ್ಕಿಳಿದು ಸ್ವಲ್ಪ ದೂರ ಕ್ರಮಿಸಿದರೆ ಸಿಗುವುದೇ, ಪಾಕಿಸ್ತಾನದ ಸಿಂಧ್ ಪ್ರಾಂತ್ಯ.
ಇದನ್ನೂ ಓದಿ: Narendra Parekat Column: ಭಾರತದ ವನಿತೆಯರಲ್ಲೂ ಗೆಲ್ಲುವ ಛಲ
ಸರ್ ಕ್ರೀಕ್‌ನ ಮಹತ್ವ: ಈ ಪ್ರದೇಶವು ಭಾರತಕ್ಕೆ ಸೇರಿದ್ದೆಂಬುದು ಹಲವು ವರ್ಷಗಳಿಂದ ನಮ್ಮ ದೇಶದ ವಾದ. ಆದರೆ ಪಾಕಿಸ್ತಾನವು ಆ ವಿಷಯವನ್ನು ಒಪ್ಪಿಲ್ಲ. ಅದು ತಮಗೆ ಸೇರಿದ್ದೆಂದು, ನಾವು ವಶಪಡಿಸುತ್ತೇವೆಂದೂ ಸದಾ ಪ್ರಯತ್ನಿಸುತ್ತಿದೆ. ಅರಬ್ಬೀ ಸಮುದ್ರದಿಂದ ಕಛ್ ಪ್ರಾಂತ್ಯದೊಳಕ್ಕೆ ಮೂರು ಕಡೆಗೆ ಹೀಗೆ ಕಡಲ್ಕೊರೆತದಿಂದ ಆಗಿರುವ ಕೊರಕಲುಗಳಿವೆ. ಅವುಗಳೆಂದರೆ ಕಜಾಹರ್ ಕ್ರೀಕ್, ಕೋರಿ ಕ್ರೀಕ್ ಮತ್ತೊಂದು ಸರ್ ಕ್ರೀಕ್. ಈ ಸರ್ ಕ್ರೀಕ್, ಕಜಾಹರ್ ಹಾಗೂ ಕೋರಿ ಕ್ರೀಕ್‌ಗಳ ನಡುವೆ ಇದೆ.
‘ಸರ್ ಕ್ರೀಕ್-ಕಡಲು ಕೊರಕಲಿ’ನಲ್ಲಿ ಏಷ್ಯಾದಲ್ಲಿ ಇನ್ನೆಲ್ಲೂ ಕಾಣ ಸಿಗದಷ್ಟು ಅಪಾರ ಪ್ರಮಾಣದ ಮೀನುಗಳಿವೆ. ಹಾಗಾಗಿ ಅದು ಮೀನುಗಾರಿಕೆಗೆ ಅತ್ಯುತ್ತಮ ತಾಣ. ಅಷ್ಟೇ ಅಲ್ಲ, ಈ ಕಡಲು ಕೊರಕಲಿನಲ್ಲಿ ಅಪಾರ ಪ್ರಮಾಣದ ತೈಲ ಹಾಗೂ ನೈಸರ್ಗಿಕ ಅನಿಲದ ನಿಕ್ಷೇಪಗಳಿರುವ ಸುಳಿವು ಗಳಿವೆ. ಆದರೆ ಭಾರತವಾಗಲೀ, ಪಾಕಿಸ್ತಾನವಾಗಲೀ ಇದುವರೆಗೂ ಅಲ್ಲಿ ಅದರ ಕುರಿತಾದ ಪರೀಕ್ಷೆ ನಡೆಸಲು ಹೋಗಿಲ್ಲ, ಏಕೆಂದರೆ ಅದು ಗಡಿ ವಿವಾದಿತ ಪ್ರದೇಶವಾಗಿರುವುದರಿಂದ ಅಲ್ಲಿ ತೈಲ ಅಥವಾ ನೈಸರ್ಗಿಕ ಅನಿಲ ಪರೀಕ್ಷೆ ಕೈಗೊಳ್ಳಲು ಸಾಧ್ಯವಾಗಿಲ್ಲ.
ಅದು 96 ಕಿ.ಮೀ. ದೂರದ ಜಲಮಾರ್ಗ ಪ್ರದೇಶವಾಗಿದೆ. ಅದಕ್ಕೆ ರಣ್ ಆಫ್ ಕಛ್ ಎಂದೂ ಹೆಸರಿದೆ. ಅಲ್ಲಿನ ಪ್ರಾಂತ್ಯವೆಲ್ಲವೂ ಕೊರಕರು ಬಂಡೆಗಳಿಂದ ಕೂಡಿರುವುದರಿಂದ ಇಲ್ಲಿ ಗಡಿ ಗುರುತಿಸುವುದು ಅಸಾಧ್ಯ. ಹಾಗಾಗಿಯೇ ಭಾರತ ಮತ್ತು ಪಾಕಿಸ್ತಾನ ನಡುವಿನ ಅಲ್ಲಿನ ಗಡಿ ವಿವಾದ ಮುಗಿದಿಲ್ಲ. ಹಾಗಾಗಿ ಅದನ್ನು ತಟಸ್ಥ ಪ್ರದೇಶ ಎಂದು ಗುರುತಿಸಲಾಗಿದೆ. ಅಲ್ಲಿ ಎರಡೂ ದೇಶಗಳವರು ಯಾವುದೇ ನಿರ್ಮಾಣಗಳನ್ನು ಮಾಡುವ ಹಾಗಿಲ್ಲ. ಆದರೆ ಪಾಕಿಸ್ತಾನ ಅಲ್ಲೀಗ ತನ್ನ ಸೇನೆಗೆ ಬೇಕಾದ ಕಟ್ಟಡಗಳನ್ನು ನಿರ್ಮಿಸುತ್ತಿದೆ ಎಂಬ ವಿಷಯ ಈಗ ಭಾರತಕ್ಕೆ ಅಸಮಾಧಾನ ತಂದಿದೆ.

ಸರ್ ಕ್ರೀಕ್ ಹೋರಾಟದ ಹಿನ್ನೆಲೆ: 1908: ಆಗಿನ್ನೂ ಭಾರತ-ಪಾಕಿಸ್ತಾನ ವಿಭಜನೆಯಾಗಿರಲಿಲ್ಲ. ಆಗ ಎಲ್ಲಾ ಕಡೆ ರಾಜರ ಆಳ್ವಿಕೆಯಿತ್ತು. ಅವರೆಲ್ಲರೂ ಬ್ರಿಟಿಷ್ ಸರಕಾರದ ಕೈ ಕೆಳಗಿದ್ದರು. ಕಛ್ ರಾಜ್ಯದ ರಾವ್ ಎಂಬ ಮಹಾರಾಜ ಹಾಗೂ ಸಿಂಧ್ ಸರಕಾರದ ನಡುವೆ ಮೊಟ್ಟಮೊದಲ ಬಾರಿಗೆ ಈ ಕೊರಕಲು ಪ್ರದೇಶಕ್ಕಾಗಿ ವಿವಾದ ಏರ್ಪಟ್ಟಿತು.
1914: ಬಾಂಬೆ ಸರಕಾರಕ್ಕೆ ಗುಜರಾತ್‌ನ ಸರ್ ಕ್ರೀಕ್ ಸಮಸ್ಯೆ ಮುಟ್ಟಿತ್ತು. ಆಗ ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಮಹಾರಾಜ ಹಾಗೂ ಕಛ್ ಮಹಾರಾಜರನ್ನು ಕೂರಿಸಿಕೊಂಡು ಸಂಧಾನ ಸಭೆ ನಡೆಯಿತು. ಆಗ ಕಛ್ ಕಡೆಗೆ ಸರ್ ಕ್ರೀಕ್‌ನ ಬಲ ತುದಿಯ ಮೇಲಷ್ಟೇ ಕಛ್ ಮಹಾರಾಜರು ತಮ್ಮ ಆಡಳಿತ ವ್ಯಾಪ್ತಿಯನ್ನು ಹೊಂದಿರಬೇಕಷ್ಟೇ ಎಂಬ ಒಪ್ಪಂದಕ್ಕೆ ಬರಲಾಯಿತು.
1965: ಭಾರತ-ಪಾಕಿಸ್ತಾನದ ನಡುವೆ ಸರ್ ಕ್ರೀಕ್‌ಗಾಗಿ ಶಾಂತಿ ಮಾತುಕತೆ ಆರಂಭವಯಿತು. ರಣ್ ಆಫ್ ಕಛ್ ಹೆಸರಿನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಯುದ್ಧವೂ ನಡೆಯಿತು.
1968: ಮತ್ತೆ ಕಛ್ ಹಾಗೂ ಸಿಂಧ್ ಪ್ರಾಂತ್ಯಗಳ ನಡುವೆ ಇದೇ ಸರ್ ಕ್ರೀಕ್‌ಗಾಗಿ ತಿಕ್ಕಾಟವಾಯಿತು.
1997: ಭಾರತ ಮತ್ತು ಪಾಕಿಸ್ತಾನ ನಡುವೆ ಮತ್ತೆ ಈ ಸಮಸ್ಯೆ ಭುಗಿಲೆದ್ದಿತು. ದ್ವಿಪಕ್ಷೀಯ ಮಾತುಕತೆಗಳು, ರಾಜತಾಂತ್ರಿಕ ಸಭೆಗಳು ನಡೆದವು. ಆದರೆ ಯಾವುದೇ ನಿರ್ಧಾರಕ್ಕೆ ಬರಲಾಗಲಿಲ್ಲ.-
ಸರ್ ಕ್ರೀಕ್: ಪಾಕ್‌ಗೆ ರಾಜ್‌ನಾಥ್ ಎಚ್ಚರಿಕೆ
ಭಾರತೀಯು ಸೇನೆ ಮತ್ತು ಬಿಎನ್‌ಎಲ್ ಜಂಟಿಯಾಗಿ ಮತ್ತು ಜಾಗರೂಕತೆಯಿಂದ ಭಾರತರ ಗಡಿ ಗಳನ್ನು ರಕ್ಷಿಸುತ್ತಿವೆ. ಸರ್ ಕ್ರೀಕ್ ಪ್ರದೇಶದಲ್ಲಿ ವಾಕಿಸ್ತಾನವು ಯಾವುದೇ ದುಸ್ಸಾಹಸಕ್ಕೆ ಯತ್ನಿಸಿ ದರೆ, ಇತಿಹಾಸ ಮತ್ತು ಭೌಗೋಳಿಕತೆ ಎರಡನ್ನೂ ಬದಲಾಯಿಸುವ ನಿರ್ಣಾಯಕ ಪ್ರತಿಕ್ರಿಯೆ ಯನ್ನು ಅದು ನಡೆಸುತ್ತದೆ ಎಂದು ನಾವು ತಿಳಿಯಬೇಕಾಗುತ್ತದೆ. ಕರಾಚಿಗೆ ಹೋಗುವ ಒಂದು ಮಾರ್ಗವು ಕ್ರೀಕ್ ಮೂಲಕ ಹಾದು ಹೋಗುತ್ತದೆ ಎಂಬುದನ್ನು ಪಾಕಿಸ್ತಾನ ನೆನಪಿನಲ್ಲಿಟ್ಟು ಕೊಳ್ಳಬೇಕು. ಹಾಗಾಗಿ ಅಂತಹ ಪ್ರಯತ್ನ ಮುಂದುರಿಸಿದರೆ ತಕ್ಕ ಪ್ರತೀಕಾರವನ್ನು ಪಾಕ್ ಎದುರಿಸ ಲಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪಾಕಿಸ್ತಾನಕ್ಕೆ ಈ ಬಗ್ಗೆ ತಕ್ಕ ಎಚ್ಚರಿಕೆ ನೀಡಿದ್ದಾರೆ.