Narendra Parekat Column: ಭಾರತದ ವನಿತೆಯರಲ್ಲೂ ಗೆಲ್ಲುವ ಛಲ
ಭಾರತವು ಆತಿಥ್ಯ ವಹಿಸಿದ್ದ ಎರಡನೇ ಟೂರ್ನಿ 1978ರಲ್ಲಿ ನಡೆಯಿತು. ಆ ಟೂರ್ನಿಯಲ್ಲಿ ಆಸ್ಟ್ರೇಲಿಯಾ ತಂಡವು ಇಂಗ್ಲೆಂಡ್ ಅನ್ನು ಮಣಿಸಿ ತನ್ನ ಹಿಂದಿನ ವಿಶ್ವಕಪ್‌ನ ಸೇಡನ್ನು ತೀರಿಸಿ ಕೊಂಡಿತು. 1982ರಲ್ಲಿ ಅತಿಥೇಯ ನ್ಯೂಜಿಲೆಂಡ್ ನಲ್ಲಿ ನಡೆದ ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ತಂಡವು 2ನೇ ಬಾರಿಗೆ ಇಂಗ್ಲೆಂಡ್ ತಂಡವನ್ನು ಮಣಿಸಿ ಟ್ರೋಫಿಯನ್ನು ತನ್ನದನ್ನಾ ಗಿಸಿತು.

-

ನರೇಂದ್ರ ಪಾರೆಕಟ್
ಸೆ.30ರಿಂದ ಭಾರತ ಮತ್ತು ಶ್ರೀಲಂಕಾದ ಆತಿಥ್ಯದಲ್ಲಿ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿ ಆರಂಭವಾಗಲಿದೆ. ನವೆಂಬರ್-2ರ ತನಕ ನಡೆಯಲಿರುವ ಈ ಟೂರ್ನಿಯಲ್ಲಿ ಟೀಮ್ ಇಂಡಿಯಾ ಸೇರಿದಂತೆ ಎಂಟು ರಾಷ್ಟ್ರಗಳು ಸೆಣಸಾಟ ನಡೆಸಲಿವೆ. ಭಾರತದ ವನಿತೆಯರ ತಂಡವು ಚೊಚ್ಚಲ ವಿಶ್ವಕಪ್ ಟ್ರೋಫಿಯನ್ನು ಈ ಸಲ ತನ್ನದಾಗಿಸಬೇಕೆಂಬ ಮಹದಾಸೆ ಹೊಂದಿದೆ.
ಅದೊಂದು ಕಾಲವಿತ್ತು, ಕ್ರಿಕೆಟ್ ಎಂದರೆ ಬರೀ ಪುರುಷರಿಗಷ್ಟೇ ಸೀಮಿತವಾಗಿರುವ ಆಟ ಎಂಬಂತಾಗಿತ್ತು. ಆದರೆ ಬರಬರುತ್ತಾ ಅಂತಹದ್ದೊಂದು ಮನೋಭಾವದ ಯೋಚನೆ ವಿಶ್ವ ದಾದ್ಯಂತ ನಿಧಾನವಾಗಿ ದೂರವಾಗುತ್ತಾ ಹೋಯಿತು, ಆ ಮೂಲಕ ಮಹಿಳಾ ಕ್ರಿಕೆಟ್‌ಗೂ ಮನ್ನಣೆ ದೊರೆಯಿತು.
ಅದೇ ಕಾರಣದಿಂದಾಗಿ ವಿಶ್ವದ ಮಹಿಳಾ ಕ್ರಿಕೆಟ್ ತಂಡಗಳ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಾವಳಿ ಆರಂಭವಾಯಿತು. ಇಂಗ್ಲೆಂಡ್ ಮಹಿಳಾ ತಂಡವು ಮೊತ್ತ ಮೊದಲ ಬಾರಿಗೆ 1934ರಲ್ಲಿ ನ್ಯೂಜಿಲೆಂಡ್‌ನತ್ತ ಪಯಣಿಸಿ ಅಲ್ಲಿನ ಮಹಿಳಾ ತಂಡದ ವಿರುದ್ಧ ಚೊಚ್ಚಲ ಟೆಸ್ಟ್ ಗೆಲುವನ್ನು ದಾಖಲಿಸಿತು.
ಸುಮಾರು ಇಪ್ಪತ್ತೈದು ವರ್ಷಗಳ ಕಾಲ, ವಿಶ್ವದಲ್ಲಿ ಅವೆರಡೇ ಮಹಿಳಾ ತಂಡಗಳು ಪರಸ್ಪರ ಹಲವಾರು ಅಂತಾರಾಷ್ಟೀಯ ಪಂದ್ಯಗಳನ್ನಾಡಿದವು. ಆ ಬಳಿಕ 1960ರಲ್ಲಿ ದ. ಆಫ್ರಿಕಾ ಆ ಬಳಗ ವನ್ನು ಸೇರಿತು. ಆ ನಂತರ, ಒಂದೊಂದೇ ಮಹಿಳಾ ತಂಡಗಳು ವಿಶ್ವ ಮಹಿಳಾ ಕ್ರಿಕೆಟ್‌ಗೆ ಸೇರ್ಪಡೆ ಯಾದವು. ಭಾರತ ಮಹಿಳೆಯರ ಕ್ರಿಕೆಟ್ ತಂಡ 1976ರಲ್ಲಿ ಮೊದಲ ಬಾರಿಗೆ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ವೆಸ್ಟ್ ಇಂಡೀಸ್ ವನಿತೆಯರ ವಿರುದ್ಧ ಟೆಸ್ಟ್ ಪಂದ್ಯವನ್ನಾಡಿತು.
ಇದನ್ನೂ ಓದಿ: USA Cricket: ಯುಎಸ್ಎ ಕ್ರಿಕೆಟ್ ಸದಸ್ಯತ್ವವನ್ನು ಅಮಾನತುಗೊಳಿಸಿದ ಐಸಿಸಿ
ಮಹಿಳಾ ವಿಶ್ವಕಪ್ ಇತಿಹಾಸ: ಮಹಿಳಾ ವಿಶ್ವಕಪ್ ಕ್ರಿಕೆಟ್ ಟೂರ್ನಿ ಈ ವರೆಗೂ 12 ಬಾರಿ ನಡೆದಿದೆ. 1973ರಲ್ಲಿ ಮೊದಲ ಬಾರಿಗೆ ಮಹಿಳಾ ವಿಶ್ವಕಪ್ ಪಂದ್ಯಾವಳಿ ನಡೆಯಿತು. ಅತಿಥೇಯ ಇಂಗ್ಲೆಂಡ್ ತಂಡವು ಆಸ್ಟ್ರೇಲಿಯಾ ತಂಡದ ವಿರುದ್ಧ ಜಯ ಗಳಿಸಿ ಚೊಚ್ಚಲ ಮಹಿಳಾ ಏಕದಿನ ವಿಶ್ವಕಪ್ ಟ್ರೋಫಿಯನ್ನು ತನ್ನ ಮುಡಿಗೇರಿಸಿತು.
ಭಾರತವು ಆತಿಥ್ಯ ವಹಿಸಿದ್ದ ಎರಡನೇ ಟೂರ್ನಿ 1978ರಲ್ಲಿ ನಡೆಯಿತು. ಆ ಟೂರ್ನಿಯಲ್ಲಿ ಆಸ್ಟ್ರೇಲಿಯಾ ತಂಡವು ಇಂಗ್ಲೆಂಡ್ ಅನ್ನು ಮಣಿಸಿ ತನ್ನ ಹಿಂದಿನ ವಿಶ್ವಕಪ್‌ನ ಸೇಡನ್ನು ತೀರಿಸಿ ಕೊಂಡಿತು. 1982ರಲ್ಲಿ ಅತಿಥೇಯ ನ್ಯೂಜಿಲೆಂಡ್ ನಲ್ಲಿ ನಡೆದ ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ತಂಡವು 2ನೇ ಬಾರಿಗೆ ಇಂಗ್ಲೆಂಡ್ ತಂಡವನ್ನು ಮಣಿಸಿ ಟ್ರೋಫಿಯನ್ನು ತನ್ನದನ್ನಾಗಿಸಿತು.
1988ರಲ್ಲಿ ನಡೆದ ಮಹಿಳಾ ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ತಂಡವನ್ನು ಮೂರನೇ ಬಾರಿ ಸೋಲಿಸಿದ ಆಸ್ಟ್ರೇಲಿಯಾ ಮಹಿಳಾ ತಂಡ ಹ್ಯಾಟ್ರಿಕ್ ವಿಶ್ವಕಪ್ ಅನ್ನು ಗೆದ್ದು ಬೀಗಿತು. 1993ರಲ್ಲಿ ತಾವು ಆತಿಥ್ಯ ವಹಿಸಿದ ವಿಶ್ವಕಪ್ ಫೈನಲ್‌ನಲ್ಲಿ ನ್ಯೂಜಿಲೆಂಡ್ ತಂಡವನ್ನು ಮಣಿಸಿ, ತವರಿನಲ್ಲಿ ಗೆಲುವಿನ ನಗೆ ಬೀರಿದರು. 1997ರಲ್ಲಿ ಭಾರತದ ಆತಿಥ್ಯದಲ್ಲಿ ನಡೆದ ವಿಶ್ವಕಪ್‌ನಲ್ಲಿ ಮತ್ತೆ ನ್ಯೂಜಿಲೆಂಡ್ ತಂಡವನ್ನು ಮಣಿಸಿದ ಇಂಗ್ಲೆಂಡ್ ಚಾಂಪಿಯನ್ ಆಯಿತು.
2000ರಲ್ಲಿ ನಡೆದ ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್ ತಂಡವು ಚೊಚ್ಚಲ ಬಾರಿಗೆ ಟ್ರೋಫಿಯನ್ನು ತನ್ನದನ್ನಾಗಿರಿಸಿತು. 2005ರಲ್ಲಿ ದ.ಆಫ್ರಿಕಾದಲ್ಲಿ ನಡೆದಿದ್ದ ಪಂದ್ಯಾವಳಿಯ ಫೈನಲ್‌ನಲ್ಲಿ ಭಾರತದ ವಿರುದ್ಧ ಆಸ್ಟ್ರೇಲಿಯಾ 98 ರನ್‌ಗಳಿಂದ ಗೆದ್ದು ಬೀಗಿತು. 2009ರಲ್ಲಿ ನಡೆದ ಟೂರ್ನಿ ಯಲ್ಲಿ ಇಂಗ್ಲೆಂಡ್ ತಂಡವು ನ್ಯೂಜಿಲೆಂಡ್ ಅನ್ನು ಮಣಿಸಿ ಮತ್ತೊಮ್ಮೆ ಟ್ರೋಫಿ ಗೆದ್ದಿತು.
2013ರಲ್ಲಿ ಭಾರತದಲ್ಲಿ ನಡೆದ ಪಂದ್ಯಾವಳಿಯಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಮಣಿಸಿದ ಆಸ್ಟ್ರೇಲಿಯಾ, ವಿಶ್ವಕಪ್ ಟ್ರೋಫಿಗೆ ಮುತ್ತಿಕ್ಕಿತು. 2017ರಲ್ಲಿ ಅತಿಥೇಯ ಇಂಗ್ಲೆಂಡ್ ತಂಡವು {ಫೈನಲ್‌ನಲ್ಲಿ ಭಾರತವನ್ನು ಮಣಿಸಿ ವಿಶ್ವಕಪ್ ಎತ್ತಿ ಹಿಡಿಯಿತು. 2022ರಲ್ಲಿ ನ್ಯೂಜಿಲೆಂಡ್‌ನಲ್ಲಿ ನಡೆದ ಟೂರ್ನಿಯಲ್ಲಿ ಇಂಗ್ಲೆಂಡ್ ತಂಡವನ್ನು ಮಣಿಸಿದ ಆಸ್ಟ್ರೇಲಿಯಾ ಆ ಬಾರಿಯ ಮಹಿಳಾ ವಿಶ್ವಕಪ್ ಚಾಂಪಿಯನ್ ಆಯಿತು. ಈಗಾಗಲೇ 12 ಮಹಿಳಾ ವಿಶ್ವಕಪ್ ಟೂರ್ನಿಗಳು ನಡೆದಿದ್ದು, ಆಸ್ಟ್ರೇಲಿಯಾ ತಂಡವು 7 ಬಾರಿ, ಇಂಗ್ಲೆಂಡ್ ತಂಡವು 4 ಬಾರಿ ಹಾಗೂ ನ್ಯೂಜಿಲೆಂಡ್ ಒಮ್ಮೆ ಚಾಂಪಿಯನ್ ಆಗಿವೆ.
ಭಾರತದ ಸಾಧನೆ: ಭಾರತೀಯ ಮಹಿಳಾ ಕ್ರಿಕೆಟ್ ತಂಡವು ಇದೀಗ ವಿಶ್ವದಲ್ಲೇ ನಾಲ್ಕನೇ ಏಕದಿನ ಶ್ರೇಯಾಂಕವನ್ನು ಹೊಂದಿದೆ. ಒಟ್ಟು 333 ಏಕದಿನ ಪಂದ್ಯಗಳನ್ನು ಆಡಿರುವ ನಮ್ಮ ವನಿತೆಯರ ತಂಡವು 183 ಪಂದ್ಯಗಳಲ್ಲಿ ಗೆಲುವನ್ನು ದಾಖಲಿಸಿದ್ದರೆ, ೧೪೪ ಪಂದ್ಯದಲ್ಲಿ ಸೋತಿದೆ. ಆಡಿದ ೪ ಪಂದ್ಯಗಳಲ್ಲಿ ಫಲಿತಾಂಶ ಪಡೆಯಲಾಗಲಿಲ್ಲ.
ಮಹಿಳಾ ವಿಶ್ವಕಪ್‌ನಲ್ಲಿ ಭಾರತ ತಂಡ ಇದುವರೆಗೆ ಉತ್ತಮ ಸಾಧನೆಯನ್ನೇ ಮೆರೆದಿದೆ. 2005ರಲ್ಲಿ ಆಸ್ಟ್ರೇಲಿಯಾ ವಿರುದ್ದ ಸೋತು ರನ್ನರ್ ಅಪ್ ಆಗಿದ್ದರೆ, ೨೦೧೭ರಲ್ಲಿ ಇಂಗ್ಲೆಂಡ್ ವಿರುದ್ಧ ಸೋತು ಮತ್ತೆ ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿಪಟ್ಟಿತು.
ಈಗಾಗಲೇ ಮಹಿಳಾ ವಿಶ್ವಕಪ್‌ನ ಇತಿಹಾಸದಲ್ಲಿ ಅತ್ಯಂತ ಹೆಚ್ಚು ಬಾರಿ ಟ್ರೋಫಿ ಗೆದ್ದಿರುವ ಆಸ್ಟ್ರೇಲಿಯಾ ತಂಡ ಮತ್ತು ೪ ಬಾರಿ ಚಾಂಪಿಯನ್ ಆಗಿರುವ ಇಂಗ್ಲೆಂಡ್ ಈ ಸಲದ ಮಹಿಳಾ ವಿಶ್ವಕಪ್‌ನಲ್ಲಿ ಬಲಾಢ್ಯ ತಂಡಗಳೆನಿಸಿಕೊಂಡಿದ್ದರೂ, ತವರನಲ್ಲಿ ಆಡುತ್ತಿರುವ ಭಾರತ ತಂಡದ ಮೇಲೆ ಎಲ್ಲರ ದೃಷ್ಟಿ ನೆಟ್ಟಿದೆ.
ಹರ್ಮನ್‌ಪ್ರೀತ್ ತಂಡವನ್ನು ಮುನ್ನಡೆಸಲಿದ್ದು, ಆರಂಭಿಕ ಬ್ಯಾಟರ್ ಸ್ಮೃತಿ ಮಂಧನ ತಂಡದ ಉಪ-ನಾಯಕಿಯಾಗಿದ್ದಾರೆ. ಕಳೆದೊಂದೆರಡು ವರ್ಷದ ಅವಧಿಯಲ್ಲಿ ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಭಾರತದ ವನಿತೆಯರು, ತವರಿನಲ್ಲಿ ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್, ವೆಸ್ಟ್ ಇಂಡೀಸ್ ಮತ್ತು ಐರ್ಲೆಂಡ್ ತಂಡಗಳನ್ನು ಸೋಲಿಸಿ, ತವರಿನಿಂದ ಹೊರಗೆ ನಡೆದ ಏಕದಿನ ಸರಣಿಯಲ್ಲಿ ಇಂಗ್ಲೆಂಡ್ ಅನ್ನು ೨-೧ ಅಂತರದಲ್ಲಿ ಸೋಲಿಸಿತ್ತು.
ಇತ್ತೀಚೆಗೆ ಶ್ರೀಲಂಕಾದಲ್ಲಿ ನಡೆದ ತ್ರಿಕೋನ ಸರಣಿಯಲ್ಲಿ ಟ್ರೋಫಿಯನ್ನೂ ಗೆದ್ದಿತ್ತು. ಹಾಗೆಯೇ ಕಳೆದ ವಾರ ಮುಗಿದ ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ಧದ ಸರಣಿಯ ೩ ಪಂದ್ಯಗಳ ಪೈಕಿ ೧ ಪಂದ್ಯ ಗೆದ್ದಿತ್ತು. ಈ ಸಲದ ವಿಶ್ವಕಪ್‌ನಲ್ಲಿ ಭಾರತದಲ್ಲೇ ಹೆಚ್ಚಿನ ಪಂದ್ಯಗಳು ನಡೆಯುತ್ತಿರುವ ಕಾರಣ, ಈ ವಿಶ್ವಕಪ್ ಹೇಗಾದರೂ ಗೆಲ್ಲಬೇಕೆಂಬ ಛಲವನ್ನು ಹರ್ಮನ್‌ಪ್ರೀತ್ ಪಡೆಗಿದೆ. ತಂಡದ ಅತ್ಯುತ್ತಮ ಬ್ಯಾಟರ್ ಗಳಾದ ಪ್ರತೀಕಾ ರಾವಲ್, ಹರ್ಲೀನ್ ಡಿಯೋಲ್, ದೀಪ್ತಿ ಶರ್ಮಾ, ಜೆಮಿಮಾ ರೊಡ್ರಿಗಸ್, ಮತ್ತಿತರರು ಉತ್ತಮ ಬ್ಯಾಟಿಂಗ್ ಫಾರ್ಮ್‌ನಲ್ಲಿದ್ದಾರೆ.
ಹಾಗೆಯೇ ಬೌಲಿಂಗ್‌ನಲ್ಲಿ ಶ್ರೀಚರಣಿ, ಯಸ್ತಿಕಾ ಭಾಟಿಯಾ, ಸ್ನೇಹಾ ರಾಣಾ ಸೇರಿದಂತೆ ಹಲವರು ತಮ್ಮ ಸ್ಥಿರತೆಯನ್ನು ಸದಾ ಕಾಪಾಡಿಕೊಂಡು ಬಂದಿದ್ದಾರೆ. ಈ ಎಲ್ಲಾ ಕಾರಣಗಳಿಂದ ಭಾರತೀಯರ ಚಿತ್ತ ಇದೀಗ ಮಹಿಳಾ ತಂಡದತ್ತ ನೆಟ್ಟಿದೆ. ಮೊತ್ತ ಮೊದಲ ಬಾರಿಗೆ ವನಿತಾ ತಂಡ ಚೊಚ್ಚಲ ಬಾರಿಗೆ ವಿಶ್ವಕಪ್ ಟ್ರೋಫಿಯನ್ನು ಗೆಲ್ಲಬೇಕೆಂಬುದೇ ಕೋಟ್ಯಂತರ ಕ್ರಿಕೆಟ್‌ಪ್ರೇಮಿಗಳ ಮನದಾಳದ ಹಾರೈಕೆ..!
ಚಾಂಪಿಯನ್ ತಂಡಕ್ಕೆ ಎಷ್ಟು ಬಹುಮಾನ?
ಈ ಸಲದ ಮಹಿಳಾ ವಿಶ್ವಕಪ್ ಗೆದ್ದ ತಂಡಕ್ಕೆ ಸುಮಾರು 39 ಕೋಟಿ ರು. ನಗದು ಬಹುಮಾನ ಸಿಗಲಿದೆ. ಫೈನಲ್‌ನಲ್ಲಿ ಸೋತ ತಂಡಕ್ಕೆ (ರನ್ನರ್ ಅಪ್) ಸುಮಾರು 19 ಕೋಟಿ ರು. ಬಹುಮಾನ ಸಿಗಲಿದೆ. ಸೆಮಿಫೈನಲ್ ತಲುಪುವ ತಂಡಕ್ಕೆ ಸುಮಾರು ೯ ಕೋಟಿ ರು. ಸಿಗಲಿದೆ. ಇದೇ ಮೊದಲ ಬಾರಿಗೆ ಬಹುಮಾನದ ಮೊತ್ತವನ್ನು ಈ ಸಲ ಐಸಿಸಿ ಸರಿಸುಮಾರು ನಾಲ್ಕು ಪಟ್ಟು ಏರಿಸಿದ ಕಾರಣಕ್ಕೆ, ವಿಜೇತ ತಂಡಗಳು ಇಷ್ಟೊಂದು ನಗದು ಬಹುಮಾನ ಪಡೆಯಲಿವೆ.
ವಿಶ್ವಕಪ್: ಭಾರತ ಮಹಿಳಾ ತಂಡ ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧನ (ಉಪ ನಾಯಕಿ), ಪ್ರತೀಕಾ ರಾವಲ್, ಹರ್ಲೀನ್ ಡಿಯೋಲ್, ದೀಪ್ತಿ ಶರ್ಮಾ, ಜೆಮಿಮಾ ರೊಡ್ರಿಗಸ್, ರೇಣುಕಾ ಸಿಂಗ್ ಠಾಕೂರ್, ಅರುಂಧತಿ ರೆಡ್ಡಿ, ರಿಚಾ ಘೋಷ್ (ಕೀಪರ್), ಕ್ರಾಂತಿ ಗೌಡ್, ಅಮಂಜೋತ್ ಕೌರ್, ರಾಧಾ ಯಾದವ್, ಶ್ರೀಚರಣಿ, ಯಸ್ತಿಕಾ ಭಾಟಿಯಾ, ಸ್ನೇಹಾ ರಾಣಾ.
2025 ವಿಶ್ವಕಪ್ ಟೂರ್ನಿಯ ವಿಶೇಷತೆ
ಸೆಪ್ಟೆಂಬರ್-೩೦ರಿಂದ ಆರಂಭಗೊಳ್ಳುವ ೧೩ನೇ ಮಹಿಳಾ ವಿಶ್ವಕಪ್ ಟೂರ್ನಿಯ ಆತಿಥ್ಯವನ್ನು ಈ ಸಲ ಭಾರತ ಮತ್ತು ಶ್ರೀಲಂಕಾ ವಹಿಸಿಕೊಂಡಿವೆ. ಒಟ್ಟು ೮ ತಂಡಗಳಾದ ಭಾರತ, ಆಸ್ಟ್ರೇಲಿಯಾ, ಬಾಂಗ್ಲಾದೇಶ, ಇಂಗ್ಲೆಂಡ್, ನ್ಯೂಜಿಲೆಂಡ್, ಪಾಕಿಸ್ತಾನ, ದ. ಆಫ್ರಿಕಾ ಮತ್ತು ಶ್ರೀಲಂಕಾ ಈ ಟೂರ್ನಿಯಲ್ಲಿ ಪಾಲ್ಗೊಳ್ಳಲಿವೆ. ಮೊದಲ ಪಂದ್ಯವು ಸೆ. ೩೦ರಂದು ಗೌಹಾಟಿಯಲ್ಲಿ ಭಾರತ-ಶ್ರೀಲಂಕಾ ನಡುವೆ ನಡೆಯಲಿದೆ.
ಟೂರ್ನಿಯಲ್ಲಿ ಒಟ್ಟು ೩೧ ಪಂದ್ಯಗಳು ನಡೆಯಲಿವೆ. ಪಾಕಿಸ್ತಾನ ತಂಡದ ಕೆಲವು ಪಂದ್ಯಗಳನ್ನು ಭಾರತದಲ್ಲಿ ನಿಗದಿಪಡಿಸಿತ್ತಾದರೂ, ಅಲ್ಲಿನ ಕ್ರಿಕೆಟ್ ಮಂಡಳಿ ಅದಕ್ಕೆ ಅವಕಾಶ ನೀಡದ ಕಾರಣಕ್ಕೆ, ಪಾಕಿಸ್ತಾನ ಆಡಲಿರುವ ಎಲ್ಲಾ ಪಂದ್ಯಗಳನ್ನು ಶ್ರೀಲಂಕಾಕ್ಕೆ ಸ್ಥಳಾಂತರಿಸಲಾಗಿದೆ.