ಶಿವಕುಮಾರ್ ಬೆಳ್ಳಿತಟ್ಟೆ
ಮೂಲ ಉದ್ದೇಶ ಮರೆತ ಕೌಶಲ್ಯ ಇಲಾಖೆ
ಈಗ ಅಕ್ರಮ ಮಾಡುವುದೇ ಉದ್ಯೋಗ
ಕೋಟ್ಯಾಂತರ ರು. ಅಕ್ರಮ
ಬೆಂಗಳೂರು: ನಾಡಿನ ಉದ್ಯೋಗದಾತ ಕೌಶಲ್ಯಾಭಿವೃದ್ದಿ ಇಲಾಖೆ ಮೂಲ ಉದ್ದೇಶವನ್ನೇ ಮರೆತು ಅಕ್ರಮಗಳ ಹೊಸ ಕೌಶಲ್ಯ ಕರಗತ ಮಾಡಿಕೊಂಡಿದೆ. ನಾಡಿನ ಯುವಜನತೆಗೆ ಕೌಶಲ್ಯ ತರಬೇತಿಗಳನ್ನು ನೀಡಿ ಉದ್ಯೋಗ ನೀಡಬೇಕಾದ ಇಲಾಖೆ ಈಗ ಅಕ್ರಮ ಮಾರ್ಗಗಳ ಮೂಲಕ ಹಣ ವೆಚ್ಚ ಮಾಡಿ ಅವ್ಯವಹಾರಗಳನ್ನು ನಡೆಸುವ ಹೊಸ ಕೌಶಲ್ಯ ಕಲಿತುಕೊಂಡಿದೆ, ಅಂದರೆ ಯುವಜನತೆಗೆ ಕೌಶಲ್ಯ ತರಬೇತಿ ನೀಡುವ ಬದಲು ಉದ್ಯೋಗ ಮೇಳದಂತಹ ಕಾರ್ಯಕ್ರಮಗಳ ಮೂಲಕ ಇಲಾಖೆಯ ಅಮೂಲ್ಯ ಅನುದಾನವನ್ನು ವೆಚ್ಚ ಮಾಡಿ ಕಚೇರಿಗಳಲ್ಲಿ ಹತ್ತು ಹಲವು ಅಕ್ರಮಗಳು ನಡೆಯುವಂತೆ ಮಾಡಲಾಗಿದೆ.
ಇಷ್ಟಾದರೂ ಕೌಶಲ್ಯಾಭಿವೃದ್ಧಿ ಇಲಾಖೆ ಸಚಿವರಾದ ಡಾ.ಶರಣಪ್ರಕಾಶ್ ಪಾಟೀಲ್ ಅವರು ಕಳೆದೊಂದು ವರ್ಷದಿಂದ ಇಲಾಖೆಯ ಉದ್ಯೋಗ ಮತ್ತು ತರಬೇತಿಗೆ ಸಂಬಂಧಿಸಿದಂತೆ ಒಮ್ಮೆ ಯೂ ಸಭೆ ನಡೆಸಿಲ್ಲ, ಅಷ್ಟೇ ಏಕೆ ಇಲಾಖೆಯ ಎಲ್ಲಾ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಕರೆದು ತರಬೇತಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆಯನ್ನೂ ಮಾಡಿಲ್ಲ, ಏಕೆಂದರೆ ಇಲಾಖೆಯಲ್ಲಿ ಗ್ರಾಮೀಣ ಭಾಗಗಳೂ ಸೇರಿದಂತೆ ರಾಜ್ಯದ ಯುವಜನತೆಯ ಉದ್ಯೋಗ ತರಬೇತಿಗೆ ಸಂಬಂಧಿಸಿ ದಂತೆ ಯಾವುದೇ ಕ್ರಿಯಾ ಯೋಜನೆಗಳನ್ನೇ ರೂಪಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಲಾಖೆ ಅಧಿಕಾರಿಗಳು ಉದ್ಯೋಗ ಮೇಳಕ್ಕೆಂದು ಕೋಟ್ಯಾಂತರ ರೂಪಾಯಿ ವಚ್ಚ ಮಾಡುತ್ತಿದ್ದು, ಇದರಿಂದ ನಿರುದ್ಯೋಗಿ ಯುಕರಿಗೆ ಉದ್ಯೋಗ ಸಿಗುತ್ತದೆ ಎನ್ನುವಂತೆ ಜಾಹೀರಾತುಗಳನ್ನು ನೀಡು ತ್ತಿದ್ದಾರೆ. ಆದರೆ ವಾಸ್ತವದಲ್ಲಿ ಯಾರಿಗೆ, ಯಾವ ಸಂಸ್ಥೆಯಲ್ಲಿ ಕೆಲಸ ಸಿಕ್ಕಿದೆ, ಅವರ ಸಂಖ್ಯೆ ಎಷ್ಟಿದೆ ಎನ್ನುವ ಮಾಹಿತಿ ಯಾರಿಗೂ ಗೊತ್ತಿಲ್ಲ. ಆದರೆ ಒಂದು ಉದ್ಯೋಗ ಮೇಳಕ್ಕೆ ಕನಿಷ್ಠ ೫ ಕೋಟಿ ರು.ಗಳಿಗೂ ಹೆಚ್ಚಿನ ಹಣ ದುಂದು ವೆಚ್ಚವಾಗುತ್ತಿದ್ದು, ಇದರಿಂದ ಸಾಮಾನ್ಯ ಕೌಶಲ್ಯ ತರಬೇತಿಗಳು ಮೂಲೆ ಸೇರಿಕೊಂಡಿವೆ.
ಇದನ್ನೂ ಓದಿ: Raghav Sharma Nidle Column: ರೋಹಿಂಗ್ಯಾಗಳನ್ನು ಸಾಕುತ್ತಲೇ ಇರಲು ಭಾರತ ಧರ್ಮಛತ್ರವೇ ?
ಈ ಮಧ್ಯೆ ಕೌಶಲ್ಯಾಭಿವೃದ್ಧಿ ಇಲಾಖೆಯಲ್ಲಿ ಹೊರ ಗುತ್ತಿಗೆ ಆಧಾರದಲ್ಲಿ ನೇಮಕಗೊಂಡಿರುವ ನೌಕರರೇ ಆಡಳಿತ ಮತ್ತು ಹಣಕಾಸು ಅಧಿಕಾರ ಚಲಾಯಿಸುತ್ತಿದ್ದು, ಇದಕ್ಕೆ ಸಚಿವರು ಅವಕಾಶ ನೀಡಿರುವುದೇ ಮೂಲ ಕಾರಣವಾಗಿದೆ. ಅದರಲ್ಲೂ ವಿಶೇಷವಾಗಿ ವಿದೇಶದಲ್ಲಿ ಉದ್ಯೋಗ ಕೊಡಿಸುವ ಇಂಟರ್‌ನ್ಯಾಷನಲ್ ಮೈಗ್ರೆಷನ್ ಸೆಂಟರ್ ವ್ಯವಸ್ಥಾಪಕರಾಗಿ ಹೊರಗುತ್ತಿಗೆ ಆಧಾರ ದಲ್ಲಿ ನೇಮಕವಾಗಿರುವ ಅವಿನಾಶ್ ಇಡೀ ಇಲಾಖೆ ಕಾರ್ಯಕ್ರಮಗಳು ಕೌಶಲ್ಯವನ್ನೇ ಮರೆಯಲು ಕಾರಣವಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೌಶಲ್ಯಾಭಿವೃದ್ಧಿ ಇಲಾಖೆ ಸಚಿವರಾದ ಶರಣಪ್ರಕಾಶ್ ಪಾಟೀಲ್ ಅವರು, ಕೌಶಲ್ಯಾಭಿವೃದ್ಧಿಗೆ ಸಂಬಂಧಿಸಿದ ವಿಚಾರದಲ್ಲಿ ಕೌಶಲ್ಯಾಭಿವೃದ್ಧ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗಿಂತ ಮ್ಯಾನೇ ಜರ್ ಅವಿನಾಶ್ ಮೇಲೆಯೇ ಅವಲಂಬಿತರವಾಗಿರುವುದು ಇಲಾಖೆಯ ಕೌಶಲ್ಯ ತರಬೇತಿ ಕಾರ್ಯ ಕ್ರಮಗಳು ಮೂಲೆ ಸೇರುವುದಕ್ಕೆ ಕಾರಣವಾಗಿದೆ ಎನ್ನಲಾಗಿದೆ.
ಅವರು ರಾಜ್ಯದಲ್ಲಿ ಕೌಶಲ್ಯಾಭಿವೃದ್ಧಿ ತರಬೇತಿಗಿಂತ ವಿದೇಶದಲ್ಲಿ ಉದ್ಯೋಗ ಕೊಡಿಸುವ ಕಾರ್ಯ ಕ್ರಮಗಳಿಗೆ ಆದ್ಯತೆ ನೀಡುವಂತೆ ಸಚಿವರಿಗೆ ಮಾರ್ಗದರ್ಶನ ನೀಡುತ್ತಿದ್ದಾರೆನ್ನಲಾಗಿದೆ. ಇವರೊಂದಿಗೆ ನಿಗಮದ ಅಧ್ಯಕ್ಷರೂ ಸೇರಿಕೊಂಡಿದ್ದು ಒಟ್ಟಾರೆ ಇಲಾಖೆ ಮೂಲ ಉದ್ದೇಶವನ್ನೇ ಮರೆತು ಅಕ್ರಮ ದಾರಿ ಹಿಡಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಏನಿದು ಹಣ ಮಾಡುವ ಹೊಸ ಕೌಶಲ್ಯ: ರಾಜ್ಯದಲ್ಲಿ ಗ್ರಾಮೀಣ ಭಾಗದ ಯುವಕರು, ಯುವತಿ ಯರು ಸೇರಿದಂತೆ ಎಲ್ಲರಿಗೂ ಕೌಶಲ್ಯ ಅಭಿವೃದ್ಧಿಗಾಗಿ ಸುಮಾರು 200 ಕೋಟಿ ರು. ವರೆಗೂ ನೀಡಲಾಗುತ್ತಿತ್ತು. ಆದರೆ ಗ್ಯಾರಂಟಿಗಳ ಕಾರಣಗಳಿಂದಾಗಿ ಈ ವರ್ಷ ಬರೀ ೮೦ ಕೋಟಿ ರು.ಗಳನ್ನು ಮಾತ್ರ ನೀಡಲಾಗಿದ್ದು, ಇದರಲ್ಲಿ ಬಹುತೇಕ ಅನುದಾನವನ್ನು ಉದ್ಯೋಗ ಮೇಳ ಹಾಗೂ ವಿದೇಶ ಪ್ರವಾಸಕ್ಕೆ ಬಳಸಿಕೊಳ್ಳಲಾಗಿದೆ ಎನ್ನಲಾಗಿದೆ.
ಹೀಗಾಗಿ ತಲಾ ೭ರಿಂದ ೧೦ ಕೋಟಿ ರು. ವೆಚ್ಚದಲ್ಲಿ ಉದ್ಯೋಗ ಮೇಳಗಳನ್ನು ನಡೆಸಲಾಗುತ್ತಿದ್ದು ಈ ತನಕ ಕಲಬುರ್ಗಿ ಸೇರಿದಂತೆ ನಾಲ್ಕು ವಿವಿಧ ಜಿಲ್ಲೆಗಳಲ್ಲಿ ಉದ್ಯೋಗ ಮೇಳ ನಡೆಸಲಾಗಿದ್ದು, ಇದಕ್ಕಾಗಿ ನಡೆಸಲಾಗುವ ಒಂದು ದಿನದ ಕಾರ್ಯಕ್ರಮದ ಗುತ್ತಿಗೆಯನ್ನು ಖಾಸಗಿ ಗುತ್ತಿಗೆದಾರರಿಗೆ ಯಾವುದೇ ಟೆಂಡರ್ ಮಾಡದೇ ವಿನಾಯಿತಿ ನೀಡಿ ಆದೇಶ ನೀಡಲಾಗುತ್ತಿದೆ.
ಅದರಲ್ಲೂ ಅಧಿಕಾರಿಗಳ ಕೈ ಬೆಚ್ಚಗೆ ಮಾಡುವ ಗುತ್ತಿಗೆದಾರರಿಗೆ ಇದರ ಗುತ್ತಿಗೆ ನೀಡಲಾಗುತ್ತಿದ್ದು, ಇದರಿಂದ ಹಣ ವೆಚ್ಚವಾಗುವುದೇ ವಿನಃ ಯಾರಿಗೆ, ಯಾವ ಸಂಸ್ಥೆಯಲ್ಲಿ ನೌಕರಿ ಸಿಕ್ಕಿದೆ ಎನ್ನುವ ಮಾಹಿತಿಯೇ ತಿಳಿಯುವುದೇ ಇಲ್ಲ. ಹಾಗೊಂದು ವೇಳೆ ಬೇಕೆಂದರೂ ಈ ಮಾಹಿತಿ ಉದ್ಯೋಗ ಮೇಳ ನಡೆಸಿದ ಗುತ್ತಿಗೆದಾರರಿಗೆ ಮಾತ್ರ ತಿಳಿದಿರುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಬರೀ ೧೬ ತರಬೇತಿಗಳು ಮಾತ್ರ ನಡೆಯುತ್ತಿವೆ
ರಾಜ್ಯದ ಸರಕಾರಿ ಸ್ವಾಮ್ಯದ ಜಿಟಿಟಿಸಿ, ಐಟಿಐ ಹಾಗೂ ಕೆಜಿಟಿಟಿ ಸೇರಿದಂತೆ ಸುಮಾರು 150 ತರಬೇತಿ ಸಂಸ್ಥೆಗಳಿದ್ದು ಇವುಗಳಲ್ಲಿ ಪಿಟ್ಟರ್, ಇಲೆಕ್ಟ್ರಿಶಿಯನ್ ಸೇರಿದಂತೆ ಸಾಮಾನ್ಯ ತರಬೇತಿ ಗಳನ್ನು ಮಾತ್ರ ನೀಡುತ್ತಿದೆ. ಆದರೆ ಇಲಾಖೆಯಲ್ಲಿ ಸುಮಾರು 400ಕ್ಕೂ ಹೆಚ್ಚಿನ ರೀತಿಯ ತರಬೇತಿ ಗಳಿದ್ದು ಅವುಗಳಲ್ಲಿ ಇಲಾಖೆ ನಡೆಸುತ್ತಿರುವುದು ಬರೀ ೧೬ ರೀತಿಯ ತರಬೇತಿಗಳನ್ನು ಮಾತ್ರ, ಅಂದರೆ ಬಹುತೇಕ ತರಬೇತಿಗಳು ಇಲಾಖೆಯಿಂದ ಮೂಲೆ ಸೇರಿವೆ. ಹೀಗಾಗಿ ನಿರುದ್ಯೋಗಿ ಗಳಿಗೆ ಕೌಶಲ್ಯ ಸಿಗದೆ ವಂಚಿತರಾಗುತ್ತಿದ್ದು, ಇದಕ್ಕಾಗಿ ಮೀಸಲಿಟ್ಟ ಹಣ ಉದ್ಯೋಗ ಮೇಳದ ಹೆಸರಿನಲ್ಲಿ ಇವೆಂಟ್ ಮ್ಯಾನೇಜ್ ಮೆಂಟ್ ಮಾಡುವ ಗುತ್ತಿಗೆ ದಾರರ ಪಾಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.