Raghav Sharma Nidle Column: ರೋಹಿಂಗ್ಯಾಗಳನ್ನು ಸಾಕುತ್ತಲೇ ಇರಲು ಭಾರತ ಧರ್ಮಛತ್ರವೇ ?
ನರಮೇಧದಿಂದ ತಪ್ಪಿಸಿಕೊಂಡು ಬರುವ ನಿರಾಶ್ರಿತರು ಕೆಂಪುಹಾಸನ್ನು (ರೆಡ್ ಕಾರ್ಪೆಟ) ಕೇಳುವುದಿಲ್ಲ. ಅವರು ಭಾರತದ ಪ್ರತಿಯೊಬ್ಬ ವ್ಯಕ್ತಿಗೂ ಸಂವಿಧಾನ ನೀಡುವ ರಕ್ಷಣೆಯನ್ನಷ್ಟೇ ಕೇಳುತ್ತಾರೆ. ಸಾಮೂಹಿಕ ದೌರ್ಜನ್ಯಗಳಿಂದ ತಪ್ಪಿಸಿಕೊಳ್ಳಲು ಬಯಸುವ ಮಹಿಳೆಯರು ಮತ್ತು ಮಕ್ಕಳನ್ನು ಅಕ್ರಮ ನುಸುಳುಕೋರರೆಂದು ಸಾಂವಿಧಾನಿಕ ನ್ಯಾಯಾಲಯ ಪರಿಗಣಿಸಿದರೆ, ಬಲವಂತದ ಸ್ಥಳಾಂತರ ಮತ್ತು ಕಾನೂನುಬಾಹಿರ ವಲಸೆಯ ನಡುವೆ ಯಾವುದೇ ವ್ಯತ್ಯಾಸ ಇರುವುದಿಲ್ಲ ಎನ್ನುವುದು ಪತ್ರದಲ್ಲಿರುವ ತಕರಾರು.
-
ಜನಪಥ
ರೋಹಿಂಗ್ಯಾ ಪ್ರಕರಣದ ವಿಚಾರಣೆಯಲ್ಲಿ ಸಿಜೆಐ ಆಡಿದ ಮಾತುಗಳನ್ನು ಅಲ್ಪಸಂಖ್ಯಾತರ ಬಗ್ಗೆ ಭಾರಿ ಮಮಕಾರ ಹೊಂದಿದ ಕಾನೂನು ಪಂಡಿತರು ವಿರೋಧಿಸಬಹುದು. ಹಾಗಂತ, ಅಕ್ರಮವಾಗಿ ಪ್ರವೇಶಿಸಿದವರನ್ನು ಅನುಕಂಪದ ಮೇಲೆ ಇನ್ನೆಷ್ಟು ವರ್ಷಗಳ ಕಾಲ ಸಾಕಿ-ಸಲಹಬಹುದು? ಈ ನೆಲದ ಕಾನೂನಿನಡಿಯಲ್ಲಿ ಅವರನ್ನು ಮ್ಯಾನ್ಮಾರ್‌ಗೆ ವಾಪಸ್ ಕಳಿಸಬೇಕಲ್ಲವೇ?
ಮ್ಯಾನ್ಮಾರ್ ಕರಾವಳಿಯ ರಾಖೈನ್ ಪ್ರಾಂತ್ಯದಿಂದ ಅಕ್ರಮ ವಲಸೆ ಬಂದು ಭಾರತದಲ್ಲಿ ನೆಲೆಸಿ ರುವ ರೋಹಿಂಗ್ಯಾ ಜನಾಂಗದವರ (ಬಹುಪಾಲು ಮುಸಲ್ಮಾನರು) ಬಗ್ಗೆ ಡಿಸೆಂಬರ್ ೨ರಂದು ನಡೆಸಿದ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯ ಕಾಂತ್ ಆಡಿದ ಮಾತುಗಳ ಬಗ್ಗೆ ಕೆಲ ಕಾನೂನು ತಜ್ಞರು, ನಿವೃತ್ತ ನ್ಯಾಯಾಧೀಶರು, ಜ್ಯುಡಿಷಿಯಲ್ ಅಕೌಂಟೆಬಿಲಿಟಿ ಆಂಡ್ ರಿಫಾರ್ಮ್ಸ್ (ಸಿಜೆಎಆರ್) ಸಂಸ್ಥೆಯ ಸದಸ್ಯರು ತೀವ್ರ ಆಕ್ಷೇಪ ಹೊರಹಾಕಿ, ಸಿಜೆಐಗೆ ಬಹಿರಂಗ ಪತ್ರವೊಂದನ್ನು ಬರೆದಿದ್ದಾರೆ.
ಸಿಜೆಐ ಅವರು ಮ್ಯಾನ್ಮಾರ್ ನರಮೇಧದ ಬಲಿಪಶುಗಳಾದ ರೋಹಿಂಗ್ಯಾಗಳನ್ನು ಅಕ್ರಮ ನುಸುಳು ಕೋರರಿಗೆ ಹೋಲಿಸುವ ರೀತಿಯಲ್ಲಿ ಮಾತುಗಳನ್ನಾಡಿದ್ದು ಸರಿಯಲ್ಲ. ನಿರಾಶ್ರಿತ (ರೆಫ್ಯೂಜೀಸ್) ರೋಹಿಂಗ್ಯಾಗಳಿಗೆ ರಕ್ಷಣೆ ನಿರಾಕರಿಸುವುದನ್ನು ಸಮರ್ಥಿಸಲು ಭಾರತದ ಬಡವರ ದುಃಸ್ಥಿತಿಯನ್ನು ಪ್ರಸ್ತಾಪಿಸುವುದು ಅಪಾಯಕಾರಿ ಮೇಲ್ಪಂಕ್ತಿಯನ್ನು ಹಾಕುತ್ತದೆ. ಇದು ಸಾಂವಿಧಾನಿಕ ನ್ಯಾಯದ ತತ್ವಗಳಿಗೆ ವಿರುದ್ಧವಾಗಿದೆ. ನರಮೇಧದಿಂದ ತಪ್ಪಿಸಿಕೊಂಡು ಬರುವ ನಿರಾಶ್ರಿತರು ಕೆಂಪುಹಾಸನ್ನು (ರೆಡ್ ಕಾರ್ಪೆಟ) ಕೇಳುವುದಿಲ್ಲ. ಅವರು ಭಾರತದ ಪ್ರತಿಯೊಬ್ಬ ವ್ಯಕ್ತಿಗೂ ಸಂವಿಧಾನ ನೀಡುವ ರಕ್ಷಣೆಯನ್ನಷ್ಟೇ ಕೇಳುತ್ತಾರೆ. ಸಾಮೂಹಿಕ ದೌರ್ಜನ್ಯಗಳಿಂದ ತಪ್ಪಿಸಿಕೊಳ್ಳಲು ಬಯಸುವ ಮಹಿಳೆಯರು ಮತ್ತು ಮಕ್ಕಳನ್ನು ಅಕ್ರಮ ನುಸುಳುಕೋರರೆಂದು ಸಾಂವಿಧಾನಿಕ ನ್ಯಾಯಾಲಯ ಪರಿಗಣಿಸಿದರೆ, ಬಲವಂತದ ಸ್ಥಳಾಂತರ ಮತ್ತು ಕಾನೂನುಬಾಹಿರ ವಲಸೆಯ ನಡುವೆ ಯಾವುದೇ ವ್ಯತ್ಯಾಸ ಇರುವುದಿಲ್ಲ ಎನ್ನುವುದು ಪತ್ರದಲ್ಲಿರುವ ತಕರಾರು.
ಈ ಪತ್ರಕ್ಕೆ ಮಾಜಿ ನ್ಯಾಯಧೀಶರಾದ ಎ.ಪಿ.ಶಾ,ಕೆ.ಚಂದ್ರು ಮತ್ತು ಅಂಜನಾ ಪ್ರಕಾಶ್, ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲರಾದ ಡಾ. ರಾಜೀವ್ ಧವನ್, ಚಂದರ್ ಉದಯ್ ಸಿಂಗ್, ಕಾಲಿನ್ ಗೊನ್ಸಾಲ್ವೆಸ್, ಕಾಮಿನಿ ಜೈಸ್ವಾಲ್, ಗೋಪಾಲ್ ಶಂಕರನಾರಾಯಣನ್, ಮಿಹಿರ್ ದೇಸಾಯಿ, ಗೌತಮ್ ಭಾಟಿಯಾ, ಶಾರುಖ್ ಆಲಂ, ಸಿಜೆಎಆರ್ ಸದಸ್ಯರಾದ ಪ್ರಶಾಂತ್ ಭೂಷಣ, ನಿಖಿಲ್ ಡೇ, ಅಲೋಕ್ ಪ್ರಸನ್ನ ಕುಮಾರ್, ಇಂದು ಪ್ರಕಾಶ್ ಸಿಂಗ್ ಮತ್ತು ಅಂಜಲಿ ಭಾರದ್ವಾಜ್ ಸೇರಿ ಹಲವರು ಸಹಿ ಹಾಕಿದ್ದಾರೆ.
ಇದನ್ನೂ ಓದಿ: Raghav Sharma Nidle Column: ವಾಗ್ದಾನ ನೀಡಿದ್ದಲ್ಲಿ ಅದನ್ನು ಈಡೇರಿಸುವುದು ಕರ್ತವ್ಯವಲ್ಲವೇ ?
ಹಾಗಾದರೆ ವಿಚಾರಣೆಯಲ್ಲಿ ಸಿಜೆಐ ಸೂರ್ಯಕಾಂತ್ ಹೇಳಿದ್ದೇನು ಎಂಬುದನ್ನು ಗಮನಿಸೋಣ. “ರೋಹಿಂಗ್ಯಾಗಳಿಗೆ ಭಾರತದಲ್ಲಿ ವಾಸ್ತವ್ಯ ಹೂಡಲು ಯಾವುದೇ ಕಾನೂನಾತ್ಮಕ ಸ್ಥಾನಮಾನ ಗಳಿಲ್ಲ ಮತ್ತು ಅವರು ದೇಶಕ್ಕೆ ಒಳನುಸುಳಿದವರೇ ಆಗಿದ್ದರೆ, ಭಾರತದ ಉತ್ತರ ಭಾಗದಲ್ಲಿ ಗಡಿ ಸಮಸ್ಯೆ ಇದೆ ಎನ್ನುವುದನ್ನೂ ಸೂಕ್ಷ್ಮವಾಗಿ ಗಮನಿಸಬೇಕು.
ಕಾನೂನುಬಾಹಿರವಾಗಿ ಪ್ರವೇಶಿಸಿದವರಿಗೆ ದೇಶದ ಎಲ್ಲಾ ಸೌಲಭ್ಯಗಳನ್ನು ನೀಡಬೇಕೆ? ಕೆಂಪು ಹಾಸಿನ ಸ್ವಾಗತ ನೀಡಬೇಕೆ? ಅವರನ್ನು ವಾಪಸ್ ಕಳುಹಿಸಲು ನಮ್ಮಲ್ಲಿ ಸಮಸ್ಯೆ ಏನು? ಭಾರತದಲ್ಲೂ ಬಹಳಷ್ಟು ಬಡವರಿದ್ದಾರೆ. ಮೊದಲು ನಾವು ಅವರ ಬಗ್ಗೆ ಚಿಂತೆ ಮಾಡಬೇಕು" ಎನ್ನುವುದು ಸಿಜೆಐ ಅವರ ಕಾಳಜಿಯಾಗಿತ್ತು.
ದೇಶದ ಬಡ ನಾಗರಿಕರಿಗೆ ಇಲ್ಲಿನ ಸೌಲಭ್ಯ ಮತ್ತು ಸೌಕರ್ಯಗಳನ್ನು ಪಡೆಯಲು ಅರ್ಹತೆ ಇಲ್ಲವೇ? ನೀವು ಅವರ ಮೇಲೆ ಏಕೆ ಗಮನಹರಿಸಬಾರದು ಎಂದು ಶ್ರೀಸಾಮಾನ್ಯನ ರೀತಿಯ ಯೋಚಿಸಿದ ಸಿಜೆಐ, ತಮ್ಮ ಅಭಿಪ್ರಾಯಗಳನ್ನು ರೋಹಿಂಗ್ಯಾಗಳ ಪರ ಅರ್ಜಿ ಸಲ್ಲಿಸಿದ ವಕೀಲರ ಮುಂದಿಟ್ಟಿ ದ್ದರು. ಆದರೆ, “ಸಿಜೆಐ ಆಲೋಚನೆಗಳು ಮಾನವೀಯ ನೆಲೆಯಲ್ಲಿಲ್ಲ" ಎಂದು ಕೆಲ ಕಾನೂನು ಪಂಡಿತರಿಗೆ ಅನಿಸಿದೆ.
“ಒಳನುಸುಳುವವರು ಗಡಿ ದಾಟಿ ಬರುತ್ತಾರೆ. ಸುರಂಗವನ್ನು ಅಗೆದು ಅಥವಾ ಗಡಿ ಬೇಲಿಗಳನ್ನು ಅಕ್ರಮವಾಗಿ ದಾಟಿ ಭಾರತ ಪ್ರವೇಶಿಸುತ್ತಾರೆ. ನಂತರ, ನಾವು ಭಾರತ ಪ್ರವೇಶಿಸಿದ್ದೇವೆ, ಈ ದೇಶದ ಕಾನೂನುಗಳು ನಮಗೂ ಅನ್ವಯಿಸಬೇಕು ಮತ್ತು ನಾವು ಇಲ್ಲಿ ಆಹಾರ ಹಾಗೂ ಇತರೆ ಸೌಲಭ್ಯ ಗಳಿಗೆ ಅರ್ಹರಾಗಿದ್ದೇವೆ ಎನ್ನುತ್ತಾರೆ. ಇಲ್ಲಿ ಆಶ್ರಯಕ್ಕೆ, ಮಕ್ಕಳು ಶಿಕ್ಷಣಕ್ಕೆ ಅರ್ಹರಾಗಿದ್ದಾರೆ ಎಂದೂ ಹೇಳುತ್ತಾ ಹೋಗುತ್ತಾರೆ. ಅಂದರೆ ನಾವು ದೇಶದ ಕಾನೂನನ್ನು ಅವರಿಗಾಗಿ ಈ ರೀತಿ ವಿಸ್ತರಿಸುತ್ತಲೇ ಇರಬೇಕೆ" ಎಂಬ ಕಟು ಪ್ರಶ್ನೆಗಳನ್ನು ಸಿಜೆಐ ಕೇಳಿದ್ದಾರೆ.
ಅಕ್ರಮವಾಗಿ ಪ್ರವೇಶಿಸಿದವರಿಗಿಂತ ಹೆಚ್ಚು ಸಮಸ್ಯೆಗಳ ಸುಳಿಯಲ್ಲಿರುವ ಮೂಲ ಭಾರತೀಯರ ಬಗ್ಗೆ ಹೆಚ್ಚು ಕಾಳಜಿ ವಹಿಸಿ ಎನ್ನುವುದು ಸಿಜೆಐ ಉದ್ದೇಶವಾಗಿತ್ತು. ಹಾಗಂತ, ರೋಹಿಂಗ್ಯಾಗಳನ್ನು ಭಾರತದಿಂದ ಬಡಿದಟ್ಟಿ ಎಂದೇನೂ ಹೇಳಲಿಲ್ಲ. ಕಾನೂನಾತ್ಮಕವಾಗಿ ಏನು ಮಾಡಬೇಕೋ ಅದನ್ನು ಮಾಡಬಹುದಲ್ಲ ಎಂದು ತಿಳಿಸಿದ್ದರು.
ಕಳೆದ ಮೇ ತಿಂಗಳಲ್ಲಿ ರೋಹಿಂಗ್ಯಾ ಜನಾಂಗದ ಕೆಲವರನ್ನು ದಿಲ್ಲಿ ಪೊಲೀಸರು ಬಂಧಿಸಿದ್ದು, “ಅವರು ಎಲ್ಲಿದ್ದಾರೆ, ಹೇಗಿದ್ದಾರೆ ಎಂಬ ಕನಿಷ್ಠ ಮಾಹಿತಿ ಕೂಡ ಇಲ್ಲ" ಎಂಬುದನ್ನು ಪ್ರಶ್ನಿಸಿ ಅಂಜಲಿ ಮಂಚಂದಾ ಸುಪ್ರೀಂ ಕೋರ್ಟ್ʼಗೆ ಸಲ್ಲಿಸಿದ್ದ ಹೆಬಿಯಸ್ ಕೋರ್ಪಸ್ ಅರ್ಜಿ ವಿಚಾರಣೆ ವೇಳೆ ಸಿಜೆಐ ಈ ಮಾತುಗಳನ್ನಾಡಿದ್ದರು.
ಮ್ಯಾನ್ಮಾರ್‌ನ ರೋಹಿಂಗ್ಯಾ ಜನಾಂಗದವರು ದಶಕಗಳ ಕಾಲದ ಕಿರುಕುಳ, ಹಿಂಸಾಚಾರದ ಸಂತ್ರಸ್ತರಾಗಿದ್ದಾರೆ. ವಿಶ್ವಸಂಸ್ಥೆಯ ಉನ್ನತಾಧಿಕಾರಿಗಳು ಅವರನ್ನು ನಿರಾಶ್ರಿತರು ಎಂದು ಗುರುತಿಸಿದ್ದಾರೆ. ಬಾಂಗ್ಲಾದೇಶದಲ್ಲಿ ತಮ್ಮ ಬೇರುಗಳನ್ನು ಹೊಂದಿರುವುದರಿಂದ ರೋಹಿಂಗ್ಯಾ ಮುಸ್ಲಿಮರನ್ನು ಮ್ಯಾನ್ಮಾರ್‌ನಲ್ಲಿ ಬಂಗಾಳಿಗಳು ಎಂದು ಕರೆಯುತ್ತಾರೆ.
1982ರ ಮ್ಯಾನ್ಮಾರ್ ಪೌರತ್ವ ಕಾನೂನು ರೋಹಿಂಗ್ಯಾಗಳನ್ನು ಜನಾಂಗೀಯ ಗುಂಪು ಎಂದು ಗುರುತಿಸುವುದಿಲ್ಲ. ಹಾಗಾಗಿ ಕಳೆದ ೩೫ ವರ್ಷಗಳಿಂದ ಅವರು ದೇಶರಹಿತರಾಗಿದ್ದಾರೆ. ಇದರಿಂದಾಗಿಯೇ ಲಕ್ಷಾಂತರ ಮಂದಿ ಅಲ್ಲಿಂದ ಪಲಾಯನ ಮಾಡಿ ಹೆಚ್ಚಿನ ಸಂಖ್ಯೆಯಲ್ಲಿ ನೆರೆಯ ಬಾಂಗ್ಲಾದೇಶದಲ್ಲಿ ನೆಲೆಸಿದ್ದಾರೆ. ಅಂದಾಜು 40000 ಮಂದಿ ಭಾರತದ ಉತ್ತರ ಪ್ರದೇಶ, ಜಮ್ಮು-ಕಾಶ್ಮೀರ, ಹೈದರಾಬಾದ್, ದೆಹಲಿ, ನೂಹ್ ಸೇರಿ ವಿವಿಧೆಡೆ ಟೆಂಟ್‌ಗಳಲ್ಲಿ ಜೀವನ ನಡೆಸುತ್ತಿದ್ದಾರೆ.
ವಾಸ್ತವದಲ್ಲಿ ಇವರ ಸಂಖ್ಯೆ ಭಾರತದಲ್ಲಿ ೧ ಲಕ್ಷ ಮೀರಿದೆ ಎಂದೂ ಹೇಳಲಾಗಿದೆ. ಕೆಲ ರೋಹಿಂಗ್ಯಾಗಳು ರಾಷ್ಟ್ರೀಯ ಭದ್ರತೆಗೆ ಹಾನಿಮಾಡುವ ಕೃತ್ಯಗಳಲ್ಲಿ ಭಾಗಿಯಾಗಿದ್ದಾರೆ ಎಂಬ ಅನುಮಾನವೂ ಕೇಂದ್ರ ಸರಕಾರಕ್ಕಿದೆ. ರೋಹಿಂಗ್ಯಾಗಳು ಕಟ್ಟಡ ನಿರ್ಮಾಣ ಕಾಮಗಾರಿ ಸೇರಿ ವಿವಿಧೆಡೆ ದಿನಗೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ.
ಹಾಗೇ, ಬಾಂಗ್ಲಾದೇಶದಿಂದ ಅಕ್ರಮ ಪ್ರವೇಶ ಮಾಡಿದ ಅನೇಕ ಮಂದಿ ಕೂಡ ನಮ್ಮ-ನಿಮ್ಮ ನಡುವೆ ಓಡಾಡಿಕೊಂಡಿವುದು ಗುಟ್ಟಿನ ವಿಷಯವೇನಲ್ಲ.1955ರ ಪೌರತ್ವ ಕಾಯ್ದೆಯಲ್ಲಿ ಅಕ್ರಮ ಪ್ರವೇಶ ಮಾಡುವವರ ಬಗ್ಗೆ ಉಲ್ಲೇಖಿಸಲಾಗಿದೆ. “ಕಾನೂನುಬದ್ಧ ಪ್ರಯಾಣ ದಾಖಲೆಗಳಿಲ್ಲದೆ, ಭಾರತವನ್ನು ಪ್ರವೇಶಿಸುವವರು ಅಥವಾ ದಾಖಲೆಗಳ ಅವಧಿ ಮುಗಿದ ನಂತರವೂ ಭಾರತದಲ್ಲಿ ವಾಸಿಸುವವರು ಅಕ್ರಮ ವಲಸಿಗರು" ಎಂದು ಅದರಲ್ಲಿ ವ್ಯಾಖ್ಯಾನಿಸಲಾಗಿದೆ.
ಇಂಥ ವ್ಯಕ್ತಿಗಳು ಭಾರತದ ಪೌರತ್ವಕ್ಕೆ ಅರ್ಜಿ ಸಲ್ಲಿಸಲು ಅನರ್ಹರಾಗಿರುತ್ತಾರೆ. 2019ರ ಪೌರತ್ವ (ತಿದ್ದುಪಡಿ) ಕಾಯ್ದೆಯು 2014ರ ಡಿಸೆಂಬರ್ ೩೧ಅಥವಾ ಅದಕ್ಕೂ ಮೊದಲು ಭಾರತಕ್ಕೆ ಪ್ರವೇಶಿಸಿದ ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದ ಹಿಂದೂ, ಸಿಖ್, ಬೌದ್ಧ, ಜೈನ, ಪಾರ್ಸಿ ಮತ್ತು ಕ್ರಿಶ್ಚಿಯನ್ ವ್ಯಕ್ತಿಗಳನ್ನು ಅಕ್ರಮ ವಲಸಿಗರ ವ್ಯಾಪ್ತಿಯಿಂದ ಹೊರಗಿಡುತ್ತದೆ. ಈ ಪ್ರಕಾರವಾಗಿ ನೋಡುವುದಾದರೆ, ರೋಹಿಂಗ್ಯಾಗಳು ಅಕ್ರಮ ವಲಸಿಗರು ಮತ್ತು ಭಾರತೀಯ ಪೌರತ್ವಕ್ಕೆ ಅರ್ಜಿ ಸಲ್ಲಿಸಲು ಅನರ್ಹರಾಗಿದ್ದಾರೆ. ಅವರನ್ನು ಭಾರತದಲ್ಲಿ ನಿರಾಶ್ರಿತರು ಎಂದು ಅಧಿಕೃತವಾಗಿ ಗುರುತಿಸಲಾಗಿಲ್ಲ.
ವಾಸ್ತವದಲ್ಲಿ, ಭಾರತ ಯಾವುದೇ ರಾಷ್ಟ್ರೀಯ ನಿರಾಶ್ರಿತರ ಕಾನೂನು ಹೊಂದಿಲ್ಲ. ಹೀಗಾಗಿ, ಬೇರೆ ದೇಶದಿಂದ ಅಕ್ರಮವಾಗಿ ಭಾರತಕ್ಕೆ ಬಂದು ಆಶ್ರಯ ಬಯಸುವವರಿಗೆ ಇಲ್ಲಿ ಕಾನೂನುಬದ್ಧ ಗುರುತಿಸುವಿಕೆ ಇಲ್ಲ. ಆದರೆ, ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶದಿಂದ 2014ರ ಪೂರ್ವದಲ್ಲಿ ಭಾರತಕ್ಕೆ ಬಂದು ನೆಲೆಸಿದ ಹಿಂದೂಗಳನ್ನು (ಆ ರಾಷ್ಟ್ರಗಳಲ್ಲಿ ಅಲ್ಪಸಂಖ್ಯಾತರು) ಭಾರತೀಯ ಪ್ರಜೆಗಳನ್ನಾಗಿ ಗುರುತಿಸಲು ಕೇಂದ್ರ ಸರಕಾರ 2019ರ ಪೌರತ್ವ ತಿದ್ದುಪಡಿ ಕಾಯ್ದೆ ಯನ್ನು ಜಾರಿಗೆ ತಂದಿದೆ.
ರೋಹಿಂಗ್ಯಾಗಳಿಗೆ ಸಂಬಂಧಿಸಿ ೫ ಪ್ರಶ್ನೆಗಳು ಸುಪ್ರೀಂ ಕೋರ್ಟ್ ಮುಂದಿದೆ. ಅವು ಯಾವುವೆಂದರೆ: ೧) ರೋಹಿಂಗ್ಯಾಗಳು ‘ನಿರಾಶ್ರಿತರು’ ಎಂದು ಘೋಷಿಸಲು ಅರ್ಹರಾಗಿzರಾ? ಹಾಗಿದ್ದಲ್ಲಿ, ಅವರಿಗೆ ಯಾವ ರಕ್ಷಣೆ, ಸವಲತ್ತುಗಳು ಅಥವಾ ಹಕ್ಕುಗಳಿವೆ? ೨) ರೋಹಿಂಗ್ಯಾಗಳು ನಿರಾಶ್ರಿತರಲ್ಲದಿದ್ದರೆ ಮತ್ತು ಅಕ್ರಮ ಪ್ರವೇಶ ಮಾಡಿದವರಾಗಿದ್ದರೆ ಅವರನ್ನು ಗಡೀಪಾರು ಮಾಡುವಲ್ಲಿ ಕೇಂದ್ರ/ರಾಜ್ಯಗಳ ಕ್ರಮ ಸಮರ್ಥನೀಯವೇ? ೩) ರೋಹಿಂಗ್ಯಾಗಳು ಅಕ್ರಮ ಪ್ರವೇಶ ಮಾಡಿದವರು ಎಂದು ಪರಿಗಣಿಸಲ್ಪಟ್ಟಿದ್ದರೂ, ಅವರನ್ನು ಅನಿರ್ದಿಷ್ಟಾವಧಿಗೆ ಬಂಧಿಸಬಹುದೇ ಅಥವಾ ನ್ಯಾಯಾಲಯ ವು ವಿಧಿಸಬಹುದಾದ ನಿಯಮ ಮತ್ತು ಷರತ್ತುಗಳಿಗೆ ಒಳಪಟ್ಟು ಜಾಮೀನಿನ ಮೇಲೆ ಬಿಡುಗಡೆ ಮಾಡಲು ಅವರು ಅರ್ಹರೇ? ೪) ಗಡೀಪಾರು ಮಾಡದ ಅಥವಾ ಬಂಧನಕ್ಕೊಳಗಾಗದ, ಆದರೆ ನಿರಾಶ್ರಿತರ ಶಿಬಿರಗಳಲ್ಲಿ ವಾಸಿಸುತ್ತಿರುವ ರೋಹಿಂಗ್ಯಾಗಳಿಗೆ ಸಂವಿಧಾನದ ೨೧ನೇ ವಿಧಿಗೆ ಅನುಗುಣವಾಗಿ ನೈರ್ಮಲ್ಯ, ಕುಡಿಯುವ ನೀರು, ಶಿಕ್ಷಣ ಮತ್ತು ಇತರ ಜೀವನ ಪರಿಸ್ಥಿತಿಗಳಂಥ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿದೆಯೇ? ೫) ರೋಹಿಂಗ್ಯಾಗಳು ಭಾರತಕ್ಕೆ ಅಕ್ರಮ ಪ್ರವೇಶದಾರರಾಗಿದ್ದರೆ, ಭಾರತ ಸರಕಾರ ಮತ್ತು ರಾಜ್ಯಗಳು ಕಾನೂನಿನ ಪ್ರಕಾರ ಅವರನ್ನು ಗಡೀಪಾರು ಮಾಡಲು ಬದ್ಧವಾಗಿವೆಯೇ?
ಮೇ ೧೬ರಂದು, ದೆಹಲಿಯಿಂದ ಮಹಿಳೆಯರು ಮತ್ತು ಮಕ್ಕಳು ಸೇರಿ ೪೩ ರೋಹಿಂಗ್ಯಾ ಮಂದಿ ಯನ್ನು ಗಡೀಪಾರು ಮಾಡಲು ನೌಕಾಪಡೆಯ ಹಡಗಿನಲ್ಲಿ ಅಂಡಮಾನಿನಿಂದ ಮ್ಯಾನ್ಮಾರ್‌ಗೆ ಕಳುಹಿಸಿಕೊಡಲಾಯಿತು. ಸುಪ್ರೀಂ ಕೋರ್ಟ್ ನಲ್ಲಿರುವ ಪ್ರಕರಣ ಇದಕ್ಕೆ ಸಂಬಂಧಿಸಿದ್ದೇ ಆಗಿದೆ.
ರೋಹಿಂಗ್ಯಾಗಳ ಗಡೀಪಾರನ್ನು ಪ್ರಶ್ನಿಸಿ ಮೇ ತಿಂಗಳಲ್ಲಿ ಮಹಮ್ಮದ್ ಇಸ್ಮಾಯಿಲ್ ಎಂಬುವವರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿತ್ತು. ರೋಹಿಂಗ್ಯಾ ನಿರಾಶ್ರಿತರು ಭಾರತದ ಕಾನೂನುಗಳ ಅಡಿಯಲ್ಲಿ ವಿದೇಶಿಯರೆಂದು ಕಂಡುಬಂದರೆ, ಅವರನ್ನು ಗಡೀಪಾರು ಮಾಡಬೇಕಾಗುತ್ತದೆ ಎಂದೂ ಕೋರ್ಟ್ ಸ್ಪಷ್ಟಪಡಿಸಿತ್ತು.
ಸುಪ್ರೀಂಕೋರ್ಟ್‌ನ ಹಿಂದಿನ ಆದೇಶವೊಂದನ್ನು ಉಲ್ಲೇಖಿಸಿದ್ದ ನ್ಯಾಯಪೀಠ, ವಿಶ್ವಸಂಸ್ಥೆಯ ರೆಫ್ಯೂಜಿ ವಿಭಾಗದ ಹೈಕಮಿಷನರ್ (ಖಿಘೆಏಇ) ನೀಡಿದ ಗುರುತಿನ ಚೀಟಿಗಳು ಭಾರತದ ಕಾನೂನಿನಡಿಯಲ್ಲಿ ಮಾನ್ಯತೆ ಪಡೆಯುವುದಿಲ್ಲ ಎಂದೂ ಹೇಳಿತ್ತು.
ಬಾಂಗ್ಲಾದೇಶದಲ್ಲಿರುವ ರೋಹಿಂಗ್ಯಾಗಳನ್ನು ಮ್ಯಾನ್ಮಾರ್ ಗೆ ಹಿಂದಿರುಗುವಂತೆ ಮಾಡಲೇಬೇಕು ಎಂದು ಅಲ್ಲಿನ ಮಾಜಿ ಪ್ರಧಾನಿ ಶೇಖ್ ಹಸೀನಾ ಕೂಡ 2022ರಲ್ಲಿ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈಕಮಿಷನರ್ ಮೈಕೆಲ್ ಬ್ಯಾಚೆಲೆಟ್‌ರಿಗೆ ಹೇಳಿದ್ದರು. ಯಾವ ರಾಷ್ಟ್ರ ಕೂಡ ರೋಹಿಂಗ್ಯಾಗಳನ್ನು ಸ್ವೀಕರಿಸಲು ಸಿದ್ಧವಿಲ್ಲ. ಅವರನ್ನು ಮ್ಯಾನ್ಮಾರ್‌ಗೆ ವಾಪಸ್ ಕಳುಹಿಸುವುದು ಅನಿವಾರ್ಯ ಎಂದಿದ್ದರು. ಭಾರತ ಸರಕಾರ ಕೂಡ ರೋಹಿಂಗ್ಯಾಗಳು ನಿರಾಶ್ರಿತರಲ್ಲ, ‘ಅಕ್ರಮ ವಲಸಿಗರು’ ಎಂಬ ನಿಲುವನ್ನೇ ತಳೆದಿದೆ. ಈ ನೆಲದ ಕಾನೂನಿನ ಪ್ರಕಾರ ಗುರುತಿಸಿ, ಬಂಧಿಸಿ, ಗಡೀಪಾರು ಮಾಡಬೇಕೆಂದೇ ಹೇಳಿದೆ. ಉತ್ತರ ಪ್ರದೇಶ ಸರಕಾರ ಈ ದಿಕ್ಕಿನಲ್ಲಿ ಕಾರ್ಯೋನ್ಮುಖ ವಾಗಿದೆ.
ಅಕ್ರಮವಾಗಿ ವಾಸಿಸುತ್ತಿರುವ ರೋಹಿಂಗ್ಯಾ ಮತ್ತು ಬಾಂಗ್ಲಾದೇಶಿ ನುಸುಳುಕೋರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಿಎಂ ಯೋಗಿ ಆದಿತ್ಯನಾಥ್ ಎಚ್ಚರಿಕೆ ನೀಡಿದ್ದಾರೆ. ರೋಹಿಂಗ್ಯಾ ಪ್ರಕರಣದ ವಿಚಾರಣೆಯಲ್ಲಿ ಸಿಜೆಐ ಆಡಿದ ಮಾತುಗಳನ್ನು ಅಲ್ಪಸಂಖ್ಯಾತರ ಬಗ್ಗೆ ಭಾರಿ ಮಮಕಾರ ಹೊಂದಿದ ಕಾನೂನು ಪಂಡಿತರು ವಿರೋಧಿಸಬಹುದು. ಹಾಗಂತ, ಅಕ್ರಮವಾಗಿ ಪ್ರವೇಶಿಸಿದವರನ್ನು ಅನುಕಂಪದ ಮೇಲೆ ಇನ್ನೆಷ್ಟು ವರ್ಷಗಳ ಕಾಲ ಸಾಕಿ-ಸಲಹಬಹುದು? ಈ ನೆಲದ ಕಾನೂನಿನಡಿಯಲ್ಲಿ ಅವರನ್ನು ಮ್ಯಾನ್ಮಾರ್‌ಗೆ ವಾಪಸ್ ಕಳಿಸಬೇಕಲ್ಲವೇ? ಸಿಜೆಐ ಮಾತುಗಳಲ್ಲಿ ಈ ಉದ್ದೇಶ ಕಾಣದ ಪ್ರಶಾಂತ್ ಭೂಷಣ್‌ರಂಥ ಕಾನೂನು ತಜ್ಞರು, ಕಾಶ್ಮೀರ ಪಂಡಿತರು, ಪಾಕಿಸ್ತಾನ, ಅಫ್ಘಾನಿಸ್ತಾನ, ಬಾಂಗ್ಲಾದೇಶದಲ್ಲಿ ವರ್ಷಗಳ ಕಾಲ ಹಿಂಸೆ ಅನುಭವಿಸಿದ ಅಲ್ಪಸಂಖ್ಯಾತ ಹಿಂದೂ ಸಮುದಾಯದ ಬಗ್ಗೆ ಬಾಯಿಬಿಟ್ಟ ಉದಾಹರಣೆಯೇ ಇರಲಿಕ್ಕಿಲ್ಲ. ಮೇಲೆ ಹೇಳಲಾದ ಮುಸ್ಲಿಂ ರಾಷ್ಟ್ರಗಳಿಂದ ಬಂದು ಹಲವು ವರ್ಷಗಳಾದರೂ, ಅನೇಕ ಹಿಂದೂಗಳಿಗೆ ಭಾರತದ ಪೌರತ್ವ ಸಿಗದೆ ಈಗಲೂ ಬೀದಿಬದಿಗಳಲ್ಲಿ ಅಭದ್ರ, ಸಂಕಷ್ಟಮಯ ಜೀವನ ನಡೆಸು ತ್ತಿರುವುದು ಇವರ ಕಣ್ಣುಗಳಿಗೆ ಅದು ಸೋಕದಿರುವುದು ವಿಪರ್ಯಾಸ..!