ದೇವೇಂದ್ರ ಜಾಡಿ ಕಲಬುರಗಿ
ಐಸಿಹಾಸಿಕ ಕೋಟೆ ಮೇಲೆ ಅತಿಕ್ರಮಣದ ಕರಾಳ ಛಾಯೆ
ಅತಿಕ್ರಮಣ ತೆರವುಗೊಳಿಸುವ ಕೋರ್ಟ್ ಆದೇಶಕ್ಕೆ ಕಿಮ್ಮತ್ತಿಲ
ಕಾಕತೀಯರ ಕಾಲದಲ್ಲಿ ನಿರ್ಮಾಣಗೊಂಡು, ಬಹಮನಿ ಸುಲ್ತಾನರ ವೈಭವದ ರಾಜಧಾನಿ ಯಾಗಿದ್ದ ಐತಿಹಾಸಿಕ ಕಲಬುರಗಿ ಕೋಟೆ ಸದ್ಯ ಅತಿಕ್ರಮಣಕಾರರ ಕಪಿಮುಷ್ಟಿಯಲ್ಲಿ ಸಿಲುಕಿದೆ. weವಿಶ್ವದ ಎರಡನೇ ಅತಿದೊಡ್ಡ ಜಾಮಿಯಾ ಮಸೀದಿ ಹಾಗೂ ವಿಶ್ವವಿಖ್ಯಾತ ಉದ್ದದ ಫಿರಂಗಿ ಹೊಂದಿರುವ ಕೋಟೆ, ಆಡಳಿತದ ನಿರ್ಲಕ್ಷ್ಯ ಮತ್ತು ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದ ನಿಧಾನವಾಗಿ ಕಣ್ಮರೆಯಾಗುತ್ತಿದೆ.
ಕೋಟೆಯೊಗೆ 282 ಅಕ್ರಮ ಮನೆ: 1970ರ ದಶಕದಿಂದ ಆರಂಭವಾದ ಕೋಟೆಯೊಳಗಿನ ಅತಿಕ್ರಮಣ, ಇಂದು ವ್ಯವಸ್ಥಿತ ರೂಪ ಪಡೆದುಕೊಂಡಿದ್ದು, ಇದಕ್ಕೆ ಪಾಲಿಕೆಯ ಪರೋಕ್ಷ ಬೆಂಬಲವಿದೆ ಎನ್ನುವ ಆರೋಪಗಳು ಕೇಳಿಬರುತ್ತಿವೆ. ಕೋಟೆಯೊಳಗಿನ 282 ಅಕ್ರಮ ಮನೆಗಳನ್ನು ತೆರವುಗೊಳಿಸಬೇಕು ಎಂದು ರಾಜ್ಯ ಹೈಕೋರ್ಟ್, ಸರಕಾರ, ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆಗೆ ಹಲವು ಬಾರಿ ಕಟ್ಟುನಿಟ್ಟಿನ ಆದೇಶ ನೀಡಿದ್ದರೂ, ಇಂದಿಗೂ ಅವು ಕಾಗದದ ಮೇಲೆಯೇ ಉಳಿದಿವೆ.
ಇನ್ನೂ ಅಚ್ಚರಿಯ ಸಂಗತಿಯೆಂದರೆ, ಸ್ಮಾರಕದ ಒಳಭಾಗದಲ್ಲೇ ಅಕ್ರಮ ವಾಸಿಗಳಿಗೆ ವಿದ್ಯುತ್, ನೀರು, ರಸ್ತೆ ಸೇರಿದಂತೆ ಮೂಲಸೌಕರ್ಯ ಕಲ್ಪಿಸಲಾಗುತ್ತಿದೆ. ಇದು ಅತಿಕ್ರಮಣ ಕ್ಕೆ ನೇರ ಬೆಂಬಲ ನೀಡಿದಂತೆ ಎನ್ನುವ ಟೀಕೆಗಳು ಕೇಳಿಬರುತ್ತಿವೆ. ಕೆಲವರ ಇಚ್ಛಾಶಕ್ತಿಯ ಕೊರತೆಯಿಂದ, ವಿಶ್ವವಿಖ್ಯಾತವಾಗಬೇಕಿದ್ದ ಐತಿಹಾಸಿಕ ಪರಂಪರೆಗೆ ಅನ್ಯಾಯ ವಾಗುತ್ತಿರುವುದು ನಿರಾಕರಣೀಯ ಸತ್ಯ.
ಇದನ್ನೂ ಓದಿ: Shivaganga Kalanjiya: ಮಹಿಳಾ ಜೇನು ಸಾಕಾಣಿಕೆದಾರರ ಆಸರೆ 'ಶಿವಗಂಗಾ ಕಳಂಜಿಯ'; ಮನ್ ಕಿ ಬಾತ್‌ನಲ್ಲಿ ಪ್ರಧಾನಿ ಮೋದಿ ಮೆಚ್ಚುಗೆ
ಧೂಳು ಹಿಡಿಯುತ್ತಿದೆ ಪುನರ್ವಸತಿ ಯೋಜನೆ: ಒತ್ತುವರಿದಾರರನ್ನು ನಗರದ ಜಾಫರಾಬಾದ್ ಪ್ರದೇಶಕ್ಕೆ ಸ್ಥಳಾಂತರಿಸಲು ಜಾಗ ಗುರುತಿಸಲಾಗಿದ್ದು, ಡಿಪಿಆರ್ ಕೂಡ ಸಿದ್ಧವಾಗಿದೆ. ಆದರೆ, ಆ ಪ್ರಸ್ತಾವನೆಗೆ ಜೀವ ತುಂಬುವ ಕಾರ್ಯ ಮಾತ್ರ ನಡೆಯುತ್ತಿಲ್ಲ. ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಸಾರ್ವಜನಿಕ ಭಾಷಣದಲ್ಲಿ ಕಲಬುರಗಿ ಕೋಟೆಯ ಐತಿಹಾಸಿಕ ಮಹತ್ವವನ್ನು ಉಲ್ಲೇಖಿಸಿದ್ದರೂ, ಅದರಿಂದ ಸ್ಥಳೀಯ ಆಡಳಿತಕ್ಕೆ ಯಾವುದೇ ಚಲನೆ ಬಂದಿಲ್ಲ. ಕೆಕೆಆರ್‌ಡಿಬಿ ನೂರಾರು ಕೋಟಿ ರು.ಅನುದಾನವನ್ನು ಆವಿಷ್ಕಾರ ಹೆಸರಿನಲ್ಲಿ ಬಳಸುತ್ತಿರುವ ಆರೋಪಗಳ ನಡುವೆಯೇ, ಕೋಟೆಯ ಪುನರುತ್ಥಾನಕ್ಕೆ ಕನಿಷ್ಠ 100 ಕೋಟಿ ರು.ಅನುದಾನ ನೀಡಲು ಇಚ್ಛಾಶಕ್ತಿ ತೋರಿಸದಿರುವುದು ಇತಿಹಾಸ ಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಹಂಪಿ ಆಗದ ಕಲಬುರಗಿ, ಇಚ್ಛಾ ಶಕ್ತಿ ಕೊರತೆ: ಹಂಪಿ, ಪಟ್ಟದಕಲ್ಲು ಮಾದರಿಯಲ್ಲಿ ಕಲಬುರಗಿ ಕೋಟೆ ಅಭಿವೃದ್ಧಿಯಾಗದಿರುವುದಕ್ಕೆ ಹಣವಿಲ್ಲ ಎನ್ನುವುದು ಕಾರಣವಲ್ಲ. ಇತಿಹಾಸಕ್ಕೆ ಆದ್ಯತೆ ನೀಡದ ರಾಜಕೀಯ ಮನಸ್ಥಿತಿಯೇ ಮೂಲ ಕಾರಣ ಎನ್ನುವುದು ಸ್ಪಷ್ಟವಾಗಿದೆ. ಪರಂಪರೆಯನ್ನು ಉಳಿಸಿದರೆ ಓಟು ಸಿಗುವುದಿಲ್ಲ ಎಂಬ ಭ್ರಮೆಯಲ್ಲೇ ಆಡಳಿತ ಇತಿಹಾಸವನ್ನು ಬಲಿ ಕೊಡುತ್ತಿರುವ ಆರೋಪಗಳು ಕೇಳಿ ಬರುತ್ತಿವೆ.
ಆಗಬೇಕಿರುವ ತುರ್ತು ಕಾರ್ಯಗಳು: ಕಲಬುರಗಿ ಕೋಟೆಯನ್ನು ಕೇವಲ ಸ್ಮಾರಕವಲ್ಲ, ಪ್ರವಾಸಿ ತಾಣವನ್ನಾಗಿ ರೂಪಿಸಲು ಈ ಕೆಳಗಿನ ಮೂಲಸೌಕರ್ಯ ಅಗತ್ಯವಿದೆ. ಬಯಲು ರಂಗಮಂದಿರ ನಿರ್ಮಾಣ, ಸೂಕ್ತ ಪಾರ್ಕಿಂಗ್ ವ್ಯವಸ್ಥೆ, ಶೌಚಾಲಯ ಮತ್ತು ಕುಡಿಯುವ ನೀರಿನ ಸೌಲಭ್ಯ, ಕಾವಲುಗಾರರ ನೇಮಕ, ಮಳಖೇಡ, ನಾಗಾವಿ, ಸನ್ನತಿ ಸೇರಿಸಿ ಪಾರಂ ಪರಿಕ ಪ್ರವಾಸಿ ಸರಕ್ಕೂಟ ರಚನೆ ಮಾಡಬೇಕಿದೆ. ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಡಳಿತ ಈಗಲಾದರೂ ಎಚ್ಚೆತ್ತುಕೊಳ್ಳಬೇಕಿದೆ. ಹಂಪಿ ಮತ್ತು ಪಟ್ಟದಕಲ್ಲು ಮಾದರಿ ಯಲ್ಲಿ ಕಲಬುರಗಿ ಕೋಟೆಯನ್ನು ಅಭಿವೃದ್ಧಿಪಡಿಸದಿದ್ದರೆ, ಮುಂದಿನ ಪೀಳಿಗೆಗೆ ಇತಿಹಾಸದ ಬದಲು ಕೇವಲ ಕಲ್ಲುಗಳ ರಾಶಿಯನ್ನು ತೋರಿಸುವ ಸಂದರ್ಭ ಬರಲಿದೆ. ಸ್ಮಾರಕಗಳ ರಕ್ಷಣೆ ಕೇವಲ ಇಲಾಖೆಯ ಕೆಲಸವಲ್ಲ ಅದು ಸರಕಾರದ ನೈತಿಕ ಮತ್ತು ಸಾಂವಿಧಾನಿಕ ಹೊಣೆಗಾರಿಕೆಯೂ ಹೌದು. ಸರಕಾರ ವಿವಿಧ ಕ್ಷೇತ್ರಗಳಿಗೆ ಅನೇಕ ಭಾಗ್ಯ ಯೋಜನೆಗಳನ್ನು ಘೋಷಿಸಿದೆ. ಆದರೆ, ಇತಿಹಾಸ ಉಳಿಸಲು ಕಲಬುರಗಿ ಕೋಟೆಗೆ ಒತ್ತುವರಿದಾರರಿಂದ ಮುಕ್ತಿ ಭಾಗ್ಯ ಯಾವಾಗ? ಎಂಬ ಪ್ರಶ್ನೆ ಇತಿಹಾಸ ಪ್ರೇಮಿಗಳನ್ನು ಕಾಡುತ್ತಿದೆ.
ಯುನೆಸ್ಕೋ ಕನಸಿಗೆ ಅತಿಕ್ರಮಣದ ಶಾಪ
ಕಲಬುರಗಿ, ಬೀದರ್ ಹಾಗೂ ವಿಜಯಪುರದ ಸ್ಮಾರಕಗಳನ್ನು ಸೇರಿಸಿ ಡೆಕ್ಕನ್ ಸುಲ್ತಾನೇಟ್ ಹೆಸರಿನಲ್ಲಿ ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿಸುವ ಪ್ರಕ್ರಿಯೆ ನಡೆಯುತ್ತಿದೆ. ಈ ಸಂಬಂಧ ಡೋಸಿಯರ್ ಈಗಾಗಲೇ ಸಿದ್ಧವಾಗಿದ್ದು, ಕೇಂದ್ರ ಸಂಸ್ಕೃತಿ ಮಂತ್ರಾಲಯಕ್ಕೆ ಸಲ್ಲಿಕೆಯಾಗಿದೆ. ಆದರೆ, ಕೋಟೆಯೊಳಗಿನ ಅತಿಕ್ರಮಣ ತೆರವಾಗದ ಹೊರತು ಜಾಗತಿಕ ಮಾನ್ಯತೆ ಕೇವಲ ಕನಸೇ? ಎಂದು ಇತಿಹಾಸಕಾರರು ಮತ್ತು ಹೋರಾಟ ಗಾರರು ಪ್ರಶ್ನಿಸುತ್ತಿದ್ದಾರೆ.
ಧೂಳಲ್ಲಿ ಮಲಗಿರುವ ಬಾರಹ ಗಜ, ಗಿನ್ನಿಸ್‌ಗೆ ದಾರಿ ಇಲ್ಲ
ವಿಶ್ವದ ಅತಿ ಉದ್ದದ ಪಂಚಲೋಹದ ಫಿರಂಗಿಗಳಲ್ಲಿ ಒಂದಾಗಿರುವ 29 ಅಡಿ ಉದ್ದ, 75 ಟನ್ ತೂಕದ ಬಾರಹ ಗಜ ತೋಪು, ನಿರ್ವಹಣೆ ಇಲ್ಲದೆ ಇಂದು ಧೂಳು ಹಿಡಿದಿದೆ. 1.5 ಕಿ.ಮೀ ದೂರದವರೆಗೆ ಮದ್ದು ಸಿಡಿಸುವ ಸಾಮರ್ಥ್ಯವಿದ್ದರೂ, ಗಿನ್ನಿಸ್ ಪಟ್ಟಿಗೆ ಸೇರಿಸಲು ಸರಕಾರ ಪ್ರಯತ್ನ ಮಾಡಿಲ್ಲ. ಒಂದೇ ಕೋಟೆಯಲ್ಲಿದ್ದ 26 ತೋಪುಗಳಲ್ಲಿ 17 ಮಾತ್ರ ಉಳಿದಿವೆ. ಉಳಿದವುಗಳ ಕುರಿತು ಆಡಳಿತಕ್ಕೆ ಲೆಕ್ಕವೇ ಇಲ್ಲ ಎಂದು ಇತಿಹಾಸಕಾರರು ಅಸಮಾಧಾನ ಹೊರಹಾಕಿದ್ದಾರೆ.
*
ಹೈಕೋರ್ಟ್ ಆದೇಶವಿದ್ದರೂ 282 ಅಕ್ರಮ ಮನೆಗಳನ್ನು ತೆರವುಗೊಳಿಸದಿರುವುದು ಆಡಳಿತದ ದಿವಾಳಿತನದ ಸ್ಪಷ್ಟ ಉದಾಹರಣೆ. ಸ್ಮಾರಕದೊಳಗೆ ಸೌಲಭ್ಯ ನೀಡಿ ಒತ್ತುವರಿ ದಾರರನ್ನು ಪೋಷಿಸುವುದು ಇತಿಹಾಸಕ್ಕೆ ಮಾಡಿದ ಅಪರಾಧ. ಸರಕಾರ ತಕ್ಷಣವೇ ಪುನರ್ವಸತಿ ಕಲ್ಪಿಸಿ, ಕೋಟೆಯ ಅಭಿವೃದ್ಧಿಗೆ ಮುಂದಾಗಬೇಕು.-
ಮುತ್ತಣ್ಣ ಎಸ್.ನಡಗೇರಿ, ಹೋರಾಟಗಾರ