ಮಹೇಶ್ ಮಿರಜಕರ
ದೇವಿ ದರ್ಶನಕ್ಕೆ ಹರಿದು ಬಂದ ಭಕ್ತ ಸಾಗರ
ಏಕಮುಖ ಸಂಚಾರ ವ್ಯವಸ್ಥೆ
ಸವದತ್ತಿ: ಶಕ್ತಿ ಪೀಠ ಯಲ್ಲಮ್ಮನ ನಾಡಿನಲ್ಲಿ ಬನದ ಹುಣ್ಣಿಮೆ ಲಕ್ಷಾಂತರ ಭಕ್ತರಿಂದ ಅದ್ದೂರಿಯಾಗಿ ಜರುಗಿತು. ಎರಡು ದಿನ ಮುಂಚಿತವಾಗಿಯೇ ಮಹಾರಾಷ್ಟ್ರ, ಗೋವಾ, ತಮಿಳುನಾಡು, ಆಂಧ್ರ ಪ್ರದೇಶ ಹಾಗೂ ರಾಜ್ಯದ ನಾನಾ ಕಡೆಯಿಂದ ಅಪಾರ ಭಕ್ತ ಸಾಗರವೇ ದೇವಿಯ ದರ್ಶನಕ್ಕೆ ಹರಿದು ಬಂದಿತ್ತು.
ಶನಿವಾರ ನಡೆದ ಯಲ್ಲಮ್ಮ ದೇವಿಯ ಬನದ ಹುಣ್ಣಿಮೆ ಜಾತ್ರೆಗೆ ಸುಮಾರು 10 ಲಕ್ಷಕ್ಕಿಂತ ಅಧಿಕ ಭಕ್ತಾದಿಗಗಳು ಭಾಗವಹಿಸಿ ದೇವಿ ಕೃಪೆಗೆ ಪಾತ್ರರಾದರು. ನಾನಾ ತರಹದಿಂದ ಸಿಂಗರಿಸಿದ ಚಕ್ಕಡಿಗಳು, ಬಸ್ಗಳು, ನಾನಾ ರೀತಿಯ ವಾಹನ ಹಾಗೂ ಪಾದಯಾತ್ರೆಯ ಮೂಲಕ ಆಗಮಿಸಿದ ಭಕ್ತರಿಂದ ದೇವಸ್ಥಾನದ ಸುತ್ತಮುತ್ತಲಿನ ಗುಡ್ಡದ ಪರಿಸರ ಪ್ರದೇಶ ಕಿಕ್ಕಿರಿದು ತುಂಬಿತ್ತು.
ಬೆಳಗ್ಗೆ 4 ಗಂಟೆಯಿಂದಲೇ ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ವಿವಿಧ ಕಡೆ ಗಳಿಂದ ಆಗಮಿಸಿದ ಭಕ್ತರು ಯಲ್ಲಮ್ಮ ದೇವಿ, ಪರಶುರಾಮ, ಜಮದಗ್ನಿ, ಮಲ್ಲಿಕಾ ರ್ಜುನ ಮತ್ತು ಮಾತಂಗಿ ದೇವಿಯ ದರ್ಶನ ಪಡೆದು, ಹರಕೆ ತೀರಿಸಿ ಪುನೀತರಾದರು.
ಇದನ್ನೂ ಓದಿ: Savadatti News: ಪಟ್ಟಣದ ಸ್ವಚ್ಛತೆಗೆ, ಜನರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಕಾಮಗಾರಿ ಪೂರ್ಣಗೊಳಿಸಲು ಸೂಚನೆ
ಸುಗಮ ಸಂಚಾರ ವ್ಯವಸ್ಥೆ: ಟ್ರಾಫಿಕ್ ನಿಯಂತ್ರಣಕ್ಕಾಗಿ ದೇವಸ್ಥಾನದ ಹತ್ತಿರದ ಬೈಪಾಸ್ ಬ್ರಿಡ್ಜ್ ಹಾಗೂ ಕಲ್ಯಾಣ ಗೆಸ್ಟ್ ಹೌಸ್ ಎದುರುಗಡೆಯಿಂದ ಮಲ್ಲಿಕಾರ್ಜುನ್ ದೇವಸ್ಥಾನದ ಮಾರ್ಗವಾಗಿ ಬೈಪಾಸ್ ಸಂಚಾರ ವ್ಯವಸ್ಥೆ ಕಲ್ಪಿಸಲಾಗಿದೆ. ಸಂಚಾರ ಸುರಕ್ಷತೆಗಾಗಿ ಯಲ್ಲಮ್ಮನ ಗುಡಕ್ಕೆ ಸಂಪರ್ಕ ಕಲ್ಪಿಸುವ ಜೋಗುಳ ಬಾವಿ, ಉಗರಗೋಳ ಮಾರ್ಗದಲ್ಲಿ ಏಕಮುಖ ಸಂಚಾರ ವ್ಯವಸ್ಥೆ ಮಾಡಲಾಗಿದೆ. ಟ್ರಾಫಿಕ್ ಪೊಲೀಸ್ ಹಾಗೂ ಪೊಲೀಸ್ ಸಿಬ್ಬಂದಿ ನೇಮಿಸಲಾಗಿದೆ.
ಪಾರ್ಕಿಂಗ್ ವ್ಯವಸ್ಥೆ: ಜಮದಗ್ನಿ ದೇವಸ್ಥಾನದ ಹತ್ತಿರ, ರಿಂಗ್ ರೋಡ್, ಬಸ್ ನಿಲ್ದಾಣದ ಹಿಂದಿನ ಪ್ರದೇಶ ವಾಹನ ನಿಲುಗಡೆಗೆ ನಿಗದಿಪಡಿಸಲಾಗಿತ್ತು.
ಟ್ರಾಫಿಕ್ ಸಮಸ್ಯೆಯಿಂದ ಭಕ್ತರು ಹೈರಾಣು: ಬನದ ಹುಣ್ಣಿಮೆ ನಿಮಿತ್ತ ದೇವಿ ದರ್ಶನ ಕ್ಕೆ ಬಂದ ಲಕ್ಷಾಂತರ ಭಕ್ತರಿಗೆ ಟ್ರಾಫಿಕ್ ಸಮಸ್ಯೆ ಎದುರಾಗಿತ್ತು. ಸುಡು ಬಿಸಿಲಿನಲ್ಲಿ ಸಾಯಂಕಾಲ ವರೆಗೂ ಭಕ್ತರು ಪರದಾಡಿದರು. ಕೆಲವರು ವಾಹನಗಳನ್ನು ಬಿಟ್ಟು ಕಾಲ್ನಡಿಗೆ ಮೂಲಕವೇ ಯಲ್ಲಮ್ಮನ ಗುಡ್ಡಕ್ಕೆ ಸಾಗಿದರು.
ದೇವಸ್ಥಾನದ ಅಭಿವೃದ್ಧಿಗೆ ಒತ್ತು: ದೇವಸ್ಥಾನದ ಅಭಿವೃದ್ಧಿಗೆ 215 ಕೋಟಿ ಅನುದಾನ ತರುವಲ್ಲಿ ಶಾಸಕ ವಿಶ್ವಾಸ ವೈದ್ಯ ಅವರು ಯಶಸ್ವಿಯಾಗಿದ್ದು, ಮಾದರಿ ದೇವಸ್ಥಾನ ವನ್ನಾಗಿಸುವ ಪಣ ತೊಟ್ಟಿದ್ದಾರೆ.
ವಿಶೇಷ ಬಸ್ ಸೌಲಭ್ಯ: ಬೆಳಗಾವಿ, ಬಾಗಲಕೋಟೆ, ಹುಬ್ಬಳ್ಳಿ-ಧಾರವಾಡ, ಗದಗ, ನರಗುಂದ ಸೇರಿದಂತೆ ಹಲವು ಜಿಲ್ಲೆಗಳಿಂದ ಬರುವ ಭಕ್ತಾದಿಗಳಿಗಾಗಿ ಪ್ರತಿ ವರ್ಷದಂತೆ ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿದೆ.