Ramadan: ಸಂಭ್ರಮದ ರಂಜಾನ್‌ಗೆ ಮುಸ್ಲಿಮರಿಂದ ಭರ್ಜರಿ ಸಿದ್ದತೆ
ಹಗಲಿನಲ್ಲಿ ಸಾಕಷ್ಟು ಬಿಸಿಲಿರುವ ಕಾರಣ ಸಂಜೆ ಮಗರಿಬ್ ಪ್ರಾರ್ಥನೆ ಮುಗಿಸಿ ಉಪವಾಸ (ರೋಜಾ) ಅಂತ್ಯಗೊಳಿಸಿದ ನಂತರ ಮುಸ್ಲಿಂ ಬಾಂಧವರು ಕುಟುಂಬ ಸಮೇತ ಮಾರುಕಟ್ಟೆಗೆ ಆಗಮಿಸಿ, ಖರೀದಿಯಲ್ಲಿ ತೊಡಗುತ್ತಿದ್ದಾರೆ. ಗಾಂಧಿ ಚೌಕ್, ಕೆ.ಸಿ ಮಾರ್ಕೆಟ್ ಗಳಲ್ಲಿ ರಂಜಾನ್ ಶಾಪಿಂಗ್ಗಾಗಿ ಕೆಲ ಅಂಗಡಿಗಳು ತಲೆ ಎತ್ತಿವೆ.
-
ಮಂಜು ಕಲಾಲ
ಬೆಲೆ ಏರಿಕೆಯ ಬಿಸಿ ನಡುವೆಯೂ ರಂಜಾನ್ ಆಚರಣೆ
ಎಲ್‌ಬಿಎಸ್ ಮಾರುಕಟ್ಟೆಯಲ್ಲಿ ಜನ ಜಾತ್ರೆ
ವಿಜಯಪುರ: ಪವಿತ್ರ ಈದ್ ಉಲ್ ಫಿತರ್(ರಂಜಾನ್) ಹಬ್ಬಕ್ಕೆ ಕಲವೇ ದಿನ ಬಾಕಿ ಇದ್ದು, ಬೆಲೆ ಏರಿಕೆಯ ಬಿಸಿ ನಡುವೆಯೂ ಸಂಭ್ರಮದ ರಂಜಾನ್ ಆಚರಣೆಗೆ ಮುಸ್ಲಿಂ ಬಾಂಧವರು ಉತ್ಸಾಹದಿಂದ ಅಗತ್ಯ ವಸ್ತುಗಳನ್ನು ಖರೀದಿಯಲ್ಲಿ ತೊಡಗಿರುವದು ಕಂಡುಬಂದಿತು. ಮಾರುಕಟ್ಟೆಯಲ್ಲಿ ಎತ್ತ ನೋಡಿದರೂ ಹಬ್ಬಕ್ಕಾಗಿ ಹೊಸ ಬಟ್ಟೆ, ಹೊಸ ವಸ್ತುಗಳ ಖರೀದಿಸುತ್ತಿರುವ ದಂಡು ಕಾಣಿಸಿಗುತ್ತಿದೆ. ಹೊಸ ಬಟ್ಟೆ, ಹಬ್ಬಕ್ಕಾಗಿ ವಿಶೇಷ ಕುರ್ತಾ, ಪೈಜಾಮ, ನಮಾಜ್ ಟೋಪಿ, ಘಮ ಘಮಿಸುವ ಅತ್ತರ್(ಸುಗಂಧ ದ್ರವ್ಯ), ಮಹಿಳೆಯರು ಸೀರೆ, ಸಲ್ವಾರ್ ಕಮೀಜ್, ಹೊಸ ಪಾದರಕ್ಷೆ, ಆಭರಣ, ಬಳೆ ಖರೀದಿಯಲ್ಲಿ ತೊಡಗಿದ್ದಾರೆ.
ನಗರದ ವಿವಿಧ ಅಂಗಡಿಗಳಲ್ಲಿ ಚಪ್ಪಲಿ, ಬಟ್ಟೆ ಮೇಲೆ ಶೇ 30ರಿಂದ 40ರಷ್ಟು ರಿಯಾಯಿತಿ ದರ ಗ್ರಾಹಕರನ್ನು ಸೆಳೆಯುತ್ತಿದೆ. ನಗರದ ಹೃದಯಭಾಗ ಗಾಂಧಿ ವೃತ್ತದಲ್ಲಿರುವ ಎಲ್ಬಿಎಸ್ ಮಾರುಕಟ್ಟೆ, ಕೆ.ಸಿ.ಮಾರುಕಟ್ಟೆ, ಸಿದ್ಧೇಶ್ವರ ಗುಡಿ ರಸ್ತೆಯಲ್ಲಿ ಅಪಾರ ಪ್ರಮಾಣದ ಜನಸ್ತೋಮ ಹಬ್ಬಕ್ಕೆ ಬೇಕಾದ ಆಹಾರ ಪದಾರ್ಥಗಳನ್ನು ಹಾಗೂ ಹೊಸಬಟ್ಟೆ ಖರೀದಿ ಯಲ್ಲಿ ಜನ ತೊಡಗಿದ್ದಾರೆ.
ಇದನ್ನೂ ಓದಿ: Harish Kera Column: ಯುದ್ಧ ಎಂದರೆ ಎಲ್ಲರಿಗೂ ಬಹಳ ಇಷ್ಟ !
ಹಗಲಿನಲ್ಲಿ ಸಾಕಷ್ಟು ಬಿಸಿಲಿರುವ ಕಾರಣ ಸಂಜೆ ಮಗರಿಬ್ ಪ್ರಾರ್ಥನೆ ಮುಗಿಸಿ ಉಪವಾಸ (ರೋಜಾ) ಅಂತ್ಯಗೊಳಿಸಿದ ನಂತರ ಮುಸ್ಲಿಂ ಬಾಂಧವರು ಕುಟುಂಬ ಸಮೇತ ಮಾರುಕಟ್ಟೆಗೆ ಆಗಮಿಸಿ, ಖರೀದಿಯಲ್ಲಿ ತೊಡಗುತ್ತಿದ್ದಾರೆ. ಗಾಂಧಿ ಚೌಕ್, ಕೆ.ಸಿ ಮಾರ್ಕೆಟ್ ಗಳಲ್ಲಿ ರಂಜಾನ್ ಶಾಪಿಂಗ್ಗಾಗಿ ಕೆಲ ಅಂಗಡಿಗಳು ತಲೆ ಎತ್ತಿವೆ. ಮಹಿಳೆಯರು ಬಟ್ಟೆ, ಸೌಂದರ್ಯ ವರ್ಧಕ, ಮೆಹೆಂದಿ, ಬಳೆ, ವಿಧವಿಧವಾದ ಕಿವಿಯೋಲೆ ಇನ್ನಿತರ ವಸ್ತುಗಳ ಖರೀಸುವಲ್ಲಿ ನಿರತರಾಗಿದ್ದರೆ. ಪುರುಷರು ಹಬ್ಬಕ್ಕಾಗಿ ಹೊಸಬಟ್ಟೆ, ಟೋಪಿ, ಕರವಸ್ತ್ರ, ಸುಗಂಧ ದ್ರವ್ಯ ಖರೀಸುವಲ್ಲಿ ನಿರತರಾಗಿದ್ದಾರೆ.
ಮಸಾಲೆ ಖರೀದಿ ಅಬ್ಬರ: ಈದ್ ಉಲ್ ಫಿತರ್ ಅಂಗವಾಗಿ ಪ್ರತಿಯೊಬ್ಬ ಮುಸ್ಲಿಂ ಬಾಂಧವರು ಸುರಕುಂಬಾ ಎಂಬ ವಿಶೇಷ ಹಾಲು, ಬಾದಾಮಿ ಮೊದಲಾದ ಡ್ರೈಫುಟ್ಸ್ ಹಾಕಿ ತಯಾರಿಸಿದ ಪಾಯಸ ತಯಾರಿಸುತ್ತಾರೆ. ಇದನ್ನು ನೆರೆ ಹೊರೆಯವರಿಗೆ, ಆಗಮಿಸಿದ ಅತಿಥಿಗಳಿಗೂ ಹಂಚುತ್ತಾರೆ. ಈ ಸುರಕುಂಬಾ ತಯಾರಿಕೆಗೆ ಬೇಕಾಗುವ ಬಾದಾಮಿ, ಖಾಜು, ಗೋಡಂಬಿ, ಒಣ ಖರ್ಜೂರ, ಚಾರೋಲಿ, ಕಿಶಮಿಶ್ (ಮನೂಕರ) ಇತರೆ ಒಣಹಣ್ಣು ಪದಾರ್ಥ ಹಾಗೂ ಸಾಂಬಾರು ಪದಾರ್ಥ ಖರೀದಿ ಮಾಡುತ್ತಿರುವದು ಕಂಡು ಬಂದಿತು.
ಈ ಹಿನ್ನಲೆಯಲ್ಲಿ ನಗರದ ಎಲ್ಬಿಎಸ್ ಮಾರುಕಟ್ಟೆ, ಬಾರಾ ಕಮಾನ ಬಳಿ ಇರುವ ಹೋಲ್ಸೇಲ್ ಕಿರಾಣಿ ಬಜಾರ್, ಕೆ.ಸಿ ಮಾರುಕಟ್ಟೆಗಳಲ್ಲಿ ಜನಜಂಗುಳಿ ಕಂಡು ಬಂದಿದೆ.
ಇನ್ನೂ ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದಿಂದಾಗಿ ಪಿಸ್ತಾ, ಅಕ್ರೋಟ್, ಚಾರೋಲಿ, ಕಶ್ ಕಶ್ ದರಗಳ ಗಗನಕ್ಕೇರಿವೆ. ಸರಾಸರಿ ಪ್ರತಿ ಕೆಜಿಗೆ 400 ರು. ಗಳಷ್ಟು ದರ ಏರಿಕೆಯಾಗಿದ್ದು ಗ್ರಾಹಕರ ಜೇಬು ಸುಡುವಂತಾಗಿದೆ. ಅಷ್ಟೆ ಅಲ್ಲದೇ 120 ರು.ಇದ್ದ ಕೊಬ್ಬರಿ ಬೆಲೆ 360 ರು.ಆಗಿದೆ. ಕಳೆದ ವರ್ಷ ಶಿರಕುರಮಾ ಮಸಾಲಿ ಪ್ರತಿಯೊಂದ 50 ಗ್ರಾಂ ನಂತೆ ಕೇವಲ 600 ರಿಂದ 700 ಗಳಲ್ಲಿ ಸಿಗುತ್ತಿತ್ತು ಆದರೆ ಈ ಬಾರಿ ಅದು 1200 ರಿಂದ 1300 ಆಗಿದೆ ಎಂದು ವಿಜಯಪುರದ ವ್ಯಾಪ್ಯಾರಿ ವಿನೋದ ತಿಳಿಸಿದರು.
ವಿಜಯಪುರದ ದಖನಿ ಈದ್ಗಾ ಮೈದಾನ, ಜಾಮೀಯಾ ಮಸೀದಿ, ಆಸಾರ್ ಮಹಲ್ನಲ್ಲಿ ಸಾಮೂಹಿಕ ಪ್ರಾರ್ಥನೆಗೆ ಸಕಲ ರೀತಿಯಲ್ಲಿ ಸಜ್ಜುಗೊಳಿಸಲಾಗುತ್ತಿದೆ. ಅಲ್ಲದೇ ಆಯಾ ಬಡಾವಣೆಗಳ ಮಸೀದಿಗಳಲ್ಲೂ ಪ್ರಾರ್ಥನೆ ನಡೆಯಲಿದ್ದು ಅಲ್ಲಿಯೂ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ.
ವಿದ್ಯುತ್ ದೀಪಾಲಂಕಾರ: ರಂಜಾನ್ ಪ್ರಯುಕ್ತ ವಿಜಯಪುರದ ಐತಿಹಾಸಿಕ ಜಾಮೀಯಾ ಮಸೀದಿ ಸೇರಿದಂತೆ ಹಲವು ಬಡಾವಣೆಗಳಲ್ಲಿ ಇರುವ ಮಸೀದಿಗಳಿಗೆ ವಿದ್ಯುತ್ ದೀಪಾ ಲಂಕಾರ ಮಾಡಿ ಸಿಂಗಾರಗೊಳಿಸಲಾಗಿದೆ. ಅಲ್ಲದೇ ಟಿಪ್ಪು ಸುಲ್ತಾನ್ ವೃತ್ತದಿಂದ ಗಾಂಧಿ ವೃತ್ತದವರೆಗೆ ಇರುವ ಕೆ.ಸಿ ಮಾರುಕಟ್ಟೆ, ಹಕೀಂ ಚೌಕ್ ದಿಂದ ಜಾಮೀಯಾ ಮಸೀದಿ ವರೆಗಿನ ಬೀದಿಗಳಲ್ಲಿ ಸಾಲು ಸಾಲು ವಿದ್ಯುತ್ ದೀಪಾಲಂಕಾರ ಮಾಡಿದ್ದು ಕಣ್ಮನ ಸೆಳೆಯುತ್ತಿದೆ.
![]()
ಆನ್ಲೈನ್ ಆಗಿ ಮತ್ತು ಬಡಾವಣೆಗಳಲ್ಲಿಯೇ ಅಂಗಡಿಗಳಾಗಿ ಅಲ್ಲಿಯೆ ಎಲ್ಲ ಸಿಗುತ್ತಿರುವು ದರಿಂದ ಜನ ಮಾರುಕಟ್ಟೆಗೆ ಬಾರದೆ ಮಸಾಲೆ ಪದಾರ್ಥಗಳ ವ್ಯಾಪಾರ ಕಡಿಮೆ ಆಗಿದೆ. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಸ್ವಲ್ಪ ಕಡಿಮೆ ವ್ಯಾಪಾರ ಆಗುತ್ತಿದೆ.
- ದಿಲೀಪ್ ಸುಸಲಾದಿ, ವ್ಯಾಪಾರಿ
![]()
ಹಬ್ಬದ ಸಂಭ್ರಮ ಎಲ್ಲೆಡೆ ಇದೆ, ಆದರೆ ಈ ಬಾರಿ ಬೆಲೆ ಏರಿಕೆ ಸಹ ಅಷ್ಟೇ ವ್ಯಾಪಕವಾಗಿದೆ, ಚಿಕ್ಕ ಮಕ್ಕಳ ಬಟ್ಟೆಗಳ ದರವಂತೂ ಗಗನ ಚುಂಬಿಯಾಗಿದೆ, ಉಳಿದ ವಸ್ತುಗಳ ಬೆಲೆ ಸಹ ಅಷ್ಟೇ ದುಬಾರಿ ಇದೆ.
- ಫಜಲ್ ಮನಗೂಳಿ, ನಿವಾಸಿ