ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

West Bengal Election ground report by Raghava Sharma Nidle: ನೈಜ ಪರಿವರ್ತನೆ ಬೇಡುತ್ತಿದೆ ನಂದಿಗ್ರಾಮ..!

ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಅನಿಲ ದುರಂತದ ಕಪ್ಪುಚುಕ್ಕೆ ಹೊಂದಿದ್ದ ಕಂಪನಿಗೆ ನಂದಿಗ್ರಾಮ ದಲ್ಲಿ ಜಮೀನು ನೀಡಲು ರೈತರು ಸಿದ್ಧರಿರಲಿಲ್ಲ ಕೂಡ. ಇಡೀ ಬಂಗಾಳದಾದ್ಯಂತ ರೈತರ ಪರ ಧ್ವನಿ ಮೊಳಗಿ, ಮಮತಾ ಬ್ಯಾನರ್ಜಿ ಹೋರಾಟಕ್ಕೆ ಬೆಂಬಲ ಸಿಕ್ಕಿತ್ತು. 2011ರ ವಿಧಾನ ಸಭೆ ಚುನಾವಣೆಯಲ್ಲಿ ಎಡಪಕ್ಷಗಳ ವಿರುದ್ಧ ಅಭೂತ ಪೂರ್ವ ಗೆಲುವು ಸಾಧಿಸಿದ್ದ ಟಿಎಂಸಿ-ಕಾಂಗ್ರೆಸ್ ಮೈತ್ರಿಕೂಟ, 34 ವರ್ಷ ಗಳ ಎಡಪಕ್ಷಗಳ ಆಡಳಿತವನ್ನು ಕೊನೆಗೊಳಿಸಿತ್ತು.

ಗ್ರೌಂಡ್‌ ರಿಪೋರ್ಟ್‌

ವಿಶ್ವವಾಣಿ ಬಂಗಾಳ ಚುನಾವಣಾ ಯಾತ್ರೆ

ನಂದಿಗ್ರಾಮ: ಮಧ್ಯಾಹ್ನ 2.30ರ ಬಿರುಬಿಸಿಲು. ಗೋಕುಲನಗರ ಗ್ರಾಮದ ಆ ಸ್ಮಾರಕದ ಎದುರು ನಿಂತಿದ್ದೆ. 19 ವರ್ಷಗಳ ಹಿಂದಿನ ಭಯಾನಕ ಹಿಂಸಾಚಾರ ಘಟನೆ ಹಾಗೂ ಅಮಾಯಕ ಬಡ ಕೃಷಿಕರ ಮಾರಣಹೋಮದ ಘಟನೆಯನ್ನು ಅದು ನೆನಪಿಸುತ್ತಿತ್ತು. ಯಾವ ಕಾರಣಕ್ಕೂ ನಮ್ಮ ಭೂಮಿಯನ್ನು ಕಂಪನಿಗಳ ಸ್ವಾಧೀನ ಮಾಡುವುದಿಲ್ಲ ಎಂದು ಸೆಟೆದುನಿಂತಿದ್ದ ಗ್ರಾಮಸ್ಥರು, ಜಮೀನು ರಕ್ಷಣೆಗಾಗಿ ಪ್ರಾಣತ್ಯಾಗ ಮಾಡಿದ್ದರು.

ಪೊಲೀಸರ ಗುಂಡಿನ ದಾಳಿಗೆ ಎದೆ ಒಡ್ಡಿ ನಿಂತಿದ್ದರು. ಕ್ಷಣಾರ್ಧದಲ್ಲಿ ಹಸಿರೆಲೆಗಳ ಮೇಲೆ ರಕ್ತದೋ ಕುಳಿ ಹರಿದಿತ್ತು. ಪೊಲೀಸರಿಗೆ ಬಲಿಯಾದ ಕೃಷಿಕರ ನೆನಪಿಗಾಗಿ ನಿರ್ಮಾಣವಾದ ಸ್ಮಾರಕವು ಇತಿಹಾಸದ ಕರಾಳ ಅಧ್ಯಾಯವೊಂದನ್ನು ನನ್ನ ಮುಂದೆ ತೆರೆದಿಟ್ಟಿತು..

2007ರ ನಂದಿಗ್ರಾಮ ಹಿಂಸಾಚಾರ ಘಟನೆಗಳು ಹುಟ್ಟಿದ್ದೇ ಈ ಗೋಕುಲನಗರ ಗ್ರಾಮದಿಂದ. ಪ್ರತಿಭಟನಾ ನಿರತ ರೈತರ ಮೇಲೆ 2007ರ ಮಾ.14ರ ಕರಾಳ ದಿನದಂದು ಪೊಲೀಸರು ಗುಂಡು ಹಾರಿಸಿದ್ದರಿಂದ 14 ಮಂದಿ ಸ್ಥಳದ ಮೃತಪಟ್ಟಿದ್ದರು.

ಇದನ್ನೂ ಓದಿ: West Bengal Election ground report by Raghava Sharma Nidle: ಮಮತಾ ಪ್ರಾಬಲ್ಯಕ್ಕೆ ಮಹಿಳೆಯರದ್ದೇ ಪೌರೋಹಿತ್ಯ

ಇದು ನಂದಿಗ್ರಾಮದಾದ್ಯಂತ ಜನರನ್ನು ರೊಚ್ಚಿಗೆಬ್ಬಿಸಿತ್ತು. ನಂತರದ ದಿನಗಳಲ್ಲಿ ನಡೆದ ವಿವಿಧ ಹಿಂಸಾಚಾರ ಘಟನೆಗಳಲ್ಲಿ ನೂರಾರು ನಾಗರಿಕರು ಪ್ರಾಣ ಕಳೆದುಕೊಂಡರು. ಘಟನೆಗಳಲ್ಲಿ ನಾಪತ್ತೆಯಾದ ಅನೇಕರು ಈಗ ಇzರೋ ಇಲ್ಲವೋ ಎಂಬ ಮಾಹಿತಿಯೂ ಇಲ್ಲ.

ಅಂದಿನ ಸಿಪಿಐ ಸರಕಾರದ ವಿರುದ್ಧ ಭೂಮಿ ಉಚ್ಛೇದ್ ಪ್ರತಿರೋಧ್ ಕಮಿಟಿ (ಪಿಯುಬಿಸಿ) ರಚನೆಯಾಗಿ, ಮಮತಾ ಬ್ಯಾನರ್ಜಿ ಮತ್ತು ಸುವೆಂದು ಅಧಿಕಾರಿ ಮುಂಚೂಣಿಯಲ್ಲಿ ನಿಂತು ಎಡಪಕ್ಷಗಳ ಸರಕಾರದ ವಿರುದ್ಧ ಹೋರಾಟ ನಡೆಸಿದರು.

ಸುಮಾರು 70 ಸಾವಿರ ರೈತರ 14 ಸಾವಿರ ಎಕರೆ ಜಮೀನು ಸ್ವಾಧೀನಕ್ಕಾಗಿ ನೋಟಿಸ್ ನೀಡಿದ್ದ ಸರಕಾರ, ಖಾಸಗಿ ಕಂಪನಿ ‘ಡೌ ಕೆಮಿಕಲ್ಸ್’ ನೇತೃತ್ವದಲ್ಲಿ ‘ಕೆಮಿಕಲ್ ಹಬ್’ ನಿರ್ಮಾಣ ಮಾಡಬೇಕೆಂಬ ತೀರ್ಮಾನದಿಂದ ಹಿಂದೆ ಸರಿದಿತ್ತು.

Screenshot_1

ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಅನಿಲ ದುರಂತದ ಕಪ್ಪುಚುಕ್ಕೆ ಹೊಂದಿದ್ದ ಕಂಪನಿಗೆ ನಂದಿ ಗ್ರಾಮದಲ್ಲಿ ಜಮೀನು ನೀಡಲು ರೈತರು ಸಿದ್ಧರಿರಲಿಲ್ಲ ಕೂಡ. ಇಡೀ ಬಂಗಾಳದಾದ್ಯಂತ ರೈತರ ಪರ ಧ್ವನಿ ಮೊಳಗಿ, ಮಮತಾ ಬ್ಯಾನರ್ಜಿ ಹೋರಾಟಕ್ಕೆ ಬೆಂಬಲ ಸಿಕ್ಕಿತ್ತು. 2011ರ ವಿಧಾನ ಸಭೆ ಚುನಾವಣೆಯಲ್ಲಿ ಎಡಪಕ್ಷಗಳ ವಿರುದ್ಧ ಅಭೂತ ಪೂರ್ವ ಗೆಲುವು ಸಾಧಿಸಿದ್ದ ಟಿಎಂಸಿ-ಕಾಂಗ್ರೆಸ್ ಮೈತ್ರಿಕೂಟ, 34 ವರ್ಷಗಳ ಎಡಪಕ್ಷಗಳ ಆಡಳಿತವನ್ನು ಕೊನೆಗೊಳಿಸಿತ್ತು.

ನಂದಿಗ್ರಾಮಕ್ಕೆ ತನ್ನದೇ ಆದ ಒಂದು ದಿಟ್ಟ ಇತಿಹಾಸವಿದೆ. ತಮ್ಮ ಭೂಮಿಯ ರಕ್ಷಣೆಗಾಗಿ ಹೋರಾಡುವ ಇಲ್ಲಿನ ಜನರ ಪರಂಪರೆ ತಕ್ಷಣಕ್ಕೆ ಬಂದಿದ್ದಲ್ಲ ಮತ್ತು ಈ ಹೋರಾಟದ ಮನಸ್ಥಿತಿ ಬಗ್ಗೆ ಅವರಿಗೆ ಹೆಮ್ಮೆ ಇದೆ.

1942ರಲ್ಲಿ ಬ್ರಿಟಿಷ್ ವಸಾಹತುಶಾಹಿಗಳನ್ನು ಈ ಪ್ರದೇಶದಿಂದ ಓಡಿಸಲು ಅವರು ‘ಪಿಚಬಾನಿ’ ಎಂಬ ಯಶಸ್ವಿ ಹೋರಾಟ ನಡೆಸಿದ್ದರು. ಬಂಗಾಳದಲ್ಲಿ ಪಿಚಬಾನಿ ಎಂದರೆ ‘ನಾವು ಹಿಂದೆ ಸರಿಯುವುದಿಲ್ಲ’ ಎಂದರ್ಥ. ಬ್ರಿಟಿಷರ ವಿರುದ್ಧ ಈ ಹೋರಾಟದ ಕಾರಣಕ್ಕಾಗಿಯೇ ಅವರು ಒಂದು ಹಳ್ಳಿಗೆ ಪಿಚಬಾನಿ ಎಂದೇ ಹೆಸರಿಟ್ಟಿದ್ದಾರೆ.

Screenshot_6

ಇತಿಹಾಸ ಏನೇ ಇದ್ದರೂ, ವರ್ತಮಾನ ಬದಲಾವಣೆಗೆ ತೆರೆದು ನಿಂತಿದೆ ಎನ್ನುವುದಕ್ಕೆ ಗೋಕುಲ ನಗರ ಸ್ಮಾರಕದ ಪಕ್ಕ ಕುಳಿತಿದ್ದ ನಾಲ್ವರು ಯುವಕರೇ ಸಾಕ್ಷಿಯಾಗಿದ್ದರು. ಅಂದಿನ ಜಮೀನು ಸ್ವಾಧೀನ ವಿರೋಧಿ ಹೋರಾಟ ಆ ಕಾಲಕ್ಕೆ ಸೂಕ್ತವಾಗಿತ್ತು. “ಈಗ ನಮಗೆ ಉದ್ಯೋಗ ಬೇಕು, ನಂದಿಗ್ರಾಮ ಬೇರೆ ಪಟ್ಟಣಗಳಂತೆ ಬೆಳೆಯಬೇಕು.

ಕಾರ್ಖಾನೆ, ಉದ್ದಿಮೆಗಳು ಬಂದರೆ ಇಲ್ಲಿನ ಅವಿದ್ಯಾವಂತ ಯುವಕರಿಗೂ ಸಣ್ಣಪುಟ್ಟ ಕೆಲಸ ಸಿಗುತ್ತವೆ. ಬೇರೆ ನಗರಗಳನ್ನು ಅರಸಿ ಹೋಗಬೇಕಿಲ್ಲ" ಎನ್ನುವುದು ಅವರ ಸ್ಪಷ್ಟ ಅಭಿಪ್ರಾಯ ವಾಗಿತ್ತು. ಆ ನಾಲ್ವರಲ್ಲಿ ಸಯಾನ್ ಪಾಂಡ ಎಂಬಾತ ಪಕ್ಕದ ಚಂಡಿಪುರದ ಮಹಿಸಾದರ್ ರಾಜ್ ಕಾಲೇಜ್ ನಿಂದ ರಸಾಯನ ಶಾಸದಲ್ಲಿ ಎಂ.ಎಸ್ಸಿ. ಮಾಡಿದ್ದು, ನಂದಿಗ್ರಾಮದ ಕಾಳಿಚರಣಪುರ ಡಿ.ಎಂ. ಹೈಸ್ಕೂಲ್ ನಲ್ಲಿ ವಿಜ್ಞಾನ ಶಿಕ್ಷಕರಾಗಿದ್ದಾರೆ.

Screenshot_2

ನಾನು ಪ್ಯಾರಾ ಟೀಚರ್ (ಕಾಯಂ ನೇಮಕವಲ್ಲ) ಆಗಿರುವುದರಿಂದ 14700 ರು. ತಿಂಗಳ ವೇತನ ಬರುತ್ತದೆ. ಇದು ಏನಕ್ಕೂ ಸಾಲದು. ವೇತನ ಏರಿಕೆಗೆ ಬೇಡಿಕೆ ಇಟ್ಟು ಸಾಕಾಗಿದೆ. ಶಿಕ್ಷಕರ ಸಮಸ್ಯೆ ಯನ್ನು ಮಮತಾ ಸರಕಾರ ಪರಿಹರಿಸಿಯೇ ಇಲ್ಲ. ಬಿಜೆಪಿ ಅಭ್ಯರ್ಥಿ ಸುವೆಂದು ದಾದಾ ನಮ್ಮ ಸಮಸ್ಯೆ ಅರ್ಥಮಾಡಿಕೊಂಡಾರು ಎಂಬ ಭರವಸೆಯಿಂದ ಬಿಜೆಪಿಗೇ ಮತ ಹಾಕುತ್ತೇವೆ ಎಂದರು ಸಯಾನ್. ಯುವಕರಾದ ಸೌಬಿಕ್ ಜಾನಾ, ಸುರಜಿತ್ ದಳಪತಿ, ಸುರಜಿತ್ ಬಾರಿಕ್ ಕೂಡ ಸುವೆಂದು ರನ್ನು ಗೆಲ್ಲಿಸುವ ಪಣತೊಟ್ಟಿದ್ದಾರೆ.

2021ರ ವಿಧಾನಸಭೆ ಚುನಾವಣೆಯಲ್ಲಿ ಸಿಎಂ ಮಮತಾ ಬ್ಯಾನರ್ಜಿ ವಿರುದ್ಧ ನಂದಿಗ್ರಾಮ ಕ್ಷೇತ್ರ ದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸುವೆಂದು ಅಧಿಕಾರಿ, 1956 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ತಮ್ಮ ಒಂದು ಕಾಲದ ಅತ್ಯಾಪ್ತ ರಾಜಕೀಯ ಸಹಪಾಠಿ ವಿರುದ್ಧ ಸೋಲುಂಡಿದ್ದ ಮಮತಾ, ಕೋಲ್ಕತ್ತಾದ ಭವಾನಿಪುರ ಕ್ಷೇತ್ರದ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿ, ನಂತರ ವಿಧಾನಸಭೆಯನ್ನು ಅಧಿಕೃತವಾಗಿ ಪ್ರವೇಶಿಸಿದ್ದರು.

2021ರಲ್ಲಿ ರೋಚಕ ಚುನಾವಣಾ ರಣಕಣವಾಗಿದ್ದ ಮತ್ತು ಅಲ್ಲಲ್ಲಿ ರಾಜಕೀಯ ಸಂಘರ್ಷ, ಬಡಿದಾಟಗಳಿಗೆ ಸಾಕ್ಷಿಯಾಗಿದ್ದ ನಂದಿಗ್ರಾಮದಲ್ಲಿ ಈ ಸಲ ತಕ್ಕಮಟ್ಟಿಗೆ ಶಾಂತಿ ಇದೆ. ಸಿಆರ್‌ಪಿ ಎಫ್ ಯೋಧರು ಹಾದಿಗೊಬ್ಬರಂತೆ ನಿಯೋಜನೆಗೊಂಡಿರುವುದರಿಂದ ಗದ್ದಲ-ಗಲಾಟೆ ತಗ್ಗಿದೆ. ವಿಶೇಷ‌ ಎಂದರೆ ಸುವೆಂದು ಅಧಿಕಾರಿ ವಿರುದ್ಧ ಅವರ ಆಪ್ತರಾಗಿದ್ದ ಪವಿತ್ರ ಕರ್ ಟಿಎಂಸಿಯಿಂದ ಕಣದಲ್ಲಿದ್ದಾರೆ.

Screenshot_4

ನಂದಿಗ್ರಾಮದಲ್ಲಿ ಸುವೆಂದು ಅಧಿಕಾರಿ ರಾಜಕೀಯ ಪ್ರಾಬಲ್ಯ ಹೆಚ್ಚಾಗಿರುವುದರಿಂದ ಮಮತಾ ಬ್ಯಾನರ್ಜಿ ತಮ್ಮನ್ನು ಭವಾನಿಪುರಕ್ಕೆ ಸೀಮಿತಗೊಳಿಸಿಕೊಂಡಿದ್ದಾರೆ. ಸುವೆಂದು ಅಧಿಕಾರಿ 2020ರ ಡಿಸೆಂಬರ್‌ನಲ್ಲಿ ಬಿಜೆಪಿ ಸೇರಿದ ನಂತರ ತಮ್ಮ ಆಪ್ತರಾಗಿದ್ದ ಪವಿತ್ರ ಕರ್ ಅವರನ್ನೂ ಬಿಜೆಪಿಗೆ ಕರೆ ತಂದಿದ್ದರು. 5 ವರ್ಷಗಳ ನಂತರ ಚುನಾವಣೆ ಘೋಷಣೆ ಹೊಸ್ತಿಲಲ್ಲಿ ಬಿಜೆಪಿ ತೊರೆದ ಪವಿತ್ರ ಕರ್, ಟಿಎಂಸಿ ಟಿಕೆಟ್ ಪಡೆದು ಸುವೆಂದು ವಿರುದ್ಧ ಹೋರಾಟಕ್ಕೆ ಇಳಿದಿದ್ದಾರೆ.

ನಂದಿಗ್ರಾಮದಲ್ಲಿ ಸಣ್ಣ ದಿನಸಿ ಅಂಗಡಿ ನಡೆಸುತ್ತಿರುವ ವೃದ್ಧ ದಂಪತಿ ತಪನ್ ಕುಮಾರ್ ದಾಸ್ ಮತ್ತು ಸೀತಾರಾಣಿ ದಾಸ್, ಸರಕಾರ ನೀಡುತ್ತಿರುವ ತಲಾ 1000 ರು. ವೃದ್ಧಾಪ್ಯ ವೇತನದ ಬಗ್ಗೆ ತೃಪ್ತಿ ಹೊಂದಿದ್ದು, “ಈಗ ಇರುವ ಸರಕಾರ ಮುಂದುವರಿಯುವುದೇ ಸೂಕ್ತ. ಬಿಜೆಪಿಯವರು ನೀಡುತ್ತೇವೆ ಎಂದಷ್ಟೇ ಹೇಳಿದ್ದಾರೆ. ನಮ್ಮ ಖಾತೆಗೆ ಈಗ ಹಣ ಬರುತ್ತಿರುವುದರಿಂದ ಹಣದ ಖಾತರಿ ಇದೆ" ಎಂದರು.

ಪಕ್ಷಗಳ ಬಗೆಗಿನ ತಮ್ಮ ಒಲವು-ನಿಲುವುಗಳನ್ನು ಬಹಿರಂಗಪಡಿಸಲು ಅವರು ಹಿಂಜರಿದರೂ, ಪ್ರಶ್ನೆಗಳನ್ನು ತಿರುವು-ಮುರುವು ಮಾಡಿ ಕೇಳಿದ ನಂತರ ಮನಸ್ಸೊಳಗೇನಿದೆ ಎಂಬುದನ್ನು ಬಿಚ್ಚಿಟ್ಟರು.

Screenshot_5

ಆ ವೇಳೆ ಅದೇ ದಾರಿಯಲ್ಲಿ ಕೊಡಪಾನದಲ್ಲಿ ನೀರು ಹೊತ್ತು ತರುತ್ತಿದ್ದ ಮಾನೋಷಿ ಸಾಹು ಎಂಬಾಕೆಯನ್ನು ನಿಲ್ಲಿಸಿ ಮಾತಾನಾಡಿಸಿದೆ. ಆಕೆಯ ಮನೆಯಲ್ಲಿ ಒಟ್ಟು 13 ಜನರಿದ್ದು, ಪುರುಷರಿಗೆ ಸರಿಯಾಗಿ ಕೆಲಸ ಸಿಗುತ್ತಿಲ್ಲವಂತೆ. “ನಂದಿಗ್ರಾಮದಲ್ಲಿ ನಿರುದ್ಯೋಗ ಹೆಚ್ಚಿದೆ. ಸರಕಾರ ಬದಲಾಗ ಬೇಕು. ಮನೆಯಲ್ಲಿ ಮೂರು ಮಹಿಳೆಯರ ಖಾತೆಗೆ ಒಟ್ಟು 4500 ರು. ಹಣ ಬರುತ್ತಿದೆ. ಆದರೆ, ಹಣ ಕೊಟ್ಟರೆ ಮುಗಿಯಿತೆ? ಉದ್ಯೋಗ ನಿರ್ಮಾಣಕ್ಕೇನು ಮಾಡಿದ್ದಾರೆ?" ಎಂದು ಪ್ರಶ್ನಿಸಿದರು.

ನಂದಿಗ್ರಾಮದ ಆಂಗಾಚಿಯಾ ಗ್ರಾಮದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್‌ಗೆ‌ ಬರುವ ಗ್ರಾಮೀಣ ಗ್ರಾಹಕರಿಗಾಗಿ ಖಾಸಗಿಯಾಗಿ ಕಸ್ಟಮರ್ ಸರ್ವಿಸ್ ನೀಡುತ್ತಿರುವ ಅಘ್ಯ ಮೊಹಾಪಾತ್ರ ‘ವಿಶ್ವವಾಣಿ’ ಜತೆ ಮಾತನಾಡಿ, “ಈ ಬಾರಿ ಜನ ತುಂಬಾ ಸೈಲೆಂಟ್ ಆಗಿದ್ದಾರೆ. ರಾಜಕೀಯದ ಬಗ್ಗೆ ಹೆಚ್ಚು ಮಾತಾಡುತ್ತಿಲ್ಲ.

ಹೀಗಾಗಿ, ಫೈಟ್ 50:50 ಇದೆ. ಮೊದಲು ಜನರ ಮಾತು-ಚರ್ಚೆ ಕೇಳಿ ಅಂದಾಜು ಮಾಡುತ್ತಿದ್ದೆವು. ಆದರೆ, ಈ ಸಲ ಹಾಗಿಲ್ಲ" ಎಂದು ವಿವರಿಸಿದರು. ಅಘ್ಯ ಮೊಹಾಪಾತ್ರ ಸಿಪಿಐ ಸಿದ್ಧಾಂತದ ಪ್ರತಿಪಾದಕರಾಗಿದ್ದು, “ಬಿಜೆಪಿ-ಟಿಎಂಸಿ ಮಧ್ಯೆ ಫೈಟ್ ಇದೆ. ನಮ್ಮ ಪಕ್ಷ ಗೆಲ್ಲಲ್ಲ. ಆದರೆ, ಸಿಪಿಐ ಅನ್ನು ಬೆಂಬಲಿಸುವುದು ನಮ್ಮ ಸೈದ್ಧಾಂತಿಕ ಬದ್ಧತೆ.

ಮುಂದೊಂದು ದಿನ ನಮ್ಮ ರಾಜಕೀಯ ಪುನರ್ಜನ್ಮ ಆಗಲಿದೆ. ಅಲ್ಲಿಯವರೆಗೆ ತಾಳ್ಮೆಯಿಂದ ಇರುತ್ತೇವೆ" ಎಂದರು. ಅಂಗಾಚಿಯಾದಲ್ಲಿ ಸಣ್ಣ ಮಾಂಸಹಾರಿ ಹೋಟೆಲ್ ನಡೆಸುತ್ತಿರುವ ಪ್ರಣಬ್ ಮೊಂಡಲ್ ಮತ್ತು ಪತ್ನಿ ಮಾಧವಿ ಮೊಂಡಲ್ “ನಾವು ಈ ಬಾರಿ ಪರಿವರ್ತನೆಗೆ ಮತ ಹಾಕುತ್ತೇವೆ" ಎನ್ನುತ್ತಾ, “15 ವರ್ಷಗಳಿಂದ ಇಲ್ಲಿ ಏನೂ ಆಗಿಲ್ಲ. ನಮ್ಮ ಗ್ರಾಮದಲ್ಲಿ ಮಹಿಳೆಯರಿಗೆ ಸದ್ಯಕ್ಕೆ ಭದ್ರತೆ ಇದೆ. ಆದರೆ, ಹೊರಗೆ ಹಾಗಿಲ್ಲ. 1500 ರು. ಸಿಗದಿದ್ದರೂ ಪರವಾಗಿಲ್ಲ. ನಂದಿಗ್ರಾಮದ ಸಮಗ್ರ ಪರಿವರ್ತನೆಗೆ ಹೊಸ ಸರಕಾರ ಅತ್ಯಗತ್ಯ" ಎಂದು ಖಚಿತಪಡಿಸಿದರು. ಇದಕ್ಕೆ ಸ್ನೇಹಿತ ಸುಕುಮಾರ್ದಾಸ್ ಕೂಡ ದನಿಗೂಡಿಸಿದರು.

ನೀರಿನ ಒರತೆ ಹೆಚ್ಚಿರುವ ನಂದಿಗ್ರಾಮದ ಪ್ರತಿ ಮನೆ ಮುಂದೆ ಕೆರೆಯೊಂದನ್ನು ನೀವು ಕಾಣಬಹುದು. ಕೆರೆಗಳ ಮೀನುಗಳೇ ಅವರಿಗೆ ನಿತ್ಯದ ಆಹಾರ. ಮೀನುಗಾರಿಕೆಗೆಂದೇ ವಿಶಾಲ ಪ್ರದೇಶಗಳಲ್ಲಿ ಕೂಡ ಕೆರೆಗಳನ್ನು ತೆಗೆಯಲಾಗಿದ್ದು, ಜೀವನೋಪಾಯಕ್ಕೊಂದು ಹಾದಿಯಾಗಿದೆ. 2007ರ ಐತಿಹಾಸಿಕ ನಂದಿಗ್ರಾಮ ಜಮೀನು ರಕ್ಷಣೆ ಹೋರಾಟ ರಾಜ್ಯದಲ್ಲಿ ಆಡಳಿತದ ಪರಿವರ್ತನೆ ಗೆ ನಾಂದಿ ಹಾಡಿತು. ಆದರೆ, ನಂದಿಗ್ರಾಮದನು ಪರಿವರ್ತನೆ ಆಗಿದೆ ಎಂಬ ಬ್ಯಾಟರಿ ಆಟೋ ಚಾಲಕ ಸೋಮನಾಥ್ ಲಹಿರಿ ಪ್ರಶ್ನೆಗೆ ನಮ್ಮಲ್ಲೂ ಉತ್ತರ ಇರಲಿಲ್ಲ.

ಬೆಂಗಳೂರಿನಿಂದ ನಂದಿಗ್ರಾಮಕ್ಕೆ

Screenshot_3

ಮೂಲತಃ ನಂದಿಗ್ರಾಮದ ಅಂಗಾಚಿಯಾ ಗ್ರಾಮದ ನಿವಾಸಿಗಳಾಗಿರುವ ಸಯ್ಯದ್ ಬಾಬುಲ್ ಅಲಿ ಮತ್ತು ಪತ್ನಿ ಸುಲ್ತಾನಾ ಬೀಬಿ, ಬೆಂಗಳೂರಿನ ಆನೇಕಲ್‌ನಲ್ಲಿ ಕಳೆದೊಂದು ವರ್ಷದಿಂದ ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. 23ಕ್ಕೆ ನಂದಿಗ್ರಾಮದಲ್ಲಿ ಚುನಾವಣೆ ಇರುವುದರಿಂದಲೇ ಕೆಲಸಕ್ಕೆ ರಜೆ ಹಾಕಿ ಬಂದಿರುವ ದಂಪತಿಗೆ, ನಾನು ಕರ್ನಾಟಕದಿಂದ ಬಂದಿದ್ದೇನೆ ಎಂದಾಗ ಬಹಳ ಖುಷಿಯಾಯಿತು.

“ಎಷ್ಟೊಂದು ನೆಮ್ಮದಿ ಇದೆ ಸರ್ ಬೆಂಗಳೂರಿನಲ್ಲಿ.. ಬಂಗಾಳದಲ್ಲಿ ವ್ಯವಸ್ಥೆಯೇ ಸರಿ ಇಲ್ಲ" ಎಂದು ಅವರು ಬೇಸರ ಹೊರ ಹಾಕಿದರು. “ಬಂಗಾಳದಲ್ಲಿ ನಮ್ಮಂಥ ಲಕ್ಷಾಂತರ ಮಂದಿಗೆ ಉದ್ಯೋಗ ಸೃಷ್ಟಿ ಮಾಡುವ ಎಲ್ಲಾ ಅವಕಾಶಗಳಿವೆ. ಕಂಪನಿಗಳಿಗೇನೂ ಕಡಿಮೆ ಇಲ್ಲ. ಆದರೆ, ಸರಕಾರದ ಸಿಂಡಿಕೇಟ್ ರಾಜ್ ಇದೆಯಲ್ಲ. ಅವರ ಸುಲಿಗೆಗಳಿಗೆ ಕೊನೆ ಇಲ್ಲ. ಇವರಿಂದ ಕಂಪನಿಗಳಿಗೂ ಸಾಕಾಗಿದೆ ಮತ್ತು ಕಾರ್ಮಿಕರಿಗೆ ಸೂಕ್ತ ವೇತನ ನೀಡಲು ಅವರಿಗೆ ಸಾಧ್ಯವಾಗುವುದಿಲ್ಲ. ಹೀಗಾಗಿ ಯೇ, ಜನ ಉದ್ಯೋಗ ಅರಸಿ ಬೆಂಗಳೂರಿನಂಥ ನಗರಕ್ಕೆ ಹೋಗುತ್ತಾರೆ" ಎಂದು ಸಂಸ್ಥೆಯ ಹೌಸ್ ಕ್ಲೀನರ್ ವೃತ್ತಿಯಲ್ಲಿರುವ ಬಬುಲ್ ಅಲಿ ವಿವರಿಸುತ್ತಾರೆ.

“ಮತದಾರರ ಪಟ್ಟಿ ಪರಿಷ್ಕರಣೆ ಹಿಂದೆ ರಾಜಕೀಯ ಅಡಗಿದೆ" ಎನ್ನುವ ಅವರು, “ಒಂದು ಮನೆಯಲ್ಲಿ 4 ಮಂದಿ ಇದ್ದರೆ, ಇಬ್ಬರ ಹೆಸರು ಡಿಲೀಟ್ ಆಗುತ್ತದೆ, ಮತ್ತಿಬ್ಬರದ್ದು ಹಾಗೆಯೇ ಉಳಿದುಕೊಳ್ಳುತ್ತದೆ. ಹಾಗಾದ್ರೆ ಡಿಲೀಟ್ ಅದವರು ನಕಲಿಗಳು ಎಂದೇ? ಚುನಾವಣಾ ಅಯೋಗ ದವರು ಇದ್ಯಾಕೆ ಗೊಂದಲ ಸೃಷ್ಟಿಸಿದ್ದಾರೋ ಅರ್ಥ ಆಗದು. ಮುಸ್ಲಿಮರ ಹೆಸರುಗಳನ್ನು ಉದ್ದೇಶ ಪೂರ್ವಕವಾಗಿ ಡಿಲೀಟ್ ಮಾಡಿ ಸ್ಯಾಂಪಲ್ ಎಂಬಂತೆ ಕೆಲ ಹಿಂದುಗಳ ಹೆಸರನ್ನು ಅಳಿಸಿದ್ದಾರೆ. ಬಂಗಾಳದಲ್ಲಿ ಸುಧಾರಣೆ ಆಗಬೇಕು. ಬಿಜೆಪಿಯವರು ಒಳ್ಳೆಯ ಕೆಲಸ ಮಾಡಿದರೆ ಖಂಡಿತ ಬೆಂಬಲಿಸುತ್ತೇವೆ. ಆದರೆ, ನಮ್ಮ ಕುತ್ತಿಗೆ ಹಿಡಿದು ನಿಂತಿರುವ ಬಿಜೆಪಿ, ಹೀಗೆಲ್ಲ ಮಾಡಿದರೆ ಹೇಗೆ ಬೆಂಬಲಿಸುವುದು ನೀವೇ ಹೇಳಿ?" ಎಂದು ಆಕ್ರೋಶ ಹೊರಹಾಕಿದರು.

ನಂದಿಗ್ರಾಮದ ಜನಸಂಖ್ಯೆಯಲ್ಲಿ ಶೇ.25ರಷ್ಟು ಮುಸ್ಲಿಮರಿದ್ದು, ಮತದಾರರ ಪಟ್ಟಿಯಲ್ಲಿ ಹೆಸರು ಡಿಲೀಟ್ ಆಗಿರುವವರ ಪೈಕಿ ಶೇ.95ರಷ್ಟು ಮಂದಿ ಮುಸ್ಲಿಮರೇ ಇದ್ದಾರೆ ಎನ್ನುವುದು ಗಮನಾರ್ಹ. ಇದು ಕ್ಷೇತ್ರದ ಚುನಾವಣೆ ಫಲಿತಾಂಶದ ಮೇಲೆ ಪರಿಣಾಮ ಬೀರಲಿದೆ ಎಂಬ ಚರ್ಚೆ ಸ್ಥಳೀಯರ ಮಧ್ಯೆ ನಡೆದಿದೆ..

ಕೆ. ರಾಘವ ಶರ್ಮ ನಿಡ್ಲೆ

View all posts by this author